ಖಾಲಿ ಪೂಜೆ ಪಾರಾಯಣಗಳು ವೋಟು ತರುವುದಿಲ್ಲ
ಪ್ರಚಲಿತ
ವಿನಯ್‌ ಸಹಸ್ರಬುದ್ದೆ, ಬಿಜೆಪಿ ಸಂಸದ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೆ ಪ್ರಚಾರದ ಕಣಕ್ಕೆ ಇಳಿದಿದ್ದಾರೆ. ಹೀಗಾಗಿ ಅವರು ನೀಡಿದ ಕೆಲ ಪ್ರಮುಖ ಹೇಳಿಕೆಗಳನ್ನು ವಿಶ್ಲೇಷಿಸುವುದು ತಪ್ಪಾಗಲಾರದು. ಕಾಲಿಗೆ ಗಾಯ ಮಾಡಿಕೊಳ್ಳುವುದಕ್ಕಿಂತ ಮುಂಚೆ ಮಮತಾ ಬ್ಯಾನರ್ಜಿ ತಮ್ಮ ಧಾರ್ಮಿಕ ನಿಷ್ಠೆಯ ಬಗ್ಗೆ ಸುದೀರ್ಘವಾಗಿ ಹೇಳಿಕೊಂಡಿದ್ದರು.
‘ನಾನು ಬ್ರಾಹ್ಮಣ ಕುಟುಂಬಕ್ಕೆ ಸೇರಿದವಳು. ಹೀಗಾಗಿ ನನ್ನ ವಿರುದ್ಧ ಸ್ಪರ್ಧಿಸಿರುವ ಅಭ್ಯರ್ಥಿ ಧಾರ್ಮಿಕ ವಿಚಾರದಲ್ಲಿ ಆಟಆಡಬಾರದು’ ಎಂದಿದ್ದರು. ‘ನನಗೆ ಹಿಂದು ಧರ್ಮ ಕಲಿಸಲು ಬರಬೇಡಿ’ ಎಂದೂ ಹೇಳಿದ್ದರು. ಅದಕ್ಕೂ ಮುನ್ನ ಸಾರ್ವಜನಿಕ ಸಮಾರಂಭದಲ್ಲಿ ಚಂಡಿ ಪಾಠ ಪಠಿಸಿ ನಾನು ಹುಟ್ಟಾ ಹಿಂದು ಗೊತ್ತಾ ಎಂದು ಸವಾಲು ಹಾಕಿದ್ದರು.
ಮಮತಾ ಬಾಯಿಯಲ್ಲಿ ಇಂತಹ ಹೇಳಿಕೆಗಳನ್ನು ಕೇಳಲು ಮಜವಾಗಿರುತ್ತದೆ. ಏಕೆಂದರೆ, ಆರಂಭದಿಂದಲೂ ವೋಟ್ ಬ್ಯಾಂಕ್ ರಾಜಕಾರಣದಲ್ಲಿ ರಾಜಾರೋಷವಾಗಿ ತೊಡಗಿಸಿಕೊಂಡು ಇನ್ನಿಲ್ಲದ ತಂತ್ರಗಳನ್ನು ಪ್ರಯೋಗಿಸಿದ, ಅದಕ್ಕಾಗಿ ಅಲ್ಪ ಸಂಖ್ಯಾತೇತರರ ಭಾವನೆಗಳ ಜತೆ ಚೆಲ್ಲಾಟ ವಾಡುತ್ತಾ, ಅವರನ್ನು ಘಾಸಿಗೊಳಿಸುತ್ತಾ ಬಂದ ವ್ಯಕ್ತಿಯೊಬ್ಬರು ಈಗ ಇಂತಹ ಮಾತನಾಡುತ್ತಾರೆಂದರೆ ವಿಶೇಷವಲ್ಲವೇ? ಕಾಲ ಬದಲಾಗಿದೆ.
