ಎನ್‌ಇಪಿ: ಶಿಕ್ಷಣ ವ್ಯವಸ್ಥೆಯ ನಿರ್ಣಾಯಕ ಕ್ಷಣ
ಅವಲೋಕನ
ಪ್ರೊ.ವೈ.ಎಸ್.ಸಿದ್ದೇಗೌಡ
ಹತ್ತು ಟ್ರಿಲಿಯನ್ ಡಾಲರ್‌ಗಳ ಅಂದಾಜು ಜಿಡಿಪಿಯೊಂದಿಗೆ೨೦೩೦-೨೦೩೨ರ ವೇಳೆಗೆ ಭಾರತವು ವಿಶ್ವದ ಅತಿದೊಡ್ಡ ಆರ್ಥಿಕತೆ ಯಾಗಲಿದೆ ಎಂದು ಊಹಿಸಲಾಗಿದೆ. ಈ ಹತ್ತು ಟ್ರಿಲಿಯನ್ ಆರ್ಥಿಕತೆಯನ್ನು ದೇಶದ ನೈಸರ್ಗಿಕ ಸಂಪನ್ಮೂಲಗಳಿಂದ ಪಡೆಯದೆ, ಜ್ಞಾನ ಸಂಪನ್ಮೂಲಗಳಿಂದ ಪಡೆಯಬೇಕಾಗುತ್ತದೆ ಎಂಬುದನ್ನು ಈಗಾಗಲೇ ಪ್ರಾಯೋಗಿಕ ರಾಷ್ಟ್ರೀಯ ಶಿಕ್ಷಣ ನೀತಿಯು (ಎನ್‌ಇಪಿ) ಸ್ಪಷ್ಟಪಡಿಸಿದೆ.
ಈ ಉದ್ದೇಶದಿಂದಲೇ, ಎನ್‌ಇಪಿ೨೦೨೦ಪರಿಚಯಿಸಲ್ಪಟ್ಟಿದೆ. ಭಾರತವನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯವ ಸಲುವಾಗಿ ನಾಲ್ಕನೇ ಕೈಗಾರಿಕಾ ಕ್ರಾಂತಿಯನ್ನು ಸದುಪಯೋಗಪಡಿಸಿಕೊಳ್ಳಲು ಪ್ರಧಾನ ಮಂತ್ರಿಗಳು ಇತ್ತೀಚೆಗೆ ನೀಡಿದ ಕರೆಗೆ ಇದು ಪೂರಕ. ಈ ನೀತಿಯು ಭಾರತೀಯ ಶಿಕ್ಷಣ ವ್ಯವಸ್ಥೆಯ ಒಂದು ನಿರ್ಣಾಯಕ ಕ್ಷಣವಾಗಿದ್ದು, ನೇರ, ಸಮಗ್ರ ಮತ್ತು ದೊಡ್ಡ ಪ್ರಮಾಣದ ಪರಿವರ್ತನೀಯ ಶಿಕ್ಷಣದ ತಾರ್ಕಿಕ ಸುಧಾರಣೆಯಾಗಿದೆ.
ಈಗಿರುವ ಶಿಕ್ಷಣ ವ್ಯವಸ್ಥೆಯನ್ನು ಕೂಲಂಕಷವಾಗಿ ಪರಿಶೀಲಿಸುವ, ಸಮರ್ಥವಾಗಿ ರೂಪುಗೊಂಡಿರುವ ಶಿಕ್ಷಣ ನೀತಿಯು ಒಟ್ಟಾರೆ ವ್ಯವಸ್ಥೆಯ ಹೂರಣದಲ್ಲಿ ಪ್ರಾಯೋಗಿಕ ಬದಲಾವಣೆಯನ್ನು ತಂದಿದೆ. ಉನ್ನತ ಶಿಕ್ಷಣವನ್ನು ಹೆಚ್ಚು ಸಮಗ್ರಗೊಳಿ ಸುವ, ನಮ್ಯಗೊಳಿಸುವ, ಬಹುಶಿಸ್ತೀಯವಾಗಿಸುವ, ಐದು ವರ್ಷಗಳ ಪದವಿ ಕಾರ್ಯಕ್ರಮದ ವಿವಿಧ ಹಂತಗಳಲ್ಲಿ ನಿರ್ಗಮನಕ್ಕೆ ಅವಕಾಶ ನೀಡುವ, ಸಂಶೋಧನೆಯನ್ನು ಬಲಪಡಿಸುವ, ಬೋಧಕ ಬೆಂಬಲವನ್ನು ಹೆಚ್ಚಿಸುವ, ಅಂತಾರಾಷ್ಟ್ರೀಕರಣವನ್ನು ಬೆಂಬಲಿಸುವ ಮಹತ್ವಾಕಾಂಕ್ಷಿ ಯೋಜನೆಗಳನ್ನು ಎನ್‌ಇಪಿ-೨೦೨೦ಹೊಂದಿದೆ.
