ಮಹಿಳಾ ದೌರ್ಜನ್ಯ ಕಾನೂನುಗಳಲ್ಲಿ ಲಿಂಗ ಸಮಾನತೆ ಬರುವಂತಾಗಲಿ
ಅಭಿವ್ಯಕ್ತಿ
ಉಷಾ ಜೆ.ಎಂ.
ಭಾರತೀಯ ಸಂಸ್ಕೃತಿಯಲ್ಲಿ ದೇವಿ ಉಪಾಸನೆ ಒಂದು ಪ್ರಮುಖವಾದ ಪದ್ಧತಿ. ಹೆಣ್ಣನ್ನು ಭೂಮಿಗೆ ಹೋಲಿಸಿ, ನದಿಗಳಿಗೆ ಹೆಣ್ಣಿನ ಹೆಸರಿಡುವುದರ ಮೂಲಕ ಸ್ತ್ರೀ ತತ್ತ್ವವನ್ನು ಆರಾಧಿಸಲಾಗುತ್ತದೆ. ಎಲ್ಲಿ ಮಹಿಳೆಯರನ್ನು ಪೂಜಿಸುತ್ತಾರೊ ಅಲ್ಲಿ ದೇವತೆ ಗಳು ನೆಲೆಸಿರುತ್ತಾರೆ ಎಂದು ನಂಬಿರುವ ದೇಶ ನಮ್ಮದು.
ಇದನ್ನು ನಮ್ಮ ಪುರಾಣಗಳಲ್ಲಿ ಸ್ತ್ರೀಗೆ ಕೊಟ್ಟ ಪವಿತ್ರ ಸ್ಥಾನಮಾನದಿಂದಲೇ ತಿಳಿಯಬಹುದು. ರಾಣಿ ಅಬ್ಬಕ್ಕದೇ, ಕಿತ್ತೂರು ರಾಣಿ ಚೆನ್ನಮ್ಮ, ಝಾನ್ಸಿರಾಣಿ ಲಕ್ಷ್ಮಿಬಾಯಿಯಂತಹ ವೀರ ವನಿತೆ ಯರನ್ನು ಕಂಡ ದೇಶ. ಕಾಲ ಕ್ರಮೇಣ ಪರಕೀಯರ ದಾಳಿಯಿಂದ ಮಹಿಳೆಯರ ಸ್ಥಿತಿಗತಿಯೂ ಬದಲಾಗುತ್ತ ಹೋಯಿತು. ಮಹಿಳೆಯರು ಕೀಳು ಎಂಬ ಭಾವನೆ ಎಲ್ಲ ಸಮುದಾಯಗಳಲ್ಲೂ ವ್ಯಾಪಕವಾಗಿ ಹರಡಿದೆ.
ವರದಕ್ಷಿಣೆ, ಹೆಣ್ಣು ಭ್ರೂಣ ಮತ್ತು ಶಿಶು ಹತ್ಯೆ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಬಾಲ್ಯ ವಿವಾಹ, ಮತ್ತು ಲಿಂಗ ಅಸಮಾನತೆಯಂಥ ಅನೇಕ ಸಾಮಾಜಿಕ ಪಿಡುಗುಗಳು ಹೆಣ್ಣನ್ನು ಇಂದಿಗೂ ಕಾಡುತ್ತಿವೆ. ವರದಕ್ಷಿಣೆ ಕಾಟಕ್ಕೆ ಮಹಿಳೆಯರು ಬಲಿಯಾಗುತ್ತಿದ್ದಾರೆ. ಹೆಣ್ಣು ಮಗು ಜನಿಸಿದರೆ ಮುಂದೆ ವರದಕ್ಷಿಣೆ ಕೊಡಬೇಕಾಗುತ್ತದೆ ಎಂದು ಗರ್ಭದಲ್ಲೇ ಭ್ರೂಣವನ್ನುಹತ್ಯೆ ಮಾಡುತ್ತಿದ್ದಾರೆ. ಭೀಕರವಾದ ಅತ್ಯಾಚಾರದಂಥ ಘಟನೆಗಳು ಸಾಮಾನ್ಯವಾಗಿಬಿಟ್ಟಿವೆ.
