ಆಂತರಿಕ ಪ್ರತಿಫಲನದ ಮೂಲಕ ಆನಂದದ ಸಾದೃಶ್ಯೀಕರಣ
ಅವಲೋಕನ
ಅರ್ಜುನ್‌ ರಾಮ್‌ ಮೇಘವಾಲಾ
ಪ್ರತಿವರ್ಷ ಮಾರ್ಚ್೨೦ಅನ್ನು ವಿಶ್ವಾದ್ಯಂತ ‘ಅಂತಾರಾಷ್ಟ್ರೀಯ ಆನಂದದ ದಿನ’ವನ್ನಾಗಿ ಆಚರಿಸಲಾಗುತ್ತಿದೆ. ಕಳೆದ ವರ್ಷ ಇದೇ ದಿನ, ಕೋವಿಡ್-೧೯ಸಾಂಕ್ರಾಮಿಕ ರೋಗವು ಹೊಸ್ತಿಲಲ್ಲಿ ನಿಂತಿದ್ದ ಹಿನ್ನಲೆಯಲ್ಲಿ ಇಡೀ ಮನುಕುಲುವು ಗೊಂದಲದಲ್ಲಿಸಿಲುಕಿತ್ತು.
ಈಗ ಈ ಶತಮಾನದ ಸಾಂಕ್ರಾಮಿಕದ ಅಬ್ಬರ ಇಳಿಮುಖವಾಗಿ ಮತ್ತೆ ಏರುಗತಿಯಲ್ಲಿದೆ. ಈ ದುರಂತದ ಅನುಭವವು ಮನುಕುಲದ ಆತ್ಮ ಸಾಕ್ಷಿಯನ್ನು ಸಂಪೂರ್ಣವಾಗಿ ಅಲುಗಾಡಿಸಿದೆ. ಮಾನವಕುಲದ ಜತೆಯಾಗಿ ಜಾಗತಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಈ ಸಂದರ್ಭದ ಈ ವರ್ಷದ ‘ಅಂತಾರಾಷ್ಟ್ರೀಯ ಆನಂದದ ದಿನ’ವು ಬಂದಿದೆ. ನಮ್ಮನ್ನು ಉದ್ಧರಿಸುವ ಮತ್ತು ಪರಸ್ಪರ ಹಿತವನ್ನು ಕಾಯುವ ಸಕಾರಾತ್ಮಕ ಮಾರ್ಗಗಳನ್ನು ಕಂಡುಕೊಳ್ಳಲು ಇದೊಂದು ಅವಕಾಶವಾಗಿದೆ.
ಆನಂದದ ದಿನ ಆಚರಣೆಗೆ ಈ ವರ್ಷ ಆಯ್ದುಕೊಂಡ ‘ಶಾಂತವಾಗಿರಿ. ವಿವೇಚನೆಯಿಂದಿರಿ. ಕರುಣಾಳುಗಳಾಗಿರಿ’ ಎಂಬ ವಿಷಯವು ಅತ್ಯಂತ ಸೂಕ್ತವಾಗಿದೆ. ಆನಂದವನ್ನು ಪಡೆಯುವ ಹೊಸ ಮಾರ್ಗಗಳನ್ನು ಕಲಿಯಲು, ಮರು ಕಲಿಯಲು ಹಾಗೂ ಹಳೆಯ ವಿಧಾನಗಳನ್ನು ಬದಲಿಸಲು ನೀಡಬೇಕಾದ ವಿಶೇಷ ಪ್ರಾಮುಖ್ಯವನ್ನು ಇದು ಸೂಚಿಸುತ್ತದೆ.
