ಲಸಿಕೆ ಸಿಗುತ್ತಿದ್ದಂತೆ, ಕರೋನಾ ವಿರುದ್ದ ಗೆದ್ದಂತಲ್ಲ
ಅಶ್ವತ್ಥಕಟ್ಟೆ
ರಂಜಿತ್ ಎಚ್.ಅಶ್ವತ್ಥ
ಇಡೀ ವಿಶ್ವವನ್ನು ಕಾಡಿದ್ದ ಕರೋನಾ ಭಾರತದಲ್ಲಿ ಕಾಣಿಸಿಕೊಂಡು ವರ್ಷದ ಮೇಲೆ ಕೆಲ ದಿನಗಳಾಯಿತು. ಕರೋನಾ ವಿರುದ್ಧಹೋರಾಡಲು ಲಾಕ್‌ಡೌನ್, ಸೀಲ್‌ಡೌನ್ ಸೇರಿದಂತೆ ಹಲವು ಪ್ರಯತ್ನಗಳು ಶುರುವಾಗಿ ವರ್ಷ ಕಳೆಯಿತು. ಈ ಒಂದು ವರ್ಷ ದಲ್ಲಿ ಕರೋನಾ ಸೋಂಕಿತರ ಅಂಕಿ – ಅಂಶದಲ್ಲಿ ಹಲವು ಏರಿಳಿತ ಕಾಣಿಸಿಕೊಂಡಿವೆ.
ಆದರೆ ಲಸಿಕೆ ಕಂಡು ಹಿಡಿದ ಕೂಡಲೇ, ಕರೋನಾ ವಿರುದ್ಧದ ಸಮರದಲ್ಲಿ ಗೆಲುವು ಸಾಧಿಸಿದ್ದೇವೆ ಎನ್ನುವ ಲೆಕ್ಕಾಚಾರ ದಲ್ಲಿರುವಾಗಲೇ, ದೇಶದಲ್ಲಿ ಪುನಃ ಕರೋನಾ ಸೋಂಕಿತರ ಸಂಖ್ಯೆ ಏರುತ್ತಲೇ ಸಾಗಿದೆ. ಹಾಗಾದರೆ, ಕರೋನಾದ ಹಾವಳಿ ನಿಂತಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರ, ‘ನಿಮ್ಮ ಮುಂಜಾಗ್ರತೆಯಿಂದ ಮಾತ್ರ ಕರೋನಾ ನಿಯಂತ್ರಣ ಸಾಧ್ಯ ಎನ್ನುವುದಾಗಿದೆ.ದೇಶದಲ್ಲಿ ದಿನವೊಂದಕ್ಕೆ ಒಂದೂವರೆ ಲಕ್ಷ ದಾಟಿದ್ದ ಸೋಂಕಿತರ ಸಂಖ್ಯೆ, ನಾಲ್ಕು ಅಂಕಿಗೆ ಇಳಿದಿದ್ದು.
ಆದರೀಗ ಪುನಃ ಅರ್ಧ ಲಕ್ಷದತ್ತ ಸಾಗುತ್ತಿದೆ. ಅದೇ ರೀತಿ ಕರ್ನಾಟಕದಲ್ಲಿಯೂ ಮೂರಂಕಿಗೆ ಇಳಿದಿದ್ದ ಸೋಂಕಿತರ ಸಂಖ್ಯೆ ಇದೀಗ ಪುನಃ ಸಾವಿರದ ಗಡಿ ದಾಟುತ್ತಿದೆ. ಲಸಿಕೆ ಕಂಡುಹಿಡಿದ ಬಳಿಕವೂ, ಈ ರೀತಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದೇಕೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಆದರೆ ಇನ್ನೂ ಎಲ್ಲರಿಗೂ ಲಸಿಕೆ ಹಂಚಿಕೆ ಪೂರ್ಣಗೊಂಡಿಲ್ಲ ಎನ್ನುವುದು ಒಂದು ವಾಸ್ತವವಾದರೆ, ಲಸಿಕೆ ಹಾಕಿಸಿಕೊಂಡ ಬಳಿಕವೂ ಮುನ್ನೆಚ್ಚರಿಕೆ ಇದ್ದರೆ ಮಾತ್ರ ಕರೋನಾ ವಿರುದ್ಧ ಪೂರ್ಣ ಪ್ರಮಾಣದಲ್ಲಿ ಗೆಲುವು ಸಾಧಿಸುವುದಕ್ಕೆ ಸಾಧ್ಯ ಎನ್ನುವುದು ಕಟುವಾಸ್ತವ.
