ಪೈನಾಪಲ್ ಮಾರಲು ಫೀಲ್ಡಿಗಿಳಿದ ಪ್ರೆಸಿಡೆಂಟ್‌ !
ವಿದೇಶವಾಸಿ
ಕಿರಣ್‌ ಉಪಾಧ್ಯಾಯ ಬಹ್ರೈನ್‌
ಪೈನಾಪಲ್ ಅನ್ನಿ, ಅನಾನಸ್ ಅನ್ನಿ, ಪರಂಗಿ ಅನ್ನಿ, ಇದರ ಸ್ವಾದ ಇಷ್ಟಪಡದವರು ತೀರಾ ಕಮ್ಮಿ. ಮೈತುಂಬ ಹಳದಿ ಬಣ್ಣದನೂರಾರು ಸಣ್ಣ ಸಣ್ಣ ಹೂವು ಸುತ್ತಿಕೊಂಡಂತೆ ಕಾಣುವ ಈ ಹಣ್ಣಿನ ಘಮಲೇ ವಿಶೇಷವಾದದ್ದು.
ಹೂವಿನ ಲೋಕದಲ್ಲಿ ಕೆಳಗೆ ಮುಳ್ಳಿಟ್ಟುಕೊಂಡು ಮೇಲೆ ಅರಳುವ ಗುಲಾಬಿಯಂತೆಯೇ ಹಣ್ಣಿನ ಲೋಕದಲ್ಲಿ ಶಿರದಲ್ಲಿ ಮುಳ್ಳಿಟ್ಟುಕೊಂಡು ಒಳಗೆ ಸಿಹಿ ತುಂಬಿಕೊಂಡ ಪರಂಗಿ. ಹಲವಾರು ಔಷಧಿಯ ಗುಣವುಳ್ಳ ಪೈನಾಪಲ್ ಫ್ಲೇವರ್‌ನ ಜಾಮ್ ಆಗಲೀ, ಬಿಸ್ಕತ್ತಾಗಲೀ, ಜ್ಯೂಸ್ ಆಗಲೀ ಸವಿಯುವಾಗ ಆಗುವ ಅನುಭವವೇ ಬೇರೆ. ಶೇಕಡಾ ಎಂಬತ್ತೈದರಷ್ಟು ನೀರಿನಅಂಶ ತುಂಬಿದ ಈ ಹಣ್ಣು ವಿಟಾಮಿನ್, ಫೈಬರ್, ಮ್ಯಾಂಗನೀಸ್‌ಗಳ ಆಗರ. ಕೊಲಂಬಸ್ ಹೊಸ ಭೂಮಿಯನ್ನು ಹುಡುಕಿದ್ದು ಸರಿಯೇ, ಆದರೆ ದಕ್ಷಿಣ ಅಮೆರಿಕದಲ್ಲಿ ಬೆಳೆಯುತ್ತಿದ್ದ ಈ ಹಣ್ಣನ್ನು ತಂದು ಪೂರ್ವದ ದೇಶಗಳಿಗೆ ಪರಿಚಯಿಸದೆ ಇದ್ದಿದ್ದರೆಅಂದಿನ ಅವನ ಯಾತ್ರೆ ಪೂರ್ಣವಾಗುತ್ತಿರಲಿಲ್ಲ.
ಇಂತಿರ್ಪ ಪರಂಗಿ ಹಣ್ಣಿಗೆ ತೈವಾನ್ ದೇಶದಲ್ಲಿ ರಾಜ ಮರ್ಯಾದೆ. ಪರಂಗಿ ತೈವಾನ್‌ನ ಹೆಮ್ಮೆಯ ಕುರುಹು, ಅಭಿಮಾನದ ಸಂಕೇತ, ಪ್ರತಿಷ್ಠೆಯ ಪ್ರತೀಕ. ಅಲ್ಲಿಯ ಮಣ್ಣಿನ ಗುಣವೋ, ಹವಾಮಾನದ ಕೊಡುಗೆಯೋ ಏನೋ, ತೈವಾನ್ ಮತ್ತು ಫಿಲಿಪೈನ್ಸ್ದೇಶದ ಪೈನಾಪಲ್‌ನ ಸ್ವಾದವೇ ಬೇರೆ. ನಮ್ಮಲ್ಲಿಗಿಂತ ಬೆಲೆ ಕಮ್ಮಿ, ರುಚಿ ಹೆಚ್ಚು. ಇದು ನನ್ನ ಅನುಭವದ ಮಾತೂ ಹೌದು. ಹಣ್ಣುಗಳ ಲೋಕದಲ್ಲಿ ಇದನ್ನು ‘ಶುದ್ಧ ಬಂಗಾರ’ ಎನ್ನುವುದು ಅತಿಶಯೋಕ್ತಿಯಲ್ಲ ಎಂದು ಮನವರಿಕೆಯಾಗಬೇಕಾದರೆ ಪೂರ್ವ ಏಷ್ಯಾದ, ಅದರಲ್ಲೂ ತೈವಾನ್, ಫಿಲಿಪೈನ್, ಜಪಾನ್ ಮತ್ತು ಚೀನಾದ ದಕ್ಷಿಣ ಭಾಗದಲ್ಲಿ ಬೆಳೆದ ಪರಂಗಿ ಹಣ್ಣನ್ನು ತಿಂದು ನೋಡಬೇಕು.
