ವಿದ್ಯಾರ್ಥಿಗಳ ಭಾವಶಿಲ್ಪಿ ಡಾ.ಎಂ.ಪಿ.ಚೌಡಯ್ಯ
ತನ್ನಿಮಿತ್ತ
ಡಾ.ಎಸ್‌.ಸಿ.ಶರ್ಮ,
ಪ್ರಾಯಶಃ ಸಮಯದ ಕಲ್ಪನೆಯೊಂದಿಗೆ ಈ ಮಾನವ ಜಗತ್ತು ಮುಂದುವರಿಯುವುದೇ ನೆನಪಿನ ಪಲ್ಲಕ್ಕಿಯಲ್ಲಿ ಹೊತ್ತು ಸಾಗುವ ಸ್ಮೃತಿ ಸಂಪುಟದಿಂದ ಮಾತ್ರ. ಕಾರಣ ಅದು ಅವನ ಗಾಢ ಅನುಭವಗಳ ಪಾತಳಿಯಲ್ಲಿ ಪರಿಪಕ್ವಗೊಂಡು, ವರ್ತಮಾನದಜಟಿಲಗಳನ್ನು ಸಾಂದ್ರೀಕರಿಸಿ, ಅಸ್ಪಷ್ಟ ಅಗೋಚರ ಭವಿಷ್ಯದಲ್ಲಿ ನಿರ್ಮಾಣವಾಗುವ ಯಾವುದೋ ಅಮೂರ್ತ ಸಮಾಕಲನ ಸೃಷ್ಟಿಗೆ ಪ್ರೇರಕವಾಗುತ್ತದೆ ಎನ್ನಬಹುದು.
ಈ ಸ್ಮೃತಿ ನಮ್ಮೆಲ್ಲರ ಅಂತಃಪ್ರಜ್ಞೆಯಲ್ಲಿ ದಾಖಲೆಗೊಳ್ಳುವ ಮನುಷ್ಯ ಸಂಬಂಧಗಳಾದ ತಂದೆ – ತಾಯಿ – ಗುರು – ಹಿರಿಯರು,ಒಡಲುಹಂಚಿಕೊಂಡವರು, ಆಪ್ತ ವರ್ಗ, ಬಂಧು, ಜನ, ಶಿಷ್ಯಗಣ, ಮುಖ್ಯವಾಗಿ ವ್ಯಕ್ತಿತ್ವವಾಗಿ ನಿಲ್ಲುವವರು, ಇವೆಲ್ಲ ನಮ್ಮ ಮನೋಲೋಕದಲ್ಲಿ ಅಲ್ಲಲ್ಲಿ ಬೆಳೆದುನಿಂತಿರುವ ಪುಟ್ಟ – ಪುಟ್ಟ ದ್ವೀಪಗಳು.
ನಾವು ಬೇಕೆಂದಾಗಲೆಲ್ಲ ಅಲ್ಲಿಗೆ ಹೋಗಿ ವಿರಮಿಸಬಹುದು. ಇಲ್ಲಿ ಮನುಷ್ಯನ ಭೌತಿಕ ಕಾಯ ಅಳಿದರೂ ಸಹ ನೆನಪಿನ ದ್ರವ್ಯ ಇದ್ದೇ ಇರುತ್ತದೆ, ಇದನ್ನು ಮುಂದಿನ ಪೀಳಿಗೆಗೆ ಮುಟ್ಟಿಸಲು ಸುಲಭ ಸಾಧ್ಯವಾದ ಏಕೈಕ ಹಾದಿಯೆಂದರೆ ಅಕ್ಷರ ಮಾರ್ಗ.ಈ ಪೀಠಿಕೆ ಏಕೆಂದರೆ, ಇತ್ತೀಚೆಗೆ ಎರಡು ತಲೆಮಾರುಗಳ ನಡುವೆ ಕೊಂಡಿಯಂತಿದ್ದ ನನ್ನ ಗುರುಗಳಾದ ಡಾ.ಎಂ.ಪಿ.ಚೌಡಯ್ಯ ನವರು ಕಾಲವಾಗಿದ್ದನ್ನು ನೆನೆದಾಗಲೆಲ್ಲ ಅದರ ಹಿಂದೆ ಅವರ ಒಡನಾಟಗಳು ಒತ್ತರಿಸಿಕೊಂಡು ಬರುತ್ತದೆ.
