ಪರ್ವದ ಮೇಲೆ ಇಲ್ಲಸಲ್ಲದ ವಿವಾದ ಸಲ್ಲ
ಅಭಿಪ್ರಾಯ
ಪ್ರೊ.ಜಿ.ಎಲ್‌.ಶೇಖರ್‌
ಕೆಲವರು ಕೇವಲ ಮುಖಪುಟವನ್ನು ನೋಡಿ ಇಡೀ ಪುಸ್ತಕದ ಬಗ್ಗೆ ಮಾತನಾಡುವ ಹುಚ್ಚು ಬೆಳೆಸಿಕೊಂಡಿದ್ದರೆ, ಇನ್ನೂ ಕೆಲವರು ಮುಖಪುಟವನ್ನು ನೋಡದೇ ಮೂರ್ಖರಂತೆ ಮಾತನಾಡುತ್ತಾರೆ.
ಒಂದು ವೇದಿಕೆ ಸಿಕ್ಕರೆ ಸಾಕು, ಯಾವ ಸಂದರ್ಭದಲ್ಲಿ ಏನು ಹೇಳಬೇಕು ಎಂಬ ಪರಿಜ್ಞಾನವೂ ಇಲ್ಲದೆ ಪ್ರಚಾರ ಗಿಟ್ಟಿಸಲು ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಬನ್ನಿ! ಪುಸ್ತಕವನ್ನು ಚೆನ್ನಾಗಿ ಓದಿಕೊಳ್ಳಿ ಅಥವಾ ನಾಟಕವನ್ನು ಸಂಪೂರ್ಣವಾಗಿ ವೀಕ್ಷಿಸಿ. ನಂತರ ನಿಮ್ಮ ಅನುಭವ – ಅನಿಸಿಕೆಯನ್ನು ವಿಮರ್ಶಕವಾಗಿ ತಿಳಿಸಿ. ಯಥಾವತ್ತಾಗಿ ಬೇಜವಾಬ್ದಾರಿಯಾಗಿ ಮಾತನಾಡಿ ನಾಟಕ ನೋಡಿದ ಸಾವಿರಾರು ಜನರನ್ನು, ಬೇರೆ ಕೆಲಸವಿಲ್ಲದೆ ಗಂಟೆಗಟ್ಟಲೆ ಉದ್ದುದ್ದ ನಾಟಕ ನೋಡುತ್ತಾರೆ ಎಂಬ ಪೂರ್ವ ಗ್ರಹದ ಮಾತುಗಳನ್ನು ಆಡಬೇಡಿ.
ಭೈರಪ್ಪನವರ ’ಪರ್ವ’ ಕಾದಂಬರಿ ವ್ಯಾಸಭಾರತದ ಮರುಸೃಷ್ಟಿಯೇ? ಅದರ ವಿರುದ್ಧ ಬಂಡಾಯವೇ? ವ್ಯಾಸರು ಸೃಷ್ಟಿಸಿದ ಮಿಥ್‌ಗಳಲ್ಲಿ ಮುಳುಗಿ ಮರೆಯಾಗಿದ್ದ ಮಾನವ ಸ್ವಭಾವದ ಸತ್ಯಗಳ ಆವಿಷ್ಕಾರವೇ? ಎಂಬ ಹತ್ತು-ಹಲವಾರು ಪ ಶ್ನೆಗಳನ್ನು ಕಾಡುತ್ತಿರುವ ’ಪರ್ವ’ದಂತಹ ಮಹಾನ್ ಕೃತಿಯನ್ನು ರಂಗಪ್ರಯೋಗದ ಸಾಹಸಕ್ಕೆ ಮೈಸೂರಿನ ರಂಗಾಯಣ ಕೈ ಹಾಕಿದ ದಿನದಿಂದ ಕೆಲವರಿಂದ ಮತ್ಸರದ ಮಾತುಗಳು. ನಿಜ, ಮತ್ಸರಕ್ಕೆ ಮದ್ದಿಲ್ಲ!