ಹಾಗೆ ನೋಡಿದರೆ, ಇತರ ರಾಷ್ಟ್ರಗಳಿಗೆ ಹೋಲಿಸಿದರೆ, ಫಾರ್ಮಾ ಕ್ಷೇತ್ರದಲ್ಲಿ ಉತ್ತಮ ಹಿಡಿತ ಹೊಂದಿರುವ ಭಾರತ ಲಸಿಕೆಯನ್ನು ಸಿದ್ಧಪಡಿಸಿತ್ತು. ಭಾರತದಲ್ಲಿ ಅನೇಕರು ಲಸಿಕೆಯ ಗುಣಮಟ್ಟದ ಬಗ್ಗೆ ಮಾತನಾಡುತ್ತಿರುವಾಗಲೇ, ಹಲವು ದೇಶಗಳು ಭಾರತದ ಲಸಿಕೆಯತ್ತ ನೋಟ ಬೀರಿದವು. ಕರೋನಾ ಕಾಣಿಸಿಕೊಂಡ ಕೆಲವೇ ದಿನಗಳಲ್ಲಿ ಕರೋನಾ ಲಸಿಕೆಯನ್ನು ತಯಾರಿಸುವಲ್ಲಿ ಹಲವು ದೇಶದ ವಿಜ್ಞಾನಿಗಳು ತಲೀನರಾದರು. ಅದರಲ್ಲಿ ಆಕ್ಸ್’ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಮೊದಲಿಗೆ ತಮ್ಮ ಲಸಿಕೆ ಯಶಸ್ವಿ ಯಾಗಿದೆಯೆಂದು ಘೋಷಿಸಿಕೊಂಡರು.
ಅದಾದ ಬಳಿಕ ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳು ತಮ್ಮ ಬಳಿ ಕರೋನಾ ಲಸಿಕೆ ಸಿದ್ಧವಿದೆ ಎನ್ನುವ ಘೋಷಣೆಯನ್ನು ಮಾಡಿದರು. ಭಾರತ ಪ್ರಮುಖವಾಗಿ ಕೊವ್ಯಾಕ್ಸೀನ್ ಹಾಗೂ ಕೊವಿಶೀಲ್ಡ್ ಎನ್ನುವ ಎರಡು ಲಸಿಕೆಯನ್ನು ಸಿದ್ಧಪಡಿಸಿ, ದೇಶದೆಲ್ಲೆಡೆ ಕಳೆದ ಎರಡು ತಿಂಗಳಿನಿಂದ ಲಸಿಕೆ ಹಾಕುವ ಕಾರ್ಯಕ್ರಮವೂ ನಡೆಯುತ್ತಿದೆ. ಈ ಲಸಿಕೆಗಳ ಪರ – ವಿರೋಧ ಚರ್ಚೆ ಒಂದು ಭಾಗವಾದರೆ, ಲಸಿಕೆ ಬಂದ ಬಳಿಕ ದೇಶದ ಜನರಲ್ಲಿ ಒಂದು ಮೊಂಡು ವಾದವಂತೂ ಶುರುವಾಗಿದೆ.
