ಸಮಾಜ ತನ್ನ ದೃಷ್ಟಿಕೋನ ಬದಲಿಸಿದಾಗ ಮಹಿಳಾ ಪ್ರಗತಿ ಸಾಧ್ಯ
ತನ್ನಿಮಿತ್ತ
ಸುರೇಶ ಗುದಗನವರ
ಇಂದು ಮಾರ್ಚ್8ಅಂತಾರಾಷ್ಟ್ರೀಯ ಮಹಿಳಾ ದಿನ. ಮಹಿಳಾ ಸಮೂಹ ತನ್ನ ಅಸ್ತಿತ್ವ, ಅಸ್ಮಿತೆ ಹಾಗೂ ಎಲ್ಲಾ ರೀತಿಯ ಸಮಾನತೆಯ ಹಕ್ಕೊತ್ತಾಯಗಳೊಂದಿಗೆ ಆಚರಿಸುವ ದಿನ.
ಪೋಲೆಂಡಿನ ರೋಸಾ ಲಕ್ಸಂಬಗರ್ ಹಾಗೂ ಜರ್ಮನಿಯ ಕ್ಲಾರಾ ಜೆಟ್ಕಿನ್ ಅವರನ್ನು ಅಂತಾರಾಷ್ಟ್ರೀಯ ಮಹಿಳಾ ದಿನದಂದು ನೆನಪಿಸಿ ಕೊಳ್ಳುವುದು ಅಗತ್ಯ. ಕಮ್ಯೂನಿಸ್ಟ್ ಸಮಾಜವಾದಿ ಕ್ರಾಂತಿಕಾರಿಗಳಾಗಿದ್ದ ಈರ್ವರೂ ಮಹಿಳಾ ಸಮಾನತೆ ಯನ್ನು ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಪ್ರತಿಪಾದಿಸಿದರು.
1910ರಲ್ಲಿ ಹೇಗನ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ದುಡಿಯುವ ಮಹಿಳೆಯರ ಸಮ್ಮೇಳನದಲ್ಲಿ ಕ್ಲಾರಾ ಜೆಟ್ಕಿನ್ ನೀಡಿದ ಕರೆಯಂತೆ 1911ರ ಮಾರ್ಚ್ 18ರಂದು ಮೊದಲ ಬಾರಿ ಅಂತಾರಾಷ್ಟ್ರೀಯ ದುಡಿಯುವ ಮಹಿಳೆಯರ ದಿನಾಚರಣೆಯನ್ನು ಆಚರಿಸಲಾಗಿತ್ತು. ಮೊದಲ ಬಾರಿಗೆ ವಿಶ್ವ ದುಡಿಯುವ ಮಹಿಳಾ ದಿನಾಚರಣೆ ಜರ್ಮನಿ, ಡೆನ್‌ಮಾರ್ಕ್, ಆಸ್ಟ್ರೀಯ ಮತ್ತು ಸ್ವಿಜರ್ ಲ್ಯಾಂಡ್‌ಗಳಲ್ಲಿ ಆಚರಿಸಲಾಯಿತು.
1911ರ ಈ ಆಚರಣೆಯನ್ನು ಪರಿಗಣಿಸಿ2011ನ್ನು ನೂರನೇ ವರ್ಷದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಪರಿಗಣಿಸಲಾಯಿತು.1975ನ್ನು ಅಂತಾರಾಷ್ಟ್ರೀಯ ಮಹಿಳಾ ವರ್ಷವೆಂದು ವಿಶ್ವಸಂಸ್ಥೆಯು ಘೋಷಿಸಿತು. ಅದರ ಭಾಗವಾಗಿವಿಶ್ವಸಂಸ್ಥೆಯು ಮಾರ್ಚ್8ರಂದು ಅಂತಾರಾಷ್ಟ್ರೀಯ ಮಹಿಳಾ ದಿನವನ್ನಾಗಿ ಪರಿಗಣಿಸಿತು. ಈಗಿದನ್ನು ಸಾರ್ವತ್ರಿಕವಾಗಿ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲೂ ಆಚರಿಸಲಾಗುತ್ತಿದೆ. ಹಾಗೆಯೇ ಬರಬರುತ್ತಾ ಮಹಿಳಾ ದಿನದ ಆಚರಣೆಯ ಸ್ವರೂಪಗಳಲ್ಲಿ ಹಲವಾರು ಬದಲಾವಣೆ ಗಳು ಆಗುತ್ತಾ ಬಂದವು.
