ಭಿಕ್ಷೆ ಎಂಬ ವೃತ್ತಿ, ಪಡೆದುದನ್ನು ಕೊಡುವ ಪ್ರವೃತ್ತಿ
ನಾಡಿಮಿಡಿತ
ವಸಂತ ನಾಡಿಗೇರ
ಕಾಕಾರಿನಲ್ಲೋ, ಆಟೊದಲ್ಲೋ ಹೋಗುತ್ತಿರುತ್ತೇವೆ. ಟ್ರಾಫಿಕ್ ಸಿಗ್ನಲ್ ನಲ್ಲಿ ವಾಹನ ನಿಲ್ಲುತ್ತದೆ. ಆಗ ಒಂದಷ್ಟು ಜನ ಬಂದು ಮುತ್ತುತ್ತಾರೆ. ಇವರು, ಚಪ್ಪಾಳೆ ತಟ್ಟುತ್ತ ಹಣ ಕೇಳುವ ಮಂಗಳಮುಖಿಯರೂ ಆಗಿರಬಹುದು.
ಇಲ್ಲವೆ ಕಂಕುಳಲ್ಲಿ ಮಗುವನ್ನು ಎತ್ತಿಕೊಂಡಿರುವ, ಚಿಲ್ಲರೆ ಕಾಸಿಗಾಗಿ ದೈನ್ಯದಿಂದ ಬೇಡುತ್ತಿರುವ ಮಹಿಳೆಯೂ ಇರಬಹುದು. ಇಲ್ಲವೆ ಪೆನ್ನು, ಬಲೂನು ಇತ್ಯಾದಿಗಳನ್ನು ಹಿಡಿದುಕೊಂಡು, ೞತೊಗೊಳ್ಳಿೞ ಎಂದು ಅಂಗಲಾಚುವ ಪುಟ್ಟ ಮಕ್ಕಳೂ ಇರಬಹುದು. ಇದರ ಹೊರತಾಗಿ ರಸ್ತೆಬದಿಯಲ್ಲಿ ಕೂತು ಬೇಡುತ್ತಿರುವ ಭಿಕ್ಷುಕರೂ ಇರುತ್ತಾರೆ. ಈ ಬಗ್ಗೆ ಆಗಾಗ ನಾನಾ ಬಗೆಯಪ್ರತಿಕ್ರಿಯೆಗಳನ್ನು, ಅಭಿಪ್ರಾಯ ಗಳನ್ನು, ಅನಿಸಿಕೆಗಳನ್ನು ಫೇಸ್‌ಬುಕ್ಕನಲ್ಲೋ, ವಾಟ್ಸಾಪ್‌ನಲ್ಲೋ ನೋಡುತ್ತಿರುತ್ತೇವೆ.
ಪೆನ್ನಿನ ಡಬ್ಬ ಹಿಡಿದು ತೊಗೊಳ್ಳಿ ಎಂದು ಕೇಳುವ ಪರಿಪಾಠ ಈಗೊಂದು ದಶಕದ ಹಿಂದೆ ಬೆಂಗಳೂರಿನ ಟ್ರಾಫಿಕ್ ಸಿಗ್ನಲ್‌ಗಳಲ್ಲಿ ಪ್ರಾರಂಭವಾದ ಹೊಸತರಲ್ಲಿ ಯಾರೋ ಹೀಗೆ ಬರೆದಿದ್ದರು- ಹೀಗೆ ಪೆನ್ನು ಮಾರುವ ಮಹಿಳೆ ನನ್ನ ಬಳಿ ಬಂದಳು. ನನಗೆ ಪೆನ್ನಿನಅಗತ್ಯವೇನೂ ಇರಲಿಲ್ಲ. ಆದರೂ ಕೊಂಡುಕೊಂಡೆ. ಇದಕ್ಕೆ ಪ್ರತಿಕ್ರಿಯೆಯಾಗಿ ಮತ್ತೊಬ್ಬರು – ನನಗೂ ಇಂಥ ಪರಿಸ್ಥಿತಿ ಎದುರಾದಾಗ ನಾನು ಬರಿ ಐದು ರುಪಾಯಿ ಕೊಟ್ಟು ಕೇವಲ ಒಂದು ಪೆನ್ನು ಖರೀದಿಸಲಿಲ್ಲ. ಬದಲಾಗಿ ಆಕೆಯ ಬಳಿ ಇದ್ದ ಎಲ್ಲವನ್ನೂ ಕೊಂಡೆ. ಅಲ್ಲದೆ ಉಳಿದ ಚಿಲ್ಲರೆಯನ್ನೂ ವಾಪಸು ಪಡೆಯಲಿಲ್ಲ.
