ಅರಣ್ಯ ಇರಲಿ, ನೀರಿನ ಜಾಗ್ರತೆ ಪ್ರತಿ ಕ್ಷಣವೂ ಬರಲಿ
ವಿನುತಾ ಹೆಗಡೆ ಶಿರಸಿ
ವಿಶ್ವ ಅರಣ್ಯ ದಿನವನ್ನು ನಿನ್ನೆಯೇ ಆಚರಣೆ ಮಾಡಲಾಯ್ತು. ಇಂದು ವಿಶ್ವ ಜಲದಿನದ ಸರಣಿಯಷ್ಟೇ. ನಶಿಸುತ್ತಿರುವ ಅರಣ್ಯ ಹಾಗೂ ಕಲುಷಿತವಾಗುತ್ತಿರುವ ನೀರನ್ನೂ ನೋಡುತ್ತಿದ್ದರೆ ಎತ್ತಲೋ ಹರಿವ ನೀರನ್ನು ನಾವಿಂದು ಇನ್ನೆತ್ತಲೋ ಸಾಗಿಸುವ ನೆಪದಲ್ಲಿ ಅರಣ್ಯವನ್ನೂ ಕಡಿದು ಎಲ್ಲವನ್ನೂ ಬತ್ತಿಸುತ್ತಿದ್ದೇವೆ.
ಹಲವು ಯೋಜನೆಗಳ ದಳ್ಳುರಿಗೆ ಸಿಲುಕಿ ಇಳಿಮುಖವಾಗುತ್ತಿರುವ ಅರಣ್ಯ, ಕುಸಿತವಾಗುತ್ತಿರುವ ಅಂತರ್ಜಲ ಮಟ್ಟ, ಜತೆಗೆ ನದಿ ತಿರುವು ಯೋಜನೆಯ ಭೂತ. ಹೀಗೆ ಕಳವಳಕಾರಿ ಪರಿಸ್ಥಿತಿಯಲ್ಲಿ ವಿಶ್ವ ಅರಣ್ಯ ದಿನ ಹಾಗೂ ವಿಶ್ವ ಜಲ ದಿನ ನಮ್ಮೆದುರುಬಂದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ದಾಖಲೆಗಳಲ್ಲಿ ಶೇ.80ರಷ್ಟು ಅರಣ್ಯ ಇದೆ. ಅಂದರೆ ಜಿಲ್ಲೆಯ ಒಟ್ಟೂ ಭೂಭಾಗ 10.25 ಲಕ್ಷ ಹೆಕ್ಟೇರ್ ಆದರೆ, ಇದರಲ್ಲಿ ಅರಣ್ಯ ಭೂಮಿ 8.28 ಹೆಕ್ಟೇರ್ ಎನ್ನುವುದು ಹಳೆಯ ಲೆಕ್ಕಾಚಾರ.
ಸೀಬರ್ಡ್ ನೌಕಾನೆಲೆ, ಕೊಂಕಣ ರೇಲ್ವೆ, ಕದ್ರಾ, ಕೊಡಸಳ್ಳಿ, ಸುಪಾ, ಗೇರಸೊಪ್ಪ ಜಲ ವಿದ್ಯುತ್ ಯೋಜನೆಗಳು, ಕೈಗಾ ಅಣು ವಿದ್ಯುತ್ ಯೋಜನೆ. ಚತುಷ್ಪಥ ಕಾಮಗಾರಿ ಹೀಗೆ ವಿವಿಧ ಯೋಜನೆಗಳಿಗೆ ಸಾಕಷ್ಟು ಅರಣ್ಯ ಪ್ರದೇಶ ಬಲಿಯಾಗಿದೆ. ಯೋಜನೆಗಳು ಒಂದೊಂದಾಗಿ ಜಾರಿಯಾಗುತ್ತಲೇ ಇದೆ. ಉತ್ತರ ಕನ್ನಡದಲ್ಲಿ ನಾಶವಾದ ಅರಣ್ಯಕ್ಕೆ ಬದಲಿಯಾಗಿ ರಾಜ್ಯದ ಬೇರೆ ಯಾವುದೋ ಜಿಲ್ಲೆಯಲ್ಲಿ ಬೆಳೆಸಿದರೆ ಅದು ಉತ್ತರ ಕನ್ನಡದ ಲೆಕ್ಕಕ್ಕೆ ಸಿಗದು.
