ಪಶ್ಚಿಮ ಬಂಗಾಳ ಚುನಾವಣೆ ಏಕೆ ಮುಖ್ಯ ?
ವಿಶ್ಲೇಷಣೆ
ನೀಲಾಂಜನ ಸರ್ಕಾರ್‌, ರಾಜಕೀಯ ವಿಶ್ಲೇಷಕ
ಪಶ್ಚಿಮ ಬಂಗಾಳವನ್ನು 10 ವರ್ಷಗಳ ಕಾಲ ಆಳಿದ ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ (ಟಿಎಂಸಿ) ಈಗ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಪ್ರಮುಖ ಪ್ರತಿಸ್ಪರ್ಧಿಯಾಗಿ ಹೊರಹೊಮ್ಮಿದೆ. ಇದು ಬಂಗಾಳದ ಚುನಾವಣಾ ರಾಜಕೀಯದಲ್ಲಿ ಉಂಟಾಗಿರುವಬಹುದೊಡ್ಡ ಬದಲಾವಣೆ. ಏಕೆಂದರೆ ಇಲ್ಲಿಯವರೆಗೆ ಈ ರಾಜ್ಯದಲ್ಲಿ ಬಿಜೆಪಿ ಯಾವತ್ತೂ ಪ್ರಮುಖ ರಾಜಕೀಯ ಹುರಿಯಾಳಾ ಗಿರಲಿಲ್ಲ.
2019ರ ಲೋಕಸಭೆ ಚುನಾವಣೆಯ ಮೂಲಕ ಬಿಜೆಪಿ ಬಂಗಾಳದಲ್ಲಿ ದೊಡ್ಡ ಹೆಜ್ಜೆಯೂರಿತು. ಆ ಚುನಾವಣೆಯಲ್ಲಿ ರಾಜ್ಯದ 42 ಲೋಕಸಭಾ ಸ್ಥಾನಗಳ ಪೈಕಿ 18ನ್ನು ಬಿಜೆಪಿ ಗೆದ್ದುಕೊಂಡಿತ್ತು. ಈಗ ನಡೆಯುತ್ತಿರುವ ವಿಧಾನಸಭಾ ಚುನಾವಣೆ ಯಲ್ಲಿ ಬಿಜೆಪಿಗೆ ಗೆಲ್ಲುವ ಅವಕಾಶವಿದೆ ಎಂಬುದಕ್ಕೆ ಇದೇ ಸಾಕ್ಷಿ. ಒಂದು ವೇಳೆ ಬಿಜೆಪಿ ಗೆದ್ದೇಬಿಟ್ಟರೆ ಅದು ಭಾರತದ ರಾಜಕಾರಣದಲ್ಲಿ ದೊಡ್ಡ ಸಂಚಲನವನ್ನೇ ಮೂಡಿಸಲಿದೆ.
ಇಲ್ಲಿಯವರೆಗೆ ಬಿಜೆಪಿ ಎಲ್ಲೆಲ್ಲಿ ತನಗೊಂದು ಗಟ್ಟಿ ನೆಲೆ ಕಂಡುಕೊಂಡು ಚುನಾವಣೆಗಳಲ್ಲಿ ದಿಗ್ವಿಜಯ ಸಾಧಿಸಿದೆಯೋ ಅಲ್ಲೆಲ್ಲ ಪ್ರಮುಖ ಪ್ರತಿಪಕ್ಷ ಕಾಂಗ್ರೆಸ್ ಆಗಿತ್ತು. ಇದನ್ನು ಬಿಟ್ಟರೆ ಬಿಜೆಪಿ ಗೆದ್ದಿರುವುದು ಬಿಹಾರ, ಉತ್ತರ ಪ್ರದೇಶದಂತಹ ದೊಡ್ಡ ಹಿಂದಿ ಭಾಷಿಕ ರಾಜ್ಯಗಳನ್ನು. ಪ್ರಾದೇಶಿಕ ಪಕ್ಷಗಳು ಆಳ್ವಿಕೆ ನಡೆಸುತ್ತಿರುವ ತಮಿಳುನಾಡು ಅಥವಾ ಪಶ್ಚಿಮ ಬಂಗಾಳದಂಥ ರಾಜ್ಯಗಳುಮುಖ್ಯವಾಗಿ ಪ್ರಾದೇಶಿಕ ಭಾಷಾ ಅಸ್ಮಿತೆಯನ್ನೇ ಚುನಾವಣೆಯ ದಾಳವಾಗಿ ಬಳಸುವುದರಿಂದ ಇವುಗಳನ್ನು ಮತ್ತಾರೂ ಗೆಲ್ಲಲು ಸಾಧ್ಯವಿಲ್ಲ ಎಂಬ ಸ್ಥಿತಿಯೇ ಇತ್ತು.