ಇವೆರಡೂ ಬರಹಗಳಿಗೆ ಯಥಾಪ್ರಕಾರ, ಭೇಷ್, ಒಳ್ಳೆಯ ಕೆಲಸ ಎಂದು ಲೈಕ್‌ಗಳು ಬಂದವು. ತಪ್ಪೇನಿಲ್ಲ. ಆದರೆ ಈಗೀಗಮತ್ತೊಂದು ಬಗೆಯ ಪೋಸ್ಟನ್ನು ಗಮನಿಸುತ್ತಿದ್ದೇನೆ. ಈ ರೀತಿ ಸಿಗ್ನಲ್, ಮತ್ತಿತರ ಕಡೆಗಳಲ್ಲಿ ಬೇಡಲು ಬಂದವರಿಗೆ ಹಣ ಕೊಡಬೇಡಿ, ಬದಲಾಗಿ ಅವರಿಗೆ ತಿನ್ನಲು ಏನಾದರೂ ಕೊಡಿ ಎಂಬುದು ಅದರ ಒಕ್ಕಣೆ. ಅವರಿಗೆ ಹಣ ಕೊಟ್ಟರೆ ಪ್ರಯೋಜನ ವಿಲ್ಲ. ದುರುಪಯೋಗ ಆಗಬಹುದು. ಅಷ್ಟು ಅಗತ್ಯ ಇದ್ದರೆ ನಾವು ಕೊಡುವ ತಿಂಡಿ ತಿನಿಸನ್ನು ಪಡೆಯುತ್ತಾರೆ ಎಂಬ ಉದ್ದೇಶ. ಆದರೆ ಇದು ಸುಲಭ ಸಾಧ್ಯ ಕೆಲಸವಲ್ಲ. ಅದೂ ಅಲ್ಲದೆ ಎಲ್ಲರೂ ಹೀಗೆಯೇ ಇರುತ್ತಾರೆ ಎಂದು ಪರಿಭಾವಿಸುವುದು ಸೂಕ್ತವೇ ಎಂಬ ಪ್ರಶ್ನೆಯೂ ಇದೆ.
ನಮ್ಮ ಭಾರತೀಯ ಸಂಸ್ಕೃತಿ, ಪರಂಪರೆಯಲ್ಲಿ ಭಿಕ್ಷೆಗೆ ವಿಶಾಲ ಮತ್ತು ಆಳವಾದ ಅರ್ಥ ಇದೆ. ಮೊದಲೆಲ್ಲ ಸನ್ಯಾಸಿಗಳು, ಯತಿ ಮೊದಲಾದವರು ಭಿಕ್ಷೆ ಬೇಡಿಯೇ ಜೀವನ ಸಾಗಿಸುತ್ತಿದ್ದರು. ಅಧ್ಯಾತ್ಮಿಕ ಪರಂಪರೆಯಲ್ಲಿ ಭಿಕ್ಷೆ ಬೇಡುವುದು ಮತ್ತು ನೀಡುವುದು ಶ್ರೇಷ್ಠ ಎಂದು ಭಾವಿಸಲಾಗಿತ್ತು. ನಾನು ಎಂಬುದರಿಂದ ತುಂಬಿ ಹೋಗಬಾರದು ಎಂಬುದು ಇದ ಉದ್ದೇಶವಾಗಿತ್ತು. ನಾವು ಹಣ ಇತ್ಯಾದಿಗಳನ್ನು ಗಳಿಸಿದಾಗ ನನ್ನದು ಎಂಬ ಅಹಂಭಾವ ಬರುತ್ತದೆ ಎಂಬ ಕಾರಣಕ್ಕೆ ಅದರಿಂದ ಹೊರಬರಲು ಸನ್ಯಾಸಿಗಳು ಭಿಕ್ಷೆ ಬೇಡುತ್ತಿದ್ದರು. ಅದೇ ರೀತಿ ನಮ್ಮಲ್ಲಿರುವುದನ್ನು ಭಿಕ್ಷೆಯಾಗಿ ನೀಡುವ ಮೂಲಕ ಕೊಡುವವರೂ ಅಹಮಿಕೆಯನ್ನು ಕಳೆದುಕೊಳ್ಳುತ್ತಿದ್ದರು.