ಆದರೆ ಇತ್ತೀಚೆಗೆ ಇದ್ದಕ್ಕಿದ್ದಂತೆ ರಿಪಬ್ಲಿಕ್ ಆಫ್ ಚೀನಾ (ತೈವಾನ್)ದ ಪೈನಾಪಲ್, ಪೀಪಲ್ಸ್ ರಿಪಬ್ಲಿಕ್ ಆಫ್‌ ಚೀನಾಕ್ಕೆ ಸಿಹಿಗಿಂತ ಹೆಚ್ಚು ಹುಳಿಯಾಯಿತು. ಅಲ್ಲ, ಕಹಿಯಾಯಿತು ಅಂದರೂ ತಪ್ಪಿಲ್ಲ. ವೈದ್ಯರ ಪ್ರಕಾರ ಜೀರ್ಣಕ್ರಿಯೆಗೆ ಸಹಕಾರಿಯಾಗುವ ಈ ಹಣ್ಣು ಚೀನಾಕ್ಕೆ ಅಜೀರ್ಣವಾಯಿತು. ಕ್ಯಾನ್ಸರ್ ತಡೆಗಟ್ಟಲು ಸಹಾಯಕಾರಿ ಎಂದು ಹೇಳಲ್ಪಡುವ ಹಣ್ಣು ಜಗತ್ತಿನ ಕ್ಯಾನ್ಸರ್ ಎಂದು ಕರೆಸಿಕೊಳ್ಳುವ ದೇಶಕ್ಕೆ ಆಗಿಬರಲಿಲ್ಲ. ಹಳದಿ ಬಣ್ಣದ ಹಣ್ಣು ಚೀನಾದ ಕಣ್ಣನ್ನು ಕೆಂಪಾಗಿಸಿತ್ತು.
ಹಾಗಂತ ಅನಾನಸ್ ವಂಶದ ಮೇಲೇ ಚೀನಾದ ಸಿಟ್ಟಲ್ಲ, ತೈವಾನ್‌ನ ಅನಾನಸ್ ಮೇಲೆ ಮಾತ್ರ ಈ ಮುನಿಸು. ಕಳೆದ ಫೆಬ್ರವರಿ ತಿಂಗಳಿನ ಇಪ್ಪತ್ತಾರನೇ ತಾರೀಖಿನಂದು ಚೀನಾ ಒಂದು ಫರ್ಮಾನು ಹೊರಡಿಸಿತ್ತು. ಅದರ ಪ್ರಕಾರ ಮಾರ್ಚ್ ಒಂದನೇತಾರೀಖಿನಿಂದ ತೈವಾನ್ ದೇಶದಿಂದ ಆಮದಾಗುತ್ತಿದ್ದ ಪರಂಗಿ ಹಣ್ಣಿಗೆ ನಿರ್ಬಂಧ ಹೇರಿತ್ತು. ಅಂದರೆ, ಫರ್ಮಾನು ಹೊರಡಿಸಿದ ಎರಡು ದಿನದ ಅವಧಿಯ ಆಜ್ಞೆ ಕಾರ್ಯರೂಪಕ್ಕೆ ಬರಬೇಕು. ಅದಾಗಲೇ ತೈವಾನ್‌ನಿಂದ ಸಾಕಷ್ಟು ಟ್ರಕ್‌ಗಳು ಹಣ್ಣುಹೇರಿಕೊಂಡು ಚೀನಾ ಕಡೆ ಹೊರಟಾಗಿತ್ತು.
