ಫೋಟೋ ಹುಚ್ಚಿಗೆ ಸೆಲ್ಫಿ ಹಚ್ಚಿದ ಕಿಚ್ಚು
ಪ್ರಾಣೇಶ್ ಪ್ರಪಂಚ
ಗಂಗಾವತಿ ಪ್ರಾಣೇಶ್
ನನಗೆ ಮೊದಲಿನಿಂದಲೂ ಫೋಟೊ ತೆಗೆಸಿಕೊಳ್ಳುವುದು, ಫೋಟೊಗಳನ್ನು ಸಂಗ್ರಹಿಸುವುದು, ಫೋಟೊಗಳ ಹಿಂಬದಿಯಲ್ಲಿ ದಿನಾಂಕ ಬರೆದು ಫೋಟೊ ತೆಗೆಸಿಕೊಂಡ ಸಮಯ, ತೆಗೆದವರು ಮತ್ತು ಫೋಟೊದಲ್ಲಿ ನನ್ನ ಜತೆ ನಿಂತವರು ಎಲ್ಲವನ್ನೂ ವಿವರವಾಗಿ ಬರೆಯುವದಲ್ಲದೇ, ಸಂದರ್ಭಗಳಿಗನುಸಾರವಾಗಿ ಬೇರೆ ಬೇರೆ ಆಲ್ಬಂಗಳಲ್ಲಿ ಹಾಕಿಡುವುದು, ಅಂದರೆ ಪಿಕ್ನಿಕ್‌ಗೆಹೋದ ಫೋಟೊಗಳನ್ನು ಪಿಕ್ನಿಕ್ ಆಲ್ಬಂಗೆ, ಮೈಕಿನ ಮುಂದೆ ಮಾತನಾಡುತ್ತಾ ನಿಂತ ಫೊಟೊಗಳಿಗಾಗಿ ಪ್ರತ್ಯೇಕ, ಬಿಫೋರ್ ಮೈಕ್ ಎಂಬ ಆಲ್ಬಂಗೆ, ರಾಜಕಾರಣಿಗಳ ಜತೆಗೆ, ನಟರ ಜತೆಗೆ, ನಾನು ನಾಟಕಗಳನ್ನಾಡಿದ ನೆನಪಿಗೆ ತೆಗೆಸಿಕೊಂಡ ನಾಟಕದ ಫೋಟೊಗಳಿಗಾಗಿ ಡ್ರಾಮಾ ಆಲ್ಬಂ, ರೈಲಿನಲ್ಲಿ ಪ್ರಯಾಣಿಸುವಾಗ ತೆಗೆಸಿಕೊಂಡ ಫೋಟೊಗಳಿಗೆ ಇನ್‌ಟ್ರೇನ್ ಆಲ್ಬಂ, ವಿಮಾನದಲ್ಲಿ ಪ್ರಯಾಣಿಸುವಾಗ ತೆಗೆಸಿದ ಫೋಟೊಗಳಿಗೆ ಫ್ಲೈಟ್ ಆಲ್ಬಂ, ಗಾರ್ಡನ್ ಆಲ್ಬಂ ಹೀಗೆ ಪ್ರತಿಯೊಂದಕ್ಕೂ ಒಂದೊಂದು ಆಲ್ಬಂಗಳು.
