ಮೀಸಲಾತಿ ಇಲ್ಲದೆಯೂ ದಲಿತೋದ್ದಾರ ಸಾಧ್ಯ
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್‌
ಹಾಫ್ ಮ್ಯಾರಥಾನ್ ಓಟದಮ್ಮೆ ಪಾಲ್ಗೊಂಡಿದ್ದೆ. ಜೆಸಿ ನಗರ ಎಂದು ಕರೆಯಲ್ಪಡುವ ಮುನಿರೆಡ್ಡಿ ಪಾಳ್ಯದಿಂದ ಹೊರಟು ಮೇಖ್ರಿ ವೃತ್ತದ ಮೂಲಕ ಬಳ್ಳಾರಿ ರಸ್ತೆ, ಕಬ್ಬನ್ ರಸ್ತೆ, ಟ್ರಿನಿಟಿ ವೃತ್ತ, ಮಿಲ್ಕ ಡೇರಿ, ಬ್ರಿಗೇಡ್ ರಸ್ತೆ, ಎಂಜಿ ರಸ್ತೆ, ಮುಂತಾದ ಭಾಗಗಳ ಮೂಲಕ ಓಡಿ ವಿಧಾನ ಸೌಧದ ಬಳಿ ಅಂತ್ಯವಾದ ರೇಸ್.
ಸಮರ್ಪವಾಗಿ ವ್ಯವಸ್ಥಿತ ವಾಗಿರಲಿಲ್ಲ. ಓಟಕ್ಕೆ ಮುಂಚೆ ಮೈಕ್‌ನಲ್ಲಿ ಮಾರ್ಗವನ್ನು ಸೂಚಿಸಲಾಯಿತು. ಆದರೆ ಮಾರ್ಗಮಧ್ಯ ದಲ್ಲಿ, ಹೇಳುವವರಿಲ್ಲ, ಕೇಳುವವರಿಲ್ಲ. ಪ್ರಥಮ ಚಿಕಿತ್ಸೆಯ ವ್ಯವಸ್ಥೆ ಇರಲಿಲ್ಲ. ಎಲೆಕ್ಟ್ರಾಲ, ನಿಂಬೆರಸ ಬಿಡಿ, ಕನಿಷ್ಠ ನೀರೂ ಇಲ್ಲ. ಕಬ್ಬನ್ ರಸ್ತೆ ಮುಟ್ಟುವಷ್ಟರಲ್ಲಿ ನನ್ನ ಹಿಂದೆ ಮುಂದೆ ಯಾರೂ ಕಾಣಲಿಲ್ಲ. ನಿತ್ಯ ಓಡಿ ಅಭ್ಯಾಸವಿತ್ತು, ಆ ಕಾರಣಕ್ಕೆ ನಾನು ತೀರಾ ಹಿಂದೆ ಬಿದ್ದಿರುವ ಸಾಧ್ಯತೆ ಇರಲಿಲ್ಲ. ಮಾರ್ಗದ ಬಗ್ಗೆ ಗೊಂದಲವಾಯಿತು.
ಹೇಗಿದ್ದರೂ ನಾನು ಗೆಲ್ಲುವ ಸಾಧ್ಯತೆ ಕಾಣುತ್ತಿಲ್ಲ. ಸ್ವಸಂತೋಷಕ್ಕೆ ಓಟವನ್ನು ಮುಗಿಸಬೇಕೆಂದು ಯಾವುದಕ್ಕೂ ಇರಲಿ ಎಂದು ಒಂದು ಕಿಮೀ ಹೆಚ್ಚೇ ಓಡಿದೆ. ವಿಧಾನ ಸೌಧ ತಲುಪುವ ವೇಳೆಗೆ ಬಹುಮಾನ ಸಮಾರಂಭ ಶುರುವಾಗಿತ್ತು. ಅಲ್ಲಿದ್ದ ಸ್ಪರ್ಧಿಯೊಬ್ಬರು ಯಾರೂ ರೇಸ್ ಪೂರ್ತಿ ಓಡ್ಲಿಲ್ಲ ಸಾರ್, ಗೆದ್ದೋರೆಲ್ಲ ಬೈಕ್ನಲ್ಲಿ ಡ್ರಾಪ್ ತಗೊಂಡ್ರು ಅಂದರು. ಮೇಲ್ವಿಚಾರಣೆ ಇಲ್ಲದ ಅವಕಾಶವನ್ನು ದುರ್ಬಳಕೆ ಮಾಡಿಕೊಂಡು ಬಹುಮಾನ ಪಡೆದರಲ್ಲ ಎಂದು ಬೇಸರವಾಯಿತು.
