ನಚ್ಚಿ ಎಂಬ ನೆಚ್ಚಿನ ಗೆಳೆಯನ ನೆನಪುಗಳು
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್‌
ಕಳೆದ ವಾರವೂ ಹೀಗೇ ಆಯಿತು. ಕಡೆಯ ಗಳಿಗೆಯಲ್ಲಿ ಬರೆಯುವ ವಿಷಯವನ್ನು ಬದಲಾಯಿಸಬೇಕಾಯಿತು. ಅದಕ್ಕೆ ಕಾರಣ ಕೀಳು ಅಭಿರುಚಿಯ ಚಿತ್ರವೊಂದು ಸೃಷ್ಟಿಸಿದ ವಿವಾದ.
ಇಂದು ವಿಷಯಾಂತರಕ್ಕೆ ಕಾರಣವೂ ಬೇಸರವೇ. ಗೆಳೆಯ ಎಂ.ಎನ್.ಚಕ್ರವರ್ತಿ (ನಚ್ಚಿ)ಯ ನಿರ್ಗಮನ. ಇಂಡಿಯನ್ ಎಕ್ಸ್‌ಪ್ರೆಸ್ಪತ್ರಿಕೆಯಲ್ಲಿ ನಚ್ಚಿ ವರದಿಗಾರ, ನಾನು ಉಪಸಂಪಾದಕ. ಇಬ್ಬರೂ ಒಂದೇ ಸಮಯದಲ್ಲಿ ಪತ್ರಿಕೆಗೆ ಸೇರಿದ್ದೆವು. ಯಾರೇ ಆಗಲಿ ನಚ್ಚಿಯ ಗೆಳೆತನ ಸಂಪಾದಿಸುವುದು ಕಷ್ಟವಾಗಿರಲಿಲ್ಲ. ಕಲ್ಲನ್ನೂ ಮಾತನಾಡಿಸುವುದಷ್ಟೆ ಅಲ್ಲ, ಅದನ್ನು ನಗಿಸಬಲ್ಲಷ್ಟು ಹಾಸ್ಯ ಪ್ರಜ್ಞೆ ಅವನದ್ದು. ನಚ್ಚಿ ನನಗಿಂತ ದೊಡ್ಡವನು, ಆದರೆ ಅವನನ್ನು ನೀವೆಂದು ಕರೆಯುವ ಮಟ್ಟಕ್ಕೆ ನಮ್ಮ ಸಂಬಂಧ ಏರಲೇ ಇಲ್ಲ.
ನಚ್ಚಿ, ನಾನು ಹತ್ತಿರವಾಗಲು ನಾವು ಬೆಂಗಳೂರು ಪ್ರೆಸ್ ಕ್ಲಬ್ ಕ್ರಿಕೆಟ್ ಟೀಮಿನಲ್ಲಿದ್ದದ್ದು ಮುಖ್ಯ ಕಾರಣ. ಟೀಮಿನಲ್ಲಿದ್ದರೂ ನಚ್ಚಿ ಆಡಿದ್ದು ಕಡಿಮೆ, ಆದರೆ ಇಂಡಿಯನ್ ಎಕ್ಸ್‌ಪ್ರೆಸ್ ತಂಡದಲ್ಲಿ ಒಮ್ಮೆ ಬೌಲ್ ಮಾಡಿದ್ದ. ಆಡುವ ಹನ್ನೊಂದರಲ್ಲಿ ಅವನಿದ್ದದ್ದು ಕಡಿಮೆ, ಆದರೆ ಅವನ ಉಪಸ್ಥಿತಿಯೇ ತಂಡದ ಪ್ರತಿ ಆಟಗಾರನಿಗೂ ಸ್ಫೂರ್ತಿ. ನಿರಂತರ ಹಾಸ್ಯ ಚಟಾಕಿಗಳನ್ನು ಹಾರಿಸುತ್ತಿದ್ದ ನಚ್ಚಿ ಸಂತಸದ ಚಿಲುಮೆ. ಗೋವಾ ಪ್ರವಾಸಕ್ಕೆ ನಮ್ಮ ತಂಡ ಹೊರಟಿತ್ತು.