ಹಲವು ಬಾರಿ ಜಯನಗರದ ಅವರ ಮನೆಗೆ ಭೇಟಿಗೆ ನಾನು ಹೋದಾಗಲೆಲ್ಲ ಶಿಷ್ಯ ಪ್ರೀತಿಯಿಂದ ಹಾಗೂ ಆತ್ಮೀಯತೆಯಿಂದ ನನ್ನ ಕುಶಲ – ಸಾಧನೆ ವಿಚಾರಿಸುತ್ತಿದ್ದರು. ಭಯ, ಕುರುಡು ಬಹುಮತಗಳಿಗೆ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಸ್ಥಾನವಿಲ್ಲ. ಕಾರಣಅದೊಂದು ವ್ಯವಸ್ಥಿತ ಮತ್ತು ಶಿಸ್ತುಬದ್ಧ ವಿಚಕ್ಷಣಾ ಕ್ರಮ, ಈ ಕ್ರಿಯೆಯಲ್ಲಿ ತೊಡಗುವುದು ವ್ಯಕ್ತಿಯ ಮನಸ್ಸು ಮತ್ತು ಬುದ್ಧಿ. ಇದರಿಂದ ಇದು ಶುದ್ಧವಾದ ಭೌದ್ಧಿಕ ಕ್ರಿಯೆ, ಈ ಶಿಸ್ತು ನಮ್ಮ ನಿಜ ಜೀವನದಲ್ಲೂ ಹಾಸುಹೋಕ್ಕಾಗಬೇಕು. ವಿಜ್ಞಾನ ಮತ್ತು ತಂತ್ರಜ್ಞಾನ ವ್ಯಕ್ತಿ ಮತ್ತು ವ್ಯಕ್ತಿತ್ವದಿಂದ ಬೇರ್ಪಡಿಸಲ್ಪಟ್ಟ ವಸ್ತುನಿಷ್ಠತೆಗೆ ಮಾತ್ರ ಮನ್ನಣೆ.
ಇದು ಡಾ.ಎಂ.ಚೌಡಯ್ಯನವರ ವಿಷಯದಲ್ಲಿ ಅಕ್ಷರಶಃ ಸತ್ಯವಾಗಿದ್ದ ಮಾತು. ಒಬ್ಬ ವ್ಯಕ್ತಿಯ ಸಾಧನೆ ಮೇಧಾವಿತನ,ಕೌಶಲ್ಯತೆಗಳು ಆತನ ಅನನ್ಯ ದಕ್ಷತೆ, ತಾಂತ್ರಿಕ ನಿಪುಣತೆ ಹಾಗೂ ತಾಂತ್ರಿಕ ವಿಷಯಗಳ ಕ್ರಮಬದ್ಧ ಅಧ್ಯಯನಗಳ ಮೇಲೆ ನಿರ್ಧರಿತವಾಗಬೇಕೆ ಹೊರತು ಯಾವುದೇ ಇತರ ಭಾವುಕ ಅಂಶಗಳ ಮೇಲಲ್ಲ. ಈ ಹಿನ್ನೆಲೆಯಲ್ಲಿ ತಾಂತ್ರಿಕ ವಿದ್ವತ್ತಿನದೃಷ್ಟಿಯಲ್ಲಿ ಡಾ.ಎಂ.ಪಿ.ಚೌಡಯ್ಯನವರು ನಿಜವಾಗಿಯೂ ಎಂಥ ಪ್ರಾಧ್ಯಾಪಕರಾಗಿದ್ದರು ಎಂದರೆ ವಿದ್ಯಾರ್ಥಿಗಳ ನಾಡಿ ಮಿಡಿತವನ್ನು ಅರಿತು ವಿಷಯದ ಆಳಕ್ಕಿಳಿದು ಮನದಟ್ಟು ಮಾಡಿದಾಗಲೇ ಅವರಿಗೆ ನಿರಾಳ.
ಡಾ.ಎಂ.ಪಿ.ಚೌಡಯ್ಯನವರು ವೃತ್ತಿ ಜೀವನದಲ್ಲಿ ಕೈಗೊಂಡ ತೌಲನಿಕ ಅಧ್ಯಯನ, ರಾಜ್ಯದಲ್ಲಿ ಶಿಕ್ಷಣದೊಂದಿಗೆ ಉದ್ಯಮಶೀಲತೆಯನ್ನು ಬೆಸೆಯುವಲ್ಲಿ ಕೈಗೊಂಡ ವಿದೇಶ ಪ್ರವಾಸಗಳು, ಅವುಗಳ ಮೌಲ್ಯಮಾಪನ, ವೃತ್ತಿಪರತೆ, ಮುಂತಾದಪುರೋಗಾಮಿ ದೂರದೃಷ್ಟಿತ್ವವು ಇಂದಿನ ಶಿಕ್ಷಣ ತಜ್ಞರಿಗೆ ಆದರ್ಶ ಹಾಗೂ ಅನುಕರಣೀಯ. ಅದೆಷ್ಟೋ ವೇಳೆ ಅವರು ಭಾವುಕರಾಗಿ ನನ್ನ ಕೈಹಿಡಿದು ಅತ್ತು ಬಿಡುತ್ತಿದ್ದುದೂ ಉಂಟು.
ಯೂನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್‌ನ ಮೆಕಾನಿಕಲ್ ಎಂಜಿನಿಯರಿಂಗ್ ವಿಭಾಗದ ಪ್ರೊಫೆಸರ್ ಎಮಿರಿಟಸ್ ಆಗಿದ್ದವರು, ಎಐಸಿಟಿಇ ಇದರ ದಕ್ಷಿಣ – ಪಶ್ಚಿಮ ಪ್ರಾಂತ್ಯದ ಅಧ್ಯಕ್ಷರಾಗಿದ್ದವರು ಹಾಗೂ ನ್ಯಾಷನಲ್ ಡಿಸೈನ್ಅಂಡ್ ರಿಸರ್ಚ್ ಪೋರಂ, ದ ಇನ್ಸ್‌ಟಿಟ್ಯೂಷನ್ ಆಫ್ ಎಂಜಿನಿಯರ‍್ಸ್ (ಇಂಡಿಯಾ)ದ ಅಧ್ಯಕ್ಷರಾಗಿದ್ದವರು. ಅವರ ಸಾನ್ನಿಧ್ಯವೇ ಹಾಗೆ. ಮೆಕಾನಿಕಲ್ ಎಂಜಿನಿಯರಿಂಗ್‌ನ ಸುಲಭಗ್ರಾಹ್ಯವಲ್ಲದ ವಿಷಯಗಳನ್ನು ಸುಲಿದ ಕದಳಿ-ಲದಂತೆವಿದ್ಯಾರ್ಥಿಗಳಿಗೆ ತಲುಪಿಸುವುದರಲ್ಲಿ ಅವರದು ಮಾಂತ್ರಿಕತೆ ಇತ್ತು.
ವಿಷಯ ಜ್ಞಾನದಲ್ಲಿನ ಪ್ರಭುತ್ವ ಅವರಿಗೆ ಒಲಿದದ್ದು ಆಳ ಅಧ್ಯಯನ ಮತ್ತು ಶುದ್ಧ ಸಂಶೋಧನೆಯಿಂದ ಮಾತ್ರ ಎನ್ನಬಹುದು.ಡಾ.ಚೌಡಯ್ಯನವರ ಸಾಧನೆಯೇ ಒಂದು ಸಂಪತ್ತು ಹಾಗೂ ಅದರಿಂದಲೇ ಗುರುತಿಸಿಕೊಂಡವರು. ಅಧ್ಯಯನ – ಅಧ್ಯಾಪನ ಇವು ಅವರ ವೃತ್ತಿ ಮತ್ತು ಪ್ರವೃತ್ತಿಗಳಾಗಿ ಎರಡೂ ಪರಸ್ಪರ ಪೂರಕವಾಗಿದ್ದರಿಂದ ಇದು ಸಾಧ್ಯವಾಗಿತ್ತೆನ್ನಬಹುದು. ಅವರಿಗಿದ್ದ ತಲಸ್ಪರ್ಶಿ ಜ್ಞಾನದಿಂದಾಗಿ ಅವರ ಮಾವನವರಾದ ರಾಷ್ಟ್ರಕವಿ ಕುವೆಂಪುರವರವಾಣಿಯಂತೆ, ವಿಶ್ವ ಮಾನವರಾಗಿ ಹಾಗೆಯೇ ಲೋಕ ಮಾನ್ಯರಾಗಿ ಬೆಳೆದವರು.