ಜಗತ್ತು ಇಂದು ಸಾಂಕ್ರಾಮಿಕ, ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಏರಿಕೆ, ಭಯೋತ್ಪಾದನೆ ಹೀಗೆ ಹಿಂದೆಂದೂ ಕಂಡಿರದಂತಹ ಹತ್ತಾರು ಸವಾಲುಗಳನ್ನು ಎದುರಿಸುತ್ತಿದೆ. ಅದರಲ್ಲೂ ಈಗ ಮನುಕುಲದ ಯೋಗಕ್ಷೇಮದ ಸವಾಲಂತೂ ಹಿಂದೆಂದಿಗಿಂತಲೂ ಹೆಚ್ಚು ಪ್ರಾಮುಖ್ಯ ಪಡೆದಿದೆ. ಸ್ಥಳೀಯ ಮಟ್ಟದಿಂದ ಹಿಡಿದು ದೇಶೀಯ ಮಟ್ಟದವರೆಗೆ ಮತ್ತು ಅಂತಾ ರಾಷ್ಟ್ರೀಯ ಮಟ್ಟದ ವೇದಿಕೆಗಳವರೆಗೂ ಎಲ್ಲಾ ಸಹಯೋಗದ ಯೋಜನೆಗಳಲ್ಲಿ ಇದನ್ನು ನಾವು ಇಂದು ಕಾಣಬಹುದು.
ಸುಸ್ಥಿರ ಅಭಿವೃದ್ಧಿ, ಬಡತನ ನಿವಾರಣೆ, ಸಂತೋಷ ಮತ್ತು ಎಲ್ಲ ಜನರ ಯೋಗಕ್ಷೇಮವನ್ನು ಉತ್ತೇಜಿಸುವ ಸಮತೋಲಿತ,ಎಲ್ಲರನ್ನೂ ಒಳಗೊಂಡ ಮತ್ತು ನ್ಯಾಯ ಸಮ್ಮತ ಆರ್ಥಿಕ ಬೆಳವಣಿಯ ಹಾದಿಯನ್ನು ನಾವು ಅನುಸರಿಸಬೇಕಾದ ಅಗತ್ಯವಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ೬೬ನೇ ಅಧಿವೇಶನದಲ್ಲಿ,೧೨ಜುಲೈ೨೦೧೨ರಂದು ಕೈಗೊಂಡ೬೬/೨೮೧ನಿರ್ಣಯದಲ್ಲಿ ಮಾರ್ಚ್೨೦ಅನ್ನು ಸಂತೋಷದ ದಿನವೆಂದು ಘೋಷಿಸಲಾಯಿತು.
ವಿಶ್ವಾದ್ಯಂತ ಮನುಷ್ಯರ ಜೀವನದಲ್ಲಿ ಸಂತೋಷ ಮತ್ತು ಯೋಗಕ್ಷೇಮವನ್ನು ಸಾರ್ವತ್ರಿಕ ಗುರಿ ಹಾಗೂ ಆಶೋತ್ತರವಾಗಿ ಗುರುತಿಸುವ ಪ್ರಸ್ತುತತೆಯನ್ನು ಗುರುತಿಸಿದ್ದಲ್ಲದೆ, ಅವುಗಳ ಮಹತ್ವವನ್ನು ಸಾರ್ವತ್ರಿಕ ನೀತಿಗಳಲ್ಲಿ ಗುರುತಿಸಿ, ಈ ನಿರ್ಣಯ ಅಂಗೀಕರಿಸಲಾಯಿತು.೨೦೧೩ರ ಮಾರ್ಚ್೨೦ರಂದು ಮೊದಲ ಅಂತಾರಾಷ್ಟ್ರೀಯ ದಿನಾಚರಣೆ ಆಚರಿಸಲಾಯಿತು.
ವಿಶ್ವಸಂಸ್ಥೆಯ ಸಂತೋಷ ಸೂಚ್ಯಂಕವು ಉದಾರತೆ, ಭ್ರಷ್ಟಾಚಾರದ ಗ್ರಹಿಕೆಗಳು, ತಲಾದಾಯ, ಸಾಮಾಜಿಕ ಬೆಂಬಲ, ಜನನದ ವೇಳೆ ಆರೋಗ್ಯಕರ ಜೀವನ ನಿರೀಕ್ಷೆ, ಜೀವನದ ಆಯ್ಕೆ ಸ್ವಾತಂತ್ರ್ಯ ಮುಂತಾದ ಸೂಚಿಗಳ ಆಧಾರದ ಮೇಲೆ ರಾಷ್ಟ್ರಗಳಿಗೆ ಶ್ರೇಯಾಂಕ ನೀಡುತ್ತದೆ. ಆಂತರಿಕ ಪ್ರತಿಫಲನಗಳ ಮೂಲಕ ಎಲ್ಲ ಜೀವಿಗಳಲ್ಲೂ ಸಂತೋಷ ಮತ್ತು ಯೋಗಕ್ಷೇಮವನ್ನು ಉತ್ತೇಜಿಸುವಂತಹ ಅಪಾರ ಮೌಲ್ಯಗಳು ಹಾಗೂ ಸಂಸ್ಕೃತಿಗಳ ಬೃಹತ್ ಭಂಡಾರವನ್ನು ಹೊಂದಿದ್ದರೂ ಈ ನಿಟ್ಟಿನಲ್ಲಿ ಭಾರತದ ಕಾರ್ಯಸಾಧನೆಯ ಬಗ್ಗೆ ನಾವೆಲ್ಲರೂ ಕಳವಳಗೊಳ್ಳಬೇಕಿದೆ.
