ಜಾಗತಿಕ ಶ್ರೇಷ್ಠತೆಯ ಬರಹಗಾರ ಕಂಬಾರ
ಸಾಧನೆ
ಡಾ.ಆರ್‌.ಜೆ.ಹೆಗಡೆ
ಅಂತಾರಾಷ್ಟ್ರೀಯ ಖ್ಯಾತಿಯ ವಿಮರ್ಶಕ ಗಣೇಶ್ ದೇವಿ ಹೇಳುತ್ತಿರುತ್ತಾರೆ. ನಾವು ವಿದೇಶಿ ಬರಹಗಾರರನ್ನು ಹೊಗಳಿಅಟ್ಟಕ್ಕೇರಿಸಿದ್ದು ಸಾಕು. ಈಗಲಾದರೂ ನಮ್ಮ ಭಾಷೆಗಳಲ್ಲಿರುವ ‘ಜಾಗತಿಕ ಶ್ರೇಷ್ಠತೆಯ’, ನೊಬೆಲ್ ಪಡೆಯಬೇಕಾದ (ಅದು ಜಾಗತಿಕ ಹಿರಿತನದ ಮಾನದಂಡವಾಗಿದ್ದರೆ) ಬರಹಗಾರರನ್ನು ಸೂಕ್ತವಾಗಿ ಓದಿ ಜಗತ್ತಿಗೆ ಹೇಳಬೇಕು. ನಮ್ಮ ಶ್ರೇಷ್ಠ ನಾಟಕಗಳಕುರಿತಂತೂ ನಾವು ಹೇಳಿಯೇ ಇಲ್ಲ.
ದೇವಿ ಹೇಳಿದ್ದು ತುಂಬ ಪ್ರಸ್ತುತವಾದ ಮಾತು ಮತ್ತು ಇಂತಹ ಹೇಳುವಿಕೆಯನ್ನು ನಾವು ಆರಂಭಿಸಬೇಕಿರುವುದು ಪದ್ಮಭೂಷಣ, ಜ್ಞಾನಪೀಠ ಪ್ರಶಸ್ತಿ ವಿಜೇತ ಡಾ. ಚಂದ್ರಶೇಖರ ಕಂಬಾರರಿಂದ. ಓದು ಆಧರಿಸಿ ಹೇಳುತ್ತಿದ್ದೇನೆ. ಕಂಬಾರರ ಕೃತಿಗಳು ಜಾಗತಿಕಹೆಸರಿನ ಚಿನುವಾ ಅಚೆಬೆ ಅಥವಾ ಮಾರ್ಕೆಸ್ ಕೃತಿಗಳಿಗಿಂತಲೂ ಅನುಭವದ ಸಾಂದ್ರತೆ ಯಲ್ಲಿ ಮತ್ತು ನಿರೂಪಣೆಯ ಕೌಶಲದಲ್ಲಿ ಶ್ರೇಷ್ಠವಾದವು.
ಕಂಬಾರ ಬಹುಶಃ ಇಂದು ನಮ್ಮ ನಡುವೆ ಇರುವ ಶ್ರೇಷ್ಠ ಜಾಗತಿಕ ಕಾದಂಬರಿಕಾರ, ನಾಟಕಕಾರ, ಕವಿ. ಅವರ ಕೃತಿಗಳುಸಂಕೀರ್ಣ ಮಾನವ ಬದುಕಿನ ದಟ್ಟವಾದ ಕಥಾನಕಗಳು. ಮೇಲಿನ ಮಾತುಗಳನ್ನು ವಿಷದೀಕರಿಸಲು ಇಲ್ಲಿ ಕಂಬಾರರ ಒಂದು ನಾಟಕ ‘ಸಿರಿಸಂಪಿಗೆ’ಯನ್ನು ಓದುತ್ತಿದ್ದೇನೆ. ಈ ಕೃತಿ ನಮ್ಮ ನಡುವಿನ ಒಂದು ‘ವರ್ಲ್ಡ್ ಕ್ಲಾಸಿಕ್’. ಆದು ಏಕೆ ಮತ್ತು ಹೇಗೆ? ಎಂದುಹೇಳಲು ಮತ್ತು ತನ್ಮೂಲಕ ಕಂಬಾರರ ಸಾಹಿತ್ಯದ ಕುರಿತು ಮಾತನಾಡಲು ಈ ಟಿಪ್ಪಣಿ.