ಎಂಜಿನಿಯರಿಂಗ್ ನಿಕಾಯಗಳ ಬೋಧನೆಯಲ್ಲಿ ಹಾಗೂ ಅವುಗಳ ಜ್ಞಾನ ಪ್ರಸರಣವು ಮೊದಲಿನಿಂದಲೂ ಆಂಗ್ಲ ಭಾಷೆಯದೇ ಪಾರುಪತ್ಯ. ಆದರೆ ಇವರು ಕನ್ನಡ ಭಾಷೆಯಲ್ಲಿ ಅದೆಷ್ಟೋ ಎಂಜಿನಿಯರಿಂಗ್‌ನ ತಾಂತ್ರಿಕ ಅಂಶಗಳನ್ನು ಕನ್ನಡದಲ್ಲಿ ಮನ ಮುಟ್ಟುವಂತೆ ಪ್ರಸ್ತುತಪಡಿಸುತ್ತಿದ್ದ ಪರಿ ಅವರ ವಾಚೋವಿಧೆಯತೆ ಮಾತ್ರವಲ್ಲದೆ ಕನ್ನಡ ಪ್ರೀತಿ ಕಾಣುತ್ತಿತ್ತು. ಉದಾಹರಣೆಗೆ೭೪ನೇ ಮತ್ತು೭೭ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್‌ನಲ್ಲಿ ಕನ್ನಡ ಭಾಷೆಯಲ್ಲಿ ಪ್ರೌಢಪ್ರಬಂಧಗಳನ್ನು, ಲೇಖನಗಳನ್ನು ಪ್ರಸ್ತುತಪಡಿಸಿದ್ದಾರೆ. ಆಂಗ್ಲಭಾಷೆ ಜತೆಗೆ ಕನ್ನಡದಲ್ಲಿ ವಿಶ್ವಕೋಶ, ಯಂತ್ರ ಜಗತ್ತಿನಲ್ಲಿ ಲೋಹ ವಿಜ್ಞಾನ – ಸಂಪುಟ-೪, ಜ್ಞಾನ ಗಂಗೋತ್ರಿ, ಲೋಹಶಾಸ್ತ್ರ, ಎರಕಶಾಸ್ತ್ರ ಮುಂತಾದ ಗ್ರಂಥಗಳನ್ನು ರಚಿಸಿದ್ದಾರೆ.
ಡಾ.ಚೌಡಯ್ಯನವರು ಅವಿರತವಾಗಿ ಕೈಗೊಂಡ ಮೆಕಾನಿಕಲ್ ಎಂಜಿನಿಯರಿಂಗ್‌ನ ಸಂಶೋಧನೆ ಹಾಗೂ ಅಭಿವೃದ್ಧಿ ಕಾರ್ಯಗಳೆಂದರೆ, ಥರ್ಮೊ ಅಂಡ್ ಹೈಡ್ರೋ-ಡೈನಾಮಿಕ್ ಸ್ಟಡೀಸ್ ಇನ್ ಗ್ರೀನ್ ಸ್ಯಾಂಡ್ ಮೌಲ್ಡ್ ವಾಲ್, ಕಾಸ್ಟಿಂಗ್ ಎಸ್.ಜಿ.ಐರನ್ ಇನ್ ಪರ್ಮನೆಂಟ್ ಮೌಲ್ಡ್ಸ್, ಸ್ಪೆಷಲ್ ಕಾಸ್ಟ್ ಐರನ್ ಅಲಾಯ್ಸ್, ಹೈಬ್ರಿಡ್ ಕಾಸ್ಟಿಂಗ್ ಟೆಕ್ನಿಕ್ಸ್, ರೊಬೊಟಿಕ್ಸ್, ಪ್ಲೆಕ್ಸಿಬಲ್ ಮ್ಯಾನುಫ್ಯಾಕ್ಚರಿಂಗ್ ಸಿಸ್ಟಂ, ಯುಟಿಲೈಸೇಷನ್ ಅಂಡ್ ವಾಲೊರೈಸೇಷನ್ ಆಫ್ ವೇಸ್ಟ್ಸ್, ಪ್ರಾಡಕ್ಟ್ ಡಿಸೈನ್ ಇತ್ಯಾದಿ.ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಡಾ.ಚೌಡಯ್ಯನವರು ಅಗಾಧ ಸೇವೆ ಸಲ್ಲಿಸಿದ್ದಾರೆ.
ಅವುಗಳಲ್ಲಿ ಮುಖ್ಯವಾಗಿ ಹಲವು ವಿಶ್ವವಿದ್ಯಾಲಯಗಳ ಬೋರ್ಡ್ ಆಫ್ ಸ್ಟಡೀಸ್, ಬೋರ್ಡ್ ಆಫ್ ಎಕ್ಸಾಮ್ಸ್, ಪ್ಯಾಕಲ್ಟಿ ಆಫ್ಎಂಜಿನಿಯರಿಂಗ್, ಸೆನೆಟ್, ಸಿಂಡಿಕೇಟ್ ಸದಸ್ಯರಾಗಿ, ಡೀನ್, ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ತಮ್ಮ ಪರಿಣತಿಯ ಮಾರ್ಗದರ್ಶನವನ್ನು ನೀಡಿದ್ದಾರೆ. ಮುಖ್ಯವಾಗಿ ಭಾರತದ ಎಲ್ಲಾ ನೇಮಕಾತಿ ಮಂಡಳಿಯಲ್ಲಿ ಸದಸ್ಯರಾಗಿ ಕಾರ್ಯ ನಿರ್ವಹಿಸಿರುವುದು ಅವರ ವೈಶಿಷ್ಟ್ಯ.
