ಹಣಕಾಸು ವಿಸ್ತರಣೆ ಮರುಹಂಚಿಕೆಯಿಂದ ಮಾತ್ರ ಆರ್ಥಿಕ ಸುಧಾರಣೆ ಸಾಧ್ಯ
ಪ್ರಚಲಿತ
ಚೇರ್ಕಾಡಿ ಸಚ್ಚಿದಾನಂದ ಶೆಟ್ಟಿ
ಹಣದುಬ್ಬರ ಎಂಬುದು ಇಂದು ವಿಶ್ವವ್ಯಾಪಿ ವಿದ್ಯಮಾನ. ಇದು ಆಧುನಿಕ ಅರ್ಥಶಾಸ್ತ್ರದ ಕೇಂದ್ರಬಿಂದು. ಸಾಮಾನ್ಯ ಭಾಷೆ ಯಲ್ಲಿ ಹಣದುಬ್ಬರ ಎಂದರೆ ಸರಕು ಸಾಮಗ್ರಿಗಳ ಬೆಲೆಗಳು ನಿರಂತರವಾಗಿ ಏರುವ ಪ್ರಕ್ರಿಯೆ. ಹಣ ತನ್ನ ಮೌಲ್ಯವನ್ನು ಕಳೆದು ಕೊಳ್ಳುವ ಸನ್ನಿವೇಶವೇ ಹಣದುಬ್ಬರ. ಆರ್ಥಿಕತೆಯಲ್ಲಿ ವೆಚ್ಚ ಹೆಚ್ಚಳವಾದಾಗ ಬೆಲೆ ಏರಿಕೆಯಾಗುತ್ತದೆ.
ಬೇಡಿಕೆಗೆ ತಕ್ಕಂತೆ ಉತ್ಪಾದನೆ ಮತ್ತು ಪೂರೈಕೆಯಾಗಿದ್ದರೂ ಬೆಲೆ ಏರುತ್ತದೆ. ಸರಕುಗಳ ಸಮಗ್ರ ಬೇಡಿಕೆ ಸಮಗ್ರ ಪೂರೈಕೆಗಿಂತಅಧಿಕವಿದ್ದಾಗ ಹಣದುಬ್ಬರ ಸಂಭವಿಸುತ್ತದೆ. ಪ್ರಚಲಿತ ವಿದ್ಯಮಾನವನ್ನು ಅವಲೋಕಿಸುವಾಗ ಸಗಟು ಮತ್ತು ರಿಟೇಲ್ ಹಣದುಬ್ಬರ ಮುಂಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗಬಹುದು.
ಪ್ರಸಕ್ತ ಹಣದುಬ್ಬರಕ್ಕೆ ಪ್ರಮುಖ ಕಾರಣ ಅಂತಾರಾಷ್ಟ್ರೀಯ ಕಚ್ಚಾ ತೈಲ ದರ ಕಳೆದ ಆರೇಳು ವಾರಗಳಿಂದ ಏರುತ್ತಿದೆ. ಹೆಚ್ಚೂ ಕಡಿಮೆ ದಿನಬಿಡದೆ ಈ ಏರಿಕೆ ಮುಂದುವರಿಯುತ್ತಿದೆ. ಸರಕಾರಿ ಸ್ವಾಮ್ಯದ ಮಾರಾಟ ಕಂಪನಿಗಳು ದೇಶದಾದ್ಯಂತ 12ನೇ ದಿನವೂ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಿಸಿವೆ. ರು. ನೂರಕ್ಕೆ ಸಮೀಪಿಸುತ್ತಿರುವ ಪೆಟ್ರೋಲ್ ದರ ಆರ್ಥಿಕತೆಗೂ ಜನಸಾಮಾನ್ಯರ ಜೀವನಕ್ಕೂ ಕೊಡಲಿಯೇಟೇ ಸರಿ.