ನಾನು ಕೆಲಸ ಮಾಡಿದ ಎಲ್ಲ ಸಂಘ – ಸಂಸ್ಥೆಗಳಲ್ಲೂ ತೆಗೆದ, ತೆಗೆಸಿಕೊಂಡ ಫೋಟೊಗಳಿಗೆಲ್ಲ ಪ್ರತ್ಯೇಕ ಆಲ್ಬಂಗಳು, ಬಾಲ್ಯದ ಆಲ್ಬಂ, ಅಷ್ಟೇ ಅಲ್ಲ, ಮೀಸೆ ಮೂಡದ ಮುಖಗಳು ಎಂಬ ಆಲ್ಬಂ ಅದರಲ್ಲಿ ಎಳೆ ಮುಖ, ಮೀಸೆಯ ಮುಖಗಳು ಎಂಬ ಮೀಸೆ ಬಂದ ಮೇಲಿನ ಮುಖದ ಫೋಟೊಗಳು, ಗಡ್ಡಧಾರಿ ಆಲ್ಬಂ ಅನ್ನು ಮಾಡಿದ್ದೆ, ಆದರೆ ನನಗೆ ಗಡ್ಡವೇ ಬರಲಿಲ್ಲ. ಹೋತದ ಗಡ್ಡದಂತೆ, ಗದ್ದದಲ್ಲಿ ನಾಲ್ಕೆ ದು ಕೂದಲುಗಳು ಮಾತ್ರ ಬಂದಿದ್ದು, ಅವು ಬೆಳೆಯದೇ ಒಂದು ಆಲ್ಬಂ ಖರ್ಚನ್ನು ಉಳಿಸಿದವು.ನನ್ನ ಈ ಫೋಟೊ ಹುಚ್ಚು, ಆಲ್ಬಂಗಳ ಖರೀದಿ ಹುಚ್ಚಿಗೆ ತುಂಬಾ ಬೈಗಳನ್ನು ತಿಂದಿದ್ದೇನೆ. ಸ್ಟುಡಿಯೋದಲ್ಲಿ ಆಗೆಲ್ಲಕೋಟುಗಳನ್ನು, ಟೈ ಗಳನ್ನು, ಸ್ಟೆಥಾಸ್ಕೋಪನ್ನು, ಬಗೆಬಗೆಯ ಟೋಪಿಗಳನ್ನು ಇಟ್ಟಿರುತ್ತಿದ್ದರು.
‘ಕರ್ನಾಟಕ ಫೋಟೋ ಸ್ಟುಡಿಯೋ’ ಎಂಬುದು ನಮ್ಮೂರಿನ ಪ್ರಸಿದ್ಧ ಫೋಟೊ ಸ್ಟುಡಿಯೋ. ಅದರ ಮಾಲಿಕ ‘ಚಿನ್ನು’. ಆತನಪೂರ್ಣ ಹೆಸರು ಯಾರಿಗೂ ಇಂದಿಗೂ ಗೊತ್ತಿಲ್ಲ. ಚಿನ್ನು ಫೋಟೊ ಸ್ಟುಡಿಯೋ ಎಂದೇ ಅದು ಹೆಸರುವಾಸಿ. ಅಲ್ಲಿರುವ ಎಲ್ಲ ವಸ, ವಸ್ತುಗಳನ್ನೂ ಬಳಸಿ, ಹಾಕಿಕೊಂಡು ನಾನು ಫೋಟೊ ತೆಗೆಸಿಕೊಳ್ಳುತ್ತಿದ್ದೆ.
ಇದಲ್ಲದೇ ನಮ್ಮ ಕಡೆ ಸಣ್ಣ ಹುಡುಗಿಯರಿಗೆ ಮಲ್ಲಿಗೆ, ಮೊಗ್ಗಿನ ಜಡೆ, ಕೇದಗೆಯ ಜಡೆ ಹಾಕಿ ನನ್ನನ್ನೇ ಅವರ ಫೋಟೊ ತೆಗೆಸಿಕೊಂಡು ಬರಲು ಸ್ಟುಡಿಯೋಗೆ ಕಳಿಸುತ್ತಿದ್ದರು. ಅವರದೊಂದು ಸಿಂಗಲ್ (ಕನ್ನಡಿ ಇಟ್ಟು, ಅಂದರೆ ಮೊಗ್ಗಿನ, ಕೇದಗೆ ಜಡೆ ಕಾಣಲೆಂದು ಹಿಂಬದಿಗೆ ದೊಡ್ಡ ನಿಲುವುಗನ್ನಡಿ ಇಡುತ್ತಿದ್ದರು). ಹಾಗೆಯೇ ಅವರ ಫೋಟೊ ತೆಗೆಸಿದ ಮೇಲೆ ಆ ಹುಡುಗ, ಹುಡುಗಿಯನ್ನು ಎತ್ತಿಕೊಂಡು ನಾನೊಂದು ಫೋಟೊ ತೆಗೆಸಿಕೊಂಡೇ ಬಿಡುತ್ತಿದ್ದೆ. ಎಪ್ಪತ್ತರ ದಶಕದ ನನ್ನ ಬಹುದೊಡ್ಡ ಕನಸು, ನಾನೊಂದು ಕ್ಯಾಮೆರಾ ತೆಗೆದುಕೊಳ್ಳಬೇಕು, ಮೂವತ್ತಾರು ಫೋಟೊಗಳ ರೀಲು ಹಾಕಿಸಬೇಕು, ಮೂವತ್ತಾರು ಬಗೆಯಫೋಟೊ ತೆಗೆಸಿಕೊಳ್ಳಬೇಕೆಂಬುದೇ ಆಗಿತ್ತು.
