ಸಾಮಾಜಿಕ ಜಾಲತಾಣವೆಂಬ ಗಾಜಿನ ಮನೆ !
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ವಿಶ್ವದಲ್ಲಿ  (ಗ್ಲೋಬಲೈಸೇಶನ್) ಶುರುವಾದಾಗಿನಿಂದ ಭೂಮಿ ಚಿಕ್ಕ ಊರಾಗಿದೆ. ಒಂದು ಕಾಲದಲ್ಲಿ ಅಮೆರಿಕಕ್ಕೆ ಹೋಗಬೇಕು. ಅಮೆರಿಕ ಎಂದರೆ ಸಪ್ತಸಾಗರ ದಾಟಿ ಹೋಗಬೇಕು ಎನ್ನುವ ಆತಂಕದಿಂದ, ಪಕ್ಕದ ಊರಿಗೆ ಹೋದಷ್ಟು ಸಲೀಸಾಗಿ ಹೋಗಿ ಬರುವಂತಾಗಿದೆ.
ಇದಕ್ಕೆ ಪೂರಕ ಎನ್ನುವಂತೆ, ತಂತ್ರಜ್ಞಾನದ ಸ್ಪರ್ಶ ಸಿಗುತ್ತಿದ್ದಂತೆ, ಇನ್ನಷ್ಟು ಚಿಕ್ಕದಾಗುತ್ತ ಬಂದಿದೆ. ಎಷ್ಟರ ಮಟ್ಟಿಗೆ ಇದಕ್ಕಾಗಿ ಕಾಯಬೇಕು ಎನ್ನುವ ಕಾಲ ಹೋಗಿ, ರಿಯಲ್ ಟೈಮ್‌ನಲ್ಲಿ ಸಾವಿರಾರು ಕಿ.ಮೀ ದೂರದಲ್ಲಿರುವವರು, ಎದುರು ಕೂತು ಮಾತನಾಡುವಷ್ಟು ಸಲೀಸಾಗಿ ಮಾತನಾಡಬಹುದಾಗಿದೆ. ಆದರೆ ಇದೀಗ ತಂತ್ರಜ್ಞಾನದ ಬಳಕೆ ಮಿತಿ ಮೀರಿ, ಸದ್ಬಳಕೆಯ ಜತೆಜತೆ ದುರ್ಬಳಕೆಯ ಹಾದಿಯಲ್ಲಿ ಸಾಗುತ್ತಿರುವುದು ಆಘಾತಕಾರಿ ವಿಷಯ.
ತಂತ್ರಜ್ಞಾನದ ಬಳಕೆ ಹೆಚ್ಚಾಗುತ್ತಿದ್ದಂತೆ, ಇದರಿಂದ ಆಗುತ್ತಿರುವ ಸೈಡ್ ಎಫೆಕ್ಟ್ ಬಗ್ಗೆ ಆರಂಭದಲ್ಲಿ ಬಹುತೇಕ ಅರ್ಥ ಮಾಡಿಕೊಳ್ಳಲು ಹೋಗಲಿಲ್ಲ. ಆದರೆ ಇತ್ತೀಚಿನ ಕೆಲ ವರ್ಷದಲ್ಲಂತೂ, ಈ ಸಾಮಾಜಿಕ ಜಾಲತಾಣದ ದುರ್ಬಳಕೆ ಎನ್ನುವುದು ಹೆಮ್ಮರವಾಗಿದೆ. ದೇಶದ ಅಸ್ಮಿತೆಗೆ ಧಕ್ಕೆ ತರುವ ಮಟ್ಟಿಗೆ ಮುಟ್ಟುವುದನ್ನು ಗಮನಿಸಿದ ಕೇಂದ್ರ ಸರಕಾರ ಕಳೆದ ವಾರವಷ್ಟೇ, ಕಾನೂನಿಗೆ ತಿದ್ದುಪಡಿ ಜಾರಿಗೊಳಿಸಲು ಮುಂದಾಗಿದೆ.
