ಮೀಸಲಾತಿ ಹೋರಾಟ: ಒಂದು ಅವಲೋಕನ
ಅಭಿವ್ಯಕ್ತಿ
ಡಾ.ಸತೀಶ್‌ ಕೆ.ಪಾಟೀಲ
ರಾಜ್ಯದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದ ಕಾವು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ರಾಜ್ಯದ ಲಿಂಗಾಯತರಲ್ಲಿಯೇ ಪ್ರಬಲ ಸಮುದಾಯ ಸುಮಾರು90ಲಕ್ಷದಷ್ಟು ಜನಸಂಖ್ಯೆ ಹೊಂದಿದೆ. ರಾಜ್ಯದ ಸುಮಾರು75ವಿಧಾನಸಭೆಯ ಕ್ಷೇತ್ರಗಳಲ್ಲಿ ನಿರ್ಣಾಯಕ ಪಾತ್ರವಹಿಸಬಲ್ಲ ಪ್ರಮುಖ ಸಮಾಜವಾದ ಈ ಪಂಚಮಸಾಲಿ ಮೀಸಲಾತಿ ಹೋರಾಟದ ಒಂದುಅವಲೋಕನ ಇಂದಿನ ಅಗತ್ಯ ಮತ್ತು ಅನಿವಾರ್ಯ ಎನಿಸುತ್ತದೆ.
ಹಾಗಾದರೆ ನೈಜವಾಗಿ ಪಂಚಮಸಾಲಿ ಸಮಾಜ ಹಿಂದುಳಿದಿದೆಯೇ? ಪಂಚಮಸಾಲಿಗಳ ಬೇಡಿಕೆ ನ್ಯಾಯಯುತವೇ? ಪಂಚಮಸಾಲಿಗಳನ್ನು 2ಎಗೆ ಸೇರಿಸಿದರೆ ಆಗುವ ಲಾಭಗಳೇನು? ಪಂಚಮಸಾಲಿ ಗಳಿಗೆ ಇಲ್ಲಿಯವರೆಗೆ ಅನ್ಯಾಯವಾಗಿದೆಯೇ? ಹಾಗಾದರೆ ಇದಕ್ಕೆ ಮೀಸಲಾತಿ ಪರಿಹಾರವೇ ಮತ್ತು ಇದರಲ್ಲಿ ಸರಕಾರದ ಪಾತ್ರವೇನು? ಈ ಹೋರಾಟ ಒಂದು ಹಂತಕ್ಕೆ ಸಫಲವಾಗಿದೆಯೇ? ಎನ್ನುವ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಅವುಗಳ ಕುರಿತು ಒಂದು ಚಿಂತನೆ ಇಲ್ಲಿದೆ.
ಈ ಪ್ರಶ್ನೆಗಳನ್ನು ನೋಡುವ ಮೊದಲು ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿನ ಅವಕಾಶಗಳು ಮತ್ತು ರಾಜ್ಯದಲ್ಲಿ ಮೀಸಲಾತಿಗೆ ಸಂಬಂಧಿಸಿದ ಇತಿಹಾಸವನ್ನು ಒಮ್ಮೆ ಮೆಲಕು ಹಾಕುವುದು ಅಗತ್ಯವೇನಿಸುತ್ತದೆ. ಮೀಸಲಾತಿಗೆ ಸಂಬಂಧಿಸಿದಂತೆ ಸಂವಿಧಾನದಲ್ಲಿ ಏನು ಉಲ್ಲೇಖ ಮಾಡಲಾಗಿದೆ ಎಂಬುದನ್ನು ನೋಡಿದಾಗ ಸಂವಿಧಾನದ ನಾಲ್ಕನೆಯ ಭಾಗದಲ್ಲಿರುವ46ನೇ ವಿಧಿ ಅನ್ವಯ ಸಮಾಜದ ದುರ್ಬಲ ವರ್ಗಗಳ ಶೈಕ್ಷಣಿಕ ಮತ್ತು ಆರ್ಥಿಕ ಹಿತಾಸಕ್ತಿಗಳನ್ನು ರಕ್ಷಿಸಬೇಕು ಎಂದು ಹೇಳಲಾಗಿದೆ. ಹಾಗೆಯೇ ಸಂವಿಧಾನದ ವಿಧಿ15(4) ನೇ ಉಪಧಿಯ ಪ್ರಕಾರ ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಪ್ರಜೆಗಳಿಗೆ ರಾಜ್ಯವು ವಿಶೇಷ ನಿಯಮಗಳನ್ನು ರೂಪಿಸ ಬಹುದೆಂದು ಹೇಳಲಾಗಿದೆ.