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಹೇಗೆ ಪ್ರವರ್ಧಮಾನಕ್ಕೆ ಬಂದಿತು ಮತ್ತು ಆಡಳಿತಾರೂಢ ಟಿಎಂಸಿ ಹೇಗೆ ಬಿಜೆಪಿಯ ಭರಾಟೆ ಯಲ್ಲಿ ಮಂಕಾಗುತ್ತಾ ಹೋಯಿತು ಎಂಬುದ ನ್ನೊಮ್ಮೆ ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿಯ ಹೊಸ ಮಾದರಿಯ ಚುನಾವಣಾ ರಾಜಕಾರಣ ಮತ್ತು ಅದನ್ನು ಎದುರಿಸಲು ಏನು ಮಾಡಬೇಕು ಎಂಬುದು ಅರ್ಥವಾದೀತು.
2019ರ ಲೋಕಸಭೆ ಚುನಾವಣೆಯ ಫಲಿತಾಂಶವನ್ನು ಪಶ್ಚಿಮ ಬಂಗಾಳದ 294 ವಿಧಾನಸಭಾ ಕ್ಷೇತ್ರಗಳ ದೃಷ್ಟಿಯಿಂದ ನೋಡೋಣ. ಆ ಚುನಾವಣೆಯಲ್ಲಿ ಬಿಜೆಪಿ 121 ವಿಧಾನಸಭಾ ಚುನಾವಣೆಯಲ್ಲಿ ಸರಾಸರಿ ಶೇ.40.06ರಷ್ಟು ಮತಗಳೊಂದಿಗೆ ಮುನ್ನಡೆ ಸಾಧಿಸಿತ್ತು. ಟಿಎಂಸಿ ಶೇ.43.6ರಷ್ಟು ಮತ ಗಳಿಕೆಯೊಂದಿಗೆ 164 ವಿಧಾನಸಭಾ ಕ್ಷೇತ್ರಗಳಲ್ಲಿ ಮುಂದಿತ್ತು. ಕಾಂಗ್ರೆಸ್ ಮತ್ತು ಎಡಪಕ್ಷ ಗಳೆರಡೂ ಸೇರಿ ಒಟ್ಟು ಶೇ.13ರಷ್ಟು ಮತ ಗಳಿಸಿದ್ದವು.
ಕಾಂಗ್ರೆಸ್9ವಿಧಾನಸಭೆ ಕ್ಷೇತ್ರದಲ್ಲಿ ಗೆದ್ದಿತ್ತು ಹಾಗೂ ಎಡರಂಗ ಒಂದೂ ಕ್ಷೇತ್ರದಲ್ಲಿ ಗೆದ್ದಿರಲಿಲ್ಲ. ಕಾಂಗ್ರೆಸ್ ಹಾಗೂ ಎಡರಂಗದ ಮತಗಳನ್ನೆಲ್ಲ ಬಿಜೆಪಿ ತಿಂದುಹಾಕಿತು ಎಂಬುದು ಒಂದೆಡೆಯಾದರೆ, ಆ ಚುನಾವಣೆಯಲ್ಲಿ ಬಿಜೆಪಿಯ ದಿಗ್ವಿಜಯಕ್ಕೆ ಐಡೆಂಟಿಟಿಆಧರಿತ ರಾಜಕಾರಣ ಕೂಡ ಪ್ರಮುಖ ಕಾರಣವಾಗಿತ್ತು. ಬೇರೆ ರಾಜ್ಯಗಳಲ್ಲಿ ಬಿಜೆಪಿಗೆ ಮುಖ್ಯವಾಗಿ ಮೇಲ್ಜಾತಿಗಳ ವೋಟ್ ಬ್ಯಾಂಕ್ ಇದ್ದರೆ, ಪಶ್ಚಿಮ ಬಂಗಾಳದಲ್ಲಿ ಹಿಂದುಳಿದ ಜಾತಿಗಳ ಮತಗಳನ್ನೂ ಬಿಜೆಪಿ ಬುಟ್ಟಿಗೆ ಹಾಕಿಕೊಂಡಿತ್ತು.
