ಹೇ ಭಗವಂತಾ, ನಿನ್ನ ಮನೆಯನ್ನೂ ಕಾಪಾಡಿಕೊಳ್ಳಲಾರೆಯಾ ?!
ನೂರೆಂಟು ವಿಶ್ವ
ವಿಶ್ವೇಶ್ವರ ಭಟ್‌
ಬುಧವಾರ ಬೆಳಗ್ಗೆಯಿಂದ ಸದ್ಗುರು (ಜಗ್ಗಿ ವಾಸುದೇವ) ಪ್ರತಿ ಹತ್ತು – ಹದಿನೈದು ನಿಮಿಷಕ್ಕೊಂದರಂತೆ ಟ್ವೀಟ್ ಮಾಡುತ್ತಿದ್ದಾರೆ. ಒಂದೇ ದಿನ ಅವರು ನೂರು ಟ್ವೀಟ್ ಮಾಡುವುದಾಗಿ ಹೇಳಿದ್ದಾರೆ. ಅವರು ಒಂದೇ ವಿಷಯದ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ.
 ಹ್ಯಾಷ್ ಟ್ಯಾಗ್ ಅಡಿಯಲ್ಲಿ ಸದ್ಗುರು ಟ್ವೀಟ್ ಹರಿದುಬರುತ್ತಿವೆ. ಪ್ರತಿ ಟ್ವೀಟ್‌ನಲ್ಲೂ ಅವರ ಕ್ರೋಧ, ಬೇಸರ, ವಿಷಾದ, ಹತಾಶೆ, ಜುಗುಪ್ಸೆ, ಕಳಕಳಿ, ಶ್ರದ್ಧೆ, ದುಃಖ, ಅಸಹಾಯಕತೆ, ಭಕ್ತಿ, ಪ್ರೀತಿಹರಳುಗಟ್ಟಿದೆ. ಈ ದೇಶದ  ಸಂಸ್ಕೃತಿ, ಪ್ರಾಚೀನ ನಾಗರಿಕತೆ, ಸಂಪ್ರದಾಯ, ಪರಂಪರೆಯಲ್ಲಿ ಪ್ರೀತಿ, ಗೌರವ, ಕಾಳಜಿಯಿರುವವರಿಗೆ ಅವರ ಒಂದೊಂದು ಟ್ವೀಟ್ ಸಹ ಅತೀವ ವ್ಯಾಕುಲ ವನ್ನುಂಟು ಮಾಡದೇ ಹೋಗುವುದಿಲ್ಲ.
ಹಾಗಂತ ಸದ್ಗುರು ಯಾರ ವಿರುದ್ಧವೂ ಪ್ರತಿಭಟನೆಗಿಳಿದಿಲ್ಲ. ಯಾರನ್ನೂ ಟೀಕಿಸುತ್ತಿಲ್ಲ. ಯಾವ ರಾಜಕಾರಣಿಯನ್ನೂ ದೂರುತ್ತಿಲ್ಲ. ಸದ್ಯ ವಿಧಾನಸಭಾ ಚುನಾವಣಾ ನಡೆಯುತ್ತಿರುವ ತಮಿಳುನಾಡಿನಲ್ಲಿ ಯಾವ ರಾಜಕೀಯ ಪಕ್ಷವನ್ನೂ ಬೊಟ್ಟು ಮಾಡಿ ತೋರಿಸುತ್ತಿಲ್ಲ. ಆದರೆ ಇಡೀ ವ್ಯವಸ್ಥೆಯ ಬಗ್ಗೆ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪ್ರತಿಯೊಬ್ಬ ಸ್ವಾಭಿಮಾನಿತಮಿಳರಲ್ಲಿ ಜಾಗೃತಿಯ ಕಹಳೆ ಮೊಳಗಿದ್ದಾರೆ.