ನನಗೆ ಬಹುಮಾನ ಸಿಗುವ ಖಾತರಿ ಇರಲಿಲ್ಲ, ಆದರೆ ನನಗಿಂತ ಉತ್ತಮವಾದ ಓಟಗಾರರು ಬಹುಮಾನ ವಂಚಿತವಾದರಲ್ಲ ಎಂದು ಮನಸ್ಸು ಕಹಿಯಾಯಿತು. ದೇಶದಲ್ಲಿ ಇಂತಹ ವ್ಯವಸ್ಥೆಯನ್ನು ಮೀಸಲಾತಿ ಸೃಷ್ಟಿಸಿದೆ. ರೋಗಗ್ರಸ್ತ ಸ್ಪರ್ಧೆ ಎಂದರೆ ಇದೇ. ಸ್ಪರ್ಧೆ ಬೇಡ, ಏಕೆಂದರೆ ಅದು ಅನಾರೋಗ್ಯಕರ ಪೈಪೋಟಿಯನ್ನು ( ) ಸೃಷ್ಟಿಸುತ್ತದೆ. ಯಾವುದೇಕ್ಷೇತ್ರದಲ್ಲಿ ಔನ್ನತ್ಯವನ್ನು ಸಾಽಸಲಿಕ್ಕೆ ನಾವೇ ಒಂದು ಮಟ್ಟವನ್ನು ಗೊತ್ತುಮಾಡಿಕೊಂಡರೆ ಹೆಗ್ಗುರಿ ಸಾಕು ಎನ್ನುವ ಆದರ್ಶ ಸ್ಪರ್ಧೆಯಲ್ಲಿ ಗೆದ್ದ ನಂತರ ಹೇಳಿದರೆ ಚೆನ್ನ! ಬಹುಶಃ ಕಲಾ ರಂಗದಲ್ಲೂ ಓಕೆ. ದಿನನಿತ್ಯದ ಬದುಕಿನಲ್ಲಲ್ಲ.
ಸಾಧನೆಯ ಉತ್ತುಂಗಕ್ಕೇರಲು ಸೆಣಸಾಟ ಅತ್ಯಗತ್ಯ, ಇಲ್ಲದಿದ್ದಲ್ಲಿ ಭಾರತ ಕ್ರಿಕೆಟ್ ತಂಡ ಇಂಗ್ಲೆಂಡನ್ನು ಬಗ್ಗುಬಡಿಯಲಿಕ್ಕಾಗು ತ್ತಿರಲಿಲ್ಲ. ಭಾರತದ ಸೈನ್ಯ ವಿಶ್ವದ ಅತ್ಯುತ್ತಮ ಸೇನಾಪಡೆಗಳಲ್ಲಿ ಒಂದೆಂದು ಪ್ರಸಿದ್ಧಿ ಗಳಿಸುತ್ತಿರಲಿಲ್ಲ. ದೇಶ ಕೋವಿಡ್ ಲಸಿಕೆಯ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುತ್ತಿರಲಿಲ್ಲ. ಸ್ಪರ್ಧಾಜಗತ್ತಿನಲ್ಲಿ ಅಡ್ಡದಾರಿಯಿಂದ ಯಶಸ್ಸು ಗಳಿಸಲು ಅಸಾಧ್ಯ. ಕೃತ್ರಿಮವಾಗಿ ಗಳಿಸಿದರೆ, ಅದರಿಂದ ಗಳಿಸಿದವರ ಏಳಿಗೆಯಷ್ಟೆ ಸಾಧ್ಯ, ಸಮಾಜದ ಏಳಿಗೆಯಲ್ಲ.
