ಬೆಣ್ಣೆ ಗಟ್ಟಿ ಆಗುವುದಕ್ಕೂ ಕೋವಿಡ್‌ಗೂ ಏನ್ಸಂಬಂಧ ?
ತಿಳಿರು ತೋರಣ
ಶ್ರೀವತ್ಸ ಜೋಶಿ
ಅದೊಂಥರ ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಇರುವ (ಅಥವಾ ಇಲ್ಲದ?) ಸಂಬಂಧದಂತೆಯೇ ಎನ್ನಬಹುದು. ಬಹುಶಃ ‘ಬಾದರಾಯಣ ಸಂಬಂಧ’ ಎಂದರೆ ಹೆಚ್ಚು ಸರಿ.
ಬಾದರಾಯಣವೂ ಅಲ್ಲ, ಬೇಕಿದ್ದರೆ ಅಷ್ಟಿಷ್ಟು ಕಂಗ್ಲಿಷ್ ಬೆರೆಸಿ ‘ಬಟರಾಯಣ ಸಂಬಂಧ’ ಎನ್ನೋಣ. ಅದೂ ಒಪ್ಪಿಗೆಯಾ ಗದಿದ್ದರೆ ಪ್ರಖ್ಯಾತ ‘ಬಟರ್‌ಫ್ಲೈ ಎಫೆಕ್ಟ್’ ನಂತೆಯೇ- ಮೆಕ್ಸಿಕೊದಲ್ಲಿ ಒಂದು ಚಿಟ್ಟೆ ತನ್ನ ರೆಕ್ಕೆಗಳನ್ನು ಪಟಪಟನೆ ಬಡಿದರೆ ಚೈನಾ ದೇಶದಲ್ಲಿ ಚಂಡಮಾರುತ ಏಳುತ್ತದೆ ಎಂಬ ಕಾವ್ಯಾತ್ಮಕ ನುಡಿಗಟ್ಟಿನಂತೆಯೇ- ಈ ಬಟರ್ ಎಫೆಕ್ಟ್ ಎನ್ನೋಣ. ಪರಂತು, ಬೆಣ್ಣೆ ಗಟ್ಟಿ ಆಗುವುದಕ್ಕೂ ಕೋವಿಡ್‌ಗೂ ಎತ್ತಣಿಂದೆತ್ತ ಸಂಬಂಧವಯ್ಯ ಎಂದು ಅಲ್ಲಮಪ್ರಭುಗಳಂತೆ ಅಲ್ಲಗಳೆಯಲಿಕ್ಕೆ ಮಾತ್ರ ಹೋಗಬೇಡಿ! ಏಕೆಂದರೆ, ಕೆನಡಾ ದೇಶದಲ್ಲಿ ಕಳೆದ ವರ್ಷದಿಂದೀಚೆಗೆ, ಅಂದರೆ ಕೋವಿಡಾಯಣ ಕಾಲಘಟ್ಟದಲ್ಲಿ, ಬೆಣ್ಣೆ ಭಯಂಕರ ಗಟ್ಟಿ ಆಗತೊಡಗಿದೆಯಂತೆ.
ಮತ್ತು ಅದಕ್ಕೆ ಕೋವಿಡ್ ವೈರಾಣುಗಳೇ ಇನ್‌ಡೈರೆಕ್ಟ್ ಕಾರಣ ಎಂಬ ಅಭಿಪ್ರಾಯ ದಟ್ಟವಾಗಿ ವ್ಯಕ್ತವಾಗಿದೆಯಂತೆ. ಇಲ್ಲಇಲ್ಲಗಾಬರಿಯಾಗಬೇಡಿ, ಬೆಣ್ಣೆಯಲ್ಲಿ ವೈರಾಣು ಸೇರಿಕೊಂಡು ಧಾಂಧಲೆಯೆಬ್ಬಿಸಿರುವುದಲ್ಲ. ಇನ್‌ಡೈರೆಕ್ಟ್ ಕಾರಣವೆಂದ ಮೇಲೆ ಏನೋ ಒಂದು ಭಲೇ ಸ್ವಾರಸ್ಯದ್ದು ‘ಹೀಗೂ ಉಂಟೇ!’ ರೀತಿಯದೇ ಇರಬೇಕು. ಅದೇನು ಎಂಬ ಸುದ್ದಿಸ್ವಾರಸ್ಯವನ್ನು ಥೇಟ್ ರಸವಾರ್ತೆಯ ಶೈಲಿಯಲ್ಲಿಯೇ ತಿಳಿದುಕೊಳ್ಳೋಣ.
ಅದಕ್ಕಿಂತ ಮೊದಲು, ಕನ್ನಡದಲ್ಲಿ ಬೆಣ್ಣೆಯ ಬಗೆಗೇ ಇರುವ ಬಹಳಷ್ಟು ಗಾದೆಮಾತುಗಳಲ್ಲಿ ಹೀಗೇ ಒಮ್ಮೆ ಕೆಲವನ್ನುನೆನಪಿಸಿಕೊಳ್ಳೋಣ. ‘ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ’- ಅಸಮಾನತೆಯನ್ನು ತೋರಿಸುವಾಗ ಇದರ ಬಳಕೆ.ಬೆಣ್ಣೆಯಿಂದ ಕೂದಲು ತೆಗೆದಂತೆ’ ಅಂದರೆ ಚಾಣಾಕ್ಷತನ ಉಪಯೋಗಿಸಿ ಮಾಡುವ ನಾಜೂಕಿನ ಕೆಲಸ. ‘ತಾಗದೆ ಬಾಗದು, ಬಿಸಿಯಾಗದೆ ಬೆಣ್ಣೆ ಕರಗದು’ ಅಂದರೆ ಒಂಚೂರು ಬಿಸಿ ಮುಟ್ಟಿಸಿದರೇನೇ ಸಂಬಂಧಿತ ವ್ಯಕ್ತಿ ಎಚ್ಚತ್ತುಕೊಂಡು ಕೆಲಸಮಾಡುವನು ಎಂದು. ‘ಬೆಣ್ಣೆ ಕರಗುವ ಮುನ್ನ ನೆರೆ ಬಂತು ಪೆನ್ನಾರ್‌ಗೆ’- ಕರ್ನಾಟಕದಲ್ಲಿ ಹುಟ್ಟಿ ಆಂಧ್ರಪ್ರದೇಶದಲ್ಲಿಹರಿದು ಬಂಗಾಳಕೊಲ್ಲಿ ಸೇರುವ ಪೆನ್ನಾರ್ ನದಿಯಲ್ಲಿ, ಕೆಲವೊಮ್ಮೆ ನೋಡನೋಡುತ್ತಿದ್ದಂತೆ ಹಠಾತ್ತನೆ ಪ್ರವಾಹಹರಿದು ಬರುತ್ತದಂತೆ.