ಇದಕ್ಕೆ ಪೂರಕವಾಗಿ ಸಂವಿಧಾನದ16ನೇ ವಿಧಿಯಲ್ಲಿರುವ1ಮತ್ತು2ನೇಯ ಉಪಧಿಗಳು ಕೂಡಾ ರಾಜ್ಯಕ್ಕೆ ಈ ವಿಷಯದಲ್ಲಿ ಅಧಿಕಾರ ನೀಡಿದೆ. ಈ ಸಂವಿಧಾನದ ಆಶಯದಂತೆ ಪಂಚಮಸಾಲಿ ಜನಾಂಗಕ್ಕೆ ನ್ಯಾಯ ಸಿಗಬೇಕಿದೆ. ಈ ನಿಟ್ಟಿನಲ್ಲಿ2ಎ ಮೀಸಲಾತಿ ನೀಡುವ ಅಧಿಕಾರ ರಾಜ್ಯ ಸರಕಾರಕ್ಕೆ ಇರುವುದರಿಂದ ಪಂಚಮಸಾಲಿಗಳ ಬಹುದಿನಗಳ ಬೇಡಿಕೆಗೆ ರಾಜ್ಯಸರಕಾರ ಸ್ಪಂದಿಸಬೇಕು ಎನ್ನುವುದು ಬಹುಸಂಖ್ಯಾತ ಪಂಚಮಸಾಲಿಗಳ ಆಗ್ರಹವಾಗಿದೆ. ರಾಜ್ಯ ಸರಕಾರ ಕಾಲಕಾಲಕ್ಕೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಹಿಂದುಳಿದ ಸಮಾಜ ಗಳಿಗೆ ನ್ಯಾಯ ಒದಗಿಸಲು ಅನೇಕ ಆಯೋಗಗಳನ್ನು ನೇಮಕ ಮಾಡಿದೆ.
1960ರಲ್ಲಿ ನಾಗನಗೌಡ ಸಮಿತಿ,1975ರ ಹಾವನೂರ ಆಯೋಗ,1983ರಲ್ಲಿ ಟಿ.ವೆಂಕಟಸ್ವಾಮಿ ಆಯೋಗ,1988ರಲ್ಲಿ ಓ. ಚಿನ್ನಪ್ಪ ರೆಡ್ಡಿ ಆಯೋಗಗಳನ್ನು ಸರಕಾರ ನೇಮಿಸಿತು. ಹಾವನೂರ ಆಯೋಗ ಲಿಂಗಾಯತರನ್ನು ಹಿಂದುಳಿದ ವರ್ಗವೆಂದು ಪರಿಗಣಿಸಲಿಲ್ಲ. ನಂತರ ಟಿ. ವೆಂಕಟಸ್ವಾಮಿ ಆಯೋಗ ಲಿಂಗಾಯತರನ್ನು ಹಿಂದುಳಿದ ಪಟ್ಟಿಗೆ ಸೇರಿಸಲಿಲ್ಲ. ಆಗ ಜನರ ತೀವ್ರ ಪ್ರತಿಭಟನೆಯಿಂದಾಗಿ1988ರ ಅಕ್ಟೋಬರ್‌ನಲ್ಲಿ ಸರಕಾರ ಒಕ್ಕಲಿಗರು ಮತ್ತು ಲಿಂಗಾಯತರನ್ನು ಮೀಸಲಾತಿ ಪಟ್ಟಿಗೆ ಸೇರಿಸಿತ್ತು.