ಲಭ್ಯತೆ, ಸಮಾನತೆ, ಗುಣಮಟ್ಟ, ಕೈಗೆಟುಕುವಿಕೆ ಹಾಗೂ ಹೊಣೆಗಾರಿಕೆಯೆಂಬ ಆಧಾರ ಸ್ತಂಭಗಳ ಮೇಲೆ ಶಿಕ್ಷಣದಲ್ಲಿ ಮಾದರಿಬದಲಾವಣೆಯನ್ನು ತರಲು ಈ ನೀತಿಯು ಪ್ರಯತ್ನಿಸುತ್ತದೆ.೨೦೩೦ರ ಸುಸ್ಥಿರ ಅಭಿವೃದ್ಧಿಯ ಕಾರ್ಯಸೂಚಿಗೂ ಇದುಪೂರಕವಾಗಿದೆ. ಭಾರತವನ್ನು ಚಲನಶೀಲ ಜ್ಞಾನಸಮಾಜವಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ಭಾರತವನ್ನು ಜ್ಞಾನದ ಬಲಿಷ್ಠರಾಷ್ಟ್ರವಾಗಿ ಪರಿವರ್ತಿಸುವ ಉದ್ದೇಶವನ್ನು ಹೊಂದಿದೆ. ವಿದ್ಯಾರ್ಥಿಗಳ ಸಂಖ್ಯೆಯ ದೃಷ್ಟಿಯಿಂದ ಭಾರತವು ಈಗಾಗಲೇಜಗತ್ತಿನ ಮೂರನೇ ಅತಿದೊಡ್ಡ ದೇಶವಾಗಿ ಗುರುತಿಸಲ್ಪಟ್ಟಿದೆ.
ಚೀನಾ ಮತ್ತು ಅಮೆರಿಕ ಮೊದಲ ಎರಡು ಸ್ಥಾನಗಳಲ್ಲಿವೆ. ಈ ಮಹತ್ತರವಾದ ಮಾನವ ಸಂಪನ್ಮೂಲ ಸಾಮರ್ಥ್ಯವನ್ನುಕಾರ್ಯರೂಪಕ್ಕೆ ತರಲು ಈ ಕ್ರಿಯಾತ್ಮಕ ನೀತಿಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಅಗತ್ಯವಿದೆ. ರಾಷ್ಟ್ರೀಯ ಶಿಕ್ಷಣ ನೀತಿಯು ಶಿಕ್ಷಣವನ್ನು ಒಂದು ಸಾರ್ವಜನಿಕ ಸವಲತ್ತು ಎಂದೂ, ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯು ಒಂದು ಚಲನಶೀಲ ಪ್ರಜಾಪ್ರಭುತ್ವ ಸಮಾಜದ ತಳಹದಿಯೆಂದೂ ಪರಿಗಣಿಸುತ್ತದೆ.
ಸಾಂಸ್ಕೃತಿಕವಾಗಿ ಮತ್ತು ತಾಂತ್ರಿಕವಾಗಿ ರಾಷ್ಟ್ರಗಳ ನಿರ್ಮಾಣ ಮತ್ತು ಮಾನವೀಯ ಸಮಾಜದ ನಿರ್ಮಾಣ ಸಾರ್ವಜನಿಕ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ, ಚಿಂತನಶೀಲ, ಪರಿಪೂರ್ಣ ಹಾಗೂ ಸೃಜನಶೀಲ ವ್ಯಕಿತ್ವಗಳನ್ನು ಬೆಳೆಸುವುದು ಉನ್ನತ ಶಿಕ್ಷಣದ ಪ್ರಮುಖ ಗುರಿಯಾಗಿದೆ. ಉನ್ನತ ಶಿಕ್ಷಣ ಸಂಸ್ಥೆಗಳು ಸಮಗ್ರವಾದ ಮತ್ತು ಬಹುಶಿಸ್ತೀಯವಾದ ಗುಣಮಟ್ಟದ ಶಿಕ್ಷಣ ವನ್ನು ನೀಡಲಿದ್ದು, ತಮ್ಮ ಆಸಕ್ತಿಯ ಒಂದು ಅಥವಾ ಹೆಚ್ಚು ಕ್ಷೇತ್ರಗಳಲ್ಲಿ ಆಳವಾದ ಅಧ್ಯಯನವನ್ನು ಮಾಡಲು ವಿದ್ಯಾರ್ಥಿಗಳಿಗೆ ಅವಕಾಶವನ್ನು ಒದಗಿಸಲಿವೆ.
ಹಾಗೆಯೇ, ಚಾರಿತ್ರ್ಯ, ನೈತಿಕ ಹಾಗೂ ಸಂವಿಧಾನಾತ್ಮಕ ಮೌಲ್ಯಗಳು, ಬೌದ್ಧಿಕ ಕುತೂಹಲ, ವೈಜ್ಞಾನಿಕ ಮನೋಭಾವ, ಸೃಜನಶೀಲತೆ, ಸೇವಾ ಮನೋಭಾವ, ವಿಜ್ಞಾನ, ಸಮಾಜ ವಿಜ್ಞಾನ, ಕಲೆ, ಮಾನವಿಕಶಾಸಗಳು, ವೃತ್ತಿಪರ, ತಾಂತ್ರಿಕ ಹಾಗೂ ಔದ್ಯೋಗಿಕ ವಿಷಯಗಳಲ್ಲಿ೨೧ನೇ ಶತಮಾನ ಬಯಸುವ ಸಾಮರ್ಥ್ಯಗಳನ್ನು ಬೆಳೆಸಲು ಶ್ರಮಿಸಲಿವೆ.