ಸರಕಾರ ಇದನ್ನು ಸುಂಕಗಳ ಸಮತೋಲನದಿಂದ ಸರಿದೂಗಿಸಬೇಕು. ಕಚ್ಚಾತೈಲ ಮತ್ತು ನೈಸರ್ಗಿಕ ಅನಿಲ ದರ ಜನವರಿಯಿಂದ ಶೇ.9.48ರಷ್ಟು ಏರಿಕೆಯಾಗಿದೆ. ಸದ್ಯ ಜನಸಾಮಾನ್ಯರ ದೈನಂದಿನ ವಹಿವಾಟು ಚುರುಕುಗೊಳ್ಳಬೇಕಾದರೆ ತೈಲ ಬೆಲೆ ತಗ್ಗಬೇಕು. ಅದು ಸಾಧ್ಯವಾಗದಿದ್ದರೆ ಮಧ್ಯಮ ವರ್ಗದ ಜನ ಜೀವನ ದುಸ್ತರವಾಗುತ್ತದೆ. ಇತ್ತೀಚಿನ ಏರುಗತಿ ಮತ್ತು ಅವುಗಳ ಮೇಲಿನ ಕೇಂದ್ರ ಮತ್ತು ರಾಜ್ಯ ಸರಕಾರಗಳ ಪರೋಕ್ಷ ತೆರಿಗೆಯ ಹೊರೆಯಿಂದಾಗಿ ಪೆಟ್ರೋಲಿಯಂ ಬೆಲೆ ಗಗನಕ್ಕೇರಿದೆ ಮತ್ತು ಚಾರಿತ್ರಿಕ ಉನ್ನತ ಮಟ್ಟದಲ್ಲಿದೆ. ಇಂಧನ ತೈಲಬೆಲೆ ಏರಿಕೆ ಎಲ್ಲರನ್ನೂ ಬಾಧಿಸುವ ವಿಚಾರವಾಗಿದೆ.
ತೈಲಬೆಲೆಯನ್ನು ನ್ಯಾಯ ಸಮ್ಮತ ದರಕ್ಕೆ ಇಳಿಸುವ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾರ್ಗೋಪಾಯ ಹುಡುಕಬೇಕು. ಇಂಧನ ಬೆಲೆಯೇರಿಕೆ ಅಂತಾರಾಷ್ಟ್ರೀಯ ವಿದ್ಯಮಾನಗಳಿಗೆ ಸಂಬಂಧಪಟ್ಟರೂ ಸರಕಾರಗಳು ತಮ್ಮ ಸೀಮಿತ ಅಧಿಕಾರ ವ್ಯಾಪ್ತಿಯಲ್ಲಿ ಅಗತ್ಯ ಕ್ರಮ ಕೈಗೊಂಡು ಮೊದಲೇ ಸಾಂಕ್ರಾಮಿಕದಿಂದ ತತ್ತರಿಸಿದ ಜನರಿಗೆ ಬೆಲೆಯೇರಿಕೆಯ ಬಿಸಿಗೆ ಕಂಗೆಡುವಂತೆ ಮಾಡಬಾರದು. ತೈಲ ಬೆಲೆ ಏರಿಕೆಯನ್ನು ಖಂಡಿಸಿ ಈಗಾಗಲೇ ಹಲವಾರು ಪ್ರತಿಭಟನೆ ಮತ್ತು ಮುಷ್ಕರಗಳು ಪ್ರಾರಂಭವಾಗಿವೆ. ಇದಕ್ಕೆ ಸರಕಾರವು ದಾರಿ ಮಾಡಿಕೊಡಬಾರದು.
ವಿತ್ತ ಸಚಿವೆಯರು ಏರುತ್ತಿರುವ ತೈಲ ಬೆಲೆ ತನ್ನ ಪಾಲಿಗೆ ‘ಧರ್ಮ ಸಂಕಟ ತಂದೊಡ್ಡಿದೆ’ ಎಂದು ಹೇಳಿದುದಲ್ಲದೇ ತೈಲೋ ತ್ಪಾದಕ ದೇಶಗಳು ಉತ್ಪಾದನೆ ಕುಸಿಯುತ್ತಿರುವ ಸೂಚನೆಯಿತ್ತಿರುವುದು. ಸರಕಾರಕ್ಕೂ, ಸಾಮಾನ್ಯ ಜನಜೀವನದ ಮೇಲೂ ಮತ್ತು ಹಣದುಬ್ಬರದ ಮೇಲೆ ಒತ್ತಡ ಉಂಟಾಗಲಿದೆ. ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವನ್ನು ಹಿನ್ನಡೆಯಾಗಿಟ್ಟುಕೊಂಡು ನೋಡಿದಾಗ ಅಗತ್ಯ ವಸ್ತುಗಳ ಬೆಲೆ ತುಸು ಕಡಿಮೆಯೇ ಆದರೆ ಮಾರ್ಚ್ ತಿಂಗಳಿನಲ್ಲಿ ಇದು ಹೆಚ್ಚಳವಾಗಬಹುದು. ಈ ಪರಿಸ್ಥಿತಿ ಯಲ್ಲಿ ಸರಕಾರವು ಇವುಗಳ ಮೇಲಿನ ಸುಂಕವನ್ನು ತಗ್ಗಿಸಿ ದೇಶಿ ಮಾರುಕಟ್ಟೆಯಲ್ಲಿ ಇವುಗಳ ಬೆಲೆ ಕಡಿಮೆ ಮಾಡುವ ಪ್ರಸ್ತಾಪ ವಿಲ್ಲವೆಂಬುದು ಕಳವಳಕಾರಿ ವಿಷಯ.
