ಅಗ್ನಿಬಾಣ ಪ್ರಯೋಗ ಚತುರೆ ರಾಣಿ ಅಬ್ಬಕ್ಕ
ಶಶಾಂಕಣ
ಶಶಿಧರ ಹಾಲಾಡಿ
ಮಾಧ್ಯಮಿಕ ತರಗತಿಗಳಲ್ಲಿ ನಮಗೊಂದು ಪಾಠವಿತ್ತು. ಆ ಪಾಠದ ಹೀರೋ ಸ್ವಿಜರ್ಲೆಂಡ್‌ನ ವಿಲಿಯಂ ಟೆಲ್ ಎಂಬಾತ. ನಿಷ್ಣಾತ ಬಿಲ್ಲುಗಾರ ನಾಗಿದ್ದ ತನು, ತನ್ನನ್ನು ಸೆರೆಹಿಡಿದವ ಸವಾಲಿನಂತೆ, ಮಗನ ತಲೆಯ ಮೇಲೆ ಸೇಬು ಹಣ್ಣನ್ನು ಇರಿಸಿ, ಆ ಹಣ್ಣಿಗೆ ಬಾಣ ಬಿಟ್ಟು, ಮೊದಲ ಪ್ರಯತ್ನದಲ್ಲಿ ಸೇಬನ್ನು ಎರಡು ಚೂರಾಗಿಸುತ್ತಾನೆ.
ಈ ಸಂದರ್ಭ ದಲ್ಲಿ ಆತ ಎರಡು ಬಾಣಗಳನ್ನು ಆಯ್ದುಕೊಂಡಿದ್ದ. ‘ಎರಡನೆಯ ಬಾಣ ಯಾವ ಉದ್ದೇಶಕ್ಕೆ?’ ಎಂದು ಆತನನ್ನು ಸೆರೆಹಿಡಿದಾತ ಕೇಳಿದಾಗ, ‘ನನ್ನ ಪ್ರಯತ್ನ ವಿಫಲವಾಗಿ, ನನ್ನ ಮಗನಿಗೇನಾದರೂ ಆಗಿದ್ದರೆ, ಎರಡನೆಯ ಬಾಣದಿಂದ ನಿನ್ನ ತಲೆ ತೆಗೆಯುತ್ತಿದ್ದೆ!’ ಎಂದು ಹರಿತವಾಗಿ ಉತ್ತರಿಸುತ್ತಾನೆ ಆ ಸಾಹಸಿ.
ನನಗೆ ಈಗಲೂ ಅಚ್ಚರಿಯಾಗುವುದೇಕೆಂದರೆ, ದೂರದ ಸ್ವಿಜರ್ಲೆಂಡ್‌ನ ಈ ಜಾನಪದ ಹೀರೋನ ಕಥೆಯನ್ನು, ಕರ್ನಾಟಕದ ಮಕ್ಕಳು ಯಾಕೆ ಓದಬೇಕು? ನಮ್ಮ ನಾಡಿನಲ್ಲೇ ಇಂತಹ ಸಾಹಸ ಕಥೆಗಳಿರಲಿಲ್ಲವೆ! ವಿಲಿಯಂ ಟೆಲ್‌ನ ಈ ಸಾಹಸವನ್ನು 13ನೆಯ  ಶತಮಾನದ ಐತಿಹಾಸಿಕ ಘಟನೆ ಎಂದು ಅಲ್ಲಿನವರು ಸಾಧಿಸಲು ಪ್ರಯತ್ನಿಸಿದರೂ, ಅದು ಜಾನಪದ ಕಥೆಯೊಂದರವೈಭವೀಕೃತ ದಾಖಲೀ ಕರಣ ಎಂದು ನಂತರದ ಇತಿಹಾಸ ತಜ್ಞರು ಗುರುತಿಸಿದರು.
