ಇವ್ರದ್ದು ಹೆಣ ಇಟ್ಕೊಂಡ್‌ ವ್ಯವಹಾರ ವ್ಯಾಪಾರ
ಶಿಶಿರಕಾಲ
ಶಿಶಿರ್‌ ಹೆಗಡೆ, ನ್ಯೂಜೆರ್ಸಿ
ಈಜಿಪ್ಟ್ ಎಂದಾಕ್ಷಣ ಕಣ್ಣೆದುರಿಗೆ ಬಂದು ನಿಲ್ಲುವುದೇ ಪಿರಮಿಡ್ ಮತ್ತು ಮಮ್ಮಿಗಳು. ಈಜಿಪ್ಟ್ ಎನ್ನುವುದು ದೇಶ ಎನ್ನುವು ದಕ್ಕಿಂತ ಆ ಶಬ್ದದ ಜತೆಯೇ ಮನಸ್ಸಿನಲ್ಲಿ ಅಂಟಿಕೊಂಡ ಚಿತ್ರಗಳವು. ಪಿರಾಮಿಡ್ ಒಂದು ವಂಡರ್. ಅದು ಹೇಗೆ ಆ ಕಾಲದಲ್ಲಿ ಕಟ್ಟಿ ನಿಲ್ಲಿಸಿದರು ಎನ್ನುವ ಪ್ರಶ್ನೆ ಇಂದಿಗೂ ನಿಗೂಢ. ಹೀಗೆ ಮಾಡಿರಬಹುದು – ಹಾಗೆ ಮಾಡಿರಬಹುದು ಎಂದು ಅಂದಾಜಿಸ ಬಹುದಷ್ಟೆ. ಅಂತಹ ಅದ್ಭುತವನ್ನು ಚಕ್ರದ ಕಟ್ಟಿದ್ದು ಹೇಗೆ ಎನ್ನುವುದರ ಬಗ್ಗೆ ಎಲ್ಲಿಯೂ ದಾಖಲೆಗಳಿಲ್ಲ. ಆ ಗಜ ಗಾತ್ರದ ಕಲ್ಲುಗಳನ್ನು ಅಷ್ಟು ನಾಜೂಕಾಗಿ ಇಟ್ಟದ್ದು ಅಂದಿನ ಉಳಿದ ಯಾವ ಟೆಕ್ನೋಲೊಜಿಗೂ ತಾಳಮೇಳ ಆಗೋಲ್ಲ.
ನಮ್ಮಲ್ಲಿನ ವಂಡರ್ ದೇವಸ್ಥಾನಗಳ ಇತಿಹಾಸ ಕೆದಕಿದರೆ ಅದು ಕಟ್ಟಿದ್ದು ಯಾರು, ಶಿಲ್ಪಿಗಳಾರು ಎಂಬಿತ್ಯಾದಿಯ ಕುರುಹುಸಿಕ್ಕಿಬಿಡಬಹುದು. ಆದರೆ ಪಿರಮಿಡ್ ಕಟ್ಟಿದ ಹಿಂದಿನ ಕೈಗಳ ಬಗ್ಗೆ ಎಲ್ಲಿಯೂ ಮಾಹಿತಿ ಸಿಗುವುದೇ ಇಲ್ಲ. ಅದನ್ನು ಪ್ಲಾನ್ ಮಾಡಿದ ಎಂಜಿನಿಯರ್ ಯಾರು ಅಂತ ಕೂಡ ಗೊತ್ತಿಲ್ಲ. ಇನ್ನು ಮಮ್ಮಿಗಳು – ಅದು ಯಾವತ್ತೋ ಬಾಳಿ ಬದುಕಿ ಕೈವಾ ಆದ,ಮುಗ್ಗಿ ಕುಗ್ಗಿದ ಹೆಣಗಳು. ಅದೆಷ್ಟೋ ಸಾವಿರ ವರ್ಷದ ಹಿಂದೆ ಬದುಕಿ ಬಾಳಿದ ದೇಹಗಳನ್ನು ನೋಡಿದಾಗ ಏನೇನಲ್ಲವಿಚಾರಗಳು ನಮ್ಮೆದುರಿಗೆ ಬಂದು ಹೋಗುತ್ತವೆ – ಅದೊಂದು ಅನನ್ಯ ಅನುಭವ.
ಚಿಕಾಗೊದ ಫೀಲ್ಡ್ ಮ್ಯೂಸಿಯಂನಲ್ಲಿ ಇಟ್ಟ ಒಂದು ಮಮ್ಮಿ ಎದುರಿಗೆ ನಿಂತಾಗ ಒಂದಷ್ಟು ಸಮಯ ಅದನ್ನೇ ನೋಡುತ್ತ ಕಳೆದುಹೋಗಿ. ಆ ವ್ಯಕ್ತಿ ಹೇಗೆ ಬದುಕಿದ್ದಿರಬಹುದಿತ್ತು, ಒಳ್ಳೆಯವನಾಗಿತ್ತೋ ಅಥವಾ ಕೆಟ್ಟವನಾಗಿತ್ತೋ, ಅವನ ಹೆಂಡತಿ ಮಕ್ಕಳು ಸಂಸಾರ ಹೇಗಿತ್ತೋ, ಮಹತ್ ಕಾರ್ಯ ಮಾಡಿದವನಾಗಿತ್ತೋ ಅಥವಾ ಅನಾಚಾರ ಮಾಡಿಕೊಂಡು ಎದರೂ ಜಾರಿ ಹೊಳಿಗೆ ಬಿದ್ದವನಾಗಿತ್ತೋ ಎಂಬಿತ್ಯಾದಿ. ಈ ಅದೆಷ್ಟೋ ಸಾವಿರ ವರ್ಷ ಹಿಂದೆ ಬದುಕಿದವನ ಹೆಣದ ಮುಂದೆ ನಿಂತಾಗ ಆಗುವ ಅನುಭವ ಬಹಳ ವಿಚಿತ್ರದ್ದು.