‘ಸಿರಿಸಂಪಿಗೆ’ ಹಲವು ಸಂಕೀರ್ಣ ಎಳೆಗಳೊಂದಿಗೆ ಸೃಷ್ಟಿಸಲಾದ ಒಂದು ಜನಪದ ನಾಟಕ. ಯಕ್ಷಗಾನದ ಸ್ವರೂಪದಲ್ಲಿ ನಿರೂಪಕ, ಪಾತ್ರಧಾರಿ, ಪ್ರೇಕ್ಷಕ, ವಿಮರ್ಶಕ ಎಲ್ಲವೂ ಆಗಿರುವ ಭಾಗವತ ಅಂದರೆ ‘ಹಿಮ್ಮೇಳದ’ ಗಾಯಕ ಪ್ರಸ್ತುತಪಡಿಸುವ ಕಥೆ. ಮತ್ತೆ ಅದೇ ಸಂದರ್ಭದಲ್ಲಿ ಗ್ರೀಕ್ ನಾಟಕಗಳನ್ನು ನೆನಪಿಸುವ, ಶಾಪಗ್ರಸ್ಥ ರಾಜಕುಮಾರ ಶಿವನಾಗ (ಹ್ಯಾಮ್ಲೆಟ್ ನಂಥವನು) ವಿವಾಹವಾಗುವ ಸಲುವಾಗಿ ಪರಿಪೂರ್ಣ ಹುಡುಗಿಯೊಬ್ಬಳನ್ನು ಅರಸುತ್ತ ಹೊರಡುವ, ಆದರೆ ಎಲ್ಲೆಲ್ಲೂ ಅಪರಿಪೂರ್ಣತೆಗಳೇ ಆತನಿಗೆ ಎದುರಾಗುವ ಕಥಾನಕ.
ಮತ್ತೆ ಈ ಹುಡುಕಾಟವೇ ಆತನನ್ನು ಬದುಕಿನ ಹಲವು ಸಂಕೀರ್ಣತೆಗಳಲ್ಲಿ, ದ್ವಿತ್ವಗಳಲ್ಲಿ ಸಿಲುಕಿಸಿಬಿಟ್ಟು ಹೇಗೆ ಪ್ರತಿಕ್ರಿಯಿಸ ಬೇಕೆಂಬುದೇ ಆತನಿಗೆ ಅರ್ಥವಾಗದೆ ದಿಗ್ಭ್ರಮೆಗೊಂಡು ಒಂದು ದೃಷ್ಟಿಯಲ್ಲಿ ಹುಚ್ಚನಾಗಿ ಹೋಗಿಬಿಡುವ ಕಥೆ. ಒಂದುರಾಜಕುಟುಂಬದ ಹಲವು ಪೀಳಿಗೆಗಳ ದುರಂತದ ನಾಟಕ. ಮತ್ತೆ ಅದು ಆ ರಾಜಕುಮಾರ ಕಂಡುಕೊಳ್ಳುವ ಮಾನವನ ಆಳವಾದ ಅಸ್ತಿತ್ವವಾದಿ ದುರಂತದ ಕಥೆಯೂ ಹೌದು.
ಆತ ಕಂಡುಕೊಳ್ಳುವಂತೆ ಇಲ್ಲಿ ಎಲ್ಲರೂ ಶಪಿತರು ಮತ್ತು ಅಪರಿಪೂರ್ಣರು. ಪರಿಪೂರ್ಣತೆ ಎಂದೆಂದೂ ದೊರೆಯದ ಮರೀಚಿಕೆ.ಅದು ಕೇವಲ ನೀರಿನ ಕನ್ನಡಿಯಲ್ಲಿ ಕಾಣುವ ಬಿಂಬ. ಅಪರಿಪೂರ್ಣವಾಗಿ, ಅರೆಬರೆ ಪಾತ್ರಗಳಾಗಿ ಬದುಕುವುದೇ ನಮ್ಮ ಹಣೆಬರಹ. ಮತ್ತು ಪರಿಪೂರ್ಣತೆಯನ್ನು ಅರಿಯಲು ಪ್ರಯತ್ನಿಸುವುದು ಕೂಡ ದುರಂತಕ್ಕೆ ನೀಡುವ ಆಹ್ವಾನ ಎನ್ನುವುದನ್ನುಹೇಳುವ ಅಸ್ತಿತ್ವವಾದಿ ಕಥೆ. ಮತ್ತೆ ನಾಟಕ ಎರಡು ಗಂಡು ಮತ್ತು ಒಂದು ಹೆಣ್ಣಿನ ನಡುವೆ ನಡೆಯುವ ಪ್ರೀತಿ, ಕಾಮ, ದ್ವೇಷ, ಪ್ರತೀಕಾರ, ಅಸಹಾಯಕತೆ, ವಿರಕ್ತಿ ಮತ್ತು ಎಲ್ಲವನ್ನೂ ಮೀರಿ ನಿಲ್ಲುವ ತಾತ್ವಿಕತೆಯ ಕಥಾನಕ ಕೂಡ. ಭಿನ್ನವಾದ, ಆದರೆ ಸಮಾನ ಅಂಶಗಳನ್ನು ಹೊಂದಿರುವ ಎರಡು ಸೆಟ್ ಪಾತ್ರಗಳು ನಾಟಕದಲ್ಲಿವೆ.