ಆದರೂ ಸ್ವಿಜರ್ಲೆಂಡ್‌ನಲ್ಲಿ ಆತನನ್ನು ದೊಡ್ಡ ಹೀರೋವನ್ನಾಗಿ ರೂಪಿಸಲಾಗಿದೆ. ಮುಖ್ಯವಾಗಿ, ಹತ್ತೊಂಬತ್ತನೆಯ ಶತಮಾನದಲ್ಲಿ ಸ್ವಿಜರ್ಲೆಂಡ್ ತನ್ನ ಸಾರ್ವಭೌಮತ್ವಕ್ಕಾಗಿ ನಡೆಸಿದ ಹೋರಾಟದ ಸಮಯದಲ್ಲಿ, ವಿಲಿಯಂ ಟೆಲ್‌ನ ಕಥನಜನಪ್ರಿಯವಾಯಿತು. ದೇಶಾಭಿಮಾನವನ್ನು ಎತ್ತಿ ಹಿಡಿಯುವ ಭರದಲ್ಲಿ, ಈ ಜಾನಪದ ಕಥನದ ಹೀರೋ ಒಬ್ಬನು ಐತಿಹಾಸಿಕ ವ್ಯಕ್ತಿಯ ಸ್ವರೂಪ ಪಡೆದು, ನ್ಯಾಷನಲ್ ಹೀರೋ ಆಗಿ ರೂಪುಗೊಂಡ. ಆತನ ಸಾಹಸವು ದೂರದ ಕರ್ನಾಟಕದ ಮಕ್ಕಳು ಓದುವಂತಾಗಿ, ಆತನ ಹರಿತವಾದ ಮಾತಿನಿಂದ ಇಲ್ಲಿನ ಮಕ್ಕಳು ಸ್ಪೂರ್ತಿ  ಪಡೆಯಲಿ ಎಂದು ಅಂದಿನ ಪಠ್ಯಪುಸ್ತಕ ಸಮಿತಿನಿರ್ಧರಿಸಿದ್ದು 20ನೆಯ ಶತಮಾನದ ವ್ಯಂಗ್ಯ.
ಏಕೆಂದರೆ, ದೂರದ ಸ್ವಿಜರ್ಲೆಂಡ್‌ನ ಆ ಜಾನಪದ ಹೀರೋ ತೋರಿದ್ದಕ್ಕಿಂತ ಹೆಚ್ಚಿನ ಸಾಹಸ ಮತ್ತು ತ್ಯಾಗ ತೋರಿದವರು ನಮ್ಮ ನಾಡಿನಲ್ಲಿದ್ದರು. ವಿಶ್ವದ ವಿವಿಧ ಭಾಗಗಳಲ್ಲಿ ವಸಾಹತುಗಳನ್ನು ಸ್ಥಾಪಿಸಲು, ಅಲ್ಲಿನ ಸಂಪತ್ತನ್ನು ಕೊಳ್ಳೆಹೊಡೆಯಲು ಯತ್ನಿಸಿದ ಯುರೋಪಿ ಯನ್ನರು ಅದೆಷ್ಟೋ ದೇಶಗಳಲ್ಲಿ ರಕ್ತದ ಹೊಳೆಯನ್ನೇ ಹರಿಸಿದರು. ಅವರ ಬರ್ಬರತೆಯನ್ನು, ಕುಟಿಲ ನೀತಿಯನ್ನು, ಅಮಾನುಷ ಆಕ್ರಮಣವನ್ನು ಎದುರಿಸಲು ಪ್ರಯತ್ನಿಸಿದ ಅದೆಷ್ಟೋ ಭಾರತೀಯ ಆಡಳಿತಗಾರರು ಸೋಲನ್ನು ಕಂಡರೂ, ತಮ್ಮ ಸಾಹಸ ವನ್ನು ಮೆರೆಯುವುದರಲ್ಲಿ ಮಾತ್ರ ಹಿಂಜರಿಯಲಿಲ್ಲ.
ಅಂತಹ ಆಡಳಿತಗಾರರಲ್ಲಿ ಮಹಿಳೆಯರೂ ಇದ್ದರು ಎಂಬುದು ನಮ್ಮ ನಾಡಿನ ಹೆಮ್ಮೆ. ಝಾನ್ಸಿ ರಾಣಿ ಲಕ್ಷ್ಮಿಬಾಯಿ, ಕಿತ್ತೂರು ರಾಣಿ ಚೆನ್ನಮ್ಮ ರಾಣಿಯರು ಬ್ರಿಟಿಷರ ಕುಟಿಲ ನೀತಿ ಮತ್ತು ಆಕ್ರಮಣದ ವಿರುದ್ಧ ಹೋರಾಡಿದ್ದು ದಿನಾಂಕ ಸಹಿತ ಸ್ಪಷ್ಟವಾಗಿ ದಾಖಲಾಗಿದೆ. ಅವರು ನಿಜವಾದ ಮಹಿಳಾ ಹೀರೋಗಳು. ಸ್ವಿಜರ್ಲೆಂಡ್‌ನ ವಿಲಿಯಂ ಟೆಲ್‌ನಂತಹ ವೈಭವೀಕೃತ ಜಾನಪದಹೀರೋಗಳಲ್ಲ.