ಅದಲ್ಲದೇ ಈ ಮಮ್ಮಿಗಳ ಜತೆ ಕೆಲವು ಪ್ರಾಣಿಗಳ ಮಮ್ಮಿಗಳು. ಈ ಪ್ರಾಣಿ ಮಮ್ಮಿಗಳು ಆ ಅಲ್ಲಿ ಮುಗ್ಗಿದ ಹೆಣವಾಗಿ ಮಲಗಿದ ವ್ಯಕ್ತಿಯ ಆಪ್ತ ಸಾಕುಪ್ರಾಣಿಗಳಂತೆ – ಹೌದೋ ಅಲ್ಲವೋ ಪಕ್ಕಾ ಇಲ್ಲ. ಅವನ್ನು ಕೂಡ ಸಾಯಿಸಿ ಮಮ್ಮಿ ಮಾಡಿ ಆ ವ್ಯಕ್ತಿಯ ಜತೆಇಡಲಾಯಿತೋ ಅಥವಾ ಆತ ಸತ್ತ ನಂತರ ಈ ಪ್ರಾಣಿಗಳನ್ನು ಜಾಗ್ರತೆಯಿಂದ ಸಾಕಿ ನಂತರ ಅವು ಸತ್ತ ಮೇಲೆ ಮಮ್ಮಿ ಮಾಡಿಮಲಗಿಸಲಾಯಿತೋ? ಏನೇನೋ ಪ್ರಶ್ನೆಗಳು. ಹಳೆಯ ಕಪಾಟಿನ ಸಂದಿಯಲ್ಲಿ ಅದ್ಯಾವತ್ತೋ ಸತ್ತು ವಾಸನೆಯಾಗಿ ಕಾಡಿ ಮಮ್ಮಿಯಾಗಿ ಇನ್ಯಾವತ್ತೋ ಸ್ವಚ್ಛ ಮಾಡುವಾಗ ಸಿಗುವ ಇಲಿಯ ಹೆಣದಂತೆ ಕಾಣಿಸಿದರೂ ಇದು ಬಾಳಿ ಬದುಕಿದ ಮನುಷ್ಯನ ದೇಹ.
ಹಿಂದಿನ ವರ್ಷ ಅಕ್ಟೋಬರ್‌ನಲ್ಲಿ ಈಜಿಪ್ಟ್‌ನಿಂದ ಒಂದು ಸುದ್ದಿ ಹೊರಬಂತು. ಅಲ್ಲಿ ಸುಮಾರು80ಸರ್ಕಾಫಗಸ್‌ಗಳು ಒಂದೇ ಜಾಗದಲ್ಲಿ ಪತ್ತೆಯಾಗಿದ್ದವು. ಸರ್ಕಾಫಗಸ್ ಎಂದರೆ ಈ ಮಮ್ಮಿ – ಹೆಣಗಳನ್ನು ಶೇಖರಿಸಿಡುತ್ತಿದ್ದ ಅಲಂಕೃತ ಶವಪೆಟ್ಟಿಗೆಗಳು. ಈ ಪ್ರಮಾಣದಲ್ಲಿ ಮಮ್ಮಿಗಳು ಒಂದೇ ಸಲ ಒಂದೇ ಕಡೆ ಪತ್ತೆಯಾದ ದಾಖಲೆಗಳು ಅಪರೂಪ. ನೆಲದಿಂದ ಕೇವಲ36 ಫಟ್ ಕೆಳಗಡೆ ಕೈರೋ ನಗರದ ಸಮೀಪ ಸಕ್ಕಾರಾ ಎನ್ನುವ ಸ್ಥಳದಲ್ಲಿ ಅವು ಸಿಕ್ಕಿದ್ದು.
ಇದೊಂದು ಚಿನ್ನ ಸಿಕ್ಕ ಸಂಭ್ರಮ ಈಜಿಪ್ಟ್ ದೇಶಕ್ಕೆ ಮತ್ತು ಅಲ್ಲಿನ ಆಡಳಿತಕ್ಕೆ. ಸಾಂಕ್ರಾಮಿಕದ ಮಧ್ಯೆಯೂ ಈ ಸುದ್ದಿ ಯನ್ನು ದೇಶವಿದೇಶಕ್ಕೆ ತಲುಪಿಸಲು ಅದೆಷ್ಟೋ ದೇಶಗಳ ಪತ್ರಕರ್ತರನ್ನು ಅಲ್ಲಿನ ಸರಕಾರ ಸ್ಪೆಷಲ್ ವಿಮಾನ ಮಾಡಿಸಿ ಕರೆಸಿ ಕೊಂಡಿತ್ತು. ಜಗತ್ತಿನ ಎಲ್ಲ ಪ್ರಮುಖ ವಾಹಿನಿಗಳಲ್ಲಿ ಈ ಸುದ್ದಿ ಬಿತ್ತರವಾಗುವಂತೆ ಅಲ್ಲಿನ ಸರಕಾರ ಮುತುವರ್ಜಿ  ವಹಿಸಿತ್ತು. ಆಗೊಂದೆರಡು ದಿನ ಯೌಟ್ಯೂಬ್‌ನಿಂದ ಹಿಡಿದು ಬಿಬಿಸಿ, ನ್ಯಾಷನಲ್ ಜಿಯಾಗ್ರಫಿ, ಡಿಸ್ಕವರಿ ಹೀಗೆ ಎಲ್ಲ ಜಾಗತಿಕಬಿತ್ತರ ವಾಗುವ ವಾಹಿನಿಗಳಲ್ಲ ಇದರದೇ ಸುದ್ದಿ.
ಆ ಸರ್ಕಾಫಗಸ್‌ಗಳಲ್ಲಿ ಒಂದ್ ನಾಲ್ಕಾರನ್ನು ತೆರೆದು ಕೂಡ ತೋರಿಸಲಾಯಿತು. ಇದು ಅಲ್ಲಿನ ಪ್ರವಾಸೋದ್ಯಮವನ್ನುಗಮನದಲ್ಲಿಟ್ಟುಕೊಂಡು ನೆರವೇರಿದ ಕಾರ್ಯಕ್ರಮ. ಈಜಿಪ್ಟ್‌ನ ಅತಿ ಮುಖ್ಯ ಆಮದನಿ ಇರುವುದೇ ಪ್ರವಾಸೋದ್ಯಮದಿಂದ.ಅದರಲ್ಲೂ ಅಲ್ಲಿಗೆ ಪ್ರವಾಸಿಗರು ಬರುವುದೇ ಪಿರಮಿಡ್ ಮತ್ತು ಮಮ್ಮಿಗಳನ್ನು ನೋಡಲು. ಇದೊಂದು ದೇಶದ ಬಹುದೊಡ್ಡ,ಶೇ.೨೦ ಆದಾಯವನ್ನು ತಂದುಕೊಡುವ ಉದ್ಯಮ. ಅಷ್ಟೊಂದು ಪ್ರಮಾಣದಲ್ಲಿ ಆದಾಯ ಮತ್ತು ಸುಮಾರು ಒಂದು ಲಕ್ಷಕ್ಕೂಹೆಚ್ಚಿನ ಜನರ ನೇರ ಮತ್ತು ಹನ್ನೆರಡು ಲಕ್ಷ ಜನರ ಪರೋಕ್ಷ ಉದ್ಯೋಗಕ್ಕೆ ಕಾರಣವೇ ಈ ಮಮ್ಮಿ ಮತ್ತು ಪಿರಮಿಡ್.
