ಬಂಗಾಳ ಚುನಾವಣೆ: ಅಸ್ಮಿತೆ ವರ್ಸಸ್‌ ಎನ್‌ಆರ್‌ಸಿ
ಅವಲೋಕನ
ಕುಮಾರ್‌ ಶೇಣಿ
ಪಂಚ ರಾಜ್ಯಗಳಲ್ಲಿ ವಿಧಾನ ಸಭಾ ಚುನಾವಣೆ ಘೋಷಣೆಯಾಗಿದೆ. ಅದರಲ್ಲಿ ಪ್ರಮುಖವಾದುದು ಬಂಗಾಳದ ಚುನಾವಾಣೆ. ಕೇರಳ, ತಮಿಳುನಾಡು, ಪುದುಚೇರಿಯಲ್ಲಿ ಒಂದೇ ಹಂತದಲ್ಲಿ ಮತದಾನ ನಡೆದರೆ, ಅಸ್ಸಾಂನಲ್ಲಿ ಮೂರು ಹಂತಗಳಲ್ಲಿಮತ್ತು ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದೆ.
ಇವುಗಳಲ್ಲಿ ಪ್ರಮುಖವಾದುದು ಬಂಗಾಳದ ಚುನಾವಣೆ. ದೀದಿಯ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಲು ಮೋದಿ ಸೇರಿದಂತೆ ಹಲವು ರಾಜಕೀಯ ನಾಯಕರು ಪ್ರಯತ್ನಿಸುತ್ತಿದ್ದಾರೆ. ಆದರೆ ಯಶಸ್ಸು ಸಿಗುವುದು ಯಾರಿಗೆ ಎಂಬುದು ಫಲಿತಾಂಶದ ನಂತರವಷ್ಟೇ ತಿಳಿಯುವುದು. ಆದರೆ ಪಶ್ಚಿಮ ಬಂಗಾಳದ ಚುನಾವಣೆ ಹಲವು ವಿಚಾರಗಳಿಗೆ ಪ್ರಾಮುಖ್ಯತೆ ಯನ್ನು ಪಡೆದುಕೊಳ್ಳುವುದು ನಿಶ್ಚಿತ.
ಮೂರು ದಶಕಗಳ ಕಾಲ ಪಶ್ಚಿಮ ಬಂಗಾಳವನ್ನು ತನ್ನ ಭದ್ರಕೋಟೆ ಮಾಡಿಕೊಂಡಿದ್ದ ಕಮ್ಯುನಿಸ್ಟರನ್ನು ಸೋಲಿಸಿ, ಬಂಗಾಳ ವನ್ನು ತನ್ನದೇಶ ಭದ್ರಕೋಟೆಯನ್ನಾಗಿಸಲು ಮಮತಾ ತೆಗೆದುಕೊಂಡ ಸಮಯ ಕೇವಲ ಒಂದು ದಶಕವಷ್ಟೇ. ಆದರೆ ಅದೇ ದೀದಿಯ ಸಾಮ್ರಾಜ್ಯ ಮೋದಿಯ ಹೊಡೆತಕ್ಕೆ ಸಿಕ್ಕಿ ಛಿದ್ರವಾಗುವುದೇ ಎಂಬ ಭಯವೂ ಕೂಡ ಮಮತಾ ಬ್ಯಾನರ್ಜಿಯಲ್ಲಿ ಮೂಡುತ್ತಿದೆ.