ಎಷ್ಟು ಬದಲಾಗಿದೆ ಅಂದರೆ, ಮಮತಾ ಕೂಡ ತನ್ನ ಹಿಂದು ಗುರುತನ್ನು ಎತ್ತಿ ತೋರಿಸಬೇಕಾದ ಸಮಯ ಬಂದಿದೆ. ಗಮನಾರ್ಹಸಂಗತಿಯೆಂದರೆ, ರಾಜಕೀಯದಲ್ಲಿ ಬದಲಾದ ಈ ಸನ್ನಿವೇಶದಲ್ಲಿ ಹೀಗೆ ಎಂದು ಗುರುತನ್ನು ಎತ್ತಿ ತೋರಿಸುತ್ತಿರುವ ವ್ಯಕ್ತಿ ಮಮತಾ ಒಬ್ಬರೇ ಅಲ್ಲ. ಕೆಲ ಸಮಯದ ಹಿಂದೆ ರಾಹುಲ್ ಗಾಂಧಿ ಕೂಡ ‘ನಾನು ಜನಿವಾರ ಧಾರಿ ಬ್ರಾಹ್ಮಣ’ ಎಂದು ಹೇಳಿಕೊಂಡಿದ್ದರು.
ಜನಿವಾರವೆಂಬುದು ಹಿಂದು ಧರ್ಮದ ಗುರುತುಗಳಲ್ಲೊಂದು. ಹಾಗೆಯೇ, 2017ರಲ್ಲಿ ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತನ್ನನ್ನು ಬಿಜೆಪಿಯವರು ಹಿಂದು ಎಂದು ಪರಿಗಣಿಸುತ್ತಾರೋ ಇಲ್ಲವೋ ಎಂದು ಕೇಳಿದ್ದರು. ‘ಈಗೀಗ ನಾನು ಪ್ರತಿದಿನ ಬೆಳಿಗ್ಗೆ ದೇವಸ್ಥಾನಕ್ಕೆ ಹೋಗಿ ಅದರ ಫೋಟೋ ಟ್ವೀಟ್ ಮಾಡಬೇಕಾಗಿ ಬಂದಿದೆ’ ಎಂದೂ ಅಲವತ್ತು ಕೊಂಡಿದ್ದರು.
ತೀರಾ ಇತ್ತೀಚೆಗೆ ಜನವರಿಯಲ್ಲಿ ತುಳುನಾಡಿನ ಡಿಎಂಕೆ ಅಧ್ಯಕ್ಷ ಎಂ.ಕೆ.ಸ್ಟಾಲಿನ್, ‘ನಮ್ಮ ಪಕ್ಷ ಹಿಂದು ವಿರೋಧಿ ಎಂದು ದೂರುವುದರಲ್ಲಿ ಯಾವುದೇ ಹುರುಳಿಲ್ಲ. ನನ್ನ ಹೆಂಡತಿ ಭೇಟಿ ನೀಡದ ದೇವಸ್ಥಾನಗಳೇ ಇಲ್ಲ. ಡಿಎಂಕೆಯ ಅನೇಕ ಜಿಲ್ಲಾ ಕಾರ್ಯದರ್ಶಿಗಳು ಹಣೆಗೆ ಕುಂಕುಮ ಇಟ್ಟುಕೊಳ್ಳುತ್ತಾರೆ. ನಾವ್ಯಾರೂ ಅವರ ನಂಬಿಕೆಯನ್ನು ಆಡಿಕೊಳ್ಳುವುದಿಲ್ಲ’ ಎಂದು ಹೇಳಿದ್ದರು.
ರಾಜಕಾರಣಿಗಳು ತಾವೆಷ್ಟು ಜಾತ್ಯತೀತರು ಎಂಬುದನ್ನು ತೋರಿಸಿಕೊಳ್ಳಲು ಮುಗಿಬೀಳುತ್ತಿದ್ದ ದಿನಗಳು ಹೋದವು. ತಮ್ಮ ಜಾತ್ಯತೀತತೆಯನ್ನು ಸಾಬೀತುಪಡಿಸಲು ಹಿಂದೆಲ್ಲಾ ಅವರು ತಾವೆಷ್ಟು ಧರ್ಮಾತೀತರು ಎಂದೂ ತೋರಿಸಿಕೊಳ್ಳುತ್ತಿದ್ದರು. ಕೆಲವರಂತೂ ತಾವು ಹಿಂದು ಎಂಬ ಕಾರಣಕ್ಕೆ ಮತದಾರರು ತಮ್ಮನ್ನು ತಿರಸ್ಕರಿಸಿಬಿಡಬಹುದು ಎಂದು ಹೆದರಿ ‘ನಾನು ಅಕಸ್ಮಾತ್ ಹಿಂದು ಆಗಿ ಹುಟ್ಟಿದ್ದೇನೆ’ ಎಂದು ಕೂಡ ಹೇಳಿಕೊಳ್ಳುತ್ತಿದ್ದರು.