ಆದರೆ ಜಿಲ್ಲೆಯಲ್ಲಿ ಯೋಜನೆಗೆ ಅರಣ್ಯ ಬಲಿಯಾದಾಗಲೆಲ್ಲ ಇದೆ ಲೆಕ್ಕಾಚಾರವನ್ನು ಕೊಡಲಾಗುತ್ತಿದೆ. ಇದು ತಪ್ಪು ಎಂದು ಕೆಲವು ಪರಿಸರ ಪ್ರಿಯರು ವಾದಿಸುತ್ತಿದ್ದಾರೆ. ಆದರೆ ಅದ್ಯಾವ ಪರಿಸರ ಪ್ರಿಯರೂ ಅರಣ್ಯ ಸಂಪತ್ತನ್ನು ಬೆಳೆಸಲು ತಾವೇದಿನವೂ ಅರಣ್ಯ ಇಲಾಖೆಯ ಜತೆಗೂಡಿಯೋ ಅಥವಾ ರಸ್ತೆಯ ಬದಿಯಲ್ಲೋ ಗಿಡ ನೆಟ್ಟು ಮರ ಬೆಳೆಸಿದ ಉದಾರಣೆಯಂತೂ ಕಾಣೆವು. ಪ್ರತಿಭಟನೆ, ಮನವಿ, ಕೋರ್ಟು ಕಟಕಟೆಯಷ್ಟೇ ಕಾಣಿಸುತ್ತವೆ.
ಅಂತೆಯೇ ಅರಣ್ಯ ಅತಿಕ್ರಮಣ ಸಮಸ್ಯೆ ಇಲ್ಲಿ ಇನ್ನಷ್ಟು ಜ್ವಲಂತವಾಗಿದೆ. ಸೂರಿಗಾಗಿ ಅತಿಕ್ರಮಣ ಮಾಡಿಕೊಂಡವರ ಬಗ್ಗೆ ಎಲ್ಲರದ್ದೂ ಅನುಕಂಪ ಇದೆ. ಆದರೆ ವಿಸ್ತಾರವಾದ ಅರಣ್ಯ ಪ್ರದೇಶವನ್ನು ಅತಿಕ್ರಮಣ ಮಾಡಿಕೊಂಡಿರುವವರ ಮೇಲೆ ಅರಣ್ಯಇಲಾಖೆ ಅಧಿಕಾರಿಗಳಲ್ಲದೆ ಇತರರೂ ಕೆಂಗಣ್ಣು ಬೀರುತ್ತಿದ್ದಾರೆ. ಅತಿಕ್ರಮಣದಿಂದಾಗಿಯೂ ಅರಣ್ಯ ಭೂಮಿ ಕ್ಷೀಣಿಸುತ್ತಿದೆ. ಹಾಗಂತ ರಕ್ಷಣೆಯ ಭಾರವೂ, ಜವಾಬ್ದಾರಿಯು ಯಾರಲ್ಲಿಯೂ ಕಾಣಿಸುತ್ತಿಲ್ಲ.
ಜಿಲ್ಲೆಯಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬುಡಕಟ್ಟು, ಪಾರಂಪರಿಕ ಮತ್ತು ಸಮೂಹ ಉದ್ದೇಶಕ್ಕೆ ಅರ್ಜಿ ಸಲ್ಲಿಸಿದ್ದು ಬುಡಕಟ್ಟು 3569, ಪಾರಂಪರಿಕ 80.513, ಸಮೂಹ 2.991 ಅರ್ಜಿ ಒಳಗೊಂಡಿದೆ.