ಈಗಾಗಲೇ ಜಾರಿಯಲ್ಲಿರುವ ಐಟಿ ಕಾನೂನಿಗೆ ತಿದ್ದುಪಡಿ ತಂದ, ಅದಕ್ಕೆ ಶಕ್ತಿ ತುಂಬುವ ಕೆಲಸ ಮಾಡುವ ಲೆಕ್ಕಚಾರದಲ್ಲಿದೆ. ಆದರೆ ಈ ತಿದ್ದುಪಡಿ ವಿಷಯಕ್ಕೆ ಸಂಬಂಧಿಸಿದಂತೆ ಕೇಂದ್ರ ಸರಕಾರ ಐಟಿ ಸಚಿವ ರಶಂಕರ್ ಪ್ರಸಾದ್ ಹೇಳಿಕೆ ನೀಡುತ್ತಿದ್ದಂತೆ,ಸಹಜವಾದ ಪರ – ವಿರೋಧ ಚರ್ಚೆಗಳು ಆರಂಭ ಗೊಂಡವು. ಸುಳ್ಳು ಸುದ್ದಿಗಳ ನಿಯಂತ್ರಣಕ್ಕೆಂದು ಕೇಂದ್ರ ಸರಕಾರ ಈ ತಿದ್ದುಪಡಿಯಲ್ಲಿ ಹೆಚ್ಚು ಪ್ರಾಮುಖ್ಯತೆ ನೀಡಿದೆ.
ಆದರೆ ಇದು ಪೂರ್ಣ ಪ್ರಮಾಣದಲ್ಲಿ ಸಾಧ್ಯವೇ ಎನ್ನುವ ಪ್ರಶ್ನೆ ಇನ್ನು ಉತ್ತರ ಸಿಕ್ಕಿಲ್ಲ. ಏಕೆಂದರೆ ಈ ಸುಳ್ಳು ಸುದ್ದಿ ತಪ್ಪಿಸುವ ಪ್ರಯತ್ನ ಇಂದು – ನಿನ್ನೆಯದ್ದಲ್ಲ. ಈ ಹಿಂದೆಯೂ ಫೇಕ್ ನ್ಯೂಸ್‌ಗಳಿಗೆ ನಿಯಂತ್ರಣ ಹೇರಲು ಆ ಸಂಸ್ಥೆಗಳೊಂದಿಗೆ ಕೂತುಚರ್ಚಿಸಿತ್ತು. ಇದರ ಭಾಗವಾಗಿ ವಾಟ್ಸ್‌ಅಪ್ ಸಂಸ್ಥೆ -ರ್ವಡ್ ಮಾಡುವ ಸಂದೇಶಗಳಿಗೆ ನಿಯಂತ್ರಣ ಹೇರಿ, ಒಮ್ಮೆಗೆ ಕೇವಲ ಐದು ಮಂದಿಗೆ ಮಾತ್ರ ಕಳುಹಿಸಬಹುದು. ಒಂದು ವೇಳೆ ಸಂದೇಶ ಫಾರ್ವಡ್ ಆಗಿದ್ದರೆ, ಅದರ ಮೇಲೆ ಫಾರ್ವಡ್ ಎಂದು ಕಾಣುವಂತೆ ಮಾಡಿದರು. ಆದರೂ ಫೇಕ್ ನ್ಯೂಸ್‌ಯ ಹಾವಳಿ ಕಡಿಮೆಯಾಗಿಲ್ಲ.
ಸುಳ್ಳು ಸುದ್ದಿಯಷ್ಟೇ ಅಲ್ಲದೇ, ಪ್ರಚೋದನೆ ನೀಡುವ ಸಂದೇಶಗಳು, ದೇಶದ ವ್ಯವಸ್ಥೆಗೆ ಧಕ್ಕೆಯಾಗುವ ಸಂದೇಶಗಳನ್ನುಹರಿಬಿಡುವ ಕೆಲಸವನ್ನು ಅನೇಕರು ವ್ಯವಸ್ಥಿತವಾಗಿ ಮಾಡಿದರೂ, ಅದನ್ನು ಪೂರ್ಣ ಪ್ರಮಾಣದಲ್ಲಿ ನಿಲ್ಲಿಸಲು ಸಾಧ್ಯವಾಗಿಲ್ಲ. ಕಳೆದ ವಾರ ನನ್ನ ಅಂಕಣದಲ್ಲಿ ಬರೆದಿದ್ದ ಟೂಲ್‌ಕಿಟ್ ಎನ್ನುವ ವಿಷಯವೂ ಇದೇ ಸಾಮಾಜಿಕ ಜಾಲತಾಣದ ಹೆಮ್ಮರದ ಒಂದು ಚಿಕ್ಕ ಕೊಂಬೆ ಎಂದರೆ ತಪ್ಪಾಗುವುದಿಲ್ಲ.