ಇದ್ದಕ್ಕಿದ್ದಂತೆ ಬಂದ ಚೀನಾದ ನಿರ್ಧಾರ ತೈವಾನ್‌ಗೆ ನಿಜಕ್ಕೂ ಆಘಾತ ನೀಡಿತ್ತು. ಇಷ್ಟಕ್ಕೂ ಚೀನಾ ತನ್ನ ನಿರ್ಣಯಕ್ಕೆ ಕೊಟ್ಟ ಕಾರಣ ಏನು ಗೊತ್ತಾ? ತೈವಾನ್ ನಿಂದ ಬರುವ ಪರಂಗಿ ಹಣ್ಣಿನಲ್ಲಿ ಅಪಾಯಕಾರಿ ಕೀಟಗಳು ಮುತ್ತಿಕೊಳ್ಳುತ್ತವೆ, ಅವು ಚೀನಾದ ಕೃಷಿ ಮತ್ತು ಪರಿಸರಕ್ಕೆ ಹಾನಿಯನ್ನುಂಟುಮಾಡುತ್ತವೆ ಎಂಬ ಸಬೂಬು ಹೇಳಿತ್ತು ಚೀನಾ. ಅ, ಚರಾಚರ ಪ್ರಪಂಚದಲ್ಲಿ ಹುಳ ಮುತ್ತದ ಹಣ್ಣು ಯಾವುದಾದರೂ ಇದೆಯಾ! ಅಷ್ಟಕ್ಕೂ ಹೇಳುವವರು ಯಾರು? ನಡೆದಾಡುವ, ಈಜಾಡುವ, ಹಾರಾಡುವ,ಹರಿದಾಡುವ, ಸರಿದಾಡುವ, ಒಟ್ಟಿನಲ್ಲಿ ಮನುಷ್ಯ ರನ್ನೊಂದು ಬಿಟ್ಟು ಉಳಿದ ಎಲ್ಲಾ ಜೀವಿಗಳನ್ನೂ, ಅಷ್ಟೇ ಏಕೆ, ಉಳಿದ ರಾಷ್ಟ್ರಗಳ ಭೂಮಿಯನ್ನೂ ತಿನ್ನುವ
ಅತಿಕ್ರಮಣವಾದಿ ಚೀನಾ! ಮೇಲ್ನೋಟಕ್ಕೆ ಕೀಟದ ನೆಪ ಹೇಳಿದ ಚೀನಾದ ಅಸಲಿ ಕಾರಣ ಬೇರೆಯೇ ಇತ್ತು. ಇದರಲ್ಲಿಮೊದಲನೆಯದೆಂದರೆ, ಈ ವರ್ಷ ಚೀನಾದಲ್ಲಿ ಪರಂಗಿ ಹಣ್ಣಿನ ಬೆಳೆ ಸ್ವಲ್ಪ ಹೆಚ್ಚಾಗಿತ್ತು. ಇದಕ್ಕೆ ಕರೋನಾದಿಂದ ಪಟ್ಟಣದಿಂದ ಹಳ್ಳಿಗೆ ಬಂದವರು ತೋಟದ ಕಡೆ ಗಮನಹರಿಸಿದ್ದು ಒಂದು ಕಾರಣವಿರಬಹುದು. ಆದರೆ ಇದು ಅತಿ ಹೆಚ್ಚೇನೂ ಆಗಿರಲಿಲ್ಲ. ಪ್ರತಿ ವರ್ಷ ಆರೂವರೆ ಲಕ್ಷ ಟನ್ ಪರಂಗಿ ಬೆಳೆದು ತಿನ್ನುವ ಚೀನಾದ ಜನಸಂಖ್ಯೆಗೆ ತೈವಾನ್‌ನಿಂದ ಆಮದಾಗುವ ನಲವತ್ತಾರುಸಾವಿರ ಟನ್ ಹೆಚ್ಚೇನೂ ಆಗಿರಲಿಲ್ಲ ಬಿಡಿ.
ಇನ್ನು ಎರಡನೆಯ, ಮುಖ್ಯವಾದ, ಜಗತ್ತಿಗೆ ಹೇಳಲಾಗದ ಕಾರಣವೆಂದರೆ, ಕೆಲ ದಿನಗಳ ಹಿಂದೆ ಚೀನಾದ ಸುಮಾರು ಆರುನೂರು ಉತ್ಪನ್ನಗಳನ್ನು ತೈವಾನ್ ನಿರ್ಬಂಧಿಸಿತ್ತು. ಕರೋನಾ ನಂತರ ಕೆಲವು ದೇಶಗಳು ಈ ನಿರ್ಣಯ ಕೈಗೊಂಡಿದ್ದು, ಅದರಲ್ಲಿ ತೈವಾನ್ ಕೂಡ ಒಂದು. ಇದಕ್ಕೆ ತಿರುಗೇಟು ನೀಡಲು ಚೀನಾ ಕಾಯುತ್ತಿತ್ತು. ಅಲ್ಲದೇ ಅಕ್ಕಪಕ್ಕದಲ್ಲಿರುವ ದೇಶದ ಕೈ ತಿರುಪು ವುದು ಚೀನಾದ ಹುಟ್ಟು ಚಾಳಿ. ತೈವಾನ್‌ನಿಂದ ಪರಂಗಿ ಖರೀದಿಸುವುದನ್ನು ನಿಲ್ಲಿಸಿ, ಆರ್ಥಿಕವಾಗಿ ಬರೆ ಎಳೆದು ತನಗೆ ಸೆಡ್ಡು ಹೊಡೆಯಲು ತಯಾರಾದ ತೈವಾನ್‌ನನ್ನು ತನ್ನ ಹಿಡಿತಕ್ಕೆ ತಂದುಕೊಳ್ಳುವ ಒಂದು ಸಣ್ಣ ಪ್ರಯತ್ನ ಇದಾಗಿತ್ತು.