ಆಗಲೂ ಪಂಚಮ ಸಾಲಿ ಜನಾಂಗವನ್ನು ಹಿಂದುಳಿದ ಜನಾಂಗವೆಂದು ಗುರುತಿಸಲಿಲ್ಲ. ನಂತರ ಓ. ಚಿನ್ನಪ್ಪರೆಡ್ಡಿ ಆಯೋಗ,ಇದಾದ ನಂತರ1994ರಲ್ಲಿ ದೇವೆಗೌಡರು ಮುಖ್ಯಮಂತ್ರಿಯಾಗಿದ್ದಾಗ ಆಗಿನ ಸಚಿವ ಎಂ.ಪಿ.ಪ್ರಕಾಶ ನೇತೃತ್ವದದಲ್ಲಿ ರಚನೆಯಾದ ಸಂಪುಟ ಉಪಸಮಿತಿಯೂ ಪಂಚಮಸಾಲಿಗಳನ್ನು ಹಿಂದುಳಿದ ವರ್ಗವೆಂದು ಪರಿಗಣಿಸದೇ ಹೋಗಿದ್ದು ದುರಂತ.ಹೀಗೆ ಐತಿಹಾಸಿಕವಾಗಿ ಪಂಚಮಸಾಲಿ ಗಳನ್ನು ನಿರ್ಲಕ್ಷ್ಯಿಸಿದ್ದು ಸ್ಪಷ್ಟವಾಗುತ್ತದೆ. ಇದೇ ಸಮಯದಲ್ಲಿ ಲಿಂಗಾಯತ ಕೆಲ ಪಂಗಡಗಳನ್ನು ಹಿಂದುಳಿದ ವರ್ಗಗಳು ಎಂದು ಗುರುತಿಸಿ ಎಂ.ಪಿ. ಪ್ರಕಾಶ ಶಿಫಾರಸ್ಸು ಮಾಡಿದಾಗ ಆಗ ಯಾವ ಪಂಚಮಸಾಲಿಜನಪ್ರತಿನಿಧಿಗಳು ಒತ್ತಡ ಹಾಕದೇ ಹೋಗಿದ್ದು ಈಗಿನ ಪರಿಸ್ಥಿತಿಗೆ ಕಾರಣವೆಂದು ಹೇಳಬಹುದು.
ನಂತರ 2008ರಲ್ಲಿ ಪಂಚಮಸಾಲಿ ಗಳನ್ನು ಹಿಂದುಳಿದ ವರ್ಗಗಳ3ಬಿ ಪಟ್ಟಿಗೆ ಸೇರಿಸ ಲಾಯಿತು. ನಂತರ ಬಂದ ಸಿ.ಎಂ. ಉದಾಸಿ ಸಮಿತಿಯು ಪಂಚಮ ಸಾಲಿಗಳನ್ನು ಈ ವಿಷಯದಲ್ಲಿ ಕಡೆಗಣಿಸಿದ್ದು ಎದ್ದು ಕಾಣುತ್ತದೆ. ಈ ಸದ್ಯದ ಪರಿಸ್ಥಿತಿಯಲ್ಲಿ ಈಗಲೂ ಹಿಂದುಳಿದ3ಬಿ ನಲ್ಲಿರುವ ಪಂಚಮಸಾಲಿ ಜನಾಂಗದ ಕುಲಶಾಸ್ತೀಯ ಅಧ್ಯಯನ ಅಗತ್ಯವಿಲ್ಲ. ನೇರವಾಗಿ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯಿಸಿ ರಾಜ್ಯಪತ್ರದಲ್ಲಿ ಹೊರಡಿಸಿದರೆ ಸಾಕು. ಆದರೆ ಇತರೆ ವ್ಯಕ್ತಿಗಳು ಕೋರ್ಟಿಗೆ ಹೋಗಬಾರದು ಎನ್ನುವ ಕಾರಣವಿದ್ದರೆ ಹಿಂದುಳಿದ ವರ್ಗದ ಆಯೋಗ ಅಧ್ಯಯನ ಮಾಡಿ ವರದಿ ಕೊಟ್ಟ ನಂತರ ಈ ಪಂಚಮಸಾಲಿಗಳಿಗೆ ಮೀಸಲಾತಿಯನ್ನು ಘೋಷಿಸಬೇಕು.
ಆದರೆ ಇದೇ ಕಾರಣವಿಟ್ಟುಕೊಂಡು ವಿಳಂಬ ಮಾಡುವುದು ಸರಿಯಲ್ಲ. ಮೀಸಲಾತಿಗೆ ಸಂಬಂಧಿಸಿದಂತೆ ಪಂಚಮಸಾಲಿಗರ ಕೂಗು ಇಂದು ನಿನ್ನೆಯದು ಅಲ್ಲ. ಸುಮಾರು ವರ್ಷಗಳಿಂದ ಕೇಳಿ ಬರುತ್ತಿದೆ. ಆದರೆ ಈಗ ಅದು ಪ್ರಬಲ ಧ್ವನಿಯಾಗಿ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ. ಪಂಚಮಸಾಲಿ ಜನಾಂಗದ ಸಂಘಟನೆಗೆ ರಾಜ್ಯದಲ್ಲಿ ಜೀವ ತುಂಬಿದವರು ಹನುಮನಾಳ ಗುರುಗಳು.