ಈಗ ಮಾತ್ರ ಸಾಂಕ್ರಾಮಿಕದಿಂದಾಗಿ ಅಲ್ಲಿನ ಪ್ರವಾಸೋದ್ಯಮ ಸಂಪೂರ್ಣ ನೆಲ ಕಚ್ಚಿಬಿಟ್ಟಿದೆ. ಇಡೀ ದೇಶದ ಆದಾಯಸುಮಾರು ಶೇ.15ಕಡಿಮೆಯಾಗಿದೆ. ಈಗ ಪ್ರವಾಸೋದ್ಯಮ ನೆಲಕಚ್ಚಿರುವುದರಿಂದ ಅಲ್ಲಿನ ಸರಕಾರ ಸುಮಾರು ಶೇ.80ಸರಕಾರಿ ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿದೆಯಂತೆ. ಇದರರ್ಥ ಈಜಿಪ್ಟ್ ಬದುಕುತ್ತಿದ್ದುದೇ ಈ ಪಿರಮಿಡ್ ಮತ್ತುಹೆಣಗಳನ್ನು ಮುಂದಿಟ್ಟುಕೊಂಡು ಎಂದಾಯಿತಲ್ಲ !
ಈ ಮನುಷ್ಯನ ಮೃತದೇಹದ ಸುತ್ತ ಅದೆಷ್ಟೋ ಉದ್ಯೋಗಗಳು, ವ್ಯವಹಾರಗಳು ಈ ಜಗತ್ತಿನಲ್ಲಿವೆ. ಉದಾಹರಣೆಗೆ ಪಾಶ್ಚಾತ್ಯ ದೇಶಗಳಲ್ಲಿನ -ನರಲ್ ಹೋಮ್ ಒಂದು ದೊಡ್ಡ ಬಿಸಿನೆಸ್. ಮೃತರಾದ ನಂತರ ದೇಹವನ್ನು ತಾತ್ಕಾಲಿಕವಾಗಿ ಶೇಖರಿಸಿಡುವ, ನಂತರದಲ್ಲಿ ಅಂತ್ಯಕ್ರಿಯೆ ಮತ್ತು ಅದಕ್ಕೆ ಸಂಬಂಧಿಸಿದ ವಿಧಿ ವಿಧಾನಗಳು ಮಾಡುವ ಸ್ಥಳ. ಅಮೆರಿಕಾದಲ್ಲಂತೂ ಇದೊಂದು ದೊಡ್ಡ ವ್ಯವಹಾರ – ವ್ಯಾಪಾರ. ವ್ಯಕ್ತಿ ತೀರಿಕೊಂಡ ನಂತರದಿಂದ ಮತ್ತು ಅಗ್ನಿಸ್ಪರ್ಷವಾಗುವ ಅಥವಾ ಮಣ್ಣಾಗುವವರೆಗಿನ ಕೆಲಸವನ್ನು ನಿಭಾಯಿಸುವುದೇ ಇವರ ಕೆಲಸ.
ಸಾಮಾನ್ಯವಾಗಿ ಸಾಯುವವರು ವಾರ ದಿನ ಅನುಕೂಲ ನೋಡಿಕೊಂಡು ಸಾಯುವುದಿಲ್ಲವಲ್ಲ. ಅಲ್ಲದೆ ಆಪ್ಟೆಷ್ಟರು ದೂರದ ಊರುಗಳಿಂದ ಬರಲು, ಅಂತಿಮ ದರ್ಶನ ಪಡೆಯಲು ಸಮಯಬೇಕು. ಹಾಗಾಗಿ ನಿಸ್ತೇಜ ದೇಹವನ್ನು ಶೇಖರಿಸಿಡುವುದು, ಆಮೇಲೆ ಅಂತಿಮ ದರ್ಶನದ ದಿನ ದೇಹ ವನ್ನು ತೊಳೆದು, ವಾಸನೆ ಬರದಂತೆ ದ್ರಾವಣ ಸಿಂಪಡಿಸುವುದು, ಬಟ್ಟೆ ಹಾಕಿಸಿ, ಚಂದಕ್ಕೆ ಸಿಂಗರಿವುದು, ಅಂತಿಮ ದರ್ಶನಕ್ಕೆ ಫ್ಯೂನರಲ್ ಹೋಮ್‌ನ ಹೋಲ್‌ನಲ್ಲಿ ವ್ಯವಸ್ಥೆ ಮಾಡುವುದು, ಹೀಗೆ ಕೊನೆಯಲ್ಲಿ ಮಣ್ಣಾಗಿಸುವ ವರೆಗೆ ಎಲ್ಲವೂ ಇವರದೇ ವ್ಯವಸ್ಥೆ. ಇಲ್ಲಿ ಇದು ತೀರಾ ತುಟ್ಟಿ.
ಸಾಮಾನ್ಯವಾಗಿ ಈ ಅಂತ್ಯಕ್ರಿಯೆಗೆ ಏನಿಲ್ಲವೆಂದರೆ ಕನಿಷ್ಠ ಹತ್ತರಿಂದ ಹನ್ನೆರಡು ಸಾವಿರ ಡಾಲರ್ ಬೇಕು. ಈ ಕಾರಣಕ್ಕೆ ಹಲವರು ತಾವು ಸತ್ತ ಮೇಲೆ ಉಳಿದವರಿಗೆ ಹೊರೆಯಾಗಬಾರದು ಎಂದು ಅಂತ್ಯ ಕಾರ್ಯಕ್ಕೆ ಎಂದೇ ಹಣವನ್ನು ಕೂಡಿಟ್ಟಿರುತ್ತಾರೆ. ಇಲ್ಲವೇ ಈ ಫ್ಯೂನರಲ್ ಹೋಮ್‌ಗಳಲ್ಲಿ ಚೀಟಿ ಹಾಕಿರುತ್ತಾರೆ. ಕೆಲವರಂತೂ ತಮ್ಮ ಕೊನೆಯ ಕೆಲವು ವರ್ಷದ ದುಡಿಮೆಯನ್ನು ಕ್ರಿಯೆಗೆಂದೇ ಮೀಸಲಿಡುತ್ತಾರೆ. ಇದೆಲ್ಲ ಎಷ್ಟು ವಿಚಿತ್ರ ಅನ್ನಿಸುವುದುಂಟು – ಒಬ್ಬ ಮನುಷ್ಯ ತನ್ನ ಅಂತ್ಯಕ್ರಿಯೆಗೆಂದೇ ಕೆಲವು ಸಮಯ ಗೇಯುವುದು, ಉಳಿಸುವುದು!