ಶಿವನಾಗ, ಕಾಳಿಂಗ ಮತ್ತು ಸಿರಿಸಂಪಿಗೆ ಒಂದು ಕಡೆ, ಅವಳಿ – ಜವಳಿ ಮತ್ತು ಕಮಲ ಇನ್ನೊಂದು ಕಡೆ. ಕಥೆಗಳು ಹಾಸ್ಯ, ವ್ಯಂಗ್ಯ, ದುರಂತ ಆಯಾಮಗಳನ್ನು ಪಡೆದುಕೊಳ್ಳುತ್ತ ಹರಿದು ಕೊನೆಗೆ ತುಂಬ ಸಂಕೀರ್ಣವಾದ, ಅದ್ಭುತ ತಾತ್ವಿಕತೆಯಅರ್ಥವಂತಿಕೆಯ ಅನಂತವನ್ನು ಸೇರಿಕೊಳ್ಳುತ್ತವೆ. ನಾಟಕದ ಕ್ರಿಯೆ ‘ಟ್ರಿಗರ್’ ಆಗುವುದು ಈಗ ಪ್ರಾಯಕ್ಕೆ ಬಂದಿರುವ ಶಿವನಾಗ ಕುಲದೇವರ ಮಾತಿನಂತೆ ಶೀಘ್ರ ವಿವಾಹವಾಗಲೇಬೇಕಿರುವ ತುರ್ತಿನ ಹಿನ್ನೆಲೆಯಲ್ಲಿ. ಆತ ಬುದ್ಧಿವಂತ ಮತ್ತು ಸೂಕ್ಷ್ಮ ಮನಸ್ಸಿನವನು. ಆದರ್ಶದ, ಪರಿಪೂರ್ಣತೆಯ ಜಗತ್ತಿನಲ್ಲಿ ಬದುಕಲಿಚ್ಚಿಸುವವನು.
ಕಾರ್ನಾಡರ ತುಘಲಕ್‌ನಂತೆ ಆದರ್ಶವೊಂದರ ಹಿಂದೆ ಬಿದ್ದವನು. ಎದುರಿಗಿರುವ ಜಗತ್ತು ತನ್ನ ಐಡಿಯಲಿಸಂಗೆ ಹೊಂದಿ ಕೊಳ್ಳಲಾಗದ್ದು ಎಂಬ ಅರಿವಿದ್ದು ಕೂಡ, ಮತ್ತೆ ಆತ ಕಾರ್ನಾಡರ ‘ಹಯವದನ’ದ ದೇವದತ್ತನಂತೆ. ಬೌದ್ಧಿಕ, ಅಭೌತಿಕವಾದ ಜಗತ್ತಿನಲ್ಲಿರುವವನು. ಹೀಗಾಗಿ ಆತ ತಾಯಿ ಹುಡುಕಿಟ್ಟ ಪರಮಸುಂದರಿ. ಸಿರಿಸಂಪಿಗೆಯನ್ನು ಕೂಡ ವಿವಾಹವಾಗಲು ಸಿದ್ಧನಿಲ್ಲ. ಅವನ ಭಾವನೆಯಲ್ಲಿ ಅವಳು ಪರಿಪೂರ್ಣಳಲ್ಲ.
ಆತನಿಗೆ ಬೇಕಿರುವುದು ಪರಿಪೂರ್ಣತೆ ತುಂಬಿರುವ ಹುಡುಗಿ. ಹೆಣ್ಣು ಆತನಿಗೆ ಬೇಕಿರುವುದು ಕಾಮ, ಪ್ರೇಮಕ್ಕಾಗಿ ಅಲ್ಲ. ಭೌತಿಕತೆಯನ್ನು ಮೀರಿದ ಪರಿಪೂರ್ಣತೆಯನ್ನು ಹುಡುಕುತ್ತಿರುವವನು ಅವನು. ತುಂಬ ಸಂಕೀರ್ಣ ಪಾತ್ರ ಶಿವನಾಗ. ಆತ ಏಕೆ ಅಂತಹ ಹುಡುಗಿಗಾಗಿ ಹುಡುಕುತ್ತಿದ್ದಾನೆ? ಆ ‘ಪರಿಪೂರ್ಣತೆಯ’ ಅರ್ಥವ್ಯಾಪ್ತಿ ಏನು? ಅಂಥವಳನ್ನು ಪಡೆದು ಆತಸಾಽಸಬಯಸುವುದು ಏನು? ಆಕೆಯ ಮೂಲಕ ತನ್ನನ್ನೇ ಸಂಪೂರ್ಣ ಗೊಳಿಸಿಕೊಳ್ಳಲು ಆತ ಹೊರಟಿದ್ದಾನೆಯೇ? ಅಥವಾ ಇಡೀ ಮಾನವತೆ ಹೇಗೆ ಪರಿಪೂರ್ಣತೆ ಪಡೆಯ ಬಹುದು ಎಂಬ ಪ್ರಯೋಗ ನಡೆಸುತ್ತಿದ್ದಾನೆಯೇ? ನಾಟಕ ಈ ಕುರಿತು ಏನೂಹೇಳುವುದಿಲ್ಲ.
