ಮಾರ್ಚ್‌‌ನಲ್ಲಿ ಆಕಾಶ ವೀಕ್ಷಣೆ
ಪ್ರಚಲಿತ
ಎಲ್‌.ಪಿ.ಕುಲಕರ್ಣಿ
ನಾವು ರಾತ್ರಿ ತಲೆ ಎತ್ತಿ ಆಕಾಶ ನೋಡುತ್ತಿದ್ದರೆ, ನಮ್ಮ ಕತ್ತಿಗೆ ವ್ಯಾಯಾಮವಾಗುವುದಲ್ಲದೇ ಕಣ್ಣಿಗೆ ಆನಂದವೂ ಉಂಟಾಗುತ್ತದೆ. ಅಲ್ಲದೆ ಸದಾ ಮಿನುಗುತ್ತಿರುವ ನಕ್ಷತ್ರಗಳನ್ನು ನೋಡುತ್ತಾ ಕುಳಿತರೆ ಮನಸ್ಸಿನಲ್ಲಿ ಅಹ್ಲಾದಕರ ಅನುಭವ ಉಂಟಾಗುತ್ತದೆ.
ಹಾಗಾದರೆ, ಈ ಮಾರ್ಚ್ ತಿಂಗಳಿನ ರಾತ್ರಿ ಆ ಕಪ್ಪು ಆಕಾಶದಲ್ಲಿ ಏನೆ ನೋಡಬಹುದು, ಎಂಬುದರ ಬಗ್ಗೆ ಇಲ್ಲಿ ಇಬ್ಬರು ಖಗೋಳ ತಜ್ಞರಾದ ಉಡುಪಿಯ ಡಾ.ಎ.ಪಿ.ಭಟ್ ಹಾಗೂ ಬೆಂಗಳೂರಿನ ನೆಹರು ತಾರಾಲಯದಲ್ಲಿ ಖಗೋಳ ವಿಜ್ಞಾನಿಯಾಗಿರುವ ಡಾ.ಬಿ.ಎಸ್. ಶೈಲಜಾ ಅವರು ವಿಶ್ಲೇಷಿಸಿದ ಮಾಹಿತಿಯನ್ನು ಲೇಖನ ದಲ್ಲಿ ವ್ಯಕ್ತಪಡಿಸಿರುವೆ.
ಫೆಬ್ರವರಿ, ಮಾರ್ಚ್, ಏಪ್ರಿಲ್ ಈ ಮೂರು ತಿಂಗಳು ಆಕಾಶ ವೀಕ್ಷಣೆ ಬಹಳ ಕುತೂಹಲಕಾರಿ ಯಾಗಿರುತ್ತದೆ. ಸ್ವಚ್ಛಂದ ಆ ರಾತ್ರಿ ಕಪ್ಪು ಆಕಾಶದಲ್ಲಿ ಗ್ರಹ, ಕ್ಷುದ್ರಗ್ರಹ, ನಕ್ಷತ್ರ ಮುಂತಾದ ಆಕಾಶ ಕಾಯಗಳನ್ನು ನೋಡುವುದೇ ಒಂದು ರೋಮಾಂಚನ. ಆ ಸ್ವಚ್ಛಂದ ಕಪ್ಪು ಆಕಾಶದಲ್ಲಿ ಒಟ್ಟು 88 ನಕ್ಷತ್ರ ಪುಂಜಗಳನ್ನು ಇದುವರೆಗು ಗುರುತಿಸಲಾಗಿದೆ. ಸಂಜೆ ಏಳು ಗಂಟೆಯ ನಂತರ ಕಪ್ಪು ರಾಶಿಯ ಆಕಾಶವನ್ನು ತಲೆ ಎತ್ತಿ ನೋಡಿದಾಗ ನಮ್ಮ ನೆತ್ತಿಯ ಮೇಲೆ ಫಳಫಳಾ ಅಂತಾ ಹೊಳೆಯುತ್ತಾ ಗೋಚರಿಸುವುದೇ ರೋಹಿಣಿ ನಕ್ಷತ್ರ.