ನಮ್ಮ ಸೋದರ ಮಾವನೊಬ್ಬ ಸಿನಿಮಾ ಟಾಕೀಸಿನಲ್ಲಿ ಪ್ರೊಜೆಕ್ಟರ್ ಅಪರೇಟರ್ ಆಗಿದ್ದ. ಆ ಪ್ರೊಜೆಕ್ಟರ್ ಕಾರ್ಬನ್ ಹೊಗೆಯ ವಾಸನೆಗೆ ಕ್ಷಯ ಬರುತ್ತದೆ ಎನ್ನುತ್ತಿದ್ದರು. ಆತನಿಗೆ ಪಾಪ, ಹಾಗೆ ಕ್ಷಯ ಬಂತು ಕೂಡಾ. ಅನುಮಾನವಾದ್ದರಿಂದ ಎಕ್ಸ್ ರೇ ತೆಗೆಸಲು ಹೇಳಿದ್ದರು. ಆತ ನನ್ನನ್ನು ಜತೆಗೆ ಕರೆದೊಯ್ದಿದ್ದ. ಆಗ ನನಗೆ ಎಂಟೋ, ಹತ್ತೋ ವರ್ಷ. ಎಕ್ಸರೆ ಎಂದರೆ ನನಗೆ ತಿಳಿಯುವುದಿಲ್ಲವೆಂದು, ಪಾಪ ನಮ್ಮ ಮಾವ, ಎದೆಯದು ಫೋಟೊ ತೆಗೆಸಿಕೊಂಡು ಬರಬೇಕು ಬಾ ಎಂದ.
ಫೋಟೊ ಎಂದಕೂಡಲೇ ಕಿವಿ ನಿಮಿರಿಸಿಕೊಂಡ ನಾನು ಬಚ್ಚಲಿಗೆ ಹೋಗಿ ಮುಖತೊಳೆದು, ತಲೆ ಬಾಚಿ, ಗೀರುಗೀರಿನ (ಚೆಕ್ಸ್)ಶರ್ಟ್ ಹಾಕಿ ರೆಡಿಯಾದೆ. ಚೆಕ್ಸ್ ಶರ್ಟ್ ಫೋಟೊದಲ್ಲಿ ಚೆನ್ನಾಗಿ ಬರುತ್ತದೆ ಎಂದು, ಆತನ ಹಿಂದೆ ಹೊರಟೆ. ಮನೆ ಮಂದಿಯೆಲ್ಲ ನಮ್ಮ ಮಾವನ ಅನಾರೋಗ್ಯ ಮರೆತು ಬಿದ್ದು ಬಿದ್ದು ನಕ್ಕಿದ್ದರು. ತಿಳಿಯದ ನಾನು ಪೆಚ್ಚಾಗಿದ್ದು, ನಮ್ಮ ಮಾವನ ಎದೆಗೂಡಿನ ಎಕ್ಸರೆ ಫೋಟೊ ನೋಡಿ, ಗಾಬರಿಯಾಗಿದ್ದೆ. ಮುಂದೆ ಆತಗೆ ಕ್ಷಯ ಉಲ್ಬಣಿಸಿ ಹಾಸಿಗೆ ಹಿಡಿದು, ತಾಯಿ ಇದ್ದಿಲ್ಲ, ಮದುವೆಯೂ ಆಗಿರಲಿಲ್ಲ, ಆಗ ಕ್ಷಯ ಒಂದು ದೊಡ್ಡ ವ್ಯಾಧಿಯಾಗಿದ್ದು, ಆತ ನನ್ನ ಮುಂದೆಯೇ ತೀರಿಯೆ ಹೋದ.