ಬಂಗಾಳದಲ್ಲಿ ಬಿಜೆಪಿಗೆ ಗಟ್ಟಿಯಾದ ಬೆರು ಇಲ್ಲದಿದ್ದರೂ, ಅದು ಸಾಗುತ್ತಿರುವ ಹಾದಿ ನೋಡಿದರೆ ತೃಣಮೂಲ ಕಾಂಗ್ರೆಸ್ ಅನ್ನು ಬದಿಗಟ್ಟುವ ಎಲ್ಲಾ ಸಾಧ್ಯತೆಗಳು ಕಂಡುಬರುತ್ತಿವೆ. ಮೊದಲಿನಿಂದಲೂ ಬಂಗಾಳದಲ್ಲಿ ಕಮ್ಯುನಿಸ್ಟರು ಮತ್ತು ಇತರರದ್ದೇ ಕಾರುಬಾರು. ಸ್ವಾತಂತ್ರ್ಯ ನಂತರದ ಅವಧಿಯಲ್ಲಿ ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ಅಬ್ಬರ. ಕಾಂಗ್ರೆಸ್ ತನ್ನ ಹಿಡಿತ ಕಳೆದು ಕೊಂಡಾಗ ಕಮ್ಯುನಿಸ್ಟರು ಮೂರು ದಶಕಗಳ ಕಾಲ ಬಂಗಾಳವನ್ನು ಆಳಿದರು.
ಅವರ ಆಡಳಿತಕ್ಕೆ ಅಂತ್ಯ ಹಾಡಿದ್ದು ಕಾಂಗ್ರೆಸ್‌ನಿಂದ ಹೊರ ಬಂದು ತೃಣ ಮೂಲ ಕಾಂಗ್ರೆಸ್ ಕಟ್ಟಿದ್ದ ಮಮತಾ ಬ್ಯಾನರ್ಜಿ. ಯಾವುದೇ ವ್ಯಕ್ತಿಯನ್ನು ಎದುರು ಹಾಕಿಕೊಳ್ಳುವ ತಾಕತ್ತು ದೀದಿಯನ್ನು ಮುಖ್ಯಮಂತ್ರಿ ಪಟ್ಟಕ್ಕೆ ಏರಿಸಿತ್ತು. ಆದರೆ ಬಿಜೆಪಿಗೆ ಪಶ್ಚಿಮ ಬಂಗಾಳದಲ್ಲಿ ಮೊದಲ ಪ್ರಬಲ ಹೋರಾಟ ಎನ್ನಬಹುದು.
2016ರ ಚುನಾವಣೆಯಲ್ಲಿ ಒಟ್ಟು 290 ವಿಧಾನ ಸಭಾ ಕ್ಷೇತ್ರಗಳಲ್ಲಿ ಕೇವಲ ಮೂರು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಬಿಜೆಪಿ ಇಂದು ದೀದಿಯನ್ನೇ ಬೆದರಿಸುತ್ತಿದೆ ಎಂದರೆ ಅದರ  ಸಾಧನೆಯನ್ನು ಮೆಚ್ಚತಕ್ಕದ್ದೇ. 2016ರ ವಿಧಾನಸಭಾ ಚುನಾವಣೆಯ ನಂತರ ಬಿಜೆಪಿ ಬಂಗಾಳದಲ್ಲಿ ನಿಧಾನವಾಗಿ ಬೆಳೆಯತೊಡಗಿತು. ಆಗ ಮಮತಾ ಬ್ಯಾನರ್ಜಿ ಉಪಯೋಗಿಸಿದ ತಂತ್ರವೇಬಂಗಾಳದ ಅಸ್ಮಿತೆ. ಮುಂದೊಂದು ದಿನ ಬಿಜೆಪಿಯಿಂದ ತನಗೆ ತೊಡಕಾಗಬಹುದು ಎಂಬ ಆಲೋಚನೆಯಿಂದಲೇ, ಅವರನ್ನು ಹೊರಗಿನವರು ಎಂಬ ರೀತಿ ಚಿತ್ರಿಸುವ ಪ್ರಯತ್ನವನ್ನು ಮಮತಾ ಮಾಡಿದರು.