ರಾಜ್ಯದಲ್ಲಿ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಮೀಸಲಾದ 84 ಕ್ಷೇತ್ರಗಳಲ್ಲಿ ಬಿಜೆಪಿ46ಕ್ಷೇತ್ರಗಳಲ್ಲಿ ಶೇ.55ರಷ್ಟು ಮತ ಗಳಿಸಿ ಮುನ್ನಡೆ ಸಾಧಿಸಿತ್ತು. ಇನ್ನುಳಿದ210ವಿಧಾನಸಭಾ ಕ್ಷೇತ್ರಗಳಲ್ಲಿ75ನ್ನು (ಶೇ.36) ಮಾತ್ರ ಗೆದ್ದಿತ್ತು. ಅದೇ ವೇಳೆ, ಬಹಳ ದೊಡ್ಡ ಪ್ರಮಾಣದಲ್ಲಿ ಹಿಂದು – ಮುಸ್ಲಿಂ ಮತಗಳ ಧ್ರುವೀಕರಣವೂ ನಡೆಯಿತು. ಲೋಕನೀತಿಯ2019ರ ರಾಷ್ಟ್ರೀಯ ಚುನಾವಣಾ ಸಮೀಕ್ಷೆಯ ಪ್ರಕಾರ ಶೇ.57ರಷ್ಟು ಹಿಂದುಗಳು ಬಿಜೆಪಿಗೂ, ಶೇ.32ರಷ್ಟು ಹಿಂದುಗಳು ಟಿಎಂಸಿಗೂ ಮತ ಹಾಕಿದ್ದರು.
ಆದರೆ, ಅದಕ್ಕೆ ವ್ಯತಿರಿಕ್ತವಾಗಿ ಟಿಎಂಸಿ ಶೇ.70ರಷ್ಟು ಮುಸ್ಲಿಮರ ಮತ ಗಳಿಸಿತ್ತು ಹಾಗೂ ಬಿಜೆಪಿ ಕೇವಲ ಶೇ.4ರಷ್ಟು ಮುಸ್ಲಿಮರ ಮತ ಗಳಿಸಿತ್ತು. ಈ ಐಡೆಂಟಿಟಿ ಆಧರಿತ ಧ್ರುವೀಕರಣ ಇಂದೂ ಬಂಗಾಳದ ಚುನಾವಣಾ ಕಣದಲ್ಲಿ ಕಾಣಿಸುತ್ತಿದೆ. ಬಿಜೆಪಿಗೆ ಗೆಲ್ಲುವ ಸಾಧ್ಯತೆ ಎಷ್ಟಿದೆ ಎಂಬುದನ್ನು ಅಳೆಯಲು ಈ ಜನಲಕ್ಷಣವನ್ನೇ ಬಳಸಬಹುದು. ಬಂಗಾಳದ ಶೇ.30ರಷ್ಟು  ಮತದಾ ರರು ಮುಸ್ಲಿಮರು. ಹೀಗಾಗಿ ಮೇಲ್ನೋಟಕ್ಕೆ ನಾವು ಇನ್ನುಳಿದ ಶೇ.70ರಷ್ಟು ಮತದಾರರು ಹಿಂದುಗಳು ಎಂದು ಭಾವಿಸಬಹುದು. ಬಿಜೆಪಿಗೆ ಹೇಗಿದ್ದರೂ ಮುಸ್ಲಿಮರ ಬೆಂಬಲ ನಗಣ್ಯ ಎಂಬಷ್ಟೇ ಇದೆ.