ಮೊನ್ನೆ ಮಹಾಶಿವರಾತ್ರಿಯ ಜಾಗರಣೆ ಮಹೋತ್ಸವದಲ್ಲಿ ಪಾಲ್ಗೊಳಲು ಕೊಯಮತ್ತೂರಿನಲ್ಲಿರುವ ಸದ್ಗುರು ಆಶ್ರಮಕ್ಕೆಹೋಗಿದ್ದೆ. ಲಕ್ಷಾಂತರ ಜನ ಸೇರಿದ್ದ ಆ ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಎಲ್ಲೆಡೆ  ಎಂಬ ಘೋಷವಾಕ್ಯ ಗಳುಳ್ಳ ಪೋಸ್ಟರುಗಳು, ಭಿತ್ತಿಚಿತ್ರಗಳು ರಾರಾಜಿಸುತ್ತಿದ್ದವು. ಈ ಸಲದ ಮಹಾಶಿವರಾತ್ರಿಯ ಮುಖ್ಯ ವಿಷಯವಾಗಿ ಸದ್ಗುರು, ‘ತಮಿಳುನಾಡಿನ ದೇವಾಲಯ ಗಳನ್ನು ಮುಕ್ತಗೊಳಿಸಿ’ ಎಂಬ ಅಭಿಯಾನಕ್ಕೆ ಒತ್ತು ನೀಡಿದ್ದರು.
ಸಾಮಾನ್ಯವಾಗಿ ಸದ್ಗುರು ಯಾವುದೇ ವಿಷಯವನ್ನು ಅಭಿಯಾನವಾಗಿ ಕೈಗೆತ್ತಿಕೊಳ್ಳುವ ಮುನ್ನ ಸಾಕಷ್ಟು ಅಧ್ಯಯನ, ವಿಷಯ ಪರಿಣತರ ಜತೆ ಸಂವಾದ ಮಾಡುವುದು ಅವರ ಪ್ರವೃತ್ತಿ. ತಜ್ಞರ ಅಭಿಪ್ರಾಯ, ಅಧ್ಯಯನ ವರದಿ, ಅಂಕಿ-ಸಂಖ್ಯೆಗಳಿಲ್ಲದೇ ಅವರು ಮಾತಾಡುವುದಿಲ್ಲ. ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ‘ಕಾವೇರಿ ಕೂಗು’ ( ) ಎಂಬ ಅಭಿಯಾನ ಹಮ್ಮಿಕೊಂಡಾಗಲೂ ಸದ್ಗುರು ಇಂಥದೇ ಪೂರ್ವ ಸಿದ್ಧತೆ ಹಮ್ಮಿಕೊಂಡಿದ್ದರು.
ಮಹಾಶಿವರಾತ್ರಿಯ ಮಹೋತ್ಸವದಲ್ಲೂ ಸದ್ಗುರು ಸುಮಾರು ಮುಕ್ಕಾಲು ಗಂಟೆ ತಮಿಳುನಾಡಿನ ದೇಗುಲಗಳ ಸ್ಥಿತಿ – ಗತಿ, ಅವುಗಳನ್ನು ರಕ್ಷಿಸುವ ಅನಿವಾರ್ಯ, ಮಹತ್ವ ಮತ್ತು ಆ ದಿಸೆಯಲ್ಲಿ ನಾಗರಿಕರ ಪಾತ್ರದ ಬಗ್ಗೆ ಮನಮುಟ್ಟುವಂತೆವಿವರಿಸಿದಾಗಲೇ ಅಲ್ಲಿ ನೆರೆದಿದ್ದ ಜನರಿಗೆ ಸಮಸ್ಯೆಯ ತೀವ್ರತೆ ಮುನ್ನೆಲೆಗೆ ಬಂದಿದ್ದು. ತಮಿಳುನಾಡು ದೇವಾಲಯಗಳ ತವರೂರು. ಭಾರತದಲ್ಲಿಯೇ ಅತಿ ಹೆಚ್ಚು ದೇವಾಲಯಗಳಿರುವ ರಾಜ್ಯವೂ ಅದೇ.
ಮಧುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ಏಕಾಂಬರೇಶ್ವರ, ತಂಜಾವೂರು ಬೃಹದೇಶ್ವರ, ಶ್ರೀರಂಗಂನ ಶ್ರೀರಂಗನಾಥಸ್ವಾಮಿ, ತಿರುವನೈಕವಲ್ ಜಂಬುಕೇಶ್ವರ, ನಾಗರಕೊಯ್ಲ ನಾಗರಾಜ, ಚಿದಂಬರಂ ತಿ ನಟರಾಜ, ತಿರುವಣ್ಣಾಮಲೈ ಅಣ್ಣಾಮಲೈಯಾರ್, ವೆಲ್ಲೂರು ಶ್ರೀಪುರಮ, ಸಿರುವಪುರಿ ಬಾಲಮುರುಗನ್ ಮುಂತಾದ ದೇವಾಲಯಗಳು ಜಗತ್ಪ್ರಸಿದ್ಧವಾದವು. ಶ್ರೀರಂಗಂದೇವಾಲಯವಂತೂ ವಿಶ್ವದಲ್ಲಿಯೇ ಅತಿ ದೊಡ್ಡ ಹಿಂದೂ ದೇಗುಲ ಎಂಬ ಅಭಿದಾನಕ್ಕೆ ಪಾತ್ರವಾಗಿದೆ.