ಸಂಶೋಧನೆಯ ಮಹತ್ವ ಮತ್ತು ಅದರ ಅನುಷ್ಠಾನ:ಇಂದಿನ ಜಗತ್ತಿನಲ್ಲಿ, ಸಂಶೋಧನೆ ಮತ್ತು ನಾವೀನ್ಯತೆಗಳುಒಂದು ರಾಷ್ಟ್ರದ ಶೈಕ್ಷಣಿಕ ಶಕ್ತಿಯ ತೋರುಗಂಬಗಳಾಗಿವೆ. ಸಂಶೋಧನೆಯಲ್ಲಿ ಗಮನಾರ್ಹವಾದ ಕೊಡುಗೆ ನೀಡಿ,ಮಾನವ ಬುದ್ಧಿಶಕ್ತಿಯ ಮಿತಿಯನ್ನು ವಿಸ್ತರಿಸುವ ಮೂಲಕ ಜಾಗತಿಕ ಶಿಕ್ಷಣರಂಗದ ಮೇಲೆ ಪ್ರಭಾವ ಬೀರಲು ಭಾರತಉದ್ದೇಶಿಸಿದೆ. ಆದ್ದರಿಂದ ಇಲ್ಲಿ ಸಂಶೋಧನೆ ಮತ್ತು ನಾವೀನ್ಯತೆಯನ್ನು ವೃದ್ಧಿಸುವ ದೃಢವಾದ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಪಡಿಸುವುದು ಅಗತ್ಯವೆನಿಸಿದೆ.
ಈ ನಿಟ್ಟಿನಲ್ಲಿ ಎನ್‌ಇಪಿ –೨೦೨೦ಸಂಶೋಧನೆಗೆ ಅನುಕೂಲವಾಗುವಂತೆ ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನವನ್ನು (ಎನ್‌ಆರ್‌ಎಫ್) ಸ್ಥಾಪಿಸಿದೆ. ಉನ್ನತ ಶಿಕ್ಷಣ ಸಂಸ್ಥೆಗಳು, ಸಂಶೋಧನಾ ಪ್ರಯೋಗಾಲಯ ಗಳು ಮತ್ತು ಇತರ ಸಂಶೋಧನಾ ಸಂಸ್ಥೆಗಳಲ್ಲಿ ಮಹತ್ವಪೂರ್ಣ ಸಂಶೋಧನ ಚಟುವಟಿಕೆಗಳು, ಚಲನಶೀಲ ಸಂಶೋಧನೆಯನ್ನು ಬೆಳೆಸುವುದಕ್ಕೆ ಇದು ಪುಷ್ಟಿ ನೀಡಲಿದೆ. ತಂತ್ರಜ್ಞಾನಾಧಾರಿತ ಸ್ಪರ್ಧಾತ್ಮಕ ಜಗತ್ತಿನಲ್ಲಿ ಉನ್ನತ ಮಟ್ಟದ ಸಂಶೋಧನೆ ನಡೆಸುವಲ್ಲಿ ಹಾಗೂ ವಿವಿಧ ಜ್ಞಾನಶಿಸ್ತುಗಳಲ್ಲಿ ಸಾಮರ್ಥ್ಯವನ್ನು ವಹಿಸುವಲ್ಲಿಎನ್‌ಆರ್‌ಎಫ್ನಿರ್ಣಾಯಕ ಪಾತ್ರ ವಹಿಸಲಿದೆ.
ಈ ನಿಟ್ಟಿನಲ್ಲಿ ಒಂದಷ್ಟು ಸಲಹೆಗಳ ಅನುಷ್ಠಾನ ಅನಿವಾರ್ಯ. ಎಲ್ಲಾ ಸಂಶೋಧನಾ ಚಟುವಟಿಕೆಗಳ ನಿಯಂತ್ರಣಕ್ಕೆ ಮತ್ತುಆಡಳಿತ ನಡೆಸುವುದಕ್ಕೆ ಎನ್‌ಆರ್‌ಎಫ್ಅನ್ನು ಪ್ರಮುಖ ಕೇಂದ್ರ ಧನಸಹಾಯ ಸಂಸ್ಥೆ ಎಂದು ಶಾಸನಬದ್ಧಗೊಳಿಸಬೇಕು.ಭಾರತದಲ್ಲಿನ ಸರಕಾರಿ ಸಂಸ್ಥೆಗಳೊಂದಿಗೆ ಮತ್ತು ಕೈಗಾರಿಕೆ, ಖಾಸಗಿ ಅಥವಾ ಸಮಾಜ ಸೇವಾ ಸಂಸ್ಥೆಗಳೊಂದಿಗೆ ನಿಕಟಸಂಪರ್ಕ ಹೊಂದಿ ಸಂಶೋಧನಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವುದಕ್ಕೆ ಎನ್‌ಆರ್‌ಎಫ್ಗೆ ಸಮರ್ಥ ಪ್ರಾಯೋಜನೆಒದಗಿಸುವ ಅಗತ್ಯವಿದೆ.
ಎಲ್ಲಾ ಪ್ರಾಯೋಜನಗಳನ್ನೂ ಒಂದೇ ವೇದಿಕೆಗೆ ತರುವ ಮೂಲಕ ಅನುದಾನ ಸಂಗ್ರಹದಲ್ಲಿ ಪ್ರಮುಖ ಪಾತ್ರ ನಿರ್ವಹಿಸಲು ಎನ್‌ಆರ್‌ಎಫ್ಪ್ರಯತ್ನಿಸಬೇಕು. ಪರಸ್ಪರ ಸಮಸ್ಯೆಗಳನ್ನು ಪರಿಹರಿಸಿಕೊಳ್ಳುವುದಕ್ಕಾಗಿ ವಿವಿಧ ಸಂಪರ್ಕಗಳು ಹಾಗೂ ಸಮುದಾಯಗಳ ಸಮಷ್ಟಿ ಬೌದ್ಧಿಕತೆಗಳನ್ನು ಕಲೆಹಾಕುವುದಕ್ಕೆ ಅದು ಮುಂದಾಗಬೇಕು. ಕ್ಯಾಂಪಸ್ ಮತ್ತು ಅದರ ಸುತ್ತಮುತ್ತಲಿನ ನಗರ ಪ್ರದೇಶಗಳನ್ನು ಸಂಶೋಧನೆ ಮೂಲಕ ನಾವೀನ್ಯತೆ ಮತ್ತು ಜ್ಞಾನಸೃಷ್ಟಿಗೆ ಪರೀಕ್ಷಾ ವೇದಿಕೆಗಳನ್ನಾಗಿ ಬಳಸಿಕೊಳ್ಳುವತ್ತ ಗಮನ ಹರಿಸಬೇಕು.
ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಸಂಶೋಧನಾ ಪರಿಶೋಧನೆ ಹಾಗೂ ಶ್ರೇಣೀಕರಣವನ್ನು ಜಾರಿಗೆ ತರುವ ಮೂಲಕ ಉನ್ನತಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಯ ಗುಣಮಟ್ಟವನ್ನು ಹೆಚ್ಚಿಸಬಹುದು. ಉತ್ಪಾದಕ ಸಂಶೋಧನೆಯನ್ನು ಪ್ರೋತ್ಸಾಹಿಸುವುದಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನ ಸಮ್ಮೇಳನಗಳು, ವಿನಿಮಯ ಕಾರ್ಯಕ್ರಮಗಳಿಗೆಉತ್ತೇಜನ ನೀಡುವುದು ಅಗತ್ಯವಾಗಿದೆ. ಕೇಂದ್ರ ಮತ್ತು ರಾಜ್ಯ ಸರಕಾರಗಳು ತಮ್ಮ ಆಯವ್ಯಯದಲ್ಲಿ ಸಂಶೋಧನೆಗಾಗಿ ನಿಗದಿತ ಹಣವನ್ನು ಮೀಸಲಿಡುವುದು ಅತೀ ಅಗತ್ಯವಾಗಿದೆ.
ಭಾರತದಲ್ಲಿ೨೦೦೮ರಲ್ಲಿ ಸಂಶೋಧನೆ ಮತ್ತು ನಾವೀನ್ಯತೆಗಳ ಮೇಲಿನ ಒಟ್ಟು ಹೂಡಿಕೆ ಜಿಡಿಪಿಯ ಶೇ೦.೮೪ಇದ್ದರೆ,೨೦೧೯ರಲ್ಲಿ ಅದು ಶೇ.೦.೭ಕ್ಕೆ ಇಳಿದಿದೆ. ಸಂಶೋಧನೆ ಮತ್ತು ಅಭಿವೃದ್ಧಿ ಕ್ಷೇತ್ರದಲ್ಲಿ ಇಂದು ಪ್ರತಿ ಮಿಲಿಯನ್ ಜನಸಂಖ್ಯೆಗೆ೨೫೩ಸಂಶೋಧಕರಷ್ಟೇ ಇದ್ದಾರೆ. ಎನ್‌ಆರ್‌ಎಫ್ ಸಂಶೋಧಕರು ಹಾಗೂ ಉದ್ಯಮದ ನಡುವಿನ ಸೇತುವಾಗಿ ಕಾರ್ಯನಿರ್ವಹಿಸಬೇಕು. ಇದು ನೀತಿ ನಿರೂಪಣೆಗೆ ಸಹಕಾರಿಯಾಗುತ್ತದೆ. ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳನ್ನುಉತ್ತೇಜಿಸುವುದಕ್ಕಾಗಿ ಒಂದು ಮೆರಿಟ್ – ಆಧಾರಿತ ವ್ಯವಸ್ಥೆಯ ಮುಖಾಂತರ ಸರಕಾರಿ ಸಂಶೋಧನ ಅನುದಾನಗಳಿಗೆ ನೇರಲಭ್ಯತೆಯನ್ನು ಒದಗಿಸಬೇಕು. ಅನುದಾನಗಳ ಹಂಚಿಕೆ ಮತ್ತು ಉಸ್ತುವಾರಿಗೆ ಸಂಬಂಧಿಸಿದಂತೆ ಎನ್‌ಆರ್‌ಎಫ್ ಮತ್ತು ಇದರಅನುದಾನ ಸಂಸ್ಥೆಗಳಾದ ಡಿಎಸ್‌ಟಿ, ಡಿಎಇ, ಐಸಿಎಆರ್, ಐಸಿಎಂಆರ್, ಐಸಿಎಚ್‌ಆರ್, ಯುಜಿಸಿ ನಡುವೆ ಪಾತ್ರಸ್ಪಷ್ಟತೆಯೂ ಇರಬೇಕು ಎಂಬುದನ್ನು ನಾವು ಗಮನಿಸಬೇಕಾಗುತ್ತದೆ.
ಎನ್‌ಆರ್‌ಎಫ್ನಿಂದ ಧನ ಸಹಾಯ ಪಡೆದ ಯೋಜನೆಗಳು ಸಂಶೋಧನೆಯ-ಲಿತಗಳಆಧಾರದಲ್ಲಿ ರಾಷ್ಟ್ರೀಯ ಸಂಶೋಧನಾ ಕ್ರೆಡಿಟ್ ಬ್ಯಾಂಕನ್ನು ರಚಿಸಲು ಬದ್ಧವಾಗಿರಬೇಕು. ಉನ್ನತ ಶಿಕ್ಷಣ ಸಂಸ್ಥೆಗಳ ಗ್ರಂಥಾಲಯಗಳನ್ನು ಡಿಜಿಟಲೀಕರಣ ಗೊಳಿಸುವ ಮೂಲಕ ಸಮಗ್ರ ರಾಷ್ಟ್ರೀಯ ಡಿಜಿಟಲ್ ಲೈಬ್ರರಿ ಸದಸ್ಯತ್ವವನ್ನು ಕಡ್ಡಾಯಗೊಳಿಸಬೇಕು. ಪುಸ್ತಕಗಳು, ನಿಯತಕಾಲಿಕೆಗಳು, ಪೇಟೆಂಟ್ ವಿವರಗಳು ಎಲ್ಲರಿಗೂ ಲಭ್ಯವಾಗಬೇಕು. ಈ ಮೂಲಕ ಗ್ರಂಥಾಲಯಗಳಲ್ಲಿ ಬಹು ಚಂದಾದಾರಿಕೆಯನ್ನು ತಪ್ಪಿಸಿ ಗ್ರಂಥಾಲಯ ಸಂಪನ್ಮೂಲಗಳ ಮೇಲಿನ ಸರಕಾರಿ ವೆಚ್ಚವನ್ನು ಕಡಿಮೆ ಮಾಡಬಹುದಾಗಿದೆ.