ಪ್ರಮುಖವಾಗಿ ಸಾಮಾಜಿಕ ಜಾಲತಾಣದ ವ್ಯಾಪ್ತಿ ಕೇವಲ ಭಾರತಕ್ಕೆ ಸೀಮಿತವಾಗಿಲ್ಲ. ಯಾರು ಎಲ್ಲಿ ಕೂತಾದರೂ ಭಾರತದ ಟ್ರೇಂಡಿಂಗ್ ಬಗ್ಗೆ ನೋಡಬಹುದು. ಇದರಿಂದ ಒಂದು ಸುಳ್ಳು ಸುದ್ದಿ, ಭಾರತ ಮರ್ಯಾದೆಯನ್ನು ವಿಶ್ವಮಟ್ಟದಲ್ಲಿ ಕಡಿಮೆ ಮಾಡುವ ಸಾಧ್ಯತೆ ಯಿರುತ್ತದೆ. ಇದಿಷ್ಟೇ ಅಲ್ಲ, ಇತ್ತೀಚಿನ ದಿನದಲ್ಲಿ ಸೈಬರ್ ಕ್ರೈಮ್ ಎನ್ನುವುದು ಡಿಜಿಟಲೀಕರಣ ದುರ್ಬಳಕೆಯ ಮುಂದುವರಿದ ಭಾಗ. ಆದರೆ ಆಡಳಿತ ನಡೆಸುವವರಿಗೆ ತಂತ್ರಜ್ಞಾನದಿಂದ ಆಗುತ್ತಿರುವ ಸಮಸ್ಯೆಯ ಅರಿದ್ದರೂ, ಅದನ್ನು ಮಟ್ಟಹಾಕುವುದು ಹೇಗೆ ಎನ್ನುವ ವಿಷಯ ಬಂದಾಗ ಬ್ಲ್ಯಾಕ್ ಆಗುವುದು ಸಹಜ.
ಏಕೆಂದರೆ, ಬೌದ್ಧಿಕವಾಗಿ ನಡೆಯುವ ಅಪರಾಧ, ಅಪಪ್ರಚಾರ ಅಥವಾ ಇನ್ಯಾವುದೋ ಸಮಾಜ ವಿದ್ವಂಸಕ ಕೃತ್ಯದಲ್ಲಿ ಅದರ ಮೂಲ ಪತ್ತೆ ಹಚ್ಚುವುದು ಸುಲಭ. ಆದರೆ ಸಾಮಾಜಿಕ ಜಾಲತಾಣ ಅಥವಾ ಡಿಜಿಟಲ್ ಪ್ಲಾಟ್ಫಾರ್ಮ್ ಎನ್ನುವುದು ಬಂದಾಗ,ಪತ್ತೆ ಹಚ್ಚುವುದೇ ದೊಡ್ಡ ಸವಾಲು. ಅದರಲ್ಲಿಯೂ ಫೇಸ್ಬುಕ್, ಟ್ವೀಟರ್‌ನಂಥ ಸಾಮಾಜಿಕ ಜಾಲತಾಣದಲ್ಲಿ ಅವಾಂತರ ಸೃಷ್ಟಿಸುವ ಮೂಲಕ್ಕೆ ಹೋದಾಗ, ಅನೇಕ ಬಾರಿ ಆ ಮೂಲವೇ ನಕಲಿಯಾಗಿರುತ್ತದೆ.
ಸಾಮಾಜಿಕ ಜಾಲತಾಣದಲ್ಲಿ ಖಾತೆ ಆರಂಭಿಸುವಾಗ, ಬ್ಯಾಂಕ್ ಖಾತೆ ಆರಂಭಿಸುವಾಗ ನೀಡುವಂತೆ ದಾಖಲೆಗಳನ್ನು ಏನುನೀಡುವಂತಿಲ್ಲವಲ್ಲ. ಈ ಲೂಪ್ ಹೋಲ್ ಬಳಸಿಕೊಂಡೇ, ಅನೇಕ ಖದೀಮರು ಖಾತೆ ಆರಂಭಿಸಿ ಪ್ರಚೋದನೆ ನೀಡುವಕಾರ್ಯಕ್ಕೆ ಮುಂದಾಗಿದ್ದಾರೆ. ಇನ್ನು ಫೇಕ್ ಖಾತೆಗಳದ್ದು ಒಂದು ಸಮಸ್ಯೆಯಾದರೆ, ಹಾದಿಗೊಂದು – ಬೀದಿಗೊಂದು ಎನ್ನುವ ಹಾಗೆ ಆರಂಭಗೊಳ್ಳುತ್ತಿರುವ ನ್ಯೂಸ್ ಪೋರ್ಟಲ್‌ಗಳ ಸಮಸ್ಯೆ ಇನ್ನೊಂದು.