ಈ ವ್ಯತ್ಯಾಸವು ಸಮಾಜದ ಮತ್ತು ಜಗತ್ತಿನ ಒಳಿತಿಗಾಗಿ ನಮ್ಮ ಆಲೋಚನೆಗಳು ಮತ್ತು ಕ್ರಿಯೆಗಳನ್ನು ಗಂಭೀರವಾಗಿ ಮರುಮಾಪನ ಮಾಡಲು ಕರೆ ನೀಡುತ್ತದೆ. ಅವರೋಹಣ ವಿಧಾನದ ಮೂಲಕ ಜಾಗತಿಕ ಒಳಿತನ್ನು ಸಾಧಿಸಲಾಗುವುದಿಲ್ಲ.ಆದರೆ ವ್ಯಕ್ತಿಯ ಆಳದಲ್ಲಿ ಬೇರುಗಳನ್ನು ಹೊಂದಿರುವಂತಹ ಅವರೋಹಣ ವಿಧಾನದಲ್ಲಿ ಅದು ಸಾಧ್ಯ. ಸಂತೋಷದವೈಯಕ್ತಿಕ ಸಾಕ್ಷಾತ್ಕಾರವು ಸದ್ಗುಣಿಯಾದ ವ್ಯಕ್ತಿಯೊಬ್ಬ ರೂಪಗೊಳ್ಳಲು ಹಾಗೂ ಸುಖಿ ಸಂಸಾರ, ಸುಖಿ ಸಮಾಜಕ್ಕೆ ದಾರಿ ಮಾಡುವ ಉತ್ತಮ ವ್ಯಕ್ತಿ ರೂಪು ತಳೆಯಲು ಕಾರಣವಾಗುತ್ತದೆ. ಅದರ ಪರಿಮಳ ರಾಷ್ಟ್ರೀಯ ಗಡಿಗಳನ್ನು ದಾಟಿ ಪಸರಿಸುತ್ತದೆ.
ಅಸಮಾನತೆಯನ್ನು ಕಡಿಮೆ ಮಾಡಿ, ಪ್ರತಿಯೊಬ್ಬರ ಸಂತೋಷ ಮತ್ತು ಯೋಗಕ್ಷೇಮವನ್ನು ಕಾಯುವಂತಹ ಮತ್ತಷ್ಟು ನ್ಯಾಯೋಚಿತ ಜಗತ್ತಿನ ನಿರ್ಮಾಣಕ್ಕೆ ಕಾರಣವಾಗುತ್ತದೆ. ಭಾರತೀಯ ಮಹಾಕಾವ್ಯಗಳು ಮತ್ತು ಪೌರಾಣಿಕ ಭಂಡಾರಗಳು ಆನಂದವನ್ನು ಸಂದರ್ಭೋಚಿತವಾಗಿ ವಿವರಿಸುವ ಹಲವು ಬೋಧನೆಗಳನ್ನು ಹೊಂದಿವೆ. ಭಗವದ್ಗೀತೆಯ೧೮ನೇ ಅಧ್ಯಾಯದ ೩೬ನೇ ಶ್ಲೋಕ ಹೇಳುತ್ತದೆ. ಅದರ ಅರ್ಥ ನೋಡುವುದಾದರೆ, ಆನಂದದಲ್ಲಿ ಮೂರು ವಿಧಗಳಿವೆ.