1992ರಲ್ಲಿ ಅಂದಿನ ಸಿ.ಎಂ. ವೀರಪ್ಪ ಮೋಯ್ಲಿ ಅವರನ್ನು ಕೊಪ್ಪಳಕ್ಕೆ ಕರೆಯಿಸಿ ಸಂಘಟನೆಗೆ ಚಾಲನೆ ಕೊಟ್ಟರು. ನಂತರಹಲವು ಜನ ಪಂಚಮಸಾಲಿ ಜನಾಂಗದ ಸಂಘಟನೆಗೆ ಶ್ರಮಿಸಿದ್ದಾರೆ. ನಂತರ2008ರಲ್ಲಿ ಪಂಚಮಸಾಲಿ ಜಗದ್ಗುರು ಪೀಠಗಳನ್ನು ಕೂಡಲ ಸಂಗಮ ಮತ್ತು ಹರಿಹರದಲ್ಲಿ ಸ್ಥಾಪನೆಯಾದವು. ರಾಜ್ಯದಲ್ಲಿ ಲಿಂಗಾಯತರಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಈ ಸಮಾಜವು ಮೊದಲಿನಿಂದಲೂ ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದಿದ್ದು ಹೆಚ್ಚಾಗಿ ಈ ಸಮಾಜದ ಜನರು ಕೃಷಿಯನ್ನು ಅವಲಂಬಿಸಿದ್ದಾರೆ.
ರೈತಾಪಿ ವರ್ಗದವರಾದ ಈ ಸಮಾಜದಲ್ಲಿ ಬಡವರೇ ಹೆಚ್ಚಾಗಿದ್ದು, ಸರಕಾರದ ಸೌಲಭ್ಯಗಳಿಂದ ವಂಚಿತ ರಾಗಿರುವುದುಸ್ಪಷ್ಟವಾಗಿ ಗೋಚರಿಸುತ್ತದೆ. ಈ ಸಮಾಜದಲ್ಲಿಯ ದಿವಗಂತರಾದ ಎಸ್. ನಿಜಲಿಂಗಪ್ಪ, ಜೆ.ಎಚ್.ಪಟೇಲ, ಪಿ.ಎಂ. ನಾಡಗೌಡ, ಬಿ.ಕೆ. ಗುಡದಿನ್ನಿ, ಬಿ.ಎಸ್.ಪಾಟೀಲ ಮನಗೂಳಿ, ಎಸ್.ಆರ್.ಕಾಶಪ್ಪನವರ ಸೇರಿದಂತೆ ಹಲವು ನಾಯಕರಾಗಿ ಹೋಗಿದ್ದಾರೆ. ಇವತ್ತಿಗೂ ಈ ಸಮಾಜದ ಪ್ರಮುಖ ನಾಯಕರು ಎಲ್ಲಾ ಪಕ್ಷಗಳಲ್ಲಿ ಇದ್ದಾರೆ. ಆದರೆ ಈ ಸಮಾಜಕ್ಕೆ ಸಿಗಬೇಕಾದ ಸೌಲಭ್ಯಗಳು ಮಾತ್ರ ಸಿಗದೇ ಹೋಗಿದ್ದು ಅಚ್ಚರಿಯನ್ನುಂಟು ಮಾಡುತ್ತದೆ.
ಇದಕ್ಕೆ ಕಾರಣ ರಾಜಕೀಯ ಇಚ್ಛಾಶಕ್ತಿಯ ಕೊರತೆ ಮತ್ತು ನಿರ್ಲಕ್ಷ್ಯವೇ ಕಾರಣವೆನ್ನಬಹುದು. ಪಂಚಮಸಾಲಿಗಳ 2ಎಮೀಸಲಾತಿಯ ಬೇಡಿಕೆ ನ್ಯಾಯಯುತವಾಗಿದ್ದು, ಏಕೆಂದರೆ ಲಿಂಗಾಯತರಲ್ಲಿಯೇ ಸುಮಾರು32ಉಪಪಂಗಡಗಳು2ಎಮೀಸಲಾತಿಯನ್ನು ಪಡೆದು ಸಾಕಷ್ಟು ಲಾಭವನ್ನು ಪಡೆದಿದ್ದಾರೆ. ಉದಾಹರಣೆ ಗಾಣಿಗ, ನೇಕಾರ, ಮಾಲಗಾರ, ಕುಂಬಾರ ಮತ್ತಿತರರು.