ಮಹಿಳಾ ದಿನಾಚರಣೆ ಎನ್ನುವುದು ಕಾರ್ಪೊರೇಟ್ ಸರಕುಗಳನ್ನು ಪ್ರಾಯೋಜನೆ ಮಾಡುವ ಕಾರ್ಯಕ್ರಮವನ್ನಾಗಿ ಮಾಡಲಾಗಿದೆ. ಪ್ರಸಾಧನ, ಉಡುಗೆ ತೊಡುಗೆ, ವಿನ್ಯಾಸಗಳ ಮಾರುಕಟ್ಟೆ ವಿಸ್ತರಣೆಯ ಅವಕಾಶವನ್ನಾಗಿ ಕಾರ್ಪೊರೇಟ್‌ಗಳು ಮಹಿಳಾ ದಿನಾಚರಣೆಯನ್ನು ಬಳಸತೊಡಗಿ ಬಹಳ ಕಾಲವಾಗಿದೆ. ಹಲವು ಸಂಘಟನೆಗಳು ಮಹಿಳಾ ದಿನಾಚರಣೆಯನ್ನು ಬಹುಸಂಖ್ಯಾತ ಮಳೆಯರ ಮೂಲಭೂತ ಸಮಸ್ಯೆ ಸಂಕಟಗಳ ಬಗ್ಗೆ ಚಕಾರ ವೆತ್ತದೇ ಮೇಲ್ಮಟ್ಟದಲ್ಲಿ ಮಹಿಳಾ ಸಮಾನತೆಯಆಶಯಗಳ ಕಾರ್ಯಕ್ರಮವನ್ನಾಗಿ ಆಚರಿಸುತ್ತವೆ.
ರಂಗೋಲಿ, ಅಡುಗೆ, ನೃತ್ಯ, ಫ್ಯಾಷನ್ ಶೋ ಗಳಂಥ ಕಾರ್ಯಕ್ರಮಗಳನ್ನು ಇದೇ ಹೆಸರಿನಲ್ಲಿ ಆಯೋಜಿಸುತ್ತವೆ. ಇನ್ನು ಹಲವು ಕಾರ್ಯಕ್ರಮಗಳು ರಮ್ಯತೆಯ ಛಾಪಿನಲ್ಲಿ ಆಯೋಜಿಸಲ್ಪಡುತ್ತವೆ. ಮಹಿಳಾ ಸಾಧಕಿಯರೆಂದು ಕೆಲವರನ್ನು ಗುರುತಿಸುವ, ಚಲನಚಿತ್ರ ನಟಿಯರ ಕಾರ್ಯಕ್ರಮ ಆಯೋಜಿಸುವಷ್ಟಕ್ಕೆ ಸೀಮಿತವಾಗಿವೆ. ಇವೆಲ್ಲವುಗಳು ಬಹುಸಂಖ್ಯಾತ ಮಹಿಳೆಯರಸಮಸ್ಯೆಗಳು ಹಾಗೂ ಸಂಕಷ್ಟಗಳನ್ನು ಪ್ರತಿನಿಧಿಸದೇ ಅವನ್ನು ಮರೆ ಮಾಚುವ ಕಾರ್ಯಕ್ರಮ ಗಳಾಗಿಬಿಟ್ಟಿವೆ.
ವಿಶ್ವ ಆರ್ಥಿಕ ಸಂಸ್ಥೆಯು ಬಿಡುಗಡೆಗೊಳಿಸಿದ 2020ರ ವರದಿಯಲ್ಲಿ ನಮ್ಮ ದೇಶದ ಲಿಂಗ ಸಮಾನತೆಯ ಸೂಚ್ಯಾಂಕವು153ರಾಷ್ಟ್ರಗಳಿಗೆ ಹೋಲಿಸಿದಾಗ112ನೇ ಸ್ಥಾನದಲ್ಲಿದೆ. ಅಂದರೆ ನೇಪಾಳ, ಶ್ರೀಲಂಕಾ, ಬಾಂಗ್ಲಾದೇಶಕ್ಕಿಂತಲೂ ಕಳಪೆ ಸ್ಥಾನದಲ್ಲಿದೆ. ಬಾಂಗ್ಲಾ ದೇಶ50ನೇ ಸ್ಥಾನದಲ್ಲಿದೆ. ನೇಪಾಳ ಹಾಗೂ ಶ್ರೀಲಂಕಾ ಕ್ರಮವಾಗಿ 101 ಹಾಗೂ 102ನೇ ಸ್ಥಾನಗಳಲ್ಲಿವೆ.
