ರಾಷ್ಟ್ರಕಾರ್ಯಕ್ಕೆ ಪ್ರಾಣ ಅರ್ಪಿಸಿದ ವೀರರು ಅಮರರಾಗಲಿ
ಸ್ಮರಣೆ
ಕಿರಣಕುಮಾರ ವಿವೇಕವಂಶಿ
ಅದೊಂದು ಭರತಖಂಡದ ಸುವರ್ಣಯುಗ. ಇಡೀ ಭಾರತವೇ ತ್ಯಾಗಮಯ ಸಂಘರ್ಷಕ್ಕೆ ಸಿದ್ಧಗೊಂಡು ರಾಷ್ಟ್ರೀಯ ಹೋರಾಟರೂಪುಗೊಳ್ಳುತ್ತಿದ್ದಾಗ ತರುಣರ ಹಲವು ಗುಂಪುಗಳು ತಂತಮ್ಮದೆ ರೀತಿಯಲ್ಲಿ ಒಗ್ಗೂಡಿ ನ್ಯಾಯವೆನಿಸಿ ದ್ದನ್ನು ಮಾಡುತ್ತಾ ಹೋದರು. ಹೀಗೆ ಕ್ರಾಂತಿ ಮಾರ್ಗದಲ್ಲಿ ನಡೆದ ಚಂದ್ರಶೇಖರ್ ಆಜಾದ್ , ರಾಮ್‌ಪ್ರಸಾದ್ ಬಿಸ್ಮಿಲ, ಅಶಾಕ್ ಉಲ್ಲಾ ಖಾನ್, ಸೇರಿದಂತೆ ಅನೇಕ ಕ್ರಾಂತಿಕಾರಿಗಳೆ ಸೇರಿ ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ ಆರಂಭಿಸಿದರು.
ಅ ದು ಕಲೆ, ಸಾಹಿತ್ಯ, ತತ್ತ್ವಶಾಸ್ತ್ರ, ವಿಜ್ಞಾನ – ತಂತ್ರಜ್ಞಾನ, ಎಲ್ಲದರಲ್ಲೂ ಯುರೋಪ್ ಎಂಬ ಪಶ್ಚಿಮವು ಮೆರೆಯುತ್ತಿದ್ದ ಕಾಲ.ತನ್ನಲ್ಲಿ ಕೋಳಿ ಕೂಗಿದರಷ್ಟೇ ಜಗತ್ತಿಗೆ ಬೆಳಕಾಗುವುದು ಎಂದು ಭಾವಿಸಿದ್ದಷ್ಟೇ ಅಲ್ಲ, ಇಡೀ ಜಗತ್ತು ಹಾಗೆ ಭಾವಿಸಬೇಕು ಎಂದು ಒತ್ತಾಯಿಸುತ್ತಿದ್ದ ಕಾಲ. ಇಡೀ ಜಗತ್ತನ್ನು ತನ್ನ ಕಪಿಮುಷ್ಠಿಯಲ್ಲಿ ಇರಿಸಿಕೊಂಡು, ಮನ ಬಂದಂತೆ ಕೊಳ್ಳೆಹೊಡೆಯುತ್ತಿದ್ದ ಕಾಲ. ಭಾರತವೆಂಬ ಶ್ರೀಮಂತ ದೇಶ ಇಂತಹ ಲೂಟಿಕೋರ ಮಹತ್ವಾಕಾಂಕ್ಷಿಗಳ ಕೈಗೆ ಸಿಕ್ಕಿತು.
ವ್ಯಾಪಾರಕ್ಕಾಗಿ ಹಾಗೂ ಧರ್ಮ ಪ್ರಚಾರಕ್ಕಾಗಿ ಈ ನಾಡಿಗೆ ಕಾಲಿಟ್ಟ ಐರೋಪ್ಯರು ಇಲ್ಲಿನ ವೈಭವ, ಸಮೃದ್ಧ ಸಂಪತ್ತು, ರಾಜರ ಒಳ ಕಿತ್ತಾಟ ಹಾಗೂ ಅವಕಾಶಗಳನ್ನು ನೋಡಿ ರಾಜಕೀಯಕ್ಕೂ ಕೈ ಹಾಕಿ ಇ ನೆಲೆಯಾಗಿ, ಹೆಮ್ಮರವಾಗಿ ಬೆಳೆದರು. ಅಷ್ಟೇಆಗಿದ್ದರೆ ಪರವಾಗಿಲ್ಲ ನಮ್ಮವರನ್ನು ಗುಲಾಮರಾಗಿಸಿಕೊಂಡು ಲೂಟಿ ಮಾಡಿದರು. ಬಹುದೊಡ್ಡ ದಬ್ಬಾಳಿಕೆ ನಡೆಸಿದರು. ಈಗ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಾಗೂ ಅವರ ದಬ್ಬಾಳಿಕೆಯಿಂದ ಮುಕ್ತವಾಗಲು ಹೋರಾಟ ಆರಂಭವಾಯಿತು.