ಆದರೆ 2019ರ ಲೋಕಸಭಾ ಚುನಾವಣೆ ದೀದಿಯ ಎಲ್ಲಾ ಲೆಕ್ಕಾಚಾರಗಳನ್ನು ಉಲ್ಟಾಪಲ್ಟಾ ಮಾಡಿತು. 42 ಲೋಕ ಸಭಾ ಕ್ಷೇತ್ರಗಳಲ್ಲಿ 18ನ್ನು ತನ್ನದಾಗಿಸಿಕೊಳ್ಳುವ ಮೂಲಕ ಬಿಜೆಪಿ ತನ್ನ ಪ್ರಾಬಲ್ಯತೆಯನ್ನು ಮೆರೆಯಿತು. ಬಿಜೆಪಿಗೆ ಬಂಗಾಳದಅಸ್ಮಿತೆಗೆ ಪರಿಚಯವಿಲ್ಲ, ಹೊರಗಿನವರನ್ನು ಬಂಗಾಳಿಗಳು ಒಪ್ಪಿಕೊಳ್ಳುವುದಿಲ್ಲ ಎಂಬ ಮಮತಾ ಊಹೆ ತಪ್ಪಾಯಿತು.ಅಲ್ಲಿಂದಲೆ ಆರಂಭವಾಗಿದ್ದು ‘ಬಾಂಗ್ಲಾರ್ ಗೂರ್ಬೊ ಮಮತಾ’ ಅಭಿಯಾನ.
ಬಾಂಗ್ಲಾರ್ ಗೂರ್ಬೊ ಎಂಬುದರ ಅರ್ಥ ಬಂಗಾಳಿಯರ ಹೆಮ್ಮೆ. ಮಮತಾ ಬ್ಯಾನರ್ಜಿ ಬಂಗಾಳಿಯರ ಹೆಮ್ಮೆ ಎಂಬುದು ಈ ಸಾಲಿನ ಅರ್ಥ. ಬಂಗಾಳದ ಅಸ್ಮಿತೆ ಎಂಬುದು ತೃಣಮೂಲ ಕಾಂಗ್ರೆಸ್‌ಗೆ ಮಾತ್ರ ಅನ್ವಯ ವಾಗುವುದು. ಹೊರಗಿನಿಂದ ಬಂದ ಬಿಜೆಪಿಯವರಿಗೆ ಅದು ಅರಿವಾಗುವುದಿಲ್ಲ ಎಂಬುದು ಮಮತಾ ವಾದ. ಹೀಗಾಗಿ ಅದೇ ಬಂಗಾಳದ ಅಸ್ಮಿತೆಯನ್ನು ಮುಂದಿಟ್ಟು ಕೊಂಡು ಮಮತಾ ಚುನಾವಣೆಯನ್ನು ಎದುರಿಸುತ್ತಿದ್ದಾರೆ. ಆದರೆ ಬಂಗಾಳದ ಅಸ್ಮಿತೆಗೆ ವಿರುದ್ಧವಾಗಿ ಬಿಜೆಪಿ ಬಳಸುತ್ತಿರುವಆಯುಧವೇ ಎನ್‌ಆರ್‌ಸಿ.
ಪೌರತ್ವದ ವಿಚಾರಗಳು ಬಂದಾಗಲೆಲ್ಲಾ ಮಮತಾ ಬ್ಯಾನರ್ಜಿ ಕೆಂಡಾಮಂಡಲವಾಗುವುದು ಸರ್ವೇಸಾಮಾನ್ಯ. ಪೌರತ್ವ ತಿದ್ದುಪಡಿ ಕಾಯಿದೆ ಬಂದಾಗಲೂ ಮಂಚೂಣಿಯಲ್ಲಿ ನಿಂತು ಹೋರಾಡಿದ್ದರು. ಈಗ ಕೂಡ ಬಂಗಾಳದಲ್ಲಿ ಪೌರತ್ವ ತಿದ್ದುಪಡಿ ಕಾಯಿದೆಯನ್ನು ಅನುಷ್ಠಾನ ಮಾಡಲು ಬಿಡುವುದಿಲ್ಲ ಎಂದೇ ಹೇಳುತ್ತಿದ್ದಾರೆ. ಆದರೆ ಇದರ ಜತೆಗೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಎನ್‌ಆರ್‌ಸಿ ಎಂಬ ಹೊಸ ಬಾಂಬ್ ಒಂದನ್ನು ಹಾಕಿದೆ.