ಸುಸ್ಥಿರ ಗುಣಮಟ್ಟವನ್ನು ಕಾಪಾಡಿಕೊಳ್ಳಲು ಕಾಲೇಜು ಅಧ್ಯಾಪಕರು ಮುಕ್ತ ವಿದ್ವತ್ ಪತ್ರಿಕೆಗಳಲ್ಲಿ ಭಾರತ ಸರಕಾರದಿಂದಪಡೆದ ಕೃತಿಸ್ವಾಮ್ಯ ಪ್ರಮಾಣಪತ್ರಗಳು ಹಾಗೂ ಪ್ರಮುಖವಾಗಿ ಪೇಟೆಂಟ್ ಅನುಮತಿಗಳನ್ನು ಒಳಗೊಂಡ ಸಂಶೋಧನಪ್ರಬಂಧಗಳನ್ನು ಪ್ರಕಟಿಸುವುದನ್ನು ಪ್ರೋತ್ಸಾಹಿಸಬೇಕು.
ಸಂಶೋಧನ ಮಾರ್ಗದರ್ಶಕರ ಕೊರತೆ ಇರುವುದರಿಂದ, ನಿವೃತ್ತ ಪ್ರಾಧ್ಯಾಪಕರ ಸೇವೆಯನ್ನು ಈ ನಿಟ್ಟಿನಲ್ಲಿ ಬಳಸಿಕೊಳ್ಳಬೇಕು.ದಕ್ಷ ಸಂಶೋಧಕರನ್ನು ಸಂಶೋಧನ ಸಂಸ್ಥೆಗಳ ಮುಖ್ಯಸ್ಥರನ್ನಾಗಿ ನೇಮಿಸಬೇಕು. ಉದ್ಯಮ ತರಬೇತಿಯ ಆಧಾರದಲ್ಲಿವಿದ್ಯಾರ್ಥಿಗಳು ಸಂಶೋಧನೆಯನ್ನು ಕೈಗೊಳ್ಳಬೇಕು ಮತ್ತು ಪದವಿ ವಿದ್ಯಾಭ್ಯಾಸದ ಹಂತದಲ್ಲಿಯೇ ವಿದ್ವತ್ ಪ್ರಬಂಧಗಳನ್ನುಹಾಗೂ ಪೇಟೆಂಟ್‌ಗಳನ್ನು ಪ್ರಕಟಿಸಬೇಕು. ಎಲ್ಲಾ ವಿಶ್ವವಿದ್ಯಾಲಯಗಳು ತಮ್ಮದೇ ಆದ ಡಿಜಿಟಲ್ ಪ್ರಕಟಣೆ ಘಟಕಗಳನ್ನು ಪ್ರಾರಂಭಿಸಬೇಕು. ಉತ್ತಮ ಗುಣಮಟ್ಟವನ್ನು ಹೊಂದುವ ಸಲುವಾಗಿ ಜಾಗತಿಕ ಸೂಚ್ಯಂಕ ಸಂಸ್ಥೆಗಳಿಗೆ ಸಮನಾಗಿ ಸಂಶೋಧನೆ ನಡೆಸಬೇಕು.
ಸಂಶೋಧನ ವಿಶ್ವವಿದ್ಯಾನಿಲಯಗಳ ಅನುಷ್ಠಾನದ ಹಾದಿಗಳು:ಜಾಗತಿಕ ವಿಜ್ಞಾನದಲ್ಲಿ ಭಾಗವಹಿಸುವುದನ್ನುಪ್ರೋತ್ಸಾಹಿಸಲು ಆಯ್ದ ಕ್ಷೇತ್ರಗಳ ಬಲವರ್ಧನೆ ಮಾಡಲು ಪ್ರಾದೇಶಿಕ ಶೈಕ್ಷಣಿಕ ಒಕ್ಕೂಟಗಳನ್ನು ರೂಪಿಸುವುದು. ವೈಜ್ಞಾನಿಕ ಕ್ಷೇತ್ರಗಳಲ್ಲಾಗುವ ಬೆಳವಣಿಗೆಗಳನ್ನು ಅರ್ಥ ಮಾಡಿಕೊಳ್ಳಲು ವಿಜ್ಞಾನ ಮತ್ತು ವಿದ್ವತ್ತಿನ ಜಾಗತಿಕ ಶೈಕ್ಷಣಿಕ ವ್ಯವಸ್ಥೆಯೊಂದಿಗೆ ಸಂಪರ್ಕ ಸಾಧಿಸುವುದು. ವೈವಿಧ್ಯಮಯ ಉದ್ದೇಶಗಳು, ಸಂರಚನೆ ಮತ್ತು ಧನಸಹಾಯದ ವಿನ್ಯಾಸಗಳನ್ನು ಹೊಂದಿರುವ ಸಂಶೋಧನ ವಿಶ್ವವಿದ್ಯಾನಿಲಯ ಗಳಿಗಾಗಿ ವಿಭಿನ್ನವಾದ ಶೈಕ್ಷಣಿಕ ವ್ಯವಸ್ಥೆಯನ್ನು ರೂಪಿಸುವುದು.