ಹಾಗೆ ನೋಡಿದರೆ ಸ್ವಾತಂತ್ರ್ಯ ಹೋರಾಟದ ಸಮಯದಿಂದಲೂ ನಾಯಕರು ತಾವು ಜಾತ್ಯತೀತರು ಎಂದು ಗುರುತಿಸಿಕೊಳ್ಳಲುಹಾಗೂ ಅಲ್ಪಸಂಖ್ಯಾತರ ಮನಸ್ಸು ಗೆಲ್ಲಲು ತಮ್ಮ ಹಿಂದು ಗುರುತನ್ನು ಅಳಿಸಿಹಾಕುವುದು ಅನಿವಾರ್ಯವೆಂದೇ ಭಾವಿಸಿದ್ದರು. ಕೆಲ ನಾಯಕರು ತಾವು ಹಿಂದುವೂ ಅಲ್ಲ ಮುಸ್ಲಿಮರೂ ಅಲ್ಲ, ಬದಲಿಗೆ ‘ಹಿಂದಿ’ಗಳು ಎಂದು ಘೋಷಿಸಿಕೊಂಡಿದ್ದರು! ಇದನ್ನವರು ಪ್ರಾಮಾಣಿಕ ವಾಗಿಯೇ ಹೇಳಿಕೊಳ್ಳುತ್ತಿದ್ದರು, ಆದರೆ ಇದರಿಂದ ಮುಸ್ಲಿಮರ ಹೃದಯ ಗೆಲ್ಲಲು ಸಾಧ್ಯವಾಗಿರಲಿಲ್ಲ.ಸ್ವಾತಂತ್ರ್ಯ ಬಂದ ನಂತರವೂ ಈ ಹವ್ಯಾಸ ಮುಂದುವರಿದು, ಹಿಂದುವಾಗಿ ಹುಟ್ಟಿದ್ದಕ್ಕೆ ಪಶ್ಚಾತ್ತಾಪ ಪಡುವ ಅಭ್ಯಾಸಕೂಡ ಅದರ ಜತೆಗೆ ಸೇರಿಕೊಂಡಿತು.
ಮುಸ್ಲಿಮರ ವೋಟ್ ಬ್ಯಾಂಕ್‌ಗಾಗಿ ಇಂತಹ ಕಸರತ್ತು ಮಾಡಲಾಗುತ್ತಿತ್ತು. ಇಂದು ಕಾಲ ಬದಲಾಗಿದೆ. ಅನಿವಾರ್ಯವಾಗಿ ಮಮತಾ ಬ್ಯಾನರ್ಜಿ ಕೂಡ ತಾನು ‘ಹುಟ್ಟಾ ಹಿಂದು’ ಎಂದು ಹೇಳಿಕೊಳ್ಳಬೇಕಾಗಿ ಬಂದಿದೆ. ಅವರಿಗೆ ಉಂಟಾದ ಜ್ಞಾನೋದಯ ಹೇಗಾದರೂ ಇರಲಿ. ಆದರೆ, ರಾಜಕಾರಣಿಗಳು ಮುಗಿಬಿದ್ದು ತಾವು ಹಿಂದುಗಳು ಎಂದು ಘೋಷಿಸಿಕೊಳ್ಳುತ್ತಿರುವುದರಿಂದಹಾಗೂ ತಮ್ಮ ಹಿಂದು ಗುರುತನ್ನು ಮರುಸ್ಥಾಪನೆ ಮಾಡಿಕೊಳ್ಳುತ್ತಿರುವುದರಿಂದ ಅವರಿಗೆ ಏನಾದರೂ ಲಾಭವಾಗುತ್ತದೆಯೇ? ಇಲ್ಲ. ವೋಟ್‌ಬ್ಯಾಂಕ್ ರಾಜಕಾರಣದಲ್ಲಿ ಅವರಿಗೆ ಇದರಿಂದ ಹೆಚ್ಚೇನೂ ಅನುಕೂಲ ವಾಗುವುದಿಲ್ಲ.