ಶಿರಸಿ ತಾಲೂಕಿನಲ್ಲಿ ಅತೀ ಹೆಚ್ಚು 15.321 ಅರ್ಜಿಗಳು ಬಂದಿದ್ದರೆ, ಹೊನ್ನಾವರದಲ್ಲಿ 12.453, ಸಿದ್ದಾಪುರದಲ್ಲಿ 10.860, ಯಲ್ಲಾ ಪುರದಲ್ಲಿ 9502, ಭಟ್ಕಳ 8.607, ಮುಂಡಗೋಡ 7104, ಕುಮಟಾ 6203, ಅಂಕೋಲಾ 5224, ಹಳಿಯಾಳ 4295, ಜೋಯಿಡಾ 4061, ಕಾರವಾರ 3443 ರಷ್ಟು ಅತಿಕ್ರಮಣದಾರರು ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ದಾಖಲಿಸಿದ್ದಾರೆ.
ಬದುಕುವ ಹಕ್ಕು ಎಲ್ಲರಿಗೂ ಇದೆ. ವಾಸ್ತವ್ಯಕ್ಕಾಗಿ ತುಂಡು ಭೂಮಿ ಅತಿಕ್ರಮಣ ಮಾಡಿದಲ್ಲಿ ಮಾನವೀಯ ದೃಷ್ಟಿಯಿಂದ ಅವರನ್ನು ಕಾಣಲೇಬೇಕು. ಆದರೆ ಇದರಿಂದ ಅರಣ್ಯ ಕ್ಷೀಣಿಸಿದ್ದೂ ಸುಳ್ಳೇನಲ್ಲ. ಅವರೆಲ್ಲ ಅತಿಕ್ರಮಿಸಿದಷ್ಟು ಅರಣ್ಯವನ್ನು ಬೆಳೆಸಲು ಅವರಿಗೇ ಪರವಾನಗಿ ನೀಡುವ ಹೊಸ ಯೋಜನೆಯಾದರೂ ಜಾರಿಯಾದರೆ ಒಳಿತು.
ಇನ್ನು ನೀರಿನ ವಿಷಯಕ್ಕೆ ಬರೋಣ.. ಮಲೆನಾಡು ಹಾಗೂ ಕರಾವಳಿ ಭೂಪ್ರದೇಶ ಜಿಲ್ಲೆಯಲ್ಲಿ ಇದ್ದರೂ ಬೇಸಿಗೆಯಲ್ಲಿ ನೀರಿಗೆ ತೀವ್ರ ಕೊರತೆ ಕಾಣಿಸುತ್ತಿದೆ. ಜಿಲ್ಲೆಯ ಬಹುತೇಕ ಜನತೆಗೆ ಇಲ್ಲಿ ಹರಿಯುವ ಪ್ರಮುಖ ನದಿಗಳೇ ಕುಡಿಯುವ ನೀರಿನ ಮೂಲ ಗಳಾಗಿವೆ. ಆದರೆ ಕಾಳಿ ನದಿ ನೀರನ್ನು ಬೆಳಗಾವಿ, ಬಾಗಲಕೋಟೆಗೆ ಒಯ್ಯಲು ನಿರಾಣಿ ಸಹೋದರರು ಪ್ರಯತ್ನ ಆರಂಭಿಸಿದ್ದಾರೆ.
ಇನ್ನೊಂದೆಡೆ ಬೇಡ್ತಿ, ವರದಾ ನದಿಗಳನ್ನು ಜೋಡಿಸಿ ಉತ್ತರ ಕರ್ನಾಟಕಕ್ಕೆ 22 ಟಿಎಂಸಿ ನೀರನ್ನು ಒಯ್ಯಲು ಸಮೀಕ್ಷೆ ನಡೆಸುವು ದಾಗಿ ರಾಜ್ಯ ಸರಕಾರವೇ ಬಜೆಟ್ ನಲ್ಲಿ ಹೇಳಿದೆ. ಆದರೆ ಬೇಸಿಗೆಯಲ್ಲಿ ಈ ನದಿಗಳ ಹರಿವ ನೀರಿನ ಪ್ರಮಾಣವೆಷ್ಟು ಎನ್ನುವ ಸನ್ಣ ಅಂದಾಜಿಗೂ ನಿಲುಕಲಿಲ್ಲವೇ ಈ ಯೋಜನೆಯ ಹುನ್ನಾರ..?