ಭಾರಿ ಖರ್ಚಿನ ಬಿಜೆಪಿ, ಆರ್.ಎಸ್.ಎಸ್. ಕೃಪಾಪೋಷಿತ ನಾಟಕ ಅಂತಲೋ ಅಥವಾ ನಾಟಕ ಎಂದರೆ ಚಿಕ್ಕದಾಗಿ ಇರಬೇಕೆಂದಲೋ ಬೊಬ್ಬೆ ಹೊಡೆಯುತ್ತಾರೆ. ಈ ಜನ, ಸುಮಾರು೨೦೦೦ಕ್ಕೂ ಹೆಚ್ಚು ಪ್ರೇಕ್ಷಕರು ಮಾರ್ಚ್೧೨, ೧೩ಮತ್ತು೧೪ರಂದು ಮೈಸೂರಿನ ಕಲಾಮಂದಿರದಲ್ಲಿ ’ಪರ್ವ’ ನಾಟಕವನ್ನು ನೋಡಿ ಆನಂದಿಸಿದವರ ಜೊತೆ ತಾವು ಪಾಲ್ಗೊಂಡು ನಂತರ ನಾಟಕವನ್ನು ವಿಶ್ಲೇಷಿಸಬಹುದಿತ್ತು. ಮೂರು ದಿನವೂ ನಾಟಕ ಮುಗಿದ ನಂತರ ಅತ್ಯುತ್ತಮ ಅಭಿನಯ ನೀಡಿದ ಕಲಾವಿದರಿಗೆ ಪ್ರೇಕ್ಷಕರೆಲ್ಲರೂ ಎದ್ದು ನಿಂತಿ ಐದು ನಿಮಿಷಗಳ ಕಾಲ ಚಪ್ಪಾಳೆ ಮೂಲಕ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಬೆಂಗಳೂರು, ಹಾಸನ, ಮಂಡ್ಯ, ಚಿತ್ರದುರ್ಗ ಮತ್ತಿತರ ಊರುಗಳಿಂದ ಬಂದು ನಾಟಕ ನೋಡಿದ ಜನರು ಸುಮಾರು ಎಂಟು ಗಂಟೆಗಳ ನಾಟಕವಾದರೂ ‘ನಾಟಕ ಅಭೂತಪೂರ್ವ ಅನುಭವ ತಂದಿದೆ” ಎಂದಿದ್ದಾರೆ.೬೦೦ಕ್ಕೂ ಹೆಚ್ಚು ಪುಟಗಳಿರುವ ’ಪರ್ವ’ ಬೃಹತ್ ಕಾದಂಬರಿಯನ್ನು ದೀರ್ಘಾವಽ ನಾಟಕವೆಂದು ರಂಗಾಯಣ ವಿನ್ಯಾಸಗೊಳಿಸಿದೆ. ಬಹುಶಃ ಕುವೆಂಪುರವರ ’ರಾಮಾಯಣ ದರ್ಶನಂ’ ಮತ್ತು ’ಮಲೆಗಳಲ್ಲಿ ಮದುಮಗಳು’ ರಂಗಪ್ರಯೋಗದಿಂದ ಪ್ರೇರಣೆಗೊಂಡಿರಬಹುದು.
ಹಾಗಾಗಿ ’ಪರ್ವ’ ನಾಟಕವೂ ಒಂದು ಮಹಾಪ್ರಯೋಗ. ದೀರ್ಘಾವಧಿ ನಾಟಕವಾದರೂ ಪ್ರೇಕ್ಷಕರನ್ನು ಹಿಡಿದಿಡುವ ಶಕ್ತಿ ಇರಬೇಕು ಎಂಬುದು ನಿರ್ದೇಶಕ ಪ್ರಕಾಶ್ ಬೆಳವಾಡಿ ಅವರು ನಿಲುವು. ಅವರು ಗೆದ್ದಿದ್ದಾರೆ. ಇನ್ನು ಕರ್ನಾಟಕ ಸರಕಾರ ’ಪರ್ವ’ ನಾಟಕಕ್ಕೆ ಒಂದು ಕೋಟಿ ರುಪಾಯಿ ಅನುದಾನ ಕೊಡುತ್ತಿರುವುದಕ್ಕೂ ಮತ್ಸರದ ಮಾತು. ರಂಗಭೂಮಿ ಬೆಳೆಯಲಿ ಎಂದು ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಹಲವಾರು ವರ್ಷಗಳಿಂದ ಯಾವುದೇ ಪಕ್ಷದ ಸರ್ಕಾರವಿದ್ದರೂ ಧನ ಸಹಾಯ ಕೊಡುತ್ತಾ ಬಂದಿದೆ.
ವಿಶೇಷವಾಗಿ ಕುವೆಂಪುರವರ ನಾಟಕಗಳಿಗೆ. ಇಲ್ಲಿ ಬಿಜೆಪಿ/ಆರ್.ಎಸ್.ಎಸ್. ಅಥವಾ ಇನ್ನಾವುದೇ ಪಕ್ಷ ಎಂಬುದು ಎಲ್ಲಿಂದ ಬಂತು? ಧನ ಸಹಾಯ ಆಧಾರ್ ಸಬ್ಸಿಡಿ ಪಡೆದು ’’’ ಚಿತ್ರಗಳನ್ನು ತಯಾರು ಮಾಡಿಲ್ಲವೇ? ದೊಡ್ಡ ಮನಸ್ಸಿನಿಂದ ಸರಕಾರದ ವತಿಯಿಂದ ನಡೆಯುವ ಈ ರೀತಿಯ ಪ್ರೋತ್ಸಾಹವನ್ನು ಶ್ಲಾಘಿಸಬೇಕೇ ವಿನಃ ಕುಚೋದ್ಯ ಮಾತುಗಳನ್ನಾಡಬಾರದು.’ಪರ್ವ’ ಅದ್ಭುತ ನಾಟಕವೆಂದು ಜನ ತೀರ್ಮಾನ ಮಾಡಿದ್ದಾರೆ.
