ರಾಹುಲ್ ಗಾಂಧಿಗೆ ಭಾಷಣ ಸಿದ್ದಪಡಿಸಿಕೊಡುವ ’ಮಹಾಪುರುಷ’ ಯಾರು ?
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
೨೦೧೮ರ ಲೋಕಸಭಾ ಚುನಾವಣೆಯಲ್ಲಿ ಅಂಬರೀಶ್ ಅವರ ಪತ್ನಿ ಸುಮಲತಾ ಅವರು ಚುನಾವಣೆಗೆ ನಿಲ್ಲಲು ಮುಂದಾದಾಗರಾಜಕೀಯ ಪಕ್ಷಗಳು ಅವರನ್ನು ಕೇವಲವಾಗಿ ನೋಡಿದರು. ‘ಮಂಡ್ಯದ ಗಂಡು ಅಂಬರೀಶ್ ಗೌಡ್ರು ಎಲ್ಲಿ, ಪರಭಾಷೆ, ಪರಜಾತಿಯ ಸುಮಲತಾ ಎಲ್ಲಿ.
ಆಕೆ ಸೋಲುವುದಕ್ಕಾಗಿಯೇ ನಿಲ್ಲುತ್ತಿದ್ದಾಳೆ’ ಎಂದು ಮನಬಂದಂತೆ ಹೀಯಾಳಿಸಿದರು. ಪುಟಗೋಸಿ ಗಿರಾಕಿ ಗಳು, ‘ಹಳೇ ರೌಡಿ ಹೊಸ ರಾಜಕಾರಣಿ’ಯಂಥ ಪುಢಾರಿಗಳೆಲ್ಲಾ ಸುಮಲತಾ ಅವರನ್ನು ಏಕವಚನದಲ್ಲೆಲ್ಲ ಅಪಮಾನಿಸಿದರು. ಅದರಲ್ಲೂ ಆಕೆಯ ವಿರುದ್ಧ ನಿಂತಿದ್ದವರು ಪಕ್ಕಾ ಲೋಕಲ್ ರಾಜಕೀಯದ ಡ್ರಾಮ ಮಾಸ್ಟರ್‌ಗಳು. ಸುಮಲತಾ ಅವರಿಗೆ ಅಲ್ಲಿಯವರೆಗೂರಾಜಕೀಯ ದಲ್ಲಿನ ಅನುಭವಗಳು ಚಿಂತನೆ ತಂತ್ರಗಾರಿಕೆ ಇವುಗಳಾವುದರ ಅನುಭವವು ಇಲ್ಲದಿರುವುದು ಮಂಡ್ಯ ಜನತೆಗೇ ಗೊತ್ತಿತ್ತು.
ಆದರೆ ಸುಮಲತಾ ಅವರು ತಮಗಾದ ನಿಂದನೆ ಅವಮಾನಗಳನ್ನೆಲ್ಲಾ ಸಹಿಸಿಕೊಂಡ ಪರಿ, ತೋರಿದ ವ್ಯಕ್ತಿತ್ವ, ಸಹನೆ, ತಾಳ್ಮೆ, ಮಾತಿನಲ್ಲಿನ ಪ್ರಬುದ್ಧತೆ ಇವೆಲ್ಲವನ್ನೂ ನೋಡಿದ ಮತದಾರರು ಅಂದುಕೊಂಡಿದ್ದೇನೆಂದರೆ ‘ಅಂಬರೀಷ್ ಅವರಿಗಿಂತಮೊದಲೇ ಸುಮಲತಾ ಅವರೇ ರಾಜಕೀಯಕ್ಕೆ ಬಂದಿದ್ದರೆ ಇಷೊತ್ತಿಗೆ ಎಲ್ಲೋ ಹೋಗಿಬಿಡುತ್ತಿದ್ದರು’ ಎಂದು. ಅದಕ್ಕೆ ತಕ್ಕಂತೆ ಅಂದಿನ ಚುನಾವಣಾ ಚಕ್ರವ್ಯೂಹದಲ್ಲಿ ಗೆದ್ದು ಆಶ್ಚರ್ಯ ಮೂಡಿಸಿದರು. ಆದರೆ ಚಕ್ರವ್ಯೂಹದಲ್ಲಿ ಸೋತದ್ದು ಮಾತ್ರ ರೀಲ್ ಅಭಿಮನ್ಯುಗಳು.
ಹೀಗೆ ವ್ಯಕ್ತಿಯೊಬ್ಬನಿಗೆ ತನ್ನ ವ್ಯಕ್ತಿತ್ವ ಚಿಂತನೆ, ನಡವಳಿಕೆ, ಮಾತುಗಾರಿಕೆ, ಗುಣ, ನಡತೆ, ಹವ್ಯಾಸ, ಕಲೆ, ಬುದ್ಧಿವಂತಿಕೆ, ಜಾಣತನ, ಪ್ರತಿಭೆ, ಅನುಭವ ಇವುಗಳು ಅನುವಂಶಿಕವಾಗಿಯೋ, ಗುರುಗಳು ಕಲಿಸಿದ ಪಾಠಗಳಿಂದಲೋ ಅಥವಾ ಸಹವಾಸ ಗಳಿಂದಲೋ ಬರುವುದು ಸಹಜ. ನಮ್ಮ ಮನೆಗಳಲ್ಲಿ ಮಕ್ಕಳ ಗುಣ ಗಳನ್ನು ನೋಡಿದ ಕೂಡಲೇ ಹಿರಿಯರು ಈತ ಎಲ್ಲಾತಾತನ ತರಹನೇ, ಅಪ್ಪನ ತರಹನೇ ಎಂದು ನಿರ್ಧರಿಸಿ ಮುದ್ದಿನ ಮಾತುಗಳಾಡುತ್ತೇವೆ. ಆದರೆ ಇಂಥ ತರ್ಕ ಗಳನ್ನು ಮೀರಿ ಅನಿರೀಕ್ಷಿತವಾಗಿ ಆಯಾ ಸಮಯಕ್ಕೆ ಆಯಾ ಕಾಲಕ್ಕೆ ಸರಿಯಾಗಿ ಗುಣಗಳು ಸಿದ್ಧಿಸಿಬಿಡುತ್ತದೆ.
ಇದು ಕಲೆ, ಸಿನಿಮಾ, ಕ್ರೀಡೆ, ರಾಜಕೀಯ, ಯಾವುದೇ ಕ್ಷೇತ್ರದಲ್ಲಿ ಸಂಭವಿಸ ಬಹುದು. ಯಾವ ವ್ಯಕ್ತಿಯಲ್ಲಿ ಎಂಥ ಸಾಮರ್ಥ್ಯ ಶಕ್ತಿ ಚಿಂತನೆ ಹೊರಹೊಮ್ಮುತ್ತದೆ ಎಂದು ಹೇಳಲು ಬರುವುದಿಲ್ಲ. ಅನುಭವಗಳು ಹೆಚ್ಚಾದಂತೆಲ್ಲಾ ಜ್ಞಾನವೂ ಹೆಚ್ಚುತ್ತದೆ. ಕೆಲವರಿಗೆ ವಯಸ್ಸಷ್ಟೇ ಹೆಚ್ಚಾಗುತ್ತದೆ. ರಾಯರ ಕುದುರೆಯಂತೆ. ಮೊನ್ನೆ ತಮಿಳುನಾಡಿನಲ್ಲಿ ಭವಿಷ್ಯದ ಪ್ರಧಾನಿ ಅಭ್ಯರ್ಥಿ ಯಾಗಿ ಬಿಂಬಿಸಿಕೊಂಡಿರುವ ರಾಹುಲ್‌ಗಾಂಧಿಯವರು ತಮಿಳುನಾಡು, ಕೇರಳ ರಾಜ್ಯಗಳ ವೇದಿಕೆಗಳಲ್ಲಿ ನಡೆದುಕೊಂಡ ರೀತಿ, ಮಾತನಾಡಿದ ಮಾತುಗಳು, ಅವರ ಲಾಜಿಕ್ಕು, ಗಿಮಿಕ್ಕುಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಕಿಕ್ಕು ಪಡೆದು ಕೊಂಡಿದೆ.
ಪಾಪ, ತಮ್ಮ ಅರ್ಧ ಶತಮಾನ ದಾಟಿದ ವಯಸ್ಸಿನಲ್ಲಿ ಬಡ ಭಾರತದಲ್ಲಿ ಈ ಮಟ್ಟದಲ್ಲಿ ಸಾರ್ವಜನಿಕವಾಗಿ ಬೆರೆಯುವಿಕೆ,ಹಾಡು ಕುಣಿತ ಅಡುಗೆ ಮಾಡುವುದು, ಈಜಾಡುವುದು, ಇವುಗಳನ್ನೆಲ್ಲಾ ಮನಪೂರ್ವಕವಾಗಿ ಬೇಸಿಗೆ ರಜೆಯ ಮಕ್ಕಳಂತೆ ಅನುಭವಿಸಿದರು. ಅವರಲ್ಲಿನ ಮುಗ್ಧತೆ ಸರಳತೆ ಮಾತ್ರ ಅಭೂತಪೂರ್ವವಾಗಿತ್ತು. ಆದರೆ ತಮಿಳುನಾಡು ಪಾಂಡಿಚೇರಿ ಕೇರಳ ರಾಜ್ಯಗಳಲ್ಲಿನ ಚುನಾವಣಾ ತಾಲೀಮು ಭಾಷಣಗಳು ಮಾತ್ರ ರಾಜಕೀಯ ವಿಶ್ಲೇಷಕರಿಗೆ ಅರ್ಥಮಾಡಿಕೊಳ್ಳಲು ಸಾಧ್ಯ ವಾಗುತ್ತಿಲ್ಲ.
