ಬಹುಮತವಿಲ್ಲದ ಎನ್‌ಡಿಎ ಸರಕಾರವಾ ?
ಅಭಿಮತ
ಪ್ರಕಾಶ್ ಶೇಷರಾಘವಾಚಾರ್‌
ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಘೀಳಿಡುವ ಇಂಡಿ ಮೈತ್ರಿಕೂಟದ ನಾಯಕರುಗಳು ಹೊಸ ಸರಕಾರ ರಚನೆಯಾದ ತರುವಾಯ ಮೋದಿ ಯವರಿಗೆ ಬಹುಮತವಿಲ್ಲ ಇದೊಂದು ಅಕ್ರಮವಾಗಿ ರಚನೆಯಾಗಿರುವ ಸರಕಾರ ಎಂದು ಅವಾಸ್ತವಿಕ ವಾದವನ್ನು ಮಂಡಿಸುತ್ತಿದ್ದಾರೆ. ಅಷ್ಟೇಕೆ, ನೂತನವಾಗಿ ಮೂರನೆಯ ಬಾರಿ ಪ್ರಧಾನಿಯಾದ ಮೋದಿಯವರಿಗೆ ಶುಭ ಕೋರುವ ಸೌಜನ್ಯವನ್ನು ತೋರಿಲ್ಲ.
ಮಮತಾ ಬ್ಯಾನರ್ಜಿಯವರು ಪ್ರಮಾಣ ವಚನ ಸ್ವೀಕಾರ ಸಮಾರಂಭದ ಸಮಯದಲ್ಲಿ ತಮ್ಮ ಕೊಠಡಿಯಲ್ಲಿ ದೀಪ ಆರಿಸಿ ಕತ್ತಲಲ್ಲಿ ಕೂತಿದ್ದರಂತೆ. ಚುನಾವಣೆಯ ಸೋಲನ್ನು ಒಪ್ಪಿಕೊಳ್ಳುವ ಉದಾರತೆ ತೋರದಿರುವ ನಡವಳಿಕೆಯು ಯಾವ ಮಾನದಂಡದಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನುಎತ್ತಿ ಹಿಡಿಯುತ್ತದೆ? ಪ್ರಜಾಪ್ರಭುತ್ವದ ರಕ್ಷಕರು ಎಂದು ಕರೆದುಕೊಳ್ಳುವವರು ಸ್ಪಷ್ಟನೆ ಕೊಡಬೇಕಾಗಿದೆ.
ಹದಿನೆಂಟನೆಯ ಲೋಕಸಭಾ ಚುನಾವಣೆಯು ಎನ್‌ಡಿಎ ಮತ್ತು ಇಂಡಿಯಾ ಮೈತ್ರಿಕೂಟಗಳ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿತ್ತು. ಇಂಡಿಯಾ ಕೂಟದ ಪಕ್ಷಗಳಾದ ಆಮ್ ಆದ್ಮಿ ಪಾರ್ಟಿ, ಎಡರಂಗ ಮತ್ತು ಟಿಎಂಸಿ ಪಂಜಾಬ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದ್ದವು. ಎನ್‌ಡಿಎ ಮೈತ್ರಿಕೂಟದಲ್ಲಿ ಈ ರೀತಿಯ ವಿರೋಧಾಭಾಸವಾಗಲಿ ಮತ್ತು ಪರಸ್ಪರ ಸ್ಪರ್ಧೆಯಿಲ್ಲದೆ ಚುನಾವಣೆಯನ್ನು ಒಂದಾಗಿ ಎದುರಿಸಿತ್ತು. ಚುನಾವಣೆಯಲ್ಲಿ ಸುಲಭವಾಗಿ ಮೋದಿ ಜಯ ಕಟ್ಟಿಟ್ಟ ಬುತ್ತಿ ಎಂಬ ನಿರೀಕ್ಷೆ ಸುಳ್ಳಾಗಿ ಜೂನ್ ೪ ರಂದು ಎನ್‌ಡಿಎ ೨೯೨ ಸ್ಥಾನಗಳಲ್ಲಿ ಮತ್ತು ಬಿಜೆಪಿ೨೪೧ ಸ್ಥಾನಗಳಿಗೆ ತೃಪ್ತಿ ಪಟ್ಟಿಕೊಳ್ಳಬೇಕಾಯಿತು. ಇಂಡಿಯಾ ಮೈತ್ರಿಕೂಟವು ಎಲ್ಲರ ನಿರೀಕ್ಷೆಯನ್ನು ಮೀರಿ ೨೪೦ ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು.