2ಎಮೀಸಲಾತಿಯಿಂದ ಶೇ.15ರಷ್ಟು ಶಿಕ್ಷಣ ಉದ್ಯೋಗ ದಲ್ಲಿ ಮೀಸಲಾತಿ ಸಿಗುವುದರಿಂದ ಪಂಚಮಸಾಲಿ ಜನಾಂಗಕ್ಕೂ ಅನುಕೂಲವಾಗುತ್ತದೆ. ಈ ಕಾರಣದಿಂದ ಬಡವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಈ ಸಮುದಾಯವನ್ನು 2ಎಗೆ ಸೇರಿಸಬೇಕು ಎನ್ನುವ ಕೂಗು ನ್ಯಾಯಸಮ್ಮತವಾದದ್ದು. ಏಕೆಂದರೆ 2ಎಮೀಸಲಾತಿಯಿಂದ ವಂಚಿತವಾದ ಪಂಚಮಸಾಲಿಗಳು ಹಲವು ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ.
ಉದಾಹರಣೆಗೆ ರಾಜ್ಯದಲ್ಲಿ ನಡೆಯುವ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆ.ಎ.ಎಸ್., ಪಿ.ಎಸ್.ಐ., ಪಿ.ಡಿ.ಓ., ಎಸ್.ಡಿ.ಎ., ಎ-.ಡಿ.ಎ.,ಹೀಗೆ ಅನೇಕ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಗಳಿಸಿದರೂ ಪಂಚಮಸಾಲಿ ಜನಾಂಗದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುತ್ತಿಲ್ಲ. ಈ ಪರೀಕ್ಷೆ ಗಳಲ್ಲಿ 2ಎ ಮೀಸಲಾತಿಯಲ್ಲಿ ಬರುವ ಅಭ್ಯರ್ಥಿ ಗಳಿಗಿಂತ10ರಿಂದ15ಅಂಕಗಳು ಹೆಚ್ಚಿಗೆ ಪಡೆದರೂ ಈ ಸಮಾಜದ ಯುವಕರು ಆಯ್ಕೆಯಾಗುತ್ತಿಲ್ಲ. ಹೀಗೆ ಅನೇಕ ಪಂಚಮಸಾಲಿ ಯುವಕರಿಗೆ ಈ ರೀತಿ ಅನ್ಯಾಯವಾಗುತ್ತಿದ್ದು, ಅಷ್ಟೇ ಅಲ್ಲಾ ರಾಜಕೀಯದಲ್ಲಿ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯ್ತಿ, ತಾಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿಗಳಲ್ಲಿ ಹೆಚ್ಚಿನ ಅವಕಾಶ ಸಿಗದೇ ವಂಚಿತರಾಗುತ್ತಿದ್ದು ಇದು ಕೂಡಾ ಪಂಚಮ ಸಾಲಿಗಳಿಗೆ ರಾಜಕೀಯವಾಗಿ ಹಿನ್ನಡೆಗೆ ಕಾರಣವಾಗಿದೆ.
ಈಗಿನ ಶೇ.3ರಷ್ಟು ಇರುವ ಪ್ರವರ್ಗ –3ಬಿನಲ್ಲಿ ಪಂಚಮಸಾಲಿಗಳು ಇದ್ದಾರೆ.  ಶೇ.15ರಷ್ಟು ಮೀಸಲಾತಿ ಇರುವ2ಎಗೆ ಸೇರಿದರೆ ಹೆಚ್ಚಿನ ಅನುಕೂಲ ಪಂಚಮಸಾಲಿಗಳಿಗೆ ಆಗುತ್ತದೆ. ಈ ಕಾರಣಕ್ಕಾಗಿಯೇ ಕೂಡಲಸಂಗಮದ ಪಂಚಮಸಾಲಿ ಜಗದ್ಗುರು ಪೀಠದ ಶ್ರೀಬಸವ ಜಯ ಮೃತ್ಯುಂಜಯ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಪ್ರಾರಂಭ ವಾಗಿದ್ದು, ಈಗ ಈ ಹೋರಾಟ ತೀವ್ರ ಸ್ವರೂಪವನ್ನು ಪಡೆದುಕೊಂಡಿದೆ.