ರಾಹುಲ್‌ಗಾಂಧಿ ಮಾತನಾಡುತ್ತಾ ‘ಒಂದೇ ಸಂಸ್ಕೃತಿ ಒಂದೇ ದೇಶ ಮತ್ತು ಒಂದೇ ಇತಿಹಾಸ ಎಂಬ ಹೆಸರಿನಲ್ಲಿ ಇತರ ಭಾಷೆ ಮತ್ತು ಸಂಸ್ಕೃತಿಗಳನ್ನು ವಿರೋಧಿಸುವ ಶಕ್ತಿಗಳನ್ನು ದೂರವಿಡಲು ಭಾರತಕ್ಕೆ ತಮಿಳುನಾಡು ಮಾರ್ಗ ತೋರಿಸಬೇಕು’ ಎಂದು ಕರೆ ನೀಡುತ್ತಾರೆ. ತಮಿಳರನ್ನು ಹೊರತುಪಡಿಸಿ ತಮಿಳುನಾಡನ್ನು ಆಳಲು ಬೇರೆ ಯಾರಿಗೂ ಸಾಧ್ಯವಿಲ್ಲ, ತಮಿಳುಭಾಷೆಯನ್ನು ಪ್ರತಿನಿಧಿಸುವ ವ್ಯಕ್ತಿ ಮಾತ್ರ ತಮಿಳುನಾಡಿನ ಮುಖ್ಯಮಂತ್ರಿಯಾಗಲು ಸಾಧ್ಯ ಎಂಬುದನ್ನು ಈ ಚುನಾವಣೆಯಲ್ಲಿ ತೋರಿಸೋಣ, ಕೇಂದ್ರ ಸರಕಾರ ಮತ್ತು ಬಿಜೆಪಿಗೆ ತಮಿಳು ಭಾಷೆ ಹಾಗೂ ಸಂಸ್ಕೃತಿ ಬಗ್ಗೆ ಗೌರವವಿಲ್ಲ, ತಮಿಳು ಸಂಸ್ಕೃತಿಯನ್ನು ಅವಮಾನಿಸಲು ನಾನು ಬಿಡುವುದಿಲ್ಲಾ’ ಎನ್ನುತ್ತಾರೆ.
ಜತೆಗೆ ‘ಪ್ರಧಾನಿ ಮೋದಿಗೆ ತಲೆಬಾಗುವ ತಮಿಳು ನಾಡು ಮುಖ್ಯಮಂತ್ರಿ ಪಳನಿಸ್ವಾಮಿ ಅವರಿಂದ ಅಭಿವೃದ್ಧಿ ಸಾಧ್ಯವಿಲ್ಲ.ಮುಖ್ಯಮಂತ್ರಿ ರಾಜ್ಯದ ಜನರಿಗೆ ತಲೆಬಾಗದೇ ಆರ್ ಎಸ್‌ಎಸ್ ಮತ್ತು ಮೋದಿಗೆ ತಲೆಬಾಗುತ್ತಿದ್ದಾರೆ. ಇದರಿಂದ ತಮಿಳು ಭಾಷೆ ಮತ್ತು ಸಂಸ್ಕೃತಿಯನ್ನು ಅವಮಾನ ಮಾಡುತ್ತಿದ್ದಾರೆ. ನನ್ನ ತಂದೆ ಇಲ್ಲೇ ಪ್ರಾಣ ತೆತ್ತಿದ್ದಾರೆ. ಹೀಗಾಗಿ ನನಗೂ ತಮಿಳುನಾಡಿಗೂಸಂಬಂಧವಿದೆ’ ಎನ್ನುತ್ತಾರೆ. ಆ ಮೂಲಕ ತಮ್ಮಲ್ಲಿನ ಅಗಾಧ ತಮಿಳು ಪ್ರೇಮವನ್ನು ಪ್ರದರ್ಶಿಸಿದ್ದಾರೆ.
ಇಷ್ಟಕ್ಕೂ ರಾಹಲ್‌ಗಾಂಧಿ ಮನದಲ್ಲಿ ಇರುವುದು ಮತ್ತು ಹೇಳುತ್ತಿರುವುದೇನೆಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ತಮಿಳುನಾಡಿನಲ್ಲಿ ತಮಿಳುದ್ರಾವಿಡ ಆಧಾರಿತ ಪಕ್ಷಗಳು ಮತ್ತು ವ್ಯಕ್ತಿಗಳನ್ನು ಹೊರತುಪಡಿಸಿ, ಅಧಿಕಾರ ಹಿಡಿಯುವುದು ಅಷ್ಟುಸುಲಭವಲ್ಲ. ಸದ್ಯದ ಪರಿಸ್ಥಿತಿಯಲ್ಲಂತೂ ಕಾಂಗ್ರೆಸ್ ಪಕ್ಷಕ್ಕೆ ಅದು ಎಟುಕದ ಹುಳಿದ್ರಾಕ್ಷಿಯಾಗಿದೆ. ಆದರೆ ಬಿಜೆಪಿ ಸುಮ್ಮನೆ ಕುಳಿತಿಲ್ಲ. ನಟಿ ಖುಷ್ಬು, ನಿವೃತ್ತ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಪ್ರಮುಖ ತಮಿಳು ಭಾಷಿಕ ವ್ಯಕ್ತಿಗಳನ್ನೇ ಪಕ್ಷಕ್ಕೆ ಕರೆತಂದು ಕಠಿಣ ಪ್ರಯತ್ನಗಳನ್ನು ಮಾಡುತ್ತಿದೆ.