ಜಾಗತಿಕವಾಗಿ ಮಹಿಳೆಯರ ಸರಾಸರಿ ವರಮಾನವು ಬಹಳ ಕೆಳಮಟ್ಟದಲ್ಲಿದೆ. ಭಾರತದಲ್ಲಿ ಮಹಿಳಾ ವೇತನವು ಪುರುಷರಿಗಿಂತಸರಾಸರಿ ಶೇ.34ಕ್ಕಿಂತಲೂ ಕಡಿಮೆಯಿದೆ. ಭಾರತದ ಮಹಿಳೆಯರು ಕಾರ್ಮಿಕರಾಗಿ ದುಡಿಯುತ್ತಿರುವುದು ಒಟ್ಟು ಕಾರ್ಮಿಕರಲ್ಲಿ ಶೇ.25ರಷ್ಟು ಮಾತ್ರ. ವೇತನಗಳಲ್ಲಿ ಭಾರತದ ಮಹಿಳೆಯರಿಗೆ ಲಿಂಗ ತಾರತಮ್ಯ ಕೂಡಾ ಅತ್ಯಧಿಕ. ಅದು ಜಾಗತಿಕವಾಗಿ145ನೇ ಸ್ಥಾನದಲ್ಲಿದೆ. ಇನ್ನು ಶಿಕ್ಷಣ, ಆರೋಗ್ಯ, ಆಹಾರ ಮೊದಲಾದ ವಿಚಾರಗಳಲ್ಲಿ ಲಿಂಗತಾರತಮ್ಯ ಗಳು ಅಽಕವಾಗಿವೆ. ಮಹಿಳಾ ವಿಮೋಚನೆಯೆಂದಾಗ ಮಹಿಳೆಗೆ ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯ ವಾಗಿ ಎಲ್ಲಾ ರೀತಿಯಲ್ಲೂ ಸಮಾನಸ್ಥಾನಮಾನಗಳು ಸಹಜವಾಗಿ ಸಿಗುವಂತಾಗಬೇಕು.
ದೇಶದ ಅರ್ಧ ದಷ್ಟು ಇರುವ ಮಹಿಳಾ ಸಮೂಹದ ವಿಮೋಚನೆ ಯಿಲ್ಲದೆ ಯಾವುದೇ ಸಮಾನತೆಯೂ ಸಾಕಾರಗೊಳ್ಳುವುದಿಲ್ಲ.ಸಾಮಾಜಿಕ ಉತ್ಪಾದನೆಯಲ್ಲಿ ಮಹಿಳಾ ಸಮೂಹದ ಪಾತ್ರ ಶೇ.50ರಷ್ಟು . ಕೆಲವು ಸಂದರ್ಭ ಗಳಲ್ಲಿ ಅದಕ್ಕಿಂತಲೂ ಹೆಚ್ಚು ಇದ್ದರೂ ಸಂಬಳ, ಗೌರವ ಧನ, ಕೂಲಿಗಳು ಯಾವಾಗಲೂ ಪುರುಷರಿಗಿಂತ ಕಡಿಮೆ ಯಾಗಿರುತ್ತದೆ. ಅಲ್ಲದೇ ಆಸ್ತಿಯ ಒಡೆತನ ಹಾಗೂ ರಾಜಕೀಯ ಅಧಿಕಾರ ಗಳಲ್ಲಿ ಸಮಾನ ಅವಕಾಶವನ್ನು ಮಳೆಯರು ಸ್ಥಾಪಿಸಿಕೊಳ್ಳಲಾಗದಂತೆ ಬಹಳ ವ್ಯವಸ್ಥಿತವಾಗಿ ನೋಡಿಕೊಳ್ಳುತ್ತಾ ಬರಲಾಗುತ್ತಿದೆ. ನಮ್ಮ ಸಂಸತ್ತಿನಲ್ಲಿ ಶೇ.33ರಷ್ಟು ರಾಜಕೀಯ ಪ್ರಾತಿನಿಧ್ಯವನ್ನು ಮಹಿಳೆಯರಿಗೆ ನೀಡಲು ಹತ್ತಾರು ವರ್ಷಗಳಿಂದ ನಾಟಕ ಮಾಡುತ್ತಾ ಬೂಟಾಟಿಕೆಗಳನ್ನು ತೋರಿಸುತ್ತಾ ಎಲ್ಲಾ ರಾಜಕೀಯ ಪಕ್ಷಗಳು ಕಾಲಹರಣ ಮಾಡುತ್ತಾ ಬರುತ್ತಿರುವುದನ್ನು ನೋಡುತ್ತಿದ್ದೇವೆ.