ಇದನ್ನು ಮಧುಕರ ಎಂದು ಕರೆಯುತ್ತಿದ್ದರು. ಶಂಕರ ಭಗವತ್ಪಾದರು ಹೀಗೆ ಮಧುಕರಕ್ಕೆ ಹಳ್ಳಿಯ ಮನೆಯ ಮುಂದೆ ನಿಂತು ಭವತಿ ಭಿಕ್ಷಾಂ ದೇಹಿ ಎಂದಾಗ ಅವರಿಗೆ ಭಿಕ್ಷೆ ಕೊಡುವಂತೆ ಬ್ರಾಹ್ಮಣನು ಹೆಂಡತಿಗೆ ಹೇಳಿದ. ಆದರೆ ಮನೆಯಲ್ಲಿ ಕೊಡಲು ಏನೂ ಇಲ್ಲ. ಒಂದು ನೆಲ್ಲಿಕಾಯಿ ಮಾತ್ರ ಇದೆ ಎಂದು ಅದನ್ನೇ ಅರ್ಪಿಸುತ್ತಾರೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡ ಶಂಕರರರು ಆ ಬ್ರಾಹ್ಮಣನನ್ನು ಉದ್ಧಾರ ಮಾಡಬೇಕೆಂದು ಸ್ತೋತ್ರ ರಚಿಸಿ ಮಹಾಲಕ್ಷ್ಮಿಯನ್ನು ಸ್ತುತಿಸಲು ಅವನ ಮನೆಯಮುಂದೆ ಚಿನ್ನದ ನೆಲ್ಲಿಕಾಯಿ ಸುರಿಯುತ್ತವೆ. ಇದನ್ನು ಕನಕಧಾರಾ ಸ್ತೋತ್ರ ಎಂದು ಕರೆಯಲಾಗಿದೆ.
ಆದರೆ ಇಂಥ ಪವಿತ್ರ ಮತ್ತು ಪೂಜ್ಯ ಭಾವ ಇದ್ದ ಭಿಕ್ಷೆ ಇದೀಗ ಭಿಕ್ಷಾಟನೆಯಾಗಿ ಪರಿಣಮಿಸಿದೆ. ಕೆಲವರಿಗೆ ಅನಿವಾರ್ಯ ವಾಗಿರಬಹುದು. ಆದರೆ ಬಹುತೇಕರಿಗೆ ಇದೊಂದು ದಂಧೆ. ಈಗ ಭಿಕ್ಷಾಟನೆ ಎಂಬುದು ಬೃಹದಾಕಾರದ ಸಮಸ್ಯೆ. ಈ ಸಮಸ್ಯೆಗೆ ಬೇರೆ ಬೇರೆ ಆಯಾಮಗಳು ಇವೆ. ಏಕೆಂದರೆ ಹೀಗೆ ಭಿಕ್ಷೆ ಬೇಡುವವರು ಎಲ್ಲರೂ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಮಾತ್ರವೇ ಈ ಕೆಲಸ ಮಾಡುವವರಲ್ಲ. ಕೆಲವರು ಭಿಕ್ಷಾಟನೆ ಎಂಬ ಕೂಪಕ್ಕೆ ಅನಿವಾರ್ಯವಾಗಿ ಬಿದ್ದಿರುತ್ತಾರೆ. ಬೇರೆ ಮಾತಿನಲ್ಲಿ ಹೇಳುವು ದಾದರೆ ಭಿಕ್ಷಾಟನೆಯೂ ಒಂದು ದೊಡ್ಡ ಜಾಲ, ಮಾಫಿಯಾ.
ಅಮಾಯಕರನ್ನು, ದಿಕ್ಕಿಲ್ಲದವರನ್ನು ಅಥವಾ ಸ್ವಯಂ ಪ್ರೇರಣೆಯಿಂದ ಬರುವ ಜನರನ್ನು ಕರೆದುಕೊಂಡು ಬಂದು ಭಿಕ್ಷಾಟನೆಗೆ ಹಚ್ಚುವ ದಂಧೆ ತುಂಬ ದೊಡ್ಡದು. ಅಂದರೆ ರಸ್ತೆಗಳಲ್ಲಿ ಭಿಕ್ಷೆ ಬೇಡುವವವರಲ್ಲಿ ಹಲವರಿಗೆ ಇದೊಂದು ಕೆಲಸ ಇದ್ದಂತೆ. ಹೀಗೆ ಗಳಿಸುವ ಹಣವನ್ನು ಅವರು ತಮ್ಮ ಧಣಿಗಳ ಕೈಗೆ ಕೊಡಬೇಕು. ಇಲ್ಲದಿದ್ದರೆ ಪರಿಣಾಮ ನೆಟ್ಟಗಾಗಿರುವುದಿಲ್ಲ. ಇದರ ಕೊಂಚಅರಿವಿರುವವರೇ ಇಂಥವರಿಗೆ ಹಣ ಕೊಡಬೇಡಿ ಎಂದು ಹೇಳುವುದು. ಅಷ್ಟರಮಟ್ಟಿಗೆ ಅದು ಸರಿ ಇದೆ. ಆದರೆ ಈ ಪಿಡುಗಿಗೆ ಕೊನೆ ಇಲ್ಲವೇ ಎಂಬುದೂ ಒಂದು ಮುಖ್ಯವಾದ ಪ್ರಶ್ನೆ.