ಉನ್ನತ ಶಿಕ್ಷಣದ ನೇತೃತ್ವ ವಹಿಸುವುದಕ್ಕಾಗಿ ವಿಶಿಷ್ಟ ಸಂಶೋಧನ ವಿಶ್ವವಿದ್ಯಾನಿಲಯದ ಸ್ಥಾಪನೆ. ಸಂಶೋಧನ ವಿವಿಗಳಿಗೆ ಧನಸಹಾಯ ಒದಗಿಸುವುದು ಮತ್ತು ಉತ್ತಮ ಆರ್ಥಿಕತೆಗಾಗಿ ಸಂಶೋಧನ ವಿಶ್ವವಿದ್ಯಾನಿಲಯಗಳನ್ನು ವಿಲೀನಗೊಳಿಸುವುದು. ಸಂಶೋಧನ ವಿಶ್ವವಿದ್ಯಾನಿಲಯಗಳಿಗೆ ಧನಸಹಾಯವು ಒಂದು ಸುಸ್ಥಿರ ನೆಲೆಯಲ್ಲಿ ನಡೆಯಬೇಕು. ಶುದ್ಧ ವಿಜ್ಞಾನಗಳಿಂದ ಸಮಾಜ ವಿಜ್ಞಾನಗಳು ಹಾಗೂ ಮಾನವಿಕ ಶಾಸಗಳನ್ನು ಹೊರಗಿಡಬೇಕು. ಧನಸಹಾಯ ಮೂಲಗಳ ಸಮತೂಕದ ಮಿಶ್ರಣ ಹಾಗೂ ಅದರ ನಿಯಂತ್ರಿತ ಹಂಚಿಕೆಯು ನವೀನ ಸಂಶೋಧನೆಗಳನ್ನು ಪ್ರೋತ್ಸಾಹಿಸುತ್ತದೆ.
ತಮ್ಮದೇ ಸ್ವತಂತ್ರ ಕಾರ್ಯಕ್ರಮಗಳನ್ನು ರೂಪಿಸಲು, ತಮ್ಮ ಬಜೆಟ್ ಹಾಗೂ ಶೈಕ್ಷಣಿಕ ಸಮುದಾಯವನ್ನು ನಿರ್ವಹಿಸಲು ಸಂಶೋಧನ ವಿಶ್ವವಿದ್ಯಾನಿಲಯಗಳಿಗೆ ಸ್ವಾಯತ್ತತೆಯ ಅಗತ್ಯವಿದೆ. ಬೋಧಕರು ಅತ್ಯುತ್ತಮ ತರಬೇತಿ ಪಡೆದಿದ್ದು ಸಂಶೋಧನೆ ಹಾಗೂ ವಿದ್ವತ್ತಿಗೆ ಬದ್ಧರಾಗಿರಬೇಕು. ಅಂತಾರಾಷ್ಟ್ರೀಯ ವೈಜ್ಞಾನಿಕ ಪ್ರವೃತ್ತಿಗಳನ್ನು ಬಳಸಿಕೊಂಡು ಸ್ಥಳೀಯ ಸಂಶೋಧನ ವಿಶ್ವವಿದ್ಯಾನಿಲಯಗಳು ಸ್ಥಳೀಯ ಅಗತ್ಯಗಳತ್ತ ಗಮನ ಹರಿಸಬೇಕು ಮತ್ತು ಆ ಮೂಲಕ ದೇಶೀ ಕೈಗಾರಿಕೆ, ಕೃಷಿ ಹಾಗೂ ಸಮಾಜದ ಬೆಳವಣಿಗೆಗೆ ಕೊಡುಗೆ ನೀಡಬೇಕು. ಸಂಶೋಧನ ವಿಶ್ವವಿದ್ಯಾನಿಲಯಗಳು ಸ್ಥಳೀಯ ಭಾಷೆಗಳಲ್ಲಿ ಸಂಶೋಧನ ಫಲಿತಾಂಶಗಳನ್ನು ಪಸರಿಸುವ ಹೊಣೆಗಾರಿಕೆ ವಹಿಸಿಕೊಳ್ಳಬೇಕು.
೨೧ನೇ ಶತಮಾನದ ಆರ್ಥಿಕತೆ ಮತ್ತು ಸಮಾಜಗಳು ಅಪೇಕ್ಷಿಸುವ ಕೌಶಲಗಳನ್ನು ಹಾಗೂ ಅತ್ಯುತ್ತಮ ಶೈಕ್ಷಣಿಕ ಮೌಲ್ಯಗಳನ್ನು ಸಂಶೋಧನ ವಿಶ್ವವಿದ್ಯಾನಿಲಯಗಳು ಒದಗಿಸಬೇಕು.