ಈ ಮೂವರು ಮಹಿಳಾ ರಾಣಿಯರಿಗಿಂತ ಸುಮಾರು 300 ವರ್ಷಗಳಿಗೂ ಮುಂಚೆಯೇ ಯುರೋಪಿಯರನ್ನು ಧೈರ್ಯವಾಗಿ ಎದುರಿಸಿದರೂ, ಸಾಕಷ್ಟು ಪ್ರಚಾರ ದೊರೆಯದೇ ತೆರೆಯ ಮರೆಯಲ್ಲೇ ಉಳಿದವರಲ್ಲಿ, ಉಲ್ಲಾಳದ ರಾಣಿ ಅಬ್ಬಕ್ಕ ನೆನಪಾಗು ತ್ತಾಳೆ. ಸಾ.ಶ. 1520– 1618ರ ಅವಧಿಯಲ್ಲಿ ಕರ್ನಾಟಕದ ಕರಾವಳಿಯಲ್ಲಿ ಅಕ್ಷರಷಃ ಭಯೋತ್ಪಾದನೆ, ಲೂಟಿ ನಡೆಸುತ್ತಿದ್ದ ಪೋರ್ಚುಗೀಸರ ಪ್ರಬಲ ನೌಕಾ ಸೇನೆಯನ್ನು ಹಲವು ಬಾರಿ ಎದುರಿಸಿದ ಛಾತಿ ಅಬ್ಬಕ್ಕನದು.
ಅಬ್ಬಕ್ಕನ ಮಗಳು ಕಿರಿಯ ಅಬ್ಬಕ್ಕ ಸಹ ಪೋರ್ಚುಗೀಸರ ನೌಕಾಸೇನೆಯನ್ನು ಸಮರ್ಥವಾಗಿ ಎದುರಿಸುವ ಕಾರ್ಯವನ್ನುಮುಂದುವರಿಸಿದ್ದು ವಿಶೇಷ. ಉಲ್ಲಾಳ ಕೋಟೆಯಿಂದ ಆಳ್ವಿಕೆ ನಡೆಸುತ್ತಿದ್ದ ಈ ರಾಣಿಯ ಸಾಹಸವು ಜಾನಪದ ಕಥೆಗಳಲ್ಲಿ ಅಡಕಗೊಂಡಿದ್ದು ಮಾತ್ರವಲ್ಲ, ಭೂತಾರಾಧನೆಯಲ್ಲೂ ಸೇರಿಕೊಂಡಿದ್ದು, ಅಬ್ಬಕ್ಕ ದೇವಿಯು ಇಂದಿಗೂ ಭಕ್ತರ ಮೇಲೆ ಆವಾಹನೆಯಾಗುವುದು ವಿಶೇಷ. ಆ ಮೂಲಕ ಆಕೆಯ ಕಥೆಯು ನಾಲ್ಕು ನೂರು ವರುಷಗಳ ತನಕ ಜೀವಂತವಾಗಿದೆ!
ರಾಣಿ ಅಬ್ಬಕ್ಕ ಮತ್ತು ಆಕೆಯ ಮಗಳು ಕಿರಿಯ ಅಬ್ಬಕ್ಕ ಇವರನ್ನು ಕರಾವಳಿಯ ಜಾನಪದ ಕಥನಗಳು ಒಬ್ಬಳೇ ಎಂದು ಗುರುತಿಸುತ್ತವೆ. 1510ರಲ್ಲೇ ಗೋವಾದಲ್ಲಿ ತಮ್ಮ ವಸಾಹತನ್ನು ಸ್ಥಾಪಿಸಿದ್ದ ಪೋರ್ಚುಗೀಸರು, ಸಮುದ್ರ ಮಾರ್ಗದಲ್ಲಿಬಂದು ಕುಂದಾಪುರ, ಮಂಗಳೂರು ಮೊದಲಾದ ಬಂದರುಗಳ ಮೇಲೆ ದಾಳಿ ಮಾಡುತ್ತಿದ್ದರು. ಉಲ್ಲಾಳದ ರಾಣಿ ಅಬ್ಬಕ್ಕ ದೇವಿಯ ಆಡಳಿತವು ಅರಬ್ ಮತ್ತು ಇತರ ದೂರ ದೇಶಗಳೊಡನೆ ನೇರ ವ್ಯಾಪಾರ ನಡೆಸುತ್ತಿತ್ತು.
ಮೆಣಸು, ಅಕ್ಕಿ, ಸಂಬಾರ ಪದಾರ್ಥಗಳೇ ವ್ಯವಹಾರದ ಪ್ರಮುಖ ವಸ್ತುಗಳು. ತಮ್ಮ ವ್ಯಾಪಾರದ ನಡುವೆ ಮೂಗು ತೂರಿಸಿ, ಸುಂಕ ಕೊಡುವಂತೆ ಕೇಳಿದ ಪೋರ್ಚುಗೀಸರನ್ನು ಅಬ್ಬಕ್ಕ ದೇವಿ ಎದುರಿಸಿದಳು. ಗೋವಾದ ತಮ್ಮ ನೆಲೆಯಿಂದ ಸೈನ್ಯ ಕಟ್ಟಿಕೊಂಡು, ಹಡಗಿನಲ್ಲಿ ಬಂದು ಉಲ್ಲಾಳ ಮತ್ತು ಮಂಗಳೂರಿನಲ್ಲಿ ದಾಳಿ ಮಾಡುತ್ತಿದ್ದ ಪೋರ್ಚುಗೀಸರನ್ನು ಸುಮಾರುಎಂಟು ದಶಕಗಳ ಕಾಲ ವಿರೋಧಿಸಿ, ಸೋಲಿಸಿದ್ದು ಅಬ್ಬಕ್ಕ ರಾಣಿಯ (ಮತ್ತು ಮಗಳು ಅಬ್ಬಕ್ಕ) ಸಾಹಸ.