ಈಗಲೂ ನನಗೆ ಥೇಟರುಗಳಲ್ಲಿ   ಗಳನ್ನು ನೋಡಿದರೆ, ಪ್ರೊಜೆಕ್ಟರ್ ರೀಲುಗಳು ತಿರುಗುವ ಟರ್ರರ್ ಎನ್ನುವ ಶಬ್ದ ಕೇಳಿದರೆ, ಆತನದೇ ನೆನಪು. ಬಾಲ್ಯವೇ ಸೊಗಸು, ಆ ವಯಸ್ಸಿನಲ್ಲಿ ಯಾವುದನ್ನೂ ಗಂಭೀರವಾಗಿ ಪರಿಗಣಿಸುವ ಮನಸ್ಥಿತಿ ಇರುವುದಿಲ್ಲ. ಮದುವೆ, ಮುಂಜಿ, ಅಗಲಿಕೆ, ವಿರಹ, ಸಾವು, ಅಭಿಮಾನ, ಅಪಮಾನ ಎಲ್ಲವುಗಳೂ ಒಂದೋ, ಎರಡೋ ದಿನಗಳ ಘಟನೆಗಳಷ್ಟೆ, ಮರೆಯುವುದು, ಮತ್ತೆ ಮೆರೆಯುವುದು, ಇದು ಬಾಲ್ಯದ ವೈಶಿಷ್ಠ್ಯ ಕೂಡಾ.
ನಮ್ಮ ತಾಯಿಯ ಆತ್ಮೀಯ ಗೆಳೆಯರು ತುಂಬು ಹರೆಯದಲ್ಲೇ ಸತ್ತರು. ಅವರ ಶವದ ಸಿಂಗಾರ, ಹಿರಿಯರ ಅಳು, ಸೇರಿದ್ದ ಜನಸಾಗರಗಳನ್ನು, ಸುತ್ತನಿಂತು ಅದೊಂದು ಈ ದಿನದ ಘಟನೆ ಎನ್ನುವಂತೆ ನೋಡುತ್ತಿದ್ದೆವಾಗಲಿ, ಭಾವನಾರಹಿತರಾಗಿದ್ದೆವು. ಆಶ್ಚರ್ಯವೆಂದರೆ ನಮ್ಮದೇ ವಯಸ್ಸಿನ ಅವರ ಮಕ್ಕಳೂ ನಮ್ಮೊಂದಿಗೆ ನಿಂತು ನೋಡುತ್ತಿದ್ದರು ಎಂಬುದು ಈಗ ನೆನನಪಾಗಿ ಕರುಳು ಹಿಂಡುತ್ತದೆ.