ಇದರಲ್ಲಿ ಕಾಂಗ್ರೆಸ್ ಗೆದಿದ್ದು ಕೇವಲ ೯೯ ಸ್ಥಾನಗಳು ಮಾತ್ರ. ಕಾಂಗ್ರೆಸ್ ನಾಯಕರಿಗೆ ಎನ್‌ಡಿಎ ಜಯವನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲದಿರು ವುದು ಅವರ ಪ್ರತಿಕ್ರಿಯೆಗಳು ಹೇಳುತ್ತಿದೆ. ಖರ್ಗೆಯವರ ಪ್ರಕಾರ ಪ್ರಮಾದದಿಂದ ಎನ್‌ಡಿಎ ಸರಕಾರ ರಚನೆಯಾಗಿದೆಯಂತೆ. ಮೋದಿಜಿಗೆ ಜನಾದೇಶ ವಿಲ್ಲ. ಈ ಸರಕಾರ ಯಾವಾಗ ಬೇಕಾದರೂ ಬೀಳಬಹುದು ಭವಿಷ್ಯವನ್ನೂ ನುಡಿದಿzರೆ. ೨೦೨೪ ರ ಲೋಕಸಭೆ ಚುನಾವಣೆಯಲ್ಲಿ ಮೋದಿ ಯವರಿಗೆ ಜನಾದೇಶವಿಲ್ಲ ಇವರು ಮೂರನೆಯ ಒಂದು ಭಾಗದ ಪ್ರಧಾನಿ ಎಂದು ಕಾಂಗ್ರೆಸ್ ವಕ್ತಾರ ಜೈರಾಮ್ ರಮೇಶ್‌ರವರು ಈಗ ದಿನ ಬೆಳಗಾದರೆ ಹಾಡುತ್ತಿ ರುವ ಹಾಡು.
ಇವರ ಅಧಿನಾಯಕಿ ಸೋನಿಯಾ ಗಾಂಧಿಯವರು ತನ್ನ ಪಕ್ಷ ಮತ್ತು ಅದರ ಮಿತ್ರಪಕ್ಷಗಳೆರಡನ್ನೂ ಹೊರಗಿಟ್ಟು ಕೇವಲ ತನ್ನ ಹೆಸರಿನಲ್ಲಿ ಜನಾದೇಶ ವನ್ನು ಬಯಸಿದ ಪ್ರಧಾನಿ ರಾಜಕೀಯವಾಗಿ ನೈತಿಕ ಸೋಲನ್ನು ಅನುಭವಿಸಿದ್ದಾರೆ. ವಾಸ್ತವವಾಗಿ, ಅವರು ಬಯಸಿದ ಜನಾದೇಶವನ್ನು ಕಳೆದುಕೊಂಡಿ ದ್ದಾರೆ ಮತ್ತು ಆ ಮೂಲಕ ನಾಯಕತ್ವದ ಹಕ್ಕನ್ನು ಕಳೆದುಕೊಂಡಿದ್ದಾರೆ, ಎಂದು ತೀರ್ಪು ನೀಡಿದ್ದಾರೆ. ಇಂಡಿಯಾ ಮೈತ್ರಿಕೂಟದ ಸದಸ್ಯರಿಗೆ ಸೋಲನ್ನು ಸ್ವೀಕರಿಸುವ ಔದಾರ್ಯವಿಲ್ಲದೆ ತರ್ಕರಹಿತವಾಗಿ ಟೀಕಿಸುತ್ತಿದ್ದಾರೆ.