ವೃಷಭ ರಾಶಿಯಲ್ಲಿರುವ ಈ ನಕ್ಷತ್ರವು 66 ಜೋರ್ತಿವರ್ಷದಷ್ಟು ದೂರದಲ್ಲಿದೆ. ಸೂರ್ಯನಿಗಿಂತಲೂ1ಲಕ್ಷ ಪಟ್ಟು ದೊಡ್ಡ ದಾಗಿರುವ ಈ ರೋಹಿಣಿ ನಕ್ಷತ್ರವನ್ನು ನೋಡುವುದೇ ಒಂದು ಸೊಗಸು. ನಮ್ಮ ಕಣ್ಣಿಗೆ ಸ್ಪಷ್ಟವಾಗಿ ಕಾಣುವ ನಕ್ಷತ್ರಗಳನ್ನು ಬ್ರೈಟೆಸ್ಟ್ ಸ್ಟಾರ್‌ಗಳೆಂದು ಕರೆಯುತ್ತೇವೆ. ಇದುವರೆಗೂ ಅಂತಹ21ಬ್ರೈಟೆಸ್ಟ್ ಸ್ಟಾರ್ ಗಳನ್ನು ಗುರುತಿಸಲಾಗಿದೆ. ಈ ಸಾಲಿನಲ್ಲಿ ಮೊದಲನೆಯದಾಗಿ ಬರುವ ನಕ್ಷತ್ರವೇ ಲುಬ್ಧಕ. ಸುಮಾರು8.6ಜೋ.ವ.ದಷ್ಟು ದೂರವಿರುವ ಈ ಬಲುಬ್ಧಕ ಬಿಳಿ – ನೀಲಿ ಬಣ್ಣದಿಂದ ಕೂಡಿದೆ.
ನಂತರ, ಎರಡನೇಯದಾಗಿ ಬರುವ ಅತೀ ಪ್ರಖರ ನಕ್ಷತ್ರವೇ310ಜೋ.ವ ದೂರದಲ್ಲಿರುವ ಕೆನೋಪಸ್(ಅಗಸ್ತ್ಯ) ನಕ್ಷತ್ರ. ಇದನ್ನು ವೈಟ್ ಜೇಂಟ್ ಎನ್ನಲಾಗುತ್ತದೆ. ಮಹಾವ್ಯಾಧ, ಮಹಾಶ್ವಾನ, ಮಿಥುನ ಇಂತಹ ಪ್ರಕಾಶಮಾನ ನಕ್ಷತ್ರ ಪುಂಜ ಗಳಲ್ಲದೆ ಕುಂತಿ, ಪಾರ್ಥ, ವಿಜಯಸಾರಥಿ, ದಕ್ಷಿಣದ ಶಶ, ನೌಕಾ, ವೈತರಣೀ ಇವುಗಳನ್ನೂ ಸಹ ನಾವು ಈ ಮಾರ್ಚ್ ತಿಂಗಳಿನಲ್ಲಿ ಗುರುತಿಸಬಹುದು. ಪೂರ್ವದ ಅಂಚಿನಲ್ಲಿ ಕಟಕ ರಾಶಿಯು ಕ್ಷೀಣವಾಗಿರುತ್ತದೆ. ಅಲ್ಲೇ ಸಿಂಹರಾಶಿಯನ್ನೂ ಸಹ ಗುರುತಿಸ ಬಹುದು. ಸಿಂಹ ರಾಶಿಗೂ ಮತ್ತು ಮುಥುನ ರಾಶಿಗೂ ಮಧ್ಯದಲ್ಲಿ ಕಟಕದ ನಕ್ಷತ್ರ ಗುಚ್ಚ (ಸ್ಟಾರ್ ಕ್ಲಸ್ಟರ್) ಗೋಚರಿಸುತ್ತದೆ.
ಇದನ್ನು ಟೆಲಿಸ್ಕೋಪ್ ಮೂಲಕ ನೋಡಲು ಸಾಧ್ಯ. ಈ ನಕ್ಷತ್ರ ಗುಚ್ಚಕ್ಕೆ ಪ್ರೆಸಿಪಿ ಎಂಬ ಹೆಸರಿನಲ್ಲಿ ಕರೆಯಿಸಿ ಕೊಳ್ಳುವ ಈ ನಕ್ಷತ್ರ ಗುಚ್ಚ ಚಂದ್ರ ನಿಲ್ಲದ ಸ್ವಚ್ಛಂದ ಕಪ್ಪು ಆಕಾಶದಲ್ಲಿ ಕೇವಲ ಬರಿಗಣ್ಣಿಗೆ ಕಾಣುತ್ತದೆ. ವೃಷಭ ರಾಶಿಯಲ್ಲಿ ರೋಹಿಣಿ ಮತ್ತು ಕೃತ್ತಿಕಾ ನಕ್ಷತ್ರಗಳ ನಡುವೆ ಮಂಗಳ ಗ್ರಹ ಹಾದುಹೋಗುವುದನ್ನು ಗಮನಿಸಬಹುದು. ಬರಿಗಣ್ಣಿಗೆ ಕಾಣುವ ಏಳು ನಕ್ಷತ್ರಗಳ ಜತೆಗೆ ಕೃತ್ತಿಕಾ ಗುಚ್ಚದಲ್ಲಿ ಇನ್ನೂ ಹಲವಾರು ನಕ್ಷತ್ರಗಳು ಕಾಣುತ್ತವೆ.