ಪರಿಪೂರ್ಣತೆಯ ವ್ಯಸನ ಆತನನ್ನು ‘ಹುಚ್ಚು’ ವರ್ತನೆಗಳಿಗೆ ಎಳೆದುಕೊಂಡು ಹೋಗಿಬಿಡುತ್ತದೆ. ಅಂತಹ ಹುಡುಗಿ ಅಲ್ಲಿಯೇ ಸುತ್ತಮುತ್ತ ಇದ್ದಾಳೆ ಎನ್ನುವುದು ಕೂಡ ಆತನ ಬಲವಾದ ನಂಬಿಕೆ. ಅವನ ಕಣ್ಣುಗಳಿಗೆ ಆ ಹುಡುಗಿಯ ದರ್ಶನಭಾಗ್ಯ ಶೀಘ್ರದೊರೆತುಬಿಡುತ್ತದೆ ಕೂಡ. ಆತನ ಭ್ರಮಾವಾಸ್ತವದಲ್ಲಿ.  ಆತ ನೋಡುತ್ತಿದ್ದಂತೆ ಗೋಡೆಯ ಮೇಲೆ ತೂಗು ಹಾಕಿದ್ದ ಗೊಂಬೆಯೊಂದರಿಂದ ಕೆಳಗಿಳಿದು ಬಂದ ಕೈಯಲ್ಲಿ ದೀಪ ಹಿಡಿದ ಆ ಹುಡುಗಿ ಆತನ ಸುತ್ತ ನೃತ್ಯ ಮಾಡಿ ಆತನ ಶರೀರದೊಳಗೇ ಲೀನ ವಾಗಿಬಿಡುತ್ತಾಳೆ.
ಶಿವನಾಗನ ನಿರ್ಧಾರದಲ್ಲಿ ಇವಳೇ ಅವಳು. ಪರಿಪೂರ್ಣ ಹುಡುಗಿ. ಈಗ ತಾಯಿಗೆ ಹೇಳಿ ಬಿಡುತ್ತಾನೆ. ಏನೆಂದರೆ ಮದುವೆ ಯಾದರೆ ಆಗುವುದು ಅವಳನ್ನೇ. ಅವಳನ್ನು ಪಡೆಯಲು ಆತ ಏನು ಮಾಡಲೂ ಸಿದ್ದ. ಅದಕ್ಕಿರುವ ದಾರಿ ಒಂದೇ. ತನ್ನನ್ನುತಾನು ಸೀಳಿಸಿಕೊಂಡು ಪುನಃ ಹುಟ್ಟಿಸಿಕೊಳ್ಳುವುದು ಮತ್ತು ತನ್ನೊಳಗೆ ಅಂತರ್ಗತವಾಗಿರುವ ಅವಳನ್ನೂ ಹುಟ್ಟಿಸುವುದು. ತಾಯಿ ಮತ್ತು ಸಭಾಸದಸ್ಯರುಗಳಿಗೆ ಹೇಳುತ್ತಾನೆ. ಅವರು ಆತನನ್ನು ಎರಡಾಗಿ ಸೀಳಿ ಎರಡು ಪಾತ್ರೆಗಳಲ್ಲಿ ಹೂವುಗಳ ನಡುವೆ ಇಡಬೇಕು.
ಮುಂದಿನ ಹುಣ್ಣಿಮೆಯ ದಿನ ತೆಗೆದಾಗ ಒಂದು ಪಾತ್ರೆಯಿಂದ ಸ್ವತಃ ಆತ, ಈಗಿರುವಂತೆಯೇ ಹುಟ್ಟಿಕೊಳ್ಳುತ್ತಾನೆ. ಇನ್ನೊಂದು ಪಾತ್ರೆಯಿಂದ ಅವಳು, ದೀಪದ ಹುಡುಗಿ ಹುಟ್ಟಿಕೊಳ್ಳುತ್ತಾಳೆ. ನಂತರ ವಿವಾಹ. ಅಸಹಾಯಕಳಾದ ತಾಯಿ ಹಾಗೆಯೇ ಮಾಡು ತ್ತಾಳೆ. ಆತನ ವಿವಾಹವನ್ನು ಶೀಘ್ರ ನೆರವೇರಿಸಲೇಬೇಕು. ದೇವರು ಹೇಳಿದ್ದು ಪೂರ್ಣವಾಗಲೇಬೇಕು. ಒಂದು ಪಾತ್ರೆಯಿಂದ ಆತ ಹುಟ್ಟುತ್ತಾನೆ ನಿಜ. ಆದರೆ ಇನ್ನೊಂದು ಪಾತ್ರೆಯಿಂದ ಒಂದು ಬೃಹತ್ ಕಾಳಿಂಗ ಸರ್ಪ ಹುಟ್ಟಿಕೊಂಡು ಹರಿದು ಹೋಗಿಬಿಡು ತ್ತದೆ.