ಹುಟ್ಟಿನಿಂದ ಯಾರೂ ಬ್ರಾಹ್ಮಣರಲ್ಲ – ಇದು ಅಪ್ಪಟ ಸತ್ಯ. ವಾಸ್ತವವಾಗಿ, ಹುಟ್ಟಿನಿಂದ ಯಾರೂ ಏನೂ ಅಲ್ಲ. ಅಂದ ಮೇಲೆ ಹುಟ್ಟಿನಿಂದ ಯಾರೇ ಹೇಗೆ ದಲಿತರಾಗುತ್ತಾರೆ? ಆಗಬೇಕು? ಯಾರು ಏನಾಗಬೇಕೆಂದು ಬಯಸುತ್ತಾರೊ ಅದಾಗಲು ಜಾತಿ ಎಂಬ ಅನುಚಿತ ಸೌಕರ್ಯ ಮಾನದಂಡವಾಗಬಾರದು. ಜಾತ್ಯತೀತತೆ ಅಪೇಕ್ಷಣೀಯ, ಆದರೆ ಅದನ್ನು ನಾನು ಜಾತಿ – ಮುಕ್ತ ಸಮಾಜ ವೆಂದು ಅರ್ಥೈಸಲಾರೆ. ಪ್ರತಿಭೆಯಾಗಲಿ, ಬುದ್ಧಿಮತ್ತೆಯಾಗಲಿ ಯಾವುದೇ ನಿರ್ದಿಷ್ಟ ಜಾತಿಮತಗಳ ಸ್ವಾಮ್ಯವಲ್ಲ. ಯಾವುದೇ ಪ್ರತಿಭಾವಂತರನ್ನು ಜಾತಿಯ ಕಾರಣಕ್ಕೆ ಪುರಸ್ಕರಿಸಬಾರದು, ತಿರಸ್ಕರಿಸಲೂಬಾರದು.
ಜಾಗತಿಕ ಮಟ್ಟದಲ್ಲಿ ದೇಶ ತನ್ನ ಪೂರ್ಣ ನಿಲುವಿನ ಎತ್ತರಕ್ಕೂ ನಿಲ್ಲಲು ಅದೊಂದೇ ಮಾರ್ಗ. ಮೀಸಲಾತಿಯಿಂದ ಇದು ಸಾಧ್ಯವಿಲ್ಲ. ಇದನ್ನು ಹೇಳಿದ ಮಾತ್ರಕ್ಕೆ ಯಾರೇ ದಲಿತ ವಿರೋಧಿಯಾಗಲಾರರು. ದಲಿತರನ್ನೂ ಸೇರಿದಂತೆ ಸಮಾಜದ ಸರ್ವಾಂಗೀಣ ಬೆಳವಣಿಗೆಗೆ ಮೀಸಲಾತಿ ಅಗತ್ಯವಿಲ್ಲ.
ಸದ್ಯದ ಸಾಮಾಜಿಕ – ರಾಜಕೀಯ ಪರಿಸ್ಥಿತಿಯಲ್ಲಿ ಸಾಂಕೇತಿಕತೆ () ಅನಿವಾರ್ಯವಲ್ಲದಿದ್ದರೂ ಅಗತ್ಯ. ಉದಾಹರಣೆಗೆ, ರಾಮನಾಥ್ ಕೋವಿಂದರನ್ನು ರಾಷ್ಟ್ರಪತಿಯಾಗಿ ಆಯ್ಕೆ ಮಾಡಿದ್ದು. ಅವರು ಆ ಸ್ಥಾನಕ್ಕೆ ಯೋಗ್ಯರು, ಹೌದು. ಅದೊಂದೇ ಕಾರಣಕ್ಕೆ ಅವರನ್ನು ರಾಷ್ಟ್ರದ ಮೊದಲ ಪ್ರಜೆಯಾಗಿ ಆಯ್ಕೆ ಮಾಡಬೇಕಿತ್ತು, ಅವರು ದಲಿತರೆನ್ನುವ ಕಾರಣಕ್ಕಲ್ಲ. ಇದೇ ಮಾತು ಅಬ್ದುಲ್ ಕಲಾಂರ ವಿಷಯದಲ್ಲಿ ಇನ್ನೂ ಒಪ್ಪುತ್ತದೆ. ಆದರೆ, ನಮ್ಮಲ್ಲಿ ಅಂದಿನಿಂದಲೂ ಅನುಸರಿಸಿಕೊಂಡುಬಂದಿರುವ ಓಲೈಕೆಸಂಪ್ರದಾಯ ಅಂತಹ ಉದಾತ್ತತೆಗೆ ಆಸ್ಪದ ಮಾಡಿಕೊಡುವುದಿಲ್ಲ.