ಅಧಿಕಾರ ಹಿಡಿಯದಿದ್ದರೂ ಪರವಾಗಿಲ್ಲ, ಆದರೆ ಖಾತೆ ತೆರೆದು ಗೂಟ ನೆಡುವ ಕಾರ್ಯಕ್ಕಂತೂ ಭರ್ಜರಿ ಆರಂಭ ನೀಡಿದೆ.ಸಿನಿಮಾ ನಟಿಯರನ್ನು ದೇವರೆಂದು ಭಾವಿಸಿ ಗುಡಿಕಟ್ಟಿ ಪೂಜಿಸುವ ತಮಿಳರಿಗೆ ಕಾಂಗ್ರೆಸ್ಸೂ ಒಂದೇ ಬಿಜೆಪಿಯೂ ಒಂದೇ. ಅವರು ಇಬ್ಬರನ್ನೂ ‘ಹಿಂದಿಕ್ಕಾರನ್’ ಎಂದೇ ನೋಡುತ್ತಾರೆ. ಇದನ್ನು ದಾಟಿ ಇತ್ತೀಚೆಗೆ ತಮಿಳು ನಾಡಿನಲ್ಲಿ ಅಭಿಮಾನಿಯೊಬ್ಬ ಮೋದಿಯವರ ಪುತ್ಥಳಿ ನಿರ್ಮಿಸಿ ಪೂಜಿಸುವಷ್ಟು ದೇಶಪ್ರೇಮಿ ಯಾಗಿರುವುದು ಸುದ್ದಿಯಾಗಿತ್ತು. ಅದು ತಮಿಳರಲ್ಲಿನ ಯಾವುದೋ ಒಂದು ಬದಲಾವಣೆಯ ದಿಕ್ಸೂಚಿಯಾಗುತ್ತಿರುವುದು ಸುಳ್ಳಲ್ಲ.
ಜತೆಗೆ ರಜನಿಕಾಂತ್ ಅವರು ಮೋದಿಯವರ ಕಾರ್ಯ ಗಳನ್ನು ಸ್ಮರಿಸುತ್ತಿರುವುದು ಬಿಜೆಪಿಯೊಳಗೆ ಸಣ್ಣ ಆಶಾಭಾವ ಹುಟ್ಟಿಸಿದೆ. ಮುಖ್ಯಮಂತ್ರಿ ಪಳನಿಸ್ವಾಮಿ ಬಿಜೆಪಿಯೊಂದಿಗೆ ಉತ್ತಮ ಸಂಬಂಧವಿರಿಸಿಕೊಂಡಿದ್ದಾರೆ. ಚುನಾವಣಾ ಚಾಣಕ್ಯ ಎನಿಸಿರುವಅಮಿತ್ ಶಾ ಅವರು ತಮಿಳುನಾಡಿನಲ್ಲಿ ಸಾಕಷ್ಟು ಓಡಾಡಿ ಹೋಗಿದ್ದಾರೆ. ಇನ್ನೂ ಚುನಾವಣಾ ಕಾವು ಏರಲಿದೆ. ಜತೆಗೆ ಕರುಣಾನಿಧಿ ಹಿರಿಯ ಪುತ್ರ ಅಳಗಿರಿ ಪ್ರತ್ಯೇಕ ಪಕ್ಷವನ್ನು ಕಟ್ಟಿ ಎನ್‌ಡಿಎಗೆ ಬೆಂಬಲಿಸುವ ಮಾತುಗಳನ್ನಾಡಿದ್ದಾರೆ. ಮುಖ್ಯವಾಗಿ ಯಾವುದೇ ಸಮಯದಲ್ಲಿ ರಜನಿಕಾಂತ್ ಬಿಜೆಪಿಯನ್ನು ಬೆಂಬಲಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ.
ವಿಷಯ ಹೀಗಿರುವಾಗ ಇದನ್ನೆಲ್ಲಾ ಅದ್ಯಾವ ಸಲಹೆಗಾರ ಮನದಟ್ಟು ಮಾಡಿದನೋ ರಾಹುಲ್‌ಗಾಂಧಿಗೆ ಈಗ ಸಿಕ್ಕಿರುವುದು ‘ತಮಿಳು’ ಅಸ. ಇದು ಎಷ್ಟರ ಮಟ್ಟಿಗಿದೆಯೆಂದರೆ ತನ್ನ ತಂದೆಯನ್ನು ಕೊಂದು ಚಿಂದಿ ಮಾಡಿದ ಒಂದು ಪ್ರತ್ಯೇಕ ತಮಿಳು ಭಯೋತ್ಪಾದಕರ ಭಾಷೆಯನ್ನೇ ಬಳಸಿಕೊಂಡು ಅದರ ಮೂಲಕವೇ ಅನುಕಂಪ ಸಂಪಾದಿಸಿಕೊಳ್ಳುವ ಐಡಿಯಾಲಾಜಿಯನ್ನುಬಳಸುವಂತಾಗಿದೆ. ಹೀಗಾಗಿ, ‘ಬಿಜೆಪಿ ಬರುತ್ತಿದೆ, ಅದು ಹಿಂದಿವಾಲ ಪಕ್ಷ, ಅದು ತಮಿಳುನಾಡನ್ನು ಆಳುತ್ತದೆ.