ಸುಮಾರು 156ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಸುತ್ತಳತೆ 4116 ಮೀಟರಿನಷ್ಟಿದೆ ಅಂದರೆ ಅದರ ವ್ಯಾಪ್ತಿ ಮತ್ತು ಅಗಾಧತೆಯನ್ನು ಊಹಿಸಬಹುದು. ರಂಗನಾಥ ಸ್ವಾಮಿ ದೇವಾಲಯದ ರಾಜ ಗೋಪುರದ ಎತ್ತರ 239ಅಡಿಯಷ್ಟಿದೆಯೆಂದರೆ ಅದರ ವಿನ್ಯಾಸ, ವಿಸ್ತಾರವನ್ನು ಕಲ್ಪಿಸಿಕೊಳ್ಳಬಹುದು. ಭಾರತದಲ್ಲಿ ಅತಿ ಎತ್ತರದ ರಾಜಗೋಪುರಗಳುಳ್ಳ ಹದಿನೆಂಟು ದೇವಾಲಯಗಳನ್ನು ಪಟ್ಟಿ ಮಾಡಲಾಗಿದೆ. ಆಶ್ಚರ್ಯವೆಂದರೆ, ಆ ಪೈಕಿ ಹದಿನೈದು ದೇವಾಲಯಗಳು ತಮಿಳುನಾಡಿ ನಲ್ಲಿಯೇ ಇವೆ.
ಕುಂಭಕೋಣಂದಲ್ಲಿ ಎಚ್ಚರದಿಂದ ನಡೆಯಬೇಕು, ಯಾವುದೇ ಕಲ್ಲಿನ ಮೇಲೆ ಕಾಲಿಟ್ಟರೂ ಅದು ಯಾವುದೋ ದೇವರ ವಿಗ್ರಹ ವಾಗಿದ್ದಿರಬಹುದು ಎಂಬ ಮಾತಿದೆ. ಕಾಶಿ ವಿಶ್ವನಾಥ, ಆದಿ ಕುಂಭೇಶ್ವರಸ್ವಾಮಿ, ನಾಗೇಶ್ವರ, ಚಕ್ರಪಾಣಿ, ಸಾರಂಗಪಾಣಿ, ಐರಾವತೇಶ್ವರ, ಉಪ್ಪಿಲಿಯಪ್ಪನ್, ಮಹಾಲಿಂಗಸ್ವಾಮಿ, ರಾಮಸ್ವಾಮಿ, ಧೇನುಪುರೇಶ್ವರ, ಸೂರ್ಯನಾರಾಯಣ, ಕಲ್ಯಾಣ ಸುಂದರೇಶ್ವರ, ಶ್ರೀ ನಾಗನಾಥಸ್ವಾಮಿ, ಶ್ರೀ ಬ್ರಹ್ಮ, ಕಂಪಹೇಶ್ವರ, ತಿರುನಾಗೇಶ್ವರ, ಸೋಮೇಶ್ವರ, ವರಹ ಪೆರುಮಾಳ್, ಅಯ್ಯವಡಿ ಪ್ರತ್ಯಂಗಿರಾ ದೇವಿ, ಬಾನೂಪುರೇಶ್ವರ, ಕೊಟ್ಟೆ ಯೂರ್ ಕೊಡೀಶ್ವರ, ಸ್ವಾಮಿಮಲೈ, ಸರಸ್ವತಿದೇವಿ ಸೇರಿದಂತೆ, ಕುಂಭಕೋಣಂ ಒಂದರ ಸುಮಾರು ಇನ್ನೂರಕ್ಕೂ ಹೆಚ್ಚು ದೇವಾಲಯಗಳಿವೆ. ಕುಂಭಕೋಣಂನ್ನು ಇಡಿಯಾಗಿ ನೋಡಿದವರಿಲ್ಲ ಎಂಬ ಮಾತಿದೆ. ಕಾರಣ ಒಂದೊಂದು ದೇವಾಲಯವನ್ನು ಅರ್ಥ ಮಾಡಿಕೊಳ್ಳಲು ವರ್ಷಗಳೇ ಬೇಕು ಎಂದು ಶಾಸಜ್ಞರು ಹೇಳುತ್ತಾರೆ.