ಪಕ್ಷ, ಸಂಘ, ಸಂಘಟನೆಗಳ ಮೂಲಕ ಮಂದಗಾಮಿ ಹಾಗೂ ತೀವ್ರಗಾಮಿಗಳ ಪಡೆಗಳಾಗಿ ಹೋರಾಡಿದರು. ಇದರಲ್ಲಿ ಕ್ರಾಂತಿಕಾರಿಗಳಾಗಿ ಕೆಲವರು ರಕ್ತಕ್ಕೆ ರಕ್ತವೇ ಉತ್ತರ ಎಂದು ತಮ್ಮ ಪ್ರಾಣಾರ್ಪಣೆಗೈದರು. ಕುರುಡನಿಗೂ ದಾರಿ ಕಾಣುವಂತೆ ಬೆಳಗಿ, ಸ್ವಾತಂತ್ರ್ಯ ಜ್ಯೋತಿಯ ಕಿಚ್ಚು ಹೊತ್ತಿಸಿದರು. ಅವರಲ್ಲಿ ಪ್ರಮುಖರೆಂದರೆ ಚಂದ್ರಶೇಖರ್ ಆಜಾದ್, ಭಗತ್ ಸಿಂಗ್,ರಾಜಗುರು, ಸುಖದೇವ್ ಹಾಗೂ ಅವರ ಸಹಚರರು.
ಅದೊಂದು ಭರತಖಂಡದ ಸುವರ್ಣಯುಗ. ಇಡೀ ಭಾರತವೇ ತ್ಯಾಗಮಯ ಸಂಘರ್ಷಕ್ಕೆ ಸಿದ್ಧಗೊಂಡು ರಾಷ್ಟ್ರೀಯ ಹೋರಾಟರೂಪುಗೊಳ್ಳುತ್ತಿದ್ದಾಗ ತರುಣರ ಹಲವು ಗುಂಪುಗಳು ತಂತಮ್ಮದೆ ರೀತಿಯಲ್ಲಿ ಒಗ್ಗೂಡಿ ನ್ಯಾಯವೆನಿಸಿದ್ದನ್ನು ಮಾಡುತ್ತಾ ಹೋದರು. ಹೀಗೆ ಕ್ರಾಂತಿ ಮಾರ್ಗದಲ್ಲಿ ನಡೆದ ಚಂದ್ರಶೇಖರ್ ಆಜಾದ್, ರಾಮ್‌ಪ್ರಸಾದ್ ಬಿಸ್ಮಿಲ, ಅಶಾಕ್ ಉಲ್ಲಾ ಖಾನ್, ಸಚೀಂದ್ರನಾಥ ಸನ್ಯಾಲ್ ಸೇರಿದಂತೆ ಅನೇಕ ಕ್ರಾಂತಿಕಾರಿಗಳೆ ಸೇರಿ ಹಿಂದೂಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್ ಆರಂಭಿಸಿದರು.
ಸಂಘಟನಾತ್ಮಕ ಕಾರ್ಯಗಳಿಗೆ ಹಣ ಹೊಂದಿಸುವುದಕ್ಕಾಗಿ ಕಾಕೋರಿ ರೈಲು ದರೋಡೆ ಮಾಡಿ, ಬ್ರಿಟೀಷ್ ಬೊಕ್ಕಸವನ್ನು ಲೂಟಿ ಮಾಡಿದರು. ತತ್ಪರಿಣಾಮವಾಗಿ ಅಶಾಕ್ ಉಲ್ಲಾ ಖಾನ್, ರೋಶನ್ ಸಿಂಗ್, ರಾಂಪ್ರಸಾದ್ ಬಿಸ್ಮಿಲ, ರಾಜೇಂದ್ರ ಲಹಿರಿಯನ್ನು ನೇಣಿಗೆ ಹಾಕಿದರು. ಮೇರು ನಾಯಕರನ್ನು ಕಳೆದುಕೊಂಡರೂ ಚಂದ್ರಶೇಖರ ಆಜಾದ್ ಸಂಘಟನೆಯನ್ನು ಮುನ್ನಡೆಸಿದರು.