ಹಾಗೆಯೇ ಆಳುವ ಪಕ್ಷದ ಸರಕಾರಗಳು ಮಹಿಳೆಯರಲ್ಲಿ ಗಟ್ಟಿ ಧ್ವನಿಗಳಲ್ಲಿ ಮಾತನಾಡುವ ಕೆಲವು ಮಹಿಳೆಯರನ್ನು ಸನ್ಮಾನ, ಪ್ರಶಸ್ತಿಗಳು ಮುಂತಾದ ರಾಜಕೀಯೇತರ ಸ್ಥಾನಮಾನಗಳನ್ನು ನೀಡಿ, ಅವರ ಧ್ವನಿಗಳು ತಮ್ಮ ಪರವಾಗಿರುವಂತೆ ನೋಡಿ ಕೊಳ್ಳುತ್ತಿರುವುದು ವಿಪರ‍್ಯಾಸ. ರೈತಾಪಿ ಹಾಗೂ ಕೂಲಿ ಕಾರ್ಮಿಕರ ಮೇಲಿನ ದೌರ್ಜನ್ಯಗಳು ಹಾಗೂ ಸಮಸ್ಯೆಗಳ ಬಗ್ಗೆ ಗಮನಿಸುವುದು ಕಡಿಮೆ. ಗಮನಿಸಿದರೂ ಅದು ಹೆಚ್ಚಾಗಿ ವಿಚಾರ ಸಂಕಿರಣ, ಸಂಶೋಧನೆ, ಪ್ರಬಂಧ ಗಳಿಗೆ ಮಾತ್ರ ಸೀಮಿತ ವಾಗಿರುತ್ತದೆ.
ಮಹಿಳೆಯರು ಮುಕ್ತವಾಗಿ ಸಾಮಾನ್ಯ ಜೀವನ ವನ್ನು ನಡೆಸಲಾಗದ, ತಮ್ಮ ಬದುಕನ್ನು ತಾವೇ ನಿರ್ವಹಿಸಲಾಗದ, ಅಷ್ಟೇ ಏಕೆ ರಸ್ತೆ ಬೀದಿಗಳಲ್ಲಿ ಸಹಜವಾಗಿ ನಿರ್ಭೀತಿಯಿಂದ ತಿರುಗಾಡಲಾಗದ ಸ್ಥಿತಿಯನ್ನು ಅನುಭವಿಸುತ್ತಿದ್ದಾರೆ. ನಿರಂತರವಾಗಿ ಪ್ರತಿ ಕ್ಷಣವೂ ಮಾನಸಿಕ ಹಾಗೂ ದೈಹಿಕ ಅತ್ಯಾಚಾರ ಗಳಿಗೆ ಇಲ್ಲವೇ ತುಚ್ಛವಾದ ತಾತ್ಸಾರಗಳಿಗೆ ಈಡಾಗಬೇಕಾದ ಪರಿಸ್ಥಿತಿಯಿದೆ. ಆಳುವ ಶಕ್ತಿಗಳಿಗೆ ಸೇವೆ ಸಲ್ಲಿಸುವ ಪುರುಷಾಧಿಪತ್ಯದಡಿ ಮಹಿಳಾ ಸಮೂಹವನ್ನು ಸಿಲುಕಿಸಿ ನಂತರ ಮಹಿಳೆಯರ ಮೇಲೆ ಹುಸಿ ಕಾಳಜಿ, ಹುಸಿ ಗೌರವ ತೋರುವ ಪದ್ಧತಿಗಳೇ ಬಹಳ ದೊಡ್ಡ ಗುಣಗಳೆಂಬಂತೆ ಪ್ರಾಯೋಜನ ಮಾಡಲಾಗುತ್ತಿದೆ.