ಹೀಗೆ ಎಸ್‌ಎಸ್‌ಎಲ್‌ಸಿವರೆಗೂ ಬಂದೆ. ಹಾಲ್‌ಟಿಕೇಟ್‌ಗೆ ಫೋಟೊ ಹಚ್ಚಬೇಕೆಂಬ ನಿಯಮ ಬಂದಾಗ ನನಗೆ ಪರೀಕ್ಷೆಯ ಉಮೇದಿಗಿಂತ ಫೋಟೊ ತೆಗೆಸಬೇಕಲ್ಲ ಎಂಬ ಉಮೇದೇ ದೊಡ್ಡದಾಗಿತ್ತು. ಮುಂದೆ ಪಿ.ಯು.ಸಿ ಗೆ ಪ್ಯಾಂಟ್ ಬಂತು, ಯಾರದೋ ಪ್ಯಾಂಟ್‌ನ್ನು ನಮ್ಮ ಅಳತೆಗೆ ಡಿಸಿಕೊಂಡು ಹಾಕಿಕೊಂಡು ಕಾಲೇಜಿಗೆ ಹೋಗುವಾಗ ಪ್ಯಾಂಟ್ ಮೇಲೊಂದು ಫೋಟೊ, ಏಳನೆಯ ಕ್ಲಾಸಿನ ನಂತರದ ಬೀಳ್ಕೊಡುಗೆ ಸಮಾರಂಭದ ಫೋಟೊ, ಎಂಟನೇ ಕ್ಲಾಸ್ ಹೈಸ್ಕೂಲಿನ ಮೊದಲ ಗುಂಪಿನ ಫೋಟೊ, ನಂತರ ಹತ್ತನೆಯ ತರಗತಿಯ ಸ್ನೇಹಿತರೊಂದಿಗೆ ಗ್ರೂಪ್ ಫೋಟೊ, ನಾನು ತಾನೆನ್ನುವ ಶ್ರೀಮಂತರ ಮಕ್ಕಳೇ ಆ ಶಾಲೆಯಗ್ರೂಪ್ ಫೋಟೊಗಳ ಕಾಪಿ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದರೆ, ನಾನು ಮಾತ್ರ ನನಗೊಂದು ಕಾಪಿ ಬೇಕೆಂದುಫೋಟೊ ಗ್ರಾಫರ್ ಫೋಟೊ ಕ್ಲಿಕ್ಕಿಸಿದ ಕೂಡಲೇ ನನ್ನ ಹೆಸರನ್ನು ಬರೆಸುತ್ತಿದ್ದೆ.
ಆಗ ಒಂದು ಎಕ್ಸ್‌ಟ್ರಾ ಕಾಪಿಗೆ ಮೂರು ರುಪಾಯಿಯೋ, ಐದು ರುಪಾಯಿಯೋ ಇರುತ್ತಿತ್ತು. ಏಳನೆಯ ಕ್ಲಾಸ್ ಪಾಸಾಗಿ ಹೈಸ್ಕೂಲಿಗೆ ಸೇರುವ ಮುನ್ನ ಏಳನೆಯ ಕ್ಲಾಸಿನ ಬೀಳ್ಕೊಡುಗೆ ಸಮಾರಂಭದ ಪೋಟೊಕ್ಕೆ ಅಂಗಿ, ಚಡ್ಡಿ, ಹವಾಯ್ ಚಪ್ಪಲ್ ಧರಿಸಿ ನಿಂತು, ಕೈಗೆ ನಮ್ಮಣ್ಣನು ಅದೇ ತಾನೆ ಎಸ್‌ಎಸ್‌ಎಲ್‌ಸಿ ಬಂದ ಗುರುತಿಗೆ ಕಟ್ಟಿದ್ದ ರಿಸ್ಟ್ ವಾಚ್ ಅನ್ನು ಅತ್ತು, ಕರೆದು,ಹೋರಾಟ ಮಾಡಿ, ಕಸಿದುಕೊಂಡಿದ್ದು, ಬಲಗೈಗೆ ಕಟ್ಟಿಕೊಂಡು ಆ ವಾಚೂ, ಫೋಟೊದಲ್ಲಿ ಬರಬೇಕೆಂದು ನಮ್ಮಣ್ಣ ತಾಕೀತು ಮಾಡಿ ಕೊಟ್ಟಿದ್ದರಿಂದ ಬಲಗೈಯನ್ನು ಇಳಿಬಿಡದೇ, ಎದೆಗೆ ಅಡ್ಡಲಾಗಿ ಇಟ್ಟುಕೊಂಡು ಫೋಟೊಗೆ ಫೋಸ್ ಕೊಟ್ಟಿದ್ದನ್ನು ಇಂದಿಗೂ ಆ ಫೋಟೊದಲ್ಲಿ ನೋಡುವಾಗ ‘ಎನಿತು ಸೊಗಸು ಈ ಬಾಲ್ಯ’ ಎನಿಸುತ್ತದೆ.