ಕೇಂದ್ರ ಸರಕಾರವು ಪೆಟ್ರೋಲ್ ಮೇಲೆ 31.80ರು. ಮತ್ತು ಡಿಸೇಲ್ ಮೇಲೆ 31.80ರು. ಅಬಕಾರಿ ಸುಂಕ ಹಾಕಿದೆ. ಇದನ್ನುಪರಿಷ್ಕರಿಸಬೇಕಾಗಿದೆ. ಕಚ್ಚಾ ಸಾಮಗ್ರಿಗಳು ತುಟ್ಟಿಯಾಗಿರುವುದರಿಂದ ಉತ್ಪಾದಿತ ವಸ್ತುಗಳ ಬೆಲೆಯೂ ಏರಲು ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಆಹಾರ ವಸ್ತುಗಳ ಬೆಲೆಯೂ ತುಟ್ಟಿಯಾಗುವ ಸಂಭವವಿದೆ. 2021ರ ಜನವರಿಯಲ್ಲಿ ಉತ್ಪಾದಿತ ವಸ್ತುಗಳ ಹಣದುಬ್ಬರ ಶೇ.5.13ಕ್ಕೆ ತಲುಪಿದೆ. ಇತ್ತೀಚೆಗೆ ಆಹಾರ ವಸ್ತುಗಳ ಹಣದುಬ್ಬರ ಇಳಿಕೆ ಮತ್ತು ನಿಶ್ಚಲತೆಯನ್ನು ಕಂಡರೂ ಪರಿಸ್ಥಿತಿ ಯಲ್ಲಿ ಹಿಡಿತ ತಪ್ಪಬಹುದು.
ಹಣದುಬ್ಬರವನ್ನು ಹಿತಕರ ಮಟ್ಟದಲ್ಲಿರಿಸಿಕೊಳ್ಳುವುದರ ಜತೆಗೆ ತೈಲ ಬೆಲೆಯನ್ನು ಅಹಿತಕರ ಮಟ್ಟದಿಂದ ಕೆಳಗಿಳಿಯುವಂತೆನೋಡಿಕೊಳ್ಳಬೇಕು. ಪ್ರತಿದಿನ ಜೀವನಕ್ಕೆ ಅಗತ್ಯವಿರುವ ಎಲ್ಲಾ ವಸ್ತುಗಳ ಬೆಲೆಯೂ ತೈಲ ಬೆಲೆಯ ಜತೆ ಜೋಡಣೆಯಾಗಿರುತ್ತದೆ. ಇದೀಗ ತೈಲಬೆಲೆ ಇನ್ನಷ್ಟು ದುಬಾರಿಯಾಗಿರುವುದು ಮುಂದಿನ ದಿನಗಳಲ್ಲಿ ಮತ್ತೆ ಹಣದುಬ್ಬರ ಜಾಸ್ತಿಯಾಗುವ ಸಾಧ್ಯತೆ ಇದೆ. ಪ್ರಮುಖ ವಿಚಾರವೆಂದರೆ ಪೆಟ್ರೋಲ್, ಡೀಸೆಲ್ ಬೆಲೆಯನ್ನು ತೈಲ ಕಂಪನಿಗಳು ನಿರ್ಧರಿಸುತ್ತದೆ.
ಇದರಲ್ಲಿ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡುವುದಿಲ್ಲ. ಗ್ರಾಹಕರಿಗೆ ಇಂಧನವನ್ನು ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಚರ್ಚಿಸಿ ಅಭಿಪ್ರಾಯಕ್ಕೆ ಬರಬೇಕಾಗಿದೆ.ಹಣದುಬ್ಬರವನ್ನು ನಿಯಂತ್ರಿಸುವಲ್ಲಿ ಆರ್‌ಬಿಐ ಮಹತ್ತರ ಪಾತ್ರವಹಿಸುತ್ತದೆ. ಬಡ್ಡಿದರ ಏರಿಕೆಯಿಂದ ಇದು ಸಾಧ್ಯ. ಆದರೆ ಸಂಪೂರ್ಣವಲ್ಲ. ಬಡ್ಡಿದರ ಏರಿಕೆಯಾದಾಗ ಬೇಡಿಕೆಯೂ ಕಡಿಮೆಯಾಗಿ ಬೆಲೆಗಳು ಇಳಿಯುತ್ತವೆ.