ಅದರಿಂದ ತಮಿಳರು ಸರ್ವನಾಶವಾಗಿಬಿಡುತ್ತಾರೆ’ ಎಂಬ ಕಾಲ್ಪನಿಕ ವಾದ ವನ್ನು ಮಂಡಿಸುತ್ತಿದ್ದಾರೆ. ಆ ಮೂಲಕ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸದಿದ್ದರೂ ಪರವಾಗಿಲ್ಲ, ಬಿಜೆಪಿಯನ್ನು ಸೋಕಿಸಿಕೊಳ್ಳಬೇಡಿ. ನೀವೇ ರಾಜ್ಯಭಾರ ಮಾಡಿಕೊಂಡಿರಿ ಎನ್ನು ವಂತಿದೆ. ಒಂದು ಕಡೆ ಬಿಜೆಪಿಯವರು ಹಿಂದಿವಾಲಗಳು ಎನ್ನುವಂತೆ ತಮಿಳರನ್ನು ಎತ್ತಿಕಟ್ಟುವ ತಂತ್ರವಿದ್ದರೆ, ಅಸಲಿಗೆ ಅತ್ತ ಹಿಂದಿವಾಲ ಇತ್ತ ಆಂಗ್ಲವಾಲ ಕೂಡಾ ಆಗಿರದಂತೆ ಕಾಣುವ ರಾಹುಲ್ ಗಾಂಧಿಯನ್ನು ತಮಿಳರು ಯಾವ ನೆಲೆಯಲ್ಲಿಕಾಣುತ್ತಾರೆ ಎಂಬುದು ಕುತೂಹಲ.
ಮತ್ತೊಂದು ಸೂಕ್ಷ್ಮ ವಿಚಾರವೆಂದರೆ ದೇಶದ ಗ್ರಾಮೀಣ ಮಟ್ಟದ ಅಭಿವೃದ್ಧಿಗೆ ಸ್ಥಳೀಯ ಮಟ್ಟದ ಪ್ರಾದೇಶಿಕ ಪಕ್ಷಗಳು ಅತ್ಯ ಗತ್ಯ. ಆದರೆ ದೇಶವನ್ನೇ ದಿಕ್ಕು ತಪ್ಪಿಸುವಷ್ಟು ಬೆಳೆದಿರುವ ಪ್ರಾದೇಶಿಕ ಪಕ್ಷಗಳು ದೇಶದ ಸಾರ್ವಭೌಮತೆಗೆ ಎಂದಿಗೂ ಕಂಟಕ. ತಮಿಳುನಾಡನ್ನೇ ನೋಡಿ, ಐದು ವರ್ಷ ಕರುಣಾನಿಧಿ ಐದು ವರ್ಷ ಜಯಲಿತಾ ಆಳುತ್ತಾ ಕೇಂದ್ರ ಸರಕಾರಕ್ಕೆ ತಮ್ಮ ಸ್ವತಃ ಅನುಕೂಲತೆಗೆ ತಕ್ಕಂತೆ ಬೆಂಬಲ ನೀಡುವುದು ಹಿಂಪಡೆಯುವುದು ಸರಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವುದು, ಇವರನ್ನು ಸಂತೈಸುವುದಕ್ಕಾಗಿ ಕೇಂದ್ರ ಸರಕಾರಗಳು ನೆರೆರಾಜ್ಯಗಳಿಗೆ ಮಾರಕ ವಾಗುವಂಥ ಕ್ರಮಗಳನ್ನು ಕೈಗೊಳ್ಳುವುದು ಹೀಗೆ ದೇಶವೇ ಒಂದು ರಾಜ್ಯದ ನಾಯಕ/ಕಿಗೆ ತಲೆಬಾಗಿ ನಡೆಯುವುದಿದೆಯಲ್ಲಾ ಅದು ದೇಶವನ್ನು ಆಂತರಿಕವಾಗಿ ದುರ್ಬಲಗೊಳಿಸಿ ಬಿಡುತ್ತದೆ.