ಅವುಗಳೆಂದರೆ – ಸಾತ್ವಿಕ, ರಜಸ್ವಿಕ ಮತ್ತು ತಾಮಸಿಕ. ಇದರಲ್ಲಿ ಅತ್ಯಂತ ಶ್ರೇಷ್ಠವೆನಿಸಿ ‘ಸಾತ್ವಿಕ’ ಆನಂದವನ್ನು ಅರಿವಿನೊಂದಿಗೆಶೇ.೧೦೦ಏಕಾಗ್ರತೆಯಿಂದ ಅಭ್ಯಾಸ ಮಾಡಿದರೆ, ವ್ಯಕ್ತಿಯು ದುಃಖದಿಂದ ವಿಮೋಚನೆ ಪಡೆಯಬಹುದು. ಸಂತೋಷವೆಂಬುದು ವೈಯಕ್ತಿಕ ಮಟ್ಟದಲ್ಲಿ ಪರಿಪೂರ್ಣ ಆಂತರಿಕ ಮತ್ತು ಅಮೂರ್ತವಾದ ಆತ್ಮಸಾಕ್ಷಿಯ ಭಾವನೆ ಯಾಗಿದೆ. ಆದರೆ ಅದರ ಕಂಪನಗಳು ಬಾಹ್ಯವಾಗಿ ಚಲಿಸುವುದಲ್ಲದೆ, ಸರ್ವಜನರ ಕಲ್ಯಾಣಕ್ಕೆ ಸುಸಂಬದ್ಧ ಪರಿಸರವನ್ನು ನಿರ್ಮಿಸುತ್ತವೆ. ನಮ್ಮ ದೈನಂದಿನ ಜೀವನದಲ್ಲಿ ನಾವು ಏನೇ ಒಳಿತನ್ನು ಮಾಡಿದರೂ ಅದು ನಮ್ಮ ಆನಂದ ಅಥವಾ ಸಂತೋಷದ ಮೂಲವಾಗುತ್ತದೆ. ಹಾರ್ಮೋನ್‌ಗಳ ನೆರವಿನೊಂದಿಗೆ ಮಾನವ ಮೆದುಳಿನಲ್ಲಿ ರಾಸಾಯನಿಕ ಕ್ರಿಯೆಯನ್ನು ಉಂಟುಮಾಡುವ ಧನಾತ್ಮಕ ಸಂಪರ್ಕಗಳು ಮತ್ತು ಅನುಭವಗಳನ್ನು ಸೃಷ್ಟಿಸಿ ಸಂತೋಷವನ್ನು ಪಡೆಯಬಹುದು ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.
ಡೋಪಮೈನ್ – ಪ್ರತಿಫಲದ ರಾಸಾಯನಿಕ, ಆಕ್ಸಿಟೋಸಿನ್ – ಪ್ರೇಮ ಹಾರ್ಮೋನ್, ಸೆರೊಟೋನಿನ್- ಭಾವನೆಗಳನ್ನು ಸಮತೋಲನಗೊಳಿಸುವ ರಾಸಾಯನಿಕ ಮತ್ತು ನೋವು ನಿವಾರಕ ಎಂಡೊರ್ಫಿನ್ ಇವು ಅನಂತ ಸಂತೋಷದ ಭಾವನೆಗೆ ಕಾರಣ. ಆನಂದ ಒಂದು ಪ್ರತ್ಯೇಕ ಅಸ್ತಿತ್ವವಲ್ಲ; ಇದು ವಿವಿಧ ಘಟನೆಗಳು, ಕ್ರಿಯೆಗಳು ಮತ್ತು ಫಲಿತಾಂಶಗಳ ಸಂಗಮ.ಸರಕಾರಗಳು, ಎನ್‌ಜಿಒಗಳು, ಉದ್ಯಮಗಳು, ಸಾಮಾಜಿಕ ಸಂಸ್ಥೆಗಳು ಮತ್ತು ಆಡಳಿತ ಯಂತ್ರಗಳು ನೇರವಾಗಿ ಅಥವಾಪರೋಕ್ಷವಾಗಿ ವ್ಯಕ್ತಿಗಳು ಮತ್ತು ಸಾಮೂಹಿಕ ಸಂತೋಷಗಳ ವಿವಿಧ ಅಂಶಗಳನ್ನು ಸ್ಪರ್ಶಿಸುತ್ತವೆ.