ಡಿಜಿಟಲ್ ತಂತ್ರಜ್ಞಾನ ಹೆಚ್ಚಾಗುತ್ತಿದ್ದಂತೆ, ಮುದ್ರಣ ಹಾಗೂ ಟಿ.ವಿ ಚಾನೆಲ್‌ಗಳನ್ನು ಮೀರಿ, ಬೆಳೆಯುತ್ತಿರುವ ನ್ಯೂಸ್ಪೋರ್ಟಲ್‌ಗಳಿಗೆ ಇಷ್ಟು ದಿನ ಮಾರ್ಗಸೂಚಿಗಳಿರಲಿಲ್ಲ. ತಮಗಿಷ್ಟ ಬಂದಂತೆ, ಮಾರ್ಗಸೂಚಿಗಳಿದ್ದವು. ಆದ್ದರಿಂದ ಇದೀಗ ಕೇಂದ್ರ ಸರಕಾರ, ಆನ್‌ಲೈನ್ ನ್ಯೂಸ್ ಪೋರ್ಟಲ್ ಗಳಿಗೂ ವ್ಯಾಪ್ತಿ ಸೃಷ್ಟಿಸಲು ಮುಂದಾಗಿದೆ. ಇದೇ ರೀತಿ ಅಮೆಜಾನ್ ಪ್ರೈಂ, ನೆಟ್‌ಫ್ಲಿಕ್ಸ್‌ನಂಥ ಒಟಿಟಿ ಪ್ಲಾಟ್ ಫಾರ್ಮ್‌ಗಳಿಗೂ ಸ್ವಯಂ ನಿಯಂತ್ರಣ ಹೇರುವ ದಿಸೆಯಲ್ಲಿ ಕೇಂದ್ರ ಸರಕಾರ ಕಾನೂನನ್ನು ಜಾರಿಗೊಳಿಲು ಮುಂದಾಗಿದೆ.
ಇಲ್ಲಿ ಫೇಕ್‌ನ್ಯೂಸ್, ಒಟಿಟಿ ಪ್ಲಾಟ್ ಫಾರ್ಮ್ನಲ್ಲಿ ಬಿಡುಗಡೆಯಾಗುವ ಸಿನಿಮಾಗಳಿಗೆ ಮಾರ್ಗಸೂಚಿ ಸಿದ್ಧಪಡಿಸಲು ಮುಂದಾಗಿರುವುದಕ್ಕೆ ಯಾರದ್ದು ಅಭ್ಯಂತರವಿಲ್ಲ. ಆದರೆ ಸಾಮಾಜಿಕ ಜಾಲತಾಣಗಳ ಮೇಲೆ, ನಿಯಂತ್ರಣದ ನೆಪದಲ್ಲಿ ಖಾಸಗಿ ವಿಷಯಕ್ಕೆ ಸರಕಾರ ಕೈಹಾಕುತ್ತಿದೆ ಎನ್ನುವ ಆರೋಪಗಳು ಶುರುವಾಗಿದೆ. ಫೇಸ್ಬುಕ್, ಟ್ವಿಟರ್ ಸೇರಿದಂತೆ ಎಲ್ಲ ಜಾಲತಾಣಗಳ ಮೇಲೆಯೂ ಕೇಂದ್ರ ಸರಕಾರ ಇದೀಗ ಕಣ್ಣಿಡಲು ಮುಂದಾಗಿದ್ದು, ಪ್ರತಿಯೊಂದನ್ನು ಸೂಕ್ಷ್ಮವಾಗಿ ಗಮನಿಸುವ ಲೆಕ್ಕಾಚಾರ ದಲ್ಲಿದೆ. ಈ ರೀತಿ ಮಾಡುವುದರಿಂದ ಪ್ರತಿಯೊಬ್ಬರ ಪೋಸ್ಟ್, ಮೆಸೇಜ್‌ಗಳನ್ನು ಕದ್ದು ನೋಡುವುದಕ್ಕೆ ಅವಕಾಶ ನೀಡಿದಂತಾಗು ತ್ತದೆ.