‘ಇನ್ನೇನೂ ಕರೋನಾ ಲಸಿಕೆ ಸಿಕ್ಕಿದೆ. ಇನ್ನು ಮುಂದೆ ಕರೋನಾದ ಆತಂಕವಿಲ್ಲ ಎಂದುಕೊಂಡು ಮುಂಜಾಗ್ರತೆಯನ್ನು ಮರೆತು ದೈನಂದಿನ ಜೀವನದಲ್ಲಿ ತೊಡಗಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅಂತೂ, ದೇಶದ ಹಲವು ಭಾಗದಲ್ಲಿ ಕರೋನಾ ಸೋಂಕೇ ಇಲ್ಲ ಎನ್ನುವ ರೀತಿ ಜನರು ಓಡಾಡಿಕೊಂಡಿರುವ ದೃಶ್ಯ ನೋಡಬಹುದು. ಒಂದು ರೀತಿ ಇದು ಅಗತ್ಯ ಮತ್ತು ಅನಿವಾರ್ಯವೂ ಹೌದು. ನಮ್ಮೊಂದಿಗೆ ಕರೋನಾ ಇರುತ್ತದೆ ಎಂದ ಮೇಲೆ, ಅದು ಹೋಗುವ ತನಕ ಮನೆಯಿಂದ ಆಚೆ ಬರುವುದಿಲ್ಲ ಎನ್ನುವ ಮನಸ್ಥಿತಿಯಲ್ಲಿ ಜೀವನ ಸಾಗಿಸುವುದು ಕಷ್ಟ.
ಅಂದ ಮಾತ್ರಕ್ಕೆ, ಕರೋನಾದಿಂದ ರಕ್ಷಣೆ ಪಡೆಯಲು ಇರುವ ಮುಂಜಾಗ್ರತಾ ಕ್ರಮವನ್ನು ಗಾಳಿಗೆ ತೂರಿ ಓಡಾಡಿಕೊಂಡಿರು ವುದು ಸರಿಯಲ್ಲ. ಇದರಿಂದಲೇ ದೇಶದಲ್ಲಿ ಕರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸರಕಾರ ತಗೆದುಕೊಳ್ಳುವ ಮಾರ್ಗಸೂಚಿಯನ್ನು ಪಾಲಿಸುವುದು ಒಂದು ಭಾಗವಾದರೆ, ಸ್ವಯಂ ನಿರ್ಬಂಧ ಹೇರಿಕೊಂಡು ಜೀವನ ಸಾಗಿಸುವುದು ಮತ್ತೊಂದು ಭಾಗ. ಆದರೆ ಬಹುತೇಕ ಭಾಗದಲ್ಲಿ ಈ ಎರಡನ್ನೂ ಪಾಲಿಸದಿರುವುದು ಸೋಂಕು ಉಲ್ಬಣಗೊಳ್ಳಲು ಪ್ರಮುಖ ಕಾರಣವಾಗಿದೆ.
ಇನ್ನು ಮೇಲೆ ಹೇಳಿದಂತೆ ಕರೋನಾ ಲಸಿಕೆ ಹಾಕಿಸಿಕೊಂಡ ಕೂಡಲೆ, ಸೋಂಕಿನಿಂದ ಪೂರ್ಣ ಪ್ರಮಾಣದಲ್ಲಿ ರಕ್ಷಣೆ ಸಿಗಲಿದೆ ಎನ್ನುವ ಮನಸ್ಥಿತಿಯಲ್ಲಿ ಅನೇಕರಿದ್ದಾರೆ. ಜನರು ಈ ರೀತಿ ತಿಳಿದುಕೊಳ್ಳಲು ಸರಕಾರಗಳು ನೀಡಿದ ಪ್ರಚಾರವೂ ಕಾರಣವಿರ ಬಹುದು. ಆದರೆ ತಜ್ಞರ ಪ್ರಕಾರ, ಕರೋನಾ ಲಸಿಕೆ ಹಾಕಿಸಿಕೊಂಡ ಮಾತ್ರಕ್ಕೆ ಕರೋನಾ ಬರುವುದಿಲ್ಲ  ಎಂದಲ್ಲ. ಬದಲಿಗೆ ಸೋಂಕಿನಿಂದ ತಡೆಯುವುದಕ್ಕೆ ಈ ಲಸಿಕೆ ಸಹಾಯ ಮಾಡುತ್ತದೆ. ಒಂದು ವೇಳೆ ಸೋಂಕು ಬಂದರೂ, ಅದು ತೀವ್ರ ಪ್ರಮಾಣದಲ್ಲಿ ಬಾರದ ರೀತಿಯಲ್ಲಿ ಕಾರ್ಯನಿರ್ವಹಿಸಲಿದೆ.