ಬೆಂಗಳೂರು ರೇಲ್ ನಿಲ್ದಾಣ ತಲುಪಿ ಟ್ರೇನ್ ಹತ್ತುವ ಹೊತ್ತಿಗೆ ನಚ್ಚಿ ಆಗಲೇ ಅಲ್ಲಿ ತಲುಪಿದ್ದ. ದಾಡಿ ಬಿಟ್ಟಿದ್ದ ನನ್ನನ್ನು ನೋಡಿ ಯಾರಾದರೂ ನಿನ್ನನ್ನು ಇಂಟೆಲೆಕ್ಚುಅಲ್ ಅಂತ ಅಪಾರ್ಥ ಮಾಡ್ಕೊಂಡ್ರೆ ಏನ್ ಗತಿ, ಗುರೂ! – ನಚ್ಚಿ ನನ್ನನ್ನು ಬರಮಾಡಿ ಕೊಂಡ ವೈಖರಿ. ಮತ್ತೊಬ್ಬ ಸಹೋದ್ಯೋಗಿ ಶರಣ್ ಕುಮಾರ್ ಮತ್ತು ನಾನು ಆರಂಭಿಕ ಬೌಲರ್‌ಗಳು. ಗೂಗಲ್ ಆಗಿರಲಿಲ್ಲವಲ್ಲ, ಸರಿ, ನಾನು ಡೆನ್ನಿಸ್ ಲಿಲ್ಲಿಯ ‘ದ ಆರ್ಟ್ ಆಫ್‌ ಫಾಸ್ಟ್’ ಬೌಲಿಂಗ್ ಕಿಟ್ಟಲ್ಲಿ ಇಟ್ಟುಕೊಂಡಿದ್ದು, ಕಿಟ್ ತೆರೆದಾಗ ಪಕ್ಕದ ಇದ್ದ ನಚ್ಚಿ ಕಣ್ಣಿಗೆ ಆ ಪುಸ್ತಕ ಬಿತ್ತು.
ಅದು ಸರಿ, ನೀನ್ಯಾಕೆ ಈ ಪುಸ್ತಕ ಇಟ್ಕೊಂಡಿದ್ದೀ? ಮತ್ತೊಮ್ಮೆ ನನ್ನ ಕಾಲು ಎಳೆದಿದ್ದ ನಚ್ಚಿ. ಯಾವುದೇ ಮ್ಯಾಚ್‌ಗೆ ಮುನ್ನಮೈದಾನವನ್ನು ಒಂದು ಸುತ್ತು ಹೊಡೆದು ಬಾ ಅಂತ ಹಿತವಾಗಿ ಗದರಿಸುತ್ತಿದ್ದ. ಅವನನ್ನು ಮೆಚ್ಚಿಸಲು ಎರಡು ರೌಂಡ್ ಓಡುತ್ತಿದ್ದೆ. ಭಾರತ ತಂಡ ಆಗ ತಾನೇ ಹೀರೊ ಕಪ್ ಗೆದ್ದಿತ್ತು (1996). ಅದಾದ ಒಂದು ವಾರದಲ್ಲಿ ಅದೇ ಈಡನ್ ಗಾರ್ಡನ್ ಮೈದಾನದಲ್ಲಿ ನಮ್ಮ ಮಾಧ್ಯಮ ಕ್ರಿಕೆಟ್‌ನ ರಾಷ್ಟ್ರೀಯ ಪಂದ್ಯಾವಳಿಯ ಫೈನಲ್ ಪಂದ್ಯ. ಕೊಲ್ಕೊತಾಗೆ ತೆರಳುವ ಮುನ್ನ ಅಭ್ಯಾಸ ನಡೆಸಲು ನನಗೆ ಸಮಯಾವಕಾಶ ಇಲ್ಲದೇ ನೇರವಾಗಿ ಮೈದಾನವನ್ನು ಪ್ರವೇಶಿಸಿದ್ದರಿಂದ ಕೈ ಕಾಲುಗಳು ಪದ ಹೇಳುತ್ತಿದ್ದವು.
