ಉಸಿರಾಡಿದರೆ ಸಿಗರೇಟು ಸೇದಿದಂತೆ !
ಅಭಿಮತ
ದುರ್ಗಾ ಭಟ್‌ ಕೆದುಕೋಡಿ
ಪ್ರತಿನಿತ್ಯ ಜನರು ಸೇವಿಸುವ ಆಹಾರದಿಂದ ಹಿಡಿದು, ದಿನ ಬಳಕೆಯ ವಸ್ತುಗಳವರೆಗೆ ಎಲ್ಲಾದಕ್ಕೂ ಬೆಲೆ ತೆರಬೇಕು. ಕಾಲ ಎಷ್ಟೊಂದು ಮುಂದುವರಿದಿದೆ ಎಂದರೆ ನೈಸರ್ಗಿಕವಾದ ಉಸಿರಾಡುವ ಶುದ್ಧ ಗಾಳಿಯನ್ನೂ ಹಣ ಕೊಟ್ಟು ಖರೀದಿಸುವ ಪರಿಸ್ಥಿತಿ ಬಂದೊದಗಿದೆ.
ಸರಕಾರ ನೀರು, ವಿದ್ಯುತ್, ಅನಿಲಗಳನ್ನು ಉಚಿತವಾಗಿ ನೀಡುತ್ತದೆ. ಆದರೆ ಉಚಿತವಾಗಿ ಗಾಳಿ ಬೇಕಾದರೆ ಆರೋಗ್ಯದ ಜತೆ ಸ್ವಲ್ಪಮೈತ್ರಿ ಮಾಡಿಕೊಳ್ಳಲೇಬೇಕಾಗುತ್ತದೆ. ಹೀಗಾಗಿ ಗಾಳಿಯನ್ನೂ ಮಿಠಾಯಿ ಮಾರಾಟ ಮಾಡಿದಂತೆ ಮಾರುತ್ತಾರೆ. ಉಸಿರಾಡುವ ಆಮ್ಲಜನಕವನ್ನು ರೂಪಾಯಿ ಲೆಕ್ಕದಲ್ಲಿ ಕೊಂಡುಕೊಳ್ಳುವ ಸ್ಥಿತಿ ನಿರ್ಮಾಣ ವಾಗಿದ್ದು ಎಲ್ಲೋ ದೂರದ ರಾಷ್ಟ್ರಗಳಲ್ಲಿ ಅಲ್ಲಾ ಸ್ವಾಮಿ..! ನಮ್ಮದೇ ದೇಶದ ರಾಜಧಾನಿಯಲ್ಲಿ.
ಸ್ವಿಸ್ ಏರ್ ಟೆಕ್ನಾಲಜಿ ಕಂಪನಿಯ ವಿಶ್ವ ವಾಯು ಗುಣಮಟ್ಟ ಸೂಚ್ಯಂಕದ 2020ನೇ ಸಾಲಿನ ವರದಿಯಲ್ಲಿ ಸತತ ಮೂರನೇ ಬಾರಿಗೆ ದಿಲ್ಲಿ ಮೊದಲ ಸ್ಥಾನದಲ್ಲಿದೆ. 2019ರ ಹೋಲಿಕೆಯಲ್ಲಿ ಶೇ. 63ರಷ್ಟು ಪ್ರಮಾಣದಲ್ಲಿ ಮಾಲಿನ್ಯ ನಿಯಂತ್ರಣ ಸಂಬಂಧಿತ ಸುಧಾರಣೆಗಳು ಜಾರಿ ಮಾಡಲಾಗಿದ್ದರೂ, ಅವುಗಳಿಂದ ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ ಎನ್ನುವುದನ್ನೂ ವರದಿ ತಿಳಿಸಿದೆ.
ವರ್ಷದ ಎಲ್ಲಾ ತಿಂಗಳುಗಳ ಸರಾಸರಿ ಗಮನಿಸಿದಾಗ ಹೆಚ್ಚಿನ ಅವಧಿಯಲ್ಲಿ ಗಾಳಿಯ ಗುಣಮಟ್ಟ ಉತ್ತಮವಾಗಿರುವುದಿಲ್ಲ. ಕರೋನಾ ಆತಂಕದಿಂದ ಹೇರಲಾಗಿದ್ದ ಲಾಕ್‌ಡೌನ್‌ನಿಂದಾಗಿ ವಾಯುಮಾಲಿನ್ಯ ನಿಯಂತ್ರಣಕ್ಕೆ ಬಂದಿತ್ತಾದರೂ, ಸದ್ಯ ವಾಯು ಗುಣಮಟ್ಟ ಅಪಾಯಕಾರಿ ಆಗಿದೆ.
ಮಾಲಿನ್ಯ ಹೆಚ್ಚಲು ಕಾರಣವೇನು?:ದೆಹಲಿಯಲ್ಲಿ ಸಾಮಾನ್ಯವಾಗಿ ಸಂಚಾರ ದಟ್ಟಣೆ ಹೆಚ್ಚಿದ್ದು, ವಾಯುಮಾಲಿನ್ಯ ಉಂಟಾಗುತ್ತಿತ್ತು. ಜತೆಗೆ ದೀಪಾವಳಿ ಆಚರಣೆ ಸಂದರ್ಭದಲ್ಲಿ ಸುಡುವ ಪಟಾಕಿಗಳಿಂದ ಮಾಲಿನ್ಯ ದುಪ್ಪಟ್ಟಾಗುತ್ತಿತ್ತು. ನೆರೆಯ ರಾಜ್ಯಗಳಾದ ಹರಿಯಾಣ ಮತ್ತು ಪಂಜಾಬ್ ನಲ್ಲಿ ಲಕ್ಷಾಂತರ ರೈತರು ಗೋಧಿ ಬೆಳೆ ಕಟಾವು ಮಾಡಿದ ಬಳಿಕ ಅದರ ಹುಲ್ಲನ್ನು ಜಮೀನುಗಳಲ್ಲಿ ಸುಡುತ್ತಾರೆ.