ಕರೋನಾಕ್ಕೂ ಮೊದಲು ಇದ್ದ ಹಲವು ವೈರಾಣು ಕಾಯಿಲೆಗಳಿಗೆ ಮಕ್ಕಳು ಹುಟ್ಟುತ್ತಿದ್ದ ಹಾಗೇ, ಲಸಿಕೆಯನ್ನು ಹಾಕಿಸಲಾಗು ತ್ತದೆ. ಅಂದ ಮಾತ್ರಕ್ಕೆ ಅವು ಬರುವುದಿಲ್ಲ ಎಂದಲ್ಲವಲ್ಲ. ಅದೇ ರೀತಿ ಕರೋನಾ ಲಸಿಕೆಯೂ ನಿಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ, ಸೋಂಕಿನ ವಿರುದ್ಧ ಹೋರಾಡುವುದಕ್ಕೆ ದೇಹವನ್ನು ಸಜ್ಜುಗೊಳಿಸುತ್ತದೆ. ಒಂದುರೀತಿ oeಜಿಟ್ಞ ಛ್ಛ್ಛಿಛ್ಚಿಠಿ ನೀಡುತ್ತದೆ.
ಕರೋನಾ ಸೋಂಕು ರಾಜ್ಯ ಹಾಗೂ ದೇಶದಲ್ಲಿ ಕಡಿಮೆಯಾಗಿ ಪುನಃ ಎರಡನೇ ಅಲೆ ಬರುವುದಕ್ಕೆ ಕೇವಲ ಸಾರ್ವಜನಿಕರು ಮಾತ್ರವಲ್ಲ, ಆಡಳಿತ ನಡೆಸುವವರೂ ಕಾರಣ ಎಂದರೆ ತಪ್ಪಾಗಲಿಕ್ಕಿಲ್ಲ. ಸೋಂಕಿನ ಲಸಿಕೆ ಕಂಡುಹಿಡಿದು, ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎನ್ನುತ್ತಿದ್ದಂತೆ, ಕರೋನಾ ವಿರುದ್ಧ ಗೆದ್ದೇ ಬಿಟ್ಟೆವು ಎನ್ನುವ ರೀತಿ ನಡೆದುಕೊಂಡರು. ಕರೋನಾ ಲಕ್ಷಣ ವಿರುವವರಿಗಿಂತ, ಲಕ್ಷಣ ರಹಿತವಾಗಿ ಅನೇಕರಿಗೆ ಸೋಂಕು ಹಬ್ಬುತ್ತಿದೆ ಎನ್ನುವ ಬಗ್ಗೆ ಹೆಚ್ಚು ಗಮನಕೊಡಲಿಲ್ಲ.
ಜನರ ಹಾಗೂ ವಿಶ್ವಮಟ್ಟದಲ್ಲಿ ಕರೋನಾ ವಿರುದ್ಧ ಗೆದ್ದೆವು ಎಂದು ತೋರಿಸಿಕೊಳ್ಳುವ ಅವರಸದಲ್ಲಿ ಎರಡನೇ ಅಲೆಯ ಎಚ್ಚರಿಕೆಯನ್ನು ತಪ್ಪಿದರು. ಯಾವಾಗ ಸರಕಾರ ಕರೋನಾ ವಿರುದ್ಧ ಗೆಲುವು ಸಾಧಿಸಿದೆವು ಎನ್ನುವ ರೀತಿ ತೋರಿಸಿಕೊಂಡರೋ, ಅಲ್ಲಿಂದ ಜನರು ಕರೋನಾವನ್ನು ನಿರ್ಲಕ್ಷ್ಯ ಮಾಡಲು ಶುರು ಮಾಡಿದರು. ಈ ಎಲ್ಲದರ ಪರಿಣಾಮವೇ, ಇದೀಗ ಕರ್ನಾಟಕ, ಕೇರಳ, ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಕರೋನಾ ಸೋಂಕಿತರ ಸಂಖ್ಯೆ ಏರುಮುಖದಲ್ಲಿ ಸಾಗುತ್ತಿರುವುದಕ್ಕೆಕಾರಣ ಎನ್ನುವುದನ್ನು ಒಪ್ಪಬೇಕು.