ಓರ್ವ ಮಹಿಳೆಯಾಗಿ ಪೋರ್ಚುಗೀಸರ ಪ್ರಬಲ ಸೈನ್ಯವನ್ನು ಮಣ್ಣು ಮುಕ್ಕಿಸಿದ ಅಬ್ಬಕ್ಕ ರಾಣಿಯ ಸಾಹಸ ಅತ್ಯಪೂರ್ವ. ನಮ್ಮ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದಕ್ಷಿಣ ಭಾರತದಲ್ಲೇ ಇಂತಹ ಸಾಹಸ ಮೆರೆದ ಇನ್ನೊಬ್ಬ ಮಹಿಳೆ ಆ ಕಾಲದಲ್ಲಿ ಇರಲಿಲ್ಲ. ಪೋರ್ಚುಗೀಸರ ಏಳು ಹಡಗುಗಳಿಗೆ ಬೆಂಕಿ ಇಟ್ಟು, ಸೇನಾ ಮುಖ್ಯಸ್ಥನನ್ನು ಸಾಯಿಸಿ, ಇತರ ಎಪ್ಪತ್ತು ಸೈನಿಕರನ್ನು ಸಾಯಿಸಿ, ಆಪಡೆಯು ಹೆದರಿ ಓಡಿಹೋಗುವಂತೆ ಮಾಡಿದ ಧೀರ ಮಹಿಳೆ ಇವಳು.
ಅಂದ ಹಾಗೆ ರಾಣಿ ಅಬ್ಬಕ್ಕನ ಕುರಿತು ಸಹ ನಮ್ಮ ಮಾಧ್ಯಮಿಕ ತರಗತಿಗಳಲ್ಲಿ ಒಂದು ಪಾಠವಿತ್ತು. ಸ್ಥಳೀಯ ಸೈನಿಕರೊಂದಿಗೆ, ರಾತ್ರಿ ವೇಳೆಯಲ್ಲಿ ತೆಂಗಿನ ಗರಿಗಳದೊಂದಿಯ ಸಹಾಯದಿಂದ ಪೋರ್ಚುಗೀಸರ ಹಡಗು ಗಳಿಗೆ ಬೆಂಕಿ ಇಟ್ಟರು ಎಂಬ ವಿವರ. ಆದರೆ, ಅಂದಿನ ದಿನಗಳಲ್ಲೇ ನಮ್ಮ ದೇಶದಲ್ಲಿ ನೌಕಾಪಡೆಗಳಿದ್ದವು ಎಂಬ ಐತಿಹಾಸಿಕ ವಿವರವು ಆ ಪಾಠದಲ್ಲಿರಲಿಲ್ಲ. ರಾಣಿ ಅಬ್ಬಕ್ಕಳ ಸಾಹಸವು ಕರ್ನಾಟಕದ ಇತರ ಭಾಗಗಳವರಿಗೆ ಇಂದಿಗೂ ಸಾಕಷ್ಟು ಅಪರಿಚಿತ ಎನಿಸಲು ಒಂದು ಐತಿಹಾಸಿಕಕಾರಣವೂ ಇದೆ.
ನಮ್ಮ ರಾಜ್ಯದ ಏಕೀಕರಣವಾಗುವ ತನಕ, ಮಂಗಳೂರು ಮತ್ತು ಉಲ್ಲಾಳವು ಮದರಾಸು ಪ್ರಾಂತ್ಯಕ್ಕೆ ಸೇರಿದ್ದರಿಂದಾಗಿ, ಹಳೆಯ ಮೈಸೂರಿ ನವರು ಅವನ್ನು ಬೇರೆ ರಾಜ್ಯ ಎಂದೇ ಪರಿಗಣಿಸುತ್ತಿದ್ದರು. ಸಹಜವಾಗಿ, ರಾಣಿ ಅಬ್ಬಕ್ಕದ್ವಯರ ಸಾಹಸಗಳು ಕರ್ನಾಟಕದಾದ್ಯಂತ ಪಡೆಯಬೇಕಾದ ಪ್ರಚಾರ, ಪ್ರಾಮುಖ್ಯತೆ ಪಡೆಯಲಿಲ್ಲ. ಇಂದು, ಹಿನ್ನೋಟದಿಂದ ಗಮನಿಸಿದರೆ, ರಾಣಿಅಬ್ಬಕ್ಕಳ ಸಾಹಸವು ಅದೆಷ್ಟು ಐತಿಹಾಸಿಕ ಪ್ರಾಮುಖ್ಯತೆಯುಳ್ಳದ್ದು ಎಂಬ ಅರಿವಾಗುತ್ತದೆ.