ವರ್ಷಕ್ಕೊಮ್ಮ ಆಚರಿಸುವ ಮಾರ್ಚ್8ರ ಮಹಿಳಾ ದಿನಾಚರಣೆ ಗಳಲ್ಲಿ ಇಂತಹ ತಿರುಳೇ ಇಲ್ಲದ ಹುಸಿ ಮೌಲ್ಯಗಳೇ ವಿಜೃಂಭಿಸುವಂತೆ ನೋಡಿಕೊಳ್ಳ ಲಾಗುತ್ತದೆ. ಮಹಿಳಾ ದಿನಾಚರಣೆಯ ಹಿಂದಿನ ಅಮೂಲ್ಯ ತ್ಯಾಗಪೂರಿತ ಹೋರಾಟಗಳಹಿನ್ನೆಲೆಯಲ್ಲಿ ಗ್ರಹಿಸಿದಾಗ ಮಾತ್ರ ಮಹಿಳಾ ವಿಮೋಚನೆಯು ಸರಿಯಾದ ಅರ್ಥವನ್ನು ಗ್ರಹಿಸಲು ಸಾಧ್ಯ. ಇದು ಕೇವಲ ಮಹಿಳೆಯರ ಕರ್ತವ್ಯ ಮಾತ್ರವಲ್ಲ ಸಮಾನತೆ ಬಯಸುವ ಪುರುಷರದೂ ಕೂಡ.
ಈ ಆಧುನಿಕ ಯುಗದಲ್ಲಿ ಮಹಿಳೆಯರ ಪಾತ್ರ ಬದಲಾಗಿದೆ. ಮಹಿಳೆಯರು ವೃತ್ತಿ ಮತ್ತು ಸಂಸಾರ ಎರಡನ್ನೂ ಅಚ್ಚುಕಟ್ಟುತನ ದಿಂದ ನಿಭಾಯಿಸಬಲ್ಲೆ ಎಂದು ದಿಟ್ಟತನದಿಂದ ಹೇಳುತ್ತ ಮಾದರಿ ಯಾಗಿದ್ದಾರೆ. ಜೀವನದ ಪ್ರತಿಯೊಂದು ಸಮಸ್ಯೆ ಯನ್ನು ಪರಿಹರಿಸಿಕೊಳ್ಳುವ ಶಕ್ತಿಯೂ ಅವರಲ್ಲಿದೆ. ಮಹಿಳೆಯ ನೈಜ ಸಶಕ್ತೀಕರಣ ವೆಂದರೆ ಅವಳ ಪ್ರಗತಿಯನ್ನು ಒಪ್ಪಿಕೊಂಡು ಸಹಕರಿಸುವಂಥ ಸಮಾಜದ ಅವಶ್ಯಕತೆ ಇದೆ.
ಇಂದು ಮಹಿಳೆಯರು ಗಡಿ ಕಾಯುವುದರಿಂದ ಹಿಡಿದು ಕ್ಷಿಪಣಿ ಉಡಾಯಿಸುವ ತನಕ ಎಲ್ಲ ಕ್ಷೇತ್ರಗಳಲ್ಲಿಯೂ ಸಾಧಿಸಿ ತೋರಿಸಿದ್ದಾರೆ. ಮರಗಿಡಗಳು ಮತ್ತು ಗಿಡಮೂಲಿಕೆಗಳನ್ನು ಪ್ರೀತಿಸಿ, ಘೋಷಿಸುವ ತುಳಸಿಗೌಡ ಅವರು ದೇಶದ ಅತ್ಯುನ್ನತನಾಗರಿಕ ಪುರಸ್ಕಾರಗಳಲ್ಲಿ ಒಂದಾದ ಪದ್ಮಶ್ರೀ ಪ್ರಶಸ್ತಿ ಪಡೆದಿದ್ದಾರೆ. ಅವರ ಪರಿಸರ ಪ್ರೇಮ ನಿಜಕ್ಕೂ ಪ್ರೇರಣಾದಾಯಕ. ವೃಕ್ಷಮಾತೆ, ಪದ್ಮಶ್ರೀ ಸಾಲು ಮರದ ತಿಮ್ಮಕ್ಕ ಅವರ ಸಾಧನೆ ಮಾನವ ಜನಾಂಗಕ್ಕೆ ಪ್ರೇರಕ.