ಒಬ್ಬ ಪ್ರವಾಸಿಗನಾಗಿ ಒಂದೆರಡು ದಿನಗಳಲ್ಲಿ ನೋಡಿದರೆ ಕುರುಡನೊಬ್ಬ ಆನೆಕಾಲನ್ನು ತಡವಿದಂತಾದೀತು. ತಮಿಳುನಾಡು ದೇವಾಲಯಗಳ ತವರೂರು ಎಂದು ಕರೆಯಲು ಕಾರಣಗಳಿವೆ. ಅಲ್ಲಿ ನಲವತ್ತೈದು ಸಾವಿರಕ್ಕಿಂತ ಹೆಚ್ಚು ದೇವಾಲಯಗಳಿವೆ. ಆದರೆ ತಮಿಳುನಾಡು ಸರಕಾರ 38,615 ದೇವಾಲಗಳಿವೆ ಎಂದು ಪಟ್ಟಿ ಮಾಡಿದೆ.
ತಮಿಳುನಾಡಿನ ದೇಗುಲಗಳ ವೈಶಿಷ್ಟ್ಯವೆಂದರೆ ಅವುಗಳ ಪುರಾತನ ಗುಣ. ಪ್ರತಿ ದಿವಾಲಯವೂ ನೂರು-ಇನ್ನೂರು ವರ್ಷ ಗಳಿಗಿಂತ ಹಳೆಯವು. ಸಾವಿರ ವರ್ಷಗಳಿಗಿಂತ ಹಳೆಯ ದೇವಾಲಯಗಳೂ ಇವೆ. ಅದಕ್ಕಿಂತ ಮುಖ್ಯವಾಗಿ, 800 ದಿಂದ 5000 ವರ್ಷಗಳ33000ದೇವಾಲಯಗಳಿವೆ. ಅಲ್ಲಿನ ಪ್ರತಿ ದೇವಾಲಯದ ಕಲ್ಲುಗಳೂ ಉಸಿರಾಡುತ್ತವೆ, ಕಥೆ ಹೇಳುತ್ತವೆ, ಗತಿಸಿಹೋದ ದಿನಗಳಿಗೆ ಸಾಕ್ಷಿಯಾಗಿವೆ, ಈ ದೇಶದ ಮಹಾನ್ ಸಂಸ್ಕೃತಿಗೆ ಮುನ್ನುಡಿಯಾಗಿವೆ.
ತಮಿಳುನಾಡಿನ ಹೃದಯವಿರುವುದೇ ಅಲ್ಲಿನ ಭವ್ಯ ದೇವಾಲಯಗಳಲ್ಲಿ. ಅವು ಕೇವಲ ಪೂಜಾ ಸ್ಥಳ ಅಥವಾ ಶ್ರದ್ಧೆ – ಭಕ್ತಿಯ ತಾಣಗಳಲ್ಲ. ನಮ್ಮ ಕಲೆ, ಶಿಲ್ಪಕಲೆ, ಪುರಾಣ, ಇತಿಹಾಸ, ಪರಂಪರೆ, ಸಂಪ್ರದಾಯ, ಆಚರಣೆ, ಸಂಸ್ಕೃತಿಯ ನೆಲೆಬೀಡು. ಮನಸು – ಮನಸುಗಳ ಕೂಡುತಾಣ. ನಮ್ಮ ಸಮಾಜದ ಅಸ್ತಿತ್ವಕೆ ಭದ್ರ ಬುನಾದಿ ಹಾಕಿದ ಪುಣ್ಯಭೂಮಿ. ಆದರೆ ಅಂಥ ದೇವಾಲಯಗಳು ಇಂದು ಅತ್ಯಂತ ಹೀನಾಯ ಸ್ಥಿತಿಯಲ್ಲಿವೆ. ಅವು ಯಾರಿಗೂ ಬೇಡವಾಗಿವೆ.