ಈ ಅಸ್ತ್ರಗಳನ್ನು ಚುನಾವಣೆಯಲ್ಲಿ ಬಿಜೆಪಿ ಸಮರ್ಥವಾಗಿ ಬಳಸುವ ಆಲೋಚನೆಯಲ್ಲಿದೆ. ಒಟ್ಟಿನಲ್ಲಿ ಇದು ಬಂಗಾಳದ ಅಸ್ಮಿತೆಮತ್ತು ಪೌರತ್ವ ವಿಚಾರದ ನಡುವೆ ನಡೆಯುತ್ತಿರುವ ಚುನಾವಣೆ ಎಂದೇ ಹೇಳಬಹುದು. ಅಕ್ರಮ ವಲಸಿಗರ ವಿಚಾರಕ್ಕೆ ಬಂದಾಗ ಸದ್ಯಕ್ಕೆ ಈಶಾನ್ಯ ರಾಜ್ಯಗಳಲ್ಲಿ ಮೊದಲಿನ ಸ್ಥಾನದಲ್ಲಿ ನಿಲ್ಲುವುದು ಪಶ್ಚಿಮ ಬಂಗಾಳವೇ. ಅಕ್ರಮ ವಲಸಿಗರಿಗೆ ಮಮತಾ ಬ್ಯಾನರ್ಜಿ ಎಲ್ಲಾ ರೀತಿಯ ಅನುಕೂಲಗಳನ್ನು ಮಾಡಿಕೊಟ್ಟಿದೆ.
ಇದರಿಂದ ದೇಶದ ಆಂತರಿಕ ಭದ್ರತೆಗೆ ಧಕ್ಕೆ ಉಂಟಾಗುತ್ತಿದೆ ಎಂಬುದು ಬಿಜೆಪಿಯ ವಾದ. ಇದಕ್ಕೆ ಸಾಕ್ಷಿಯಾಗಿ ಬಂಗಾಳದಲ್ಲಿ ಹಲವು ವಿದ್ಯಮಾನಗಳು ಕೂಡ ನಡೆಯುತ್ತಿವೆ. ರಾಷ್ಟ್ರೀಯ ಪೌರತ್ವ ನೋಂದಣಿಯ ಮೂಲಕ ಅಕ್ರಮ ವಲಸಿಗರನ್ನು ಹೊರ ಹಾಕಲಾಗುವುದು ಎಂಬ ಕೇಂದ್ರ ಸರಕಾರದ ಹೇಳಿಕೆ ಮಮತಾ ಬ್ಯಾನರ್ಜಿ ಯನ್ನು ದಿಕ್ಕು ತಪ್ಪಿಸುತ್ತಿದೆ ಎಂಬುದು ಕಟು ಸತ್ಯ. ಹಾಗಾಗಿ ಬಂಗಾಳದ ಅಸ್ಮಿತೆಯ ಹೆಸರಿನಲ್ಲಿ ತೃಣಮೂಲ ಕಾಂಗ್ರೆಸ್ ಅಕ್ರಮ ವಲಸಿಗರನ್ನು ಸಲಹುತ್ತಿದೆ ಎಂಬುದು ಬಿಜೆಪಿಯ ವಾದ.