ಇದರರ್ಥ, ಬಿಜೆಪಿ ಯೇನಾದರೂ ಹಿಂದುಗಳ ಮತದಲ್ಲಿ ಶೇ.60-65ರಷ್ಟನ್ನು ಪಡೆಯುವಲ್ಲಿ ಯಶಸ್ವಿಯಾದರೂ ಗೆದ್ದುಬಿಡುತ್ತದೆ. ಈ ಮತಗಳನ್ನು ಪಕ್ಕಾ ಮಾಡಿಕೊಳ್ಳಲು ಬಿಜೆಪಿ ‘ಪರಿವರ್ತನ’ ಯಾತ್ರೆ ನಡೆಸುತ್ತಿದೆ. ಇದು 1990ರ ದಶಕದಲ್ಲಿ ಬಿಜೆಪಿಗೆ ಬಹುದೊಡ್ಡ ನೆಲೆ ಒದಗಿಸಿಕೊಟ್ಟ ರಥ ಯಾತ್ರೆಯ ಮಾದರಿಯಲ್ಲೇ ಇದೆ. ಹಿಂದು – ಮುಸ್ಲಿಂ ಮತಗಳನ್ನು ದೊಡ್ಡ ಪ್ರಮಾಣದಲ್ಲಿ ಧ್ರುವೀಕರಣಗೊಳಿಸುವ ಮತ್ತು ಈ ಸಮುದಾಯಗಳ ನಡುವಿನ ಅಂತರವನ್ನು ಇನ್ನಷ್ಟು ಹೆಚ್ಚಿಸುವ ರೀತಿಯ ಚುನಾವಣಾ ಪ್ರಚಾರ ತಂತ್ರಗಳು ಯಾವತ್ತೂ ಬಿಜೆಪಿಗೆ ಲಾಭದಾಯಕ ವಾಗಿಯೇ ಪರಿಣಮಿಸಿವೆ.
ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ ಟಿಎಂಸಿಗೆ ಆತಂಕ ತಂದಿಡುವ ಸಂಗತಿಗಳು ಇಲ್ಲಿ ಇನ್ನಷ್ಟಿವೆ. ಪ್ರಮುಖ ನಾಯಕರು ಸಾಲುಸಾಲಾಗಿ ಬಿಜೆಪಿಗೆ ಹೋಗಿ ಸೇರಿಕೊಂಡಿದ್ದಾರೆ. ಟಿಎಂಸಿಯ ತಳಮಟ್ಟದ ಕಾರ್ಯಕರ್ತರು ಹಿಂಸಾಚಾರದಲ್ಲಿ ಎತ್ತಿದ ಕೈ. ಇದು ಪಕ್ಷಕ್ಕೆ ಕೆಟ್ಟ ಹೆಸರು ತಂದುಕೊಡುತ್ತಿದೆ. ಅದಕ್ಕಿಂತ ಹೆಚ್ಚಾಗಿ ಟಿಎಂಸಿಗಿರುವ ಪ್ರಮುಖ ಸವಾಲೆಂದರೆ ಜಾತಿ, ಬುಡಕಟ್ಟು ಹಾಗೂ ಧಾರ್ಮಿಕ ಗುರುತಿನ ಆಧಾರದಲ್ಲಿ ಮತಗಳು ವಿಭಜನೆಯಾಗುವುದನ್ನು ತಪ್ಪಿಸುವುದು.
ದೆಹಲಿಯಲ್ಲೂ ಹೀಗೇ ಆಗಿತ್ತು. ಆಗ ಆಮ್ ಆದ್ಮಿ ಪಕ್ಷ (ಆಪ್) ಹಿಂದು – ಮುಸ್ಲಿಂ ಇಬ್ಬರ ರಾಜಕೀಯ ವಿಚಾರದಲ್ಲೂಸ್ಪಷ್ಟ ಹಾಗೂ ಗಟ್ಟಿ ನಿಲುವು ತೆಗೆದುಕೊಂಡು ಮತಗಳ ಧ್ರುವೀಕರಣವನ್ನು ತಪ್ಪಿಸಿತು. ಬಂಗಾಳದಲ್ಲಿ ಟಿಎಂಸಿ ಕೂಡ ಹಿಂದು ಮತಗಳನ್ನು ಉಳಿಸಿಕೊಳ್ಳಲು ಹೀಗೇ ಮಾಡುತ್ತದೆ ಎಂದು ಎಲ್ಲರೂ ನಿರೀಕ್ಷಿಸಿರಬಹುದು.