ಬೆಣ್ಣೆ ಕರಗಲಿಕ್ಕೆ ಬೇಕಾಗುವ ಸಮಯಕ್ಕಿಂತಲೂ ಬೇಗ ನದಿಯಲ್ಲಿ ನೀರು ಉಕ್ಕಿಬರುತ್ತದಂತೆ. ‘ಮಂಗ ಬೆಣ್ಣೆ ತಿಂದು ಆಡಿನ ಬಾಯಿಗೆ ಒರಸಿತು’ ಅಂದರೆ ಚಾಲಾಕಿನ ಮನುಷ್ಯರು ಕೆಟ್ಟ ಕೆಲಸ ಮಾಡಿ ಇನ್ನೊಬ್ಬರ ಮೇಲೆ ಆ ತಪ್ಪನ್ನು ಹೊರಿಸುವುದು. ಅಂಥ ಮಂಗಗಳೂ ಆಡುಗಳೂ ನಮಗೆ ಆಗಾಗ ಕಂಡುಬರುತ್ತಿರುತ್ತವೆ. ‘ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರಂತೆ!’ ಅಂದರೆ ಸಮಸ್ಯೆಗೆ ಪರಿಹಾರ ತನ್ನ ಬಳಿಯೇ ಇದ್ದರೂ ಎಲ್ಲೆಲ್ಲೋ ಹುಡುಕಿಕೊಂಡು ಹೋಗುವುದು.
ಎದುರಿಗೆ ಒಳ್ಳೊಳ್ಳೆಯ ಸಿಹಿ ಮಾತುಗಳಿಂದ ಸುಭಗನಂತೆ ವರ್ತಿಸಿ ಹಿಂದಿನಿಂದ ದ್ರೋಹ ಬಗೆಯುವುದಕ್ಕೆ ‘ಬಾಯಲ್ಲಿ ಬೆಣ್ಣೆ, ಬಗಲಲ್ಲಿ ದೊಣ್ಣೆ’ ಎಂಬ ಗಾದೆ. ‘ಮೊಸರ ಕಡೆದರೆ ಬೆಣ್ಣೆ ಒಸೆದು ಬಂತು’ ಗಾದೆಯ ಅರ್ಥ ಒಳ್ಳೆಯ ಫಲ ಸಿಗಬೇಕಿದ್ದರೆ ಕಷ್ಟಪಡಬೇಕು, ಸರಿಯಾದ ವಿಧಾನವನ್ನು ಅನುಸರಿಸಬೇಕು ಎಂದು. ‘ಎಳ್ಳಿನಲ್ಲಿ ಎಣ್ಣೆ ಅಡಕ, ಹಾಲಿನಲ್ಲಿ ಬೆಣ್ಣೆ ಅಡಕ’ ಗಾದೆಯೂ ಹೆಚ್ಚೂಕಡಿಮೆ ಅದೇ ರೀತಿಯದು. ನಮಗೆ ಬೇಕಾಗಿರುವ ಫಲ ನಮ್ಮ ಸುತ್ತಮುತ್ತಲಿನ ವಸ್ತುಗಳಲ್ಲೇ ಇರುತ್ತದೆ, ನಾವು ಅದನ್ನು ಹುಡುಕಿಕೊಂಡು ನಮ್ಮದಾಗಿಸಿಕೊಳ್ಳಬೇಕು.
‘ಕಡೆಗೋಲು ಹೊರತಾಗಿ ಬೆಣ್ಣೆ ತೋರುವುದೇನೊ?’ ಕೂಡ ಹಾಗೆಯೇ, ಪ್ರಯತ್ನಪಡದೆ ಫಲ ಸಿಗುವುದಿಲ್ಲ ಎಂಬ ನೀತಿಬೋಧೆ. ‘ಮಂಥನದಿಂದ ಬಾರದ ಬೆಣ್ಣೆ ಕಂಥೆಯಿಂದ ಬಂದೀತೇ?’ ಕಂಥೆ ಅಂದರೆ ಅಪ್ರಯೋಜಕ ಮಾತು, ಕೆಲಸ. ಅದರಿಂದ ಫಲ ಸಿಗುವುದಿಲ್ಲ. ಪ್ರತಿಯೊಂದನ್ನೂ ಶ್ರಮಪಟ್ಟು ಅರ್ಹತೆಯಿಂದಲೇ ಗಳಿಸಬೇಕು. ‘ನೀರೆ ನಿನ್ನ ಮಾತು ನಿಜವೇನೇ, ನೀರ ಕಡಿದರೆಬೆಣ್ಣೆ ಬಂದಾವೇನೇ?’ ಗಾದೆಯ ಇಂಗಿತವೂ ಅದೇ. ‘ನಸದ ಬೆಣ್ಣೆ ಗಸಿಯ ಹಾಗೆ’ ಅಂದರೆ ಸ್ವಲ್ಪೇಸ್ವಲ್ಪ ಬೆಣ್ಣೆ ಇದ್ದರೂ ಊಟ– ತಿಂಡಿಯ ರುಚಿ ಹೆಚ್ಚುತ್ತದೆ ಎಂದು ಇರಬಹುದು.