ಇಡೀ ದೇಶವೇ ಆಕೆಯ ಹೆಸರನ್ನೂ ನೆನಪಿನಲ್ಲಿಟ್ಟುಕೊಳ್ಳದ ಒಂದು ಹೆಂಗಸೂ ರಾಷ್ಟ್ರಪತಿಯಾಗುವುದು ಆ ಕಾರಣಕ್ಕೆ. ಮಲ್ಲಿಕಾರ್ಜುನ ಖರ್ಗೆ ಮುಖ್ಯ ಮಂತ್ರಿಯಾಗಬೇಕೆಂದು ಕೆಲವರು ಹಂಬಲಿಸುವುದು ಅದೇ ಕಾರಣಕ್ಕೆ. ನನ್ನ ಆದರ್ಶ ವ್ಯವಸ್ಥೆ ಯಲ್ಲಿ ರಾಜ್ಯದ೨೨೪ವಿಧಾನ ಸಭಾ ಕ್ಷೇತ್ರಗಳಲ್ಲೂ ದಲಿತ ಅಭ್ಯರ್ಥಿಗಳು ಶಾಸಕರಾಗಿ ಆಯ್ಕೆಯಾದರೂ ರಾಜ್ಯದ ಸಮಸ್ತ ಜನತೆ ಕಮಕ್ ಕಿಮಿಕ್ ಎನ್ನಬಾರದು. ಇನ್ನೂ ಒಂದು ಹೆಜ್ಜೆ ಮುಂದುವರಿದು ಹೇಳುವುದಾದರೆ ಆ ಎಲ್ಲಾ ಅಭ್ಯರ್ಥಿಗಳೂ ಯೋಗ್ಯರು, ಸಮರ್ಥರು ಹಾಗೂ ಪ್ರಾಮಾಣಿಕರೆಂಬ ಕಾರಣಕ್ಕಾಗಿ ಚುನಾಯಿತರಾಗಬೇಕೇ ವಿನಃ ದಲಿತರೆಂದಲ್ಲ.
ಸದ್ಯದ ಪರಿಸ್ಥಿತಿಯಲ್ಲಿ ಅದಿನ್ನೂ ದೂರದ ಕನಸು. ಹಾಗಾಗಿ, ಮಹಾರಾಷ್ಟ್ರದ ಗೃಹಮಂತ್ರಿ ತಿಂಗಳಿಗೆ ನೂರುಕೋಟಿ ದಂಧೆಯ ಹಣವನ್ನು ವಸೂಲಿ ಮಾಡಿಕೊಡಲು ಪೊಲೀಸರಿಗೆ ಹೇಳುತ್ತಾರೆ. ಸಡಿಲುಗಚ್ಚೆಯ ವ್ಯಕ್ತಿಗಳು ನಾಯಕರಾಗುತ್ತಾರೆ. ಅವರಬ್ಬನನ್ನು ಮಾಧ್ಯಮವೂ ಸಾಹುಕಾರನೆಂದು ಸಂಬೋಧಿಸುತ್ತದೆ. ಮತ್ತಾರೊ ನಾಯಕ ಅಂತಹವರ ಬರಿಮೈಯನ್ನುಚಿತ್ರೀಕರಿಸಿ ಮಹಾನ್ ಎನಿಸಿಕೊಳ್ಳುತ್ತಾನೆ. ಇದೆಲ್ಲಕ್ಕೂ ಕಾರಣ ಮೀಸಲಾತಿ ಎಂಬ ಮಹಾಮಾರಿ. ಅದರೆದುರು ಕರೋನಾ ವೈರಸ್ ಕುಬ್ಜವಾಗುತ್ತದೆ. ಹೇಗೆನ್ನುತ್ತೀರೊ? ಜಗತ್ತೆಲ್ಲ ಕೋವಿಡ್ ಪ್ರಕೋಪಕ್ಕೆ ತುತ್ತಾಗಿ ನಲುಗುತ್ತಿರುವಾಗ ಈ ಚುನಾಯಿತ ನಾಯಕರ ಗಮನವೆಲ್ಲಿರಬೇಕು? ಎಲ್ಲಿದೆ? ಇವರಿಗೆ ಗೊತ್ತು, ಚುನಾವಣೆ ಗೆಲ್ಲಲು ಬೇಕಾದದ್ದು ಚಾರಿತ್ರ್ಯವಲ್ಲ, ಹಣದ ಥೈಲಿ ಮತ್ತು ಓಲೈಕೆ ತಂತ್ರ (ಮೀಸಲಾತಿ ಎಂಬ ಸಮ್ಮೋಹನಾಸ್ತ್ರ) ಎಂದು. ಜನರ ನಿರೀಕ್ಷೆಯಾದರೂ ಅಷ್ಟಕ್ಕೇ ಸೀಮಿತ.
ನಾಯಕನ ಪುಟಗೋಸಿ ಸ್ವಚ್ಛವಾಗಿದ್ದರೆ ಅವರಿಗೆ ಸಿಗುವುದಾದರೂ ಏನು? ದೇಶದ ಮೂಲದ್ರವ್ಯ ಉತ್ಪಾದಕತೆ. ಪ್ರತಿಯೊಬ್ಬ ಪ್ರಜೆಯೂ ಸಧೃಡನೂ, ಆರೋಗ್ಯವಂತನೂ, ಮೌಲ್ಯ ವಂತನೂ ಆಗಿ ರೂಪುಗೊಂಡಲ್ಲಿ ದೇಶ ಸಂಪದ್ಭರಿತವಾಗುವುದು.ಯಾವ ಠಕ್ಕ ನಾಯಕನೂ ತನ್ನ ಉಳಿವಿಗೋಸ್ಕರ ತನ್ನ ಎಂಜಲನ್ನು ಮತದಾರರಿಗೆ ತಿನ್ನಿಸುವಂಥ ದರಿದ್ರ ವ್ಯವಸ್ಥೆ ಇರುವುದಿಲ್ಲ. ಮತದಾರರಾದರೂ ಎಂಜಲಿಗೆ ತಮ್ಮನ್ನು ತಾವು ಮಾರಿಕೊಳ್ಳದ ಘನತೆ ಹೊಂದುತ್ತಾರೆ.
ಹಲವರ್ಷಗಳ ಹಿಂದೆ, ಹಿರಿಯ ಸ್ನೇಹಿತ ಸೌಂದರ್ಯ ರಾಜನ್ ಅವರ ಪರಿಚಯದವರೊಬ್ಬರು ತಮ್ಮ ಬಿಪಿಒನಲ್ಲಿ ಇಂಗ್ಲಿಷ್ಸಾಮರ್ಥ್ಯವುಳ್ಳ ದಲಿತ ಅಭ್ಯರ್ಥಿಗಳಿಗೆ ಉದ್ಯೋಗಾವಕಾಶ ಒದಗಿಸಲು ಉತ್ಸುಕರಿದ್ದು ಅಭ್ಯರ್ಥಿಗಳನ್ನು ಸೂಚಿಸಲು ನನ್ನನ್ನು ಕೋರಿಕೊಂಡರು. ಸಾಕಷ್ಟು ಹುಡುಕಾಟ ನಡೆಸಿ, ಇಬ್ಬರು ಹೆಣ್ಣುಮಕ್ಕಳು ಸಿಕ್ಕರು. ಇಬ್ಬರೂ ಇಂಗ್ಲಿಷ್ ಎಂಎ ಗಳಿಸಿದವರು. ಮುಗ್ಧತೆ ಇತ್ತು, ಸನ್ನಡತೆಯ ಹುಡುಗಿಯರೆಂದು ಮೇಲ್ನೋಟಕ್ಕೇ ತಿಳಿಯುತ್ತಿತ್ತು.