ಆದರೆ, ಟಿಎಂಸಿ ಮಾಡಿದ್ದೇ ಬೇರೆ. ಅದರ ರಾಜಕೀಯ ತಂತ್ರಗಾರ ಪ್ರಶಾಂತ್ ಕಿಶೋರ್ ಪಶ್ಚಿಮ ಬಂಗಾಳದಲ್ಲಿ ಬೇರೆಯದೇ ರೀತಿಯ ಸಲಹೆ ನೀಡಿದ್ದಾರೆ. ಇವರು ಆಮ್ ಆದ್ಮಿ ಪಕ್ಷಕ್ಕೂ ಚುನಾವಣಾ ತಂತ್ರಗಾರರಾಗಿದ್ದರು. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯು ಬಿಜೆಪಿಗೆ ಪರ್ಯಾಯವಾದ ‘ಅಭಿವೃದ್ಧಿಪರ’ ಪಕ್ಷವಾಗಿ ಗುರುತಿಸಿಕೊಳ್ಳಲು ಬಯಸುತ್ತಿದೆ. ಜತೆಗೆ, ಭಾರತದ ಕುರಿತ ಬಿಜೆಪಿಯ ದೃಷ್ಟಿಕೋನಕ್ಕೆ ಪರ್ಯಾಯ ವಾದ ದೃಷ್ಟಿಕೋನದೊಂದಿಗೆ ಗುರುತಿಸಿಕೊಳ್ಳುತ್ತಿದೆ.
ಪ್ರಾದೇಶಿಕ ಭಾಷಾ ರಾಷ್ಟ್ರೀಯವಾದದ ಜತೆಗೆ ಟಿಎಂಸಿ ತನಗೆ ಲಿಂಗ ಸಮಾನತೆ ಹಾಗೂ ಸಾಮಾಜಿಕ ಸಾಮರಸ್ಯದ ಬಗ್ಗೆಯೂ ಬಹಳ ಕಳಕಳಿಯಿದೆ ಎಂದು ತೋರಿಸಿಕೊಳ್ಳುತ್ತಿದೆ. (ಎಡ ಪಕ್ಷಗಳು ಮತ್ತು ಕಾಂಗ್ರೆಸ್ ಪಕ್ಷವು ವಾದಿತ ಧರ್ಮಗುರು ಅಬ್ಬಾಸ್ಸಿದ್ದಿಕಿ ಜತೆ ಒಪ್ಪಂದ ಮಾಡಿಕೊಳ್ಳುವುದರೊಂದಿಗೆ ಇದು ಇನ್ನಷ್ಟು ಢಾಳಾಗಿ ಎದ್ದು ಕಾಣಿಸುತ್ತಿದೆ). ಕಣ್ಣಿಗೆ ರಾಚುವ ಒಂದು ಉದಾಹರಣೆ ನೋಡಿ. ಗಣರಾಜ್ಯೋತ್ಸವ ದಿನದಂದು ದಿಲ್ಲಿಯ ಪಥಸಂಚಲನದಲ್ಲಿ ಬಹುತೇಕ ರಾಜ್ಯಗಳು ಧಾರ್ಮಿಕ ಅಥವಾ ಸಾಂಪ್ರದಾಯಿಕ ಸ್ತಬ್ಧಚಿತ್ರಗಳಿಗೆ ಮೊರೆಹೋದರೆ ಪಶ್ಚಿಮ ಬಂಗಾಳ ಮಾತ್ರ ಲ್ಯಾಪ್‌ಟಾಪ್ ಎದುರು ಕುಳಿತು ಓದುತ್ತಿರುವ ಶಾಲಾವಿದ್ಯಾರ್ಥಿನಿಯ ಸ್ತಬ್ಧಚಿತ್ರ ಪ್ರದರ್ಶಿಸಿತ್ತು. ಇದು ಪಶ್ಚಿಮ ಬಂಗಾಳದಲ್ಲಿ ಹೆಣ್ಣುಮಕ್ಕಳ ಮತ್ತು ಮಹಿಳಾ ಶಿಕ್ಷಣಕ್ಕೆ ರಾಜ್ಯಸರಕಾರ ಒತ್ತು ನೀಡುತ್ತಿದೆ ಎಂಬುದಕ್ಕೆ ರಾಷ್ಟ್ರಮಟ್ಟದ ಜಾಹೀರಾತಾಗಿತ್ತು.