ಉದಾಹರಣೆಗೆ ನಾಟಕವನ್ನು ನೋಡಿದವರೊಬ್ಬರು ಹೀಗೆಂದು ವಿಶ್ಲೇಷಿಸಿದ್ದಾರೆ. ‘ಮೈಸೂರಿನ ಕಲಾಮಂದಿರದಲ್ಲಿ ಸುಮಾರು ಎಂಟು ಗಂಟೆಗಳ ಕಾಲ ’ಪರ್ವ’ ನಾಟಕ ನೋಡಿದಾದ ಅನ್ನಿಸಿದ್ದು ಒಂದೇ..ವ್ಯಾಸರ ಭಾರತವನ್ನು ಭೈರಪ್ಪನವರು ಮತ್ತೆ ಬರೆದು ಇನ್ನಷ್ಟು ಎತ್ತರಕ್ಕೇರಿದರು ಮತ್ತು ಅವರ ಈ ಕೃತಿಯ ಸಾರ್ಥಕ ರಂಗ ಪ್ರಯೋಗದ ಮೂಲಕ ಪ್ರಕಾಶ್ ಬೆಳವಾಡಿ ಮತ್ತಷ್ಟು ಎತ್ತರಕ್ಕೇರಿದರು. ಒಟ್ಟಿನಲ್ಲಿ ಗೆದ್ದದ್ದು ‘ಮಹಾಭಾರತ’ವೆಂಬ ಸನಾತನ ಪರಂಪರೆಯ ಮೇರು ಕೃತಿ. ಇಷ್ಟೆಲ್ಲಾ ಸಾಧ್ಯವಾಗಿದ್ದು ನನ್ನ ಭಾಷೆ ಕನ್ನಡದಲ್ಲಿ ಎಂಬ ಒಂದು ಧನ್ಯತೆಯ ಭಾವ ಕೂಡ ನನ್ನನ್ನು ತುಂಬಿತ್ತು.
’ಪರ್ವ’ದಂತಹ ಗುಣ-ಗಾತ್ರ ಎರಡರಲ್ಲೂ ದೊಡ್ಡದಾದ ಕೃತಿಯನ್ನು ರಂಗಕ್ಕೆ ತರುವುದು ಸುಲಭದ ಮಾತಲ್ಲ. ಪರ್ವದರಂಗ ಪ್ರವಾಹ ನಿರಂತರವಾಗಿ ಪ್ರೇಕ್ಷಕರನ್ನು ಕಟ್ಟಿಹಾಕಿತ್ತು. ಇದು ಈ ರಂಗಪ್ರಸ್ತುತಿಗೆ ಸಂದ ದೊಡ್ಡ ಯಶಸ್ಸು!. ಇಂತಹವಿಮರ್ಶೆಗಳು ಹಲವಾರು ಬಂದಿವೆ. ಇವರೆಲ್ಲರೂ ನಾಟಕ ನೋಡಿ ಮನೋಜ್ಞವಾಗಿ ರಂಗದ ಮೇಲೆ ಪ್ರಸ್ತುತಪಡಿಸಿದರಂಗಾಯಣಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ನಾಟಕದಲ್ಲಿ ಸ್ವಲ್ಪ ನೀರಸವೆನ್ನಿಸಿದ ಭಾಗಗಳು ಇದೆ.
ಮುಂದಿನ ದಿನಗಳಲ್ಲಿ ಅಂತಹ ಭಾಗಗಳನ್ನು ನಿರ್ದೇಶಕರು ತೆಗೆದುಹಾಕಬಹುದು. ಯಾರೇ ಆಗಲಿ ತಮ್ಮ ಅಭಿಪ್ರಾಯವನ್ನು ತಿಳಿಸುವ ಮೊದಲು ನಾಟಕ ನೋಡಬೇಕು. ಊಹಾಪೋಹದ ಮಾತುಗಳು ಸಲ್ಲ. ಇನ್ನು ದ್ರೌಪದಿ ಬಗ್ಗೆ ಎದ್ದಿರುವ ವಿವಾದ. ಪೊಲೀಸ್ ಠಾಣೆಗೆ ದೂರು ಸಲ್ಲಿಸಿರುವ ಮಹನೀಯರು ಯಾವ ಪುಸ್ತಕ ಆಧಾರವನ್ನು ಇಟ್ಟುಕೊಂಡಿದ್ದಾರೆ? ಭೈರಪ್ಪನವರು ಹೇಳಿದ್ದು(ಮೈಸೂರಿನಲ್ಲಿ ನಡೆದ೨೧.೦೨.೨೦೨೧ರ ’ಪರ್ವ’ ವಿಚಾರ ಸಂಕಿರಣದಲ್ಲಿ) ನನ್ನ ಕಾದಂಬರಿ ’ಪರ್ವ’ವನ್ನು ಕುರಿತುವಿಚಾರ ಸಂಕಿರಣದಲ್ಲಿ ನಾನು ಹೇಳಿದ್ದೇನೆಂದರೆ ಪಾಂಡವರು ವನವಾಸದಲ್ಲಿದ್ದಾಗ ದುರ್ಯೋಧನನ ತಂಗಿಯ ಗಂಡಜಯದ್ರಥನು ದ್ರೌಪದಿಯು ಒಬ್ಬಳೇ ಇದ್ದಾಗ ಅವಳನ್ನು ಹೊತ್ತುಕೊಂಡು ಹೋಗುತ್ತಿದ್ದಾಗ ಅವಳ ಆರ್ತಳಾಗಿ ಕಿರುಚಿ ಕೊಂಡಳು.