ಫೈನಲ್ ಪಂದ್ಯಕ್ಕೆ ಬೇಕಾದ ಫಿಟ್ನೆಸ್ ನನ್ನಲ್ಲಿರಲಿಲ್ಲ. ಅದೂ ಈಡನ್ ಗಾರ್ಡನ್ ಅಂತ ದೊಡ್ಡ ಕ್ರೀಡಾಂಗಣ. ಆದರೆ, ಅಂತಹ ಐತಿಹಾಸಿಕ ಕ್ರೀಡಾಂಗಣದಲ್ಲಿ ಆಡುವ ಭಾಗ್ಯವನ್ನು ದೂರ ಮಾಡಲಾದೀತೆ? ಆವಾಹಿತನಂತೆ ಮೈದಾನದಲ್ಲಿ ಓಡಿದೆ. ನಮ್ಮ ತಂಡದಲ್ಲಿ ಬೇರಾರೂ ಫೀಲ್ಡರ್‌ಗಳೇ ಇಲ್ಲವೇನೊ ಅನ್ನುವಂತೆ ಚೆಂಡನ್ನು ಅಟ್ಟಿಸಿಕೊಂಡು ಹೋಗುತ್ತಿದ್ದೆ. ಬೌಂಡರಿ ಅಂಚಿನಲ್ಲಿ ಕುಳಿತಿದ್ದ ನಚ್ಚಿ ನನ್ನನ್ನು ಓಡ್ರಾ, ಓಡ್ರಾ ಎಂದು ಹುರಿದುಂಬಿಸುತ್ತಿದ್ದ ದೃಶ್ಯ ಕಾಲು ಶತಮಾನದ ನಂತರ ನೆನ್ನೆ ಏನೋ ಅನ್ನುವಷ್ಟು ಹಸಿರಾಗಿದೆ.
ಮ್ಯಾಚ್ ಗೆದ್ದಾಗಿತ್ತು. ಮ್ಯಾಚ್ ಆಡದಿದ್ದರೂ, ತಾನೇ ಗೆದ್ದಷ್ಟು ಖುಷಿಯಿಂದ ನಮ್ಮ ಸಂತೋಷವನ್ನು ಇಮ್ಮಡಿಗೊಳಿಸುತ್ತಿದ್ದ ನಿಷ್ಕಲ್ಮಶ ಹೃದಯ ನಚ್ಚಿಯದು. ಸಿಗರೆಟ್ ತಂದು, ಸಾಪಡು ಎನ್ನುವುದು, ನಾನೂ ಅದನ್ನೇ ಅವನಿಗೆ ಹೇಳುವುದು ನಡೆದಿತ್ತು. ಅಸ್ತಮಾದಿಂದ ನರಳುತ್ತಿದ್ದ ನಚ್ಚಿಗೆ ಸಕ್ಕರೆ ಕಾಯಿಲೆಯೂ ಇತ್ತು. ಇಚ್ಚಾಮರಣಿಯ ದೃಢತೆಯೊಂದಿಗೆ, ಬೇಡವೆಂದಾಗ ಸಿಗರೆಟ್ ಮತ್ತು ವಿಸ್ಕಿಯನ್ನು ಬಿಟ್ಟು ಬಿಡುತ್ತಿದ್ದ. ಅನಾರೋಗ್ಯದ ಬಾಧೆ ಎಷ್ಟೇ ಇದ್ದರೂ ಅವನು ಖಿನ್ನನಾಗಿದ್ದೇ ಇಲ್ಲ.
ಜೀವನೋತ್ಸಾಹದ ಗುತ್ತಿಗೆ ಭಗವಂತ ಇವನೊಬ್ಬನಿಗೇ ಕೊಟ್ಟಂತಿರುತ್ತಿದ್ದ. ಒಮ್ಮೆಯಷ್ಟೇ ಆತ ಕೋಪ ಮಾಡಿಕೊಂಡದ್ದು, ಅನುಚಿತವಾಗಿ ಮಾತನಾಡಿದ್ದು. ಅನ್ಯಧರ್ಮೀಯ ಸಹೋದ್ಯೋಗಿ ಯೊಬ್ಬನ ನಡವಳಿಕೆಯಿಂದ ಕ್ರುದ್ಧನಾಗಿ ಎರಡು ನಿಮಿಷಆತನೊಬ್ಬನ ಮೇಲೆ ಕೆಂಡ ಕಾರಿದ್ದ. ತನ್ನದೇ ದೌರ್ಬಲ್ಯ ಯಾವುದನ್ನೊ ಮುಚ್ಚಲಿಕ್ಕೆ ಹಾಗೆ ಹಾರಾಡಿದ ಅನ್ನಿಸಿತ್ತು.ಅಷ್ಟಾಗಿಯೂ ಅವನಿಂದ ಬೆಂಕಿ ಉಗುಳಿಸಿಕೊಳ್ಳುವಂಥ ಮಾತುಗಳನ್ನೇನು ಬೈಸಿಕೊಂಡವನು ಆಡಿರಲಿಲ್ಲ.