ಕಾಂಗ್ರೆಸ್ ಮತ್ತು ಸೋನಿಯಾ ಗಾಂಧಿಯವರಿಗೆ ಇತಿಹಾಸದ ನೆನಪು ಮಾಸಿರುವಂತೆ ಕಾಣುತ್ತಿದೆ. ೧೯೯೬ ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜಯಿಸಿದ್ದು ಕೇವಲ ೧೪೦ ಸೀಟುಗಳು ಮಾತ್ರ. ವಾಜಪೇಯಿಯವರ ಹದಿಮೂರು ದಿನಗಳ ಸರಕಾರ ಪತನವಾದ ತರುವಾಯ ರಚನೆಯಾದ ಯುನೈಟೆಡ್ ಫ್ರಂಟ್ ನೇತೃತ್ವದ ಸರಕಾರಕ್ಕೆ ಕಾಂಗ್ರೆಸ್ ಬೆಂಬಲವನ್ನು ನೀಡಿ ದೇವೆಗೌಡರನ್ನು ಪ್ರಧಾನಿ ಮಾಡುತ್ತದೆ. ಒಂಭತ್ತು ತಿಂಗಳಲ್ಲಿ ದೇವೆಗೌಡರ ನಡುವೆ ಮತ್ತು ಅಂದಿನ ಕಾಂಗ್ರೆಸ್ ಅಧ್ಯಕ್ಷ ಸೀತಾರಾಮ್ ಕೇಸರಿಯವರಲ್ಲಿ ಭಿನ್ನಾಭಿಪ್ರಾಯ ಉಂಟಾಗಿ ಐ.ಕೆ.ಗುಜ್ರಾಲ್ ನೂತನ ಪ್ರಧಾನಿಯಾಗಿ ಆಯ್ಕೆಯಾಗು ತ್ತಾರೆ.
ರಾಜೀವ್ ಗಾಂಧಿ ಹತ್ಯೆಯ ತನಿಖೆಗೆ ನೇಮಕವಾಗಿದ್ದ ಜೈನ್ ಆಯೋಗವು ತನ್ನ ವರದಿಯನ್ನು ಸಲ್ಲಿಸುತ್ತದೆ. ಯುನೈಟೆಡ್ ಫ್ರಂಟ್ ಸರಕಾರದ ಪಾಲುದಾರನಾಗಿದ್ದ ಡಿಎಂಕೆ ರಾಜೀವ್ ಗಾಂಧಿ ಹತ್ಯೆಯ ಉಗ್ರಗಾಮಿಗಳನ್ನು ಅಪರೋಕ್ಷವಾಗಿ ಬೆಂಬಲಿಸಿತ್ತು ಎಂಬ ಸ್ಪೋಟಕ ವರದಿಯನ್ನು ನೀಡುತ್ತದೆ. ಕೂಡಲೇ ಕಾಂಗ್ರೆಸ್ ಐ.ಕೆ.ಗುಜ್ರಾಲ್ ರವರಿಗೆ ಡಿಎಂಕೆಯನ್ನು ಸರಕಾರದಿಂದ ಕೈಬಿಡಬೇಕು ಎಂದು ತಾಕೀತು ಮಾಡುತ್ತದೆ ಆದರೆ ಇದಕ್ಕೆ ಅವರು ಸುತರಾಂ ಒಪ್ಪದ ಕಾರಣ ಸರಕಾರಕ್ಕೆ ತನ್ನ ಬೆಂಬಲವನ್ನು ಹಿಂಪಡೆಯುತ್ತದೆ. ಮಧ್ಯಂತರ ಚುನಾವಣೆಯನ್ನು ತಡೆಯಲು ಕೇವಲ ೧೪೦ ಸ್ಥಾನ ಗೆದಿದ್ದ ಕಾಂಗ್ರೆಸ್ ಸರಕಾರ ರಚನೆಗೆ ರಾಷ್ಟ್ರಪತಿಗಳ ಮುಂದೆ ತನ್ನ ಹಕ್ಕು ಪ್ರತಿಪಾದಿಸುತ್ತದೆ.