ಅದು ದೂರದಲ್ಲಿದ್ದ ಭೀಮನಿಗೆ ಕೇಳಿ ಅವನು ಓಡಿಬಂದು ದ್ರೌಪದಿಯನ್ನು ಬಿಡಿಸಿ ಜಯದ್ರಥನನ್ನು ಹಿಡಿದು, ಅವನ ಕೈಕಾಲುಗಳನ್ನು ಹೆಡೆಮುರಿ ಕಟ್ಟಿ ತಂದು ಧರ್ಮರಾಜನ ಎದುರಿಗೆ ಎಸೆಯುತ್ತಾನೆ. ಆಗ ಧರ್ಮರಾಜನು “ಭೀಮ, ಇವನು ನಮ್ಮ ತಂಗಿಯ ಗಂಡ. ಅವನನ್ನು ಹೆಡೆಮುರಿ ಕಟ್ಟಿದ್ದರಿಂದ ನಮ್ಮ ತಂಗಿಗೆ ನೋವಾಗುವುದಿಲ್ಲವೇ? ನಮ್ಮ ತಾಯಿ ಗಾಂಧಾರಿಗೆ ತನ್ನ ಮಗಳ ಗಂಡನನ್ನು ಕಟ್ಟಿ ಹಾಕಿದ್ದರಿಂದ ನೋವಾಗುವುದಿಲ್ಲವೇ? ತಕ್ಷಣ ಅವನ ಕಟ್ಟುಗಳನ್ನು ಬಿಚ್ಚು ಎಂದು ಧರ್ಮಬೋಧೆಮಾಡುತ್ತಾನೆ. ಆದರೆ ಹತ್ತಿರದಲ್ಲೇ ನಿಂತಿದ್ದ ದ್ರೌಪದಿಗೆ ಆಗಿದ್ದ ನೋವನ್ನು ಅವನು ಗಮನಿಸುವುದಿಲ್ಲ. ಈ ಗಂಡನ ಬಗೆಗೆದ್ರೌಪದಿಗೆ ಏನ್ನೆನ್ನಿಸಿರಬೇಕು? ಎಂಬ ಪ್ರಶ್ನೆಯನ್ನು ಹಾಕಿ, ಭೀಮನು ಬರದಿದ್ದರೆ ಈ ದುಷ್ಟನು ಅತ್ಯಾಚಾರ ಮಾಡುತ್ತಿದ್ದ,ಅವನನ್ನು ದಂಡಿಸದೆ ಇವನು ಧರ್ಮ ಬೋಧೆ ಮಾಡುತ್ತಿದ್ದಾನೆ ಎಂದು ಕೋಪ ಬರದೇ ಇರುತ್ತಿತ್ತೇ? ಎಂದು ಹೇಳಿದರು.
ಸುಮಾರು೭೦೦ಜನರಿದ್ದ ಸಭಿಕರಲ್ಲಿ ಬೇರೆ ಭಾಷೆ ಬಲ್ಲವರು ಹಲವರಿದ್ದರು. ಹಲವರಿಗೆ ಅತ್ಯಾಚಾರ, ಮಾನಭಂಗ ಎಂಬಶಬ್ದಗಳು ಅರ್ಥವಾಗುವುದಿಲ್ಲ ಎಂಬ ಎಚ್ಚರದಿಂದ ಅವರು ಇಂಗ್ಲಿಷ್‌ನ  ಎಂಬ ಶಬ್ದವನ್ನು ಬಳಸಿದರು. ಪಾತ್ರಗಳಭಾವನೆಗಳನ್ನು ಹೇಳಿದರೇ ಹೊರತು, ಭೈರಪ್ಪನವರ ಸ್ವಂತ ಭಾವನೆಗಳನ್ನಲ್ಲ. ’ಪರ್ವ’ ಕಾದಂಬರಿ ಓದಿದರೆ ತಿಳಿಯುತ್ತದೆ, ಆ ಕಾದಂಬರಿಯಲ್ಲಿ ಅವರು ದ್ರೌಪದಿಯ ಪಾತ್ರವನ್ನು ಅತ್ಯಂತ ಗೌರವ ಮತ್ತು ಅನುಕಂಪದಿಂದ ಚಿತ್ರಿಸಿದ್ದಾರೆ.
ಗೋರಖ್‌ಪುರದ ಸಂಸ್ಕೃತ-ಹಿಂದಿ ಅನುವಾದ, ಭಂಡಾರ್‌ಕರ್ ಪ್ರಕಟಣೆಯ, ಸುಖ್ತಂಕರ್, ಮಹಾವಿದ್ವಾಂಸರು ಸಂಪಾದಿಸಿದ ಆವೃತ್ತಿಗಳನ್ನು ಮತ್ತು ಕುಮಾರವ್ಯಾಸ ಭಾರತವನ್ನು ಓದಿ ’ಪರ್ವ’ ಕಾದಂಬರಿಯನ್ನು ಬರೆದಿರುವುದಾಗಿ ಅನೇಕ ಸಾರಿ ಅವರುಹೇಳಿದ್ದಾರೆ. ’ಪರ್ವ’ ಕಾದಂಬರಿಯ೨೦೧೯ನೇ ಇಸವಿಯಲ್ಲಿ ಪ್ರಕಟವಾಗಿರುವ ಮುದ್ರಣದ ಪುಟ೧೯೮, ೧೯೯, ೨೦೦, ೫೮೪ನೇ ಪುಟಗಳನ್ನು ಓದಿದರೆ, ಭೈರಪ್ಪನವರು ಎಲ್ಲಿಯೂ ದ್ರೌಪದಿಗೆ ಅಗೌರವವಾಗುವಂತೆ ಬರೆದಿಲ್ಲವೆಂದು.