ಗ್ರಾಮೀಣ ಪ್ರದೇಶಗಳಲ್ಲಿ ದೈಹಿಕವಾಗಿ ಮಾನಸಿಕವಾಗಿ ತಾಯಿಯಾಗಲು ತಯಾರಿಲ್ಲದ ಸಮಯದಲ್ಲಿ ಬಾಲ್ಯವಿವಾಹ ಮಾಡಿ ಮಕ್ಕಳ ಜೀವನ ಹಾಳು ಮಾಡುತ್ತಿದ್ದಾರೆ. ವೇತನದಲ್ಲಿ, ಬಡ್ತಿಯಲ್ಲಿ ತಾರತಮ್ಯದಂಥ ಸಮಸ್ಯೆಗಳು ಕಾಡುತ್ತಿವೆ. ಇಂತಹ ಗಂಭೀರವಾದ ಸಮಸ್ಯೆಗಳ ವಿರುದ್ಧ ಮಹಿಳಾ ಪರ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ವರದಕ್ಷಿಣೆ, ಹೆಣ್ಣು ಭ್ರೂಣ ಮತ್ತು ಶಿಶುಹತ್ಯೆ, ಅತ್ಯಾಚಾರ, ಕೌಟುಂಬಿಕ ದೌರ್ಜನ್ಯ, ಮತ್ತು ಬಾಲ್ಯ ವಿವಾಹದಂಥ ಸಮಸ್ಯೆಗಳನ್ನು ತಡೆಗಟ್ಟಲು ಸರಕಾರ ಕಠಿಣವಾದ ಕಾನೂನುಗಳನ್ನು ರೂಪಿಸಿದೆ.
ಮಹಿಳಾ ಸ್ನೇಹಿಯಾಗಿರುವ ಈ ಕಾನೂನುಗಳನ್ನು ಕೆಲ ಮಹಿಳೆಯರು ತಮ್ಮ ಸ್ವಾರ್ಥಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ನಡೆಯುವ ಸಣ್ಣಪುಟ್ಟ ವಿಷಯಗಳನ್ನು ದೊಡ್ಡದು ಮಾಡಿ ವರದಕ್ಷಿಣೆ ಕೇಸನ್ನು ದಾಖಲಿಸುವುದಾಗಿ ಹೆದರಿಸುವುದು ಸಾಮಾನ್ಯ ವಾಗಿಬಿಟ್ಟಿದೆ. ತನ್ನ ಮಾತನ್ನು ಗಂಡ ಕೇಳದಿದ್ದಾಗ, ಬೇರೆ ಮನೆ ಮಾಡಲು ಒಪ್ಪದಿದ್ದಾಗ ಅಥವಾ ತನಗೆ ವಿವಾಹೇತರ ಸಂಬಂಧ ವಿದ್ದು ಗಂಡನಿಂದ ಬಿಡುಗಡೆ ಬೇಕಾದಾಗಲೂ ಅನೇಕ ಮಹಿಳೆಯರಿಗೆ ನೆನಪಾಗುವುದೇ ವರದಕ್ಷಿಣೆ ಮತ್ತು ಕೌಟುಂಬಿಕ ದೌರ್ಜನ್ಯ ಕೇಸ್. ಕೇವಲ ಗಂಡನ ಮೇಲೆ ಅಲ್ಲದೆ ವಿನಾಕಾರಣಕ್ಕೆ ಆತನ ಕುಟುಂಬದವರ ಮೇಲೆಲ್ಲ ಕೇಸ್ ದಾಖಲಿಸಿ ಸೇಡು ತೀರಿಸಿಕೊಳ್ಳುತ್ತಿದ್ದಾರೆ.