ಕನ್ನಡಪ್ರಭದ ಸಂಪಾದಕೀಯ ವಿಭಾಗ ಮತ್ತು ನಮ್ಮ ಸಂಪಾದಕೀಯ ವಿಭಾಗಗಳೆರಡೂ ಒಂದೇ ಮಹಡಿಯಲ್ಲಿದ್ದರೂ, ಅಲ್ಲಿಯ ಪತ್ರಕರ್ತರಿಗೂ, ನಮಗೂ ಅಂತಹ ಸಂಪರ್ಕವಿರಲಿಲ್ಲ, ಅದಕ್ಕೆ ಮುಖ್ಯ ಕಾರಣ ಸಮಯದ ಅಭಾವ. ಹಾಗಾಗಿ, ಕರ್ನಾಟಕ ಪತ್ರಿಕೋದ್ಯಮದಲ್ಲಿ ಹೆಸರು ಮಾಡಿದ್ದ ವೈಎನ್‌ಕೆ ಅವರನ್ನು ಭೇಟಿಯಾಗಿರಲಿಲ್ಲ. ನಚ್ಚಿಯೇ ಒಮ್ಮೆ ಅವರನ್ನು ಪರಿಚಯಿಸಿದ್ದ. ಐದಾರು ವರ್ಷಗಳ ನಂತರ ನಚ್ಚಿ ಇದನ್ನು ಮರೆತಿದ್ದ. ನಾನು ಎಕ್ ಪ್ರೆಸ್ ಬಿಟ್ಟು ಡೆಕ್ಕನ್ ಹೆರಾಲ್ಡ ಸೇರಿದ್ದೆ.
ವೆಸ್ಟ್ ಎಂಡ್ ಹೊಟೇಲ್‌ನಲ್ಲಿ ವೈಎನ್‌ಕೆ ಗೆ ಮತ್ತೆ ಪರಿಚಯಿಸಲಾಗಿ ಹಾ, ಗೊತ್ತಲ್ಲ, ಡೆಕ್ಕನ್ ಹೆರಾಲ್ಡ್ ವರದಿಗಾರರು, ಹೆಸರನ್ನು            ಎಂದು ಬರೆಯುತ್ತಾರೆ ಎಂದು ಹೇಳಿ ನಚ್ಚಿ ಮತ್ತು ನನ್ನನ್ನು ತಮ್ಮ ಸೂಕ್ಷ್ಮ ಗ್ರಾಹಿತ್ವದಿಂದ ಚಕಿತರನ್ನಾಗಿಸಿ ದ್ದರು. ತಾನು ಸಂತೈಸಿದ್ದ ವ್ಯಕ್ತಿಗಳನ್ನು ನಚ್ಚಿ ಚೆನ್ನಾಗಿ ಅಣಕವಾಡುತ್ತಿದ್ದ. ಶಿವರಾಮ ಕಾರಂತರ ಕೋಪವನ್ನು ಅನುಕರಿಸು ವುದು, ವೈಎನ್‌ಕೆ ಅವರ ಜೋಕ್‌ಗಳನ್ನು ಅವರದೇ ಧಾಟಿಯಲ್ಲಿ ಹೇಳುವುದು ನಚ್ಚಿಯ ಪಾಸ್ಟೆಮ್‌.
ಒಂದು ಸಂಜೆ ಸ್ಯಾಂಕೀ ಟ್ಯಾಂಕ್ ದಂಡೆಯ ಮೇಲೆ ವಾಕ್ ಮಾಡುತ್ತಿದ್ದಾಗ ವೈಎನ್‌ಕೆ ಎಂದೊ ಯಾರೊ ಸರಿಯಾಗಿ ನಡೆಯ ದಿದ್ದವರನ್ನು ನೋಡಿ ನೋಡು, ನೋಡು, ಅವನ ನಡತೆ ಸರಿ ಇಲ್ಲ ಎಂದು ಹೇಳಿದ್ದನ್ನು ನೆನಪಿಸಿದ್ದ. ಲಂಕೇಶ್ ಪತ್ರಿಕೆಯ ಆರಂಭದಲ್ಲಿ ಅದರ ಸಂಪಾದಕ ಲಂಕೇಶರಿಗೆ ನಚ್ಚಿ ಆಪ್ತವಾಗಿದ್ದ. ಕನ್ನಡ ಪತ್ರಿಕಾರಂಗದಿಂದ ಇಂಗ್ಲಿಷ್ ಪತ್ರಿಕೆಗೆ ಹಾರಿದ ಕೆಲವೇ ಪತ್ರಕರ್ತರಲ್ಲಿ ನಚ್ಚಿಯೂ ಒಬ್ಬ. ಅವನ ಬರವಣಿಗೆ ಅದ್ಭುತವೆಂದು ಹೇಳಲಾರೆ, ಆದರೆ ಅವನಿಗೆ ಯಾರಿಂದ ಬೇಕಾದರೂ ಮಾಹಿತಿಯನ್ನು ಹೆಕ್ಕಿ ತೆಗೆಯುವ ಕಲೆ ಸಿದ್ಧಿಸಿತ್ತು.