ಇದರ ಪ್ರತಿಫಲವಾಗಿ ಪಶ್ಚಿಮಬಂಗಾಳದಲ್ಲಿ ರೋಂಗ್ಯಗಳು, ಕೇರಳದಲ್ಲಿ ಕೊಲೆ ಪಾತಕರು ಭಯೋತ್ಪಾದಕ ಸಂತತಿಗಳು, ತಮಿಳುನಾಡು ಆಂಧ್ರಗಳಲ್ಲಿ ಮಿಷನರಿಗಳು ಮತಾಂತರ ಕುತಂತ್ರಿಗಳು ತೊಡೆಯ ಮೇಲಿನ ಕುರ ಗಳಂತೆ ದೇಶವನ್ನು ಕಾಡುತ್ತಿದೆ.ದೇಶದ ಏಕತೆಗೆ ಭದ್ರತೆಗೆ ಕಾನೂನು ಕಾಯಿದೆಗಳನ್ನು ಜಾರಿಗೆ ತಂದರೆ ಇಂಥ ರಾಜ್ಯಗಳು ಜಾರಿಗೆ ತರದೆ ವಿರೋಧಿಸುತ್ತದೆ. ಇಂಥ ಆಟಗಳನ್ನೇ ಆಡುತ್ತಾ ಬಂದ ತಮಿಳುನಾಡು ರಾಜಕೀಯವನ್ನು ಸ್ವಲ್ಪ ಮಟ್ಟಿಗಾದರೂ ದೇಶದ ಐಕೈತೆಗೆ ಪೂರಕವಾಗಿ ಒಗ್ಗಿಸಿಕೊಳ್ಳುವಂಥ ಪ್ರಯತ್ನ ವನ್ನು ಕೇಂದ್ರ ಸರಕಾರ ಮಾಡುತ್ತಿದೆ.
ಇದೇ ‘ಒಂದು ದೇಶ ಒಂದು ಸಂಸ್ಕೃತಿ’ ಎಂಬ ನೀತಿಯ ಭಾಗ. ಆದರೆ ಇದಾವುದರ ಚಿಂತನೆಗಳಿಲ್ಲದ ರಾಹುಲ್‌ಗಾಂಧಿ ಭಾಷಣ ಇದಕ್ಕೆ ವಿರುದ್ಧವಾಗಿದ್ದು, ತಮಿಳು ನಾಡು ಎಂದಿಗೂ ದೇಶದ ಪ್ರಜಾಸತ್ತಾತ್ಮಕತೆಯ ಭಾಗ ವಾಗಿರದಂತೆ ಸಂವಿಧಾನದ ವಿರುದ್ಧವಾಗಿ ಪ್ರತ್ಯೇಕ ಭಾಷಾ ರಾಜ್ಯವಾಗಿಸುವಂತೆ ಪ್ರಚೋದಿಸು ವಂತಿದೆ. ತಮಿಳರು ತಮಿಳು ಭಾಷೆಯ ಉದ್ಧಾರವೇ ನನ್ನ ಜೀವನ ಎನ್ನುವಂತೆ ಸಾಂದರ್ಭಿಕ ‘ಪಾತ್ರ’ ವಹಿಸುತ್ತಿರುವುದು ಬಾಲಿಶವಾಗಿ ಕಾಣುತ್ತಿದೆ.
ನೋಡಿ, ಕರ್ನಾಟಕಕ್ಕೆ ಬಂದರೆ ‘ಜಾತ್ಯಾತೀತ ಶಕ್ತಿಗಳೆಲ್ಲಾ ಒಂದಾಗಿ ಕೋಮವಾದಿ ಬಿಜೆಪಿಯನ್ನು ದೂರವಿಡಿ’ ಎನ್ನುತ್ತಾರೆ. ತಮಿಳುನಾಡಿನಲ್ಲಿ ತಮಿಳರಿಗೆ ಕಾಂಗ್ರೆಸ್ ‘ಹಿಂದಿಕ್ಕಾರನ್’ ಆಗಿದ್ದರೂ ಅಲ್ಲಿ ತಮ್ಮದೇ ಪಕ್ಷವನ್ನು ಬಲಿಕೊಟ್ಟಾದರೂ ತಮಿಳ ರನ್ನು ತಮಿಳು ಭಾಷೆಯನ್ನು ಉಳಿಸಬೇಕು. ತಮಿಳು ನಾಡನ್ನು ತಮಿಳರೇ ಆಳಬೇಕು. ಆದರೆ ಕರ್ನಾಟಕ ದಲ್ಲಿ ಮಾತ್ರಜಾತ್ಯಾತೀತರು ಆಳಬೇಕು ಎನ್ನುತ್ತಾರೆ. ಅಲ್ಲಿ ಸಾವಿರಾರು ಕೋಟಿ ಹಗರಣಗಳಲ್ಲಿ ಜೈಲಿಗೆ ಹೋಗಿಬಂದವರೊಂದಿಗೆ ಬೆಸುಗೆ ಬೇಕು.