ನಾಗರಿಕರ ಬದುಕನ್ನು ಸುಗಮಗೊಳಿಸಲು, ದೀನದಲಿತರ ಉದ್ಧಾರಕ್ಕಾಗಿ ಸರಕಾರ ಕೈಗೊಂಡ ಕ್ರಮಗಳು, ಉತ್ತಮ ಮೂಲ ಸೌಕರ್ಯ, ಉದ್ಯೋಗಾವಕಾಶಗಳ ಹೆಚ್ಚಳ – ಇವು ನೇರವಾಗಿ ನಾಗರಿಕರ ಸಂತೋಷ ಹೆಚ್ಚಳಕ್ಕೆ ಕಾರಣವಾಗುತ್ತಿವೆ. ಮತ್ತೊಂದೆಡೆ, ‘ಫಿಟ  -ಇಂಡಿಯಾ’ ಅಭಿಯಾನ, ‘ಖೇಲೋ ಇಂಡಿಯಾ’, ಪ್ರಧಾನಮಂತ್ರಿಗಳ ‘ಪರೀಕ್ಷಾ ಪೇ ಚರ್ಚಾ’- ಇತ್ಯಾದಿ ನಾಗರಿಕರ ಒತ್ತಡರಹಿತ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಜಾಗೃತಿ ಕಾರ್ಯಕ್ರಮಗಳೆನಿಸಿವೆ.
ಶೈಕ್ಷಣಿಕ ಸಂಸ್ಥೆಗಳು ಅರ್ಥಪೂರ್ಣ ಜೀವನ, ಸಂತೋಷ, ಯೋಗಕ್ಷೇಮ ಮತ್ತು ಸಮಗ್ರ ಸ್ವ- ಅಭಿವೃದ್ಧಿಯನ್ನು ಉತ್ತೇಜಿಸಲು ಕ್ರಮಗಳನ್ನು ಅಳವಡಿಸಿಕೊಳ್ಳುತ್ತಿವೆ. ಮನೋವಿeನ, ಬೌದ್ಧಿಕ ವಿeನ, ನರವಿಜ್ಞಾನ, ನಿರ್ವಹಣೆ, ಶೈಕ್ಷಣಿಕ ತಂತ್ರಜ್ಞಾನ, ಸಂಕೇತ ಸಂಸ್ಕರಣೆ ಮತ್ತು ಅಳತೆ ಮುಂತಾದ ವಿವಿಧ ವಿಭಾಗಗಳನ್ನು ಒಟ್ಟುಗೂಡಿಸುವ ಮೂಲಕ; ತರಬೇತಿ ಕಾರ್ಯಕ್ರಮಗಳು, ವಿದ್ಯಾರ್ಥಿ-ಸಮುದಾಯ ಸಂಬಂಧಿತ ಚಟುವಟಿಕೆಗಳ ಮಳುಕ ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಕಾರ್ಯಪ್ರವೃತ್ತವಾಗಿವೆ.
ತಾಂತ್ರಿಕವಾಗಿ ಸಂಪರ್ಕಿತವಾದ ಪ್ರಪಂಚದಲ್ಲಿ, ಕೊಳ್ಳುಬಾಕತನ, ಮಾರುಕಟ್ಟೆ ಶಕ್ತಿಗಳು ಮತ್ತು ಭೌತಿಕ  ವಸ್ತುಗಳ ಮೇಲಿನ ಮೋಹವು ಸಮಾನಾಂತರವಾದ ಬಾಹ್ಯ ಮತ್ತು ತಾತ್ಕಾಲಿಕ ಸಂತೋಷದ ಒಂದು ಭಾವನೆಯನ್ನು ಸೃಷ್ಟಿಸುತ್ತದೆ. ನಾವು ನಮ್ಮ ಬಯಕೆಗಳನ್ನು ತಣಿಸುವ ಬದಲಿಗೆ ಅವುಗಳನ್ನು ಸೀಮಿತಗೊಳಿಸುವ ಮೂಲಕ ಸಂತೋಷ ಪಡೆಯುವುದನ್ನು ಕಲಿಯಬೇಕು. ಕೊಳ್ಳುಬಾಕ ಧೋರಣೆಯ ಬದಲಿಗೆ ಈ ಕನಿಷ್ಠ ಬಯಕೆಗಳ ಧೋರಣೆಯು ಮುಂದಿನ ಪೀಳಿಗೆಗೆ ನಮ್ಮ ಭೂಮಿಯ ಸುಸ್ಥಿರತೆ ಯನ್ನು ಕಾಪಾಡಲು ಸಹಾಯ ಮಾಡುತ್ತದೆ.