ಆಗಲೇ ಭಗತ್‌ಸಿಂಗ್, ಭಗವತಿಚರಣ, ಸುಖದೇವ್ ಮತ್ತಿತರ ಗೆಳೆಯರು ಆ ಸಂಘಟನೆ ಸೇರಿದರು. ಭಗತನಿಗೆ ಸೋಷಿಯಲಿಸಂತತ್ತ್ವದ ಮೇಲೆ ನಂಬಿಕೆ ಇರುವ ಕಾರಣಕ್ಕೆ ಆ ಸಂಘಟನೆಯ ಹೆಸರನ್ನು ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್ ಎಂದು ಬದಲಿಸಿದ. ಸಂಘಟನಾತ್ಮಕ ಚಟುವಟಿಕೆ ಜೋರಾಯಿತು. ಯುವಕರ ಹಾಗೂ ಶಾಲಾಮಕ್ಕಳ ನಡುವೆ ಭಗತ್ ಪಾದರಸದಂತೆ ಓಡಾಡಿ ಸಂಘಟಿಸುತ್ತಿದ್ದುದನ್ನು ನೋಡಿ ಬ್ರಿಟೀಷರು ತಮಗೆ ಮುಂದೊಮ್ಮೆಮುಳುವಾಗುವನೆಂದು ಭಾವಿಸಿ ಆತನ ಮೇಲೆ ಒಂದು ಕಣ್ಣಿರಿಸಿದ್ದರು.
೧೯೨೬ರಲ್ಲಿ ಲಾಹೋರಿನ ದಸರಾ ಉತ್ಸವದಲ್ಲಿ ಬಾಂಬ್ ಸ್ಫೋಟ ಸಂಭವಿಸಿತು. ಇದೇ ಸರಿಯಾದ ಸಮಯವೆಂದು ಭಗತ್‌ನನ್ನುಬಂಧಿಸಿ ಐದು ವಾರ ಜೈಲಿನಲ್ಲಿಡಲಾಯಿತು. ನಂತರ ಜುಲುಮಾನೆ ಕಟ್ಟಿಸಿಕೊಂಡು, ಷರತ್ತಿನೊಂದಿಗೆ ಬಿಡುಗಡೆ ಮಾಡಲಾಯಿತು.೧೯೨೮ರ ಅಕ್ಟೋಬರ್ ೩೦ರಂದು ಸೈಮನ್ ಆಯೋಗ ಭಾರತಕ್ಕೆ ಬರುವುದನ್ನು ವಿರೋಧಿಸಿ ದೇಶಾದ್ಯಂತ ಹರತಾಳ ಆಚರಿಸಲಾಯಿತು. ಲಾಲಾ ಲಜಪತ ರಾಯ್ ನೇತೃತ್ವದಲ್ಲಿ ಈ ಆಯೋಗ ಭಾರತದಲ್ಲಿ ಕಾಲಿಡದಂತೆ ಮರಳಿಸಲು ಮುಂಬೈನಲ್ಲಿ ಮೌನ ಪ್ರತಿಭಟನಾ ಮೆರವಣಿಗೆ ನಡೆಸಿತು.
ಭಾರಿ ಸಂಖ್ಯೆಯ ಜನ ಸೇರಿದ್ದರಿಂದ ಪೊಲೀಸರಿಗೆ ನಿಯಂತ್ರಿಸಲಾಗದೆ, ಅವರನ್ನು ಚದುರಿಸಲು ಹಿಂಸಾತ್ಮಕ ಚಟುವಟಿಕೆ ಆರಂಭವಾಯಿತು. ಈ ದೊಂಬಿಯಲ್ಲಿ ಹಿರಿಯ ಹೋರಾಟಗಾರ ಲಾಲಾ ಲಜಪತ್ ರಾಯರಿಗೆ ಬಲವಾದ ಹೊಡೆತ ಬಿದ್ದುನಿಧನರಾದರು. ಇದರಿಂದ ಕೆರಳಿ ಪ್ರತೀಕಾರ ತೀರಿಸಿಕೊಳ್ಳಲು ಭಗತ್ ಮತ್ತವನ ಗೆಳೆಯರು ನಿರ್ಧರಿಸಿದರು. ಕಾರಣನಾದ ಪೊಲೀಸ್ ಅಧಿಕಾರಿ ಸ್ಕಾಟ್‌ನ ಹತ್ಯೆಗೆ ಸಂಚು ರೂಪಿಸಿದರು.