ಶಿಕ್ಷಣದ ಅಂತಾರಾಷ್ಟ್ರೀಕರಣ- ಅನುಷ್ಠಾನದ ಹೆಜ್ಜೆಗಳು:ಕಡಿಮೆ ವೆಚ್ಚದಲ್ಲಿ ಅತ್ಯುತ್ತಮ ಶಿಕ್ಷಣ ನೀಡುವ ಜಾಗತಿಕಸ್ಥಳವನ್ನಾಗಿ ಭಾರತವನ್ನು ಗುರುತಿಸಿಕೊಳ್ಳುವುದು ಶಿಕ್ಷಣದ ಅಂತಾರಾಷ್ಟ್ರೀಕರಣದೆಡೆಗಿನ ಸರಿಯಾದ ಹೆಜ್ಜೆಯಾಗಿದೆ.ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಭಾರತದ ವಿಶ್ವವಿದ್ಯಾನಿಲಯಗಳಿಗೆ ವಿದೇಶಗಳಲ್ಲಿ ತಮ್ಮ ಕ್ಯಾಂಪಸ್‌ಗಳನ್ನುತೆರೆಯಲು ಪ್ರೇರೇಪಿಸಿರುವುದು, ಜಗತ್ತಿನ೧೦೦ಶ್ರೇಷ್ಠ ವಿಶ್ವವಿದ್ಯಾನಿಲಯಗಳಿಗೆ ಭಾರತದಲ್ಲಿ ಕಾರ್ಯನಿರ್ವಹಿಸಲುಅವಕಾಶ ಮಾಡಿಕೊಟ್ಟಿರುವುದು ಪ್ರಶಂಸಾರ್ಹವಾಗಿದೆ.
ಆರಂಭದಲ್ಲಿ, ವೈವಿಧ್ಯಮಯ ಕಾರ್ಯಕ್ರಮಗಳನ್ನು ಒದಗಿಸುತ್ತಿರುವ ಲಾಭರಹಿತ ಸಂಸ್ಥೆಗಳು ಮಾತ್ರ ದೇಶದಲ್ಲಿ ಕ್ಯಾಂಪಸ್ ‌ಗಳನ್ನು ತೆರೆಯಲು ಸರಕಾರ ಅನುವು ಮಾಡಿಕೊಡಬೇಕು. ನೀಡಬಹುದಾದ ನಿರ್ದಿಷ್ಟ ಕೋರ್ಸುಗಳು, ವಿನಿಮಯ ಕಾರ್ಯಕ್ರಮಗಳು, ಮಾನ್ಯತೆ, ಅಂತಾರಾಷ್ಟ್ರೀಯ ಶಿಷ್ಯವೇತನಗಳು, ಅಂತಾರಾಷ್ಟ್ರೀಯ ಸಹಯೋಗ, ಧನಸಹಾಯ ಮತ್ತು ಸಂಪರ್ಕ ಚಟುವಟಿಕೆಗಳು ಇವನ್ನೆಲ್ಲ ಒಳಗೊಂಡಂತೆ ಒಟ್ಟಾರೆ ನೀತಿ ಸುಧಾರಣೆಗಳನ್ನು ತರುವುದಕ್ಕೆ ಕ್ರಮ ಕೈಗೊಳ್ಳಬೇಕು.ಅಂತಾರಾಷ್ಟ್ರೀಯ ಕ್ರೆಡಿಟ್ ಪದ್ಧತಿಯೊಂದಿಗೆ ಭಾರತದ ಕ್ರೆಡಿಟ್ ಪದ್ಧತಿಯನ್ನು ಸರಿಹೊಂದಿಸಲು ಮತ್ತು ಭಾರತೀಯ ಹಾಗೂಅಂತಾರಾಷ್ಟ್ರೀಯ ಕ್ರೆಡಿಟ್ ಪದ್ಧತಿಗಳ ನಡುವೆ ಕ್ರೆಡಿಟ್ ವರ್ಗಾವಣೆ ಸಾಧ್ಯವಾಗಿಸಲು ಕ್ರಮಗಳನ್ನು ಕೈಗೊಳ್ಳಬೇಕು.
ತಂತ್ರಜ್ಞಾನದ ಅಳವಡಿಸುವಿಕೆ:ಭವಿಷ್ಯಕ್ಕಾಗಿ ಯುವಜನರನ್ನು ಸಿದ್ಧಪಡಿಸುವಲ್ಲಿ ತಂತ್ರಜ್ಞಾನದ ಸದುಪಯೋಗ ಮಾಡಿಕೊಳ್ಳಲು ಶಿಕ್ಷಣ ನೀತಿಯು ಹೆಚ್ಚಿನ ಒತ್ತು ನೀಡಿದೆ. ಡಿಜಿಟಲ್ ಮೂಲಸೌಕರ್ಯಗಳನ್ನು ಬೆಂಬಲಿಸುವಂಥ ಮೂಲ ಸೌಕರ್ಯ ಗಳನ್ನು ಸುಧಾರಿಸುವ ನಿಟ್ಟಿನಲ್ಲಿ ಸರಕಾರ ಕೆಲಸ ಮಾಡಿದರೆ ಮಾತ್ರ ಈ ಉದಾತ್ತ ಪ್ರಯತ್ನವು ಯಶಸ್ವಿಯಾಗುತ್ತದೆ. ಏಕೆಂದರೆ ಬಹುತೇಕ ಗ್ರಾಮೀಣ ಶಿಕ್ಷಣ ಸಂಸ್ಥೆಗಳಲ್ಲಿ ಭೌತಿಕ ಬೋಧನೆ ಹಾಗೂ ಪ್ರಯೋಗಾಲಯಗಳ ನಡುವಿನ ಅಂತರವನ್ನುಒಂದುಮಾಡುವ ಡಿಜಿಟಲ್ ತರಗತಿ ಕೊಠಡಿಗಳು, ಪರಿಣಿತ ಬೋಧನಾ ಮಾದರಿಗಳು, ಧ್ವನಿಮುದ್ರಣ – ದೃಶ್ಯಮುದ್ರಣಉಪಕರಣಗಳ ಕೊರತೆಯಿದೆ.