ಉದಾಹರಣೆಗೆ, ಪುಟ೧೯೮ರಲ್ಲಿನ ಸನ್ನಿವೇಶ; ‘ಬಾಹ್ಯ ಪ್ರೇಮಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ಜಯದ್ರಥ ನನ್ನನ್ನು ಹೊತ್ತುಕೊಂಡುಹೋದಾಗ, ಕೀಚಕ ಬಲವಂತವಾಗಿ ಹಿಡಿದು ಭೋಗಿಸುವ ಹೆದರಿಕೆ ಹಾಕಿದಾಗ ಭೀಮನಲ್ಲಿ ಹುಟ್ಟಿದ ಸಹಜಕ್ರೋಧ, ಮುಂದಿನ ಪರಿಣಾಮಗಳಿಗೆ ಹೆದರದ ಗಂಡುಗೋಪ ಬೇರೆಯವರಿಗೆ ಬರಲಿಲ್ಲವಲ್ಲ. ಬಂದದ್ದನ್ನು ಕೂಡ ಇದು ತಮಗೆ ಅಂಟುವ ಅಪಮಾನವೆಂದು ಸಿಡಿದೇಳಲಿಲ್ಲವಲ್ಲ. ಯಾವುದೋ ಸ್ವಯಂವರಕ್ಕೆ ಹೋಗುತ್ತಿದ್ದನಂತೆ ನಲವತ್ತರ ಪ್ರಾಯದ ಜಯದ್ರಥ. ಜೊತೆಗೆ ಒಬ್ಬಿಬ್ಬ ರಾಜರು. ಕಾಡಿನ ಅಂಚಿನಲ್ಲಿ ರಥ ಕುದುರೆಗಳು: ಮೂವತ್ತನಾಲ್ಕು ವರ್ಷದ ಹೆಂಡತಿಯಿದ್ದೂ ಸ್ವಯಂವರಕ್ಕೆ ಹೋಗುವ ಚಪಲ. ಸುಭದ್ರೆ ಅರ್ಜುನನಿಗೆ ಕರಾರು ಹಾಕಿದ್ದು ಸರಿ.
ತನ್ನ ಮದುವೆಯಾದ ಮೇಲೆ ಯಾವುದೇ ಸ್ವಯಂವರಕ್ಕೂ ಹೋಗಕೂಡದು. ಸೋತ ರಾಜನಿಂದ ಕಾಣಿಕೆಯಾಗಿ ಹೆಣ್ಣನ್ನು ಸ್ವೀಕರಿಸಬಾರದು. ಆರ್ಯ ರಾಜರಿಗೆಲ್ಲ ಈ ಕಟ್ಟು ಹಾಕಬೇಕು. ಅವನು ಖಂಡಿತಾ ದಾರಿ ತಪ್ಪಿ ಬಂದಿಲ್ಲ. ನನ್ನ ರೂಪ ಕೇಳಿದ್ದಾನೆ. ಅದುವರೆಗೆ ನೋಡಿರಲಿಲ್ಲ. ರಥ ನಡೆಯದಂತಹ ಕಾಡು ಶುರುವಾದಲ್ಲಿ ತನ್ನ ರಥಗಳನ್ನು ನಿಲ್ಲಿಸಿ ಕೆಲವೇ ಅಂಗರಕ್ಷಕರೊಡನೆ ನಾವಿದ್ದ ಕಾಡಿಗೆ ಬಂದಿದ್ದಾನೆ. ಹೇಗೂ ನಂಟು. ಗಾಂಧಾರಿಯ ಕೊನೆಯ ಮಗು ದುಶ್ಶಳೆಯ ಗಂಡ, ಕುಶಲ ವಿಚಾರಿಸಲು ಬಂದೆ ಎಂದರೆ ಚೆನ್ನಾಗಿಯೇ ಸತ್ಕರಿಸುವ ಸ್ವಭಾವ ಧರ್ಮನ ದು ಎಂಬುದು ಅವನಿಗೆ ಗೊತ್ತಿಲ್ಲದೆಯೇ ಇರುತ್ತದೆಯೇ? ಮೊದಲು ತನ್ನ ಗೆಳೆಯ ಕೋಟಿಕಾಸ್ಯನ ಕೈಲಿ ಹೇಳಿಕಳಿಸಿದಾನೆ, ಭಾವ ಬಂದಿದಾನೆಂದು ಪಾಂಡವರೆಲ್ಲ ಹೋಗಿ ಸ್ವಾಗತ ಮಾಡಿ ಕರೆದುಕೊಂಡು ಹೋಗಲಿ ಅಂತ. ಐದು ಜನರೂ ಭೇಟೆಗೆ ಹೋಗಿದ್ದಾರೆ.