ಮುಂದೆ ನನ್ನ ತಮ್ಮ ದಿ.ಸ್ವಾಮಿ ನನ್ನ ಫೋಟೊ ಹುಚ್ಚಿಗೆ ನೀರೆರೆದ. ಬಾಡಿಗೆ ಕ್ಯಾಮೆರಾ ತಂದು, ನಾವೇ ರೀಲು ಹಾಕಿಸಿ, ನಾವೇ ಫೋಟೊ ತೆಗೆದುಕೊಂಡು, ತೊಳೆಯಲು ಮಾತ್ರ ಫೋಟೊ ಸ್ಟುಡಿಯೋಗೆ ಕೊಡುವ ಯುಗ ಆರಂಭವಾಗಿ, ನನ್ನ ತಮ್ಮ ಆತನ ಸ್ನೇಹಿತರು, ನಮ್ಮ ಸಾಹಿತ್ಯ ಬಳಗದ ಕಾರ್ಯಕ್ರಮಗಳ ಫೋಟೊ ತೆಗೆಯಲಾರಂಭಿಸಿದರು. ನನ್ನ ತಮ್ಮ ಪ್ರಕೃತಿ, ಪರಿಸರ ಪ್ರಿಯ, ಅವನು ತೆಗೆಯುತ್ತಿದ್ದ ಕೆರೆ, ಬೆಟ್ಟ, ಗುಡ್ಡ, ಪಾರ್ಕ್, ಸ್ಮಾರಕಗಳ ಮುಂದೆಲ್ಲ ಒಂದು ಮೂಲೆಗೆ ನನ್ನ ನಿಲ್ಲಿಸಿಯೇ ಫೋಟೊಗಳನ್ನು ತೆಗೆಯುತ್ತಿದ್ದ, ನಾನೂ ಒಂದು ಸ್ಮಾರಕವೇ ಎನ್ನುವಂತೆ, ನನ್ನ ತಮ್ಮನ ನಂತರ ಈಗ ನಮ್ಮ ಬಸವರಾಜ ಮಹಾಮನಿ ಈ ಸ್ಥಾನ ತುಂಬಿದ್ದು, ನನ್ನ ಫೋಟೊ ಹುಚ್ಚಿಗೆ ನೀರೆರೆಯುತ್ತಿದ್ದಾರೆ.
ಒಂದು ಸರಕಾರಿ ಉದ್ಯೋಗ, ಆಫೀಸು, ಮನೆ, ಬಾಸ್‌ನ ಕಿರಿಕಿರಿ, ಆಫೀಸಿನ ಒತ್ತಡ ಇತ್ಯಾದಿ ನನಗೆ ಇದ್ದಿದ್ದರೆ ನನ್ನನ್ನು ಈ ಫೋಟೊ ಬಿಡುತ್ತಿತ್ತೆನೋ, ಆದರೆ ನನ್ನ ಉದ್ಯೋಗವೇ ಈ ಭಾಷಣ, ಕಾರ್ಯಕ್ರಮಗಳಾದ್ದರಿಂದ ಈ ಮೂವತ್ತು ವರ್ಷಗಳಲ್ಲಿ ನನಗಿದ್ದ ಫೋಟೊ ಹುಚ್ಚು ಬಿಟ್ಟುಹೋಗಿ, ಇದೊಂದು ಪೀಡೆ ಎನಿಸಲಾರಂಭಿಸಿದೆ. ಫೋಟೊ ಎಂಬುದು ಪೀಡೆಯಾಗಿದ್ದು, ಈ ದರಿದ್ರ ಸೆಲಿಗಳಿಂದ, ಕಾರ್ಯಕ್ರಮ ಒಂದು – ಒಂದೂವರೆ ತಾಸು ನಡೆದರೆ, ಕಾರ್ಯಕ್ರಮಕ್ಕೆ ಬಂದ ಪ್ರತಿಯೊಬ್ಬರೂ ತಮ್ಮ ತಮ್ಮ ಮೊಬೈಲ್‌ಗಳಲ್ಲಿ ನಮ್ಮ ಕಷ್ಟ, ಅವಸರಗಳನ್ನರಿಯದೇ ‘ಸೆಲಿ ಪ್ಲೀಸ್’ ಎಂದು ನುಡಿದು ರಕ್ಕಸರಂತೆ ಮೇಲೆ ಎರಗಿ, ಲನ್‌ಗಳಂತೆ ನಮ್ಮನ್ನು ಎಳೆದಾಡಿ, ಮೂರ್ಖರಂತೆ ಮಾತಾಡುತ್ತಾ, ರೌಡಿಗಳಂತೆ ದೌರ್ಜನ್ಯ ಮಾಡಿ ಫೋಟೋಕ್ಕೆ ಹಪಹಪಿಸುವು ದನ್ನು ನೋಡಿದರೆ, ನನ್ನ ಬಾಲ್ಯದ ಫೋಟೊ ಹುಚ್ಚು ಸಂಪೂರ್ಣ ವಾಸಿಯಾಗಿ, ಆ ಸ್ಥಳದಲ್ಲೀಗ ಫೋಟೊ ಎಂದರೆ ಕೋಪ, ಅಸಹ್ಯ, ಜಿಗುಪ್ಸೆ, ರೋಷ ಉಕ್ಕೇರುತ್ತಿದೆ.
ನಮ್ಮ ಮುಖ ಕಂಡಕೂಡಲೇ ತಡಬಡಾಯಿಸಿ, ಅವಸರವಸರದಿಂದ ಅವರು ಜೇಬು, ಬ್ಯಾಗುಗಳಿಂದ ಮೊಬೈಲ್ ತೆಗೆಯುವು ದನ್ನು ಕಂಡರೆ, ರುಂಡ ತೆಗೆಯಲು ಒರೆಯಿಂದ ಕತ್ತಿ ಎಳೆದು ತೆಗೆಯುವ ರಾಕ್ಷಸರಂತೆಯೇ ಕಾಣುತ್ತಿದ್ದಾರೆ. ಸಮಯ, ಸಂದರ್ಭ, ಸ್ಥಳ, ಸ್ಥಳದ ಪರಿಸ್ಥಿತಿ ಒಂದೂ ಅರಿಯದೇ ಈ ಸೆಲಿ ಹುಚ್ಚಿನ ಸೈಕಿಕ್‌ಗಳು ನಮ್ಮ ನೆಮ್ಮದಿಯನ್ನೇ ಹಾಳು ಮಾಡುತ್ತಿದ್ದಾರೆ. ಟಾಯ್ಲೆಟ್, ಬಾತ್‌ರೂಮ್, ದೇವಸ್ಥಾನ, ರಸ್ತೆ, ತಿಪ್ಪೆ, ಕಡೆಗೆ ಸ್ಮಶಾನ, ಶವದ ಮೆರವಣಿಗೆ ಎಂಬುದರ ಅರಿವೂ ಇಲ್ಲದೇ ಸೆಲ್ಫಿಗೆಸಾಯುತ್ತಿದ್ದಾರೆ. ಹೂವು, ಮಗು, ಸ್ವಾಮಿಗಳು, ಸಂತರು, ಭಿಕ್ಷುಕರು, ಭ್ರಷ್ಟರು, ನೀಚರು, ದೇಶದ್ರೋಹಿಗಳು, ಕಳ್ಳರು, ಖದೀಮರು ಯಾರೇ ಇದ್ದರೂ ಅವರೊಂದಿಗೆ ಒಂದು ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.