ಹಾಗೆಂದು ಸರಕಾರವೂ ಭಿಕ್ಷಾಟನೆ ನಿರ್ಮೂಲನೆಗೆ ಸಾಕಷ್ಟು ಕ್ರಮ ಕೈಗೊಳ್ಳುತ್ತದೆ. ವಾಸ್ತವವಾಗಿ ಕರ್ನಾಟಕದಲ್ಲಿ ಭಿಕ್ಷಾಟನೆ ಯನ್ನು ನಿಷೇಧಿಸಲಾಗಿದೆ. ಭಿಕ್ಷಾಟನೆ ನಿಷೇಧ ಕಾನೂನು ಇದೆ. ಆದರೆ ಇದು ಅನೇಕರಿಗೆ ಗೊತ್ತೇ ಇಲ್ಲ. ಗೊತ್ತಿದ್ದರೂ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಇದನ್ನು ಮಾನವೀಯ ಸಮಸ್ಯೆ ಎಂದು ನೋಡುವವವರೇ ಹೆಚ್ಚು. ಸರಕಾರ, ಕಾರ್ಪೊರೇಶನ್ ಮಟ್ಟದಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳಿವೆ. ಭಿಕ್ಷುಕರ ಪುನರ್ವಸತಿ ಕೇಂದ್ರ ಗಳಿವೆ. ಅವರಿಗಾಗಿ ರಾತ್ರಿ ತಂಗುದಾಣ ಗಳಿವೆ. ಬೆಂಗಳೂರಿನ ಸುಮನಹಳ್ಳಿಯಲ್ಲಿ ಭಿಕ್ಷುಕರ ಪುನರ್ವಸತಿ ಕೇಂದ್ರವಿದೆ. ಆದರೆ ಕೆಲವು ವರ್ಷಗಳ ಹಿಂದೆ ಅಲ್ಲಿನವಾಸಿಸುತ್ತಿದ್ದ ಹಲವು ಜನರು ನಿಗೂಢವಾಗಿ ಸಾವಿಗೀಡಾದರು.
ಭಿಕ್ಷುಕರ ಸಮಸ್ಯೆ ನಿರ್ಮೂಲನೆಗೆ ನಾವೆಲ್ಲ ತೆರಿಗೆ ಕಟ್ಟುತ್ತೇವೆ. ಇದೆಲ್ಲದರ ಮಧ್ಯೆಯೂ ಅಸಂಖ್ಯಾತ ಭಿಕ್ಷುಕರು ಹಾಯಾಗಿಯೇ ಇರುವ ಕತೆಗಳೇ ರೋಚಕ. ಈ ಭಿಕ್ಷುಕಕರಲ್ಲೂ ಹಲವು ವಿಧ. ಹೊಟ್ಟೆಪಾಡಿಗೆ ಭಿಕ್ಷೆ ಬೇಡಿ ಅಂದಂದಿನ ಜೀವನ ಸಾಗಿಸು ವವವರದು ಒಂದು ವರ್ಗ. ಭಿಕ್ಷೆಯನ್ನು ವೃತ್ತಿ ಮಾಡಿಕೊಂಡು ಅದರಿಂದ ಅಪಾರ ಸಂಪತ್ತು ಗಳಿಸಿ ಅದನ್ನು ಬೆಳೆಸುವವರದು ಇನ್ನೊಂದು ವರ್ಗ. ಮೊದಲ ವರ್ಗದವರು ನಮಗೆ ದಿನಾ ಸಿಗುವ ದೈನ್ಯಮುಖದ, ಬೇಡಿ ಬದುಕು ವಂಥವರು. ಭಿಕ್ಷೆ ಎಂಬುದೇ ಅನಿಶ್ಚಿತ. ದಿನವೂ ಒಂದೇ ಥರ ಇರುವುದಿಲ್ಲ.