ಇದಲ್ಲದೆ ನ್ಯೂಯಾರ್ಕ್ ಅಥವಾ ಲಾಸ್ ಏಂಜಲೀಸ್ ಮೊದಲಾದ ಕಡೆ ಹೋದರಂತೂ ಮುಗಿದೇ ಹೋಯಿತು. ಅಲ್ಲ ಕೆಲವು ಪ್ರೀಮಿಯಂ ಗ್ರೇವಿಯಾರ್ಡ್‌ಗಳಿವೆ. ಅಲ್ಲಿ ಸತ್ತ ಮೇಲೆ ಮಣ್ಣಾಗಬೇಕೆಂದರೆ ದಶಕದ ಮೊದಲೇ ಬೃಹತ್ ಮೊತ್ತ ಕೊಟ್ಟು ಸ್ಥಳ ಖುದ್ದು ಕಾಯ್ದಿರಿಸಿಕೊಂಡಿರಬೇಕಾಗುತ್ತದೆ. ಒಂದೊಮ್ಮೆ ಗಂಡ ಹೆಂಡತಿ ಕೊನೆಯಲ್ಲಿ ಅಕ್ಕಪಕ್ಕದಲ್ಲಿ ಮಲಗಬೇಕೆಂದರೆ ಅದಕ್ಕೆ ದುಪ್ಪಟ್ಟು ಹಣ ಕೊಡಬೇಕು. ಕೆಲವು ಕುಟುಂಬಗಳು ಎಂಟು ಹತ್ತು ಕೊಫಿನ್‌ಗೆ ಆಗುವಷ್ಟು ಜಾಗವನ್ನು ಫ್ಯಾಮಿಲಿ ಪ್ಯಾಕ್ ತರಹ ಖರೀದಿಸಿರುತ್ತಾರೆ. ಚಿಕಾಗೋದಲ್ಲಿ ಗ್ರೇಸ್ಲ್ಯಾಂಡ್ ಸಿಮೆಟ್ರಿ ಅಲ್ಲಿ ಆರಡಿ ಮೂರಡಿ ಜಾಗಕ್ಕೆ ಸುಮಾರು ಒಂದೂಕಾಲು ಲಕ್ಷ ಡಾಲರ್ ಕೊಟ್ಟು ಎಂಟು ವರ್ಷದ ಮೊದಲು ಅಡ್ವಾನ್ಸ್ ಬುಕಿಂಗ್ ಮಾಡಿಕೊಂಡಿರಬೇಕು.
ಹೀಗೆ ಸ್ಥಳ ಹಿನ್ನೆಲೆ ಮತ್ತು ಆ ಗ್ರೇವ್ಯಾರ್ಡ್ ನಲ್ಲಿ ಯಾರನ್ನು ಈ ಹಿಂದೆ ಮಣ್ಣಾಗಿಸಲಾಗಿದೆ ಎನ್ನುವುದರ ಮೇಲೆ ಈ ಮೊತ್ತ ಏರುತ್ತಲೇ ಹೋಗುತ್ತದೆ. ಲಾಸ್ ಏಂಜಲೀಸ್‌ನ ವೆಸ್ಟ್‌ವುಡ್ ವಿಲೇಜ್ ಪಾರ್ಕ್ ಎನ್ನುವ ಸ್ಮಶಾನ ಅಮೆರಿಕಾದ, ಬಹುಷಃ ಜಗತ್ತಿನಅತಿ ತುಟ್ಟಿಯ ಜಾಗ. ಮರ್ಲಿನ್ ಮನ್ರೋ ಸೇರಿದಂತೆ ಹಾಲಿವುಡ್ ಸೆಲೆಬ್ರಿಟಿಗಳು, ಘಟಾನುಘಟಿಗಳನ್ನು ಮಣ್ಣಾದ ಜಾಗ ಅದು.
ಅಲ್ಲಿ ಏನಾದರು ಮಣ್ಣಾಗಬೇಕೆಂದರೆ ಬರೋಬ್ಬರಿ 4.6 ಮಿಲಿಯನ್ ಡಾಲರ್ ಕೊಟ್ಟು ಮೂವತ್ತು ಸ್ಕ್ವೇರ್ ಫೀಟ್ ಖರೀದಿಸ ಬಹುದು. ಕೇವಲ ಹಣವಿದ್ದರಷ್ಟೇ ಅಲ್ಲಿ ಜಾಗ ಸಿಕ್ಕಿಬಿಡುವುದಿಲ್ಲ, ಅದರ ಜತೆ ಮಣ್ಣಾಗುವವರಿಗೆ ಸೆಲೆಬ್ರಿಟಿ ಸ್ಟೇಟಸ್ ಕೂಡ ಇರಬೇಕಾಗುತ್ತದೆ. ಎಂಥಾ ಅವಸ್ಥೆ ನೋಡಿ. ಅಮೆರಿಕಾದ ಅರಿಝೋನಾದಲ್ಲಿ ಅಲ್ಕೋರ್ ಎನ್ನುವ ಕಂಪನಿಯೊಂದಿದೆ. ಆಧುನಿಕ ತಂತ್ರಜ್ಞಾನದ ಬೆಳವಣಿಗೆಯ ವೇಗವನ್ನು ಗ್ರಹಿಸಿದ ಒಂದಿಷ್ಟು ಮಂದಿ ಮೃತದೇಹವನ್ನು ಅತಿ ಕಡಿಮೆ ಉಷ್ಣತೆಯಲ್ಲಿ ದೀರ್ಘಕಾಲ ಕೆಡದಂತೆ ಶೇಖರಿಸಿಡುವ ಒಂದು ವ್ಯವಸ್ಥೆ ನಿರ್ಮಿಸಿದರೆ ಮುಂದೊಂದು ದಿನ ನಮ್ಮ ಟೆಕ್ನೋಲೊಜಿ ಬೆಳೆದಂತೆ ಈ ದೇಹಕ್ಕೆ ಪುನರ್ಜೀವ ಕೊಡಬಹುದು ಎನ್ನುವ ವೈಜ್ಞಾನಿಕ ಊಹೆಯ, ಸಾಧ್ಯತೆಯ ಹಿನ್ನೆಲೆಯಲ್ಲಿ ಈ ಕಂಪನಿಯನ್ನು ಸ್ಥಾಪಿಸಿದ್ದು. ಹೀಗೆ ಕಂಪನಿಯೊಂದು ಸ್ಥಾಪಿಸಿದಾಗ ತಮ್ಮ ಯೋಜನೆಯನ್ನು ಜಾಹಿರಾತಿನ ಮೂಲಕ ಹೊರಜಗತ್ತಿಗೆ ಮೊದಲು ತಿಳಿಸಲಾಯಿತು.