ನಾಟಕ ಹೀಗೆ ಆತನ ಹುಡುಕಾಟದ ವಿಷಯವನ್ನು ಸಂಕೀರ್ಣವಾಗಿಸಿಬಿಡುತ್ತದೆ. ಶಿವನಾಗ ಈಗ ಗೊಂದಲದಲ್ಲಿ ಬಿದ್ದುಬಿಡು ತ್ತಾನೆ. ಅವನ ಹುಡುಕಾಟದ ವ್ಯಾಪ್ತಿ ಕೂಡ ವಿಸ್ತಾರವಾಗುತ್ತ, ಸಂಕೀರ್ಣವಾಗುತ್ತ ಹೋಗುತ್ತದೆ. ಕಾಳಿಂಗ ಹುಟ್ಟಿದ್ದಾದರೂ ಹೇಗೆ? ದೀಪದ ಹುಡುಗಿಯ ವಿಷಯದಲ್ಲಿ ಏಕೆ ಮೋಸವಾಯಿತು? ಉತ್ತರಗಳನ್ನೆಲ್ಲ ನಾಟಕ ಗೋಜಲಾಗಿಯೇ ಇಡುತ್ತದೆ. (ಇದರಲ್ಲಿ ತಾಯಿಯ ಒಂದು ಗುಟ್ಟು ಆಟವಾಡಿದೆ. ವಿಷಯ ಆತನಿಗೆ ವಿಷಾದದೊಂದಿಗೆ ಅರ್ಥವಾಗುವುದು ನಾಟಕದ ಕೊನೆಯಲ್ಲಿ). ಕಾಳಿಂಗ ಶಿವನಾಗನದೇ ಭಾಗ. ಶಿವನಾಗನ ರೂಪ ತೊಟ್ಟುಕೊಳ್ಳುವ ಶಕ್ತಿ ಹೊಂದಿದವನು. ‘ಗಂಡಸಾಗಿ’ ಶಿವನಾಗನ ವ್ಯಕ್ಕಿತ್ವವನ್ನು ಪರಿಪೂರ್ಣಗೊಳಿಸಬಲ್ಲವನು.
ಈಗ ಶಿವನಾಗ ತಾಯಿಗೆ ಕೊಟ್ಟ ಮಾತಿನಂತೆ ಸಿರಿಸಂಪಿಗೆಯನ್ನು ಮದುವೆಯಾಗಲೇಬೇಕು. ಆಗುತ್ತಾನೆ. ಆದರೆ ಅವಳ ಕಣ್ಣು ಗಳಲ್ಲಿ ‘ದೀಪದ ಹುಡುಗಿ’ ( ಪರಿಪೂರ್ಣತೆ) ಇಲ್ಲವೇ ಇಲ್ಲ. ನಿರಾಸೆಂದ ಅತ ಹೊರಟುಹೋಗುತ್ತಾನೆ. ಆದರೆ ಸಿರಿಸಂಪಿಗೆಶಿವನಾಗನಿಗಾಗಿ ಬಯಸುತ್ತಾಳೆ. ಆಕೆಯೊಳಗೆ ತೀವ್ರ ಕಾಮವಿದೆ. ಶಿವನಾಗನಿಗೆ ‘ಅದು’ ಇಲ್ಲ. ಆತ ಇನ್ನೂ ತಲ್ಲೀನನಾಗಿರುವುದು ದೀಪದ ಹುಡುಗಿಯಲ್ಲಿ. ಸಿರಿಸಂಪಿಗೆಯಿಂದ ವಿಮುಖನಾದ ಶಿವನಾಗ ದೀಪದ ಹುಡುಗಿಯನ್ನು ಕೊಳದಲ್ಲಿ ಕಾಣಿಸುವ ತನ್ನಪ್ರತಿಬಿಂಬದಲ್ಲಿ ಅಕಸ್ಮಾತ್ತಾಗಿ ಕಂಡುಬಿಡುತ್ತಾನೆ.
(ದೇವರು ತಾಯಿಗೆ ಆತನಿಗೆ ಕೊಳದಲ್ಲಿ ತನ್ನ ಮುಖ ನೋಡಿಕೊಳ್ಳಲು ಬಿಡಬಾರದು ಎಂದು ಹೇಳಿದ್ದರೂ ಅದು ನಡೆದು ಹೋಗುತ್ತದೆ) ಈಗ ಇಡೀ ದಿನ ಕೊಳದಲ್ಲಿ ತನ್ನ ಮುಖ ಅಂದರೆ ಅವಳ ಮುಖ ನೋಡಿಕೊಳ್ಳುವುದರಲ್ಲೇ ಆತ ತಲ್ಲೀನ. ಆದರ್ಶ ವಾದದ್ದು, ಪರಿಪೂರ್ಣವಾದದ್ದು ಆತನಿಗೆ ಅಲ್ಲಿ ಕಾಣಿಸುತ್ತದೆ.