ಸಾವಿರಾರು ದೇವಾಲಯಗಳು ಪಾಳು ಬಿದ್ದಿವೆ. ಕಟ್ಟಡ, ಗೋಪುರಗಳು ಶಿಥಿಲವಾಗಿವೆ. ಹಲವೆಡೆ ಗೋಡೆಗಳು ನೆಲಸಮವಾಗಿವೆ. ಉರುಳಿಬಿದ್ದ ದೇವಸ್ಥಾನಗಳ ಜಾಗದಲ್ಲಿ ನರಮನುಷ್ಯರು ಸಹ ಓಡಾಡದೇ ಭೂತಸ್ಥಾನದಂತೆ ಕಂಗೊಳಿಸುತ್ತಿವೆ. ದೇವಸ್ಥಾನ ಗಳಲ್ಲಿರುವ ದೇವ – ದೇವತೆಗಳ ವಿಗ್ರಹಗಳನ್ನೇ ಚೋರರು ಕದ್ದೊಯ್ದಿದ್ದಾರೆ. ಸಹಸ್ರಾರು ವಿಗ್ರಹಗಳು ನಾನಾ ಕಾರಣಗಳಿಗೆ ಧ್ವಂಸವಾಗಿವೆ.
ದೇಗುಲಗಳಲ್ಲಿ ಪಾಚಿ, ಕಳ್ಳಿ – ಕುರುಚಲುಗಳು ಬೆಳೆದಿವೆ. ಹತ್ತಾರು ವರ್ಷಗಳಿಂದ ಭಕ್ತರು ಸುಳಿಯದೇ ಅವು ಹಾಳು ಕೊಂಪೆ ಗಳಾಗಿವೆ. ಒಂದು ಕಾಲದಲ್ಲಿ ದೇಗುಲವಿತ್ತು ಎಂಬ ಕುರುಹು ಸಹ ಸಿಗದಂತೆ, ಭೂಗಳ್ಳರು ಅವುಗಳನ್ನು ನುಂಗಿ ಹಾಕಿದ್ದಾರೆ. ಕೆಲವು ದೇಗುಲಗಳು ಅವ್ಯವಹಾರ, ಅಕ್ರಮ ದಂಧೆಗಳ ತಾಣವಾಗಿವೆ. ಅಂಥ ದೇಗುಲಗಳನ್ನು ಸಮಾಜಘಾತಕ ಶಕ್ತಿಗಳು, ದುಷ್ಕರ್ಮಿಗಳು ವಶಪಡಿಸಿಕೊಂಡು ತಮ್ಮ ಅಡ್ಡೆಗಳನ್ನಾಗಿ ಮಾಡಿಕೊಂಡಿದ್ದಾರೆ.
ಇದಕ್ಕೇ ಸದ್ಗುರು ಸಹನೆ ಕಟ್ಟೆಯೊಡೆದಿದೆ. ತಮಿಳುನಾಡಿನ 37000ದೇವಾಲಯಗಳ ದೇಖ – ರೇಖಿಗೆ ತಲಾ ಒಬ್ಬನಿದ್ದಾನೆ. ಐನೂರಕ್ಕೂ ಹೆಚ್ಚು ದೇಗುಲಗಳು ಅಸ್ತಿತ್ವದಲ್ಲಿ ಇಲ್ಲ ಅಥವಾ ನಶಿಸಿ ಹೋಗಿವೆ ಎಂದು ಸರಕಾರವೇ ಹೇಳಿದೆ. ಅಂದರೆ ದುಷ್ಕರ್ಮಿಗಳು ಆ ದೇಗುಲಗಳನ್ನು ಕೆಡವಿ, ನೆಲಸಮ ಮಾಡಿ, ಆ ಭೂಮಿಯನ್ನೇ ಕಬಳಿಸಿಬಿಟ್ಟಿದ್ದಾರೆ. 11999  ದೇವಾಲಯ ಗಳಲ್ಲಿ ಅರ್ಚಕರು, ಪೂಜಾರಿಗಳಿಲ್ಲ. ನಿತ್ಯ ಒಂದು ಹೊತ್ತು ಪೂಜೆಗೂ ತತ್ವಾರ. ಈ ದೇಗುಲಗಳಲ್ಲಿ ಭಗವಂತನೇ ಅನಾಥ! ಆತನನ್ನು ಹೇಳುವವರು – ಕೇಳುವವರು ಯಾರೂ ಇಲ್ಲ. ಆತನಿಗೆ ದಾತರೂ ಇಲ್ಲ, ಪುಕಾರುಗಳೂ ಇಲ್ಲ. ಈ ದೇವಸ್ಥಾನಗಳು ಜೀರ್ಣೋದ್ಧಾರವಾಗದೇ ಐವತ್ತಕ್ಕೂ ಹೆಚ್ಚು ವರ್ಷಗಳಾಗಿವೆ.