ಮೊದಲು ಈ ಕಂಪನಿ ಕ್ರಿಟಿಕ್‌ಗೆ ಒಳಗಾಗಬೇಕಾಯಿತು. ನಂತರ ಇದರ ಸಾಧ್ಯತೆಯನ್ನು ಕ್ರಮೇಣ ಮನಗಂಡ ಮಂದಿ ಒಂದು ಕೈ ನೋಡಿಯೇ ಬಿಡೋಣ ಎಂದು ಅಂದಿನ ಸೆಮಿನಾರ್‌ಗಳಿಗೆ ಬಂದರಂತೆ. ಹೀಗೆ ನಂತರದ ದಿನಗಳಲ್ಲಿ ಹಲವಾರು ಮಂದಿ ಈ ಕಂಪನಿಯ ಜತೆ ಒಪ್ಪಂದ ಮಾಡಿಕೊಂಡು ತಮ್ಮ ಮೃತ ದೇಹವನ್ನು ಶೇಖರಿಸಿಡಲು ಸಹಿ ಹಾಕಿದರು. ಅತ್ಯಾಧುನಿಕ ಬೃಹತ್ ಗಾತ್ರದಲ್ಲಿ ನಿರ್ಮಿಸಲ್ಪಟ್ಟ ಆಧುನಿಕ ಶೈತ್ಯಾಗಾರ ಅದು. ಇದು ಸಾಮಾನ್ಯ ಶೈತ್ಯಾಗಾರವಲ್ಲ. ಮೃತ ದೇಹವನ್ನು ಬಹಳ ನಾಜೂಕಿನಿಂದ, ಹಲವು ರೀತಿಯಲ್ಲಿ ಪ್ರೋಸೆಸ್ ಮಾಡಿ ನಂತರ ಶೇಖರಿಸಿಡುವ ವ್ಯವಸ್ಥೆ. ಇದನ್ನು ಕ್ರಯೋಪ್ರೆಸೆರ್ವಶನ್ ಎನ್ನಲಾಗುತ್ತದೆ.
ಇಲ್ಲಿ ಮೃತದೇಹವನ್ನು – 200 ಸೆಲ್ಸಿಯಸ್‌ನಲ್ಲಿ ಇಡಲಾಗುತ್ತದೆ. ಇದು ಕೇವಲ ಮೃತದೇಹವನ್ನು ಮಣ್ಣಾಗಿಸುವುದರ ಬದಲು ಅಲ್ಲಿ ಶೇಖರಿಸಿಡುವ ವ್ಯವಸ್ಥೆಯಲ್ಲ. ಬದಲಿಗೆ ಇದಕ್ಕೆ ನಿಂದಾಯಿಸಿಕೊಂಡವರು ತಮ್ಮ ಜೀವವಿಮೆಯಲ್ಲಿ ಅಲ್ಕೋರ್ ಕಂಪನಿ ಯನ್ನು ಬೆನಿಫಿಶಿಯರಿ, ಮೃತದೇಹದ ವಾರಸುದಾರ ಎಂದು ಮೊದಲು ಆರಿಸಿಕೊಳ್ಳಬೇಕಾಗುತ್ತದೆ. ನಂತರ ಈ ಕಂಪನಿ ಜೀವಂತ ವಿರುವವರೆಗೂ ದೇಹವನ್ನು ಮಾನಿಟರ್ ಮಾಡಲು ಒಂದು ಬ್ಯಾಂಡ್ ಅನ್ನು ಸದಸ್ಯರ ಕೈಗೆ ಕಟ್ಟುತ್ತದೆ. ಸದಸ್ಯರು ಅವರು ವಾಸಿಸುವ ಹತ್ತಿರದ ಆಸ್ಪತ್ರೆಗೆ ಮತ್ತು ಅವರ ವೈದ್ಯರಿಗೆ ಈ ಒಪ್ಪಂದದ ಬಗ್ಗೆ ತಿಳಿಸಿರಬೇಕು.
ಜೀವಕ್ಕೆ ಯಾವುದೇ ಅಪಾಯ ಅಥವಾ ಸಾವು ಬಂದಾಕ್ಷಣ ಈ ಆಸ್ಪತ್ರೆ ಮೃತರಾದ ತಕ್ಷಣ ದೇಹವನ್ನು ಅಲ್ಕೋರ್‌ಗೆ ಹಸ್ತಾಂತರಿಸಬೇಕು. ಅಲ್ಕೋರ್ ಕಂಪನಿ ಮೃತದೇಹವನ್ನು ಪಡೆದ ತಕ್ಷಣ, ಕಾನೂನಿನ ಪ್ರಕಾರ ಜೀವ ಹೋಗಿದೆ ಎನ್ನುವುದನ್ನು ದೃಢೀಕರಿಸಿದಕೂಡಲೇ ಕೃತಕ ಪಂಪ್ ಮತ್ತು ಡಯಾಲಿಸಿಸ್ ಮೂಲಕ ರಕ್ತಸಂಚಾರ ಆಗುವಂತೆ ಈ ಕಂಪನಿ ನೋಡಿಕೊಳ್ಳು ತ್ತದೆ. ಅಲ್ಲದೆದೇಹದ ಹಲವು ಅಂಗಾಂಗ ಜೀವಂತವಾಗಿರುವಂತೆ ನೋಡಿಕೊಳ್ಳುವುದರ ಜತೆ ಮಿದುಳು ಸಾಯದಂತೆ ಕೂಡ ಜಾಗ್ರತೆವಹಿಸಲಾಗುತ್ತದೆ ಮತ್ತು ಈ ಕಂಪನಿಯ ಫೆಸಿಲಿಟಿಗೆ ಅತ್ಯಂತ ವೇಗದಲ್ಲಿ ಸಾಗಿಸಲಾಗುತ್ತದೆ.