ನೀರಿನ ಕನ್ನಡಿಯಲ್ಲಿ. ಎದುರಿಗೆ ಕಾಣುವ ಜಗತ್ತು ಮೋಸ, ವಂಚನೆ, ಸುಳ್ಳಿನಿಂದ ತುಂಬಿದ್ದು. ಸಿರಿಸಂಪಿಗೆಯ ಬಯಕೆಯ ಸುವಾಸನೆ ಕಾಳಿಂಗನಿಗೆ ಹೊಡೆಯುತ್ತದೆ. ಏಕೆಂದರೆ ಆತ ಶಿವನಾಗನದೇ ಒಂದು ಭಾಗ. ಕಾಳಿಂಗನಲ್ಲಿ ಸಿರಿಸಂಪಿಗೆಗೆ ಬೇಕಾದ ಕಾಮುಕತೆ ಇದೆ. ಆತ ಶಿವನಾಗನಲ್ಲ ಎನ್ನುವುದು ಆಕೆಗೆ ಗೊತ್ತಿದೆ. ಆದರೂ ಬೇಕಾದದ್ದನ್ನು ಅವನಿಂದ ಪಡೆದುಬಿಟ್ಟು ಆಕೆತಾಯಿಯಾಗಿಬಿಡುತ್ತಾಳೆ. (ಸಂಪೂರ್ಣವಾಗಿ ಬಿಡುತ್ತಾಳೆ? ಅಂದರೆ ಮಹಿಳೆಗೆ ‘ಸಂಪೂರ್ಣ ವಾಗುವುದು’ ಸಾಧ್ಯವಿದೆ?) ಹಾಗೆಂದು ಕಾಳಿಂಗನಿಗೆ ಅವಳಿಂದ ಸಿಗುವುದು ಕಾಮ ಮತ್ತು ಕರುಣೆ ಮಾತ್ರ.
ಬೇಕಾಗಿದ್ದ ಇನ್ನೇನೋ ಕೂಡ ಅವಳ ಬಳಿ ಇದೆ. ಆದರೆ ಕಾಳಿಂಗನಿಗೆ ಅದನ್ನು ಅವಳು ನೀಡುವುದೇ ಇಲ್ಲ. (ಏನದು?)ಆತ ಹೇಳುತ್ತಾನೆ. ನೀವು ಮಹಿಳೆಯರೇ ಹೀಗೆ. ಅರ್ಥವಾಗದವರು. ಶಿವನಾಗನಿಗೆ ಈಗ ಸಿರಿಸಂಪಿಗೆಯ ಕುರಿತು ಸಂಶಯವಿದೆ. ಕ್ರೋಧವಿದೆ. (ಬಹುಶಃ ಮತ್ಸರವಿದೆ.) ಅವನ ಸಂಶಯ ಹೋಗಲಾಡಿಸಲು ರಾಮಾಯಣದಲ್ಲಿ ಸೀತೆ ತನಗೆ ಒಡ್ಡಿಕೊಳ್ಳುವ ಅಗ್ನಿಪರೀಕ್ಷೆಯ ರೀತಿಯಲ್ಲಿ ಸಿರಿಸಂಪಿಗೆ ತನ್ನನ್ನು ‘ಸರ್ಪ ಪರೀಕ್ಷೆಗೆ’ ಒಡ್ಡಿಕೊಳ್ಳುತ್ತಾಳೆ.
(ಸರ್ಪವೊಂದನ್ನು ಮೈ ಮೇಲೆ ಬಿಟ್ಟುಕೊಳ್ಳುತ್ತಾಳೆ. ಅವಳು ‘ಅಪವಿತ್ರ’ಳಾಗಿದ್ದರೆ ಅದು ಅವಳನ್ನು ಕಚ್ಚಬೇಕು.) ಆದರೆ ಇಲ್ಲಿ ‘ಸುಳ್ಳು ಸೀತೆ’ ಸಿರಿಸಂಪಿಗೆ ಕಾಳಿಂಗನ ಕೃಪೆಯಿಂದ ಪರೀಕ್ಷೆಯನ್ನು ಗೆದ್ದು ಬಿಡುತ್ತಾಳೆ. ವಿಚಿತ್ರವೆಂದರೆ ಕಣ್ಣಿಗೆ ಕಾಣುವುದು ಅಸತ್ಯ. ಎಂತಹ ಜಗತ್ತು! ಆದರೆ ಶಿವನಾಗನ ಅನುಮಾನ ಹೋಗುವುದಿಲ್ಲ. ಅವಳಿ, ಜವಳಿ, ಕಮಲರ ಕಥೆ ಅವನಿಗೆ ಹೊಸ ಒಳನೋಟ ನೀಡಿಬಿಡುತ್ತದೆ. ಏನೆಂದರೆ ಸಿರಿಸಂಪಿಗೆಯ ಕೋಣೆಯ ಹಿಂಬಾಗಿಲಿನಿಂದ ಹೊರಟು ಹೋದ ಸರ್ಪವೇ ಅವಳನ್ನು ತಾಯಿಯಾಗಿಸಿದ್ದು. ಮತ್ತೆ ಅದೇ ಸರ್ಪವೇ ಅವಳನ್ನು ಪತಿವ್ರತೆಯಾಗಿ ಕಾಣುವಂತೆ ಮಾಡಿದ್ದು. ಈಗ ಕಾಳಿಂಗನ ಮೇಲೆ ಯುದ್ಧ ಸಾರುವ(ಕರ್ಣಾರ್ಜುನರಂತೆ ಅಣ್ಣತಮ್ಮಂದಿರ ಕಾಳಗ) ಶಿವನಾಗ ಕಾಳಿಂಗನನ್ನು ಕೊಂದುಬಿಡುತ್ತಾನೆ. ಶಿವನಾಗನಲ್ಲಿ ತನ್ನಸಹೋದರನನ್ನು ಕಾಣುವ ಕಾಳಿಂಗ ಕೊಲ್ಲಲಾರ.