ರೂಪಿಸಿದ ಯೋಜನೆಯ ಪ್ರಕಾರ ಜಯಗೋಪಾಲ ಗುರಿ ನಿರ್ಧರಿಸಿ ಸೂಚನೆ ಕೊಡಬೇಕು, ಭಗತ್ ಮತ್ತು ರಾಜಗುರು ಗುಂಡುಹಾರಿಸಬೇಕು, ಆಜಾದ್ ಮತ್ತು ಮಹಾವೀರ ಸಿಂಗ್ ತಪ್ಪಿಸಿಕೊಳ್ಳಲು ಸಹಕರಿಸಬೇಕು. ಅದನ್ನು ಕಾರ್ಯಗತಗೊಳಿಸುವಾಗ ತಪ್ಪಾಗಿ ಸ್ಯಾಂಡರ್ಸನ್ ನನ್ನು ಸ್ಕಾಟ್ ಎಂದು ಭಾವಿಸಿ ಜಯಗೋಪಾಲ ಕೊಟ್ಟ ಸೂಚನೆಗೆ ರಾಜಗುರು ಗುಂಡು ಹಾರಿಸಿಕೊಂದುಬಿಟ್ಟ. ತಪ್ಪಿಸಿಕೊಂಡು ಭೂಗತರಾದರು. ಭಗತ್ ಹಾಗೂ ಗೆಳೆಯರು ರೂಪಿಸಿದ್ದ ಸ್ಕಾಟ್ ಹತ್ಯೆ ಪ್ರಕರಣ ಕೊನೆಗೆ ಸ್ಯಾಂಡರ್ಸ್ ಹತ್ಯೆಯ ಪ್ರಕರಣವಾಗಿ ಲಾಹೋರ್ ಪಿತೂರಿ ಪ್ರಕರಣ ಎಂದು ನ್ಯಾಯಾಲಯದ ಕಡತಗಳಲ್ಲಿ ದಾಖಲಾಗಿ, ಅವರಗಲ್ಲುಶಿಕ್ಷೆಗೆ ಕಾರಣವಾಗಿ ಇತಿಹಾಸದಲ್ಲಿ ಸೇರಿಹೋಯಿತು.
ಲಾಹೋರ್ ಪಿತೂರಿಯ ಕೆಲ ದಿನಗಳ ನಂತರ ಭೂಗತ ಲೋಕದಿಂದ ಹೊರಬಂದು ಸಂಸತ್ತಿನಲ್ಲಿ ಬಾಂಬು ಹಾರಿಸಿ ದೇಶದ ಜನರ ಗಮನ ಸೆಳೆದು, ಕ್ರಾಂತಿಕಾರಿಗಳಿಗೆ ಪ್ರೇರಣೆ ನೀಡಿ ಈ ಮೂಲಕ ತಮ್ಮ ಚಿಂತನೆಗಳನ್ನು ಪ್ರಚಾರಗೊಳಿಸಲು ನಿರ್ಧರಿಸಿದರು.ಏಪ್ರಿಲ್ ೮, ೧೯೨೯ರಂದು ನಿರಪಾಯಕಾರಿಯಾದ ಬಾಂಬ್ ಹಿಡಿದು ಭಗತ್ ಹಾಗೂ ಬಟುಕೇಶ್ವರದತ್ತಾ ಸಂಸತ್ ಭವನದ ಒಳಹೋದರು. ಕಲಾಪ ನಡೆಯುತ್ತಿದ್ದಾಗ ಬಾಂಬ್ ಬಿಸಾಡಿದರು.
‘ಕಿವುಡನೂ ಕೇಳಿಸುವಂತೆ ಮಾಡಲು’ ಎಂಬ ಕರಪತ್ರ ಎಡೆ ತೂರಾಡುತ್ತಾ ‘ಸಾಮ್ರಾಜ್ಯಶಾಹಿಗೆ ಧಿಕ್ಕಾರ’, ‘ಕ್ರಾಂತಿಚಿರಾಯುವಾಗಲಿ’ ಎಂದು ಕೂಗಿ ಬಂಧನಕ್ಕೊಳಗಾದರು. ಅವರು ಬ್ರಿಟೀಷರ ವಿಚಾರಣೆಗೆ ಒಳಪಡುವ ಮೂಲ ಉದ್ದೇಶ ಕ್ರಾಂತಿಕಾರಿಗಳ ಆದರ್ಶ ಹಾಗೂ ಸಂದೇಶ ಹರಡುವುದು, ಬ್ರಿಟೀಷರ ಅಮಾನವೀಯ ನಡುವಳಿಕೆ ಹಾಗೂ ಕ್ರೌರ್ಯವನ್ನು ಜೈಲಿನಲ್ಲಿಯೇ ವಿರೋಧಿಸುವುದು, ಗಂಭೀರವಾಗಿ ಓದಿ ರಾಜಕೀಯವಾಗಿ ಹಾಗೂ ಸೈದ್ಧಾಂತಿಕವಾಗಿ ಸ್ಪಷ್ಟಗೊಳ್ಳುವುದಾಗಿತ್ತು. ಈ ಕ್ರಾಂತಿಕಾರಿಗಳು ಜೈಲು ಸೇರಿದ ನಂತರ ಆ ಕಾರ್ಯವನ್ನು ಅಚ್ಚುಕಟ್ಟಾಗಿಯೇ ಮಾಡಿದರಾದರೂ ಅನೇಕ ತೊಂದರೆಗಳನ್ನುಅನುಭವಿಸಬೇಕಾಯಿತು, ಅವರು ಅಂಜಲಿಲ್ಲ.
ಇತ್ತ ರಾಷ್ಟ್ರದಲ್ಲಿ ಹಲವಾರು ರಾಜಕೀಯ ಬೆಳವಣಿಗೆಗಳಾದವು. ಗಾಂಧೀಜಿಯವರಿಗೆ ಅವರನ್ನು ಗಲ್ಲಿಗೆ ಏರಿಸದಂತೆ ಮನವಿ ಮಾಡಲು ಕೋರಲಾಯಿತು. ಆದರೆ ಗಾಂಧೀಜಿ ಮನಸ್ಸು ಮಾಡಲಿಲ್ಲ. ಇತ್ತ ಭಗತ್ ತಂದೆ ಹಾಗೂ ಮದನ ಮೋಹನ ಮಾಳವೀಯರು ಬ್ರಿಟೀಷರಿಗೆ ಕ್ಷಮಾದಾನ ಪತ್ರ ಬರೆದರು, ಅದು ಭಗತನಿಗೆ ಇಷ್ಟವಾಗಲಿಲ್ಲ. ಗಲ್ಲು ಶಿಕ್ಷೆ ವಿರೋಧಿಸಿ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಯಿತು. ತೀವ್ರ ಹೋರಾಟಗಳು ಆರಂಭವಾದವು.
೧೯೩೧ರ ಮಾರ್ಚ್೨೪ರ ಬೆಳಗಿನಜಾವ ಗಲ್ಲಿಗೇರಿಸಲು ತೀರ್ಮಾನಿಸಿದ್ದ ಬ್ರಿಟೀಷರು ಹೋರಾಟ, ಹರತಾಳ ಹಾಗೂ ನೌಜವಾನ್ ಭಾರತ್ ಸಭಾದ ಮೆರವಣಿಗೆಗಳಿಗೆ ಹೆದರಿ, ಅವರನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದು೧೧ಗಂಟೆ ಮುಂಚೆ ಅಂದರೆ ಮಾರ್ಚ್೨೩ರ ರಾತ್ರಿ೭.೩೦ಕ್ಕೆ ಗಲ್ಲಿಗೇರಿಸಿತು. ಸಾವಿನ ನಂತರ ಮೃತ ದೇಹಗಳನ್ನೂ ಒದಗಿಸದೆ ತುಂಡುಗಳನ್ನಾಗಿ ಕತ್ತರಿಸಿ ಸಟ್ಲೆಜ್ ನದಿಯ ದಂಡೆಯ ಮೇಲೆ ಸುಡಲಾಯಿತಾದರೂ ಈ ಮಹಾಪುರುಷರ ಸಾವು ಸಾವಿರಾರು ಕ್ರಾಂತಿಕಾರಿಗಳು ಸ್ವಾತಂತ್ರ್ಯ ಯಜ್ಞದಲ್ಲಿ ಹವಿಸ್ಸಾಗಲು ಪ್ರೇರಣೆಯಾಯಿತು.