ಯುವ ಜನಾಂಗಕ್ಕೆ ಹಲವು ರೀತಿಯಲ್ಲಿ ಸ್ಫೂರ್ತಿಯ ಸೆಲೆ ಯಾಗಿರುವ ಇನೋಸಿಸ್ ಪ್ರತಿಷ್ಠಾನದ ಸುಧಾಮೂರ್ತಿ ಮಹಿಳೆಯರ ಶಕ್ತಿ ಸಾಮರ್ಥ್ಯಕ್ಕೆ ಒಂದು ಅನುಪಮ ಉದಾಹರಣೆ. ಭಾರತದ ಮೊಟ್ಟಮೊದಲ ಮತ್ತು ಏಕೈಕ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧಿ, ಪಾರಂಪರಿಕ ನೆಲೆಗಟ್ಟನ್ನು ಮೀರಿ ಪಾಶ್ಚಾತ್ಯ ವೈದ್ಯಕೀಯ ಪದವಿ ಪಡೆದ ಮೊದಲ ಮಹಿಳಾ ವೈದ್ಯೆ ಆನಂದಿಬಾಯಿ, ಭಾರತ ಮತ್ತು ಏಷ್ಯಾಖಂಡದ ನ್ಯಾಯಾಂಗ ಭಾಗದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡ ಮೊಟ್ಟ ಮೊದಲ ಮುಸ್ಲೀಂ ಮಹಿಳೆ ಮೀರಾಸಾಹೇಬ್ ಫಾತಿಮಾ ದೇವಿ, ಭಾರತೀಯ ಮಹಿಳಾ ಬಾಕ್ಸಿಂಗ್ ಪಟು ಮೇರಿ ಕೋಮ್, ಕರ್ನಾಟಕ ಶಾಸೀಯ ಸಂಗೀತದ ಎಂ. ಎಸ್. ಸುಬ್ಬುಲಕ್ಷ್ಮೀ ಮುಂತಾದ ಮಹಿಳೆಯರು ಛಲವೊಂದಿದ್ದರೆ ಮಹಿಳೆಯರು ಏನನ್ನಾದರೂ ಸಾಧಿಸಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನ ಎಂಬತ್ತಿದ್ದಾರೆ.
ಮಹಿಳೆಯರ ಮೇಲೆ ಇಂದು ದೌರ್ಜನ್ಯ ಅಷ್ಟಿಷ್ಟಲ್ಲ. ನಿರ್ಭಯ ಪ್ರಕರಣದ ನಂತರವೂ ಮತ್ತೇ ಅತ್ಯಾಚಾರಗಳು ಹೆಚ್ಚಾಗುತ್ತಿವೆ. ಇಂದಿನ ಪರಿಸ್ಥಿತಿ ಹೇಗಾಗಿದೆ ಎಂದರೆ ರಾತ್ರಿ ಅಲ್ಲ, ಹಗಲಿನಲ್ಲಿಯೇ ಮನೆಯಿಂದ ಹೊರ ಹೋದ ಮಹಿಳೆ ಮರಳಿ ಬರದಂತಾಗಿದೆ. ಈ ನಿಟ್ಟಿನಲ್ಲಿ ಚಿಂತಿಸುವ ಸ್ಥಿತಿ ಬಂದೊದಗಿದೆ. ಪ್ರತಿದಿನ ಪತ್ರಿಕೆ ಯಲ್ಲಿ ಮತ್ತು ಟಿ.ವಿ ಚಾನೆಲ್‌ಗಳಲ್ಲಿ ಅಂತಹ ಪ್ರಕರಣಗಳನ್ನು ನೋಡುತ್ತಿದ್ದೇವೆ. ಇಂತಹ ಸಮಯದಲ್ಲಿ ಮಹಿಳೆಯರು ಇನ್ನೂ ಅನೇಕ ಆಘಾತ ಕೃತ್ಯಗಳಿಗೆ ಒಳಗಾಗುತ್ತಿದ್ದಾಳೆ.