ಈ ಎಲ್ಲಾ ದೇವಸ್ಥಾನಗಳೂ ಅವನತಿಯ ಹಾದಿಯಲ್ಲಿವೆ. ಪೂಜೆಯೇ ಇಲ್ಲದ ದೇಗುಲಕ್ಕೆ ಯಾವ ಭಕ್ತ ಬಂದಾನು? 34000 ದೇವಸ್ಥಾನಗಳು ವರ್ಷಕ್ಕೆ ಹತ್ತು ಸಾವಿರ ಪಾಯಿಗಿಂತ, ಮತ್ತೊಮ್ಮೆ ಹೇಳುತ್ತೇನೆ ಕೇಳಿ, ವರ್ಷಕ್ಕೆ ಹತ್ತು ಸಾವಿರ ರುಪಾಯಿಗಿಂತ ಕಡಿಮೆ ಹಣದಲ್ಲಿ ನಡೆಯುತ್ತಿವೆ. ಈ ದೇಗುಲಗಳಲ್ಲಿರುವ ಅರ್ಚಕರು ತಿಂಗಳಿಗೆ750ರುಪಾಯಿ – ಮತ್ತೊಮ್ಮೆ ಹೇಳುತ್ತೇನೆ ಕೇಳಿ – ದಿನಕ್ಕೆ25ರುಪಾಯಿ ಸಂಬಳದಲ್ಲಿ ಜೀವನ ಸಾಗಿಸಬೇಕಿದೆ. ಇವರು ಅದ್ಯಾವ ರೀತಿಯಲ್ಲಿ ದೇಗುಲಗಳ ಪ್ರಾಂಗಣದಲ್ಲಿ ಸ್ವಚ್ಛತೆ, ನೈರ್ಮಲ್ಯ, ಶಿಸ್ತು, ಅಚ್ಚುಕಟ್ಟುತನ ಕಾಪಾಡಬಲ್ಲರು? ಸಾರ್ವಜನಿಕ ಸ್ಥಳವಾದ ದೇಗುಲಗಳಲ್ಲಿ ಯಾವ ಅಭಿವೃದ್ಧಿ ಕಾರ್ಯ ಕೈಗೊಳ್ಳಬಲ್ಲರು? ತಮಿಳುನಾಡಿನ ದೇವಸ್ಥಾನಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ ಯುನೆಸ್ಕೋ ತಜ್ಞರ ತಂಡ ನೀಡಿದ ವರದಿಯನ್ನು ಓದಿದರೆ, ಹಿಂದೂ ದೇವಾಲಯಗಳ ಸ್ಥಿತಿ-ಗತಿ ಅದೆಷ್ಟು ಹೀನಾಯವಾಗಿದೆ ಎಂಬುದು ಗೊತ್ತಾಗು ತ್ತದೆ.
ಅದನ್ನು ಓದಿದವರಿಗೆ ದಿಗಿಲಾಗುತ್ತದೆ. ಶೇ.ತೊಂಬತ್ತರಷ್ಟು ದೇಗುಲಗಳು ಅವನತಿಯ ಅಂಚಿನಲ್ಲಿವೆ, ವಿನಾಶದ ಹಾದಿಯಲ್ಲಿವೆ ಎಂದು ವರದಿಯಲ್ಲಿ ಹೇಳಲಾಗಿದೆ. ಕೆಲವು ದೇಗುಲಗಳನ್ನು ಸ್ವತಃ ದೇವರೇ ಬಂದರೂ ಕಾಪಾಡಲು ಸಾಧ್ಯವಿಲ್ಲ. ಆ ದೇಗುಲಗಳು ಸಂಪೂರ್ಣ ಹಾಳು ಬಿದ್ದಿವೆ. ಕಳೆದ ಇಪ್ಪತ್ತೈದು ವರ್ಷಗಳಲ್ಲಿ1500ಕ್ಕೂ ಹೆಚ್ಚು ಅಪೂರ್ವ ಮತ್ತು ಬೆಲೆಕಟ್ಟಲಾಗದ ವಿಗ್ರಹ ಗಳನ್ನು ಕಳ್ಳರು ದೋಚಿದ್ದಾರೆ.