ತನ್ನ ಪೂರ್ವ ದಿಕ್ಕಿನಲ್ಲಿರುವ ಪುಟ್ಟ ರಾಷ್ಟ್ರ ತೈವಾನ್ ಈ ರೀತಿ ಎದ್ದು ನಿಲ್ಲಬಹುದೆಂದು ಚೀನಾ ಕನಸಿನಲ್ಲಿಯೂ ಎಣಿಸಿರ ಲಿಕ್ಕಿಲ್ಲ. ಚೀನಾ ಫರ್ಮಾನನ್ನೇನ್ನೋ ಹೊರಡಿಸಿತು, ಪರಿಹಾಸ್ಯ ಏನು ಗೊತ್ತಾ? ಕಳೆದ ವರ್ಷ, ಅಂದರೆ 2020 ರಲ್ಲಿ ತೈವಾನ್‌ ನಿಂದ ರಫ್ತಾದ ಪರಂಗಿ ಹಣ್ಣುಗಳಲ್ಲಿ ಶೇಕಡಾ 99.79ರಷ್ಟು ಚೀನಾದ ನೀತಿ, ನಿಯಮಗಳ ಮಾನದಂಡವನ್ನು ಪೂರೈಸಿದ್ದವು. ‘ಸುಮಾರು ನೂರಕ್ಕೆ ನೂರರಷ್ಟು ಮಾನದಂಡ ಪೂರೈಸಿದಮೇಲೂ ನೀವು ಈ ರೀತಿ ನಿರ್ಧರಿಸಿದ್ದೀರಿ ಎಂದಾದರೆ ಇದು ವ್ಯವಸ್ಥೆಯನ್ನು ಅಸ್ತವ್ಯಸ್ತಗೊಳಿಸುವ ಪ್ರಯತ್ನವಾ?’ ಎಂದು ತೈವಾನ್ ಪ್ರಶ್ನಿಸಿತು. ಆದರೆ ಚೀನಾ ಎಷ್ಟೆಂದರೂ ಚೀನಾ ತಾನೆ. ಯಾರ ತಲೆಯ ಮೇಲಾದರೂ ಕುಟ್ಟಿ ಹೊಡೆದು ತನ್ನ ಮಾತು ಕೇಳುವಂತೆ ಮಾಡಲು ಪ್ರಯತ್ನಿಸುವುದು ಚೀನಾಕ್ಕೆ ಇದು ಮೊದಲ ಸಲವೇನೂ ಅಲ್ಲ. ಆನೆ ನಡೆದದ್ದೇ ದಾರಿ ಎಂದು ಸಾಗಿತು ಚೀನಾ.
ನಿಜವಾದ ಪಂದ್ಯ ಆರಂಭವಾದದ್ದೇ ಅಲ್ಲಿಂದ. ಈ ಬಾರಿ ಚೀನಾಕ್ಕೆ ಟಕ್ಕರ್ ಕೊಡಲು ತೈವಾನ್ ತಯಾರಾಯಿತು. ತೈವಾನ್‌ನ ರೈತರು ಪ್ರತಿವರ್ಷ ಸುಮಾರು ನಾಲ್ಕೂವರೆ ಲಕ್ಷ ಟನ್ ಪರಂಗಿ ಹಣ್ಣು ಬೆಳೆಯುತ್ತಾರೆ. ಅಂದರೆ ಇದು ಏಷ್ಯಾದಲ್ಲಿರುವ ಎಲ್ಲಾ ಆನೆಗಳನ್ನೂ ಒಟ್ಟು ಸೇರಿಸಿ ತೂಗಿದರೆ ಆಗುವ ತೂಕದ ಎರಡರಷ್ಟು! ಅದರಲ್ಲಿ ನಲವತ್ತಾರು ಸಾವಿರ ಟನ್ ಅಂದರೆಶೇಕಡಾ ಹನ್ನೆರಡರಷ್ಟು ಹೊರದೇಶಕ್ಕೆ ರಫ್ತಾಗುತ್ತವೆ. ಅದರಲ್ಲಿ ಶೇಕಡಾ ತೊಂಬತ್ತೇಳರಷ್ಟು ಚೀನಾಕ್ಕೇ ರಫ್ತಾಗುತ್ತವೆ. ತೈವಾನ್‌ಗೆ ಪರಂಗಿ ಹಣ್ಣಿನ ರಫ್ತಿನಲ್ಲಿ ಚೀನಾ ಒಂದರಿಂದಲೇ ಬರುವ ಆದಾಯ ಒಂದೂವರೆ ಬಿಲಿಯನ್ ನ್ಯೂ ತೈವಾನ್ ಡಾಲರ್.
ಉಳಿದ ಶೇಕಡಾ ಮೂರರಲ್ಲಿ ಜಪಾನ್, ಹಾಂಗ್‌ಕಾಂಗ್, ಸಿಂಗಾಪುರ ಸೇರಿದಂತೆ ಹತ್ತು ದೇಶಗಳನ್ನು ಸೇರಿಕೊಳ್ಳುತ್ತವೆ. ಅಲ್ಲಿಗೆಇದು ಸಣ್ಣ ಪಟ್ಟಿನ ಆಟವಲ್ಲ ಎಂಬುದು ತೈವಾನ್‌ಗೆ ಮನವರಿಕೆಯಾಗಿತ್ತು. ಕಾರಣ, ತೈವಾನ್‌ನ ರೈತರು ಬೆಳೆಯುವ ಶೇಕಡಾ ತೊಂಬತ್ತೊಂಬತ್ತರಷ್ಟು ಅಡಿಕೆ, ತೊಂಬತ್ತೇಳರಷ್ಟು ಸೀತಾಫಲ, ತೊಂಬತ್ತೈದರಷ್ಟು ಸಿಹಿಕಂಚಿ ಅಥವಾ ಚಕೋತ ಹಣ್ಣು ಮತ್ತು ತೊಂಬತ್ತಮೂರರಷ್ಟು ಸಿಹಿ ಕಿತ್ತಳೆ ಹಣ್ಣು ವಿದೇಶಕ್ಕೆ ರಫ್ತಾಗುತ್ತವೆ.