ಅವರಿಗೆ ನನ್ನ ಕಿಂಚಿತ್ ಸಹಾಯ ಮಾಡಲು ತವಕಿಸುತ್ತಿದ್ದೆ.  ಆದರೆ ಇಬ್ಬರೂ ಇಂಗ್ಲೀಷ್‌ನಲ್ಲಿ ಮಾತನಾಡಲು ತಡವರಿಸು ತ್ತಿದ್ದರು. ಈ ಪ್ರಸಂಗಕ್ಕೆ ಮುಂಚೆ, ಓರ್ವ ದಲಿತ ಅಭ್ಯರ್ಥಿಗೆ ಪಿಎಚ್‌ಡಿ ಪ್ರಬಂಧವನ್ನು ಸಿದ್ಧಗೊಳಿಸುವಲ್ಲಿ ನೆರವು ನೀಡುವಾಗ, ಸ್ಪೂನ್ ಫೀಡಿಂಗ್‌ನಲ್ಲಿ ನನಗೆ ವಿಶ್ವಾಸವಿಲ್ಲದಿದ್ದರೂ ಅಗತ್ಯಕ್ಕಿಂತ ಹೆಚ್ಚು ನೆರವು ನೀಡಿದ್ದೆ. ಆತನಿಗೆ ಪಿಎಚ್‌ಡಿ ಸಿಕ್ಕಿತಾದರೂ ಆತನೇ ಅದನ್ನು ಸಂಪೂರ್ಣ ಸ್ವಸಾಮರ್ಥ್ಯದಿಂದ ಗಳಿಸಿದ್ದರೆ ಆತನಿಗೆ ಹೆಮ್ಮೆ ಇರುತ್ತಿತ್ತು ಮತ್ತು ನನಗೂ ಸಮಾಧಾನ ವಿರುತ್ತಿತ್ತು.
ಅಗತ್ಯವಿರುವವರಿಗೆ ಮೀನು ಕೊಡುವುದಕ್ಕಿಂತಲೂ ಮೀನುಗಾರಿಕೆಯಲ್ಲಿ ತರಬೇತಿ ಕೊಡುವುದು ಒಳ್ಳೆಯದು ಎಂಬ ತತ್ತ್ವದಲ್ಲಿ ನನಗೆ ನಂಬಿಕೆ. ಆದರೂ ಈ ಹುಡುಗಿಯರಿಗೆ ನಾನೇ ಅರ್ಜಿ ಬರೆದುಕೊಡಲು ಸಿದ್ಧನಿರುವುದಾಗಿ ಹೇಳಿದೆ, ಆದರೆ ಸಂದರ್ಶನ ವನ್ನು ಅವರೇ ಎದುರಿಸಬೇಕೇ? ಈ ವಿದ್ಯಾರ್ಥಿನಿಯರನ್ನು ನಾನು ದೂರುತ್ತಿಲ್ಲ. ಸ್ನಾತಕೋತ್ತರ ಪದವಿ ಪಡೆದೂ ಸಾಧಾರಣಉದ್ಯೋಗವನ್ನೂ ಅವರು ಗಳಿಸಿಕೊಳ್ಳಲು ಅಸಮರ್ಥ ರಾಗುವಂತೆ ಮಾಡಿದ ವ್ಯವಸ್ಥೆಯನ್ನು ದೂರುತ್ತಿದ್ದೇನೆ.