ರೋಹಿಣಿ ನಕ್ಷತ್ರವು ಇಂತಹ ಒಂದು ಗುಚ್ಚದಲ್ಲಿ ಕಾಣುತ್ತದೆ. ಇಂಗ್ಲೀಷ್ ಅಕ್ಷರದ ‘ ( ವಿ ) ’ ಆಕಾರದ ಈ ಗುಚ್ಚಕ್ಕೆ ‘ಹಯಡಸ್’ಎಂದು ಕರೆಯಲಾಗುತ್ತದೆ. ಈ ಹಯಡಸ್ ಒಳಗೆ ಯಾವುದಾದರೂ ಗ್ರಹ ಅಥವಾ ಚಂದ್ರ ಹಾದುಹೋಗುವುದನ್ನು ಮುಂಚಿತ ವಾಗಿ ಲೆಕ್ಕ ಮಾಡಿ ತಿಳಿಯುವುದು ಹಿಂದೆ ಒಂದು ಸವಾಲಾಗಿತ್ತು. ಆಗ ಅದನ್ನು ರೋಹಿಣಿ ಶಕಟ ಎಂದು ಕರೆಯುತ್ತಿದ್ದರು. ಶಕಟ ಎಂದರೆ ಗಾಡಿ; ಬಹುಶಃ ಎತ್ತಿನ ಗಾಡಿಯ ನೊಗದ ಆಕಾರದ ಕಾರಣ ಆ ಹೆಸರಿನಿಂದ ನಮ್ಮ ಹಿರಿಯರು ಕರೆದಿರಬಹುದು.
ಮಾರ್ಚ್ ತಿಂಗಳ 18 ಹಾಗೂ 19 ದಿನಾಂಕಗಳಂದು ಚಂದ್ರನನ್ನು ಗಮನಿಸಿದಾಗ ಅದು ಗಾಡಿಯ (ಬಂಡಿ) ಪಕ್ಕದಲ್ಲಿ ಹಾದು ಹೋಗುತ್ತದೆ. ಮಾರ್ಚ್ ತಿಂಗಳ ಮೊದಲವಾರ ಸೂರ್ಯೋದಯಕ್ಕೆ ಸ್ವಲ್ಪ ಮುಂಚೆ ಪೂರ್ವದಿಕ್ಕಿಗೆ ನೋಡಿದಾಗ, ಶುಕ್ರ ಗ್ರಹ ದಿಗಂತದ ಅಂಚಿನಲ್ಲಿ ಸ್ವಲ್ಪ ಮೇಲಕ್ಕೆ ಗುರು, ಇನ್ನೂ ಸ್ವಲ್ಪ ಮೇಲೆ ಶನಿ ಗ್ರಹ ಕಾಣುತ್ತದೆ. ೫ರಂದು ಗುರು ಮತ್ತು ಬುಧ ಇವೆರಡರ ಸಮಾಗಮ ನಡೆಯುತ್ತದೆ. ದಿನಾಂಕ 6 ರಂದು ಬುಧ ಗ್ರಹ ಗರಿಷ್ಠ ಎತ್ತರದಲ್ಲಿ ಗೋಚರಿಸುತ್ತದೆ. ಮಾರ್ಚ್ ಮಧ್ಯ ಭಾಗದಲ್ಲಿ ಶುಕ್ರ ಗ್ರಹ ದಿಗಂತದ ಅಂಚನ್ನು ತಲುಪಿ ಒಂದು ಸಾಯಂಕಾಲ ಕರಗಿ ಹೋದಂತೆ ಭಾಸವಾಗುತ್ತದೆ.
ವಸಂತ ಋತುವಿನ ಪ್ರಾರಂಭದಲ್ಲಿ ಪ್ರಕೃತಿಯ ಸೊಬಗನ್ನು ನೋಡಲು ಎರಡು ಕಣ್ಣೂ ಸಾಲವು. ಇಂತಹ ಸಂದರ್ಭದ ಆಕಾಶ ದಲ್ಲಿ ಪೂರ್ವದ ಅಂಚಿನಲ್ಲಿ ಚಿತ್ರಾ ನಕ್ಷತ್ರ ಪ್ರತ್ಯಕ್ಷವಾಗುತ್ತದೆ. ಜತೆಗೆ ಹುಣ್ಣಿಮೆಯ ಚಂದ್ರ ಚೆಂದವಾಗಿ ಕಾಣುತ್ತಾನೆ.