ಅಲ್ಲಿಗೆ ಅವರ ಆದರ್ಶ ಆಚರಣೆ ಮುಗಿಯಿತು. ಈಗೇನಾದರೂ ನಮ್ಮನ್ನಾಳಲು ಮತ್ತೆ ಬ್ರಿಟಿಷರು ಬಂದರೆಂದರೆ, ಅವರೊಂದಿಗೂ ಸೆಲ್ಫಿಗೆ ಮುಗಿಬೀಳುವ ಮೂರ್ಖ ಯುವಜನತೆ ಸಿದ್ಧವಾಗಿರುವ ಮನೋಭಾವ ಯುವಕರಲ್ಲಿ ಕಾಣುತ್ತಿದೆ. ಕಾಡಿನಲ್ಲಿ ಅಡ್ಡಾಡುವ ಬೇಟೆಗಾರ ಸ್ವಲ್ಪ ಸದ್ದಾದರೂ ಸರಕ್ಕನೇ ಆ ದಿಕ್ಕಿಗೆ ದೃಷ್ಟಿ ಬೀರಿ ಬಿಲ್ಲಿಗೆ ಬಾಣ ಹೆದೆಯೇರಿಸುವಂತೆ, ಜಪ್ಪಿಸಿಕೂತ ಕಾಡುಪ್ರಾಣಿಯೊಂದು ಬೇಲಿಯ ಸಂದಿಯಲ್ಲಿ ಸ್ವಲ್ಪ ಶಬ್ದವಾದರೂ ಆ ಕಡೆಯೇ ಹೊಂಚುಹಾಕಿ ಎರಗುವ ಹುಲಿಯಂತೆ, ಎದುರು ವೈರಿ ಕಂಡಕೂಡಲೇ ಕ್ಷತ್ರೀಯ ರಾಜರು ಒರೆಯಿಂದ ಅವನ ರುಂಡ ಚೆಂಡಾಡಲು ಕತ್ತಿಯನ್ನು ಹಿರಿಯುವಂತೆ, ಸೆಲೆಬ್ರಿಟಿಗಳು, ಕಂಡಕೂಡಲೇ ಜೇಬಿನಿಂದ ಮೊಬೈಲ್ ತೆಗೆದು, ಸೆಲ್ಫಿ ಮೋಡಿಗೆ ಹಾಕಿ ಅವರ ಪಕ್ಕಬಂದು ‘ಸೆಲ್ಫಿ ಪ್ಲೀಸ್’ ಎಂದು ಗದರಿಸುವ ಈ ಯುವಜನತೆಯನ್ನು ಕಂಡರೆ ಅಯ್ಯೋ ದೇವರೇ ನನ್ನನ್ನೇಕೆ ಪ್ರಸಿದ್ಧಿ ಮಾಡಿದೆ ತಂದೆ ಎಂದು ಚೀರುವಂತೆ ಮಾಡಿದೆ.
ಈ ಜನಪ್ರಿಯತೆಯನ್ನು ಕಂಡರೆ ಹಿಂದಿನ ನನ್ನ ಫೋಟೊ ಹುಚ್ಚಿಗೆ ಆ ದೇವರು ಈಗ ಶಿಕ್ಷೆ ಕೊಡುತ್ತಿದ್ದಾನೆ, ಸೇಡು ತೀರಿಸಿ ಕೊಳ್ಳುತ್ತಿದ್ದಾನೆ ಎನಿಸುತ್ತಿದೆ. ನನ್ನ ಈ ಫೋಟೊ ಹುಚ್ಚಿನ ಹುಚ್ಚಿಗೆ ಸೆಲಿಗಳು ಹಚ್ಚಿದ ಈ ಕಿಚ್ಚನ್ನು ಆ ಭಗವಂತನೇ ಹಚ್ಚಿದ್ದಾನೆ ಎನಿಸುತ್ತಿದೆ.