ಈ ಪಂಚಮಸಾಲಿ ಹೋರಾಟಕ್ಕೆ ಇತರೆ ಲಿಂಗಾಯತ ಸಮುದಾಯದ ಮಠಾಧೀಶರು ಬೆಂಬಲ ಕೊಟ್ಟಿದ್ದು ಈ ಹೋರಾಟಕ್ಕೆ ಆನೆಬಲ ಬಂದಿದೆ. ಇಷ್ಟೇ ಅಲ್ಲಾ ಪಂಚಮಸಾಲಿ ಉಭಯ ಪೀಠಗಳು ಈ ಹೋರಾಟದಲ್ಲಿ ಒಂದಾಗಿರುವುದು ಪಂಚಮಸಾಲಿ ಗಳಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಹರಿಹರದಿಂದ ಇನ್ನೋರ್ವ ಜಗದ್ಗುರು ಶ್ರೀವಚನಾ ನಂದ ಶ್ರೀಗಳು ಈ ಹೋರಾಟಕ್ಕೆ ಕೈ ಜೋಡಿಸಿದ್ದು ಪಂಚಮಸಾಲಿಗಳ ಹೋರಾಟದಲ್ಲಿ ಒಮ್ಮತ ಮೂಡಿದೆ ಎನ್ನುವ ಸಂದೇಶ ರವಾನೆ ಯಾಯಿತು.
ಸುಮಾರು38ದಿನಗಳು700ಹೆಚ್ಚು ಕಿ.ಮೀ. ಪಾದಯಾತ್ರೆ. ಅದಕ್ಕೆ ಜನರು ನೀಡಿದ ಬೆಂಬಲ ಹೊಸ ದಾಖಲೆಗೆ ಕಾರಣ ವಾಯಿತು. ಅಷ್ಟೇ ಅಲ್ಲಾ ಬೆಂಗಳೂರಿನಲ್ಲಿ ನಡೆದ ಬೃಹತ್ ಐತಿಹಾಸಿಕ ಸಮಾವೇಶವು ಸರಕಾರದ ಕಣ್ಣು ತೆರೆಸುವಲ್ಲಿ ಸಫಲವಾಯಿತು. ಅಷ್ಟೇ ಅಲ್ಲಾ ಪಂಚಮಸಾಲಿಗಳು ಒಂದಾಗಿ ನಿಂತರೆ ಸರ್ಕಾರವನ್ನೇ ಅಲುಗಾಡಿಸುವ ಶಕ್ತಿ ಈ ಸಮಾಜಕ್ಕೆ ಇದೆ ಎನ್ನುವ ಸಂದೇಶವು ಈ ಸಮಾವೇಶದ ಮೂಲಕ ಹೋತು. ಈ ಸಮಾವೇಶದ ಪರಿಣಾಮ ಪಂಚಮಸಾಲಿ ಜನರಲ್ಲಿ ಒಕ್ಕಟ್ಟನ್ನುತರುವಲ್ಲಿ ಸಫಲವಾಯಿತು. ಪಂಚಮಸಾಲಿ ನಾಯಕರು ಈ ಸಮಾವೇಶದ ಮೂಲಕ ಸಮಾಜಕ್ಕಾಗಿ ನಾವು ಎಲ್ಲರೂ ಒಂದೇ ಎನ್ನುವ ಘೋಷಣೆ ಮಾಡಿ ಜನರಲ್ಲಿ ಹುರುಪು ತುಂಬಿದರು.