ಯಾವುದೇ ವ್ಯಕ್ತಿಯನ್ನು ಭೇಟಿ ಮಾಡಿದ ಐದೇ ನಿಮಿಷಗಳಲ್ಲಿ ಹಾಸ್ಯ ಮಾಡಬಲ್ಲ ಚಾಕಚಕ್ಯತೆ ಅವನಲ್ಲಿತ್ತು. ನನ್ನ ಪ್ರಕಾರ, ನಚ್ಚಿ ಕೈ ಹಾಕಿದ್ದರೆ ಒಳ್ಳೆಯ ವ್ಯಂಗ್ಯಚಿತ್ರಕಾರನಾಗುತ್ತಿದ್ದ. ವ್ಯಕ್ತಿ ದೋಷಗಳನ್ನು ಕ್ಷಣದ ಕಂಡುಹಿಡಿದು, ಅವುಗಳನ್ನು ಸಂಬಂಧಿಸಿದ ವ್ಯಕ್ತಿಗಳ ಮುಖಕ್ಕೇ ಹೇಳುವ ಛಾತಿ ಅವನಲ್ಲಿತ್ತು. ಲಂಕೇಶರನ್ನೂ ಟೀಕೆ ಮಾಡದಿರಲಿಲ್ಲ. ಎಡಪಂಥ ಅವನಮೇಲೆ ಪರಿಣಾಮ ಬೀರಿತ್ತು ಆದರೆ ಯಾವುದೇ ಪಂಥಕ್ಕೂ ಅವನು ಅಂಟಿಕೊಂಡಿರಲಿಲ್ಲ.
ಎಡಬಲಗಳೆರಡೂ ಪಂಥದವರನ್ನು ಟೀಕಿಸುತ್ತಿದ್ದ. ಸಾಂಪ್ರದಾಯಿಕ ಶ್ರೀ ವೈಷ್ಣವ ಕುಟುಂಬಕ್ಕೆ ಸೇರಿದ್ದ ನಚ್ಚಿ, ತಂದೆಯ ಸಾಂಪ್ರದಾಯಿಕ ರೀತಿನೀತಿಗಳನ್ನು ಮೆಚ್ಚಿಕೊಳ್ಳುತ್ತಲೇ ತನ್ನ ಮದಿರೆಯನ್ನು ಆಸ್ವಾದಿಸುತ್ತಿದ್ದ. ಒಮ್ಮೆ ಹೀಗಾಯಿತು. ನನ್ನ ರಜಾ ದಿನವಾದ್ದರಿಂದ ಅವನ ಆಫೀಸ್‌ಗೆ ಹೋದೆ. ಅವನು ಬ್ಯುಸಿ ಇದ್ದ. ಸ್ವಲ್ಪ ಹೊತ್ತು ಕೂತೆ. ಕ್ಲಬ್ಬಿಗೆ ಹೋಗೋಣವೆಂದೆ. ಇಲ್ಲ, ಸಮಯಕ್ಕೆ ಸರಿಯಾಗಿ ಮನೆಗೆ ಹೋಗಬೇಕು, ಅಂದವನೇ ಎದ್ದು ನಿಂತು ತನ್ನ ಕಂಪ್ಯೂಟರ್ ಟರ್ಮಿನಲ್ ಮೇಲಿದ್ದ ಕಪಾಟನ್ನುತೆಗೆದು ಇದನ್ನು ಕುಡಿಯೋಣ ಎಂದು ಒಂದು ವಿಸ್ಕಿ ಬಾಟಲ್ ತೋರಿಸಿದ.