ಆದರೆ ಸಂಖ್ಯಾಬಲವಿಲ್ಲದೆ ಅದರ ಮನವಿ ತಿರಸ್ಕೃತವಾಗುತ್ತದೆ. ಅಂದು ಕಾಂಗ್ರೆಸ್ ನಾಯಕರಿಗೆ ಅಧಿಕಾರ ೧೯೯೬ ರ ಸೋಲು ಬಾಧಿಸಲಿಲ್ಲ ಮತ್ತು ನೈತಿಕತೆಯು ಕಾಡಲಿಲ್ಲ. ಪ್ರಾಯಶಃ ಕಾಂಗ್ರೆಸ್ ಪಾರ್ಟಿಯು ನಾವು ಇದೆಲ್ಲವನ್ನೂ ಮೀರಿದವರು ಎಂದು ನಂಬಿರುವಂತೆ ಕಾಣುತ್ತದೆ. ೧೯೯೮ರಲ್ಲಿ ವಾಜಪೇಯಿ ಸರಕಾರ ಒಂದು ಮತದಿಂದ ಪತನವಾಗುತ್ತದೆ. ವಿರೋಧ ಪಕ್ಷಗಳು ಪರ್ಯಾಯ ಸರಕಾರ ರಚನೆಯ ಕಸರತ್ತು ಆರಂಭಿಸುತ್ತದೆ. ಸೋನಿಯಾ ಗಾಂಧಿ ರಾಷ್ಟ್ರಪತಿಗಳ ಬಳಿ ಹೋಗಿ ತಮಗೆ ಸರಕಾರ ರಚಿಸಲು ಬೇಕಾದ ಬಹುಮತವಿದೆ ಎಂದು ಸರಕಾರ ರಚನೆಗೆ ಆಹ್ವಾನ ನೀಡಲು ಮನವಿ ಸಲ್ಲಿಸುತ್ತಾರೆ.
ರಾಷ್ಟ್ರಪತಿ ಭವನದ ಹೊರಗೆ ಬಂದು ತಮಗೆ ೨೭೨ ಸದಸ್ಯರ ಬೆಂಬಲವಿದೆ ಎಂದು ಪತ್ರಕರ್ತರ ಮುಂದೆ ಘೋಷಿಸುತ್ತಾರೆ. ರಾಷ್ಟ್ರಪತಿಗಳು ಬೆಂಬಲಿಸು ವವರ ಪಟ್ಟಿ ಕೇಳಿದಾಗ ಸೋನಿಯಾವರು ೨೭೨ ಸದಸ್ಯರ ವಿವರ ಕೊಡಲಾಗುವುದಿಲ್ಲ. ಸಂವಿಧಾನದ ಅತ್ಯುನ್ನತ ಹುದ್ದೆಗೆ ಸುಳ್ಳು ಹೇಳುವಾಗ ಇವರಿಗೆ ನೈತಿಕತೆಯು ಕಿಂಚಿತ್ತು ಕಾಡುವುದಿಲ್ಲ. ನಮ್ಮ ಬಳಿ ೨೭೨ ಸದಸ್ಯರ ಬೆಂಬಲವಿದೆ ಎಂದು ದೇಶಕ್ಕೆ ತಪ್ಪು ಮಾಹಿತಿ ನೀಡುವಾಗ ತಮ್ಮಿಂದ ಬಹು ದೊಡ್ಡ ಪ್ರಮಾದವಾಗುತ್ತಿದೆ ಎಂಬ ತಪ್ಪಿತಸ್ಥ ಭಾವನೆಯೂ ಇವರಿಗೆ ಕಾಡುವುದಿಲ್ಲ. ಗಾಂಧಿ ಕುಟುಂಬದವರಾದ ಕಾರಣ ರಾಷ್ಟ್ರಪತಿಯವರಿಗೆ ಮತ್ತು ದೇಶದ ಜನತೆಗೆ ಸುಳ್ಳು ಹೇಳುವ ಹಕ್ಕು ನಮಗಿದೆಯೆಂದು ಅವರ ಭಾವನೆ.
೨೦೦೪ ರಲ್ಲಿ ವಾಜಪೇಯಿ ಸರಕಾರ ಬಹುಮತ ಪಡೆಯುವುದು ಖಚಿತ ಎಂಬ ವಿಶ್ವಾಸವಿದ್ದಾಗ ಎನ್‌ಡಿಎ ೧೮೧ ಸ್ಥಾನ ಮಾತ್ರ ಪಡೆದು ಆಘಾತಕಾರಿ ಯಾಗಿ ಸೋತಿತು. ಗೆಲ್ಲುವುದಿಲ್ಲ ಎಂದು ನಿಶ್ಚಯಿಸಿದ್ದ ಯುಪಿಎ ಮೈತ್ರಿಕೂಟಕ್ಕೆ ೨೧೮ ಸ್ಥಾನ ಪಡೆದು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಎಡರಂಗದ ೫೯ ಮತ್ತು ಸಮಾಜವಾದಿ ಪಾರ್ಟಿಯ ೩೯ ಸದಸ್ಯರ ಬಾಹ್ಯ ಬೆಂಬಲದ ಆಧಾರದ ಮೇಲೆ ಸರಕಾರ ರಚಿಸಿದರು. ಸೋನಿಯಾ ಗಾಂಧಿ ಯವರಿಗೆ ಬಹುಮತವಿಲ್ಲದೆ ಮನಮೋಹನ ಸಿಂಗ್ ನೇತೃತ್ವದಲ್ಲಿ ಸರಕಾರ ರಚಿಸಲು ಯಾವ ನೈತಿಕತೆಯ ಪ್ರಶ್ನೆ ಅಡ್ಡಿ ಬರಲಿಲ್ಲ.