ಆದರೆ ಸಮಾವೇಶದ ನಂತರ ಭಿನ್ನಸ್ವರ ಕೇಳಿ ಬಂದಿದ್ದು ಮಾತ್ರ ಪಂಚಮ ಸಾಲಿಗಳ ನೋವಿಗೆ ಕಾರಣವಾಯಿತು. ಬಹುದೊಡ್ಡ ಸಮಾಜವಾದ ಪಂಚಮಸಾಲಿಗಳು 2ಎಗೆ ಸೇರಿದರೆ ನಮಗೆ ಅವಕಾಶ ಕಡಿಮೆ ಆಗುತ್ತವೆ ಎನ್ನುವ ಭಾವನೆ ಇತರೆ 2ಎಯಲ್ಲಿ ಇರುವ ಸಮಾಜ ಗಳ ಆತಂಕವಾಗಿದೆ. ಹೀಗಾಗಿ ಬಹಿರಂಗ ವಾಗಿ ವಿರೋಧಿಸದಿದ್ದರೂ ಸರಕಾರದ ಒಳಗೆ ಪಂಚಮಸಾಲಿಗಳಿಗೆ 2ಎಮೀಸಲಾತಿ ಸಿಗದಂತೆ ವ್ಯವಸ್ಥಿತ ಪ್ರಯತ್ನಗಳು ನಡೆದಿವೆ. ಈ ಬಗ್ಗೆ ಪಂಚಮಸಾಲಿ ಹೋರಾಟಗಾರರು ಎಚ್ಚರಿಕೆ ಯಿಂದ ಹೆಜ್ಜೆ ಇಡಬೇಕಾಗಿದೆ.
ಒಟ್ಟಿನಲ್ಲಿ ಈಗ ಪಂಚಮಸಾಲಿಗಳು ಸಂಘಟಿತ ರಾಗಿದ್ದು ಸಮಾಜದ ಜನರು ಎಚ್ಚೆತ್ತುಗೊಂಡಿದ್ದಾರೆ. ಅದಕ್ಕೆ ಸಾಕ್ಷಿ ಮೊನ್ನೆ ಬೆಂಗಳೂರಿನಲ್ಲಿ ನಡೆದ ಬೃಹತ್ ಸಮಾವೇಶ. ಈಗಲಾದರೂ ಸರಕಾರ ಮತ್ತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರು ಈ ಸಮಾಜದ ಬಹುದಿನಗಳ ಬೇಡಿಕೆಗೆ ಸ್ಪಂದಿಸಬೇಕು. ಏಕೆಂದರೆ ಸಿ.ಎಂ. ಯಡಿಯೂರಪ್ಪ ನವರ ಮೇಲೆ ಪಂಚಮಸಾಲಿಗಳ ಋಣಭಾರವಿದೆ. ಪಂಚಮ ಸಾಲಿ ಗಳ ಬೆಂಬಲದಿಂದ ಇವತ್ತು ರಾಜ್ಯದಲ್ಲಿ ಬಿ.ಜೆ.ಪಿ. ಸರಕಾರ ಅಧಿಕಾರಕ್ಕೆ ಬಂದಿದೆ.
ಚಮಸಾಲಿ ಜನಾಂಗದ16ಶಾಸಕರು ಆಡಳಿತ ಪಕ್ಷದಲ್ಲಿ ಇದ್ದಾರೆ. ಹೀಗಾಗಿ ಇದೊಂದು ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ಒಳ್ಳೆಯ ಅವಕಾಶ. ಈ ಕಾರಣಕ್ಕಾಗಿ ರೈತರನ್ನು ಮತ್ತು ಕೂಲಿ ಕಾರ್ಮಿಕರನ್ನು, ಬಡವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಹೊಂದಿ ರುವ ಈ ಹಿಂದುಳಿದ ಪಂಚಮಸಾಲಿಗಳು ಆರ್ಥಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯ ಮತ್ತು ಸಾಮಾಜಿಕವಾಗಿ ಅಭಿವೃದ್ಧಿಗಾಗಿ ಸರಕಾರವು ಶೀಘ್ರವಾಗಿ ಮತ್ತು ಸೂಕ್ತ ತೀರ್ಮಾನ ಕೈಗೊಂಡು ಪಂಚಮಸಾಲಿ ಸಮಾಜವನ್ನು2ಎಪ್ರವರ್ಗಕ್ಕೆ ಸೇರಿಸಬೇಕು. ಆ ಮೂಲಕ ಸಿ.ಎಂ. ಯಡಿಯೂರಪ್ಪನವರು ಈ ಬೃಹತ್ ಸಮಾಜದ ಜನರ ಪ್ರೀತಿ ಅಭಿಮಾನಕ್ಕೆ ಪಾತ್ರರಾಗಬೇಕು ಎನ್ನುವುದು90ಲಕ್ಷ ಪಂಚಮ ಸಾಲಿಗಳ ಆಶಯವಾಗಿದೆ.