ಗ್ರಾಮೀಣ ಪ್ರದೇಶಗಳಲ್ಲಿ ಅಂತರಜಾಲದ ಲಭ್ಯತೆ ಸುಲಭವಾದಾಗ ಮಾತ್ರ ವರ್ಚುವಲ್ ತರಗತಿಗಳ ಮೂಲಕ ಎಲ್ಲ ಸಾಮಾಜಿಕ ಗುಂಪುಗಳಿಗೆ ಮತ್ತು ಪ್ರದೇಶಗಳಿಗೆ ಶಿಕ್ಷಣವನ್ನು ಲಭ್ಯವಾಗಿಸುವ ಉನ್ನತ ಶಿಕ್ಷಣದ ವಿಸ್ತರಣೆಯ ಕಾರ್ಯತಂತ್ರ ಯಶಸ್ವಿಯಾಗು ತ್ತದೆ. ಮಾಹಿತಿ ಸಂವಹನ ತಂತ್ರಜ್ಞಾನದಲ್ಲಿ ಪ್ರಚಂಡ ಬೆಳವಣಿಗೆ ಆಗಿದ್ದರೂ ಡಿಜಿಟಲ್ ಕಲಿಕೆಯೆಂಬುದು ಒಂದು ದೊಡ್ಡ ಸವಾಲೇ ಆಗಿದೆ. ಭಾರತದಲ್ಲಿ ಇಂಟರ್ನೆಟ್‌ನ ಪಸರಿಸುವಿಕೆ ಇನ್ನೂ ಶೇ.೪೦ರಷ್ಟು ಮಾತ್ರ ಇದೆ. ಶಿಕ್ಷಣದ ಕುರಿತಾದ೨೦೧೭-೧೮ರ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಪ್ರಕಾರ,೫ರಿಂದ೨೪ವರ್ಷದೊಳಗಿನ ಸದಸ್ಯರಿರುವ ಭಾರತೀಯ ಕುಟುಂಬಗಳ ಪೈಕಿ ಶೇ.೮ರಷ್ಟು ಕುಟುಂಬಗಳಿಗೆ ಮಾತ್ರ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸಂಪರ್ಕ ಇದೆ.
ಕೇವಲ ಶೇ.೩೫ದಷ್ಟು ಮಹಿಳೆಯರು ಮಾತ್ರ ಇಂಟರ್ನೆಟ್ ಬಳಸುತ್ತಿದ್ದಾರೆ ಹಾಗೂ ಶೇ.೪೪ರಷ್ಟು ಮಹಿಳೆಯರು ಮಾತ್ರ ಮೊಬೈಲ್ ಫೋನ್ ಹೊಂದಿದ್ದಾರೆ ಎಂಬ ಅಂಶದ ಮೇಲೆ ಎನ್‌ಇಪಿ –೨೦೨೦ಹೆಚ್ಚಿನ ಒತ್ತು ನೀಡಿದೆ. ಡಿಜಿಟಲ್ ಸಾಕ್ಷರತೆ ಯನ್ನು ಹೆಚ್ಚಿಸಲು ಮಾರ್ಗಸೂಚಿಗಳ ಬಗ್ಗೆ ಶಿಕ್ಷಣ ನೀತಿ ಸ್ಪಷ್ಟವಾಗಿರಬೇಕು.೨೧ನೇ ಶತಮಾನದಲ್ಲಿ, ಇಂಟರ್ನೆಟ್ ಬಳಕೆಯ ಜ್ಞಾನವು ಓದು – ಬರಹದಷ್ಟೇ ಪ್ರಮುಖವಾದ ಒಂದು ಮೂಲಭೂತ ಮಾನವ ಹಕ್ಕಾಗಿ ಪರಿಗಣಿಸಲ್ಪಟ್ಟಿದೆ. ಶಿಕ್ಷಣ ನೀತಿಯು ಶಿಕ್ಷಣದಲ್ಲಿ ಡಿಜಿಟಲೀಕರಣದ ಬಗ್ಗೆ ಮಾತಾಡುತ್ತದೆ. ಆದರೆ ಪ್ರದೇಶಗಳು, ಜನಸಂಖ್ಯೆ ಹಾಗೂ ವರ್ಗಗಳ ನಡುವಿನ ಅಸಮಾನತೆ, ಮೂಲಸೌಕರ್ಯಗಳ ಅಭಿವೃದ್ಧಿಯಲ್ಲಿ ವಿಳಂಬ, ಬ್ಯಾಂಡ್‌ವಿಡ್ತ್ ಲಭ್ಯತೆ ಮೊದಲಾದ ಸವಾಲುಗಳನ್ನು ಪರಿಹರಿಸಬೇಕಿದೆ.
ಉಪಸಂಹಾರ:ಶಿಕ್ಷಣದ ಎಲ್ಲ ಹಂತಗಳಲ್ಲೂ ಆಮೂಲಾಗ್ರ ಬದಲಾವಣೆಯನ್ನು ತರುವ ಉದ್ದೇಶ ಹೊಂದಿರುವ ರಾಷ್ಟ್ರೀಯಶಿಕ್ಷಣ ನೀತಿ-೨೦೨೦ ನಿಜವಾಗಿಯೂ ದೂರದೃಷ್ಟಿಯಿಂದ ಕೂಡಿದೆ ಮತ್ತು ಸಮಗ್ರವಾಗಿದೆ. ಅದರ ಯಶಸ್ವಿ ಅನುಷ್ಠಾನವನ್ನುನಾವೆಲ್ಲರೂ ಹೆಮ್ಮೆ ಹಾಗೂ ಭರವಸೆಯಿಂದ ಎದುರು ನೋಡೋಣ.