ಅವುಗಳೆಂದರೆ ಭ್ರೂಣ ಹತ್ಯೆ, ವರದಕ್ಷಿಣೆ, ಮಹಿಳಾ ಅಪಹರಣ, ಮಾನಸಿಕ ಕಿರುಕುಳ ಮುಂತಾದ ಸಮಸ್ಯೆಗಳಿಗೆ ಅಂತ್ಯ ವೆಂಬುದಿಲ್ಲ ಎನಿಸುತ್ತಿದೆ. ಅಲ್ಲದೇ ಉದ್ಯೋಗಸ್ಥ ಮಹಿಳೆಯರು ಎಲ್ಲ ಕ್ಷೇತ್ರದಲ್ಲೂ ಕಿರುಕುಳ ಅನುಭವಿಸುತ್ತಿದ್ದಾರೆ. ಸಣ್ಣಕೆಲಸದಿಂದ ಹಿಡಿದು ಉನ್ನತ ಸ್ಥಾನದಲ್ಲಿ ಕೆಲಸ ಮಾಡುವವರಿಗೂ ಮಹಿಳಾ ಶೋಷಣೆ ಮುಂದುವರಿದಿದೆ. ದಕ್ಷ ಆಡಳಿತ ನಡೆಸುವ ಮಹಿಳಾ ಅಧಿಕಾರಿಗಳ ಮೇಲೆ ಇಲ್ಲಸಲ್ಲದ ಅಪವಾದ ಹೊರಿಸಿ ಮಾನಸಿಕ ಹಿಂಸೆ ಕೊಡುವುದು ಸ್ವಾಭಾವಿಕವಾಗಿದೆ.
ಹೀಗಾಗಿ ಮಹಿಳೆಯರು ದಕ್ಷ ಆಡಳಿತ ನಡೆಸಲು ಆಗುತ್ತಿಲ್ಲ. ನಮ್ಮನ್ನಾಳುವ ವರ್ಗಗಳು ಮಹಿಳೆಯರಿಗೆ ಪುರುಷರಷ್ಟೇ ಸಮಾನಅವಕಾಶ ಕೊಟ್ಟಿದ್ದೇವೆಂದು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಅದು ಶಾಸನಗಳಿಗೆ ಮಾತ್ರ ಸೀಮಿತವಾಗಿದೆ. ಭಾರತದಲ್ಲಿ ಶೇ೫೦ರಷ್ಟು ಮಹಿಳೆಯರು ಸೌಲಭ್ಯಗಳ ಕೊರತೆಯಿಂದ ಕೂಡಿರುವ ಗ್ರಾಮೀಣ ವಾತಾವರಣದಲ್ಲಿಯೇ ಇದ್ದಾರೆ.
ಗ್ರಾಮೀಣ ಹೆಣ್ಣುಮಕ್ಕಳು ಶಾಲಾ ಕಲಿಕೆಯಲ್ಲಿ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಅರಿವು ಮೂಡಿಸುವ ಜವಬ್ದಾರಿ ಪೋಷಕರದ್ದು, ಮಹಿಳೆಯರು ಮಾನಸಿಕವಾಗಿ, ದೈಹಿಕವಾಗಿ ಸದೃಡ ರಾಗಬೇಕು. ಅಂದಾಗ ಮಾತ್ರ ತಮಗೆ ಎದುರಾಗುವಸಮಸ್ಯೆಯನ್ನು ಮೆಟ್ಟಿನಿಲ್ಲಬಹುದು. ಮಾರ್ಗದರ್ಶನ, ಬೋಧನೆ, ತರಬೇತಿ ಮೂಲಕ ಜನಜಾಗೃತಿ ಉಂಟು ಮಾಡುವ ಕೆಲಸವಾಗಬೇಕಾಗಿದೆ. ಸಮಾಜದಲ್ಲಿ ಸಮಯಾನುಸಾರವಾಗಿ ಆಗುತ್ತಿರುವ ಬದಲಾವಣೆ ಗಳಿಂದಾಗಿ ಹುಡುಗಿಯರು ಮತ್ತು ಮಹಿಳೆಯರ ಸಂಬಂಧವಾದ ಸಾಮಾಜಿಕ ವಿಚಾರಧಾರೆಯು ಪರಿವರ್ತನೆಯಾಗುತ್ತಿದೆ.