1520-1620ಅವಧಿಯಲ್ಲಿ ಗೋವಾದಿಂದ ಪದೇ ಪದೇ ನೌಕೆಗಳನ್ನೇರಿ ಬರುತ್ತಿದ್ದ ಪೋರ್ಚುಗೀಸರ ಸೈನ್ಯವನ್ನು ಉಲ್ಲಾಳದಅಬ್ಬಕ್ಕ (ಮತ್ತು ಮಗಳು ಅಬ್ಬಕ್ಕ) ಸದೆಬಡೆಯದೇ ಇದ್ದಿದ್ದರೆ, ಮಂಗಳೂರು ತನಕದ ಕರಾವಳಿಯು ಪೋರ್ಚುಗೀಸರ ವಸಾಹ ತಾಗುವ ಅವಕಾಶವಿತ್ತುಮತ್ತು ಅದಾಗಲೇ ಸ್ಥಾಪಿತವಾಗಿದ್ದ ಅವರ ಗೋವಾ ಪ್ರಾಂತ್ಯದ ಭಾಗವಾಗುತ್ತಿತ್ತು. ಆಗ, ಮಂಗಳೂರು ಬಂದರು, ಕುಂದಾಪುರ, ಕಾರವಾರ ಇಲ್ಲದ ಕರ್ನಾಟಕ ರೂಪು ಗೊಳ್ಳುವ ಸಾಧ್ಯತೆಯೂ ಇತ್ತು. ಅದೇ ಕಾಲಘಟ್ಟದಲ್ಲಿ ಗೋವಾದಲ್ಲಿ ಇನ್‌ಕ್ವಿಸಿಷನ್ ಮೂಲಕ ಪೋರ್ಚುಗೀಸರು ಹರಿಸಿದ ರಕ್ತದ ಹೊಳೆ ಮಂಗಳೂರಿನ ತನಕ ಹರಿದು ಬರುತ್ತಿತ್ತು.
ಮಂಗಳೂರು, ಕುಂದಾಪುರ ಮೊದಲಾದ ಕರಾವಳಿ ಪ್ರದೇಶಗಳು ಇಂದು ಕರ್ನಾಟಕದ ವ್ಯಾಪ್ತಿಯಲ್ಲಿ ಇವೆ ಎಂದರೆ, ಅದಕ್ಕೆ 1520-1620 ಅವಧಿಯಲ್ಲಿ ರಾಣಿ ಅಬ್ಬಕ್ಕ ಮತ್ತು ಕಿರಿಯ ಅಬ್ಬಕ್ಕ ನಡೆಸಿದ ನೌಕಾ ಸಾಹಸಗಳ ಕೊಡುಗೆ ಪ್ರಮುಖ. ಮಹಿಳೆ ಯೊಬ್ಬಳುತೋರಿದಇಂತಹ ಸಾಹಸದ ಕಥೆಯನ್ನು ಇಂದು ಮರುನಿರೂಪಿಸುವುದಕ್ಕೆ ಸಾಕಷ್ಟು ಐತಿಹಾಸಿಕ ದಾಖಲೆಗಳ ಕೊರತೆ ಇದೆ ಎಂದರೆ ನಿಮ್ಗೆಮ್ಮಗೆ ಅಚ್ಚರಿಯಾದೀತು!
ಬ್ರಿಟಿಷರು ನಮ್ಮ ದೇಶದಲ್ಲಿ ಭದ್ರವಾಗಿ ಕಾಲೂರುವುದಕ್ಕೆ ಬಹಳ ಮುಂಚೆ ನಡೆದ ಅಬ್ಬಕ್ಕನ ನೌಕಾ ಸಾಹಸಗಳು ವ್ಯವಸ್ಥಿತವಾಗಿದಾಖಲಾಗಿಲ್ಲ ಮತ್ತು ಲಭ್ಯವಿರುವ ದಾಖಲೆಗಳ ಸಮಗ್ರ ಅಧ್ಯಯನ, ಕ್ರೋಡೀಕರಣವೂ ನಡೆದಿಲ್ಲ. ಆ ಕಾಲಘಟ್ಟದಲ್ಲಿ ಉಲ್ಲಾಳದ ಮೇಲೆ ಪದೇ ಪದೆ ದಾಳಿ ಮಾಡಿ, ಹೆಚ್ಚಿನ ಬಾರಿ ಸೋಲನ್ನು ಅನುಭವಿಸಿದ ಪೋರ್ಚುಗೀಸರು ಬರೆದಿಟ್ಟ ದಾಖಲೆಗಳೇ ಇಂದು ಲಭ್ಯವಿರುವ ಪ್ರಮುಖ ಆಕರಗಳು. ಇತ್ತ, ಅಬ್ಬಕ್ಕನ ಕುರಿತು ಸ್ಥಳೀಯವಾಗಿ ಕೆಲವು ಶಾಸನಗಳು ದೊರಕಿದ್ದರೂ,ಅವುಗಳಲ್ಲಿ ದಾನ, ಪೂಜೆ ಮೊದಲಾದ ವಿವರಗಳೇ ಹೆಚ್ಚಾಗಿವೆ.