ಬಿಜೆಪಿ ಹೆಚ್ಚಿನ ಕಡೆಗಳಲ್ಲಿ ತನ್ನ ನೆಲೆಯನ್ನು ವಿಸ್ತರಿಸಿಕೊಂಡಿದ್ದು ಮೋದಿಯ ಕಾಲಾವಧಿಯಲ್ಲಿಯೇ. ಉತ್ತರ ಪ್ರದೇಶದಂಥ ದೊಡ್ಡ ರಾಜ್ಯವನ್ನು ಮತ್ತೆ ತನ್ನ ಬಗಲಿಗೆ ಹಾಕಿಕೊಂಡದ್ದು ಮೋದಿಯ ಹೆಸರಿನಲ್ಲಿಯೇ. ಯೋಗಿ ಆದಿತ್ಯನಾಥ್ ನಂತರ ಪ್ರಚಲಿತಕ್ಕೆ ಬಂದ ಹೆಸರು. ಹಾಗೆಯೇ ಪಶ್ಚಿಮ ಬಂಗಾಳದಲ್ಲಿಯೂ ಚುನಾವಣೆ ಎದುರಿಸುತ್ತಿರುವುದು ಮೋದಿಯ ಹೆಸರಿನಲ್ಲಿಯೇ. ಬಂಗಾಳವನ್ನು ಗೆದ್ದರೆ ಯಾರು ಮುಖ್ಯಮಂತ್ರಿಯಾಗಬಹುದು ಎಂಬುದಕ್ಕೆ ಬಿಜೆಪಿಯ ನಾಯಕರಲ್ಲಿಯೇಸ್ಪಷ್ಟತೆಯಿಲ್ಲ. ಇದು ಮಮತಾ ಬ್ಯಾನರ್ಜಿಗೆ ವರವಾಗಬಹುದು ಎನ್ನಬಹುದಾದರೂ, ಪೂರ್ತಿಯಾಗಿ ನಂಬುವ ಹಾಗೇ ಇಲ್ಲ.
ಬಂಗಾಳಿ ಅಸ್ಮಿತೆ ಮತ್ತು ರಾಷ್ಟ್ರೀಯ ಅಸ್ಮಿತೆಯ ಹೋರಾಟದ ನಡುವೆಯೂ, ಮತ್ತೊಂದಿಷ್ಟು ವಿಚಾರಗಳು ಬಂಗಾಳದ ರಾಜಕಾರಣದಲ್ಲಿ ಹೊರಳಾಡುತ್ತಿವೆ. ಬಂಗಾಳ ದಲ್ಲಿ ಮುಸ್ಲಿಂ ಜನಸಂಖ್ಯೆ ಶೇಕಡಾ 30ರಷ್ಟಿದೆ. ಇದು ಯಾವ ಕಡೆಗೆ ಸಾಗುತ್ತದೆ ಎಂಬುದು ಬಹಳ ಪ್ರಮುಖವಾಗುತ್ತದೆ. ಅಸಾದುದ್ದೀನ್ ಓವೈಸಿ ಈಗಾಗಲೇ ಪಶ್ಚಿಮ ಬಂಗಾಳದತ್ತ ಕಣ್ಣುಹಾಯಿಸಿದ್ದಾರೆ. ಅವರ ಪಕ್ಷ ಮುಸಲ್ಮಾನರ ಮತವನ್ನು ಸೆಳೆದರೆ ಅದು ಮಮತಾ ಬ್ಯಾನರ್ಜಿಗೆ ದೊಡ್ಡ ಹೊಡೆತವೇ.
ಇನ್ನೊಂದೆಡೆ ದೀದಿಯ ಹಿಂದೂ ವಿರೋಧಿ ನೀತಿಗಳು ಈಗಾಗಲೇ ತೃಣಮೂಲ ಕಾಂಗ್ರೆಸ್‌ಗೆ ಒಂದಿಷ್ಟು ಪೆಟ್ಟು ನೀಡಿದೆ. ಹಿಂದೂ ಗಳ ಮತ ಬಿಜೆಪಿಯತ್ತ ವಾಲಿರುವುದು 2019ರ ಲೋಕಸಭಾ ಚುನಾವಣೆಯಲ್ಲಿಯೇ ಅರಿವಾಗಿದೆ. ಇದರ ಜತೆಗೆ ಇನ್ನೊಂದಿಷ್ಟು ಮತ ಅತ್ತ ವಾಲಿದರೆ ಮಮತಾ ಸೋತಂತೆಯೇ. ಬಂಗಾಳಿಗಳ ನೆಲ ಇಂದು ಸಂಪೂರ್ಣವಾಗಿ ಬದಲಾಗಿರುವುದು ಸತ್ಯ. ಒಂದು ಕಾಲದಲ್ಲಿ ಕಮ್ಯುನಿಸ್ಟರು ಮತ್ತು ಕಾಂಗ್ರೆಸ್ಸಿಗರ ಹೋರಾಟಕ್ಕೆ ಈ ನೆಲ ಸಾಕ್ಷಿಯಾದರೆ, ನಂತರ ತೃಣಮೂಲ ಮತ್ತು ಕಮ್ಯುನಿಸ್ಟರ ಹೋರಾಟಕ್ಕೆ ಸಾಕ್ಷಿಯಾಯಿತು.