ಇಂದು ಯುವತಿಯರು ಮತ್ತು ಮಹಿಳೆಯರು ಭಿನ್ನ ಕ್ಷೇತ್ರಗಳಿಗೆ ಪಾದಾರ್ಪಣೆ ಮಾಡುತ್ತಿದ್ದಾರೆ. ವಿವಾಹದ ಬಗೆಗಿನ ಅವರ ಅಭಿಪ್ರಾಯ ಬದಲಾಗತೊಡಗಿದೆ. ಅವರು ಸ್ವತಃ ತೀರ್ಮಾನ ಕೈಗೊಂಡು ತಮ್ಮ ಇಚ್ಛೆಯಂತೆ ಕೆರಿಯರ್ ರೂಪಿಸಿಕೊಳ್ಳಲು ಬಯಸುತ್ತಾರೆ. ಇತರರ ಮಾತಿಗೆ ಲಕ್ಷ್ಯ ಕೊಡದೆ ತಮಗೆ ಬೇಕಾದಂತೆ ಜೀವಿಸುತ್ತಾರೆ. ಆದ್ದರಿಂದ ಮಳೆಯರಿಗೆ ಮೂಲಭೂತಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕು ಅಧಿಕಾರಗಳು ದೊರೆಯಬೇಕಾಗಿದೆ. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ 2021ರ ಥೀಮ್ ಚೂಜ್ ಟು ಚಾಲೆಂಜ್’ ಆಗಿದೆ.
ಪಕ್ಷಪಾತದ ವಿರುದ್ಧ ಜಾಗೃತಿ ಮೂಡಿಸುವ ಮೂಲಕ, ಮಹಿಳೆಯರ ಸಾಧನೆ ಯನ್ನು ಆಚರಿಸುವ ಮೂಲಕ ಮಹಿಳೆಯರ ಸಮಾನತೆಗಾಗಿ ಕ್ರಮ ತೆಗೆದುಕೊಳ್ಳಲು ಸವಾಲು ಹಾಕುವ ಕರೆ ಇದಾಗಿದೆ. ಬರಿದೇ ಸ್ತ್ರೀ ಶಕ್ತಿಯ ಕುರಿತಾಗಿ ಭಾಷಣ ಬಿಗಿಯುವು ದರಿಂದ, ಘೋಷಣೆ ಕೂಗುವುದರಿಂದ ಮಹಿಳೆಯ ಪ್ರಗತಿ ಸಾಧ್ಯವಿಲ್ಲ. ಇದಕ್ಕಾಗಿ ನಿಜವಾದ ಮಹಿಳಾಪರ ಕಾಳಜಿ, ಕಳಕಳಿ ಇರಬೇಕು. ಸಮಾಜ ತನ್ನ ದೃಷ್ಟಿಕೋನ ಬದಲಿಸಬೇಕು. ನಾವೆಲ್ಲರೂ ಒಂದಾಗಿ ಇದನ್ನು ಮನೆಗಳಿಂದಲೇ ಆರಂಭಿಸಬಹುದು. ಮನೆ – ಮನೆಗಳ ಮತ್ತು ಮನ – ಮನಗಳ ಮಾನಸಿಕ ಪ್ರಯತ್ನದಿಂದ ಮಾತ್ರವೇ ಸಮಾಜವನ್ನು ಬದಲಿಸಬಹುದು ಮತ್ತು ಬದಲಾಗುತ್ತಿರುವ ಕಾನೂನು ಗಳನ್ನು ಸಾರ್ಥಕಗೊಳಿಸಬಹುದು. ಒಟ್ಟಿನಲ್ಲಿ ಗಾಂಧೀಜಿ ಕಂಡ ಕನಸು ನನಸಾಗಬೇಕಾಗಿದೆ. ಮಹಿಳೆಯರು ನೆಮ್ಮದಿಯಿಂದ ಬಾಳುವಂತಾಗಲಿ.