ಯಾರೇ ಮೃತವಾದರೂ ಮೆದುಳು ಸುಮಾರು ಗಂಟೆಗಳ ಕಾಲ ಜೀವಂತವಿರುತ್ತದೆಯಲ್ಲ – ಅದನ್ನು ಇನ್ನಷ್ಟು ಕಾಲದವರೆಗೆ ಜೀವಂತವಿರುವಂತೆ ನೋಡಿಕೊಂಡು ಉಳಿದ ಕೆಲವು ಕ್ರಿಯೆಗಳನ್ನು ಕೈಗೊಂಡಮೇಲೆ ಕ್ರಯೋಪ್ರೆಸೆರ್ವಶನ್‌ಗೆ ಒಳಪಡಿಸ ಲಾಗುತ್ತದೆ ಮತ್ತು ಸೊಫಿಸ್ಟಿಕೇಟೆಡ್ ಶೈತ್ಯಾಗಾರದಲ್ಲಿ -200 ಸೆಲ್ಸಿಯಸ್‌ನಲ್ಲಿ ಸ್ಟೀಲ್ ಸಿಲಿಂಡರ್ ಒಳಗಡೆ ಶೇಖರಿಸಿಡಲಾಗುತ್ತದೆ. ಈ ಕಂಪನಿಯಲ್ಲಿ ಬೇರೆ ಬೇರೆ ಆ-ರ್‌ಗಳಿವೆ. ಉದಾಹರಣೆಗೆ ಕೇವಲ ಮಿದುಳನ್ನಷ್ಟೇ ಕ್ರಯೋಪ್ರೆಸೆರ್ವಶನ್‌ಗೆ ಆಯ್ಕೆಮಾಡಿ ಕೊಳ್ಳಬಹುದು ಅಥವಾ ಬೇರೆ ಬೇರೆ ಅಂಗಾಂಗಗಳನ್ನಷ್ಟೇ ಪರಿಗಣಿಸಿಕೊಳ್ಳಬಹುದು.
ಸದಸ್ಯರು ತಮ್ಮ ಜತೆ ತಮ್ಮ ಸಾಕುಪ್ರಾಣಿಯನ್ನು ಕೂಡ ಈ ರೀತಿ ಪ್ರಿಸರ್ವ್ ಮಾಡಿಕೊಳ್ಳುವ ಅವಕಾಶವಿದೆ. ಇದೆಲ್ಲ ಪ್ರಕ್ರಿಯೆ ತೀರಾ ಟೈಮ್ ಸೆನ್ಸಿಟಿವ್. ಆ ಕಾರಣಕ್ಕೆ ಈ ಕಂಪನಿ ಅಮೆರಿಕಾದಲ್ಲ ಪ್ಯಾರಾಮೆಡಿಕ್ ಮತ್ತು ಸರ್ಜನ್‌ಗಳನ್ನು ಈ ಪ್ರಕ್ರಿಯೆಗೆ 24*7 ತಯಾರಿ ಮಾಡಿಟ್ಟುಕೊಂಡಿರಬೇಕು. ಈ ಕಂಪನಿ ಮೊದಲು ಸ್ಥಾಪಿತವಾಗಿದ್ದು ಫ್ಲೋರಿಡಾದಲ್ಲಿ.
ನಂತರ ಅಲ್ಲಿ ಭೂಕಂಪ – ಪ್ರಕೃತಿ ವಿಕೋಪ ಹೆಚ್ಚಾದಂತೆಲ್ಲ ತನ್ನ ಶೈತ್ಯಾಗಾರವನ್ನು ಅರಿಝೋನಾಗೆ ವರ್ಗಾಯಿಸಿತು. ಏಕೆಂದರೆ ಒಪ್ಪಂದದ ಪ್ರಕಾರ (ಯಾರ ಜತೆ !) ಈ ರೀತಿ ಒಂಚೂರು ಹಾಳಾಗದಂತೆ ದೇಹವನ್ನು ಕಾಪಾಡಿಕೊಳ್ಳುವ ನೂರು ವರ್ಷದ ಹೊಣೆ ಕಂಪನಿಯದು. ಮೃತದೇಹದ ಮೇಲೆ ಕುಟುಂಬಕ್ಕೆ ಹಕ್ಕಿಲ್ಲದೇ ಹೋದರೂ ಅವರಿಗೆ ಮೃತದೇಹದ – ಸತ್ತವರಹಕ್ಕುಚ್ಯುತಿ ಆದಲ್ಲಿ ಕೇಸ್ ಹಾಕುವ ಅವಕಾಶವಿದೆ. ಸದ್ಯ ಸುಮಾರು ಎರಡು ಸಾವಿರ ಮಂದಿ ಈ ಕಂಪನಿಯ ಜತೆ ಒಪ್ಪಂದಮಾಡಿಕೊಂಡzಗಿದೆ. ಅದರಲ್ಲಿ ಈಗಾಗಲೇ ಸುಮಾರು 170ಮಂದಿ ಮೃತರಾಗಿದ್ದು ಅವರ ದೇಹವನ್ನು ಕಾಪಾಡಿಕೊಳ್ಳುವಕೆಲಸ ಈ ಕಂಪನಿ ಮಾಡುತ್ತಿದೆ.
ಅದಲ್ಲದೆ ಸುಮಾರು ನೂರು ಮಂದಿಯ ಮಿದುಳನ್ನು ಕೂಡ ಈ ಕಂಪನಿ ಸದ್ಯ ಶೇಖರಿಸಿಟ್ಟಿದೆ. ಇತ್ತೀಚಿಗೆ ನ್ಯಾನೋಟೆಕ್ನೋಲೊಜಿ ಅಭಿವೃದ್ಧಿ ಹೊಂದಿದಂತೆಲ್ಲ ಹೀಗೊಂದು ಮತ್ತೆ ಜೀವ ಪಡೆಯುವ ಸಾಧ್ಯತೆಗಳ ಸಾಧ್ಯತೆ ಯನ್ನು ಜನರು ಮನಗೊಳ್ಳುತ್ತಿದ್ದು ಸಾವಿರಾರು ಮಂದಿ ಬಂದು ಈ ಕಂಪನಿಯ ಸದಸ್ಯತ್ವ ಸಾಗರೋಪಾದಿಯಾಗಿ ಪಡೆಯುತ್ತಿದ್ದಾರೆ.
ಅಂದಹಾಗೆ ಇದಕ್ಕೆಲ್ಲ ತಗಲುವ ಖರ್ಚು ಮೂರುವರೆ ಲಕ್ಷ ಡಾಲರ್. ಅಷ್ಟು ಕೊಟ್ಟರೆ ಮೃತದೇಹವನ್ನು ನೂರು ವರ್ಷಶೇಖರಿಸಿಡುತ್ತಾರೆ, ಅದಕ್ಕಿಂತ ಜಾಸ್ತಿ ಇಡಬೇಕೆಂದರೆ ಬೇರೆ ಬೇರೆ ಪ್ಲಾನ್‌ಗಳಿವೆ. ಬರೀ ನಿಮ್ಮ ಮಿದುಳನ್ನು ಇಡಬೇಕೆಂದರೆ ಐವತ್ತುಸಾವಿರ ಡಾಲರ್ ಕೊಟ್ಟರಾಯಿತು. ಒಂದೊಮ್ಮೆ ಹೀಗೆ ಶೇಖರಿಸಿಟ್ಟ ದೇಹಕ್ಕೆ ಜೀವ ಕೊಡುವ ಚಿಕ್ಕ ಸಾಧ್ಯತೆ ಮುಂದಿನದಿನಗಳಲ್ಲಿ ಕಂಡುಬಂದರೂ ಇದೊಂದು ಮಲ್ಟಿ ಮಿಲಿಯನ್ ಇಂಡಸ್ಟ್ರಿ ಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಹೀಗೆಯಾವತ್ತೋ ಸತ್ತವರು ಮುಂದೊಂದು ದಿನ ಜೀವಂತವಾದರೆ ಅದೊಂದು ವಂಡರ್, ಇಂದಿನವರ ದೂರದರ್ಶಿತ್ವ ಎಂದುಮುಂದೊಂದು ದಿನ ಜನರು ಕೊಂಡಾಡಬಹುದು.