2020ರ ಡಿಸೆಂಬರ್‌ನಲ್ಲಿ ರಾಜ್ಯ ಸರಕಾರ ‘ದೌರೆ ಸರ್ಕಾರ್’ (ನಿಮ್ಮ ಮನೆ ಬಾಗಿಲಿಗೆ ಸರ್ಕಾರ) ಎಂಬ ಯೋಜನೆ ಜಾರಿಗೆ ತಂದಿದೆ. ಅದರಲ್ಲಿ ಜನರು ತಮ್ಮ ಊರಿನ ಸಮೀಪದಲ್ಲೇ ನಡೆಯುವ ಸ್ಥಳೀಯ ಮೇಳಗಳಿಗೆ ತೆರಳಿ ಸರಕಾರದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಡಿಸೆಂಬರ್ 1, 2020ಹಾಗೂ ಜನವರಿ 18,2021ರ ನಡುವೆ ಈ ಯೋಜನೆ22ಕೋಟಿ ಜನರನ್ನು ತಲುಪಿದೆ ಎಂದು ಸರಕಾರ ಹೇಳಿಕೊಂಡಿದೆ.
ದೇಶದ ಏಕೈಕ ಮಹಿಳಾ ಮುಖ್ಯಮಂತ್ರಿಯೆಂದು ಜನಪ್ರಿಯತೆ ಗಳಿಸಿರುವ ಹಾಗೂ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವ ಬಗ್ಗೆ ಅತಿಹೆಚ್ಚು ಗಮನ ಹರಿಸುವ ಮುಖ್ಯಮಂತ್ರಿ ಎಂದು ಬಿಂಬಿಸಿಕೊಳ್ಳುತ್ತಿರುವ ಮಮತಾ ಬ್ಯಾನರ್ಜಿಗೆ ಈ ನೆರೇಟಿವ್ ಚೆನ್ನಾಗಿ ಹೊಂದುತ್ತದೆ. ಇತ್ತೀಚೆಗೆ ನಡೆದ ಸಿವೋಟರ್ ಸಮೀಕ್ಷೆಯಲ್ಲಿ ಶೇ.55ರಷ್ಟು ಜನರು ಮಮತಾ ಬ್ಯಾನರ್ಜಿಯೇ ಬಂಗಾಳದ ಮುಖ್ಯಮಂತ್ರಿಯಾಗಿ ಮುಂದುವರಿಯಬೇಕೆಂದು ಹೇಳಿದ್ದಾರೆ. ಅರ್ಧಕ್ಕರ್ಧ ಮತದಾರರು ‘ದೌರೆ ಸರ್ಕಾರ್’ ಯೋಜನೆ ಟಿಎಂಸಿಯ ಗೆಲುವಿಗೆ ಸಹಾಯ ಮಾಡುತ್ತದೆ ಎಂದಿದ್ದಾರೆ ಬಂಗಾಳದಲ್ಲಿ ಯಾವ ದಿಕ್ಕಿಗೆ ಗಾಳಿ ಬೀಸುತ್ತದೆ ಎಂಬುದು ನಮಗಿನ್ನೂ ಗೊತ್ತಿಲ್ಲ.
ಅಚ್ಚರಿಯ ರೀತಿಯಲ್ಲಿ ಟಿಎಂಸಿ ಯೇನಾದರೂ ಗೆದ್ದುಬಿಟ್ಟರೆ ಅದು ಈಗ ದೇಶಾದ್ಯಂತ ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿರುವ ಮತಗಳ ಧ್ರುವೀಕರಣ ಪ್ರಯತ್ನ ಹಾಗೂ ಕೇಂದ್ರೀಯ ಏಜೆನ್ಸಿಗಳ ಮೂಲಕ ಒತ್ತಡ ಹೇರುವ ತಂತ್ರಗಳನ್ನು ಮೀರಿಯೂ ಹೇಗೆ ಬಿಜೆಪಿಯನ್ನು ಎದುರಿಸಬಹುದು ಎಂಬುದಕ್ಕೆ ಮತ್ತು ದೇಶದ ಮತದಾರರು ಹೇಗೆ ಬಿಜೆಪಿಗೆ ಪರ್ಯಾಯವಾದ ಅಭಿವೃದ್ಧಿಪರರಾಜಕೀಯ ಪಕ್ಷವನ್ನು ಆಯ್ಕೆ ಮಾಡುವುದಕ್ಕೆ ಉತ್ಸುಕರಾಗಿದ್ದಾರೆ ಎಂಬುದಕ್ಕೆ ಒಳ್ಳೆಯ ಮಾದರಿಯಾಗಿ ಹೊರಹೊಮ್ಮಲಿದೆ.