ಪ್ರಕರಣ ಗಂಭೀರವಾಗಿರುವುದರಿಂದ ಆರೊಪಿಗಳನ್ನು ಸತ್ಯಾಸತ್ಯತೆ ಪರಿಶೀಲಿಸದೆ ಬಂಧಿಸಲಾಗುತ್ತಿದೆ. ಗಂಡ ಅಥವಾ ಆತನ ಮನೆಯವರಿಂದ ಹಿಂಸೆ ಅನುಭವಿಸಿದ ಮಹಿಳೆಯರಿಗೆ ರಕ್ಷಣೆ ಕೊಡಲು ಮತ್ತು ಅವರ ಹಣದ ದಾಹಕ್ಕೆ ಕಡಿವಾಣ ಹಾಕಲು ರೂಪಿಸಿದ ಕಾನೂನನ್ನು ಇಂದು ಅನೇಕರು ಗಂಡನ ಮನೆ ಯವರನ್ನು ಹಿಂಸಿಸಲು ಹಾಗೂ ಅವರಿಂದ ಹಣದೋಚಲು ಬಳಕೆ ಮಾಡುತ್ತಿರುವುದು ಖಂಡನೀಯ. ಇದರ ಪರಿಣಾಮವಾಗಿ ಅನೇಕ ಅಮಾಯಕರು ಜೈಲು ಪಾಲಾಗಿದ್ದಾರೆ.
ಸುಳ್ಳು ಆರೋಪದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಹೆಣ್ಣುಗಂಡು ಎಂಬ ಬೇಧವಿಲ್ಲದೆ ಸಮಾನವಾಗಿ ಬದುಕುವ ಹಕ್ಕನ್ನು ಕೊಟ್ಟಿರುವ ಸಂವಿಧಾನದ ಆಶಯಗಳನ್ನು ಇಂತಹ ಏಕಪಕ್ಷೀಯ ಕಾನೂನುಗಳು ಬುಡಮೇಲು ಮಾಡುತ್ತಿವೆ.ಪ್ರತಿದಿನ ಅತ್ಯಾಚಾರದ ಪ್ರಕರಣಗಳು ವರದಿ ಯಾಗುತ್ತಲೇ ಇರುತ್ತವೆ. ಹಲವಾರು ಅತ್ಯಾಚಾರ ಪ್ರಕರಣಗಳಲ್ಲಿನ ಕ್ರೌರ್ಯ ನಾಗರಿಕ ಸಮಾಜ ತಲೆತಗ್ಗಿಸುವಂತೆ ಮಾಡಿವೆ.
2012ರ ನಿರ್ಭಯ ಪ್ರಕರಣದಿಂದ ಬೆಚ್ಚಿ ಬಿದ್ದಜನ ಅತ್ಯಾಚಾರಕ್ಕೆ ಕಠಿಣ ಕಾನೂನು ರೂಪಿಸಲು ಆಗ್ರಹಿಸಿ ದೇಶಾದ್ಯಂತಹೋರಾಟಕ್ಕಿಳಿದ ಫಲವಾಗಿ ಕಠಿಣವಾದ ಲ್ಯೆಂಗಿಕ ದೌರ್ಜನ್ಯತಡೆ ಕಾನೂನನ್ನು ರೂಪಿಸಿದರು. ಆದರೆ ಪರಸ್ಪರ ಒಪ್ಪಿಗೆಯಿಂದ ಏರ್ಪಟ್ಟ ಸಂಬಂಧದಲ್ಲಿ ಯಾವುದಾದರು ವಿಷಯಕ್ಕೆ ಮನಸ್ತಾಪ ಬಂದಾಗಲೂ ಅತ್ಯಾಚಾರದ ಪ್ರಕರಣಗಳನ್ನು ಕೆಲ ಮಹಿಳೆ ಯರು ದಾಖಲಿಸುತ್ತಿದ್ದಾರೆ. ಕಚೇರಿಗಳಲ್ಲಿ ವೃತ್ತಿಗೆ ಸಂಬಂಧಿಸಿದ ಮನಸ್ತಾಪಗಳು ಸರ್ವೇಸಾಮಾನ್ಯ. ಇವು ಗಂಡುಹೆಣ್ಣಿನ ನಡುವೆ ಇರಬಹುದು ಅಥವಾ ಗಂಡಸರ ಮಧ್ಯೆಯೇ ಇರಬಹುದು.