ಪೋರ್ಚುಗೀಸರ ಪತ್ರಾಗಾರ ದಲ್ಲಿ, ಗೋವಾದ ಹಳೆಯ ದಾಖಲೆಗಳಲ್ಲಿ ಹುದುಗಿ ಕುಳಿತಿರುವ ಹಲವು ವಿವರಗಳನ್ನು ಹೊರ ತೆಗೆಯುವ ಕಾರ್ಯಕ್ಕೆ ಇಂದಿಗೂ ವಿಪುಲ ಅವಕಾಶಗಳಿವೆ ಎಂಬ ವಿಚಾರವೇ ವಿಸ್ಮಯ ಹುಟ್ಟಿಸುತ್ತಿದೆ, ಈ 21ನೆಯ ಶತಮಾನದ ‘ಆಧುನಿಕ’ ಯುಗದಲ್ಲಿ. ಪೋರ್ಚುಗೀಸರ ಹಡಗುಗಳಿಗೆ ಬೆಂಕಿ ಇಡುವಲ್ಲಿ ಅಗ್ನಿವಾಣ (ಅಗ್ನಿಬಾಣ)ವನ್ನು ಉಪಯೋಗಿಸುವಲ್ಲಿಅಬ್ಬಕ್ಕನ ಸೇನೆ ಪರಿಣಿತವಾಗಿತ್ತು ಎಂಬ ವಿಚಾರ ಅಚ್ಚರಿ ಹುಟ್ಟಿಸುತ್ತದೆ.
ಸ್ಥಳೀಯ ನಂಬಿಕೆಗಳ ಪ್ರಕಾರ ಎಂಟು ಯುದ್ಧಗಳಲ್ಲಿ ಅಗ್ನಿಬಾಣಗಳನ್ನು ಅಬ್ಬಕ್ಕ ಪ್ರಯೋಗಿಸಿ ದ್ದಳು ಮತ್ತು ಆಕೆಯ ನಂತರ ಆ ಸಮರ ಕಲೆ ಕಣ್ಮರೆ ಯಾಯಿತೆಂದೂ ಹೇಳಲಾಗಿದೆ. 1525ರಲ್ಲಿ ಪೋರ್ಚುಗೀಸರು ಮೊದಲ ಬಾರಿ ಮಂಗಳೂರಿನ ಮೇಲೆ ದಾಳಿ ಮಾಡಿ, ಅಲ್ಲಿನ ಬಂದರನ್ನು ನಾಶ ಮಾಡುತ್ತಾರೆ. 1555ರಲ್ಲಿ ಪೋರ್ಚುಗೀಸ್ ಅಡ್ಮಿರಲ್ ಡಾನ್ ಅಲ್ವರೋ ಡ ಸಿಲವೇರಿಯಾ ಎಂಬಾತ ಉಲ್ಲಾಳದ ಮೇಲೆ ದಿಗ್ಬಂಧನ ವಿಧಿಸಿ, ಹೆಚ್ಚಿನ ಸುಂಕ ಕೊಡುವಂತೆ ಹೇಳಿದಾಗ, ಅಬ್ಬಕ್ಕನ ಸೇನೆ ಆತನನ್ನು ಹಿಮ್ಮೆಟ್ಟಿಸುತ್ತದೆ.