ಇದರಿಂದ ಭಾರಿ ಪ್ರಮಾಣದ ಹೊಗೆ ವಾತಾವರಣ ಸೇರುತ್ತಿದ್ದು ಇದರ ಪರಿಣಾಮ ದೆಹಲಿ ಮೇಲೆ ಉಂಟಾಗುತ್ತದೆ. ಗೋಧಿ ಹುಲ್ಲನ್ನು ಗೊಬ್ಬರವಾಗಿ ಮಾರ್ಪಡಿಸಲು ಹಲವು ಮಾರ್ಗಗಳಿವೆಯಾದರೂ, ಅಲ್ಲಿನ ರೈತರು ಹುಲ್ಲಿಗೆ ಬೆಂಕಿ ಹಚ್ಚುವುದರಿಂದ ಪ್ರತಿವರ್ಷ ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತದೆ. ಹುಲ್ಲನ್ನು ಜಮೀನುಗಳಲ್ಲಿಯೇ ಗೊಬ್ಬರವಾಗಿ ಸಂಸ್ಕರಿಸುವತಂತ್ರಜ್ಞಾನ ಹಾಗೂ ಉಪಕರಣಗಳಿವೆ. ಇಷ್ಟು ದುಬಾರಿಯ ಯಂತ್ರಗಳನ್ನು ಕೊಳ್ಳಲು ನಮ್ಮಿಂದ ಆಗುವುದಿಲ್ಲ. ಹೀಗಾಗಿ ಹುಲ್ಲು ಸುಡುವುದು ಅನಿವಾರ್ಯ ಎಂದು ರೈತರು ಹೇಳುತ್ತಾರೆ.
ವಾಯುಮಾಲಿನ್ಯದ ಸ್ಥಿತಿ ವರ್ಷದಿಂದ ವರ್ಷಕ್ಕೆ ಗಂಭೀರವಾಗುತ್ತಿದೆ. ಹಲವು ದಶಕಗಳಿಂದ ತೋರಿದ ನಿರ್ಲಕ್ಷ್ಯ ಮತ್ತು ಜೀವನ ಶೈಲಿಯಲ್ಲಾದ ಬದಲಾವಣೆ ಇದಕ್ಕೆ ಮುಖ್ಯ ಕಾರಣ. ಮಕ್ಕಳ ಆರೋಗ್ಯದ ಮೇಲೆಯೂ ಇದು ಪ್ರತಿಕೂಲ ಪರಿಣಾಮ ಬೀರುತ್ತಿದ್ದು ಅತೀ ಸಣ್ಣ ವಯಸ್ಸಿನಲ್ಲಿಯೇ ಅಸ್ತಮಾಗೆ ತುತ್ತಾಗುತ್ತಿದ್ದಾರೆ. ಇನ್ನೊಂದು ಸ್ವಾರಸ್ಯಕರ ಅಷ್ಟೇ ದುರಾದೃಷ್ಟಕರ ವಿಷಯವೇ ನೆಂದರೆ ನೀವು ಧೂಮಪಾನದ ದಾಸರು ಹೌದೋ ಅಲ್ಲವೋ ಆದರೆ ದೆಹಲಿಯಲ್ಲಿ ಉಸಿರಾಡಿದರೆ ದಿನವೊಂದಕ್ಕೆ ಕನಿಷ್ಠ 25-40 ಸಿಗರೇಟು ಸೇದಿದಂತೆ..!
ಹೇಗೆಂದರೆ ದೀಪಾವಳಿ ಮುಂತಾದ ಸಂದರ್ಭಗಳಲ್ಲಿ ಹೊಡೆಯುವ ಪಟಾಕಿಗಳಿಂದ ಹಾಗೂ ಇತರ ಹೊಗೆ ಮತ್ತು ಮಂಜಿನಿಂದ ವಾಯುಗುಣಮಟ್ಟ ಸೂಚ್ಯಂಕ ಅಪಾಯದ ಮಟ್ಟ ಮೀರುತ್ತದೆ. ಅದಕ್ಕೆ ಬದಲಾಗಿ ತಾಜ್ಯದ ಮೇಲೆ ಕೆಮಿಕಲ್ ಸಿಂಪಡಿಸಿ ಅಲ್ಲೇ ಕೊಳೆಯುವ ವ್ಯವಸ್ಥೆ ಮಾಡಲಾಗಿತ್ತು. ಇಷ್ಟೆಲ್ಲಾ ಕ್ರಮ ಕೈಗೊಂಡಿದ್ದರೂ ದೆಹಲಿಯ ವಾಯು ಮಾಲಿನ್ಯ ನಿಯಂತ್ರಣ ಬಾರದೇ ಇರುವುದು ಸಹಜವಾಗಿ ಜನರಲ್ಲಿ ಆತಂಕವನ್ನು ಉಂಟುಮಾಡಿದೆ.