ಇದು ಸಂವಿಧಾನದ ಮೂಲಭೂತ ಹಕ್ಕಿನ ಉಲ್ಲಂಘನೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಇದಕ್ಕೆ ಪ್ರತಿಯಾಗಿ,ಕೆಲವರು, ದೇಶದ ಭದ್ರತೆ, ಅಖಂಡನೆ, ಅಸ್ಮಿತೆಗೆ ಧಕ್ಕೆ ಯಾಗುವ ಸಮಯದಲ್ಲಿ, ವ್ಯಕ್ತಿಯ ಖಾಸಗಿತನಕ್ಕಿಂತ, ಮುಖ್ಯವಾಗಿ ದೇಶ ಬರುತ್ತದೆ. ಆದ್ದರಿಂದ ಈ ರೀತಿಯ ನಿರ್ಧಾರಗಳು ಅನಿವಾರ್ಯ ಎನ್ನುವ ಕೌಂಟರ್ ವಾದಕ್ಕೂ ಏನು ಕಡಿಮೆಯಿಲ್ಲ. ಆದರೆ ಅನೇಕರು, ಈ ರೀತಿಯ ನಿಯಂತ್ರಣದ ಅಗತ್ಯತೆಯನ್ನು ಒಪ್ಪಿಕೊಂಡಿದ್ದಾರೆ. ಆದರೆ ತಮ್ಮ ಅಜೆಂಡಾವನ್ನು ಹೊರಹಾಕಲು, ಪ್ರಚೋದನೆ ನೀಡಲು ಹವಣಿಸುವವರಿಗೆ ಮಾತ್ರ ಈ ನಿರ್ಧಾರದಿಂದ ಕೊಂಚ ಬೇಸರ ತರಿಸಿರಬಹುದು.
ಕೇಂದ್ರ ಸರಕಾರ ತಿದ್ದುಪಡಿ ಕಾಯಿದೆಯಲ್ಲಿ ಪ್ರಮುಖವಾಗಿ, ಸಾಮಾಜಿಕ ಜಾಲತಾಣ ಸಂಸ್ಥೆಗಳು, ಕೇಂದ್ರದ ಮಾರ್ಗಸೂಚಿ ಪಾಲಿಸುವುದಕ್ಕಾಗಿಯೇ ಪ್ರತ್ಯೇಕ ತಂಡವನ್ನು ರಚಿಸಬೇಕು. ಯಾವುದೇ ವ್ಯಕ್ತಿ, ದೇಶದ ಕಾನೂನಿನಲ್ಲಿ ನೀಡಿರುವ ಅವಕಾಶ ಮೀರಿ, ಪೋಸ್ಟ್ ಮಾಡಿದರೆ ಅದರ ವಿರುದ್ಧ ಕ್ರಮ ಕೈಗೊಳ್ಳುವ ಜತೆಜತೆ ಅವರ ವಿರುದ್ಧ ಕ್ರಮ ತಗೆದುಕೊಳ್ಳುವುದಕ್ಕೆ ಅಧಿಕಾರಿ ಗಳಿಗೆ ಅಥವಾ ಗೃಹ ಇಲಾಖೆಗೆ ಮಾಹಿತಿ ರವಾನಿಸಬೇಕು. ಆದರೆ ಇಲ್ಲಿ ಅನೇಕರ ವಿರೋಧಕ್ಕೆ ಕಾರಣವಾಗಿರುವ ಸಂಗತಿ ಎಂದರೆ, ಸಾಮಾಜಿಕ ಜಾಲತಾಣದಲ್ಲಿ ಮಾಡುವ ಪೋಸ್ಟ್ ಗಳನ್ನು ಮಾತ್ರವಲ್ಲದೇ, ಖಾಸಗಿ ಸಂದೇಶಗಳ ಮೇಲೂ ನಿಗಾ ಇಡಬೇಕು ಎನ್ನುವ ಅಂಶವನ್ನು ಸೇರಿಸಿರುವುದು.