ಇಲ್ಲಿನ ನದಿಗಳ ನೀರನ್ನು ಜಿಲ್ಲೆಯ ಜನತೆಯ ಕುಡಿಯುವ ನೀರಿಗಾಗಿ ಹಾಗೂ ಕೃಷಿಗಾಗಿ ನೀರಾವರಿ ಯೋಜನೆ ರೂಪಿಸ ಬೇಕೆನ್ನು ವುದು ಬಹುಕಾಲದ ಆಗ್ರಹವಾಗಿದೆ. ಅಂತರ್ಜಲ ಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದೆ. ಹಲವು ಜೀವ ಜಲ ಕಾರ್ಯಪಡೆ ಗಳು ಸಕ್ರೀಯವಾಗಿ ನೀರಿನ ವೃದ್ಧಿಗಾಗಿ ಶ್ರಮಿಸುತ್ತಿದೆ. ಶ್ರಮಿಸುವ ಕೈಗಳಿಗೆ ಪ್ರೋತ್ಸಾಹದ ಕೈಗಳು ಕಡಿಮೆ ಇವೆ. ಕೆರೆಗಳಿಗೆ ಕಾಯಕಲ್ಪ ನೀಡಬೇಕಾಗಿದೆ. ಇಂಗು ಗುಂಡಿಗಳ ನಿರ್ಮಾಣವಾಗಬೇಕು.
ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ಕೆರೆಗಳ ಅಭಿವೃದ್ಧಿಪಡಿಸಿಕೊಂಡಂತೆ ಎಲ್ಲ ಊರು, ತಾಲೂಕುಗಳು ಕಾರ್ಯಪ್ರವೃತ್ತರಾಗ ಬೇಕಿದೆ. ಆಧುನಿಕ ಯುಗದಲ್ಲಿ ಯುದ್ಧ ನಡೆಯುವುದಿದ್ದರೆ ಅದು ನೀರಿಗಾಗಿ ಎಂದು ಪಾನೀಬಾಬಾ ಅಭಿಪ್ರಾಯ ಪಡು ತ್ತಾರೆ. ಕರ್ನಾಟಕ- ತಮಿಳುನಾಡು, ಕರ್ನಾಟಕ- ಗೋವಾ, ಕರ್ನಾಟಕ- ಮಹಾರಾಷ್ಟ್ರ ನಡುವೆ ನೀರಿಗಾಗಿ ಕಲಹ ನಡೆಯುತ್ತಿದೆ. ದೇಶ ದೇಶಗಳ ನಡುವೆಯೂ ಜಲಯುದ್ಧ ಆರಂಭವಾಗಿದೆ. ಭವಿಷ್ಯದಲ್ಲಿ ನೀರಿಗಾಗಿ ಹಾಹಾಕಾರ ಇನ್ನಷ್ಟು ಹೆಚ್ಚಲಿದೆ.
ಅಭಿವೃದ್ಧಿ ಹೆಸರಲ್ಲಿ ಕಳಚಿತೇ ಮುಖವಾಡ..?
ಆತ ಮತ್ತೆ ಮತ್ತೆ ತಲೆ ಎತ್ತಿ ತಿರುಗುತ್ತಿರುವ ಫ್ಯಾನ್ ನೋಡಿದ. ಮಗ ಕೇಳಿದ ಪ್ರಶ್ನೆಗೆ ಅವನಲ್ಲಿ ಉತ್ತರವಿರಲಿಲ್ಲ. ಎದುರಲ್ಲಿನ ಎಸಿ ಪಿಸಕ್ಕನೆ ನಕ್ಕುಬಾಯಿ ಮುಚ್ಚಿದಂತೆನಿಸಿತು. ಕುಳಿತ ಕುರ್ಚಿ ಸಹ ನಿಧಾನಕ್ಕೆ ಕುಸಿದಂತೆ ಭಾಸವಾಯ್ತು…!