ಒಂದು ದಿನ ಕೈತುಂಬ ಸಂಪಾದನೆ ಆಗಬಹುದು. ಮತ್ತೆ ಕೆಲವು ದಿನ ಸಾಕಷ್ಟು ಪರದಾಟ ವಾಗಬಹುದು. ಭಿಕ್ಷುಕರೆಂದರೆ ನಮ್ಮ ಕಣ್ಣಮುಂದೆ ಬರುವ ಚಿತ್ರಣವೇ ಬೇರೆ. ಹರಿದ ಬಟ್ಟೆ, ಕೆದರಿದ ಕೂದಲು, ದೈನೇಸಿ ಮುಖ ಇತ್ಯಾದಿ. ಹೀಗಾಗಿ ಅವರನ್ನು ಕಂಡರೆ ತುಚ್ಛ, ತಾತ್ಸಾರ ಭಾವ. ಅಯ್ಯೋ ಪಾಪ ಎಂಬ ಒಣನೋಟ. ಕರುಣೆ, ಕೆಲವೊಮ್ಮೆ ಕಕ್ಕುಲಾತಿಯನ್ನೂ ತೋರುತ್ತೇವೆ. ಅಯ್ಯೋಪಾಪ. ಅವರಿಗೆ ಕೆಲಸ ಇಲ್ಲ, ಅವರ ಬಳಿ ಹಣವಿಲ್ಲ. ಬೇಡುವುದನ್ನು ಬಿಟ್ಟು ಅವರಿಗೇನೂ ಬರುವುದಿಲ್ಲ ಎಂಬ ವಿಷಣ್ಣತೆ. ಮೇಲರಿಮೆ, ಕೀಳರಿಮೆ. ಬಿಡಿಗಾಸನ್ನು ಅವರತ್ತ ಬಿಸಾಕುವಾಗ ಈ ಎಲ್ಲ ಭಾವಗಳು ಆವಿರ್ಭವಿಸಿರುತ್ತವೆ.
ಆದರೆ ಎಲ್ಲ ಭಿಕ್ಷುಕರೂ ಹೀಗೇ ಇರುತ್ತಾರೆ ಎಂದೇನೂ ಇಲ್ಲ. ಬೇಡುವುದನ್ನು ಒಂದು ವೃತ್ತಿಯಾಗಿ ಮಾಡಿಕೊಂಡ ಮಂದಿಯ ಸಂಖ್ಯೆ ಕಡಿಮೆ ಏನೂ ಇಲ್ಲ. ಈ ವೃತ್ತಿಯಿಂದ ಅಪಾರ ಹಣ, ಆಸ್ತಿ ಗಳಿಸಿದ ಲಕ್ಷಾಧಿಪತಿ, ಕೋಟ್ಯಧಿಪತಿ ಭಿಕ್ಷುಕರಿದ್ದಾರೆ. ಈ ರೀತಿ ಅಪಾರ ಆಸ್ತಿ ಮಾಡಿದ ವಿಶೇಷ ಭಿಕ್ಷುಕರ ಕಥೆ ಕೇಳಿದರೆ ಯಾರಾದರೂ ದಂಗಾಗಲೇಬೇಕು. ಆತನ ಹೆಸರು ಭರತ್ ಜೈನ್. ವೃತ್ತಿಪರ ಭಿಕ್ಷುಕ. ಮುಂಬೈನ ಪರೇಲ್ ಇವನ ಕಾರ್ಯಕ್ಷೇತ್ರ. ತಿಂಗಳಿಗೆ ಸುಮಾರು 60 ಸಾವಿರ ರು.ಕಮಾಯಿ.
ತಲಾ 70 ಲಕ್ಷ ರು. ಬೆಲೆಯ ಎರಡು ಅಪಾರ್ಟ್‌ಮೆಂಟ್‌ಗಳ ಒಡೆಯ. ಅಲ್ಲದೆ ಜೂಸ್ ಸೆಂಟರ್‌ನಿಂದ10ಸಾವಿರ ರು. ಬಾಡಿಗೆಗಳಿಸುತ್ತಾನೆ. ತಾನೇನು ಕಮ್ಮಿ ಎನ್ನುವಂಥ ಸರ್ವಾತಿಯಾ ದೇವಿ ಎಂಬ ಶ್ರೀಮಂತ ಭಿಕ್ಷುಕಿಯೊಬ್ಬಳಿದ್ದಾಳೆ. ಆಕೆ ಇರುವುದುಬಿಹಾರದ ಪಟನಾದಲ್ಲಿ. ದೇಶದ ಅತ್ಯಂತ ಸ್ಥಿತಿವಂತ ಮಹಿಳಾ ಭಿಕ್ಷುಕಿ ಎನ್ನಲಾಗಿದೆ. ಭಿಕ್ಷಾಟನೆಗೆ ವೃತ್ತಿಪರತೆ ತಂದಿರುವ ಆಕೆ, ಪ್ರತಿವರ್ಷ ೩೬ ಸಾವಿರ ರು. ವಿಮಾ ಕಂತು ಪಾವತಿ ಮಾಡುತ್ತಾಳೆ. ತನ್ನ ಗಳಿಕೆಯ ಹಣದಲ್ಲಿ ಹಲವಾರು ಊರುಗಳನ್ನು ಸುತ್ತಿದ್ದಾಳೆ. ತೀರ್ಥಯಾತ್ರೆ ಕೈಗೊಂಡಿದ್ದಾಳೆ.