ಕಳೆದೊಂದು ವರ್ಷದ ಹಿಂದೆ ಕರೋನಾ ಕಾಣಿಸಿಕೊಂಡಾಗ ಇದ್ದ ಆತಂಕ ಈಗಿಲ್ಲ. ಆರಂಭದಲ್ಲಿ ಕರೋನಾ ರೋಗ ಲಕ್ಷಣದ ಯಾವುದಾದರೂ ಒಂದು ಲಕ್ಷಣ ಕಾಣಿಸಿದರೂ, ಕರೋನಾ ಟೆಸ್ಟ್ ಅಥವಾ ಆಸ್ಪತ್ರೆಗಳತ್ತ ಜನರು ಹೋಗುತ್ತಿದ್ದರು. ಆದರೀಗ ಕರೋನಾ ಎಲ್ಲ ಲಕ್ಷಣಗಳಿದ್ದರೂ,   ನತ್ತ ಅನೇಕರು ಹೊರಳಿದ್ದಾರೆ.
ಇನ್ನು ಅನೇಕ ಭಾಗದಲ್ಲಿ ಜನರು ಆಸ್ಪತ್ರೆಗೆ ಹೋದರೂ, ವೈದ್ಯರೇ ಕರೋನಾ ಟೆಸ್ಟ್ ಬದಲು, ಕರೋನಾ ಸೋಂಕಿಗೆ ನೀಡುವಔಷಧವನ್ನು ನೀಡಿ ಸಾಗಿ ಹಾಕುವ ಕೆಲಸವನ್ನು ಮಾಡುತ್ತಿರುವುದು ನಾವೆಲ್ಲ ನೋಡಿದ್ದೇವೆ. ಇದು ಸಹ ಕರೋನಾ ಸೋಂಕು ಹಬ್ಬುವುದಕ್ಕೆ ಕಾರಣ. ಈ ಹಿಂದೆ ಇದ್ದ ಸಾಮಾಜಿಕ ಅಂತರ, ಐಸೋಲೇಷನ್‌ಗಳನ್ನು ಬಹುತೇಕರು ಪಾಲಿಸುತ್ತಿಲ್ಲ. ಇದರೊಂದಿಗೆ ಟೆಸ್ಟಿಂಗ್ ಸಂಖ್ಯೆ ಕ್ಷೀಣಿಸಿರುವುದರಿಂದ, ನೈಜ ಸೋಂಕಿತರ ಒಟ್ಟಾರೆ ಸಂಖ್ಯೆಯ ಶೇ.೨೦ರಿಂದ೩೦ರಷ್ಟು ಪ್ರಕರಣಗಳು ಮಾತ್ರ ಪ್ರಕಟವಾಗುತ್ತಿವೆ ಎನ್ನುವ ಮಾತುಗಳನ್ನು ತಜ್ಞರು ಹೇಳುತ್ತಿದ್ದಾರೆ.