ಇಲ್ಲವಾದಲ್ಲಿ ಶತಮಾನದ ನಂತರ, ಈ ಒಪ್ಪಂದ ಎಕ್ಸ್ಪೈರ್ ಆದಮೇಲೆ ಯಾವುದೊ ಒಂದು ಮ್ಯೂಸಿಯಂನಲ್ಲಿ ವಿಜ್ಞಾನಕ್ಕೆ ಅಥವಾ ಮೂರ್ಖತನಕ್ಕೆ ಮಾದರಿ ಯಾಗಿ ಅವರನ್ನು ಕೂಡ ಇಡಲಾಗುತ್ತದೆಯೇನೋ. ಆಗ ಅವುಗಳನ್ನು ಅಮೆರಿಕನ್ ಮಮ್ಮಿಅನ್ನಬಹುದೇನೋ. ಯಾರಿಗ್ ಗೊತ್ತು – ನಾವಂತೂ ಅಷ್ಟು ಕಾಲ ಅದನ್ನು ನೋಡಲು ಇರೋಲ್ಲ ಬಿಡಿ. ಇನ್ನೊಂದು ವ್ಯವಸ್ಥೆ ಇದೆ. ಅದು ವ್ಯೋಮ ಸಮಾಧಿ. ಮೃತದೇಹವನ್ನು ಬಾಹ್ಯಾಕಾಶಕ್ಕೆ ತೆಗೆದುಕೊಂಡು ಹೋಗುವ ಮೂಲಕ ಸೆಟಲೈಟ್‌ಗಳಂತೆ ಭೂಮಿ ಗಿರ್ಕಿ ಹೊಡೆಯುವ ಸೌಲಭ್ಯ. ಇದನ್ನು ಸೌಲಭ್ಯ ಅನ್ನಬೇಕು ಏನನ್ನಬೇಕೋ ಗೊತ್ತಿಲ್ಲ.
ಕೆಲವು ಕಂಪನಿಗಳು ಈ ನಿಟ್ಟಿನಲ್ಲಿಯೂ ತಯಾರಾಗುತ್ತಲಿವೆ. ಅದಾಗಲೇ ಸ್ಟಾರ್ ಟ್ರೆಕ್ ಖ್ಯಾತಿಯ ಜೀನ್ ರೋಡೆನ್ ಬೆರ್ರಿ,ಗಗನಯಾತ್ರಿ ಗೋರ್ಡನ್ ಕೂಪರ್, ಮನಶಾಸಜ್ಞ ತಿಮೋತಿ ಅವರ ಮೃತದೇಹದ ಬೂದಿಯನ್ನು ಅಂತರಿಕ್ಷದಲ್ಲಿ ವಿಸರ್ಜನೆಮಾಡಲಾಗಿದೆ. ಅಲ್ಲದೇ ಆಸ್ಟ್ರೇಲಿಯಾದ ಭೂವಿಜ್ಞಾನಿ ಯುಜೀನ್ ಶೋಮೇಕರ್ ಅವರ ಬೂದಿಯನ್ನು ಚಂದನಲ್ಲಿವಿಸರ್ಜಿಸಲಾಗಿದೆ. ಮುಂದೊಂದು ದಿನ ಇಡೀ ಮೃತದೇಹವನ್ನೇ ಅಂತರಿಕ್ಷದಲ್ಲಿ ಬಿಡುವ ಕಾಲ ಬಂದರೆ – ಅದನ್ನೇ ದಂಧೆಮಾಡಿಕೊಳ್ಳುವ ಕಂಪನಿಗಳು ಹುಟ್ಟಿಕೊಂಡರೆ ಆಶ್ಚರ್ಯವೇನಿಲ್ಲ.
ಎಲಾನ್ ಮಾಸ್ಕ್ ಅಂತೂ ತಾನು ಭೂಮಿಯ ಮೇಲೆ ಸಾಯುವುದಿಲ್ಲ ಎಂದೇ ಹಲವಾರು ಬಾರಿ ಹೇಳಿಕೊಂಡಾಗಿದೆ. ಇನ್ನು ದಾನ ಮಾಡಿದ ಮೃತದೇಹವನ್ನು ವೈಜ್ಞಾನಿಕ ಅಧ್ಯಯನಕ್ಕೆ, ವೈದ್ಯಕೀಯ ಕಲಿಕೆಗೆ ಬಳಸುವುದು ನಿಮಗೆಲ್ಲ ಗೊತ್ತಿದೆ. ಈ ರೀತಿ ದಾನಕ್ಕೆ ಪಡೆದ ದೇಹದ ಭಾಗಗಳನ್ನು ತುಂಡಾಗಿಸಿ ಅದನ್ನು ಬೇರೆ ಬೇರೆಯವರಿಗೆ ಮಾರುವ ವ್ಯವಹಾರ ಜಗತ್ತಿನ ಎಲ್ಲ ದೇಶಗಳಲ್ಲೂ ಇದೆ. ಒಂದು ರೀತಿಯಲ್ಲಿ ಇದು ಮನುಕುಲಕ್ಕೆ ಅವಶ್ಯಕ. ಆದರೆ ಇದನ್ನೇ ವ್ಯಾಪಾರ ಮಾಡಿಕೊಂಡು – ಉದ್ಯೋಗ ಮಾಡಿಕೊಂಡು ಬದುಕುವ ಒಂದು ವರ್ಗವೇ ಇದೆ.
ದಾನಕ್ಕೆ ಪಡೆದ ದೇಹವನ್ನು ಪ್ರತ್ಯೇಕಿಸಿ ಮಾರಿದಾಗ ಪ್ರತಿಯೊಂದು ಅಂಗಕ್ಕೂ ಬೆಲೆ ಕಟ್ಟುತ್ತ ಹೋದಾಗ ಒಂದು ದೇಹದಿಂದ ಏನಿಲ್ಲವೆಂದರೆ ಸುಮಾರು ಹನ್ನೆರಡರಿಂದ ಹದಿನೈದು ಸಾವಿರ ಡಾಲರ್ ಕಮಾಯಿ ಯಾಗುತ್ತದೆ. ಅಲ್ಲದೆ ಅಮೆರಿಕಾ ಮೊದಲಾದ ದೇಶಗಳಲ್ಲಿ ಬಹಳಷ್ಟು ಬಾರಿ ಅಂತಿಮಕ್ರಿಯೆಗೆ ಹಣವಿಲ್ಲದವರು ಮೃತದೇಹ ವನ್ನು ಈ ರೀತಿ ದಾನಮಾಡುತ್ತಾರೆ.