ಹೀಗಾಗಿ ತಾನೇ ಸ್ವತಃ ಸಾವನ್ನು ಒಪ್ಪಿಕೊಳ್ಳುತ್ತಾನೆ. ಶಿವನಾಗನಿಗೂ ಅದೇ ರೀತಿಯ ಅನುಮಾನಗಳಿವೆ. ಅದಕ್ಕೆ ಯುದ್ಧದ ಮೊದಲು ಆತ ಕಾಳಿಂಗನ ಕಣ್ಣಲ್ಲಿ ಕಣ್ಣಿಟ್ಡು ನೋಡಲು ಸಿದ್ದವಿಲ್ಲ. ಅಲ್ಲಿ ಹ್ಯಾಮ್ಲೆಟ್ ಕೊಲ್ಲಲಾರ. ಇಲ್ಲಿ ಹ್ಯಾಮ್ಲೆಟ್ (ಶಿವನಾಗ) ಕೊಲ್ಲುವುದು ತನ್ನದೇ ಅರ್ಧಭಾಗವನ್ನು ಅಥವಾ ತನ್ನನ್ನೇ. ಕೊಲ್ಲುವಿಕೆ ಕೂಡ ಸಾಯುವಿಕೆಯೇ. (ಏಕೆಂದರೆ ದೇವರು ಹೇಳಿದೆ. ಸಹೋದರ ತೀರಿಕೊಂಡಾಗ ಶಿವನಾಗನೂ ಸಾಯುತ್ತಾನೆ).
ಸತ್ತು ಬಿದ್ದ ಕಾಳಿಂಗನ ಕಣ್ಣುಗಳಲ್ಲಿ ಶಿವನಾಗನಿಗೆ ‘ವಿಶ್ವ ರೂಪದರ್ಶನ’ವಾಗಿಹೋಗುತ್ತದೆ. ಅರ್ಜುನನಿಗೆ ಕುರುಕ್ಷೇತ್ರದಲ್ಲಿ ಆದಂತೆ. (ಯಶೋಧೆ ಕೃಷ್ಣನ ಬಾಯಲ್ಲಿ ಮೂಲೋಕ ಕಂಡಂತೆ) ಆತನಿಗೆ ಒಮ್ಮೆಲೇ ಕುಟುಂಬದ ಇತಿಹಾಸ ಅರ್ಥವಾಗಿ ಹೋಗುತ್ತದೆ. ತಾಯಿಯ ಬಳಿ ಖಚಿತಪಡಿಸಿಕೊಳ್ಳುತ್ತಾನೆ ಅಷ್ಟೇ. ಕಾಳಿಂಗ ನಿಜಕ್ಕೂ ತನ್ನ ಸಹೋದರ. ಇದೆಲ್ಲವೂ ಆರಂಭ ವಾಗಿದ್ದು ತನ್ನ ತಾಯಿಯ ಗರ್ಭದಿಂದಲೇ.
ತಾಯಿಯಿಂದ ಆರಂಭ ವಾದ ಕಥೆ ಸಿರಿಸಂಪಿಗೆಯ ಮೂಲಕ ಮುಂದುವರಿದಿದೆ. ಕಥೆಯಲ್ಲಿ ತಾನೊಂದು ಪಾತ್ರ ಅಷ್ಟೇ. ನಿರೂಪಕ ಬೇರೆಯೇ. ಇದನ್ನು ತಿಳಿದ ಆತ ಸಿರಿಸಂಪಿಗೆಯನ್ನು ಕ್ಷಮಿಸಿಬಿಡುತ್ತಾನೆ. ಅಥವಾ ಅರ್ಥ ಮಾಡಿಕೊಳ್ಳುತ್ತಾನೆ. ಹಾಗೆಯೇ ಅವನಿಗೆ ಆ ದಿವ್ಯ ಕ್ಷಣದಲ್ಲಿ ‘ಮಾನವ ಅವಸ್ಥೆ’ಯ ಕುರಿತು ಎಲ್ಲವೂ ಅರ್ಥವಾಗಿ ಬಿಡುತ್ತವೆ. ಏನೆಂದರೆ ನಾವೆಲ್ಲರೂಕೈಕಟ್ಟಿಸಿಕೊಂಡೇ ಹುಟ್ಟಿದವರು.