ಪರ್ಣಕುಟಿಯಲ್ಲಿರುವವಳು ದ್ರೌಪದಿ ಒಬ್ಬಳೇ ಅಂತ ತಿಳಿದ ತಕ್ಷಣ ತಾನೊಬ್ಬನೇ ಬಂದ. ನನ್ನನ್ನು ನೋಡಿದ ತಕ್ಷಣ ಹುಚ್ಚಾಯಿ ತೇನೋ ಮನಸ್ಸು. ನಲವತ್ತೈದನ್ನು ಮುಟ್ಟುತ್ತಿರುವ ಹೆಂಗಸಿನ ರೂಪಕ್ಕೆ ನಲವತ್ತರ ರಾಜನ ಮನಸ್ಸು ಅಂಕೆ ಮೀರಿತೇ? ಇದಾದ ಒಂದೂವರೆ ವರ್ಷದ ಮೇಲಲ್ಲವೇ ವಿರಾಟನಗರದಲ್ಲಿ ಕೀಚಕನೂ ಪ್ರಣಯಮತ್ತನಾಗಿ ಅಂಗಲಾಚಿ ಕೊನೆಗೆ ಸಿಟ್ಟು ಬಂದು ಬಲವಂತ ಹಾಕಿದುದು?’ ಹಾಗೆಯೇ ೫೮೪ನೇ ಪುಟದಲ್ಲಿನ ಮಾತುಗಳು ; ಭೀಮ ಮತ್ತೆ ಮಾತನಾಡಿದ – ’ಎರಡನೆಯದಾಗಿ ದ್ರೌಪದಿಯನ್ನು ಹೊತ್ತು ಕೊಂಡು ಹೋಗಲು ಬಂದು ಸಿಕ್ಕಿಬಿದ್ದಾಗ ಜಯದ್ರಥನನ್ನು ಮುಗಿಸಿಬಿಡಬೇಕು ಅಂತ ನಾನು ಎಷ್ಟು ಚಚ್ಚಿಕೊಂಡೆ!
ಸಹನೆ,  ತಾಳ್ಮೆ, ಅಲ್ಲದೆ ಇವನು ನಮ್ಮ ಭಾವ. ನಮ್ಮ ತಂಗಿಯನ್ನು ನಾವೇ ಮುಂಡೆ ಮಾಡುವುದೇ ಅಂತ ನಿನ್ನ ಪೂಜ್ಯ ಅಣ್ಣಧರ್ಮಜ ಪ್ರವಚನ ಆರಂಭಿಸಿದ. ಅವನ ಮಾತೇ ವೇದವೆಂದು ನಂಬಿರುವ ನೀನು ಅದೇ ಸರಿ ಅಂತ ತಾಳ ಹಾಕಿದೆ. ಬಿಡಿಸಿಕೊಂಡು ಹೋದ ಅವನು ಮುಂದೆ ಒಂದಿಲ್ಲೊಂದು ದಿನ ತನಗಾದ ಅವಮಾನ ತೀರಿಸಿಕೊಳ್ಳುವುದಕ್ಕಾಗಿ ಶಕ್ತಿವಂತ ಸೈನಿಕರಿಂದ ಕೂಡಿದ ಹೊಸ ದಳವನ್ನು ಕೂಡಿಸಿ ದಿನಾ ತರಬೇತಿ ಕೊಟ್ಟು ತಾನೂ ಅಭ್ಯಾಸ ಮಾಡಿಕೊಳ್ಳುತ್ತಿದ್ದನಂತೆ.
ಅರ್ಜುನ ತಲೆ ತಗ್ಗಿಸಿ ಅಲೋಚಿಸುತ್ತಿದ್ದ. ಧರ್ಮಜ ನೆಲ ನೋಡುತ್ತಿದ್ದ. ಭೀಮ ಎಂದ : ’ನಾಳಿನ ಯುದ್ಧದಲ್ಲಿ ಏನಾದರೂ ಮಾಡಿ ಜಯದ್ರಥನನ್ನು ಬಲಿಹಾಕಿದರೆ ನಾವು ಮಗನ ಸಾವಿಗೆ ಸೇಡು ತೀರಿಸಿಕೊಂಡಂತೆ ಆಗುತ್ತೆ.’ ಈ ಸಂಬಂಧ ಹೆಸರಾಂತ ಸಾಹಿತಿ ಮತ್ತು ವಿಮರ್ಶಕರಾದ ಶತಾವಧಾನಿ ಡಾ. ಆರ್. ಗಣೇಶ್ ಅವರು ಕೂಡ ಕೆಲವು ಗ್ರಂಥಗಳನ್ನು ಉಲ್ಲೇಖಿಸಿದ್ದಾರೆ. ಉದಾಹರಣೆಗೆ ಮಹಾಭಾರತದಲ್ಲಿನ ಶ್ಲೋಕಗಳು ಮತ್ತು ಅರ್ಥ : ‘ಜಗ್ರಾಹ ತಾಮ್ ಉತ್ತರವಸದೇಶೇ ಜಯದ್ರಥಃ’, ‘ಜಯದ್ರಥನುಅವಳ ಸೆರಗನ್ನು ಸೆಳೆದನು’(೩-೨೫೨.೨೩); ‘ಪ್ರಗೃಹ್ಯಮಾಣಾ ತು ಮಹಾಜವೇನ ಮುಹುರ್ವಿನಿಃಶ್ವಸ್ಯ ಚ ರಾಜಪುತ್ರೀ ಸಾಕೃಷ್ಯಮಾಣಾ ರಥಮಾರುರೋಹ’, ‘ಸೈಂದವನಿಂದ ವೇಗವಾಗಿ ಸೆಳೆಯಲ್ಪಟ್ಟ ದ್ರೌಪದಿ ಸಂಕಟದ ನಿಟ್ಟುಸಿರು ಬಿಡುತ್ತಿದ್ದಳು.