‘ಬೆಣ್ಣೆ ತಿಂದು ಹಲ್ಲು ಬಿದ್ದು ಹೋಯಿತಂತೆ’ ಮತ್ತು ‘ಮೊಂಡಪ್ಪನ ಕತ್ತಿ ಬೆಣ್ಣೆ ಕೊಯ್ಯುವಷ್ಟು ಹದವು’- ಇವೆರಡೂದುರ್ಬಲತೆಯ ದ್ಯೋತಕಗಳು. ‘ಬೆಕ್ಕಿಗೆ ಬೆಣ್ಣೆ ಕಂಡಿತು ಬಡಿಗೆ ಕಾಣಲಿಲ್ಲ’ ಅಂದರೆ ನಾವು ಪ್ರಲೋಭನೆ ಯನ್ನಷ್ಟೇ ನೋಡುತ್ತಅಲ್ಲಿರುವ ಅಪಾಯವನ್ನು ನಿರ್ಲಕ್ಷಿಸುವ ಸನ್ನಿವೇಶ. ‘ಇದ್ದ ಮಕ್ಕಳೇ ಎಣ್ಣೆ ಬೆಣ್ಣೆ ಕಾಣದಿರುವಾಗ ಮತ್ತೊಂದು ಕೊಡೋದೇವರೇ ಅಂದಂತೆ’- ಇದು ಬಡತನ ದಲ್ಲಿದ್ದಾಗಲೇ ಕಷ್ಟಕಾರ್ಪಣ್ಯ ಬರುವುದನ್ನು ಕುರಿತಾದ್ದು.
‘ಅಂಕೆಯಲ್ಲಿದ್ದ ಹೆಣ್ಣು ಮತ್ತು ಮಜ್ಜಿಗೆಯಲ್ಲಿದ್ದ ಬೆಣ್ಣೆ ಕೆಡುವುದಿಲ್ಲ’ – ಇದು ಯಾವ್ಯಾವುದು ಎಲ್ಲೆಲ್ಲಿ ಹೇಗ್ಹೇಗೆ ಇರಬೇಕೋ ಹಾಗಿದ್ದರೇನೇ ಚೆನ್ನ ಎಂಬ ಪ್ರತಿಪಾದನೆಯದು. ಅಬ್ಬಾ! ಎಷ್ಟೊಂದು ಇವೆ ಕನ್ನಡದಲ್ಲಿ ಬೆಣ್ಣೆಯ ಗಾದೆಗಳು! ನಾನಿವನ್ನು ಇಲ್ಲಿ ಪಟ್ಟಿ ಮಾಡಿದ್ದು ಲೇಖನವನ್ನೋದುವಂತೆ ನಿಮಗೆ ‘ಬೆಣ್ಣೆ ಹಚ್ಚಲಿಕ್ಕೆ’ ಅಲ್ಲ. ಮತ್ತೆ? ‘ಕನ್ನಡದಲ್ಲಿ ಬೆಣ್ಣೆಯ ಬಗ್ಗೆ ಗಾದೆ, ಕೆನಡಾದಲ್ಲಿ ಬೆಣ್ಣೆಯ ಬಗ್ಗೆ ತಗಾದೆ’ ಎಂದು ಹೇಳುವುದಕ್ಕೆ!
ಕೆನಡಾದಲ್ಲಿ ಬೆಣ್ಣೆಯ ಬಗ್ಗೆ ಏನು ತಗಾದೆ? ಮಾರುಕಟ್ಟೆಯಿಂದ ಕೊಂಡು ತರುವ ಬೆಣ್ಣೆ ಇತ್ತೀಚಿನ ದಿನಗಳಲ್ಲಿ ತುಂಬಗಟ್ಟಿಯಾಗಿ ಇರುವುದನ್ನು ಕೆನಡಾದ ಪ್ರಜೆಗಳು ಗಮನಿಸಿದ್ದಾರೆ. ರೆಫ್ರಿಜರೇಟರ್‌ನಿಂದ ಹೊರಗೆ ತೆಗೆದು ಇಟ್ಟು ಎಷ್ಟೇಹೊತ್ತಾದರೂ ಇನ್ನೂ ಗಟ್ಟಿಯಾಗಿಯೇ ಇರುತ್ತದೆ. ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ ಅಂತ ಟೋಸ್ಟ್ ಮಾಡಿದ ಬ್ರೆಡ್ ಮೇಲೆ ಆ ಬೆಣ್ಣೆಯನ್ನು ಸುಲಭವಾಗಿ ಹರಡಿಕೊಳ್ಳಲಿಕ್ಕಾಗುವುದಿಲ್ಲ.
ಸ್ವಲ್ಪ ಬಲಪ್ರಯೋಗ ಮಾಡಿದರೆ ಪಾಪ ಬಡಪಾಯಿ ಬ್ರೆಡ್ಡೇ ಹರಿದುಹೋಗುತ್ತದೆಯೇ ವಿನಾ ಬೆಣ್ಣೆ ಜಗ್ಗುವುದಿಲ್ಲ. ಈಹಿಂದೆಯಾವತ್ತೂ ಹೀಗಾದದ್ದಿಲ್ಲ. ಯಾರೋ ಒಬ್ಬಿಬ್ಬರಿಗೆ ಮಾತ್ರ ಹೀಗೆ ಅನಿಸಿದ್ದಲ್ಲ, ಒಬ್ಬಾಕೆ ಈ ಸಮಸ್ಯೆಯ ಬಗ್ಗೆ ಟ್ವೀಟ್ ಮಾಡಿದ್ದಕ್ಕೆದೇಶದ ಮೂಲೆಮೂಲೆಗಳಿಂದ ‘ಮಿ ಟೂ!’ ಎಂದು ಟ್ವೀಟಿಗರು ದನಿಗೂಡಿಸಿದ್ದಾರೆ. ಬೆಣ್ಣೆ ಅಲ್ಲ ಇದು ರಬ್ಬರ್‌ನಂತಿದೆ ಎಂದು ಕೆಲವರು ಅಲವತ್ತು ತೋಡಿಕೊಂಡಿದ್ದಾರೆ. ಅಂದರೆ, ಯಾವುದೋ ಒಂದೆರಡು ಲಾಟ್‌ನ ಬೆಣ್ಣೆ ಪ್ಯಾಕೆಟ್‌ಗಳು ಕಳಪೆಗುಣಮಟ್ಟದ್ದು ಬಂದದ್ದಲ್ಲ. ಕೆನಡಾದಲ್ಲಿ ರಾಷ್ಟ್ರವ್ಯಾಪಿಯಾಗಿ ಬೆಣ್ಣೆ ಗಟ್ಟಿಯಾಗಿದೆ.