ಇದರಿಂದ ವಾಟ್ಸಾಪ್, ಮೆಸೆಂಜರ್‌ನಲ್ಲಿ ಮಾಡುವ ಖಾಸಗಿ ಸಂದೇಶಗಳನ್ನು, ಸಂಸ್ಥೆ ಸಿಬ್ಬಂದಿಗಳು ನೋಡಬೇಕು. ಇದರಿಂದ ವ್ಯಕ್ತಿಯ ಖಾಸಗಿತನಕ್ಕೆ ಧಕ್ಕೆ ಬರುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಇದರೊಂದಿಗೆ ಟೆಲಿಗ್ರಾಮ್, ವಾಟ್ಸಾಪ್‌ನಂಥ ಸಂಸ್ಥೆಗಳು, ಮುಂದಿನ ದಿನದಲ್ಲಿ ಭಾರತದಲ್ಲಿ ಮುಂದುವರಿಯಬೇಕೆಂದರೆ, ಗ್ರಾಹಕರಿಗೆ ನೀಡಿರುವ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಂಡ್ ಅಂಶವನ್ನು ಕೈಬಿಡಬೇಕು. ಆದರೆ ಈ ರೀತಿ ಮಾಡುವುದರಿಂದ, ಬಯಲಿನಲ್ಲಿ ಬೆತ್ತಲಾದಂತೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಹಾಗೇ ನೋಡಿದರೆ, ಕೇಂದ್ರ ಸರಕಾರ ಜಾರಿಗೊಳಿಸಿರುವ ಈ ತಿದ್ದುಪಡಿ ಅಥವಾ ಮಾರ್ಗಸೂಚಿಗಳು ಈಗಾಗಲೇ ಹಲವು ರಾಷ್ಟ್ರಗಳಲ್ಲಿ ಜಾರಿಯಲ್ಲಿದೆ. ಕೆಲವು ಸರ್ವಾಧಿಕಾರಿ ರಾಷ್ಟ್ರಗಳು ಫೇಸ್‌ಬುಕ್ ಅನ್ನೇ ಬ್ಯಾನ್ ಮಾಡಿರುವ ಉದಾಹರಣೆಗಳು ನಮ್ಮ ಕಣ್ಣ ಮುಂದಿದೆ. ಇನ್ನು ಭಾರತದಲ್ಲಿಯೇ, ನೋಡುವುದಾದರೆ, ಆಂತರಿಕ ಭದ್ರತೆಯ ದೃಷ್ಟಿಯಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ವರ್ಷದ ಅರ್ಧ ಭಾಗ ಇಂಟರ್‌ನೆಟ್ ಸ್ಥಗಿತಗೊಳಿಸಿರುತ್ತಾರೆ. ಒಂದು ವೇಳೆ
ಇದ್ದರೂ, ಅದು೨ಜಿಸ್ಪೀಡ್‌ಗಿಂತ ಹೆಚ್ಚಿರುವುದಿಲ್ಲ. ಇನ್ನು ಭಾರತ ಸರಕಾರ ಮಾರ್ಗಸೂಚಿ ಯನ್ನು ಬಿಡುಗಡೆಗೊಳಿಸಿ,ಸಾಮಾಜಿಕ ಜಾಲತಾಣದಲ್ಲಿ ಬರುವ ಪೋಸ್ಟ್ ಅಥವಾ ಮಾಹಿತಿಗಳಿಗೆ ಸಂಸ್ಥೆಯನ್ನೇ ಹೊಣೆಯನ್ನಾಗಿಸುವ ನಿರ್ಧಾರವನ್ನು ಹಲವು ರಾಷ್ಟ್ರಗಳು ಸ್ವಾಗತಿಸಿದವು. ಸಾಮಾಜಿಕ ಜಾಲತಾಣಕ್ಕೆ ಅತಿದೊಡ್ಡ ಪ್ಲಾಟ್ ಫಾರ್ಮ್ ಇರುವುದು ಭಾರತದಲ್ಲಿ. ಒಂದು ವೇಳೆ ಭಾರತ ಸರಕಾರ, ಸಂಸ್ಥೆಗಳಿಗೆ ಹೊಣೆಗಾರಿಕೆ ವಹಿಸುವ ನಿರ್ಧಾರಕ್ಕೆ ಬಂದರೆ, ಅನಿವಾರ್ಯವಾಗಿ ಸಂಸ್ಥೆಗಳು, ಸರಕಾರದಮಾರ್ಗಸೂಚಿಯನ್ನು ಪಾಲಿಸುತ್ತವೆ. ಈ ನೂತನ ಮಾರ್ಗಸೂಚಿಯಿಂದ ದೇಶದ ಅಖಂಡತೆಯ ಜತೆ ಸೈಬರ್ ಕ್ರೈಂ ಮಟ್ಟಹಾಕುವುದಕ್ಕೆ ಸಹಾಯವಾಗುತ್ತದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.