ಭಗತ್ ಮತ್ತವನ ಗೆಳೆಯರ ಕೆಲಸ ಅವರ ಕಾಲಕ್ಕೆ ಮುಗಿಯಲಿಲ್ಲ. ಆತ ಹೇಳಿದ ವ್ಯಕ್ತಿಯನ್ನು ನೀವು ಕೊಲ್ಲಬಹುದು. ಆದರೆ ಚಿಂತನೆಗಳನ್ನಲ್ಲ ಎಂದು. ಅದು ಸತ್ಯ, ಹೀಗಾಗಿಯೇ ಇಂದಿಗೂ ಆತನ ಚಿಂತನೆಗಳು ನಮ್ಮ ನಡುವೆ ಪ್ರಸ್ತುತವಾಗಿವೆ. ಅವನಕ್ರಾಂತಿ ಚಿರಾಯುವಾಗಲಿ ಎಂದ. ಅದರ ಅರ್ಥ ಸದಾ ರಕ್ತಭರಿತ ಕ್ರಾಂತಿ ನಡೆಸುವುದೆಂದಲ್ಲ ಅಥವಾ ಗುಟ್ಟಾಗಿ ಬಾಂಬಿನ ಫ್ಯಾಕ್ಟರಿ ನಡೆಸಬೇಕೆಂದಲ್ಲ. ಯಾವುದೇ ವ್ಯವಸ್ಥೆಗೆ ಕೆಲ ಸಮಯ ಕಳೆದ ನಂತರ ಜಡತ್ವ ಬರುತ್ತದೆ. ಅದನ್ನು ಓಡಿಸಲು ಕ್ರಾಂತಿನಿರಂತರ ನಡೆಯಬೇಕು. ಅದಕ್ಕೆ ಎಚ್ಚೆತ್ತು ತಾರುಣ್ಯ ಸದಾ ಹೋರಾಡಬೇಕು ಎಂದು.
ನನ್ನ ಬದುಕು ಒಂದು ಉನ್ನತ ಧ್ಯೇಯಕ್ಕೆ, ದೇಶದ ಸ್ವಾತಂತ್ರ್ಯಕ್ಕೆ ಮೀಸಲು. ಯಾವುದೇ ಲೌಕಿಕ ವಿಷಯಗಳೂ ನನ್ನನ್ನು ಆಮಿಷಗೊಳಿಸಲಾರವು ಎಂದು ನುಡಿದ ಭಗತ್ ನಮಗೆಲ್ಲ ರಾಷ್ಟ್ರಕಾರ್ಯಕ್ಕೆ ಪ್ರೇರಣೆಯಾಗಲಿ. ಜೀವ ಹೋಗುವಾಗಲೂ ಮೆರಾರಂಗದೇ ಬಸಂತಿ ಛೋಲಾ ಎಂದು ಹಾಡುತ್ತಾ ಪ್ರಾಣ ಅರ್ಪಿಸಿದ ಸುಖದೇವ್ ಮತ್ತು ರಾಜಗುರು ನಮಗೆ ಮಾದರಿಯಾಗಲಿ. ಉರುಳಿಗೆ ಚುಂಬಿಸಿ ಕೊರಳು ನೀಡಿ ಪ್ರಾಣ ತೆತ್ತರೂ ಬಿಟ್ಟುಕೊಡದ ಅವರ ಸ್ನೇಹ ನಮ್ಮೆಲ್ಲರ ದಾರಿದೀಪವಾಗಲಿ. ರಾಷ್ಟ್ರಕ್ಕಾಗಿಅವರ ತಾರುಣ್ಯದಲ್ಲಿನ ಜೀವಾರ್ಪಣೆ ದೇಶಭಕ್ತಿಯ ಚಿತ್ಕಾರವಾಗಲಿ. ಶಹೀದ್ ಭಗತ್ ಸಿಂಗ್, ರಾಜಗುರು, ಸುಖದೇವ ಅಮರವಾಗಲಿ.