ಇದರಲ್ಲೇನೋ ಡೈರಿ ಇಂಡಸ್ಟ್ರಿಯ ಮತ್ತು ರಾಜಕಾರಣಿಗಳ ಐಬು ಇದೆಯೆಂದು ಜನರಿಗೆ ಅನುಮಾನ ಬಂದಿದೆ. ಇದಕ್ಕೊಂದು ಹಗರಣದ ಪರಿಭಾಷೆ ಪೇರಿಸಿ ‘ಬಟರ್ ಗೇಟ್’ ಎಂದು ಹೆಸರಿಟ್ಟಿದ್ದಾರೆ. ಹ್ಯಾಷ್‌ಟ್ಯಾಗ್ ಮಾಡಿದ್ದಾರೆ. ಸೋಶಿಯಲ್ ಮೀಡಿಯಾ ದಲ್ಲಿ ಈ ಬಗ್ಗೆ ಸಾಕಷ್ಟು ಮಂಥನ ನಡೆದಿದೆ. ಆ ಮಂಥನದಿಂದ ಬಂದಿರುವ ‘ಬೆಣ್ಣೆ’ಯ ಪ್ರಕಾರ, ಬೆಣ್ಣೆ ಗಟ್ಟಿಯಾಗುವುದಕ್ಕೆ ಕರೋನಾ ವೈರಸ್ಸೇ ಮೂಲ ಕಾರಣವಂತೆ!
ಅರೆರೇ! ಅದು ಹೇಗೆ ಸಾಧ್ಯ? ವಿಷಯ ಏನಪ್ಪಾ ಅಂತಂದ್ರೆ… ಕೆನಡಾ ದೇಶದಲ್ಲಿ 2020ರಲ್ಲಿ ಬೆಣ್ಣೆಗೆ ಬೇಡಿಕೆ ಮಾಮೂಲಿನ ದಕ್ಕಿಂತ ಸುಮಾರು 12 ಪ್ರತಿಶತದಷ್ಟು ಹೆಚ್ಚಿದೆ. ಬೇಡಿಕೆ ಹೆಚ್ಚಾಗಲಿಕ್ಕೆ ಕಾರಣ ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ಜನರೆಲ್ಲ ತಮ್ಮ ತಮ್ಮ ಮನೆಗಳಲ್ಲೇ ಇದ್ದು, ಹೆಚ್ಚು ಅಡುಗೆ ಮಾಡುತ್ತಿದ್ದಾರೆ. ಹೊಸರುಚಿ ಪ್ರಯತ್ನಿಸುತ್ತಿದ್ದಾರೆ. ಸಹಜ ವಾಗಿಯೇ ಬೆಣ್ಣೆಯ ಬಳಕೆ ಮತ್ತು ಬೇಡಿಕೆ ಹೆಚ್ಚಿದೆ. ಪದವಿನೋದಕ್ಕಾಗಿ ಹೇಳುವುದಾದರೆ ಕೋವಿಡ್‌ನಿಂದಾಗಿ ‘ಮಾಸ್ಕ್’ಗಷ್ಟೇ ಅಲ್ಲ ‘ಮಸ್ಕಾ’ಕ್ಕೂ ಬೇಡಿಕೆ ಹೆಚ್ಚಿದೆ. ಇದಿಷ್ಟನ್ನು ಕೆನಡಾ ಅಂತಲ್ಲ, ವಿಶ್ವದ ಎಲ್ಲ ದೇಶಗಳಿಗೂ ಅನ್ವಯಿಸ ಬಹುದಾಗಿದೆ.
ಅಷ್ಟರಮಟ್ಟಿಗೆ ವಿಶ್ವವನ್ನೆಲ್ಲ ಅಡಿಮೇಲು ಮಾಡಿರುವ ಅಪಖ್ಯಾತಿ ಈ ಕರೋನಾ ವೈರಸ್ ಮಹಾಮಾರಿಯದು. ಸರಿ, ಬೆಣ್ಣೆ ಬಳಕೆ ಹೆಚ್ಚುವುದಕ್ಕೂ ಬೆಣ್ಣೆ ಗಟ್ಟಿ ಆಗಿ ಇರುವುದಕ್ಕೂ ಏನು ಸಂಬಂಧ? ಇದೆ! ಹೆಚ್ಚು ಬೆಣ್ಣೆ ಉತ್ಪಾದನೆ ಯಾಗಬೇಕಾದರೆ ಹಾಲಿನ ಉತ್ಪಾದನೆ ಹೆಚ್ಚಬೇಕು ತಾನೆ? ಬೇಡಿಕೆ ಹೆಚ್ಚಾಯ್ತು ಅಂತ ಬೆಲೆ ಹೆಚ್ಚಿಸುವ ಹಾಗಿಲ್ಲ.