ಬಹುಸಂಖ್ಯಾತ ಹಿಂದು ಸಮುದಾಯವನ್ನು ಅನುಕೂಲ ಸಿಂಧು ಹಿಂದು ಗುರುತಿನ ಹೇಳಿಕೆಗಳಿಂದ ದಾರಿ ತಪ್ಪಿಸುವುದು ಸುಲಭವಲ್ಲ. ಏಕೆಂದರೆ, ಇಂದಿನ ಬಹುತೇಕ ಹಿಂದುಗಳು ತಮ್ಮ ಹಿಂದುತ್ವದ ಗುರುತಿನ ಬಗ್ಗೆ ನಾಚಿಕೆಪಡುವುದಿಲ್ಲ ಹಾಗೂ ತಾವು ದೇವರನ್ನು ಪೂಜಿಸುತ್ತೇವೆಂದು ಘಂಟಾಘೋಷವಾಗಿ ಕೂಗಿ ಹೇಳಿಕೊಳ್ಳುವ ಅಗತ್ಯವೂ ಅವರಿಗಿಲ್ಲ ಎಂಬುದನ್ನುಯಾರೂ ಮರೆಯಬಾರದು.
ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ‘ಪೂಜಾ ರಾಜಕಾರಣ’ ಪಶ್ಚಿಮ ಬಂಗಾಳದಲ್ಲಿ ಯಾವ ಫಲವನ್ನೂ ನೀಡುವುದಿಲ್ಲ ಎಂಬುದಕ್ಕೆ ಮೂರು ಪ್ರಮುಖ ಕಾರಣಗಳಿವೆ. ಮೊದಲನೆಯದಾಗಿ, ವೇದಿಕೆ ಮೇಲೆ ನಿಂತು ಚಂಡಿ ಪಾರಾಯಣದ ಶ್ಲೋಕ ಪಠಿಸಿದಾಕ್ಷಣ ಅವರು ಇಲ್ಲಿಯವರೆಗೆ ಮಾಡಿಕೊಂಡು ಬಂದ ಒರಟು ವೋಟ್ ಬ್ಯಾಂಕ್ ರಾಜಕಾರಣದಿಂದ ಮುಕ್ತಿ ಸಿಗುವುದಿಲ್ಲ. ಈ ವೋಟ್‌ಬ್ಯಾಂಕ್ ರಾಜಕಾರಣಕ್ಕಾಗಿ ಅವರು ಹಿಂದೆ ಏನೇನೆಲ್ಲಾ ಗಂಭೀರ ಆರೋಪಗಳನ್ನು ಎದುರಿಸಿದ್ದಾರೆಂಬುದನ್ನು ಮರೆಯಲಾದೀತೇ. ಬಿಜೆಪಿಯವರು ಮಾಡುವ ಆರೋಪಗಳನ್ನು ಬದಿಗಿಡೋಣ, ಇಂಡಿಯನ್ ಸೆಕ್ಯುಲರ್ ಫ್ರಂಟ್ (ಐಎಸ್‌ಎಫ್) ನಾಯಕ ಪೀರ್‌ಜಾದಾ ಅಬ್ಬಾಸ್ ಸಿದ್ದಿಕಿಯಂಥವರು ಕೂಡ ಟಿಎಂಸಿ ಸರಕಾರ ಕಳೆದ ಹತ್ತು ವರ್ಷಗಳಲ್ಲಿ ದಲಿತರು ಹಾಗೂ ಮುಸ್ಲಿಮರನ್ನು ಕೇವಲ ಮೂರ್ಖರನ್ನಾಗಿ ಮಾಡಿದೆ ಎಂದು ಆರೋಪಿಸುತ್ತಾರೆ.
ಅಲ್ಪಸಂಖ್ಯಾತರ ವೋಟ್‌ಬ್ಯಾಂಕ್ ಸಂಪಾದಿಸಿಕೊಳ್ಳಲು ಅವರು ಒಟ್ಟಾರೆ ಬಂಗಾಳಿ ಸಮಾಜದ ಹಿತವನ್ನೇ ಕಡೆಗಣಿಸಿದರು. ಚೋದ್ಯವೆಂದರೆ, ಜೈ ಶ್ರೀರಾಂ ಎಂಬ ಘೋಷಣೆ ಕೇಳಿದಾಗಲೆಲ್ಲ ಸಿಟ್ಟಿಗೆದ್ದು ಅಬ್ಬರಿಸುತ್ತಿದ್ದ ವ್ಯಕ್ತಿಯೇ ಇಂದು ತಾನು ಪ್ರತಿದಿನ ಚಂಡಿ ಪಾರಾಯಣ ಮಾಡುತ್ತೇನೆಂದು ಹೇಳಿಕೊಳ್ಳುವಂತಾಗಿದೆ. ಎರಡನೆಯದಾಗಿ, ಹಿಂದುತ್ವ ಎಂಬುದು ತಾಂತ್ರಿಕತೆ, ತೋರುಗಾಣಿಕೆ ಹಾಗೂ ಸಾಂಕೇತಿಕತೆಗಳನ್ನು ಮೀರಿದ್ದು ಎಂಬುದನ್ನು ಮಮತಾ ಬ್ಯಾನರ್ಜಿ ಅರ್ಥ ಮಾಡಿಕೊಳ್ಳಬೇಕು.