ನಾನೂರಕ್ಕೂ ಹೆಚ್ಚು ದೇಗುಲಗಳಲ್ಲಿ ಗರ್ಭಗುಡಿಯಲ್ಲಿರುವ ಮುಖ್ಯ ದೇವರ, ಪ್ರಾಣ ದೇವರ ವಿಗ್ರಹಗಳನ್ನೇ ಲಪಾಟಿಯಿಸ ಲಾಗಿದೆ. ಅಂಥ ಮಂದಿರಗಳಿಗೆ ಯಾರೂ ಹೋಗದೇ ಅನಾಥವಾಗಿವೆ. ಕಳೆದ ಐದು ವರ್ಷಗಳಲ್ಲಿ ವ್ಯವಸ್ಥಿತವಾಗಿ ಪೂಜಾ ಮಂದಿರಗಳಲ್ಲಿರುವ ಮುಖ್ಯ ದೇವರ ವಿಗ್ರಹವನ್ನು ದೋಚುವ ಮೂಲಕ ದೇಗುಲಗಳನ್ನು ಸಾಯಿಸುವ ದುಷ್ಟ ಕಾರ್ಯಾಚರಣೆ ಚುರುಕುಗೊಂಡಿದೆ.
ದೇವಸ್ಥಾನದಲ್ಲಿರುವ ಪೂಜಾರಿಯನ್ನು ಥಳಿಸಿ, ವಿಗ್ರಹವನ್ನು ಕಿತ್ತು, ಮಲೀನಗೊಳಿಸಿ, ಭಕ್ತರಲ್ಲಿ ಭಯ ಸೃಷ್ಟಿಸಿ, ಕ್ರಮೇಣಆ ದೇವರಮೂರ್ತಿಯನ್ನು ಸಾಗಿಸಿ, ದೇಗುಲಗಳನ್ನು ಸಾಯಿಸುವುದು ಈ ದುಷ್ಟ ತಂಡದ ಹುನ್ನಾರ. ಇದರಲ್ಲಿ ಎಲ್ಲರೂ ಶಾಮೀಲಾಗಿದ್ದಾರೆ. ಕಳೆದ ಎಪ್ಪತ್ತು ವರ್ಷಗಳಿಂದ ತಮಿಳುನಾಡನ್ನು ಆಳಿದ ಬೇರೆ ಬೇರೆ ಸರಕಾರಗಳು ಮಾತ್ರ ಯಾವ ಕ್ರಮವನ್ನೂ ಕೈಗೊಳ್ಳದೇ ಸುಮ್ಮನೆ ಕುಳಿತಿವೆ. ಅವುಗಳಿಗೆ ಹಿಂದೂ ದೇಗುಲಗಳಿಗಿಂತ ‘ಮತ ಮಂದಿರ’ವೇ ಮುಖ್ಯವಾಗಿವೆ.1817ರ ಅಂದಿನ ಬ್ರಿಟಿಷ್ ಸರಕಾರ ತಮಿಳುನಾಡಿನ ದೇಗುಲಗಳನ್ನು ಸರಕಾರದ ಸುಪರ್ದಿಗೆ ಪಡೆಯಿತು.
ಅದಾಗಿ ನೂರಾ ಎಂಟು ವರ್ಷಗಳ ನಂತರ, ಮದರಾಸು ಧಾರ್ಮಿಕ ದತ್ತಿ ಕಾಯ್ದೆಯನ್ನು ಜಾರಿಗೆ ತರಲಾಯಿತು. ಅದರನ್ವಯಹಿಂದೂ ದೇಗುಲಗಳ ಆಡಳಿತವನ್ನು ಸರಕಾರವೇ ವಹಿಸಿಕೊಂಡಿತು. ಇದರ ಪರಿಣಾಮ ರಾಜ್ಯದಲ್ಲಿರುವ 36000ಹಿಂದೂ ದೇಗುಲಗಳ ಆಡಳಿತವನ್ನು ಸರಕಾರವೇ ನಿಯಂತ್ರಿಸುತ್ತಿದೆ. ಗಮನಾರ್ಹ ಸಂಗತಿಯೆಂದರೆ, ಚರ್ಚ್, ಮಸೀದಿ, ಗುರುದ್ವಾರಗಳ ಆಡಳಿತವನ್ನು ಸರಕಾರ ನಿಯಂತ್ರಿಸುತ್ತಿಲ್ಲ. ಅವುಗಳ ಮೇಲೆ ಸರಕಾರಕ್ಕೆ ಯಾವುದೇ ಹಿಡಿತವಿಲ್ಲ. ಹಿಂದೂ ದೇಗುಲಗಳಿಗೆ ಮಾತ್ರ ಈ ಕಾನೂನು!