ಸೀಮಿತ ಸಂಪನ್ಮೂಲಗಳಲ್ಲೇ ಹಸುಗಳಿಂದ ಹೆಚ್ಚು ಹಾಲು ಉತ್ಪಾದನೆ ಯಾಗಬೇಕು. ಅದಕ್ಕಾಗಿ ಕೆನಡಾ ದೇಶದ ಗೌಳಿಗರುತಮ್ಮತಮ್ಮ ಹಸುಕರುಗಳಿಗೆ ತಾಳೆ ಎಣ್ಣೆಯ ಅಂಶ ಅಧಿಕವಿರುವ ಹಿಂಡಿ ಮತ್ತು ಮೇವನ್ನು ಕೊಡುತ್ತಿದ್ದಾರೆ. ಅದರಿಂದ ಹಾಲಿನಪ್ರಮಾಣ ಹೆಚ್ಚಿರುವುದೇನೋ ನಿಜ, ಆದರೆ ಆ ಹಾಲಿಗೆ ಹೆಪ್ಪು ಹಾಕಿ ಮೊಸರು ಮಾಡಿ ಕಡೆದು ತೆಗೆದ ಬೆಣ್ಣೆಯ ಕರಗುವಿಕೆಯ ಬಿಂದು ಬಲಕ್ಕೆ ಸರಿದಿದೆ. ಅರ್ಥಾತ್, ಬೆಣ್ಣೆ ಹೆಚ್ಚು ಗಟ್ಟಿಯಾಗಿ ಇರುತ್ತದೆ.
ರೆಫ್ರಿಜರೇಟರ್‌ನಿಂದ ಹೊರತೆಗೆದು ರೂಮ್ ಟೆಂಪರೇಚರ್‌ನಲ್ಲಿಟ್ಟರೂ ಬೇಗ ಮೆದುವಾಗುವುದಿಲ್ಲ. ಕೆನಡಾದ ಡೈರಿ ಪ್ರೊಸೆಸಿಂಗ್ ಎಸೋಸಿಯೇಷನ್‌ನವರು ಈ ವಾದದಲ್ಲಿ ಹುರುಳಿಲ್ಲ ಎಂದಿದ್ದಾರಾದರೂ ಹಸುಕರುಗಳನ್ನು ಸಾಕುವ ಗೌಳಿಗರು ತಾವು ಹಸುಕರುಗಳಿಗೆ ಹಾಕುತ್ತಿರುವುದು ಹುರುಳಿ ಅಲ್ಲ ತಾಳೆ ಎಣ್ಣೆಯ ಅಂಶ ಅಧಿಕವಿರುವ ಗೋಗ್ರಾಸ ಹೌದು ಎಂದು ಒಪ್ಪಿಕೊಂಡಿದ್ದಾರಂತೆ. ಅಂತೂ ಬ್ರೆಡ್ ಮೇಲೆ ಬೆಣ್ಣೆ ಹರಡುವುದು ಕಷ್ಟವಾಗಿ ಈ ಸಮಸ್ಯೆ ಕೆನಡಾದಲ್ಲಿ ದೇಶವಿಡೀ ಹರಡುವುದರಲ್ಲಿ ಯಶಸ್ವಿಯಾಗಿದೆ.
ಮೇಲ್ನೋಟಕ್ಕೆ ಇದು ಒಂದು ಸರಳ ಸರಪಳಿ ಕ್ರಿಯೆ – ಪ್ರತಿಕ್ರಿಯೆ ಅಂತನಿಸಬಹುದು. ಈ ಸರಪಳಿಯ ಕೆಲವು ಬಲಿಷ್ಠ ಮತ್ತು ಬಲಹೀನ ಕೊಂಡಿಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಕೆನಡಾದಂಥ ದೊಡ್ಡ ದೇಶದಲ್ಲಿ ಹೈನುಗಾರಿಕೆ, ಡೈರಿ ಉದ್ಯಮ, ಕೃಷಿ ನಿಯಮಗಳು, ಸರಕಾರದ ರೀತಿನೀತಿಗಳು… ಇವೆಲ್ಲ ಹೇಗಿವೆಯೆಂದು ಅಂದಾಜಾಗುತ್ತದೆ. ಮೊದಲನೆಯದಾಗಿ, ಕೆನಡಾದಲ್ಲಿ ಬೆಣ್ಣೆಯ ಬೆಲೆ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿರುವುದಕ್ಕಿಂತ ಸುಮಾರು ಮೂರು ಪಟ್ಟು ಹೆಚ್ಚು.
ಕೆನಡಾದ ಪ್ರಜೆಗಳು ಬಹಳ ವರ್ಷಗಳಿಂದ ಇದಕ್ಕೆ ಒಗ್ಗಿಹೋಗಿದ್ದಾರೆ. ಹೇಗೂ ಬೆಲೆ ಹೆಚ್ಚು ತೆರುತ್ತೇವೆ, ಬೆಣ್ಣೆಯ ಗುಣಮಟ್ಟ ವಾದರೂ ಉತ್ಕೃಷ್ಟವಿರಲಿ ಎಂದು ಅವರು ನಿರೀಕ್ಷಿಸುತ್ತಾರೆ. ಆದ್ದರಿಂದಲೇ ಈಗ ಗಟ್ಟಿ ಬೆಣ್ಣೆಯನ್ನು ಕಂಡು ಅವರೆಲ್ಲ ಸಿಟ್ಟಾಗಿದ್ದಾರೆ. ದೇಶದ ಡೈರಿ ಉದ್ಯಮವು ಏನನ್ನೋ ಮುಚ್ಚಿಟ್ಟುಕೊಂಡಿದೆ, ಅದರ ವ್ಯವಹಾರಗಳು ಪಾರದರ್ಶಕವಾಗಿ ಇಲ್ಲ ಎಂದು ಪ್ರಜೆಗಳ ದೂರು. ಕೆನಡಾ ದೇಶದಲ್ಲಿ ಹಲವು ದಶಕಗಳ ಕಾಲದಿಂದಲೂ ಡೈರಿ ಉದ್ಯಮವು ಒಂದು ಶಕ್ತಿಶಾಲಿ ಉದ್ಯಮ ವಾಗಿದ್ದು ಹಾಲು, ಬೆಣ್ಣೆ, ಚೀಸ್ ಮುಂತಾದ ಉತ್ಪನ್ನಗಳ ಪ್ರಮಾಣ, ಗುಣಮಟ್ಟ, ಮಾರಾಟ ಬೆಲೆ, ಬೇಡಿಕೆ – ಪೂರೈಕೆ ಸಮತೋ ಲನ ಮುಂತಾದವುಗಳ ಮೇಲೆ ಪ್ರಬಲ ನಿಯಂತ್ರಣ ಇಟ್ಟುಕೊಂಡಿದೆ.