ಅದರಲ್ಲೂ ಚೀನಾಕ್ಕೆ ರಫ್ತಾಗುವುದೇ ಹೆಚ್ಚು. ನಾಳೆ ಅದಕ್ಕೂ ನಿರ್ಬಂಧ ಹೇರಿದರೆ? ಅದೇನಿದ್ದರೂ ಮುಂದಿನ ಕಥೆ, ಸದ್ಯ ಪರಂಗಿ ಹಣ್ಣಿನ ಸಮಸ್ಯೆ ಬಗೆಹರಿಸಿಕೊಳ್ಳಲು ತೈವಾನ್ ಸಜ್ಜಾಗತೊಡಗಿತು. ಈ ಸಮಸ್ಯೆ ಬಗೆಹರಿಸಲು ಮೊದಲು ಫೀಲ್ಡಿಗೆ ಇಳಿದದ್ದೇ ಅಲ್ಲಿಯ ಅಧ್ಯಕ್ಷೆ ತ್ಸಾಯ್ ಇಂಗ್ ವೆನ್. ಆಕೆ ಅಕ್ಷರಶಃ ಪರಂಗಿ ಹಣ್ಣು ಬೆಳೆಯುವ ತೋಟಕ್ಕೆ ಭೇಟಿ ನೀಡಿ, ಅಲ್ಲಿ ಬೆಳೆಯುವ ರೈತರೊಂದಿಗೆ, ಬೆಳೆದ ಹಣ್ಣಿನೊಂದಿಗೆ ಭಾವಚಿತ್ರಗಳನ್ನು ತೆಗೆಸಿಕೊಂಡರು. ದೇಶದ ರೈತರ ಜೊತೆಗೆ ನಿಲ್ಲುವಂತೆ ಸಾಮಾಜಿಕ ಜಾಲತಾಣದಲ್ಲಿ ಕೇಳಿಕೊಂಡರು.
ಅದರಲ್ಲಿ ರೈತರ ಜತೆ ನಿಲ್ಲುವುದಷ್ಟೇ ಅಲ್ಲದೆ ಚೀನಾದ ಮುಂದೆ ಮಂಡಿಯೂರಿ ಕುಳಿತುಕೊಳ್ಳದೆ, ದೇಶದ ಸ್ವಾಭಿಮಾನ ಉಳಿಸಿಕೊಳ್ಳುವುದು ಮೂಲ ಉದ್ದೇಶವಾಯಿತು. ಇದಕ್ಕೆ ದೇಶದ ಉಪಾಧ್ಯಕ್ಷ, ಪ್ರಧಾನಿಯಿಂದ ಹಿಡಿದು, ಉಳಿದ ಮಂತ್ರಿಗಳು, ಶಾಸಕರು, ಮೇಯರ್‌ಗಳು, ಕೌನ್ಸಿಲರ್‌ಗಳೆಲ್ಲ ಕೈಜೋಡಿಸಿದರು. ಅಮೆರಿಕ, ಜಪಾನ್, ಕೆನಡಾದಂಥ ದೇಶದ ಪ್ರತಿನಿಧಿಗಳು, ಆ ದೇಶದ ಕೆಲವು ಸಂಸ್ಥೆಯ ಅಧಿಕಾರಿಗಳು ಇದಕ್ಕೆ ತಮ್ಮ ದನಿಗೂಡಿಸಿದರು.
ತಮ್ಮ ಫೇಸ್ಬುಕ್‌ನಲ್ಲಿ ‘ತೈವಾನ್‌ನ ರುಚಿಕರ ಪರಂಗಿ ಹಣ್ಣನ್ನು ಮರೆಯಬೇಡಿ’ ಎಂದು ಬರೆದರು. ದೇಶದ ನಟರಿಂದ ಹಿಡಿದು, ಗಾಯಕರು, ಕ್ರೀಡಾಪಟುಗಳವರೆಗೆ ಇದನ್ನು ಸವಾಲಾಗಿ ಸ್ವೀಕರಿಸಿ ಕಟಿಬದ್ಧರಾಗಿ ನಿಂತರು. ಅವರೆಲ್ಲ ಎರಡು ನೂರು ಪೆಟ್ಟಿಗೆ ಹಣ್ಣು ಖರೀದಿಸುವುದರಿಂದ ಆರಂಭಿಸಿ ಅರ್ಧ ಮಿಲಿಯನ್ ತೈವಾನ್ ಡಾಲರ್ ಬೆಲೆಬಾಳುವಷ್ಟು ಹಣ್ಣು ಖರೀದಿಸಿದರು. ಅದೊಂದು ರೀತಿಯಲ್ಲಿ ಸಣ್ಣ ಚಳವಳಿಯಾಗಿ ಮಾರ್ಪಟ್ಟಿತು.