೨೦೦೮ ರಲ್ಲಿ ಎಡರಂಗ ಪಕ್ಷಗಳು ಅಣು ಒಪ್ಪಂದವನ್ನು ವಿರೋಧಿಸಿ ಸರಕಾರಕ್ಕೆ ನೀಡಿದ್ದ ಬೆಂಬಲವನ್ನು ಹಿಂದಕ್ಕೆ ಪಡೆಯುತ್ತದೆ. ಯುಪಿಎ ಸರಕಾರ ವಿಶ್ವಾಸಮತ ಯಾಚನೆ ಮಾಡಿದಾಗ ಬಹುಮತ ಪಡೆಯಲು ಹಣ ನೀಡಿ ಓಟು ಪಡೆದ ಗಂಭೀರ ಆರೋಪ ಎದುರಿಸುತ್ತದೆ.ಆಗ ಇವರಿಗೆ ಅದ್ಯಾಕೊ ಪ್ರಜಾಪ್ರಭುತ್ವ ಮೌಲ್ಯಗಳನ್ನು ಗೌರವಿಸಿ ರಾಜಿನಾಮೆ ಕೊಡಬೇಕು ಎಂದು ಅನ್ನಿಸುವುದೇ ಇಲ್ಲ. ೨೦೦೯ ರಲ್ಲಿ ನಡೆದ ಚುನಾವಣೆಯಲ್ಲಿಯೂ ಯುಪಿಎ ಗೆ ಪೂರ್ಣ ಬಹುಮತ ದೊರೆಯಲಿಲ್ಲ. ಆದರೆ ಈ ಬಾರಿ ಅದರ ಸ್ಥಿತಿಯು ಸುಧಾರಿಸಿ ಯುಪಿಎ ೨೬೨ ಸೀಟುಗಳನ್ನು ಗಳಿಸಿತ್ತು.
ಕಾಂಗ್ರೆಸ್ ಪಾರ್ಟಿ ಕೇವಲ ೨೦೬ ಸೀಟುಗಳಲ್ಲಿ ಜಯ ಸಾಧಿಸಿತ್ತು. ಈ ಬಾರಿಯು ಚುನಾವಣಾ ನಂತರದ ಹೊಂದಾಣಿಕೆಯಿಂದ ಸರಕಾರ ರಚನೆ ಮಾಡಬೇಕಾಯಿತು. ೨೦೦೯ರಲ್ಲಿ ಮನಮೋಹನ್ ಸಿಂಗ್ ರವರ ನೇತೃತ್ವದಲ್ಲಿ ಚುನಾವಣೆ ನಡೆದಿದ್ದರೂ ಗಾಂಧಿ ಕುಟುಂಬ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಅನುಮತಿಯನ್ನು ನೀಡುವುದಿಲ್ಲ. ಪಾಪ, ಸಿಂಗ್‌ರವರಿಗೆ ತಾವು ಲೋಕಸಭೆಗೆ ನಿಲ್ಲುತ್ತೇನೆ ಎಂದು ಗಟ್ಟಿಯಾಗಿ ಒತ್ತಾಯ ಮಾಡುವ ಧೈರ್ಯವು ಇರಲಿಲ್ಲ. ಸೋನಿಯಾರವರಿಗೆ ಚುನಾವಣೆಯ ಗೆಲುವಿನ ಶ್ರೇಯಸ್ಸು ಕೇವಲ ತಮ್ಮ ಕುಟುಂಬಕ್ಕೆ ಮಾತ್ರ ಸಲ್ಲಬೇಕು ಎಂದು ಮುನ್ನಚ್ಚರಿಕೆ ವಹಿಸಿರು ತ್ತಾರೆ.