ಸಂಭಾಜಿ ಕಾಳೆ ಎಂಬ ಕಸುಬುದಾರ ಭಿಕ್ಷುಕ ಇರುವುದು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ. ಒಂದು ಫ್ಲಾಟ್, ಜಮೀನು, ಎರಡು ಮನೆಗಳನ್ನು ಹೊಂದಿದ್ದಾನೆ. ಒಂದಷ್ಟು ಹೂಡಿಕೆಯನ್ನೂ ಮಾಡಿದ್ದಾನೆ. ಐವತ್ತು ಸಾವಿರ ರು.ಗೂ ಮಿಕ್ಕಿದ ಬ್ಯಾಂಕ್ ಬ್ಯಾಲೆನ್ಸ್ಇದೆ. ಇದಲ್ಲದೆ ಕೃಷ್ಣಕುಮಾರ್ ಗೀತೆ ಹಾಗೂ ಲಕ್ಷ್ಮೀ ದಾಸ್ ಎಂಬ ಮತ್ತಿಬ್ಬರು ಕೂಡ ಸಾಕಷ್ಟು ಆಸ್ತಿ ಮಾಡಿದ ವೃತ್ತಿಪರ ಭಿಕ್ಷುಕರು.
ಇದು ಮಾತ್ರವಲ್ಲದೆ ಭಿಕ್ಷುಕಿ ಸಾವು, ಅಪಾರ ಆಸ್ತಿ ಪತ್ತೆ ಎಂಬಂಥ ವರದಿಗಳ್ನು ಕೂಡ ಆಗಾಗ ಓದುತ್ತೇವೆ. ಅಂದರೆ ಭಿಕ್ಷುಕರಲ್ಲಿ ಅನೇಕರು ಸಾಕಷ್ಟು ಹಣ ಮಾಡುತ್ತಾರೆ. ಆದರೆ ಕೆಲವರು ಅದನ್ನು ವೃತ್ತಿಯಾಗಿ ಮಾಡಿಕೊಂಡಿರುತ್ತಾರೆ. ಅದರಲ್ಲೂ ಒಂದು ಶಿಸ್ತಿರುತ್ತದೆ. ಹೀಗೆ ಬಂದ ಹಣದಲ್ಲಿ ಆಸ್ತಿ ಮಾಡುತ್ತಾರೆ. ಆದರೆ ಬಹುತೇಕರು ಹಣವನ್ನು ಕೂಡಿಟ್ಟು, ಅಲ್ಲಿ ಇಲ್ಲಿ ಬಚ್ಚಿಟ್ಟುಹಾಗೇ ಸತ್ತುಬಿಡುತ್ತಾರೆ. ಮತ್ತೆ ಕೆಲವರು ಕೂಡಿಟ್ಟ ಹಣದ ವಿಚಾರವಾಗಿ ಜಗಳ ರಗಳೆ ಮಾಡಿಕೊಳ್ಳುತ್ತಾರೆ.
ಕೊಲೆ ಸುಲಿಗೆಗಳಾದ ನಿದರ್ಶನಗಳೂ ಉಂಟು. ಆದರೆ ಭಿಕ್ಷಾಟನೆಯ ಬಗ್ಗೆ, ಭಿಕ್ಷುಕರ ಬಗ್ಗೆ ಈ ವಾರ ನಾನು ಬರೆಯುತ್ತಿರುವುದರ ಉದ್ದೇಶವೇ ಬೇರೆ ಕಾರಣಕ್ಕೆ. ಇದಕ್ಕೆ ಒಬ್ಬರು ಸೂರ್ತಿಯಾಗಿದ್ದಾರೆ ಎಂದರೆ ಅಚ್ಚರಿ ಆದೀತು. ಹೌದು.ಅವರೇ ಅಶ್ವತ್ಥಮ್ಮ. ಇವರು ಉಡುಪಿ ಜಿಲ್ಲೆ ಕುಂದಾಪುರ ತಾಲೂಕಿನ ಕಂಚುಗೋಡಿನವರು. ಇವರೂ ಭಿಕ್ಷುಕಿಯೇ. ಆದರೆ ಎಲ್ಲರಂತಲ್ಲದ ವಿಶೇಷ ಮಹಿಳೆ. ಏಕೆಂದರೆ ಭಿಕ್ಷಾಟನೆಯಿಂದ ಬಂದ ಬಹುಪಾಲು ಹಣವನ್ನು ಅಶ್ವತ್ಥಮ್ಮ ಸತ್ಕಾರ್ಯಕ್ಕೆ ದಾನ ಮಾಡಿದ್ದಾರೆ.