ದೇಶಾದ್ಯಾಂತ ರಾಷ್ಟ್ರೀಯತೆ ಸಾರುವ ರಾಷ್ಟ್ರಾಭಿಮಾನಿ ಗಳನ್ನು ಕೋಮವಾದಿಗಳೆನ್ನಬೇಕು. ಇದ್ಯಾವ ಸೀಮೆಯ ಲಾಜಿಕ್ಕು?. ಕನ್ನಡಿಗರ ಆತ್ಮಸಾಕ್ಷಿ ವಿಶ್ವೇಶ್ವರಯ್ಯನವರ ಹೆಸರು, ಬಸವಣ್ಣನವರ ವಚನ ವನ್ನು ಉಚ್ಚರಿಸಲಾಗದವರು ಇಂದು ತಮಿಳು ಭಾಷೆಯ ‘ಪೆರಿಯಾರ್’ ಆಗಿಬಿಡುವ ಪಾತ್ರ ದಲ್ಲಿದ್ದಾರೆ. ಇನ್ನು ಆರ್‌ಎಸ್‌ಎಸ್ ಸಂಘಟನೆ ಕುರಿತು ನೀಡಿರುವ ಹೇಳಿಕೆಗಳು ಎಸ್‌ಡಿಪಿಐ, ಜೆಹಾದಿ ಕಾರ್ಯಕರ್ತರಿಗಿಂತಲೂ ಕೃತವಾಗಿದೆ. ‘ಆರ್‌ಎಸ್‌ಎಸ್ ಶಾಲೆಗಳು ಪಾಕಿಸ್ತಾನದ ತೀವ್ರಗಾಮಿಗಳ ಮದ್ರಾಸ ಇದ್ದಂತೆ’ ಎನ್ನುವ ರಾಹುಲ್‌ಗಾಂಧಿ ದೇಶ ದಲ್ಲಿನ ಅಂಥ ತೀವ್ರಗಾಮಿ ಮದ್ರಾಸಗಳನ್ನು ಮುಚ್ಚುವಂತೆ ಹೇಳಿಕೆ ನೀಡಲು ಕನಿಷ್ಠ ವಿವೇಕ ವಾದರೂ ಇದೆಯೇ?.
ಬೇರಾರೂ ಬೇಡ, ಮೊನ್ನೆ ನಿವೃತ್ತರಾದ ಗುಲಾಂ ನಬಿ ಅಜಾದ್‌ರನ್ನು ಏಕಾಂತ ದಲ್ಲಿ ಭೇಟಿಯಾಗಿ ಆರ್‌ಎಸ್ಎಸ್ ಕುರಿತು ತಿಳಿದು ಕೊಳ್ಳುವ ಪ್ರಯತ್ನ ಮಾಡಬಹುದು. ಅಷ್ಟೇ ಏಕೆ ತನ್ನನ್ನೂ ಸೇರಿಸಿಕೊಂಡು ಕಾಂಗ್ರೆಸ್‌ನ ಹಿರಿಯ ನಾಯಕರಿಗೆಲ್ಲಾ ‘ಮಂಪರುಪರೀಕ್ಷೆ’ ಮಾಡಿಸಿ ಆರ್‌ಎಸ್‌ಎಸ್ ಅಂದರೆ ಏನೆಂದು ರೆಕಾರ್ಡ್ ಮಾಡಿಸಿಕೊಂಡು ನೋಡಬಹುದು. ಯಾರೋ ನಾಲ್ಕುಮಂದಿ ರಾಜಕೀಯದ ಸ್ವಾರ್ಥಕ್ಕಾಗಿ ಆರ್‌ಎಸ್‌ಎಸ್ ಸಂಘಟನೆಯನ್ನು ಬೇಕೆಂದೇ ಟೀಕಿಸುತ್ತಿರಬಹುದು. ಆದರೆ ಘಟಾನುಘಟಿ ಕಾಂಗ್ರೆಸಿಗರಿಗೆ, ಕಮ್ಯುನಿಷ್ಠರಿಗೆ ಸಂಘದ ಬಗ್ಗೆ ಅಂತರಂಗದಲ್ಲಿ ಒಳ್ಳೆಯ ಅಭಿಪ್ರಾಯ ಖಂಡಿತಾ ಇದೆ.
ಅಷ್ಟೇ ಏಕೆ ತಿರುಪೆ ಪಾಕಿಸ್ತಾನದ ಇಮ್ರಾನ್‌ಖಾನ್‌ಗೆ ನಾಲ್ಕು ಪೆಗ್ಗು ಏರಿಸಿದರೆ ಆರ್‌ಎಸ್‌ಎಸ್‌ನ ಸೇವೆ ಸಾಧನೆಗಳನ್ನು ಆತನೂಕೊಂಡಾಡುತ್ತಾನೆ. ದುರಂತವೆಂದರೆ ರಾಹುಲ್‌ಗಾಂಧಿಗೆ ಇಂಥ ಸತ್ಯ ತಿಳಿವಳಿಕೆ ನೀಡುವಂಥ ಪುಣ್ಯಾತ್ಮ ಅವರ ಸುತ್ತಮುತ್ತಲಿ ನಲ್ಲಿಲ್ಲ. ಆರ್‌ಎಸ್‌ಎಸ್ ಹಳ್ಳಿಗಳಲ್ಲಿ ‘ಸಾಂಕ್’ ಎಂದು ನಡೆಸುತ್ತದೆ. ಸಾರ್ವಜನಿಕ ಮೈದಾನದಲ್ಲಿ ನಡೆಯುವ ಈ ಕಾರ್ಯಕ್ರಮ ದಲ್ಲಿ ಚಪ್ಪಲಿಗಳನ್ನು ನೋಡಿದರಷ್ಟೇ ಸಾಕು ಸಂಘದಲ್ಲಿನ ಶಿಸ್ತು ಅನುಭೂತಿ ಯಾಗಿಬಿಡುತ್ತದೆ.