ಹಿಂದು ಧರ್ಮದ ತಳಪಾಯ ಎಷ್ಟು ಗಟ್ಟಿಯಾಗಿದೆ ಅಂದರೆ, ಜನಿವಾರ, ಚಂಡಿ ಪಾಠ, ತಿಲಕ ಅಥವಾ ದೇವಸ್ಥಾನಕ್ಕೆ ಹೋಗುವಂಥ ಸಾಂಕೇತಿಕ ಆಚರಣೆ ಗಳನ್ನು ಎಲ್ಲಾ ಹಿಂದುಗಳು ಹಿಂದುತ್ವದ ಸಂಕೇತಗಳೆಂದು ಪರಿಗಣಿಸುವುದಿಲ್ಲ. ಚಂಡಿ ಪಾಠ ಅಥವಾ ಜನಿವಾರಗಳು ಎಲ್ಲಾ ಹಿಂದುಗೂ ಕಡ್ಡಾಯ ಕೂಡ ಅಲ್ಲ. ಪ್ರತಿದಿನ ಇವುಗಳನ್ನು ಧರಿಸಿದರೆ ಅಥವಾ ಪಠಿಸಿದರೆ ಮಾತ್ರ ತಾನು ಹಿಂದು ಆಗುತ್ತೇನೆ ಎಂದು ಯಾರೂ ನಂಬುವುದಿಲ್ಲ.
ಹಿಂದು ಧರ್ಮವೆಂಬುದು ಅಧ್ಯಾತ್ಮಿಕ ಪ್ರಜಾಪ್ರಭುತ್ವಕ್ಕೆ ಇನ್ನೊಂದು ಹೆಸರು. ಇಲ್ಲಿ ಯಾವ ದೇವರನ್ನು ಬೇಕಾದರೂಪೂಜಿಸಲು ಪ್ರತಿಯೊಬ್ಬರೂ ಸ್ವತಂತ್ರರು. ಪೂಜೆಗೆ ತನ್ನದೇ ಆದ ವಿಧಿ ವಿಧಾನಗಳನ್ನು ಬಳಸುವ ಅಥವಾ ಯಾವುದೇ ದೇವರನ್ನು ಪೂಜಿಸುವುದಕ್ಕೆ ಸಂಪೂರ್ಣ ನಿರಾಕರಿಸುವ ಸ್ವಾತಂತ್ರ್ಯ ಕೂಡ ಎಲ್ಲರಿಗೂ ಇದೆ. ಔರಂಗಜೇಬನ ಆಸ್ಥಾನದಲ್ಲಿದ್ದ ಹಿಂದು ಅಧಿಕಾರಿಯೊಬ್ಬ ಪ್ರತಿದಿನ ಊಟ ಮಾಡುವುದಕ್ಕೆ ಮುನ್ನ ಶಿವನನ್ನು ಪೂಜಿಸುತ್ತಿದ್ದ. ಆದರೆ, ಅದೇ ವ್ಯಕ್ತಿ ಛತ್ರಪತಿ ಶಿವಾಜಿಯ ಮೇಲೆ ದಾಳಿ ನಡೆಸಿ ಅವನನ್ನು ಸೋಲಿಸಬೇಕೆಂಬ ಸವಾಲು ಸ್ವೀಕರಿಸಿದ್ದ.