ಆದರೆ ಆಡಳಿತ ನಡೆಸುವವರಿಗಾಗಲಿ, ಜನರಿಗಾಗಲಿ ಕರೋನಾ ಸೋಂಕಿತರ ನೈಜ ಸಂಖ್ಯೆ ಬೇಕಿಲ್ಲದಿರುವುದು ಈ ಸಮಸ್ಯೆ ಮತ್ತಷ್ಟು ಜಟಿಲಗೊಂಡಿದೆ. ಈಗಾಗಲೇ ಯುಕೆ, ಯೂರೋಪ್, ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ಭಾಗದಲ್ಲಿ ಎರಡನೇ ಅಲೆಯ ಕರೋನಾ ಮುಗಿದು, ಮೂರನೇ ಅಲೆ ಕಾಣಿಸಿಕೊಳ್ಳುತ್ತಿದೆ. ಅದರಲ್ಲಿ ಹಲವಾರು ರೂಪಾಂತರಿ ಕರೋನಾ ಇದೆ ಎನ್ನುವುದುಇನ್ನಷ್ಟು ಆತಂಕವನ್ನು ಸೃಷ್ಟಿಸಿದೆ. ಈ ರಾಷ್ಟ್ರಗಳಲ್ಲಿ ಕರೋನಾ ಸೋಂಕು ಇಳಿಕೆಯಾದ ಬಳಿಕ ಲಾಕ್‌ಡೌನ್ ಸಡಿಲಿಕೆಮಾಡುತ್ತಿದ್ದಂತೆ, ಈ ರೀತಿ ಸೋಂಕು ಹೆಚ್ಚಳವಾಗುತ್ತಿರುವುದನ್ನು ಗಮನಿಸಬಹುದು.
ಈ ರೀತಿ ಸೋಂಕು ದಿನದಿಂದ ದಿನಕ್ಕೆ ಹೆಚ್ಚಾಗಲು ಪ್ರಮುಖವಾಗಿ, ಜನರು ತೋರಿದ ನಿರ್ಲಕ್ಷ್ಯವೇ ಕಾರಣ. ಕೇಂದ್ರ ಹಾಗೂ ರಾಜ್ಯ ಸರಕಾರ ಅನ್‌ಲಾಕ್ ಹೆಸರಲ್ಲಿ, ಹಂತಹಂತವಾಗಿ ಎಲ್ಲ ನಿರ್ಬಂಧವನ್ನು ತೆರವುಗೊಳಿಸಿತು. ಇದರಿಂದ ಲಾಕ್‌ಡೌನ್ ವೇಳೆ, ಮನೆಯಲ್ಲಿಯೇ ಇದ್ದ ಅನೇಕರು ಕೆಲಸವಿರಲಿ ಬಿಡಲಿ ಓಡಾಡಲು ಶುರು ಮಾಡಿದರು. ಅಂತಾರಾಜ್ಯ ಪ್ರಮಾಣದ ಸಂಖ್ಯೆಏರಿಕೆಯಾಗುತ್ತಿದ್ದಂತೆ, ಸೋಂಕಿತರು ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ಹೋಗುವ ಸಂಖ್ಯೆಯೂ ಹೆಚ್ಚಾಯಿತು.
ಇದರೊಂದಿಗೆ ಚಿತ್ರೋದ್ಯಮಕ್ಕೆ ಸಹಾಯವಾಗಲಿ ಎಂದು ಚಿತ್ರಮಂದಿರದಲ್ಲಿ ಶೇ.೧೦೦ರಷ್ಟು ಅವಕಾಶ, ಕ್ರೀಡಾ ಕ್ಷೇತ್ರಕ್ಕೆಅನುಕೂಲವಾಗಲಿ ಎನ್ನುವ ದೃಷ್ಟಿಯಿಂದ ಕ್ರೀಡಾ ಚಟುವಟಿಕೆಗಳಿಗೆ ಅವಕಾಶ, ನೆಲಕಚ್ಚಿದ್ದ ಪ್ರವಾಸೋದ್ಯಮದಪುನಶ್ಚೇತನಕ್ಕೆ ನಿರ್ಬಂಧರಹಿತ ಟೂರಿಸಂಗೆ ಅವಕಾಶ. ಹೀಗೆ ಎಲ್ಲವಕ್ಕೂ ಸರಕಾರ ಅವಕಾಶ ನೀಡಿತು. ಇನ್ನು ಜನರು, ಅವಕಾಶ ಸಿಗುತ್ತಿದ್ದಂತೆ, ಸಾಧಕ – ಬಾಧಕದ ಬಗ್ಗೆ ಯೋಚಿಸದೇ ಕರೋನಾದ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ಗಾಳಿಗೆ ತೂರಿ ಓಡಾಡಲು ಶುರು ಮಾಡಿದರು. ಇದರಿಂದ ಸೋಂಕು ಹಬ್ಬುವುದಕ್ಕೆ ಸಹಾಯವಾಯಿತು.