ಇವರು ವ್ಯಾಸಂಗ ಮಾಡಿದ ಮೈಸೂರು ವಿಶ್ವವಿದ್ಯಾಲಯದಲ್ಲಿ ದೊಡ್ಡ ಸಂಖ್ಯೆಯಲ್ಲಿ ವಿದೇಶಿ ವಿದ್ಯಾರ್ಥಿಗಳಿದ್ದಾರೆ. ಮೂರ್ನಾಲ್ಕು ವರ್ಷಗಳ ಹಿಂದೆ,  ಅವರು ವಿಶ್ವವಿದ್ಯಾಲಯಕ್ಕೆ ದೂರೊಂದು ಸಲ್ಲಿಸಿದರು. ಏನೆಂದರೆ, ಅವರಿಗೆ ಪಾಠ ಮಾಡುವ ಅನೇಕ ಬೋಧಕರು ಇಂಗ್ಲಿಷ್ ಮಾತನಾಡುವುದಿಲ್ಲ. ಸಮಸ್ಯೆ ಬಗೆಹರಿಯಿತೋ ಇಲ್ಲವೊ ಕಾಣೆ, ಆದರೆ ಅದು ತಕ್ಷಣಕ್ಕೆ ಬಗೆಹರಿಯುವ ಸಮಸ್ಯೆಯಂತೂ ಅಲ್ಲ.
ನನ್ನ ಸೀಮಿತ ಒಡನಾಟದ ಅನುಭವದಲ್ಲಿ ಹೇಳುವುದಾದರೆ, ಇಲ್ಲಿರುವುದು ದಲಿತ – ದಲಿತೇತರ ಬಿರುಕಲ್ಲ. ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳೆಂಬ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳ ವಿಭಿನ್ನತೆಯಿಂದ ಮೂಡಿದ ಬಿರುಕು. ಇದು ವಿದ್ಯಾರ್ಥಿಗಳೇ ಕೈಜೋಡಿಸಿ ಮುಚ್ಚಬಹುದಾದಂಥ ಬಿರುಕು. ಆದರೆ ಆ ಬಿರುಕನ್ನು ಕಂದಕಗಳನ್ನಾಗಿಸುತ್ತಿರುವವರು ಬೋಧಕರು ಮತ್ತುರಾಜಕಾರಣಿಗಳು. ಸ್ನಾತಕೋತ್ತರ ಮಟ್ಟದಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳ ಜತೆ ಸ್ನೇಹಪರರಾಗುವುದಕ್ಕೆ ಹೆಚ್ಚಿನ ಅವಕಾಶ ವಿದೆ.
ಏಕೆಂದರೆ ವಿದ್ಯಾರ್ಥಿಗಳ ಸಂಖ್ಯೆ ನಿಭಾಯಿಸುವಷ್ಟು ಕಡಿಮೆ, ಶಾಲೆಗಳಲ್ಲಂತಲ್ಲ. ಆದರೆ, ಬಹುತೇಕ ಉಪನ್ಯಾಸಕರು ಇಂತಹ ಸದವಕಾಶವನ್ನು ವಿಶ್ವವಿದ್ಯಾಲಯದ ಏಳಿಗೆಗೆ ಬಳಸುತ್ತಿಲ್ಲ. ಹಾಗೆ ಮಾಡಬಲ್ಲ ಉದಾತ್ತ ಚಿಂತನೆಯೂ ಇಲ್ಲ. ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳ ನಡುವೆ ಸಾಮರಸ್ಯ ಮೂಡಿಸಿದಲ್ಲಿ ಅವರು ಪರಸ್ಪರ ಸಹಾಯ ಮಾಡಿಕೊಳ್ಳಬಲ್ಲರು. ಹೇಳಿಕೇಳಿನವಮಾಧ್ಯಮ ಅಂತಹ ಸಹಕಾರಕ್ಕೆ ಹೇಳಿಮಾಡಿಸಿದಂತಿದೆ.