ಇದು ತಮಿಳುನಾಡಿನ ದೇವಾಲಯಗಳ ಕಥೆ – ವ್ಯಥೆ ಮಾತ್ರ ಅಲ್ಲ. ಕರ್ನಾಟಕದ ದೇಗುಲಗಳ ಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ತಮಿಳುನಾಡು ಎಂದಿರುವಲ್ಲಿ ಕರ್ನಾಟಕ ಎಂದು ಓದಿಕೊಂಡರೂ, ಆದೀತು. ಹಾಗೆ ನೋಡಿದರೆ, ಕರ್ನಾಟಕದ ದೇಗುಲಗಳ ಸ್ಥಿತಿ ಇದಕ್ಕಿಂತ ಗಂಭೀರವಾಗಿದೆ. ಸರಕಾರವೇ ದೇವಸ್ಥಾನಗಳನ್ನು ಕೈಯಾರೆ ಕತ್ತು ಹಿಚುಕಿ ಸಾಯಿಸುತ್ತಿದೆ. ಇಷ್ಟೂ ಸಾಲದೆಂಬಂತೆ, ಖಾಸಗಿಯವರು ಅತ್ಯಂತ ದಕ್ಷತೆಯಿಂದ, ಅಚ್ಚುಕಟ್ಟಾಗಿ ನಡೆಸುತ್ತಿರುವ ದೇವಾಲಯಗಳನ್ನು ತನ್ನ ವಶಕ್ಕೆ ಪಡೆಯಲು ಸರಕಾರ ಹೊಂಚು ಹಾಕುತ್ತಲೇ ಇದೆ. ಆ ದಿನ ಸದ್ಯದಲ್ಲಿಯೇ ಬಂದರೂ ಆಶ್ಚರ್ಯವಿಲ್ಲ.
ಇಂದಿನ ದಿನಗಳಲ್ಲಿ ಮಾಲ, ಕಾಂಪ್ಲೆಕ್ಸ್, ಅಪಾರ್ಟ್ ಮೆಂಟ್, ಮನೆಗಳನ್ನು ಕಟ್ಟುವುದರಲ್ಲಿ ಜನ ಮಗ್ನರಾಗಿದ್ದಾರೆ. ರಸ್ತೆ, ಸೇತುವೆ, ಕಟ್ಟಡ, ಅಣೆಕಟ್ಟುಗಳನ್ನು ಕಟ್ಟುವುದರಲ್ಲಿ ಸರಕಾರಗಳು ಮಗ್ನವಾಗಿವೆ. ಆದರೆ ದೇವಾಲಯಗಳ ಬಗ್ಗೆ ಮಾತ್ರ ಯಾರಿಗೂ ಆಸಕ್ತಿಯಿಲ್ಲ. ನಮ್ಮ ಸಂಸ್ಕೃತಿಯ ತಾಯಿಬೇರಿರುವ ದೇಗುಲಗಳನ್ನು ರಕ್ಷಿಸಲು ಯಾರೂ ಯೋಚಿಸುತ್ತಿಲ್ಲ. ಈ ನಿರ್ಣಾಯಕ ಕಾಲಘಟ್ಟದಲ್ಲಿ ಸದ್ಗುರು ದೇವರ ನಿವಾಸ ರಕ್ಷಣೆಗೆ ಕೂಗುತ್ತಿದ್ದಾರೆ. ಈ ಅಭಿಯಾನ ಕರ್ನಾಟಕದಲ್ಲೂ ಆಗಬೇಕಿದೆ. ಕಾರಣ ಇದು ನಮ್ಮ ನಂಬಿಕೆಗಳನ್ನು ಕಾಪಾಡುವ ಸಮಯ!