1558ರಲ್ಲಿ ಮತ್ತೊಮ್ಮೆ ಪೋರ್ಚುಗೀಸರು ಮಂಗಳೂರಿನ ಮೇಲೆ ದಾಳಿ ಮಾಡಿ, ಸಾಕಷ್ಟು ಹಾನಿ ಮಾಡುತ್ತಾರೆ. 1567ರಲ್ಲಿ ಉಲ್ಲಾಳದ ಮೇಲೆ ದಾಳಿ ಮಾಡಿದ ಪೋರ್ಚುಗೀಸ್ ನೌಕಾದಳವನ್ನು ಅಬ್ಬಕ್ಕ ಸೋಲಿಸುತ್ತಾಳೆ. 1567ರಲ್ಲಿ ಜೋ ಯಾಪೀಕ್ಸೋಟೋ ಎಂಬ ಸೇನಾನಿಯ ನೇತೃತ್ವದಲ್ಲಿ ಉಲ್ಲಾಳದ ಮೇಲೆ ದಾಳಿ ಮಾಡಿದ ಪೋರ್ಚುಗೀಸರು, ಉಲ್ಲಾಳವನ್ನುಸ್ವಾಧೀನ ಪಡಿಸಿಕೊಳ್ಳುತ್ತಾರೆ. ಅವರ ಕೈಗೆ ಸಿಗದೇ ತಪ್ಪಿಸಿಕೊಂಡ ರಾಣಿಯು, ರಾತ್ರಿ ಹೊತ್ತಿನಲ್ಲಿ 200 ಸೈನಿಕರ ನೆರವಿನಿಂದ ಪೋರ್ಚುಗೀಸರ ಹಡಗುಗಳ ಮೇಲೆ ದಾಳಿ ನಡೆಸಿ, ಪೀಕ್ಸೋಟೋ ಮತ್ತು 70 ಸೈನಿಕರನ್ನು ಸಾಯಿಸುತ್ತಾಳೆ.
1568ರಲ್ಲಿ ಪುನಃ ದಾಳಿ ಮಾಡಿದ ಪೋರ್ಚುಗೀಸರ ಸೇನೆಯನ್ನು ಸೋಲಿಸಿ, ಜನರಲ್ ಮಾಸ್ಕರೆನ್ಹಾಸ್‌ನನ್ನು ಸಾಯಿಸುತ್ತದೆ ಈಕೆಯ ಸೈನ್ಯ. 1569ರಲ್ಲಿ ಪೋರ್ಚುಗೀಸರು ಕುಂದಾಪುರ ಮತ್ತು ಮಂಗಳೂರನ್ನು ಆಕ್ರಮಿಸುತ್ತಾರೆ.1570ರಲ್ಲಿ ಅಬ್ಬಕ್ಕರಾಣಿಯು ಕಲ್ಲಿಕೋಟೆ ದೊರೆಯ ನೌಕಾ ಸೇನೆಯ ನಾಯಕ ಕುಟ್ಟಿಪೋಕ್ರೆಯ ಸಹಾಯ ಪಡೆದು, ಮಂಗಳೂರಿನಲ್ಲಿದ್ದಪೋರ್ಚುಗೀಸರ ಕೋಟೆಯ ಮೇಲೆ ಆಕ್ರಮಣ ಮಾಡುತ್ತಾಳೆ. ಆದರೆ, ಪೋರ್ಚುಗೀಸರು ರಾಣಿ ಅಬ್ಬಕ್ಕನ ಗಂಡನಿಗೆ ಆಮಿಷ ತೋರಿಸಿ, ಅವನ ಸಹಾಯದಿಂದ ಅಬ್ಬಕ್ಕಳನ್ನು ಸೆರೆ ಹಿಡಿಯುತ್ತಾರೆ.
ಸೆರಮನೆಯಲ್ಲೂ ಹೋರಾಟ ತೋರುವ ಅಬ್ಬಕ್ಕ ಅಲ್ಲೇ ಸಾಯುತ್ತಾಳೆ. ಕಿರಿಯ ಅಬ್ಬಕ್ಕ ರಾಣಿಯು (1595-1640) ಕೆಳದಿ ವೆಂಕಟಪ್ಪ ನಾಯಕನ ನೆರವು ಪಡೆದು, ಪೋರ್ಚುಗೀಸರನ್ನು ದೂರವಿಡುವಲ್ಲಿ ಯಶಸ್ವಿಯಾಗುತ್ತಾಲೆ. ಈಕೆಯ ಸೈನಿಕರು1618ರಲ್ಲಿ ಪೋರ್ಚುಗೀಸರ ಏಳು ಹಡಗು ಗಳಿಗೆ  ಉಲ್ಲಾಳದ ಸಮುದ್ರದಲ್ಲಿ ಬೆಂಕಿ ಹಚ್ಚಿದರು. ಆದರೆ ಈಕೆ ಸಹ ತನ್ನ ಗಂಡನಾದ ನರಸಿಂಹ ಲಕ್ಷ್ಮಪ್ಪ ಬಂಗರಸನಿಂದ ಮೋಸಕ್ಕೆ ಒಳಗಾಗುತ್ತಾಳೆ. ಆತ ಪೋರ್ಚುಗೀಸರೊಡನೆ ಕೈಜೋಡಿಸಿ, ಈಕೆಗೆ ಸಾಕಷ್ಟು ಕಷ್ಟ, ನೋವು ತಂದ. ಇಲ್ಲಿನ ಇಸವಿಗಳನ್ನು ನೋಡಿದರೇ ಗೊತ್ತಾಗುತ್ತದೆ, ಪೋರ್ಚುಗೀಸರು ಅದ್ಯಾವ ಪರಿ ನಮ್ಮ ಕರಾವಳಿಯಲ್ಲಿ ದಾಂಧಲೆ ನಡೆಸುತ್ತಿದ್ದರು ಎಂದು.