ದೂರದರ್ಶನ ಮಾಧ್ಯಮದವರು ಈ ಆಂದೋಲನಕ್ಕೆ ಗೆಜ್ಜೆ ಕಟ್ಟಿ ಕುಣಿಸಿದರು. ನಿರೂಪಕರು ಪರಂಗಿ ಹಣ್ಣಿನ ಚಿತ್ರ ಇರುವ ಉಡುಪು ಧರಿಸಿದರು. ಹಿನ್ನೆಲೆಯಲ್ಲಿ ಪರಂಗಿಯನ್ನಿಟ್ಟರು. ಕಾರ್ಯಕ್ರಮಗಳಲ್ಲಿ ಇದೇ ಹಣ್ಣನ್ನು ಪ್ರಧಾನ ವಸ್ತುವಾಗಿಸಿ ಕೊಂಡರು. ತಮ್ಮ ಕಾರ್ಯಕ್ರಮದಲ್ಲಿ ಹಣ್ಣು ತಿಂದು ಬಾಯಿ ಚಪ್ಪರಿಸಿದರು, ಪರಂಗಿ ಹಣ್ಣಿನ ರಸ ಹೀರಿದರು. ಪರಂಗಿ ರಸಪ್ರಶ್ನೆ ಕಾರ್ಯಕ್ರಮಗಳನ್ನು ಆಯೋಜಿಸಿದರು. ಕೇವಲ ಹನ್ನೆರಡು ಸೆಕೆಂಡ್‌ನಲ್ಲಿ ಹಣ್ಣಿನ ಸಿಪ್ಪೆ ಕೆತ್ತಿ, ತಿನ್ನಲು ಯೋಗ್ಯವಾದ ಸಣ್ಣತುಂಡುಗಳನ್ನು ಮಾಡಿ ತಟ್ಟೆಯಲ್ಲಿಡುವವನ ಕೈಚಳಕ ತೋರಿಸಿದರು.
ದೇಶದ ಹೆಸರಾಂತ ಬಾಣಸಿಗರನ್ನು ಕರೆಸಿ, ಈ ಹಣ್ಣಿನಿಂದ ಹೊಸ ತಿನಿಸುಗಳನ್ನು ತಯಾರಿಸುವ ವಿಧಾನ ತಿಳಿಸಿಕೊಟ್ಟರು. ಇದರಪರಿಣಾಮವಾಗಿ ಪೈನಾಪಲ್ ಪಿಜ್ಜಾ, ಪೈನಾಪಲ್ ನಟ್ಸ್ ಸಲಾಡ್‌ನಂಥ ತಿನಿಸುಗಳು ಜೀವ ಪಡೆದವು. ಬಂದ ಅತಿಥಿಗಳು ತಾವು ಯಾವ ರೀತಿಯಲ್ಲಿ ಈ ಹಣ್ಣನ್ನು ತಿನ್ನಲು ಇಷ್ಟಪಡುತ್ತೇವೆ ಎಂದು ಹೇಳಿದರು. ತಮ್ಮ ಬಾಲ್ಯದಲ್ಲಿ ಈ ಹಣ್ಣಿನೊಂದಿಗೆ ತಮ್ಮ ಬಾಲ್ಯದ ಅನುಭವವನ್ನು ಹಂಚಿಕೊಂಡರು. ಈ ಕ್ರಾಂತಿ ಹೇಗಿತ್ತೆಂದರೆ, ಕಾರ್ಯಕ್ರಮ ಮುಗಿಸುವಾಗ ನಿರೂಪಕರು ‘ಶುಭರಾತ್ರಿ, ನಾಳೆ ಭೇಟಿಯಾಗೋಣ, ಹೆಚ್ಚಿನ ಸುದ್ದಿಗಾಗಿ ನಮ್ಮ ಚಾನೆಲ್ ನೋಡುತ್ತಿರಿ’ ಎಂದೆಲ್ಲ ಹೇಳಲೇ ಇಲ್ಲ.