ಆದರೆ ಆರ್ಥಿಕಾಭಿವೃದ್ಧಿಗೆ ಬೇಡಿಕೆಯೇ ಮಹತ್ವಪೂರ್ಣವಾಗಿದೆ. ಹಣದುಬ್ಬರ ಕಡಿಮೆಯಾಗುತ್ತದೆ. ಆದರೆ ಬಡ್ಡಿದರಗಳನ್ನು ಏರಿಸುವುದು ಕಷ್ಟ. ಬಡ್ಡಿದರಗಳನ್ನು ಏರಿಸಿದರೂ ಇದು ಸಂಪೂರ್ಣ ಪರಿಣಾಮಕಾರಿ ಸಾಧನವೆಂದು ಪರಿಗಣಿಸಲಾಗದು. ಯಾಕೆಂದರೆ ಬಡ್ಡಿದರ ಹೆಚ್ಚಳವಾದರೆ ಹೂಡಿಕೆ, ಖರ್ಚು ವೆಚ್ಚಗಳು ಬಲವಂತವಾಗಿ ಇಳಿಯುತ್ತವೆಯೇ ಹೊರತು ಜನರ ಅಪೇಕ್ಷೆಗಳು ಅದೊಂದರಿಂದಲೇ ಕಡಿಮೆಯಾಗುವುದಿಲ್ಲ. ಅದಲ್ಲದೆ ಹಣದುಬ್ಬರ ದೀರ್ಘಕಾಲ ಋಣಾತ್ಮಕವಾಗಿ ಮುಂದುವರಿದರೂ ಆರ್ಥಿಕ ಬೆಳವಣಿಗೆ ಕುಗ್ಗುತ್ತದೆ. ದೇಶಕ್ಕೆ ಆರ್ಥಿಕ ಬೆಳವಣಿಗೆಯೂ ಪ್ರಾಮುಖ್ಯ.
ಕೇಂದ್ರ ಸರಕಾರವು ಆರ್ ಬಿಐಗೆ ಹಣದುಬ್ಬರ ದರವನ್ನು ಶೇ.4ರ ಆಸುಪಾಸಿನಲ್ಲಿ ಇರಿಸಬೇಕೆಂಬ ಸೂಚನೆ ಇದೆ. ದೇಶದ ಆರ್ಥಿಕ ಪ್ರಗತಿಯನ್ನು ಪೋಷಿಸಲು ಹಣದುಬ್ಬರದ ನಿಯಂತ್ರಣವೂ ಪ್ರಾಮುಖ್ಯ. ವೇತನ ಕಡಿತ, ವೆಚ್ಚ ಇಳಿಕೆಯ ತಂತ್ರಗಾರಿಕೆಗಳಿಂದ ಹಣದುಬ್ಬರವನ್ನು ನಿಯಂತ್ರಿಸ ಬಹುದಾದರೂ ಇದರಿಂದ ಉದ್ಯೋಗ ನಷ್ಟ, ಆರ್ಥಿಕ ಹಿಂಜರಿತದ ತೀವ್ರ ಪರಿಣಾಮಗಳು ಎದುರಾಗುತ್ತವೆ. ಈಗಿನ ಟ್ರೆಂಡ್‌ನ್ನು ಗಮನಿಸಿದರೆ 2021-22 ರಲ್ಲಿ ಹಣದುಬ್ಬರ ಶೇ. 4.75 ರಿಂದ ಶೇ. 5.75 ಏರಿಕೆಯಾಗುವ ಸಂಭವವಿದೆ. ಕೋವಿಡೋತ್ತರದಲ್ಲಿ ದೇಶದ ಆರ್ಥಿಕ ಬೆಳವಣಿಗೆಯ ವೇಗವನ್ನು ಹೆಚ್ಚಿಸಲು ಹಣದುಬ್ಬರದಲ್ಲಿ ಸ್ಥಿರತೆ ಕಾಯ್ದು ಕೊಳ್ಳುವುದರಿಂದ ಹೂಡಿಕೆದಾರರ ವಿಶ್ವಾಸ ವೃದ್ಧಿಸುತ್ತದೆ. ಇದು ಇಂದಿನ ಆದ್ಯತೆ.