ಕ್ಲಬ್ಬಿಗೆ ಹೋಗೋದು ಬೇಡ, ಇಲ್ಲೇ ಕುಡಿಯೋಣ, ಬರೇ ಟೇಸ್ಟ್ ಮಾಡೋದು ಅಷ್ಟೆ ಎನ್ನುತ್ತಾ ಎರಡು ಗ್ಲಾಸ್ ವ್ಯವಸ್ಥೆ ಮಾಡಿ ಅದಕ್ಕೆ ಸ್ವಲ್ಪವೇ ವಿಸ್ಕಿಸುರಿದು, ನೀರು ಸೇರಿಸಿದ. ಒಂದು ನಿಮಿಷ ಎಂದು ಹೇಳಿ ಎರಡೂ ಗ್ಲಾಸ್‌ಗಳನ್ನು ಕಪಾಟಿನೊಳಗಿಟ್ಟು ಅದನ್ನು ಗೌಪ್ಯವಾಗಿ ಕುಡಿಯಬೇಕೆಂದು ತಾಕೀತು ಮಾಡಿದ. ಪ್ರತಿ ಸಿಪ್ ಕುಡಿಯಬೇಕಾದಾಗ ಎದ್ದು ನಿಂತು, ಕಪಾಟನ್ನು ತೆಗೆದು,ಮುಖವನ್ನು ಅದರೊಳಗೆ ತೂರಿ ಗುಟುಕರಿಸಿ, ಗ್ಲಾಸನ್ನು ಅ ಇಟ್ಟು, ಕಪಾಟನ್ನು ಮುಚ್ಚಿ ಕುಳಿತುಕೊಳ್ಳಬೇಕು.
ಅದನ್ನು ಮಾಡಿಯೂ ತೋರಿಸಿದ. ಅವನು ಹೇಳಿದಂತೆ ಎರಡು ಬಾರಿ ಮಾಡಿ, ನೋಡೊ, ಇದು ನಿನ್ನ ಆಫೀಸ್. ನನ್ನ ಮೇಲೆ ಯಾರೂ ತೆಗೆದುಕೊಳ್ಳಲಾಗುವುದಿಲ್ಲ. ನಾನು ಆರಾಮವಾಗಿ ಕುಳಿತೇ ಕುಡಿಯುತ್ತೇನೆ ಎಂದು ತಮಾಷೆ ಮಾಡಿ ಗ್ಲಾಸನ್ನೂ, ಜಾಗ ವನ್ನೂ ಖಾಲಿ ಮಾಡಿದೆ. (ಶಾ ವಾಲೇಸ್ ಕಂಪನಿಯ ಮಾಧ್ಯಮ ಗೋಷ್ಠಿಯಲ್ಲಿ ನೀಡಲಾಗಿದ್ದ ಆ ಬಾಟಲನ್ನು ಅದರಿಂದ ದೂರವಿದ್ದ ಸಹೋದ್ಯೋಗಿಯೊಬ್ಬರು ನಚ್ಚಿಗೆ ಆಗ ತಾನೇ ನೀಡಿದ್ದರಂತೆ.) ನಚ್ಚಿಯ ಅತಿಥಿ ಸತ್ಕಾರಕ್ಕೆ ಇದೊಂದು ಸಣ್ಣ ಉದಾಹರಣೆ.
ಆಫೀಸ್‌ಗೆ ವಿಧವಿಧವಾದ ತಿಂಡಿತಿನಿಸುಗಳನ್ನು ಕಟ್ಟಿಸಿಕೊಂಡು ಬಂದು ಹಂಚಿ ತಿನ್ನುವುದು ಅವನ ಅಭ್ಯಾಸವಾಗಿತ್ತು. ಅಯ್ಯಂಗಾರರ ವೈಶಿಷ್ಠ್ಯವಾದ ಕದಂಬಮ್ ನಾನು ಮೊದಲಿಗೆ ರುಚಿ ನೋಡಿದ್ದು ನಚ್ಚಿಯ ಅಂತಹ ಸತ್ಕಾರದಿಂದ. ವರ್ಣ ವೈವಿಧ್ಯದ ಸೊಬಗನ್ನು ತಿಳಿಯಲು ತಿಂಡಿಪ್ರಿಯ ನಚ್ಚಿಯ ಹೊಟ್ಟೆಯನ್ನು ಲ್ಯಾಪರೊಸ್ಕೊಪ್ ಮೂಲಕ ನೋಡ ಬೇಕೇನೋ ಎಂದು ಆಗಾಗ್ಗೆ ಅನ್ನಿಸುತ್ತಿತ್ತು.