ಬಹುತೇಕ ಎಲ್ಲರೂ ಹೇಳಿದ್ದು ಒಂದೇ,   !’ ಈ ಕ್ರಾಂತಿ ಆರಂಭವಾದದ್ದು ದೇಶದ ಅಧ್ಯಕ್ಷರು ಮಾಡಿದ ಒಂದು ಟ್ವೀಟ್‌ನಿಂದ.  ’ ಹ್ಯಾಶ್‌ಟ್ಯಾಗ್ ಇಟ್ಟುಕೊಂಡು, ‘ಚೀನಾ ನಮ್ಮ ದೇಶದ ದಕ್ಷಿಣ ಭಾಗದಲ್ಲಿರುವ ರೈತರನ್ನು ಶಿಕ್ಷಿಸಲು ಮುಂದಾಗಿದೆ. ಚೀನಾ ಕಳೆದ ವರ್ಷ ಆಸ್ಟ್ರೇಲಿಯಾದ ವೈನ್‌ಗೆ ಶೇಕಡಾ ಎರಡು ನೂರರಷ್ಟು ಸುಂಕ ಏರಿಸಿದ್ದು ನೆನಪಿದೆಯಲ್ಲ. ವಿಶ್ವದಾದ್ಯಂತ ಇರುವ ಸಮಾನ ಮನಸ್ಕ ಸ್ನೇಹಿತ ರಾಷ್ಟ್ರಗಳು ನಮ್ಮ ಜತೆ ನಿಲ್ಲುವಂತೆ ಕೇಳಿ ಕೊಳ್ಳುತ್ತೇನೆ’ ಎಂದು ಅಧ್ಯಕ್ಷೆ ಟ್ವೀಟ್ ಮಾಡಿದ್ದರು. (ಕಳೆದ ವರ್ಷ ಆಸ್ಟ್ರೇಲಿಯಾದ ದ್ರಾಕ್ಷಾರಸಕ್ಕೆ ಸುಂಕ ಹೆಚ್ಚಿಸಿದಾಗ, ಚೀನಾಕ್ಕೆ ಬೇಡವಾದರೆ ತಾನು ಖರೀದಿಸುತ್ತೇನೆ ಎಂದಿತ್ತು ತೈವಾನ್) ಆದರೆ ದೇಶದಲ್ಲಿರುವವರ ಸಹಕಾರದಿಂದ ವಿದೇಶಕ್ಕೆ ರಫ್ತುಮಾಡುವ ಪ್ರಮೇಯವೇ ಬರಲಿಲ್ಲ.
‘ನಮ್ಮ ದೇಶದ ಹಣ್ಣನ್ನು ನಿಮಗೆ ಕೊಡುವುದಿಲ್ಲ, ನಾವೇ ಬಳಸಿಕೊಳ್ಳುತ್ತೇವೆ’ ಎಂಬ ನಿಚ್ಚಳ ನಿಲುವು ತಳೆದು, ಸ್ಪಷ್ಟ ಸಂದೇಶವನ್ನು ತೈವಾನ್ ಪ್ರಜೆಗಳು ಚೀನಾಕ್ಕೆ ರವಾನಿಸಿದ್ದರು. ಪರಿಣಾಮ? ಯಾರೂ ಊಹಿಸಲೂ ಸಾಧ್ಯವಾಗದ ರೀತಿಯಲ್ಲಿ, ಕೇವಲ ನಾಲ್ಕೇ ದಿನದಲ್ಲಿ ಅನಾನಸ್ ಹಣ್ಣಿನ ಎಲ್ಲಾ ಕಪಾಟುಗಳೂ ಖಾಲಿಯಾದವು! ತೈವಾನ್‌ನಲ್ಲಿ ಪೈನಾಪಲ್‌ಗೆ ಈ ಮೊದಲೂ ಒಮ್ಮೆ ಸಂಕಷ್ಟ ಬಂದಿತ್ತು. ಈ ದೇಶ 1930ರಿಂದಲೇ ಪೈನಾಪಲ್ ರಫ್ತು ಮಾಡುತ್ತಿತ್ತು. 1960ರ ದಶಕದಲ್ಲಿಫಿಲಿಪೈನ್ಸ್ ಹೆಚ್ಚು ಪೈನಾಪಲ್ ಬೆಳೆದು, ರಫ್ತು ಮಾಡಲು ಸಜ್ಜಾಯಿತು.
ಅದೇ ಸಂದರ್ಭದಲ್ಲಿ ತೈವಾನ್ ಆರ್ಥಿಕತೆ ಸುಧಾರಿಸತೊಡಗಿತ್ತು. ಕಾರ್ಖಾನೆಗಳು ತಲೆ ಎತ್ತತೊಡಗಿದ್ದರಿಂದ ಯುವಜನತೆ ಹಳ್ಳಿಯಲ್ಲಿ ರೈತಾಪಿ ಬಿಟ್ಟು ಪಟ್ಟಣದ ಕಡೆಗೆ ಬರಲಾರಂಭಿಸಿದ್ದರು. ಅದರಿಂದ ಕೂಲಿ ಆಳುಗಳ ಸಂಬಳ ಹೆಚ್ಚಾಗಿ ಫಿಲಿಪೈನ್ಸ್ನೊಂದಿಗೆ ಸ್ಪರ್ಧಿಸುವುದು ಕಷ್ಟವಾಯಿತು. ಒಂದು ಹತ್ತು ವರ್ಷವಾಗುವಾಗ ದೇಶದಲ್ಲಿ ಬರೀ ಹಣ್ಣು ಮಾರಿ ಬದುಕಲು ಸಾಧ್ಯವಿಲ್ಲ ಎಂಬ ಅರಿವಾಗತೊಡಗಿತ್ತು. ಆಗ ಸರಕಾರವೇ ಹಣ್ಣಿನ ವಿಷಯವನ್ನಿಟ್ಟುಕೊಂಡು ಸ್ಪರ್ಧಾ ಕಾರ್ಯಕ್ರಮವನ್ನುಆಯೋಜಿಸಿತು. ದೇಶದ ಹಲವು ಭಾಗದಲ್ಲಿ ಪೈನಾಪಲ್ ಫೆಸ್ಟಿವಲ್‌ನಂಥ ಹಬ್ಬಗಳನ್ನು ಆಚರಿಸಲಾಯಿತು.