ಚೇತರಿಕೆಯತ್ತ ಆರ್ಥಿಕತೆ:ಶತಮಾನದಲ್ಲಿ ಒಮ್ಮೆ ಕಾಣಿಸಿಕೊಂಡ ಆರ್ಥಿಕ ಬಿಕ್ಕಟ್ಟಿಗೆ ದೇಶ ರೂಪಿಸಿದ ನೀತಿ ಸ್ಪಂದನೆಯು ಪ್ರಜಾಪ್ರಭುತ್ವ ದೇಶಗಳಿಗೆ ಸದ್ಯದ ಲಾಭ ನೋಡದೇ ದೀರ್ಘಕಾಲಿನ ಲಾಭಗಳ ಮೇಲೆ ಗಮನ ಕೇಂದ್ರೀಕರಿಸುವ ಪಾಠ ಕಲಿಸಿದೆ. 2020-21ರ ಆರ್ಥಿಕ ವರ್ಷದಲ್ಲಿ ಕೃಷಿ ಶೇ. 3.4ಬೆಳವಣಿಗೆ, ಕೈಗಾರಿಕೆ ಶೇ. 9.6 ರಷ್ಟು ಕುಸಿತ, ಸೇವಾವಲಯ ಶೇ. 8.8ರಷ್ಟು ಕುಸಿತ ಕಂಡಿವೆ.
2020-21ರ ಜಿಡಿಪಿಯು ಶೇ. 7.7ರಷ್ಟು ಕುಸಿಯಲಿದೆ. ಕೋವಿಡ್-19ರಿಂದಾದ ಲಾಕ್‌ಡೌನ್ ನಿಮಿತ್ತ ತತ್ತರಿಸಿದ ಆರ್ಥಿಕತೆ ವಿ (ಗಿ) ಆಕಾರದ ಸ್ವರೂಪದಲ್ಲಿ ಚೇತರಿಸಿಕೊಳ್ಳುತ್ತಿದೆ. ಮೊದಲ ತ್ರೈಮಾಸಿಕದ ದೇಶದ ಜಿಡಿಪಿ ಶೇ. (23.9) ಕುಸಿತ ಕಂಡರೂ ತದ ನಂತರದ ತ್ರೈಮಾಸಿದಲ್ಲಿ ಶೇ. (-) 7.5 ಕ್ಕೆ ಕುಸಿಯಿತು. ಬೇಡಿಕೆ ಮತ್ತು ಪೂರೈಕೆ ಗಳೆರಡರಲ್ಲೂ ನಕಾರಾತ್ಮಕ ಬೆಳವಣಿಗೆ ಸೃಷ್ಟಿ ಯಾಗಿರುವುದೇ ಇದಕ್ಕೆ ಕಾರಣ. ಐಎಂಎಫ್  ವರದಿಯನ್ವಯ 2021-2022ರಲ್ಲಿ ಜಗತ್ತಿನ ಅತ್ಯಂತ ತ್ವರಿತವಾಗಿ ಶೇ.11.5 ರಷ್ಟು ಬೆಳವಣಿಗೆ ಸಾಧಿಸಲಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ ಹಾಗೂ ಸ್ವಾತಂತ್ರ್ಯಾ ನಂತರದ ಗರಿಷ್ಠ ಜಿಡಿಪಿ ಬೆಳವಣಿಗೆಯಾಗಿ ದಾಖಲೆಯಾಗಲಿದೆ ಎಂದು ಅಂದಾಜಿಸಲಾಗಿದೆ.
ಭಾರತದಲ್ಲಿ ಆರ್ಥಿಕ ಬೆಳವಣಿಗೆ ಅಸಮಾನತೆಗಿಂತ ಬಡತನ ನಿವಾರಣೆ ಮೇಲೆ ಹೆಚ್ಚು ಪರಿಣಾಮ ಬೀರಬೇಕು. ಅಭಿವೃದ್ಧಿಹೊಂದುತ್ತಿರುವ ಆರ್ಥಿಕತೆಯಲ್ಲಿ ಹಣಕಾಸು ವಿಸ್ತರಣೆ ಮರುಹಂಚಿಕೆ ಸಾಧ್ಯವಾದಾಗ ಮಾತ್ರ ಆರ್ಥಿಕ ಸುಧಾರಣೆ ಸಾಧ್ಯ.