ಸಂಸ್ಕಾರ ಶ್ರೀಮಂತಿಕೆಯ ವ್ಯಕ್ತಿ ಆಸ್ಕರ್‌ ಫರ್ನಾಂಡಿಸ್‌
ನಡೆ ನುಡಿ
ಶ್ರೀವತ್ಸ ಬಲ್ಲಾಳ್, ಫಿಲಾಡೆಲ್ಫಿಯಾ
ಗೋ ಮೂತ್ರ ಸೇವನೆಯಿಂದ ಕ್ಯಾನ್ಸರ್ ಗುಣಪಡಿಸಬಹುದು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್ ಹೇಳಿಕೆ ಸಾಮಾಜಿಕ ಮಾಧ್ಯಮಗಳಲ್ಲಿ ಪರ – ವಿರೋಧ ಚರ್ಚೆಗೊಳ್ಳುತ್ತಿರುವುದನ್ನು ಗಮನಿಸುತ್ತಿದ್ದೆ.
ಆಸ್ಕರ್ ಅವರ ಹೇಳಿಕೆಯ ಸತ್ಯಾಸತ್ಯತೆ ಅಥವಾ ಅದು ಪಡೆಯಬಹುದಾದ ರಾಜಕೀಯ ಬಣ್ಣಗಳನ್ನು ಕುರಿತು ನಾನೇನೂಹೇಳಹೊರಟಿಲ್ಲ, ಅದು ನನ್ನ ಆಸಕ್ತಿಯೂ ಅಲ್ಲ. ಆದರೆ ಆಸ್ಕರ್ ಫರ್ನಾಂಡಿಸ್ ಅವರ ಕೌಟುಂಬಿಕ ಹಿನ್ನೆಲೆ, ಅವರು ಮತ್ತು ಅವರ ಹಿರಿಯರು ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಇಟ್ಟಿರುವ ಗೌರವ, ನಂಬಿಕೆಗಳ ಬಗ್ಗೆ ನಾನು ಕೇಳಿ/ನೋಡಿ ಬಲ್ಲೆನಾದ್ದ ರಿಂದ ಆಸ್ಕರ್ ಅವರು ಭಾರತೀಯ ವೈದ್ಯಶಾಸ್ತ್ರ ಮತ್ತು ಯೋಗ ಇತ್ಯಾದಿಯ ಬಗ್ಗೆ ಗೌರವದಿಂದ ಮಾತನಾಡಿರುವುದು ನನಗೆ ಆಶ್ಚರ್ಯವೆನಿಸಲಿಲ್ಲ. ಅಂತಹ ಸಂಸ್ಕಾರದ ಶ್ರೀಮಂತಿಕೆ ಇದೆ ಅವರಲ್ಲಿ.
ಆಸ್ಕರ್ ಫರ್ನಾಂಡಿಸ್ ಮತ್ತು ನನ್ನ ತಂದೆ ಉಡುಪಿಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ  ಸಹಪಾಠಿಗಳು. ಆಸ್ಕರ್‌ರ ತಂದೆ ರೋಕೀ ಫೆರ್ನಾಂಡಿಸ್ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್‌ನ ಹೆಡ್‌ಮಾಸ್ಟರರಾಗಿದ್ದರು. ನನ್ನ ಅಜ್ಜ ರಾಮದಾಸ ಬಲ್ಲಾಳರು ಅದೇ ಹೈಸ್ಕೂಲ್‌ನಲ್ಲಿ ಕನ್ನಡ ಪಂಡಿತರು. ಅಂಬಲಪಾಡಿ ಮತ್ತು ಬ್ರಹ್ಮಗಿರಿ ಕೇವಲ ಕೂಗಳತೆಯ ದೂರದಲ್ಲಿದ್ದ ಉಡುಪಿಯ ಎರಡು ನೆರೆಹೊರೆಯ ಜಾಗಗಳು. ಬೆಳಗ್ಗೆ ಶಾಲೆಗೆ ಹೋಗುವಾಗ ಮತ್ತು ಸಂಜೆ ಹಿಂದಿರುಗುವಾಗ ಇವರಿಬ್ಬರೂ ಕುದುರೆಗಾಡಿಯ ಸವಾರಿಯನ್ನು ಜತೆಯಾಗಿಯೇ ತೆಗೆದುಕೊಳ್ಳುತ್ತಿದ್ದರಂತೆ.