ಅನ್ವೇಷಣೆಯ ಕಡೆ ಜನ ಗಮನಹರಿಸತೊಡಗಿದರು, ಹೊಸ ಪ್ರಯೋಗಗಳನ್ನು ಮಾಡಿದರು. ಹೊಸ ಪಾಕ ಶಾಸ್ತ್ರಗಳು ಹುಟ್ಟಿಕೊಂಡವು. ಇದರಿಂದಾಗಿ ವಿಶ್ವ ವಿಖ್ಯಾತ ‘ತೈವಾನ್ ಪೈನಾಪಲ್ ಕೇಕ್’ನಂಥ ತಿನಿಸುಗಳು ಹುಟ್ಟಿಕೊಂಡವು. ಆಗಲೂಸಮಸ್ಯೆಯಿಂದ ಹೊರಬಂದಿತ್ತು ತೈವಾನ್. ಈಗಲೂ ಆಸ್ಟ್ರೇಲಿಯಾ, ಅಮೆರಿಕ, ಜಪಾನ್, ಸಿಂಗಾಪುರದಂಥ ದೇಶಗಳನ್ನು ಸಂಪರ್ಕಿಸಿ ಮುಂದಿನ ವರ್ಷದ ಬೆಳೆಯ ರಫ್ತಿಗೆ ಯೋಜನೆ ನಿರ್ಮಿಸಿದೆ ಈ ದೇಶ.
ಅರವತ್ತೇಳು ವರ್ಷದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ನ ಎದುರು ನಿಲ್ಲಲು ಅರವತ್ತನಾಲ್ಕು ವರ್ಷದ ತೈವಾನ್ ಅಧ್ಯಕ್ಷೆ ತ್ಸಾಯ್ ಇಂಗ್ ವಾನ್ ಎಂಬ ಧಾಡಸಿ ಹೆಣ್ಣೊಬ್ಬಳು ಸಿದ್ಧಳಾಗಿದ್ದಾಳೆ! ಈ ಸಲ ತೈವಾನ್ ಚೀನಾಕ್ಕೆ ಕೊಟ್ಟ ಡಿಚ್ಚಿ ಮೆಚ್ಚಿಕೊಳ್ಳಲೇಬೇಕು. ಕಾರಣ ಇಷ್ಟೇ, ಚೀನಾಕ್ಕೂ ತೈವಾನ್‌ಗೂ ಎಲ್ಲ ಕ್ಷೇತ್ರದಲ್ಲೂ ಅಜಗಜಾಂತರ. ವಿಸ್ತೀರ್ಣದಲ್ಲಿ ಚೀನಾ ತೊಂಬತ್ತಾರು ಲಕ್ಷಚದರ ಕಿಲೋ ಮೀಟರ್ (ಅತಿಕ್ರಮಣದ ಸಂಖ್ಯೆ ಬಿಟ್ಟು!), ತೈವಾನ್ ಕೇವಲ ಮೂವತ್ತಾರು ಸಾವಿರ ಚದರ ಕಿಲೋ ಮೀಟರ್. ಅದರಲ್ಲೂ ತೈವಾನ್‌ನ ಪೂರ್ವ ಭಾಗದಲ್ಲಿ ಶೇಕಡಾ ಅರವತ್ತರಷ್ಟು ಗುಡ್ಡಗಾಡು.
ಅಂದರೆ ಭೂಭಾಗದಲ್ಲಿ ಚೀನಾ ತೈವಾನ್ ಗಿಂತ ಇನ್ನೂರ ಅರವತ್ತೇಳು ಪಟ್ಟು ದೊಡ್ಡದು. ತೈವಾನ್ ಜನಸಂಖ್ಯೆ ಸುಮಾರು ಎರಡೂವರೆ ಕೋಟಿಯಾದರೆ ಚೀನಾದ ಜನಸಂಖ್ಯೆ ಸುಮಾರು ಅರವತ್ತು ಪಟ್ಟು ಹೆಚ್ಚು, ನೂರಾನಲವತ್ತು ಕೋಟಿ. ತೈವಾನ್ ಜಿಡಿಪಿ ಆರುನೂರಾ ಐವತ್ತು ಬಿಲಿಯನ್ ಡಾಲರ್, ಚೀನಾದ ಜಿಡಿಪಿ ಹದಿನೈದು ಟ್ರಿಲಿಯನ್ ಡಾಲರ್. ಇದನ್ನೆಲ್ಲ ನೋಡಿದರೆ ಚೀನಾದ ಮುಂದೆ ತೈವಾನ್ ಇರುವೆ ಇದ್ದಂತೆ! ಅ, ಇರುವೆ ಆನೆಗೆ ಸೆಡ್ಡುಹೊಡೆಯುವುದು ಎಂದರೆ ಇದೇನಾ!?