ತಾನು ಈ ಊರಿನ ರಾಜಕಾರಣಿ ಎಂದು ಕೊಂಡು ಊರಿನ ಜನರೆಲ್ಲ ಕೇಳಿದಂತೆ ಕೊಡಿಸುವ, ಮಾಡಿಸುವ ಅಭಿವೃದ್ಧಿ ಹರಿಕಾರನಾಗಿದ್ದನಾತ. ಹಳ್ಳಿ ಹಳ್ಳಿಗಳಿಗೂ ಸಂಪರ್ಕ ಸೇತುಗಾಗಿ ಆತ ಶ್ರಮಿದ್ದು ನಿಜ. ಇತ್ತ ಅರಣ್ಯ ರೋಧನವು ಅವನ ಕಿವಿಗೆ ಬೀಳಲೇ ಇಲ್ಲ. ಏಕೆಂದರೆ ಅವು ಪ್ರತಿಭಟನೆ ನಡೆಸಲಿಲ್ಲ. ಮನವಿ ಕೊಡಲಿಲ್ಲ..ಪಕ್ಷ ತೊರೆಯುವ ಯಾವ ಬಂಡಾಯದಸೂಚನೆಯೂ ಅಲ್ಲಿರಲಿಲ್ಲ. ಸುಂದರ ಮಲೆನಾಡಲ್ಲಿ ಒಂದಲ್ಲ, ಎರಡಲ್ಲ ಹಲವಾರು ಯೋಜನೆಗಳು ತಲೆ ಎತ್ತಿ ತಮ್ಮಷ್ಟಕ್ಕೇತಾವು ಬೀಗುತ್ತಿದ್ದವು. ಅದರಡಿಯಲ್ಲಿ ಜನ ಜೀವನ ಮುದುಡಿ ಸಾಗಿದ್ದರ ಪರಿವೇ ಅದಕ್ಕಿರಲಿಲ್ಲ.
ಹಚ್ಚ ಹಸಿರಾಗಿದ್ದ ಪ್ರವಾಸಿಗರ ಸ್ವರ್ಗವಾಗಿದ್ದ ಮಲೆನಾಡೀಗ ಮದುವೆಯ ದಿನವೇ ಪತಿ ಕಳೆದುಕೊಂಡ ಸತಿಯಂತಾಗಿತ್ತು.ಹಳ್ಳಿಯ ಜನ ಪಂಚಾಯಿತಗಳ ಮೂಲಕ ರಸ್ತೆಯ ಬೇಡಿಕೆ, ಭವನಗಳ ಬೇಡಿಕೆ, ಅರಣ್ಯ ಅತಿಕ್ರಮಿಸಿದ ಮನೆಗಳ ಬೇಡಿಕೆ ಒಂದೇ ಎರಡೇ, ಜನಪ್ರತಿನಿಧಿಯಾದವನು ಎಲ್ಲವನ್ನೂ ನೋಡಿ ಕೊಡಿಸಲೇ ಬೇಕಲ್ಲ. ಮುಂದಿನ ಚುನಾವಣಾ ಫಲ ಇಂದಿನ ಕಾರ್ಯದ ಮೇಲೆ ನಿಂತಿರುವಾಗ ಊರು ಕೇರಿಯ ಜನರ ಎಲ್ಲ ಬೇಡಿಕೆಗೂ ಆತ ಸ್ಪಂದಿಸಲೇ ಬೇಕು. ಅಭಿವೃದ್ಧಿಯ ಹೆಸರಲ್ಲಿತ್ತು ಮತ್ತೆ ಮುಂದಿನ ಚುನಾವಣೆಯಲ್ಲಿಯ ಅಧಿಕಾರದ ಹಂಬಲ.
ಈಗ ಊರಿಗೆಲ್ಲ ಹಾದಿ,ರಸ್ತೆಯ ಕನಸು ಈಡೇರಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ತಪ್ಪನ್ನೆಲ್ಲ ಮುಚ್ಚಿಡಲು ರಾಜಕಾರಣಿ ಮೊರೆ ಹೋಗಿದ್ದರ ಫಲವಾಗಿ ಮನೆಯಲ್ಲಿ ಕಟ್ಟಿಗೆಯ ಕುರ್ಚಿ, ಮೇಜು, ಸೋಫಾ, ಡೈನಿಂಗ್ ಟೇಬಲ್ ಎಲ್ಲವೂ ಗಟ್ಟಿಯಾಗಿ ನೆಲೆಯೂರಿವೆ. ನಮ್ಮದೇ ನೆಲದ ಮರ ಕಡಿದು ನಮಗೇ ನೀಡುವ ಯಾವುದೋ ರಾಜ್ಯದ ಐಎಫ್ ಎಸ್ ಅಧಿಕಾರಿಗಳು ಎನ್ನುವ ಸಣ್ಣ ನೋವೂ ಇಲ್ಲ. ಅರಣ್ಯ ರಕ್ಷಣೆಗೆ ಬಂದವರಿಂದ ಇಂಥ ಉಡುಗೊರೆಯೇ ಎನ್ನುವ ಚಿಕ್ಕ ಮನಪ್ಲವನು ಇಲ್ಲ… ನಾನು ರಾಜಕಾರಣಿ ಊರುದ್ದಾರಕ ಎನ್ನುವ ಬಿಗುಮಾನವಷ್ಟೆೆ..ಎಲ್ಲೂ ಎಲ್ಲಿಯೂ ಕಳಚಿಕೊಳ್ಳಲಿಲ್ಲ ಮುಖವಾಡ.