ಇಂತಹ ಕ್ಷುಲ್ಲಕ ಕಾರಣಗಳನ್ನು ಮುಂದಿಟ್ಟುಕೊಂಡು ಲೈಂಗಿಕ ದೌರ್ಜನ್ಯದ ಸುಳ್ಳು ಆರೋಪ ಹೊರಿಸಿದ ಘಟನೆಗಳು ನಡೆದಿವೆ.ಅತ್ಯಾಚಾರದಿಂದ ಉಂಟಾದ ದೈಹಿಕ ಮತ್ತು ಮಾನಸಿಕ ನೋವನ್ನು ಎಷ್ಟು ಹಣಕೊಟ್ಟರೂ ಸರಿದೂಗಿಸಲು ಸಾಧ್ಯವಿಲ್ಲ. ಆದರೆ ಸುಮಾರು ಅತ್ಯಾಚಾರ ಪ್ರಕರಣಗಳು ಹಣದೋಚುವ ಉದ್ದೇಶದಿಂದಲೇ ದಾಖಲಾಗುತ್ತಿರುವ ಪ್ರಕರಣಗಳಿಂದ ಲೈಂಗಿಕ ದೌರ್ಜನ್ಯ ನಿಷೇಧ ಕಾನೂನು ತನ್ನ ಗಂಭೀರತೆಯನ್ನೇ ಕಳೆದುಕೊಳ್ಳುತ್ತಿದೆ.
ಸುಳ್ಳು ಪ್ರಕರಣಗಳು ಕಷ್ಟಪಟ್ಟು ಜೀವನಕಟ್ಟಿಕೊಂಡವರ ಜೀವನವನ್ನು ಬಲಿ ತೆಗೆದುಕೊಂಡಿವೆ. ಇಂತಹ ಘಟನೆಗಳು ನೂರುಜನ ಅಪರಾಧಿಗಳು ತಪ್ಪಿಸಿ ಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎನ್ನುವ ನಮ್ಮ ಕಾನೂನಿನ ತತ್ವವನ್ನು ಅಣಕಿಸುವಂತಿದೆ. ಒಳ್ಳೆಯತನಕ್ಕಾಗಲಿ ಅಥವಾ ಕೆಟ್ಟತನಕ್ಕಾಗಲಿ ಲಿಂಗಬೇಧವಿಲ್ಲ. ಒಳ್ಳೆಯವರು ಮತ್ತು ಕೆಟ್ಟವರುಇಬ್ಬರಲ್ಲೂ ಇದ್ದಾರೆ. ಎಲ್ಲರನ್ನು ಒಂದೇ ತಕ್ಕಡಿಯಲ್ಲಿಟ್ಟು ತೂಗುವುದು ಪ್ರಬುದ್ಧತೆಯಲ್ಲ. ದುಡ್ಡಿಗಾಗಿ ಹೆಂಡತಿಯನ್ನು ಕೊಲೆ ಮಾಡುವ, ಹೆಣ್ಣಿನ ಮೇಲೆ ಮೃಗಗಳಂತೆ ಬಿದ್ದು ಬಲಾತ್ಕಾರ ಮಾಡುವ ಗಂಡಸರು ಇರುವ ಹಾಗೆ ತನ್ನ ವಿವಾಹೇತರ ಸಂಬಂಧ ಕ್ಕಾಗಿ ಗಂಡನನ್ನು ಕೊಲೆ ಮಾಡಿಸಿದ, ಪ್ರಿಯಕರನ ಸಂಗಡ ಇದ್ದದನ್ನು ನೋಡಿದ ತನ್ನ ಮಕ್ಕಳನ್ನೇ ಕೊಂದ ಮಹಾಮಾತೆಯರಿದ್ದಾರೆ.
ಹಾಗಾಗಿ ಲಿಂಗದ ಆಧಾರದ ಮೇಲೆ ಅತಿಯಾದ ಮೃದುಧೋರಣೆಯನ್ನು ತೋರುವುದನ್ನು ಬಿಟ್ಟು  ಕಾನೂನುಗಳಲ್ಲಿ ನಿಸ್ಪಕ್ಷ ಪಾತವನ್ನು ಉಳಿಸಿಕೊಳ್ಳಬೇಕು. ಹೆಂಗಸರು ಅಶಕ್ತರು, ಅಬಲೆಯರು ಎನ್ನುವ ಉದ್ದೇಶ ದಿಂದ ಮಹಿಳಾ ರಕ್ಷಣಾ ಕಾನೂನುಗಳು ಮಹಿಳಾ ಸ್ನೇಹಿಯಾಗಿರುವಂತೆ ರೂಪಿಸಿದ್ದಾರೆ. ಈ ಕಾನೂನುಗಳು ಅಷ್ಟು ಸುಲಭವಾಗಿ ಹೆಣ್ಣಿಗೆ ಸಿಕ್ಕಿಲ್ಲ. ಸಾವಿರಾರು ಹೆಣ್ಣು ಮಕ್ಕಳು ದೌರ್ಜನ್ಯಕ್ಕೆ ಬಲಿಯಾದ ಮೇಲೆ ನಡೆದ ಹೋರಾಟಗಳಿಂದ ಸಿಕ್ಕಿವೆ.