ನಮ್ಮ ಕುಟುಂಬಸದಸ್ಯರುಗಳಲ್ಲೂ ಪರಸ್ಪರ ಸ್ನೇಹ ವಿಶ್ವಾಸ ಗಾಢವಾಗಿ ಇರುತ್ತಿತ್ತು. ನನ್ನ ದೊಡ್ಡಮ್ಮ ಮತ್ತು ಆಸ್ಕರ್‌ರ ಅಮ್ಮಒಳ್ಳೆಯ ಸ್ನೇಹಿತೆಯರಾಗಿದ್ದರು. ದೊಡ್ಡಮ್ಮ ಕೆಸುವಿನ ಎಲೆಯ ಪತ್ರೊಡೆ ಮಾಡಿದಾಗೆಲ್ಲ ಒಂದು ಡಬ್ಬಿಯಲ್ಲಿ ಹಾಕಿ ರೋಕೀ ಫೆರ್ನಾಂಡಿಸರಿಗೆ ಮತ್ತು ಅವರ ಮಡದಿಗೆಂದು ಕಳಿಸಿ ಕೊಡುತ್ತಿದ್ದರು. ರೋಕೀಯವರಿಗೆ ಪತ್ರೊಡೆ ಅಂದರೆ ಪಂಚಪ್ರಾಣ.ಬೇಸಗೆಯಲ್ಲಿ ಅವರ ಮನೆಯಿಂದ ಬುಟ್ಟಿ ತುಂಬ ಮಾವಿನ ಹಣ್ಣಿನ ಕೊಡುಗೆ ಪ್ರೀತಿದ್ಯೋತಕವಾಗಿ ನಮ್ಮನೆಗೆ ಬರುತ್ತಿತ್ತು. ಪರಸ್ಪರ ಸೌಹಾರ್ದ ಸಹಕಾರದ ದಿನಗಳವು. ಜಾತಿ, ಮತ, ಧರ್ಮ ಇತ್ಯಾದಿ ಯಾವ ಬೇಲಿಗಳೂ ಅಡ್ಡ ಬರುತ್ತಿರಲಿಲ್ಲ.
ನಾನು ಬೆಳೆಯುತ್ತಿದ್ದಾಗ ಅಜ್ಜ ಮತ್ತು ದೊಡ್ಡಮ್ಮನ ಅನುಭವಗಳನ್ನು ಅವರಿಂದಲೇ ಕೇಳಿದ ನೆನಪಿದೆ. ರೋಕೀ ಫೆರ್ನಾಂಡಿಸರ ಹೆಸರು ಕೇಳದೇ ಇದ್ದ ಜನರೇ ಇರಲಿಕ್ಕಿಲ್ಲ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ. ಉಡುಪಿಯ ವಿದ್ಯಾಕ್ಷೇತ್ರದಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲುತ್ತಿದ್ದ ಬೋರ್ಡ್ ಹೈಸ್ಕೂಲ್ ಮತ್ತು ಕ್ರಿಶ್ಚಿಯನ್ ಹೈಸ್ಕೂಲ್‌ಗಳೆರಡರಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ. ಅವರ ತರಗತಿಗಳಲ್ಲಿ ಕಲಿತು ತರಬೇತುಗೊಂಡ ಎಂ.ವಿ. ಕಾಮತ್, ಟಿ.ಎ.ಪೈ, ಕೆ.ಕೆ.ಪೈ ಮತ್ತು ಇನ್ನಿತರರೆಲ್ಲ ಮುಂದೆ ಸಮಾಜದ ಅನೇಕ ವಿಭಾಗಗಳಲ್ಲಿ ಅತ್ಯುನ್ನತ ಕೊಡುಗೆ ಕೊಟ್ಟದ್ದು ಅವರ ಶ್ರೇಷ್ಠ ಅಧ್ಯಾಪಕತ್ವದ ಕೌಶಲತೆಗೆ ಸಾಕ್ಷಿ.
ಎಂ.ವಿ.ಕಾಮತರು ಬದುಕಿದ್ದಾಗ ಹೇಳಿದ್ದ ಮಾತೊಂದು ಓದಿದ್ದೂ ನೆನಪಾಗುತ್ತದೆ: ‘ಉಡುಪಿಯ ಬೌದ್ಧಿಕ ಮತ್ತು ನೈತಿಕಗುಣ ಮಟ್ಟದ ಮಾಪನ ಅನೇಕ ದಶಕಗಳವರೆಗೆ ಯಾವುದೇ ಬ್ಯಾಂಕರ್, ವಕೀಲ, ಮಠಾಧಿಪತಿ ಅಥವಾ ಓರ್ವ ಶ್ರೀಮಂತ ವ್ಯಕ್ತಿಯ ಹೆಸರಿನ ಮೇಲಿದ್ದ ಮಾನದಂಡವಾಗಿರಲಿಲ್ಲ. ಬದಲಾಗಿ ಬೋರ್ಡ್ ಹೈಸ್ಕೂಲ್, ಕ್ರಿಶ್ಚಿಯನ್ ಹೈಸ್ಕೂಲ್‌ಗಳಲ್ಲಿ ಸೇವೆ ಸಲ್ಲಿಸುತ್ತಿದ್ದ ರೋಕೀ ಫೆರ್ನಾಂಡಿಸ್‌ರಂಥ ಮೇರು ವ್ಯಕ್ತಿತ್ವದ ಅಧ್ಯಾಪಕರ ಕೊಡುಗೆಯಿಂದ ಅಳೆಯಲ್ಪಡುತ್ತಿತ್ತು’. ಈ ಮಾತು ಇಂದಿಗೂ ಅಂದಿನ ಕಾಲದ ಅನುಭವಗಳನ್ನು ಕಂಡು ಅಥವಾ ಕೇಳಿ ತಿಳಿದವರಿಗೆ ಖಂಡಿತವಾಗಿಯೂ ಉತ್ಪ್ರೇಕ್ಷೆಯೆನಿಸ ಲಾರದು.