ಅವಳು ಅವನ ಬಲವಂತದಿಂದ ರಥವನ್ನು ಹತ್ತಿದಳು’(೩.೨೫೨.೨೪) ಭೀಮ-ಅರ್ಜುನರು ಬೆನ್ನಟ್ಟಿ ಬಂದು ಸೈಂಧವನನ್ನು ಯುದ್ಧದಲ್ಲಿ ಸೋಲಿಸಿದಾಗ ಧರ್ಮರಾಜನು ಸೈಂಧವನನ್ನು ಬಿಡುಗಡೆ ಮಾಡಲು ಆಣತಿ ನೀಡುತ್ತಾನೆ (೩.೨೫೫.೪೩). ಅದನ್ನು ಕೇಳಿ ದ್ರೌಪದಿ ಕೆರಳುತ್ತಾಳೆ. ‘ತುಚ್ಛ್ರ ತ್ವಾ ದ್ರೌಪದೀ ಭೀಮಮ್ ಉವಾಚ ವ್ಯಾಕುಲೇಂದ್ರಿಯಾ ಕುಪಿತಾ ಹ್ರೀಮತೀ ಪ್ರಾಜ್ಞಾ ಪತೀ ಭೀಮಾನುರ್ಜಾವುಭೌ||
ಕರ್ತವ್ಯಂ ಚೇತ್ ಪ್ರಿಯಂ ಮಹ್ಯಂ ವಧ್ಯಃ ಸ ಪುರುಷಾಧಮಃಸೈಂಧವಾಪಸದಃ ಪಾಪೋ ದುರ್ಮತಿಃ ಕುಲಪಾಂಸನಃ||ಭಾರ್ಯಾಭಿಹರ್ತಾ ನಿರ್ವೈರೋ ಯಶ್ಚ ರಾಜ್ಯಹರೋ ರಿಪುಃಯಾಚಮಾನೋಪಿ ಸಂಗ್ರಾಮೇ ನ ಸ ಜೀವಿತುಮರ್ಹತಿ||’,
‘ಆ ಮಾತನ್ನು ಕೇಳಿ ಸಂಕಟಪಟ್ಟು ಕೆರಳಿದ ದ್ರೌಪದಿ (ತನಗಾದ ಅಪಮಾನದಿಂದ) ನಾಚಿ ಭೀಮ-ಅರ್ಜುನರಿಗೆ ಹೀಗೆಂದಳು– ನೀವು ನನಗೆ ಸಂತೋಷ ಕೊಡಬೇಕೆಂದಿದ್ದಲ್ಲಿ ನರಾಧಮನಾದ ಈ ಪಾಪಿ ಸೈಂಧವನನ್ನು ಕೊಲ್ಲಬೇಕು.
ಇವನು ದುರ್ಬುದ್ಧಿಯ ಕುಲಗೇಡಿಗ. ಯಾರು ನಮಗೆ ಶತ್ರುವಲ್ಲದಿದ್ದರೂ ನಮ್ಮ ರಾಜ್ಯವನ್ನು ಅಪಹರಿಸಿ ಹೆಣ್ಣನ್ನೂಕಸಿಯುತ್ತಾನೋ ಅಂಥವನು ಜೀವಭಿಕ್ಷೆ ಬೇಡಿದರೂ ಯುದ್ಧದಲ್ಲಿ ಬದುಕಬಾರದು’. (೩.೨೫೫.೪೪-೪೬) ಕನ್ನಡದಮಹಾಕವಿ ಕುಮಾರವ್ಯಾಸನು ತನ್ನ ಕಾವ್ಯದ ಅರಣ್ಯಪರ್ವದ ಇಪ್ಪತ್ತೆರಡನೆಯ ಸಂಧಿಯಲ್ಲಿ ಈ ಪ್ರಕರಣವನ್ನುವರ್ಣಿಸಿದ್ದಾನೆ. ಸೈಂಧವ ದ್ರೌಪದಿಯನ್ನು ಅಗ್ಗದ ಮಾತುಗಳಲ್ಲಿ ಮೂದಲಿಸಿ ಸೆರಗು ತಲೆಗೂದಲುಗಳನ್ನು ಹಿಡಿದು ಹೊತ್ತೊಯ್ಯುತ್ತಾನೆ.
‘ಅಹಹ ಪಾತಿವ್ರತ್ಯವತಿ ಸನ್ನಿಹಿತವಲ್ಲಾ ನಿನಗೆ! ಹಲಬರ ಮಹಿಳೆ ಸತಿಹೆನಿಸುವರೆ? ಸೂಳೆಯರೇಕಪುರುಷರಲಿ ವಿಹರಿಸುವರೇ? ಲೋಕಧರ್ಮದ ಹಣಿ ರಹಿಸುವುದೈಸಲೇ! ನಮಗಿಹುದು ಮತವಲ್ಲದೊಡೆ ಮಾಣಲೆನುತ್ತ ಮುರಿದೆದ್ದ’ (೩.೨೨.೧೮); ‘ತರಳೆ ಮಿಗೆ ತಲ್ಲಣಿಸಿ ತಳಿರೋವರಿಯ ಹೋಗುತಿರಲಟ್ಟಿ ಮೇಲುದ ಬರಸೆಳೆದು ತುರುಬಿಂಗೆ ಹಾಯ್ದನು ಹಿಡಿದು ಕುಸುಬಿದನು.ಒರಲಿದಳು ಹಾ ಭೀಮ! ಹಾ ನೃಪವರ! ಹಾ ಧನಂಜಯ! ಹಾ ಎನುತ ಕಾತರಿಸೆ ಕಮಲಾನನೆಯ ಕಂಠವನೌಚಿ ಹೊರವಂಟ’(೩.೨೨.೧೦). ಇಂಥ ಅವಮಾನಕ್ಕೆ ತಕ್ಕ ಪ್ರತೀಕಾರ ಆಗಲಿಲ್ಲವೆಂಬ ನೋವು ದ್ರೌಪದಿಗೆ ಇತ್ತು.