ಅಪರಿಪೂರ್ಣವಾಗಿಯೇ ಬಂದವರು. ಅಪೂರ್ಣವಾಗಿ ಬದುಕುವುದೇ ನಮ್ಮ ಹಣೆಬರಹ. ಮಾನವ ಅವಸ್ಥೆಯ ದುರಂತ ಇದು. ಶಾಪಗ್ರಸ್ತ ಮನುಷ್ಯ ಜೀವಿಗೆ ಪರಿಪೂರ್ಣತೆ ಕೇವಲ ಒಂದು ಮರೀಚಿಕೆ. ಹುಚ್ಚು ಆದರ್ಶ. ಆಗಲಾರದ ಮಾತು. ಅದನ್ನು ಹುಡುಕಲು ನಮ್ಮನ್ನು ಸೀಳಿಕೊಳ್ಳುತ್ತ ಹೋದಂತೆ ಬದುಕು ಹೊಸ ಅರ್ಧಸತ್ಯಗಳನ್ನು, ಅಸಂಪೂರ್ಣತೆಗಳನ್ನು ಕಣ್ಣಿನಮುಂದೆ ರಾಚುತ್ತ ಹೋಗುತ್ತದೆ. ಅಸಹಾಯಕತೆಗಳನ್ನು ಇನ್ನಷ್ಟು ಎತ್ತಿ ತೋರಿಸುತ್ತ ಜೀವನವನ್ನು ಅಸಹನೀಯವಾಗಿಸುತ್ತ ಹೋಗುತ್ತದೆ.
ಸಂಪೂರ್ಣತೆ ಮಾನವನಿಗೆ ಎಂದೂ, ಎಂದೆಂದೂ ಸಿಗಲಾರದ ನೀರೊಳಗಿನ ಬಿಂಬ. ಮತ್ತೆ ಜೀವನ ವಿರುದ್ಧವಾದ ಸಂಗತಿಗಳ ಅಂದರೆ ಗಂಡು ಹೆಣ್ಣು, ಕತ್ತಲೆ, ದೀಪ , ಮಾನವ, ಪ್ರಾಣಿ, ಸತ್ಯ , ಸುಳ್ಳು ಏಕತೆ, ಸಾವು ,ಹುಟ್ಟು, ಹಣೆಬರಹ, ಕ್ರಿಯೆ, ಪೌರಾಣಿಕತೆ, ದಿವ್ಯ ಮಾಂತ್ರಿಕತೆ, ಇವೆಲ್ಲವುಗಳ ಅಸಂಬದ್ಧ ಮಿಶ್ರಣ. ಎಲ್ಲವೂ ಭ್ರಮೆ ಹಾಗೂ ವಾಸ್ತವ. ಇವೆಲ್ಲವುಗಳ ಜತೆ ಬದುಕುವುದು ಮತ್ತು ಸಾಯುವುದು ಮಾತ್ರ ಮನುಷ್ಯನ ಹಣೆಬರಹ. ಈ ಅರಿವಿನ ಹಿನ್ನೆಲೆಯಲ್ಲಿಯೇ ಶಿವನಾಗ ನಾಟಕದ ಕೊನೆಯಲ್ಲಿ ಸಿರಿಸಂಪಿಗೆಗೆ ಮತ್ತೆ ‘ನಮ್ಮ’ ಮಗನಿಗೆ ಆತನನ್ನು ಸೀಳಿಕೊಳ್ಳಲು ಕೊಡಬೇಡ ಎನ್ನುವುದು.
ಏಕೆಂದರೆ ಸೀಳಿಕೊಂಡಂತೆ ಎದುರಾಗುವವು ಅಸಂಪೂರ್ಣತೆಯ ಇನ್ನಷ್ಟು ಚೂರುಗಳು. ಇಲ್ಲಿ ಎಲ್ಲರೂ ಅಪೂರ್ಣರು. ಜರಾ ಸಂಧನ ತುಂಡುಗಳಂತೆ. ಅಲ್ಲದೆ ಇಲ್ಲಿ ಅವುಗಳನ್ನು ಕೂಡಿಸಿ ಒಂದಾಗಿಸುವವರು, ಅಥವಾ ಅಂತಹ ಶಕ್ತಿ ಇಲ್ಲ. ಅಥವಾ ಆ ಶಕ್ತಿ ನಮ್ಮ ಸಹಾಯಕ್ಕೆ ಬರುವುದಿಲ್ಲ. ನಾಟಕದ ಓದಿಗೆ ಇನ್ನೂ ಕೆಲವು ಅಯಾಮಗಳಿವೆ. ಅವಳಿ ಜವಳಿಗಳ ಕಥೆಯಂತೂ ಅರ್ಥ ವಂತಿಕೆಯ ಸಾಧ್ಯತೆಗಳಿಗೆ ಒಂದು ಹಾಸ್ಯ- ದುರಂತ ಆಯಾಮವನ್ನೂ ಒದಗಿಸುತ್ತದೆ. ಇವೆಲ್ಲವನ್ನೂ ರೆಪ್ಪೆ ಮುಚ್ಚಲು ಬಿಡದ ಅಸಾಧಾರಣ ಸಾಂಧ್ರತೆಯಲ್ಲಿ ಹೇಳುವ ಸಿರಿಸಂಪಿಗೆ ಒಂದು ಜಾಗತಿಕ ಕ್ಲಾಸಿಕ್. ಬರಹಗಾರರಾಗಿ ಕಂಬಾರರ ಸಿರಿವಂತಿಗೆಗೆ ಒಂದು ಸಾಕ್ಷಿ ಸಿರಿಸಂಪಿಗೆ.