ಇದೀಗ ಸಣ್ಣ ರಸ್ತೆಗಳೆಲ್ಲ ಹೋಗಿ ದೊಡ್ಡ ರಸ್ತೆಗಳಾಗಿ ಮತ್ತೂ ಹೋರಾಟಗಳ ಜತೆಗೆ ಹೆದ್ದಾರಿ ಸಿದ್ಧವಾಗುತ್ತಿದೆ. ರಾಜಕಾರಣಿಯ ಬೊಕ್ಕಸ ತಾನಾಗೇ ತುಂಬುತ್ತಿದೆ. ಹೆದ್ದಾರಿಯ ನೆಪದಲ್ಲಿ ಸಹಸ್ರಾರು ಮರಗಳು ಉರುಳುತ್ತಿವೆ. ಮಳೆ, ಉತ್ತಮ ಗಾಳಿ ಎಲ್ಲಿಯೋ ಯಾವಾಗಲೋ ಹೇಗೋ ಬರುತ್ತಿದೆ.
ಹಳ್ಳಿಗರ ಮಾತಲ್ಲಿ ಕಾಲ ಕೆಟ್ಟಿದೆ, ಕಲಿಯುಗದ ಮಹಿಮೆ, ದೇವ್ರನ್ನೇ ನಂಬೋಣ ಅವನಿಟ್ಟಂಗಾಗುತ್ತೆ ಎನ್ನುವ ಪ್ರಾರ್ಥನೆ.ಇತ್ತ ರಾಜಕಾರಣಿ ಅಸೆಂಬ್ಲಿ ನೆಪದಲ್ಲಿ ನಗರ ಸೇರಿದ್ದಾನೆ. ಮಕ್ಕಳು ಇಂಗ್ಲಿಷ್ ಶಾಲೆಯಲ್ಲಿ ಲಕ್ಷಗಟ್ಟಲೆ ಪೀಸ್ ತುಂಬಿ ಅಲ್ಲಿಯೇ ಕಲಿಯುತ್ತಿದ್ದಾರೆ.
ಶಾಲೆಯಲ್ಲಿ ಹೇಳಿಕೊಟ್ಟ ಪಾಠ ಮಕ್ಕಳ ತಲೆ ತಿನ್ನುತ್ತಿದೆ. ಮನೆಗೆ ಬಂದವರೇ ಅಪ್ಪನನ್ನು ಪ್ರಶ್ನಿಸಿದ್ದಾರೆ. ಅಪ್ಪ, ಮರಕಡಿದು ಅರಣ್ಯ ನಾಶಮಾಡಿದರೆ ಮಳೆ,ಬೆಳೆಯಾಗದು ಅಂತಾರೆ. ಆದ್ರೆ ನಮ್ ಮನೇನಲ್ಲೆಲ್ಲ ತುಂಬಾ ಕಟ್ಟಿಗೆಯ ಸಲಕರಣೆ, ಸಾಲದಕ್ಕೆ ಮನೆಯ ಅಂಕಣ, ಕಿಟಕಿ, ಏಣಿ ಎಲ್ಲವೂ ಮರದ್ದು. ನಿಮ್ ಆ ಹಳ್ಳಿ ಶಾಲೆಯಲ್ಲಿ ನಿಮಗೆ ಪಾಠ ಸರಿಯಾಗಿ ಮಾಡಿಲ್ಲವೇ ಅಪ್ಪ ? ಎನ್ನುವ ಪ್ರಶ್ನೆಗೆ ಆ ರಾಜಕಾರಣಿ ಏಸಿ, ಪ್ಯಾನ್ ಎಲ್ಲವೂ ಇದ್ದರೂ ಬೆವರಿಳಿದಿದ್ದ..ಅಭಿವೃದ್ದಿಯ ಹೆಸರಲ್ಲಿ ಹಳ್ಳಿ ಹಳ್ಳಿಗಳಅರಣ್ಯ ನಾಶವಾಗಿದ್ದು, ಜೇಬು ತುಂಬಿಸಿಕೊಂಡು ನಗರ ಸೇರಿದ್ದು.. ಆತನಿಗೆ ಕಟಕಟೆಯಲ್ಲಿ ನಿಂತಿದ್ದ ಅನುಭವ.