ಹೀಗಾಗಿ ಅವಳು ಇದನ್ನು ಮತ್ತೆ ಮತ್ತೆ ಎತ್ತಾಡುತ್ತಿರುತ್ತಾಳೆ. ಉದಾಹರಣೆಗೆ ವಿರಾಟಪರ್ವದ ಕೀಚಕವಧೆಯ ಪ್ರಕರಣವನ್ನು ನೋಡಬಹುದು: ‘ಯಮಸುತಂಗರಹುವೆನೆ ಧರ್ಮಕ್ಷಮೆಯ ಗರ ಹೊಡೆದಿಹುದು’ (೪.೩.೩೩); ‘ಗಂಡರೈವರು ಮೂರುಲೋಕದ ಗಂಡರೊಬ್ಬಳನಾಳಲಾರಿರಿ ಗಂಡರೋ ನೀವ್ ಭಂಡರೋ ಹೇಳೆಂದಳಿಂದುಮುಖಿ’ (೪.೩.೪೬) ‘ಸೈಂಧವಬಂದು ಬಳಿಕಾರಣ್ಯವಾಸದೊಳೆನ್ನನೆಳದೊಯ್ದ’(೪.೩.೫೯) ಇವನ್ನೆಲ್ಲಾ ಕಂಡಾಗ ತನ್ನ ಪತಿಗಳು ಇದಕ್ಕೆ ತಕ್ಕ ಪ್ರತೀಕಾರಮಾಡಲಿಲ್ಲವೆಂಬ ನೋವು ಕೂಡ ದ್ರೌಪದಿಗೆ ಇತ್ತೆಂದು ಸ್ಪಷ್ಟವಾಗಿ ತಿಳಿಯುತ್ತದೆ.
ಭೈರಪ ನವರೇ ಹೇಳಿದಂತೆ ವ್ಯಾಸ ಮಹರ್ಷಿಗಳ ಮಹಾಭಾರತವನ್ನು ಆಧಾರವಾಗಿಟ್ಟುಕೊಂಡು ರಚಿತವಾಗಿರುವ ಕಾದಂಬರಿ ’ಪರ್ವ’ ಕುರಿತು ದಿ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಹೀಗೆ ವರ್ಣಿಸಿದ್ದಾರೆ. ‘ಭೈರಪ್ಪನವರು ಮಹಾಭಾರತವನ್ನು ’ಪರ್ವ’ದಲ್ಲಿ ಸೃಜನಾತ್ಮಕ ಕಾದಂಬರಿಯಾಗಿ ಪುನರ್ ಸೃಷ್ಟಿಸಿದ್ದಾರೆ. ಈ ಮೂಲಕ ಅವರು ಪಂಪ, ಕುಮಾರವ್ಯಾಸರಂಥ ಮಹಾಕವಿಗಳ ಸಾಲಿಗೆ ಸೇರಿದ್ದಾರೆ. ಜನಪ್ರಿಯತೆಯಲ್ಲಿಯಂತೂ ಅವರನ್ನು ಶರಚ್ಛಂದ್ರ, ಪ್ರೇಮಚಂದ್‌ರಂಥ ಮಹಾ ಕಾದಂಬರಿಕಾರರ ಜತೆ ಮಾತ್ರ ಹೋಲಿಸಬಹುದು’ ತೊಂಬತ್ತರ ಹಿರಿಯ ಚೇತನ ಭೈರಪ್ಪ ನವರು ನಮ್ಮ ಕಾಲದ ದಾರ್ಶನಿಕರಾಗಿ ನಮ್ಮ ಜತೆ ಇರುವುದು ಪುಣ್ಯ. ಪರ್ವತದಂತೆ ಬೆಳೆದು ಭಾರತದ ಅಗ್ರಗಣ್ಯ ಕಾದಂಬರಿಕಾರರಾಗಿ ನಿಂತು ಇಪ್ಪತ್ತೆರಡನೆಯ ಶತಮಾನವನ್ನೂ ದಾಟುವ ಅಂತಃಶಕ್ತಿಯನ್ನು ಹೊಂದಿರುವ ’ಪರ್ವ’ದ ಮೇಲಿನ ಚರ್ಚೆ, ವಿವಾದಗಳನ್ನು ಗಮನಿಸುತ್ತಿರುವ ಮತ್ತು ರಂಗಾಯಣದ ನಿರ್ದೇಶಕರಾದ ಅಡ್ಡಂಡ ಕಾರ್ಯಪ್ಪನವರು ಹೇಳಿದಂತೆ ’ಪರ್ವ’ ಇನ್ನೂ ಕಾಡುತ್ತಲೇ ಇರಲಿ.