ವಿದೇಶಗಳಿಂದ ಆಮದು ಮಾಡುವುದನ್ನು ತಪ್ಪಿಸಲು ಮತ್ತು ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆ ಕಾಪಾಡಲು ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಈ ವ್ಯವಸ್ಥೆಯಲ್ಲಿ ಗೌಳಿಗರ ಹಿತರಕ್ಷಣೆಯ ದೃಷ್ಟಿಯಿಂದ, ಅವರು ಪೂರೈಸುವ ಹಾಲಿಗೆ ನಿಗದಿತ ಬೆಂಬಲ ಬೆಲೆ ಇರುತ್ತದೆ. ಈ ಬೆಂಬಲ ಬೆಲೆ ಅನ್ನೋದು ಎರಡಲಗಿನ ಕತ್ತಿ. ಹಾಲಿನ ಗುಣಮಟ್ಟ ಯಾವ ರೀತಿಯದಿದ್ದರೂ, ಅದಕ್ಕಾಗಿ ಯಾವ ವಿಧಾನಗಳನ್ನು ಬಳಸಿದ್ದರೂ, ಗೌಳಿಗರಿಗೆ ನಿಗದಿತ ಬೆಲೆಯಂತೂ ಸಿಕ್ಕೇಸಿಗುತ್ತದೆ.
ಅದಕ್ಕೋಸ್ಕರ ಅಗ್ಗದ ವಿಧಾನಗಳನ್ನು ಬಳಸಿ ಹೆಚ್ಚು ಹಾಲು ಉತ್ಪಾದನೆ ಮಾಡುವುದು ಅವರ ಗುರಿ. ಅಂಥದೊಂದು ಅಗ್ಗದವಿಧಾನವೇ ಪಾಮ್ ಆಯಿಲ್ (ತಾಳೆ ಎಣ್ಣೆ) ಅಂಶವಿರುವ ಹಿಂಡಿಯ ಬಳಕೆ. ಅಗ್ಗದ ವಿಧಾನವೇ ಏಕೆ? ಕೋವಿಡಾಯದಲ್ಲಿ ಕುಸಿದ ಆರ್ಥಿಕತೆಯ ಪರಿಣಾಮ ಸ್ವಲ್ಪವಾದರೂ ಆ ಗೌಳಿಗರ ಮೇಲೂ ಆಗಿರುತ್ತದೆಯಷ್ಟೆ? ಹೆಚ್ಚು ಖರ್ಚು ಮಾಡಲಿಕ್ಕೆ ಅವರು ತಯಾರಿಲ್ಲ.
ಹಾಗಂತ, ಪಾಮ್ ಆಯಿಲ್ ಹಿಂಡಿಯ ಬಳಕೆ ಕೋವಿಡ್ ಸಮಯದಲ್ಲಿ ಹೊಸದಾಗಿ ಕಂಡುಕೊಂಡ ವಿಧಾನವೇನಲ್ಲ. ಸೀಮಿತ ಪ್ರಮಾಣ ದಲ್ಲಿ ಆ ಹಿಂಡಿಯನ್ನು ಕೆನಡಾದ ಗೌಳಿಗರು ಹಿಂದಿನ ಕಾಲದಿಂದಲೂ ಬಳಸುತ್ತಿದ್ದಾರಂತೆ. ಕೆನಡಾ ಮಾತ್ರವಲ್ಲ ಅಮೆರಿಕ, ಯುಕೆ, ನ್ಯೂಝೀಲ್ಯಾಂಡ್, ಆಸ್ಟ್ರೇಲಿಯಾ ಮುಂತಾಗಿ ಎಲ್ಲ ದೇಶಗಳಲ್ಲೂ ಅದೊಂದು ಸ್ವೀಕೃತ ಪದ್ಧತಿಯೇ ಆಗಿದೆ. ಕೋವಿಡ್ ಸಮಯದಲ್ಲಿ ಬೆಣ್ಣೆಗೆ ಮತ್ತು ಒಟ್ಟಾರೆಯಾಗಿ ಎಲ್ಲ ಡೈರಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿರುವುದರಿಂದ ಹೆಚ್ಚು ಹಾಲು ಉತ್ಪಾದನೆಗಾಗಿ ಹೆಚ್ಚು ಪಾಮ್ ಆಯಿಲ್ ಹಿಂಡಿ ಕೆನಡಾದ ಹಸುಕರುಗಳ ಹೊಟ್ಟೆ ಸೇರುತ್ತಿದೆ ಅಷ್ಟೇ.
ಅಂಥ ಹಾಲಿನಿಂದ ತಯಾರಾದ ಬೆಣ್ಣೆ ಗಟ್ಟಿಯಾಗಿ ಇರುತ್ತದೆ. ಸೋಶಿಯಲ್ ಮೀಡಿಯಾದಿಂದಾಗಿ ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆನಡಾದ ಮುಖ್ಯವಾಹಿನಿ ಯ ಪತ್ರಿಕೆಗಳು ಇದರ ಬಗ್ಗೆ ತನಿಖೆ – ವರದಿಗಳನ್ನು ಪ್ರಕಟಿಸಿವೆ. ಸರಕಾರವೂ ಎಚ್ಚತ್ತುಕೊಂಡು ಡೈರಿ ಉದ್ಯಮಿಗಳ, ಗ್ರಾಹಕರ, ಗೌಳಿಗರ ಪ್ರತಿನಿಧಿಗಳನ್ನೂ ಸೇರಿಸಿಕೊಂಡು ತಜ್ಞರ ಸಮಿತಿ ನೇಮಿಸಿ ಪರಿಹಾರೋಪಾಯ ಮಾರ್ಗಗಳನ್ನು ಸೂಚಿಸಲಿಕ್ಕೆ ತಿಳಿಸಿದೆ. ಹೀಗಿರುವಾಗ ದಿಲ್ಲಿಯಲ್ಲಿ ನಡೆಯುತ್ತಿರುವ ರೈತರ ವೇಷದ ದುರುಳರ ಹರತಾಳದಲ್ಲಿ ಮೂಗು ತೂರಿಸುವ ಉಸಾಬರಿ ಕೆನಡಾ ಪ್ರಧಾನಿಗೆ ಬೇಡಾಗಿತ್ತು.