ಬೋಧಕರು ಸೂರ್ತಿಯ ಕಿಡಿಯೊಂದನ್ನು ಹತ್ತಿಸಬೇಕಷ್ಟೆ. ವಿಭಿನ್ನ ಹಿನ್ನೆಲೆಯ ವಿದ್ಯಾರ್ಥಿಗಳ ನಡುವಿನ ದೂರಕ್ಕೆ ಇಂಗ್ಲಿಷ್ ಜ್ಞಾನದ ಅಭಾವ ಕೂಡ ಕಾರಣ. ಪಟ್ಟಣದ ವಿದ್ಯಾರ್ಥಿಗಳೆಲ್ಲರೂ ಪ್ರಬುದ್ಧವಾಗಿ ಇಂಗ್ಲಿಷ್ ಮಾತಾಡ ಬಲ್ಲರೆಂದಲ್ಲ. ಆದರೆ ಜೀನ್ಸ್‌ಧಾರಿ ಹುಡುಗ ಹುಡುಗಿಯರು ಸುಲಲಿತವಾಗಿ ಇಂಗ್ಲಿಷ್ ಮಾತಾಡುವುದನ್ನು ನೋಡಿಯೇ ಅವರಿಂದ ದೂರ ಉಳಿಯುವ ಗ್ರಾಮೀಣ ವಿದ್ಯಾರ್ಥಿಗಳನ್ನು ನಾನು ನೋಡಿದ್ದೇನೆ. ಆ ಇಂಗ್ಲಿಷ್, ಬಹುತೇಕ ಸಂದರ್ಭದಲ್ಲಿ ದೋಷಪೂರಿತವೇ ಆಗಿರುತ್ತದೆ ಎಂಬ ಅರಿವು ಮಾತನಾಡುವವರಿಗೂ, ಕೇಳುವವರಿಗೂ ಇರುವುದಿಲ್ಲ, ಆ ಮಾತು ಬೇರೆ! (ಅಂದ ಹಾಗೆ, ದಲಿತ ಸಮುದಾಯ ವನ್ನೂ ಸೇರಿದಂತೆ ಸಮಸ್ತ ಭಾರತೀಯರ ಕಳೆದುಹೋದ ಆತ್ಮವಿಶ್ವಾಸ, ಆತ್ಮಾಭಿಮಾನವನ್ನು ಮತ್ತೆ ದೊರಕಿಸಿಕೊಡುವಮತ್ತೆ ಇಂಗ್ಲಿಷ್ ಜ್ಞಾನವನ್ನು ವಿಸ್ತರಿಸುತ್ತಲೇ ಅದರ ಸುತ್ತ ನಮ್ಮ ಜನಗಳು ಬೆಳೆಸಿಕೊಂಡಿರುವ ದುರ್ವ್ಯಾಮೋಹವನ್ನುಹತ್ತಿಕ್ಕಲು ನಾನು ರೂಪಿಸಿರುವ ಯೋಜನೆಯನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದ್ದೇನೆ.) ಇದ್ದುದರಲ್ಲಿ ಉತ್ತಮ ಶಿಕ್ಷಣ ಪಡೆದ ಪಟ್ಟಣಿಗರು ತಮ್ಮ ಗ್ರಾಮೀಣ ಸಹಪಾಠಿಗಳಿಗೆ ಅದರ ಲಾಭವನ್ನು ಹಂಚಬಹುದು.
ಹಾಗಂತ, ಗ್ರಾಮೀಣ ವಿದ್ಯಾರ್ಥಿಗಳು ದಡ್ಡರಂತಲ್ಲ, ಗ್ರಾಮೀಣ ಪರಿಸರದಲ್ಲಿ ತಾವು ಪಡೆದ ಪಾರಂಪರಿಕ ಜ್ಞಾನವನ್ನು ಪ್ರತಿಯಾಗಿ ನಗರ ಮಿತ್ರರಿಗೆ ಧಾರೆ ಎರೆಯಬಹುದು. ಈ ನೀಡು – ಪಡೆಯ ಅನೌಪಚಾರಿಕ ಒಪ್ಪಂದಕ್ಕೆ ಫೇಸ್ಬುಕ್ ವಾಟ್ಸಾಪ್ ಮಾಧ್ಯಮಗಳು ಅತ್ಯಂತ ಸೂಕ್ತವಾಗಿವೆ. ಜ್ಞಾನಾರ್ಜನೆಯ ಜತೆಗೆ ಸ್ನೇಹಸಾಧನೆಯೂ ಸಾಧ್ಯವಾಗಿ ಸಮಾಜದಲ್ಲಿ ಸ್ವಾಸ್ಥ್ಯ ಮೂಡುತ್ತದೆ.