ಈ ಎಲ್ಲದರ ಪರಿಣಾಮವೇ ಇದೀಗ ಎಲ್ಲರ ಮುಂದೆ ಪುನಃ ಕಾಣಿಸಿಕೊಂಡಿರುವ ಕರೋನಾ ಗುಮ್ಮ. ಸಾರ್ವಜನಿಕರೊಂದಿಗೆ ಆಡಳಿತ ನಡೆಸುವ, ಜನರಿಗೆ ಮಾದರಿಯಾಗಬೇಕಿದ್ದ ರಾಜಕೀಯ ಪಕ್ಷಗಳು, ರಾಜಕೀಯ ಹಿತಾಸಕ್ತಿಗಾಗಿ ಕರೋನಾದ ಎಲ್ಲ ಕಟ್ಟುಪಾಡುಗಳನ್ನು ಗಾಳಿಗೆ ತೂರಿದವು ಎಂದರೆ ತಪ್ಪಾಗಲಿಕ್ಕಿಲ್ಲ. ಪಶ್ಚಿಮ ಬಂಗಾಳ, ಕೇರಳದಲ್ಲಿ ನಡೆಯುತ್ತಿರುವ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಅವರಕಾರ್ಯಕ್ರಮಗಳಿಗೆ ಲಕ್ಷ ಲಕ್ಷ ಜನರನ್ನು ಸೇರಿಸಲಾಯಿತು. ಈ ಬೃಹತ್ ಸಮಾವೇಶದಲ್ಲಿ ಎಲ್ಲಿಯೂ ಕರೋನಾದ ಮುನ್ನೆಚ್ಚರಿಕಾ ಕ್ರಮಗಳು ಕಾಣಿಸಲಿಲ್ಲ.
ಕೇವಲ ರಾಷ್ಟ್ರ ಮಟ್ಟದಲ್ಲಿ ಅಲ್ಲ, ಕರ್ನಾಟಕದ ಮಟ್ಟಿಗೆ ನೋಡುವುದಾದರೂ, ಕುರುಬ, ಪಂಚಮಸಾಲಿ ಲಿಂಗಾಯತ ಮೀಸಲುಹೋರಾಟವಾಗಲಿ, ಮುಖ್ಯಮಂತ್ರಿಯಾದಿ ರಾಜಕೀಯ ನಾಯಕರ ಬಹಿರಂಗ ಸಭೆಗಳಲ್ಲಿಯಾಗಲಿ ಎಲ್ಲಿಯೂ ಕರೋನಾದ ಎಚ್ಚರಿಕೆ ವಹಿಸಲೇ ಇಲ್ಲ. ಇನ್ನು ಇದೀಗ ಮತ್ತೊಂದು ಅಲೆ ಕಾಣಿಸಿಕೊಳ್ಳುವ ಸಾಧ್ಯತೆ ಯಿರುವುದರಿಂದ, ‘ಉಪಚುನಾವಣೆ ಪ್ರಚಾರ ಸಭೆ ಹೊರತು, ಇನ್ನುಳಿದ ಕಾರ್ಯಕ್ರಮಗಳಿಗೆ ನಿರ್ಬಂಧ ವಿಧಿಸುವ’ ಲೆಕ್ಕಾಚಾರದಲ್ಲಿ ಸರಕಾರವಿದೆ.