ಭೌತಿಕ ವಸ್ತುಗಳನ್ನು ಖರೀದಿಸುವ ಬದಲು, ನಾವು ಉತ್ತಮ ಅನುಭವಗಳನ್ನು ಖರೀದಿಸುವುದರತ್ತ ಆದ್ಯತೆ ನೀಡುವಅಗತ್ಯವಿದೆ. ಇದು ಖಿನ್ನತೆ, ಆತ್ಮಹತ್ಯೆ, ಮಾನವ ಕಳ್ಳಸಾಗಾಣಿಕೆ ಮತ್ತು ಇತರ ಕೆಟ್ಟ ಪ್ರವೃತ್ತಿಗಳಿಂದ ಸಮಾಜವನ್ನು ಮುಕ್ತ ಗೊಳಿಸಲು ಸಹಾಯ ಮಾಡುತ್ತದೆ. ಅಂತಿಮವಾಗಿ ಹೇಳುವುದಾದರೆ, ಸಂತೋಷ ಎಂಬುದು ಅತ್ಯಂತ ವ್ಯಕ್ತಿನಿಷ್ಠ ವಾದುದು. ಅಂದರೆ, ಪ್ರತಿಯೊಬ್ಬ ವ್ಯಕ್ತಿಯೂ ತಮ್ಮ ಸಂತೋಷಕ್ಕೆ ವಿಭಿನ್ನ ಮಾನದಂಡಗಳನ್ನು ಹೊಂದಿರುತ್ತಾರೆ. ಆದರೆ ವೈಯಕ್ತಿಕ ವಲಯದಲ್ಲಿ ಆಲೋಚನೆಗಳು ಹಾಗೂ ಕ್ರಿಯೆಗಳ ಮೂಲಕ ಸಂತೋಷವನ್ನು ಸೃಷ್ಟಿಸುವುದಕ್ಕಾಗಿ ಅದನ್ನು ವಸ್ತುನಿಷ್ಠವಾಗಿ ಸಾದೃಶ್ಯೀಕರಣ ಮಾಡಬೇಕಾದ ಅಗತ್ಯವಿದೆ. ಈ ವೈಯಕ್ತಿಕ ವಲಯದ ಪರಸ್ಪರ ಅಂತರ-ಸಂಪರ್ಕವು ಹೆಚ್ಚು ನ್ಯಾಯೋಚಿತ ಮತ್ತು ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ದಾರಿ ಮಾಡುತ್ತದೆ. ಈ ನಿಟ್ಟಿನಲ್ಲಿ, ನಮ್ಮ ಬಳಿ ಬಂದ ಯಾರೊಬ್ಬರೂ ಸಂತೋಷ ಮತ್ತು ಉತ್ತಮ ಭಾವನೆ ಇಲ್ಲದೆ ಹಿಂದಿರುಗಲು ಬಿಡುವುದಿಲ್ಲ ಎಂದು ಈ ಸಂದರ್ಭದಲ್ಲಿ ಪ್ರತಿಜ್ಞೆ ಮಾಡೋಣ. ನಮ್ಮ ಸಾಮೂಹಿಕ ವಿವೇಕವು ಇದಕ್ಕಾಗಿ ಒಟ್ಟಿಗೆ ಕೆಲಸ ಮಾಡಲು ನಮಗೆ ಶಕ್ತಿ ನೀಡುತ್ತದೆ.
(ಲೇಖಕರು: ಸಂಸದೀಯ ವ್ಯವಹಾರ, ಭಾರಿ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳ ಸಹಾಯಕ ಸಚಿವ)