ಇತ್ತೀಚೆಗೆ ಸಾಲಿಗ್ರಾಮದ ದೇವಸ್ಥಾನವೊಂದರ ಅನ್ನಸೇವೆಗೆಂದು ಆಕೆ ಒಂದು ಲಕ್ಷ ರುಪಾಯಿ ದೇಣಿಗೆ ನೀಡಿದಾಗ ಮುಂಬೆಳಕಿಗೆ ಬಂದರು. ಈ ಸುದ್ದಿ ಎಲ್ಲೆಡೆ ಹರಿದಾಡಿತು. ಹಾಗೆಂದು ಈ ರೀತಿ ದಾನ ಧರ್ಮ ಮಾಡುತ್ತಿರುವುದು ಇದೇ ಮೊದಲಲ್ಲ. ಕಂಚುಗೋಡು ದೇವಾಲಯಕ್ಕೆ ಒಂದೂವರೆ ಲಕ್ಷ ರು; ಪಂಪಾ ಸನ್ನಿಧಾನಕ್ಕೆ ಒಂದು ಲಕ್ಷ; ಪೊಳಲಿ ದೇವಸ್ಥಾನಕ್ಕೆ ಒಂದೂವರೆ ಲಕ್ಷ ರು. ದಾನ ಮಾಡಿದ್ದಾರೆ. ಇವು ಲೆಕ್ಕಕ್ಕೆ ಸಿಕ್ಕಿದ್ದು. ಲೆಕ್ಕವಿಲ್ಲದವು ಇನ್ನೆಷ್ಟೋ. ಹೀಗೆ ಲಕ್ಷಾಂತರ ರು. ಗಳನ್ನು ಅವರುದೇಣಿಗೆ ನೀಡಿದ್ದಾರೆ.
ಈಗಾಗಲೇ80ದಾಟಿರುವ ಅಶ್ವತ್ಥಮ್ಮ ಮೂರು ದಶಕಗಳಿಂದಲೂ ಭಿಕ್ಷೆ ಬೇಡುವ ಕಾಯಕ ಮಾಡುತ್ತಿದ್ದಾರೆ. ನಾಟಕ ಕಂಪನಿಯ ಮುಖ್ಯಸ್ಥರನ್ನು ಮದುವೆ ಯಾಗಿದ್ದರು. ಪತಿ ತೀರಿಕೊಂಡ ಬಳಿಕ ಕುಂದಾಪುರದಲ್ಲಿ ವಾಸವಿದ್ದರು. ವಯಸ್ಸಾದ ಬಳಿಕ ಜೀವನ ಸಾಗಿಸಲು ಭಿಕ್ಷಾಟನೆಗೆ ಇಳಿದರು. ಅಯ್ಯಪ್ಪ ಸ್ವಾಮಿಯ ಪರಮ ಭಕ್ತೆಯಾದ ಅಶ್ವತ್ಥಮ್ಮ ಸಾಕಷ್ಟು ಸಮಯ ಮಾಲಾಧಾರಿ ಯಾಗಿರುತ್ತಾರೆ. ಉಡುಪಿ ಜಿಲ್ಲೆಯ ಹಲವೆಡೆ, ಹಲವು ದೇವಸ್ಥಾನಗಳ ಬಳಿ ಭಿಕ್ಷೆ ಬೇಡುತ್ತಾರೆ. ಈಗ ಕಂಚುಗೋ ಡಿನಲ್ಲಿ ಮನೆ ಇದೆ. ಮಗ ತೀರಿಕೊಂಡಿದ್ದಾನೆ.
ಸೊಸೆ ಹಾಗೂ ಅವರ ಮಕ್ಕಳು ವಾಸವಾಗಿದ್ದಾರೆ. ಈಕೆಯದು ಮಾತ್ರ ಬಹುತೇಕ ಪ್ರವಾಸ. ಆದರೆ ಬಂದ ಹಣವನ್ನು ಕೂಡಿಡುವುದಿಲ್ಲ. ಸ್ವಂತಕ್ಕೆ ಬಳಸಿ ಆರಾಮವಾಗಿರುವುದಿಲ್ಲ. ಬಹುಪಾಲು ಹಣವನ್ನು ಮತ್ತೆ ಸಮಾಜಕ್ಕೆ ನೀಡುತ್ತಾರೆ. ಮೇಲೆ ವಿವರಿಸಿದಂತೆ ದೇವಾಲಯಗಳಿಗೆ ಹೆಚ್ಚಾಗಿ ನೀಡುತ್ತಾರೆ. ಈ ಬಾರಿ ಕರೋನಾ ದೂರವಾಗಲಿ. ದೇಶಕ್ಕೆ ಒಳ್ಳೆಯದಾಲಿ ಎಂದುಪ್ರಾರ್ಥಿಸಿ ದೇವಾಲಯ ದ ಅನ್ನದಾನ ನಿಧಿಗೆ ದಾನ ಮಾಡಿದ್ದಾರೆ.