ಹಾಗೇ ನೋಡಿದರೆ, ಕೇಂದ್ರ ಸರಕಾರ ಜಾರಿಗೊಳಿಸಿರುವ ಈ ಮಾರ್ಗಸೂಚಿಯನ್ನು ಬಹುತೇಕ ಸಂಸ್ಥೆಗಳು ಪರೋಕ್ಷವಾಗಿ ಈಗಾಗಲೇ ಜಾರಿಯಲ್ಲಿರಿಸಿವೆ. ಸಾಮಾಜಿಕ ಜಾಲತಾಣದ ಬಹುತೇಕ ಸಂಸ್ಥೆಗಳು, ಖಾತೆದಾರರ ವೈಯಕ್ತಿಕ ಮಾಹಿತಿಯ ಡೆಟಾವನ್ನು ಇತರ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುತ್ತವೆ. ಅದಕ್ಕೆ ನೀವು, ಒಮ್ಮೆ ಯಾವುದಾದರೂ ಕಾರು ಖರೀದಿಗೆ ಒಮ್ಮೆ ಗೂಗಲ್‌ನಲ್ಲಿ ನೋಡಿದರೆ, ಮರು ಕ್ಷಣ೧೦ಬ್ಯಾಂಕ್‌ಗಳಿಂದ ಕಾರು ಸಾಲ ಕೊಟ್ಟು ಸಹಾಯ ಮಾಡಲು ಸಾಲು ನಿಲ್ಲುವುದು. ಆದ್ದರಿಂದ ಈಗಾಗಲೇ ಸಾಮಾಜಿಕ ಜಾಲತಾಣ ಸಂಸ್ಥೆಗಳು ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಸಿಕೊಂಡು, ತಮ್ಮ ಮಾಹಿತಿಯನ್ನು ಇನ್ನೊಬ್ಬರಿಗೆ ಮಾರಿರುತ್ತಾರೆ.
ಈ ರೀತಿ ಮಾಡುವುದಕ್ಕೆ ನಾವೆಲ್ಲ ಒಪ್ಪಿಯೇ ಖಾತೆ ಆರಂಭಿಸಿರುತ್ತೇವೆ ಎನ್ನುವುದು ನಮಗೆ ತಿಳಿದಿಲ್ಲವಷ್ಟೆ. ಇದೀಗ ನಾವು ಅಧಿಕೃತವಾಗಿ ಸರಕಾರಕ್ಕೆ ನಮ್ಮ ಮಾಹಿತಿಯನ್ನು ಹಂಚಿಕೊಳ್ಳಬೇಕು ಎನ್ನುವ ಕಾಯಿದೆ ಇದೀಗ ಬಂದಿದೆ. ಅಂದ ಮಾತ್ರಕ್ಕೆ, ನಾವು ಮಾಡುವ ಪ್ರತಿಯೊಂದು ಚಾಟಿಂಗ್ ಅನ್ನು ಕಂಪ್ಯೂಟರ್‌ನಲ್ಲಿ ಕೂತು ನೋಡುವುದಕ್ಕೆ ಈಗಲೂ ಅವಕಾಶವಿಲ್ಲ. ಪೋಸ್ಟ್‌ಗಳ ಮೇಲೆ ನಿಗಾ ಇಡುವ ಸಾಮಾಜಿಕ ಜಾಲತಾಣಗಳ ಸಂಸ್ಥೆಗಳು, ಖಾಸಗಿ ಚಾಟಿಂಗ್ ಮೇಲೆ ಕಣ್ಣಿಡುವುದಿಲ್ಲ. ಆದರೆ ಅದೆಲ್ಲ ಒಂದು ಕಡೆ ಸ್ಟೋರ್ ಆಗುತ್ತಿರುತ್ತದೆ.
ಯಾವುದಾದರೂ ವ್ಯಕ್ತಿಯ ಮೇಲೆ ಅನುಮಾನ ಅಥವಾ ದೂರುಗಳು ಬಂದಾಗ, ಗೃಹ ಇಲಾಖೆಯ ವತಿಯಿಂದ ಅಧಿಕೃತ ಮಾಹಿತಿ ಹಾಗೂ ಎಫ್‌ಐಆರ್ ಸಿಕ್ಕಾಗ, ಸೂಕ್ತ ಸಮಯ ಮಾಹಿತಿಯನ್ನು ಮಾತ್ರ ತಗೆದುಕೊಳ್ಳಬಹುದಾಗಿದೆ. ಸದ್ಯ ಫೋನ್ ಟ್ಯಾಪಿಂಗ್ ಮಾಡುವಾಗ ಗೃಹ ಇಲಾಖೆಯಿಂದ ಒಪ್ಪಿಗೆ ಪಡೆದ ರೀತಿಯಲ್ಲಿ, ನಮ್ಮ ಮಾಹಿತಿ ಅಥವಾ ಚಾಟಿಂಗ್ ಹಿಸ್ಟರಿನೋಡಬೇಕು ಎಂದಾಗಲೂ, ಇದೇ ರೀತಿ ಕ್ರಮಗಳನ್ನು ತಗೆದುಕೊಂಡು ನೋಡಬಹುದಾಗಿದೆ.