ಹಾಲು ಕೊಡುವ ಹಸುಗಳು ಏನನ್ನು ತಿನ್ನುತ್ತವೆ ಎಂಬುದರ ಮೇಲೆ ಅವುಗಳ ಹಾಲಿನ ಪ್ರಮಾಣ, ಗುಣಮಟ್ಟ ನಿರ್ಧರಿತ ವಾಗುತ್ತದೆ. ಹಾಲಿನ ವಿಚಾರ ಒಮ್ಮೆ ಬಿಟ್ಟುಬಿಡಿ, ಜೇನುನೊಣಗಳು ಯಾವ ಹೂವುಗಳ ಮಕರಂದ ಹೀರುತ್ತವೆ ಎಂಬುದರ ಮೇಲೆ ಅವುಗಳು ಉತ್ಪಾದಿಸುವ ಜೇನಿನ ಪ್ರಮಾಣ, ಗುಣಮಟ್ಟ ನಿರ್ಧರಿತವಾಗುತ್ತದೆ, ಅದು ಏಕಪ್ರಕಾರವಾಗಿ ಇರುವುದಿಲ್ಲ ಎಂಬ ಸಂಗತಿ ನಿಮಗೆ ಗೊತ್ತೇ? ನಾನಿದನ್ನು ತಿಳಿದುಕೊಂಡದ್ದು ಕಳೆದ ಮೂರುನಾಲ್ಕು ದಶಕಗಳಿಂದ ಊರಿನಲ್ಲಿ ಜೇನುಕೃಷಿ ಮಾಡಿ ಸಾಕಷ್ಟು ಜ್ಞಾನಾನುಭವ ಗಳಿಸಿರುವ ನನ್ನಣ್ಣನಿಂದಲೇ.
ಸೀಗೆ ಮರದ ಹೂವುಗಳಿಂದ ಮಕರಂದ ಹೀರಿ ಜೇನುನೊಣಗಳು ತಯಾರಿಸಿದ ಜೇನು ತುಂಬ ದಪ್ಪ. ಜಂಬುನೇರಳೆ ಮರದಹೂವುಗಳದಾದರೆ ನೀರಿನಂತೆ ತೆಳುವಾಗಿ ಇರುತ್ತದೆ. ರಬ್ಬರ್ ಹೂವುಗಳಿಂದಾದ ಜೇನಿಗೆ ಆಕರ್ಷಕ ಬಣ್ಣವೇ ಇಲ್ಲ. ಒಂಥರಾಬಿಳಿಯಾಗಿ ಇರುತ್ತದೆ. ತೆಂಗಿನಮರದ ಹೂವುಗಳಿಂದ ಮಕರಂದ ಸಂಗ್ರಹಿಸಿದ್ದಾದರೆ ಅತ್ಯಾಕರ್ಷಕ ಕೇಸರಿ ನಸುಗೆಂಪುಬಣ್ಣದ ದಪ್ಪ ಜೇನು. ಕಾಫಿ ಹೂವುಗಳಿಂದ ತಯಾರಾದ್ದಕ್ಕೆ ಕಾಫಿಯದೇ ಘಮಲು.
ಕಾಸರಕ ಮರದ ಹೂವುಗಳಿಂದಾದದ್ದು ಕಹಿ ಅಂದ್ರೆ ಕಹಿ. ಹೀಗೆ ಜೇನಿನಲ್ಲೇ ವಿವಿಧ ನಮೂನೆಗಳು. ನನ್ನ ಅಣ್ಣನಂತೂ ಜೇನನ್ನು ಬರಿಗಣ್ಣಿಂದ ನೋಡಿಯೇ ಇದು ಯಾವ ಹೂವುಗಳಿಂದ ತಯಾರಾದದ್ದೆಂದು ಹೇಳಬಲ್ಲಷ್ಟು ಅನುಭವ ಗಳಿಸಿದ್ದಾರೆ. ಕೆನಡಾ ದೇಶದ ಬೆಣ್ಣೆಯ ವಿಚಾರ, ಬೆಣ್ಣೆ ಗಟ್ಟಿಯಾಗಲಿಕ್ಕೆ ಪಾಮ್ ಆಯಿಲ್ ಹಿಂಡಿಯೇ ಕಾರಣ ಅಂತೆಲ್ಲ ಮೊನ್ನೆ ನಾನು ಇಲ್ಲಿಯ ಪತ್ರಿಕೆಗಳಲ್ಲಿ ಓದಿದಾಗ ನನಗೆ ತತ್‌ಕ್ಷಣ ಮೊದಲು ನೆನಪಾದದ್ದೇ ಜೇನುನೊಣಗಳ ಆಹಾರ ಸಂಗ್ರಹಣೆ ಮತ್ತು ಅದನ್ನವಲಂಬಿಸಿ ತಯಾರಾದ ಜೇನಿನ ಗುಣಮಟ್ಟ ಬೇರೆಬೇರೆ ರೀತಿಯಲ್ಲಿ ಇರುವುದು.