೧೯೮೪ ನಂತರ ಕಾಂಗ್ರೆಸ್ ಪಾರ್ಟಿ ಒಮ್ಮೆಯೂ ಏಕಾಂಗಿಯಾಗಿ ಬಹುಮತ ಪಡೆಯಲು ಸಾಧ್ಯವಾಗಿಲ್ಲ. ೨೦೧೪ರಲ್ಲಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ೨೮೨ ಸೀಟುಗಳನ್ನು ಗೆಲ್ಲುವ ಮೂಲಕ ಹೊಸ ದಾಖಲೆಯನ್ನು ಬರೆಯಿತು. ಮತ್ತೇ ೨೦೧೯ ರಲ್ಲಿ ೩೦೩ ಸ್ಥಾನಗಳಿಸಿ ಸರಕಾರ ರಚಿಸಿತು. ಸ್ವತಃತನಗೆ ಬಹುಮತವಿದ್ದರು ಮಿತ್ರಪಕ್ಷಗಳೊಂದಿಗೆ ಸರಕಾರವನ್ನು ರಚನೆ ಮಾಡಿದ್ದರು.
೨೦೨೪ ರ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟ ರಚಿಸಿಕೊಂಡು ಚುನಾವಣೆಯನ್ನು ಎದುರಿಸಿದ್ದು. ಚುನಾವಣಾ ಪೂರ್ವ ಮೈತ್ರಿಕೂಟವು ೨೯೪ ಸ್ಥಾನಗಳಲ್ಲಿ ಜಯಭೇರಿ ಸಾಧಿಸಿದೆ ಇದಕ್ಕೆ ವ್ಯತಿರಿಕ್ತವಾಗಿ ಇಂಡಿಯಾ ಮೈತ್ರಿಕೂಟವು ಚುನಾವಣಾ ಪೂರ್ವ ಮೈತ್ರಿಯಲ್ಲಿ ಗೆದ್ದಿರುವುದು ಕೇವಲ ೨೦೨ಸ್ಥಾನಗಳು ಮಾತ್ರ. ಟಿಎಂಸಿ, ಪಶ್ಚಿಮ ಬಂಗಾಳದಲ್ಲಿ ಎಡಪಕ್ಷಗಳು ಕೇರಳದಲ್ಲಿ ಮತ್ತು ಆಮ್ ಆದ್ಮಿ ಪಾರ್ಟಿ ಪಂಜಾಬ್‌ನಲ್ಲಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿ ೩೨ ಸೀಟಿನಲ್ಲಿ ಜಯ ಸಾಧಿಸಿವೆ. ೧೯೯೬ ರಲ್ಲಿ ಮತ್ತು ೨೦೦೮ರಲ್ಲಿ ಬಹುಮತ ಖರೀದಿಸಿ ವಾಮ ಮಾರ್ಗದಲ್ಲಿ ಸರಕಾರ ಉಳಿಸಿಕೊಂಡ ಆರೋಪಹೊತ್ತಿರುವವರು ಇಂದು ಎನ್‌ಡಿಎ ಸರಕಾರಕ್ಕೆ ಬಹುಮತವಿಲ್ಲದೆ ಸರಕಾರ ರಚಿಸಿರುವುದು ಅನೈತಿಕ ನಡೆ ಎಂದು ಟೀಕಿಸುತ್ತಿರುವುದು ಇವರ ಡೋಂಗಿ ನೈತಿಕತೆಯ ರಾಜಕಾರಣಕ್ಕೆ ಕನ್ನಡಿ ಹಿಡಿದಿದೆ.
ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಪ್ರಚಾರ ಮಾಡುವವರು ಇಂದು ಚುನಾವಣೆಯಲ್ಲಿ ಪರಾಭವಗೊಂಡು ಹತಾಶೆಯಿಂದ ಹೊಸ ಸರಕಾರದ ಬಹುಮತವನ್ನು ಅಸಂಬದ್ಧ ವಾದದ ಮೂಲಕ ವಾಖ್ಯಾನಿಸುತ್ತಿರುವುದು ಕಾಂಗ್ರೆಸ್ ನಾಯಕರು ಸದಾ ಪಾಲಿಸುವ ಅನೂಕೂಲಕ್ಕೆ ತಕ್ಕ ನೀತಿಗೆ ಮತ್ತೊಂದು ಉದಾಹರಣೆಯಾಗಿದೆ.
(ಲೇಖಕರು: ಹವ್ಯಾಸಿ ಬರಹಗಾರರು)