ಈಗಂತೂ ಕರೋನಾ ಕಾರಣದಿಂದಾಗಿ ಒಂದು ವಿಚಿತ್ರ ಸ್ಥಿತಿ ನಿರ್ಮಾಣವಾಗಿದೆ. ಮೃತದೇಹಗಳನ್ನು ದಾನಕ್ಕೆ ಕೊಡುವವರುಒಂದೇ ಸಲ ಜಾಸ್ತಿಯಾಗಿಬಿಟ್ಟಿzರೆ. ಮನೆಯವರೇ – ನಮಗಂತೂ ದೇಹ ಬೇಡ, ನೀವು ಏನಾದರೂ ಮಾಡಿಕೊಳ್ಳಿ ಎನ್ನುವ ಸ್ಥಿತಿ ಬಹಳಷ್ಟು ಕಡೆ ನಿರ್ಮಾಣವಾಗಿದೆ. ಆದರೆ ಕರೋನಾ ಪೀಡಿತ ದೇಹವಾದರೆ ಅದನ್ನು ದಾನಕ್ಕೂ ತೆಗೆದುಕೊಳ್ಳುವವರಿಲ್ಲ. ಏಕೆಂದರೆ ಅದನ್ನು ಉಳಿದ ದೇಹಗಳಂತೆ ವಿಜ್ಞಾನಕ್ಕೆ ಬಳಸುವುದು ಕೂಡ ಡೇಂಜರಸ್.
ಇನ್ನು ಕರೋನಾ ಬಂದಾಗಿನಿಂದ ಅಮೆರಿಕಾದಲ್ಲಿ ಬಹುತೇಕ ಶವಾಗಾರಗಳು ಓವರ್ ಕ್ರೌಡೆಡ್ (!) ಆಗಿರುವುದರಿಂದ ಹೆಣವನ್ನು ಅಂತ್ಯಕ್ರಿಯೆವರೆಗೆ ಇಡಲು ಕೂಡ ಅದೆಷ್ಟೋ ಕಡೆ ವ್ಯವಸ್ಥೆಯೇ ಇಲ್ಲದಂತಾಗಿದೆ. ಈಗೀಗಂತೂ ಅದೆಷ್ಟೋ ಶೀತಲೀಕರಿಸಿದ ಆಹಾರವನ್ನು ಸಾಗಿಸುವ ಟ್ರಕ್‌ಗಳು ಆಸ್ಪತ್ರೆಯ ಎದುರಿಗೆ ಮೊಬೈಲ್ ಶವಗಾರಗಳಾಗಿ ನಿಂತಿವೆ. ಕರೋನಾ ಬಂದಾಗಿನಿಂದ ಸಪ್ಲೆ ಚೈನ್ ಬುಡಮೇಲಾಗಿರುವುದರಿಂದ ಈ ಟ್ರಕ್ ಮಾಲೀಕರು ಹೆಣ ಇಟ್ಕೊಳ್ಳೋ ಕೆಲಸಾನೇ ಉದ್ಯೋಗ ಮಾಡಿಕೊಂಡಿದ್ದಾರೆ.
ಸದ್ಯ ಈ ರೀತಿ ಮೊಬೈಲ್ ಮೊರ್ಗ್‌ಗಳಲ್ಲಿ ದೇಹವನ್ನು ಕೆಲಸಮಯ ಇಟ್ಟುಕೊಳ್ಳಬೇಕು ಎಂದಾದಲ್ಲಿ ಅದಕ್ಕೂ ಪ್ರೀಮಿಯಂ ಮೊತ್ತ ಕೊಡಬೇಕು. ಇವು ಕೆಲವೇ ಕೆಲವು ಉದಾಹರಣೆಗಳಷ್ಟೇ. ಜಗತ್ತಿನ ಅಲ್ಲ ವ್ಯವಹಾರಗಳ ಜತೆ ಇತ್ತೀಚಿಗೆ ಈ ಹೆಣ ಇಟ್ಟುಕೊಳ್ಳುವ, ವಿಲೇವಾರಿ ಮಾಡುವ ಉದ್ಯಮ ಕೂಡ ಬೆಳೆಯುತ್ತಿದೆ. ಸಾಂಕ್ರಾಮಿಕದ ಕಾರಣದಿಂದ ಈ ಉದ್ಯಮ ಒಮ್ಮಿಂದೊಮ್ಮೆಲೆ ದುಪ್ಪಟ್ಟು ಹಿಗ್ಗಿದೆ.
ಅಲ್ಲದೇ ತಮ್ಮ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಕುಟುಂಬಗಳುoeಟmಮಾಡುವ ಹೊಸ ಟ್ರೆಂಡ್ ಕೂಡ ಈಗ ಹುಟ್ಟಿಕೊಂಡಿದೆ. ಹೇಗೆ ತಮ್ಮನ್ನು ಸತ್ತ ನಂತರ ಶೃಂಗರಿಸಬೇಕು ಎನ್ನುವುದರಿಂದ ಹಿಡಿದು, ಯಾವ ಬಟ್ಟೆ ಹಾಕಿ ತಮ್ಮನ್ನು ಮಣ್ಣು ಮಾಡಬೇಕು, ಯಾವ ರೀತಿಯ ಕೊಫಿನ್ ನಲ್ಲಿ ತಮ್ಮ ದೇಹವನ್ನಿಡಬೇಕು, ದೇಹದ ಜತೆ ಏನನ್ನು ಇಡಬೇಕು, ಹೇಗೆ ಅಂತ್ಯಕ್ರಿಯೆ ನಡೆಯಬೇಕು, ಹೇಗೆ ನಡೆಯಬಾರದು, ಯಾವ ರೀತಿ ಹೆಡ್ ಸ್ಟೋನ್ ಡಿಸೈನ್ ಬೇಕು ಎಲ್ಲವನ್ನೂ ಮೊದಲೇ ನಿರ್ಧರಿಸುವ ಭಾಗ್ಯ. ಇದು ಯಾವ ಮದುವೆ ಶಾಪಿಂಗ್‌ಗೂ ಕಡಿಮೆಯಲ್ಲ. ನಮ್ಮ ಜಗತ್ತೇ ವಿಚಿತ್ರ ಕಣ್ರೀ.