ಡಾ.ಚೌಡಯ್ಯನವರು ಮುನ್ನೂರಕ್ಕೂ ಹೆಚ್ಚು ಉತ್ಕೃಷ್ಟವಾದ ಲೇಖನಗಳನ್ನು ಪ್ರಕಟಿಸಿರುವುದಲ್ಲದೆ ನೂರಾರು ಸ್ನಾತಕೋತ್ತರ ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ, ದೇಶ – ವಿದೇಶಗಳ ಹಲವು ಪ್ರಖ್ಯಾತ ಸಂಸ್ಥೆಗಳಲ್ಲಿ ಅಂದರೆ, ಅಮೆರಿಕ,ಜರ್ಮನಿ, ರಷ್ಯಾ, ಬ್ರಿಟನ್, ಕೆನಡಾ, ಇಲ್ಲಿ ತರಬೇತಿ ಮಾತ್ರವಲ್ಲದೆ ಗೌರವಾನ್ವಿತ ಹುದ್ದೆ ಗಳನ್ನೂ ಸಹ ಅಲಂಕರಿಸಿದರು. ವಿಶ್ವದ ೩೦ಕ್ಕೂ ಹೆಚ್ಚು ದೇಶಗಳನ್ನು ಭೇಟಿ ನೀಡಿ ಅಲ್ಲಿನ ಮೆಕಾನಿಕಲ್ ಎಂಜಿನಿಯರಿಂಗ್‌ನ ಉನ್ನತ ತಾಂತ್ರಿಕ ಅಂಶಗಳನ್ನು ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಚೀನಾ, ಜಪಾನ್, ಇಟಲಿ, ಬೆಲ್ಜಿಯಂ, ಆಸ್ಟ್ರೇಲಿಯಾ, ಈ ದೇಶಗಳ ಸಂಸ್ಥೆಗಳು, ವಿಶ್ವವಿದ್ಯಾಲಯಗಳಿಗೆ ವಿಸಿಟಿಂಗ್ ಪ್ರೊಪೆಸರ್ ಆಗಿ ಸೇವೆಯನ್ನು ಸಲ್ಲಿಸಿರುತ್ತಾರೆ. ಡಾ.ಚೌಡಯ್ಯನವರ ಜ್ಞಾನ ಪ್ರೌಢಿಮೆಯನ್ನು ಪುರಸ್ಕರಿಸಿ ದೇಶ – ವಿದೇಶಗಳ ಹಲವು ಪ್ರಶಸ್ತಿ ಸನ್ಮಾನಗಳು ಅವರನ್ನು ಅಲಂಕರಿಸಿದ್ದವು. ಇಂತಹ ಜ್ಞಾನವೇತ್ತರು, ವಿನಯ ಸಂಪನ್ನರು ಹಾಗೂ ಕ್ರಿಯಾಶೀಲ ಚೇತನವಾಗಿದ್ದ ಡಾ. ಎಂ.ಪಿ.ಚೌಡಯ್ಯನವರು೧೯೩೦ರ ಏಪ್ರಿಲ್೧೦ರಂದು ಜನಿಸಿ,೨೦೨೧ರ ಜನವರಿ೫ರಂದು ನಿಧನ ಹೊಂದಿದ್ದಾರೆ.
ಇಂದು ಭೌತಿಕವಾಗಿ ನಮ್ಮೊಡನೆ ಇಲ್ಲವಾದರೂ ಸಹ ಭಾವನಾತ್ಮಕವಾಗಿ ಅಪಾರ ಶಿಷ್ಯ ವೃಂದದ ಹೃನ್ಮನಗಳಲ್ಲಿ ಚಿರಂತನ ವಾಗಿದ್ದಾರೆ. ಅಂದೊಂದೇ ನಮ್ಮ ಧನ್ಯತಾ ಭಾವ, ಅಂತಹ ಮೇರು ವ್ಯಕ್ತಿತ್ವಕ್ಕೆ ನನ್ನ ನುಡಿ ನಮನ.