ಇನ್ನು ಜನರು ಕರೋನಾ ಮಾರ್ಗಸೂಚಿಯನ್ನು ಪಾಲಿಸುತ್ತಿಲ್ಲ ಎನ್ನುವ ಕಾರಣಕ್ಕೆ ಮತ್ತೊಮ್ಮೆ ಲಾಕ್‌ಡೌನ್ ಮಾಡುವ ಮಾತುಗಳು ಸರಕಾರದ ಮಟ್ಟದಲ್ಲಿ ವಿಧಾನ ಸೌಧದ ಮೂಲೆಯಲ್ಲಿ ಕೇಳಿಬರುತ್ತಿದೆ. ಆದರೆ ಇದು ಸರಿಯಾದ ಕ್ರಮವೇ ಎನ್ನುವು ದನ್ನು ಸೂಕ್ಷ್ಮವಾಗಿ ಗಮನಿಸಿದರೆ, ಇಲ್ಲ ಎನ್ನುವುದು ಸ್ಪಷ್ಟವಾಗಲಿದೆ. ಕಳೆದ ವರ್ಷ ಮಾಡಿದ್ದ ಲಾಕ್ ಡೌನ್‌ನಿಂದ ಈಗಷ್ಟೇ ಹಲವು ಉದ್ಯಮಗಳು ಲಾಭದತ್ತ ಹೊರಳುತ್ತಿವೆ. ರಾಜ್ಯ ಸರಕಾರವೂ ಈಗಾಗಲೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದೆ. ಈ ಸಮಯದಲ್ಲಿ ಪುನಃ ಲಾಕ್‌ಡೌನ್ ಮಾಡಿದರೆ, ಕರೋನಾಕ್ಕಿಂತ ಕೆಟ್ಟ ಪರಿಣಾಮ ಜನರ ಆರ್ಥಿಕತೆಯ ಮೇಲೆ ಬೀರಲಿದೆ.
ಆದ್ದರಿಂದ ಸರಕಾರ ಈ ರೀತಿ ನಿಲುವು ತಗೆದುಕೊಳ್ಳುವುದಕ್ಕೆ ಜನರು ಆಸ್ಪದ ನೀಡದೇ, ಸ್ವಯಂ ಪ್ರೇರಿತವಾಗಿ ಕರೋನಾದ ಮಾರ್ಗಸೂಚಿ ಗಳನ್ನು ಪಾಲಿಸಬೇಕಿದೆ. ಇಡೀ ವಿಶ್ವವನ್ನು ತಲ್ಲಣಗೊಳಿಸಿರುವ ಕರೋನಾ ಕೆಲ ದಿನಗಳಲ್ಲಿ ಅಥವಾ ಲಸಿಕೆ ಸಿಕ್ಕ ಕೂಡಲೇ ಬಿಟ್ಟು ಹೋಗಲಿದೆ ಎಂದಲ್ಲ. ಬದಲಿಗೆ ಕರೋನಾದ ಎಫೆಕ್ಟ್ ಕಡಿಮೆಯಾಗಲಿದೆ.
ಈ ಸೋಂಕು ನಮ್ಮೊಂದಿಗೆ ಇದೇ ರೀತಿ ಮುಂದಿನ ಹಲವು ವರ್ಷಗಳ ಕಾಲ ಇರಲಿದ್ದು, ಅದರೊಂದಿಗೆ ಜೀವನ ಸಾಗಿಸಬೇಕಿದೆ. ಆದ್ದರಿಂದ ಕರೋನಾದಿಂದ ತಪ್ಪಿಸಿಕೊಳ್ಳುವುದಕ್ಕೆ ಸರಕಾರಗಳ ಮಾರ್ಗಸೂಚಿ ಅಥವಾ ಸರಕಾರದ ಕ್ರಮಗಳಿಗೆ ಕಾಯುವು ದಕ್ಕಿಂತ ಜನರು ಸ್ವಯಂ ಪ್ರೇರಿತವಾಗಿ ಮುಂಜಾಗ್ರತೆ ವಹಿಸಿದಾಗ ಮಾತ್ರ ಕರೋನಾದಿಂದ ದೂರವಿರುವುದಕ್ಕೆ ಸಾಧ್ಯ.