ಚಕ್ಕಲಿ, ಕೋಡುಬಳೆ, ಕಾಫಿ, ಇಡ್ಲಿ, ಕಲ್ಲಂಗರಿ, ಅನಾನಸ್, ಐಸ್ಕ್ರೀಮ, ಬಿಟ್ಟಿದ್ದರೆ ಬೇರೇನೊ ಇವೆಲ್ಲದಕ್ಕೂ ಊಟವಾದನಂತರವೂ ನಚ್ಚಿಯ ಹೊಟ್ಟೆಯಲ್ಲಿ ಜಾಗವಿರುತ್ತಿತ್ತು. ಮಶ್ವರಂ ಕ್ಲಬ್ಬಿನ ಸದಸ್ಯನಾಗಿದ್ದ ನಚ್ಚಿ ಅಲ್ಲಿಯ ಅಕ್ಕಿ ರೊಟ್ಟಿಗೂ ನನ್ನನ್ನು ಪರಿಚಯಿಸಿದ್ದ. ಡಯಾಬಿಟಿಸ್ ಉಲ್ಬಣಿಸಿ ಸುಮಾರು ಐದು ವರ್ಷಗಳ ಹಿಂದೆಯೇ ನಚ್ಚಿ ದೃಷ್ಟಿಯನ್ನು ಕಳೆದು ಕೊಂಡದ್ದ. ಆದರೆ, ಒಂದಷ್ಟೂ ಬೇಸರಪಟ್ಟಿಕೊಳ್ಳದೇ, ಅದನ್ನೂ ನಿಭಾಯಿಸುತ್ತಿದ್ದ. ಅವನ ಅಗಾಧ ಜೀವನ ಪ್ರೀತಿಗೆ ಸಣ್ಣ ಪ್ರಮಾಣದ ಕುಂದುಂಟಾಗಿರಲಿಲ್ಲ.
ನನ್ನ ಜತೆ ನಡೆದುಕೊಂಡೇ ಬಂದು ಮಶ್ವರಂ ಕ್ಲಬ್‌ನಲ್ಲಿ ಊಟ ಮಾಡಿಸಿದ್ದ. ಒಮ್ಮೆ ನೂರು ರುಪಾಯಿ ಕೇಳಿ ಪಡೆದುಕೊಂಡ ವನು ಅದನ್ನು ಹಿಂತಿರುಗಿಸಿದ್ದ. ನಾನೂ ಅವನಿಂದ ಐದು ನೂರು ರುಪಾಯಿ ಪಡೆದು ಅದನ್ನು ಹಿಂತಿರುಗಿಸಿದ್ದೆ. ನೀ ನನಗೆ ವಾಪಸ್ ಕೊಟ್ಯಾ? ಅಂತ ಒಂದೆರಡು ಬಾರಿ ಕೇಳಿದ್ದ. ಎಷ್ಟೇ ವೈಯಕ್ತಿಕ ವಿಚಾರವಾದರೂ ಮುಕ್ತವಾಗಿ ಚರ್ಚಿಸುತ್ತಿದ್ದ. ಸಹೋದ್ಯೋಗಿಗಳನ್ನು ಎದುರಿಗೂ, ಅವರ ಬೆನ್ನ ಹಿಂದೆಯೂ ಸಮಾನವಾಗಿ ಖಂಡಿಸುತ್ತಿದ್ದ.
ಲಂಕೇಶ್ ಪತ್ರಿಕೆಯ ವರದಿಗಾರ ರೊಬ್ಬರು ತಮ್ಮ ಪತ್ನಿಯ ವರ್ಗಾವಣೆಯನ್ನು ಅಂದಿನ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರನ್ನು ಕೇಳಿ ಮಾಡಿಸಿಕೊಂಡಿದ್ದರಂತೆ. ಒಮ್ಮೆ ಪತ್ರಿಕಾಗೋಷ್ಠಿಯಲ್ಲಿ ಹೆಗಡೆ ಅದನ್ನು ಬಹಿರಂಗಗೊಳಿಸಿ ವರದಿಗಾರರ ಬಾಯನ್ನು ಕಟ್ಟಿಹಾಕಿದ್ದರಂತೆ. ಇದನ್ನು ನಚ್ಚಿ ನನಗೆ ಹೇಳಿದ್ದ. ಕೇಂದ್ರೀಯ ಶಾಲೆಯಲ್ಲಿ ಸೇವೆ ಸಲ್ಲಿಸುತಿದ್ದ ನನ್ನ ಅಕ್ಕನಿಗೆ ಅವಶ್ಯಕವಾಗಿ ಬೇಕಿದ್ದ ವರ್ಗಾವಣೆಯ ಪ್ರಸ್ತಾಪವನ್ನು ಅಂದಿನ ಸಂಸದ ಶ್ರೀಕಂಠದತ್ತ ಒಡೆಯರೊಂದಿಗೆ ಮಾಡಿದೆನಾದರೂ ಅದನ್ನು ಅರ್ಧದ ಕೈಬಿಟ್ಟುದಕ್ಕೆ ನಚ್ಚಿ ಹಂಚಿಕೊಂಡಿದ್ದ ಪ್ರಸಂಗವೂ ಕಾರಣವಾಯಿತು.