ಇದಕ್ಕೆ ತದ್ವಿರುದ್ಧವಾದ ಸಂಗತಿಗಳು ಕೂಡ ನಿಜವೇ. ಜಯಪ್ರಕಾಶ್ ನಾರಾಯಣ್ ತಮ್ಮ ಸಂಪೂರ್ಣ ಕ್ರಾಂತಿ ಚಳವಳಿಯ ವೇಳೆ ಯಲ್ಲಿ ‘ಜನಿವಾರ ತ್ಯಜಿಸಿ’ ‘ಜನಿವಾರ ಕಿತ್ತೆಸೆಯಿರಿ’ ಎಂದು ಕರೆ ನೀಡಿದ್ದರು. ಹೇಗೆ ಶಿವನನ್ನು ಪೂಜಿಸುವುದು ಔರಂಗಜೇಬನ ಅಧಿಕಾರಿಯನ್ನು ಹಿಂದುಗಳ ರಕ್ಷಕನನ್ನಾಗಿ ಮಾಡಲಿಲ್ಲವೋ ಹಾಗೆಯೇ ಜನಿವಾರ ಕಿತ್ತೆಸೆಯಿರಿ ಎಂದು ಕರೆ ನೀಡಿದ್ದಕ್ಕೆ ಜಯಪ್ರಕಾಶ್ ನಾರಾಯಣ್ ಹಿಂದು ವಿರೋಧಿಯೂ ಆಗಲಿಲ್ಲ.
ಮೂರನೆಯದಾಗಿ, ಒಂದು ದಶಕದ ಮಮತಾ ಬ್ಯಾನರ್ಜಿ ಆಡಳಿತ ಪಶ್ಚಿಮ ಬಂಗಾಳದ ಆಡಳಿತ ವ್ಯವಸ್ಥೆಯಲ್ಲಿ ಯಾವ ಸುಧಾರಣೆಯನ್ನೂ ತಂದಿಲ್ಲ ಎಂಬುದು ರಾಜ್ಯದ ಮತದಾರರಿಗೆ ಅರ್ಥವಾಗಿದೆ. ಹೀಗಾಗಿ ಅವರೆಲ್ಲ ಎಚ್ಚೆತ್ತುಕೊಂಡಿದ್ದಾರೆ. ಎರಡು ವಿಷಯಗಳಲ್ಲಿ ಅವರು ತನಗಿಂತ ಹಿಂದೆ ಆಡಳಿತ ನಡೆಸಿದ ಎಡಪಕ್ಷಗಳಿಗೆ ತೀವ್ರ ಪೈಪೋಟಿ ನೀಡುತ್ತಾರೆ.
1.ಸುಲಿಗೆ ಹಾಗೂ ದೊಂಬಿ ಮಾಡಲು ಸಮಾಜವಿರೋಧಿ ಶಕ್ತಿಗಳಿಗೆ ಮುಕ್ತ ಸ್ವಾತಂತ್ರ್ಯ ನೀಡುವುದು.
2.ಅಭಿವೃದ್ಧಿಯ ವಿಷಯದಲ್ಲಿ ಅತ್ಯಂತ ಕಳಪೆ ಸಾಧನೆ. ಈ ಎರಡೂ ವಿಷಯದಲ್ಲಿ ಎಡಪಕ್ಷಗಳ ಸರಕಾರ ಹೆಚ್ಚಲ್ಲ, ಮಮತಾಕಡಿಮೆಯಲ್ಲ. ಪಶ್ಚಿಮ ಬಂಗಾಳದ ಜನರಿಗೆ ಟಿಎಂಸಿ ಸರಕಾರದ ಆಡಳಿತವೆಂಬುದು ಬೆಂಕಿಯಿಂದ ಎತ್ತಿ ಬಾಣಲೆಗೆಎಸೆದಂತಾಗಿದೆ. ಉತ್ತಮ ಆಡಳಿತ ನೀಡುವ ಹಿನ್ನೆಲೆಯ ರಾಜಕೀಯ ಪಕ್ಷವೊಂದನ್ನು ಆಯ್ಕೆ ಮಾಡಬೇಕು ಎಂಬ ಬಂಗಾಳಿಗಳ ಚಿಂತನೆ ಈಗ ಅವರನ್ನು ಬಿಜೆಪಿಯತ್ತ ತಿರುಗುವಂತೆ ಮಾಡಿದೆ. ಹೀಗಾಗಿ, ಎಷ್ಟೇ ಮಂತ್ರ ಪಠಿಸಿದರೂ ಎಷ್ಟೇ ಪೂಜೆ ಮಾಡಿದರೂ ದೀದಿಯ ಸರಕಾರವನ್ನು ಉಳಿಸಲು ಸಾಧ್ಯವಿಲ್ಲ.