ರಾಣಿ ಅಬ್ಬಕ್ಕರ ಜೀವನದ ವಿವರಗಳು, ನೌಕಾ ಸಾಹಸದ ವಿವರಗಳು ತುಸು ಅಸ್ಪಷ್ಟ. ಈ ಧೀರ ಮಹಿಳೆಯರ ಇತಿಹಾಸವನ್ನು ಕಟ್ಟಿಕೊಡಲು ಇನ್ನಷ್ಟು ದಾಖಲೆಗಳು ಅಗತ್ಯ. ಅದೇನಿದ್ದರೂ, ರಾಣಿ ಅಬ್ಬಕ್ಕನನ್ನು ನಮ್ಮ ನಾಡು ಈಚೆಗೆ ಗುರುತಿಸಲು ಆರಂಭಿಸಿದೆ. ಉಲ್ಲಾಳದಲ್ಲಿ 1997ರಲ್ಲಿ ವೀರರಾಣಿ ಅಬ್ಬಕ್ಕ ಉತ್ಸವ ಆರಂಭಗೊಂಡಿತು.
15.1.2003ರಂದು ಆಕೆಯ ಗೌರವಾರ್ಥ ಅಂಚೆಚೀಟಿ ಯನ್ನು ಹೊರ ತರಲಾಗಿದೆ. ಕರಾವಳಿ ರಕ್ಷಣಾಪಡೆಯನೌಕೆಯೊಂದಕ್ಕೆ ಆಕೆಯ ಹೆಸರಿಡಲಾಗಿದೆ. ಈಕೆಯ ಕುರಿತು ಬಹುಭಾಷಾ ಸಿನಿಮಾವೊಂದನ್ನು ಮಂಜುನಾಥ ಸೋಮಶೇಖರ ರೆಡ್ಡಿ ನಿರ್ಮಿಸಲು ಮುಂದಾಗಿದ್ದು, ಈಚಿನ ಬೆಳವಣಿಗೆ.
ಆದರೆ, ಅಬ್ಬಕ್ಕ ನಡೆಸಿದ ಸಾಹಸವು ಈ ಎಲ್ಲಾ ಗೌರವಗಳಿಗಿಂತ ಮಿಗಿಲಾದುದು. ನಮ್ಮ ದೇಶವನ್ನು ವಸಾಹತೀಕರಣಕ್ಕೆ ಒಳಪಡಿಸಲು ಪೋರ್ಚುಗೀಸ್, ಡಚ್, ಇಂಗ್ಲೆಂಡ್ ಮೊದಲಾದ ದೇಶಗಳು ಪ್ರಯತ್ನ ನಡೆಸುತ್ತಿದ್ದ ಆರಂಭಕಾಲದಲ್ಲಿ (1520-1620), ಪ್ರಬಲ ನೌಕಾಪಡೆ ಹೊಂದಿದ್ದ ಪೋರ್ಚುಗೀಸರನ್ನು ಹಲವು ಬಾರಿ ಸೋಲಿಸಿ, ಮಂಗಳೂರನ್ನು ನಮಗೆ ರಕ್ಷಿಸಿಕೊಟ್ಟ ಅಬ್ಬಕ್ಕನ ನೌಕಾ ಸಾಹಸಕ್ಕೆ ಸಮಾನ ಎನಿಸುವ ಸಾಹಸ ಆ ಕಾಲಘಟ್ಟದಲ್ಲಿ ಇನ್ನೊಂದಿಲ್ಲ.
ಹದಿನಾರನೆಯ ಶತಮಾನದಲ್ಲಿ ಈ ತೆರನ ಸಾಹಸ ತೋರಿದ ಇನ್ನೊಬ್ಬ ಮಹಿಳೆ ಭಾರತದಲ್ಲಿರಲಿಲ್ಲ. ಈ ನಿಟ್ಟಿನಲ್ಲಿ ಅಬ್ಬಕ್ಕ ರಾಣಿ ಮತ್ತು ಆಕೆಯ ಮಗಳ ಆಡಳಿತ ವಿವರ, ನೌಕಾಸಾಹಸದ ವಿವರಗಳು ಇನ್ನಷ್ಟು ನಿಖರವಾಗಿ, ಸ್ಪಷ್ಟವಾಗಿ ದಾಖಲಾಗಬೇಕಾದ ಅಗತ್ಯವಿದೆ ಮತ್ತು ಅಂತಹ ವಿವರಗಳು ನಮ್ಮ ಪಠ್ಯಗಳಲ್ಲೂ ಸೇರಬೇಕಾಗಿದೆ.