ಹಾಗೆ ನೋಡಿದರೆ ಹಾಲಿನ ಗುಣಮಟ್ಟದ ವಿಷಯವೂ ನನಗೆ, ಹಳ್ಳಿಯಲ್ಲಿ ಹುಟ್ಟಿ ಬೆಳೆದ ನನ್ನಂಥವರಿಗೆಲ್ಲ, ಅಪರಿಚಿತವೇನಲ್ಲ. ಮನೆಯ ಕೊಟ್ಟಿಗೆಯಲ್ಲಿ ಹಸು – ಕರುಗಳು, ಮನೆಮಂದಿಗಿಂತಲೂ ಹೆಚ್ಚು ಪ್ರೀತಿಯಿಂದ ಅಮ್ಮ ಅವುಗಳ ಪಾಲನೆ ಪೋಷಣೆ ಮಾಡುವುದು, ಗಬ್ಬ ಧರಿಸಿದ ಹಸು ಕರುವನ್ನೀಯುವ ದಿನ ಹತ್ತಿರವಾದಾಗ ಅಮ್ಮನಿಗೆ ಆತಂಕಭರಿತ ಸಂಭ್ರಮ, ಹಸುವಿನ ಬಾಣಂತನ, ನಮಗೆಲ್ಲ ಗಿಣ್ಣು ಸಮಾರಾಧನೆ, ಹಾಲು ಕೊಡುವ ಹಸುವಿಗೆ ತುಸು ಹೆಚ್ಚೇ ಮೆಹರ್ಬಾನಿಯಿಂದ ಆರೈಕೆ… ನಮ್ಮಲ್ಲಿ ಮೊದಲೆಲ್ಲ ಹಸುಕರುಗಳಿಗೆ ತೆಂಗಿನಹಿಂಡಿ ಮತ್ತು ಕುರ್ಸಾಣಿ ಹಿಂಡಿ ಮಾತ್ರ ಹಾಕುತ್ತಿದ್ದದ್ದು.
ಆಮೇಲೆ ಬೇರೆಬೇರೆ ಬ್ರ್ಯಾಂಡ್‌ಗಳ ‘ಫೀಡ್ಸ್’ ಎಲ್ಲ ನಮ್ಮೂರಿಗೂ ಬಂದವು. ಅಂತೂ ಎಲ್ಲವನ್ನೂ ಹತ್ತಿರದಿಂದ ಕಂಡ ಅನುಭವ ನಮ್ಮದು. ಆದ್ದರಿಂದ, ಕೆನಡಾದಲ್ಲಿ ಬೆಣ್ಣೆ ಗಟ್ಟಿಯಾಗಿ ಇರುವುದಕ್ಕೆ ಪಾಮ್ ಆಯಿಲ್ ಹಿಂಡಿ ಕಾರಣ ಎಂದು ಅರ್ಥಮಾಡಿ ಕೊಳ್ಳುವುದಕ್ಕೆ ನನಗೇನೂ ಕಷ್ಟ ವಾಗಲಿಲ್ಲ. ‘ಹಾಲು ಎಲ್ಲಿಂದ ಬರುತ್ತದೆ?’ ಎಂಬ ಪ್ರಶ್ನೆಗೆ ‘ರೆಫ್ರಿಜರೇಟರ್‌ನಿಂದ’ ಅಥವಾ ಹೆಚ್ಚೆಂದರೆ ‘ನಂದಿನಿ ಹಾಲಿನ ಪ್ಯಾಕೆಟ್‌ಗಳು ಸಿಗುವ ಬೂತ್‌ನಿಂದ’ ಎಂದಷ್ಟೇ ಉತ್ತರ ಗೊತ್ತಿರುವವರಿಗೆ ಈ ಗಟ್ಟಿ ಬೆಣ್ಣೆ – ತಾಳೆ ಎಣ್ಣೆ ಲಿಂಕ್ ಅಷ್ಟು ಸುಲಭವಾಗಿ ಅರ್ಥವಾಗಲಿಕ್ಕಿಲ್ಲ.
ಅದೆಲ್ಲ ಇರಲಿ, ಈ ಸುದ್ದಿಯನ್ನು ಓದಿದಾಗ ನನಗೆ ಹೊಳೆದ ಇನ್ನೊಂದು ವಿಚಾರವೆಂದರೆ, ಒಂದುವೇಳೆ ನಮ್ಮ ಭಾರತದಅಮುಲ್ ಬೆಣ್ಣೆಯ ವಿಚಾರದಲ್ಲಿ ಈ ರೀತಿಯ ತಗಾದೆ ಬಂದಿದ್ದರೆ? ಅದನ್ನು ಅಲ್ಲಗಳೆಯಲಿಕ್ಕಾದರೂ ಸರಿ, ಸಮರ್ಥಿಸಿಕೊಳ್ಳ ಲಿಕ್ಕಾದರೂ ಸರಿ, ಅಮುಲ್ ಒಂದು ಭಲೇ ತಮಾಷೆಯ ಹೋರ್ಡಿಂಗ್ ಜಾಹಿರಾತನ್ನು ಖಂಡಿತ ಹೊರಡಿಸುತ್ತಿತ್ತು. ಅಥವಾ, ಕೋವಿಡಾಯಣ ದೃಷ್ಟಿಕೋನದಿಂದ ನೋಡಿದರೂ – ಅದು ಯಾವ್ಯಾವ ರೀತಿಯಲ್ಲಿ ನಮ್ಮ ಟೊಳ್ಳುತನವನ್ನೆಲ್ಲ ಹೊರಗೆಳೆದು ಗಟ್ಟಿಗರನ್ನಾಗಿಸಿದೆ ಯಲ್ಲವೇ? ಬರಿ ನಮ್ಮನ್ನಷ್ಟೇ ಅಲ್ಲ, ಕೆನಡಾದ ಬೆಣ್ಣೆಯನ್ನೂ ಗಟ್ಟಿಗೊಳಿಸಿದ ತಾಕತ್ತು ಆ ಸೂಕ್ಷ್ಮಾತಿಸೂಕ್ಷ್ಮ ಜೀವಿಯದು!