ಪುರುಷ ಪ್ರಧಾನ ಕ್ಷೇತ್ರಗಳಾದ ರಾಜಕೀಯ, ಜ್ಞಾನ ಮತ್ತು ರಕ್ಷಣಾ ಕ್ಷೇತ್ರಗಳಲ್ಲಿ ಮೇಲುಗೈ ಸಾಧಿಸಿದ್ದರೂ, ಸೀ ದೌರ್ಜನ್ಯದವಿರುದ್ಧ ಎಷ್ಟೇ ಕಠಿಣವಾದ ಕಾನೂನುಗಳಿದ್ದರೂ, ಶೋಷಣೆ ಮಾತ್ರ ನಡೆಯುತ್ತಲೇ ಇವೆ. ದುರಾದೃಷ್ಟವಶಾತ್ ಕೆಲ ಹೆಣ್ಣುಮಕ್ಕಳು ಕಾನೂನನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಮಹಿಳಾಪರವಾದ ಕಾನೂನುಗಳನ್ನು ಸಡಿಲಿಸ ಬೇಕೆಂಬ ಕೂಗು ಜೋರಾಗುತ್ತಿದೆ.
ಒಂದು ವೇಳೆ ಈ ಕಾನೂನುಗಳನಿನ್ನು ಸಡಿಲಗೊಳಿಸಿದ್ದೇ ಆದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಇನ್ನೂ ಅಧಿಕವಾಗಿ, ಅಪರಾಧಿಗಳು ಸುಲಭವಾಗಿ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು. ಕೆಲವರು ತಮ್ಮ ಶೋಕಿಗಾಗಿ ಕಾನೂನು ಕೊಟ್ಟಿರುವಅಧಿಕಾರವನ್ನು ದುರಪಯೋಗ ಮಾಡಿಕೊಳುತ್ತಿರುವುದರಿಂದ ನಿಜವಾಗಿಯೂ ಅನ್ಯಾಯಕ್ಕೊಳಗಾಗುತ್ತಿರುವ ಲಕ್ಷಾಂತರ ಹೆಣ್ಣು ಮಕ್ಕಳು ಬೆಲೆ ತೆರಬೇಕಾಗಿಬರಬಹುದು. ಹೀಗಾಗದಂತೆ ತಡೆಗಟ್ಟಲು ಮಹಿಳಾ ದೌರ್ಜನ್ಯ ಕಾನೂನುಗಳನ್ನು ದುರ್ಬಳಕೆಮಾಡಿಕೊಳ್ಳುವವರಿಗೆ ಮತ್ತು ಅಂತಹವರಿಗೆ ಬೆನ್ನೆಲುಬಾಗಿ ನಿಲ್ಲುವವರಿಗೆ ಕಠಿಣವಾದ ಶಿಕ್ಷೆಯನ್ನು ವಿಧಿಸುವ ಕಾನೂನನ್ನು ಜಾರಿಗೊಳಿಸಿ, ಸ್ತ್ರೀ ದೌರ್ಜನ್ಯ ಕಾನೂನುಗಳ ಗಂಭೀರತೆಯನ್ನು ಉಳಿಸುವ ಅವಶ್ಯಕತೆಯಿದೆ.
ಮಹಿಳಾ ದಿನಾಚರಣೆಯಂದು ಮಹಿಳೆಯರ ಸಾಧನೆಗಳನ್ನು ವರ್ಣಿಸುತ್ತಾ, ಅವರ ಮೇಲಾಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಿದರೆ ಸಾಲದು, ಹೆಣ್ಣಿನಿಂದ ಆಗುತ್ತಿರುವ ದೌರ್ಜನ್ಯದ ಬಗ್ಗೆಯೂ ಬೆಳಕು ಚೆಲ್ಲುವಂತಾಗಬೇಕು.