ಇಷ್ಟೆಲ್ಲ ಪ್ರಚಾರಕ್ಕೆ ಬಂದಿದ್ದರೂ ಅಶ್ವತ್ಥಮ್ಮ ಮಾತ್ರ ನಿರ್ಲಿಪ್ತೆ. ಎಂದಿನಂತೆ ದೇವಸ್ಥಾನಗಳ ಜಗುಲಿಯಲ್ಲಿ ಬಂದು ಕೂರುತ್ತಾರೆ. ದೇಹಿ ಎನ್ನುತ್ತಾರೆ. ಆದರೆ ಬಂದ ಹಣವನ್ನು ಸ್ವಾಹಾ ಮಾಡುವುದಿಲ್ಲ. ಸಮಾಜ ಕಾರ್ಯ ಗಳಿಗೆ ಅರ್ಪಿಸಿ ಧನ್ಯರಾಗುತ್ತಾರೆ.ದಾನಧರ್ಮಕ್ಕೆ ನಮ್ಮಲ್ಲಿ ಕೊರತೆ ಏನೂ ಇಲ್ಲ. ರಾಜಕಾರಣಿಗಳು, ದೊಡ್ಡ ದೊಡ್ಡ ಉದ್ಯಮಿಗಳು ದೇವಸ್ಥಾನಗಳಿಗೆ, ಬೇರೆ ಬೇರೆ ಸಮಾಜ ಕಾರ್ಯಗಳಿಗೆ ಸಾಕು ಬೇಕಾದಷ್ಟು ಹಣ ನೀಡುತ್ತಾರೆ.
ಕನಕ ಬಾಗಿಲು, ಚಿನ್ನದ ಕಿರೀಟ, ಬಂಗಾರದ ತೇರು ಮಾಡಿಸುತ್ತಾರೆ. ಕೆಲವರು ಸದ್ದಿಲ್ಲದೆ ಈ ಕೆಲಸ ಮಾಡುತ್ತಾರೆ. ಮತ್ತೆ ಕೆಲವರು ಸಾಕಷ್ಟು ಪ್ರಚಾರ ಪಡೆಯುತ್ತಾರೆ. ಇವರಿಗೆ ದುಡ್ಡಿನ ಕೊರತೆಯೇನೂ ಇರುವುದಿಲ್ಲ. ಹಾಗೆ ನೋಡಿದರೆ ಇಂಥವರಲ್ಲಿ ಅನೇಕರೂ ವಾಮಮಾರ್ಗ ದಿಂದ ಹಣ ಗಳಿಸಿರುತ್ತಾರೆ. ಇತ್ತ ದುಡಿಯದೆ, ದುಃಖ ಪಡದೆ ಭಿಕ್ಷಾಟನೆ ಮೂಲಕ ಹಣ ಗಳಿಸಿ ಅದನ್ನುಉಳಿಸಿ ಆಸ್ತಿ ಅಂತಸ್ತು ಮಾಡುವಂಥ ಭಿಕ್ಷುಕರೂ ಇದ್ದಾರೆ. ಆದರೆ ಅಶ್ವತ್ಥಮ್ಮನಂಥವರು ಅಪರೂಪ. ಹಾಗಾ ಅವರು ಎಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಕೊಡುಗೈ ದಾನಿ ಭಿಕ್ಷುಕಿ. ಆದಕಾರಣ ಆಕೆಯೇ ನಿಜವಾದ ಶ್ರೀಮಂತೆ.
ನಾಡಿಶಾಸ್ತ್ರಕೇಳಿದರೆ ಭಿಕ್ಷೆಯನು ನೀಡುವವರುಂಟುಇದೇ ದಂಧೆಯಾದರೆ ಏನು ಸುಖವುಂಟುಪಡೆದ ಹಣವನ್ನು ಮಾಡುವಿರೇಕೆ ಗಂಟುಇದನು ದೇಣಿಗೆ ನೀಡುವವರಲ್ಲವೇ ಗ್ರೇಟು