ಈ ಎಲ್ಲವನ್ನು ನೋಡಿದಾಗ, ಇಂದಿನ ಈ ಡಿಜಿಟಲ್ ಯುಗಕ್ಕೆ ತಕ್ಕಂತೆ ಬದಲಾಗುವುದರೊಂದಿಗೆ ಸಾಮಾಜಿಕ ಜಾಲತಾಣ ಗಳಲ್ಲಿರುವ ಲೋಪಗಳನ್ನು ಸರಿಪಡಿಸಿಕೊಳ್ಳುವ ಕೆಲಸವೂ ಆಗಲೇಬೇಕಿದೆ. ಈ ನಿಟ್ಟಿನಲ್ಲಿ ಈಗಾಗಲೇ ಜಾರಿಯಲ್ಲಿರುವ ಐಟಿ ಕಾಯಿದೆಗೆ ಇನ್ನಷ್ಟು ಶಕ್ತಿ ತುಂಬುವ ಕೆಲಸಕ್ಕೆ ಕೇಂದ್ರ ಸರಕಾರವೇನೋ ಕೈ ಹಾಕಿದೆ. ಆದರೆ ಕೇಂದ್ರ ಸರಕಾರದ ಈ ಮಾರ್ಗಸೂಚಿ ಯಲ್ಲಿರುವ ಹಲವು ಅಂಶಗಳು ಪ್ರಾಯೋಗಿಕವಾಗಿ ಜಾರಿಗೊಳಿಸಲು, ಸಾಮಾಜಿಕ ಜಾಲತಾಣದ ಸಂಸ್ಥೆಗಳ ಜವಾಬ್ದಾರಿಯ ಜತೆ ಬಳಕೆದಾರರು ಈ ಬಗ್ಗೆ ಎಚ್ಚರವಹಿಸಬೇಕಿದೆ. ಭೂತಾಕಾರದಲ್ಲಿ ಬೆಳೆಯುತ್ತಿರುವ ಸುಳ್ಳು ಸುದ್ದಿಗಳನ್ನು ನಿಗ್ರಹಿಸುವ ನಿಟ್ಟಿನಲ್ಲಿಹೋರಾಡಬೇಕಿದೆ.
ಆದರೆ ಒಂದಂತೂ ನಿಜ, ಇಂದಿನ ಈ ಡಿಜಿಟಲ್ ಯುಗ ಗಾಜಿನ ಮನೆಯಿದ್ದಂತೆ, ಎಷ್ಟೇ ಸುರಕ್ಷಿತ ಎಂದರೂ, ನಿಮ್ಮ ಖಾಸಗಿ ತನವನ್ನು ಕದ್ದು ನೋಡುವ ಅವಕಾಶ ಇದ್ದೇ ಇರುತ್ತದೆ. ಒಂದಂತೂ ನಿಜ, ನಾವು ಗೂಗಲ್ ಮಾಡುವ ಪ್ರತಿಯೊಂದು ಅಂಶ, ಚಾಟ್ ಮಾಡುವ ಸಂದೇಶ, ಪೋಸ್ಟ್ ಮಾಡುವ ವಿಷಯ ಎಲ್ಲದರ ಮೇಲೆಯೂ, ಒಂದು ಅಶರೀರ ಕಣ್ಣು ಇರುತ್ತದೆ. ಈ ಕಣ್ಣನ್ನುತಪ್ಪಿಸಿ ಏನು ಬೇಕಾದರೂ ಮಾಡಬಹುದು ಎನ್ನುವುದು ಅಸಾಧ್ಯ. ಆದರೀಗ ಈ ಕಣ್ಣಿಗೆ ಇನ್ನಷ್ಟು ಕಾನೂನು ಬಲ ತುಂಬಲು ಹೊರಟಿದ್ದಾರೆ.
ಆದರೆ, ಪೊಲೀಸರು ಚಾಪೆಯ ಕೆಳಗೆ ತೂರಿದರೆ, ಕಳ್ಳರು ರಂಗೋಲಿಯ ಕೆಳಗೆ ನುಸುಳುವುದಕ್ಕೆ ಯೋಚಿಸಿರುತ್ತಾರೆ. ಅದನ್ನು ನೋಡಿಕೊಂಡು ಕೇಂದ್ರ ಸರಕಾರ ಕಾನೂನು ರೂಪಿಸಬೇಕಾಗುತ್ತದೆ.