ಮುಂದಿನ ಪೀಳಿಗೆಯ ಮಕ್ಕಳು, ತನ್ನೂರಿನ ಅಗಲವಾದ ರಸ್ತೆಯಲ್ಲಿ ಬಿದ್ದಂತೆ ಭಾಸವಾಯ್ತು. .. ಎಚ್ಚರವಾದಾಗ ಆತ ಕಾಂಕ್ರೀಟ್ ನಿಂದ ಕೂಡಿದ ಕಟ್ಟಡದಲ್ಲಿ ಕೃತಕ ಉಸಿರಾಟದೊಂದಿಗೆ ಜೀವಂತವಿದ್ದ ಅಷ್ಟೇ… ಸರಕಾರದಿಂದಷ್ಟೇ ಅಲ್ಲ ಎಲ್ಲ ಮಾಲ್ಕೀಭೂಮಿಗಳಲ್ಲಿಯೂ ಇಂಗು ಗುಂಡಿಗಳ ನಿರ್ಮಾಣವಾಗಬೇಕು, ಬದು ನಿರ್ಮಾಣವಾಗಬೇಕು, ಮಳೆಕೊಯ್ಲು ಉತ್ತಮವಾಗಿ ನಿರ್ವಹಣೆಯಾಗಬೇಕು, ಅರಣ್ಯ ಪ್ರದೇಶದಲ್ಲಿಯೂ ಪ್ರಾಣಿಗಳಿಗಷ್ಟೇ ಅಲ್ಲದೇ ಮರಗಳೂ ಸಹ ನೀರುಣ್ಣುವ ಪರಿಸ್ಥಿತಿ ತರಬೇಕು.ಹರಿವ ನದಿಗಳ ಜೋಡಿಸಿ ಎತ್ತಲೋ ನೀರೊಯ್ಯುವ ಬದಲು ಇರುವಲ್ಲೇ ಅಭಿವೃದ್ಧಿಪಡಿಸಿ ಇರುವ ಮನೆನಾಡಲ್ಲೂ ಕರಡಾಗಿಸುವ ಯೋಜನೆಗೆ ಒಕ್ಕೂರಲ ಧಿಕ್ಕಾರ ವಿರಬೇಕು.
ನಿನ್ನೆ, ಇಂದು ನಾಳೆಗಳ ಬಗ್ಗೆ, ನೀರು, ಅರಣ್ಯದ ಬಗ್ಗೆ ಎಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಸುಡು ಬಿಸಿಲ ನಡುವೆ ನಿರಿಲ್ಲದೇ ಮಲೆನಾಡ ಜನರೂ ಬಾಯ್ಬಿಡುವ ಸ್ಥಿತಿ ನಿರ್ಮಾಣವಾಗದೇ ಇರದು. ಎಚ್ಚರಿಕೆಯ ಎಚ್ಚರದಲ್ಲೇ ಹೆಜ್ಜೆ ಇಡುವ ಸೂಕ್ಷ್ಮ ದಿನಗಳುಬರುತ್ತಿವೆ. ಅರಣ್ಯ ದಿನ ದಿನವೂ ಇರಲಿ, ನೀರಿನ ಜಾಗ್ರತೆ ಪ್ರತೀಕ್ಷಣವೂ ಬರಲಿ.