ಪುಟ್ಟ ಮಕ್ಕಳಿಂದ ಹಿರಿಯರವರೆಗೂ ತಮ್ಮ ಪಾದರಕ್ಷೆಯನ್ನು ಎಲ್ಲೆಂದರಲ್ಲಿ ಬಿಡದೆ ಒಂದೇ ಜಾಗದಲ್ಲಿ ಶಿಸ್ತುಬದ್ಧವಾಗಿ ಜೋಡಿಸಿ ಹೊರಡು ತ್ತಾರಲ್ಲಾ, ತಲೆಯಲ್ಲಿ ಮೆದುಳು ಇದ್ದವನಿಗೆ ಅಷ್ಟೇ ಸಾಕು ಸಂಘವೆಂದರೆ ಏನು ಎಂದು ಅರ್ಥಮಾಡಿ ಕೊಳ್ಳುತ್ತಾನೆ. ಅದಕ್ಕೇ ಹೇಳುವುದು ಇಂಥ ವಿವೇಕ ಜ್ಞಾನ ವ್ಯಕ್ತಿತ್ವ ಅನುವಂಶಿಕವಾಗಿ ಬರದಿದ್ದರೂ ಸಜ್ಜನರ ಸಹವಾಸ ದಿಂದಾದರೂ ಬರಬೇಕೆಂಬುದು.
ದೇಶವೇ ತಿಳಿದುಕೊಳ್ಳಬೇಕಾದ ವಿಷಯವೇನು ಗೊತ್ತೇ?, ಮೊನ್ನೆ ಖಾಸಗಿ ವಾಹಿನಿ ಇಂಡಿಯಾ ಟುಡೆ ಮಾಹಿತಿ ಹಕ್ಕು ಕಾಯಿದೆ ಯಡಿ ಪ್ರಧಾನಮಂತ್ರಿ ಕಚೇರಿಗೆ ಒಂದು ವಿಷಯದ ಸ್ಪಷ್ಟತೆ ಕೋರಿ ಪ್ರಶ್ನಿಸುತ್ತದೆ. ಅದು ‘ಪ್ರಧಾನಿ ಮೋದಿಯವರಿಗೆ ಯಾರು ಭಾಷಣ ಬರೆದು ಕೊಡುತ್ತಾರೆ?’ ಎಂದು. ಅದಕ್ಕೆ ಬಂದ ಉತ್ತರ ‘ಆಯಾ ಕಾರ್ಯಕ್ರಮದ ಆಧಾರದ ಮೇಲೆ ವಿವಿಧ ಇಲಾಖೆ ಗಳು, ಅಧಿಕಾರಿಗಳು, ಸಂಘಸಂಸ್ಥೆಗಳು ಸೇರಿ ಅನೇಕ ಮೂಲಗಳಿಂದ ಪ್ರಧಾನಿಯವರಿಗೆ ಮಾಹಿತಿ ನೀಡುತ್ತದೆ (ಇದು ಶಿಷ್ಟಾಚಾರವೂ ಹೌದು). ಇದನ್ನೆಲ್ಲಾ ಪರಾಮರ್ಶಿಸಿ ಸ್ವತಃ ಪ್ರಧಾನಿ ಮೋದಿಯವರೇ ತಮ್ಮ ಭಾಷಣವನ್ನು ಸಿದ್ದಪಡಿಸಿ ಕೊಳ್ಳುತ್ತಾರೆ’.
ಇದು ಲಾಲಿ ‘ಹಾಡುವವರ’ ಮತ್ತು ಪೋಲಿ ‘ಆಡುವವರ’ ನಡುವಿನ ಅನುವಂಶಿಕತೆ ಮತ್ತು ಸಂಸ್ಕಾರಕ್ಕಿರುವ ಅಜಗಜಾಂತರವ್ಯತ್ಯಾಸ. ಆದರೆ ಹೋದ ಕಡೆಯೆಲ್ಲೆಲ್ಲಾ ತನ್ನ ಮಾತಿನ ಮೂಲಕ ‘ಮನರಂಜನೆ’ ನೀಡುವ ರಾಹುಲ್‌ಗಾಂಧಿಯವರಿಗೆ ಅಂಥ ಭಾಷಣ ಸಿದ್ದಪಡಿಸಿಕೊಡುವ ‘ಮಹಾಪುರುಷ’ ಯಾರು? ಇದನ್ನು ತಿಳಿದುಕೊಳ್ಳುವ ಕುತೂಹಲ ಮತ್ತು ಹಕ್ಕು ಪ್ರತಿಯೊಬ್ಬರಿಗೂಇದೆಯಲ್ಲವೇ?