ಸಹೋದ್ಯೋಗಿಯ ತಂದೆಯೊಬ್ಬರಿಗೆ ರಾಷ್ಟ್ರೀಯ ಬ್ಯಾಂಕೊಂದರಿಂದ ಸಂದೇಶ ಬಂದಿತ್ತು. ನೇತಾಜಿ ಸುಭಾಷ್ ಚಂದ್ರ ಬೋಸರ ಒಡನಾಡಿಯಾದ ಅವರ ಹತ್ತಿರದ ಸಂಬಂಧಿಯೊಬ್ಬರು ಜಪಾನಿನಲ್ಲಿ ಹಡಗು ನಿರ್ಮಾಣದಲ್ಲಿ ತೊಡಗಿದ್ದು ಅವರು ಕಾಲವಾದ ನಂತರ ಅವರ ಖಾತೆಯಲ್ಲಿರುವ ನೂರೈವತ್ತು ಕೋಟಿ ರು.ಗಳನ್ನು ಸಹೋದ್ಯೋಗಿಯ ತಂದೆ ತಾವೇ ಅದಕ್ಕೆ ವಾರಸುದಾರರೆಂದು ದಾಖಲೆಗಳೊಂದಿಗೆ ಆ ಹಣವನ್ನು ಪಡೆಯಬಹುದಿತ್ತು. ಆದರೆ ಅವರಿಗೆ ಆ ಬೃಹತ್ ಮೊತ್ತವನ್ನು ಪಡೆಯುವುದರಲ್ಲಿ ಆಸಕ್ತಿ ಇರಲಿಲ್ಲ. ತಂದೆಯ ನಿರ್ಲಿಪ್ತತೆ ಮಗನಿಗಿರಲಿಲ್ಲವಾದ್ದರಿಯಿಂದ ತಂದೆಯ ಬಗ್ಗೆ ಅಸಮಾಧಾನವಿತ್ತು.
ಅದೇ ಸಮಯದಲ್ಲಿ ತಂದೆ ತೀರಿಕೊಂಡು, ಅದಾದ ಕೆಲವು ದಿನಗಳಲ್ಲಿ ಸಹೋದ್ಯೋಗಿ ಪ್ರೆಸ್ ಕ್ಲಬ್ಬಿನಲ್ಲಿ ಕಾಣಿಸಿಕೊಂಡ. ದೂರದಲ್ಲಿ ಕಂಡ ಅವನತ್ತ ನಚ್ಚಿ (ಅವನ ತುಂಡರಿಸಿದ ಹೆಸರು ಹೇಳುತ್ತಾ) ಲೇ, ನಿಮ್ ತಂದೇದು ನ್ಯಾಚುರಲ್ ಡೆತ್ತೇ ಅಂತೇ. ಸರಿ, ಯಾರ್ಗೂ ಹೇಳೊಲ್ಲ ಬಿಡು ಅಂತ ಇಡೀ ಕ್ಲಬ್ಬ್ ಕೇಳೋ ಹಾಗೆ ಕೂಗಿದ್ದ. ಇಂತಹ ಅಮೋಘ ಹಾಸ್ಯ ಪ್ರಜ್ಞೆಯೇ ನಚ್ಚಿಯಜೀವನದ ಉಸಿರಾಗಿತ್ತು. ಪ್ರಾಣಾಯಾಮವೂ, ನಡಿಗೆಯೂ, ತನ್ನ ಖುಷಿಗಾಗಿ ನುಡಿಸುತ್ತಿದ್ದ ವೇಣು ವಾದನವೂ ನಚ್ಚಿಯ ಇಡೀ ಜೀವನವನ್ನು ನಿರ್ಮಲವಾಗಿಸಿತ್ತು. ಮೂವತ್ತು ವರ್ಷಗಳ ಹಿಂದೆಯೇ ಸಹೋದ್ಯೋಗಿ ಮಮತಾ        ಅಂತ ಹೇಳಿದ್ದು ನೆನಪಿದೆ.
ಅದರ ಜತೆಗೆ ಇಂದು ಅಂದಿನ ಮತ್ತೊಬ್ಬ ಸಹೋದ್ಯೋಗಿ ಜಯಶ್ರೀ ……       ಎಂದು ಅಂತಿಮ ನಮನ ಸಲ್ಲಿಸಿದ್ದಾರೆ. ದೇವರೇ ಪುಣ್ಯವಂತ.