ಇಂದು ಬಿಜೆಪಿ ಮತ್ತು ತೃಣಮೂಲ ಕಾಂಗ್ರೆಸ್‌ನ ಹೋರಾಟಕ್ಕೆ ಅಣಿಯಾದಂತಿದೆ. ಒಟ್ಟಿನಲ್ಲಿ ಬಂಗಾಳ ರಕ್ತರಂಜಿತ ರಾಜಕಾರಣಕ್ಕೆ ಎಲ್ಲಾ ಕಾಲಗಳಲ್ಲಿಯೂ ಸಾಕ್ಷಿಯಾಗಿದೆ. ಕಮ್ಯುನಿಸ್ಟರು ಆರಂಭಿಸಿದ ರಕ್ತಪಾತದ ರಾಜಕಾರಣವನ್ನು ಇಂದು ತೃಣಮೂಲ ಕಾಂಗ್ರೆಸ್ ಮುಂದುವರಿಸುತ್ತಿದೆ. ನೂರಾರು ಬಿಜೆಪಿಯ ಕಾರ್ಯಕರ್ತರು ಬಲಿಯಾಗುತ್ತಿರುವುದು ಇದಕ್ಕೆ ಸಾಕ್ಷಿ.ಬಂಗಾಳಿ ಮತ್ತು ರಾಷ್ಟ್ರೀಯ ಅಸ್ಮಿತೆಗಳ ಹೋರಾಟದಲ್ಲಿ ದೀದಿ ಹೊಡೆತಗಳನ್ನು ತಿನ್ನುತ್ತಲೇ ಬರುತ್ತಿದ್ದಾರೆ.
ತೃಣಮೂಲ ಕಾಂಗ್ರೆಸ್‌ನ ನಾಯಕರು ಸಾಲು ಸಾಲಾಗಿ ಬಿಜೆಪಿ ಸೇರುತ್ತಿದ್ದಾರೆ. ಸಿಎಎ ಮತ್ತು ಎನ್‌ಆರ್‌ಸಿ ವಿಚಾರಗಳನ್ನು ಮಮತಾ ಪ್ರಸ್ತಾಪ ಮಾಡುತ್ತಿದ್ದರೂ, ಉಳಿದ ಬಿಜೆಪಿ ವಿರೋಧಿಗಳಿಂದ ಅಷ್ಟಾಗಿ ಬೆಂಬಲ ದೊರಕುತ್ತಿಲ್ಲ. ಕಾಂಗ್ರೆಸ್ ಬಂಗಾಳ ದಲ್ಲಿ ತನ್ನ ಅಸ್ಮಿತೆಯನ್ನು ಕಳೆದುಕೊಂಡು ಹಲವಾರು ವರುಷಗಳೇ ಕಳೆದುಹೋಗಿದೆ. ಕಮ್ಯುನಿಸಂ ಮರೆಯಾಗುತ್ತಿದೆ. ಒಟ್ಟಿನಲ್ಲಿ ಈ ಹೋರಾಟ ದಲ್ಲಿ ಗೆಲ್ಲುವವರಾರು ಎಂಬುದಷ್ಟೇ ಸದ್ಯಕ್ಕೆ ನಮ್ಮ ಮುಂದಿರುವ ಪ್ರಶ್ನೆ.