ನಿಜವಾದ ಸುಖಿ ಎಂದರೆ ಪ್ರಯಾಣವಿಲ್ಲದವನು
ಪ್ರಾಣೇಶ್‌ ಪ್ರಪಂಚ
ಗಂಗಾವತಿ ಪ್ರಾಣೇಶ್‌
ಮಹಾಭಾರತದಲ್ಲಿ ಯಕ್ಷ ಪ್ರಶ್ನೆ ಎಂಬ ಅಧ್ಯಾಯದಲ್ಲಿ ಧರ್ಮರಾಯನಿಗೆ ಯಕ್ಷ ಕೇಳುವ ಅನೇಕ ಪ್ರಶ್ನೆಗಳಲ್ಲಿ ಒಂದು ಪ್ರಶ್ನೆಹೀಗಿದೆ. ಯಕ್ಷ ಕೇಳುತ್ತಾನೆ, ನಿಜವಾದ ಸುಖಿ ಯಾರು? ಧರ್ಮರಾಯನು ಉತ್ತರ ಹೀಗೆ ಹೇಳುತ್ತಾನೆ.
ಯಾವನಿಗೆ ಪ್ರಯಾಣವಿಲ್ಲವೋ ಅವನು ಸುಖಿ, ಇದ್ದಲ್ಲಿಯೇ ಇರುವವ ಸುಖಿ ಎಂದಾಯಿತು ಅಲ್ಲವೇ? ಮಹಾಭಾರತದಲ್ಲಿಧರ್ಮರಾಯನಿಗೆ ಪ್ರಶ್ನೆ ಕೇಳುವವರ ಸಂಖ್ಯೆ ಜಾಸ್ತಿ. ಏಕೆಂದರೆ, ಅವನು ಧರ್ಮದಿಂದ ಬಾಳುವವನು ನೋಡಿ, ಅವನು ಎಲ್ಲರ ಪ್ರಶ್ನೆಗೂ ಉತ್ತರಿಸಬೇಕು ಪಾಪ! ಧರ್ಮ, ಸತ್ಯ, ನ್ಯಾಯ, ನೀತಿಗಳಿಂದ ಬಾಳುವವರಿಗೇ ಎಲ್ಲರ ಪ್ರಶ್ನೆಗಳು, ಟೀಕೆಗಳು, ಸಂಕಷ್ಟ ಗಳು ಅಂದಿಗೂ ಇಂದಿಗೂ ಜಾರಿಯಲ್ಲಿವೆ.
ದುಷ್ಟ, ನೀಚರ, ಅಧರ್ಮಿಗಳ ತಂಟೆಗೆ ಯಾರೂ ಹೋಗುವುದಿಲ್ಲ. ಅದಕ್ಕಾಗಿ ಅವರೇ ಗ್ರೇಟ್ ಎಂದು ಯಾರೂ ನಿರ್ಣಯಿಸ ಬಾರದು. ಮೂರ್ತಿಯಾಗುವ ಕಲ್ಲಿಗೆ ಉಳಿಪೆಟ್ಟು, ಚಿನ್ನಕ್ಕೇನೆ ಬೆಂಕಿಯಲ್ಲಿ ಬೇಯುವ ಶಿಕ್ಷೆ, ಸುತ್ತಿಗೆಯ ಪೆಟ್ಟು, ಬೇಕಾದ ಆಕಾರಕ್ಕೆ ಹಿಗ್ಗಿಸುವ, ಬಗ್ಗಿಸುವ ಬಡಿಸಿಕೊಳ್ಳುವ ದಿನಚರಿ ಏಕೆಂದರೆ, ಕೊರಳನ್ನೇರುವ, ಕಿರೀಟದಲ್ಲಿ ಕೂರುವ ಯೋಗ್ಯತೆವುಳ್ಳದ್ದಾಗಿರು ವುದು ಈ ಕಷ್ಟಗಳು ಅಲ್ಲವೇ? ಸುಖದ ಮುನ್ಸೂಚನೆಯೇ ಕಷ್ಟಗಳು. ನನ್ನ ಈ ಲೇಖನದ ವಿಷಯ ನಿಜವಾದ ಸುಖಿ ಯಾರು?ಧರ್ಮರಾಯನ ಉತ್ತರ ‘ಪ್ರಯಾಣ ಇಲ್ಲದವನು’ ಎಂಬುದು, ನನಗೋ ಬಾಲ್ಯದಿಂದಲೂ ತಿರುಗುವ ಹುಚ್ಚು.
ನನ್ನೂರು ಗಂಗಾವತಿಗೆ ಕೇವಲ ಹತ್ತೇ ಕಿಲೋ ಮೀಟರ್ ದೂರದಲ್ಲಿರುವ ಹಂಪೆ, ಆನೆಗೊಂದಿ, ಅಂಜನಾದ್ರಿ ಬೆಟ್ಟ, ಪಂಪಾ ಸರೋವರಗಳಿಗೆ ಆದಷ್ಟು ಬಾರಿ ಅದೆಷ್ಟು ಜನರ ಜತೆ ಹೋಗಿದ್ದೇನೋ ಲೆಕ್ಕವಿಲ್ಲ. ಊರಿಗೆ ಹೋಗುವರು, ಎಂದರೆ ನನಗೆ ಮೊದಲಿನಿಂದ ಸಂಭ್ರಮದ ಉಮೇದಿನ ಕೆಲಸ, ನಾಳೆ ಊರಿಗೆ ಹೋಗಬೇಕೆಂದು ನಿರ್ಧಾರವಾದರೆ ಸಾಕು, ಬಟ್ಟೆ ಒಗೆದು ಕೊಳ್ಳುವುದು, ಬಿಳಿ ಬಟ್ಟೆಗೆ ನೀಲಿ ಹಾಕಿಕೊಳ್ಳುವುದು, ಇಸಿಪೆಟ್ಟಿಗೆಗೆ ಕೆಂಡಹಾಕಿ ಕಾಯಿಸಿ ಆ ಬಟ್ಟೆಗೆ ಇಸ್ತ್ರಿ ಹಾಕಿಕೊಳ್ಳುವುದು, ಬೆಳಗಿನ ಮೊದಲ ಬಸ್ಸಿಗೆ ಪ್ರಯಾಣ ಮಾಡುವುದು, ನನ್ನೂರು ಹಿಂದೆ ಹಿಂದೆ ಸರಿದಂತೆಲ್ಲ ಹೋಗಬೇಕಾದ ಊರು ಹತ್ತಿರ ಬಂದಂತೆಲ್ಲ ಅದೇನು ಆನಂದ, ಶಾಲೆ ರಜೆ ಬಂದರೆ ಸಾಕು, ಗುಲ್ಬರ್ಗಾದ ದೊಡ್ಡಮ್ಮನ ಮನೆ, ರಾಯಚೂರಿನ ತಾಯಿ ಹಾಗೂ ಸೋದರ ಮಾವನ ಮನೆ, ಕಕ್ಕಂದಿರಿದ್ದ ಬೆಂಗಳೂರು.
ಓಹ್.. ‘ಬಾಲ್ಯದ ದಿನಗಳು ಸೊಗಸಿನ ದಿನಗಳು. ಬಡತನ ವೆನಿತಿದ್ದರೇನು? ಓದಿನ ದಿನಗಳೇ ಗೆಲುವಿನ ದಿನಗಳು ಜಡತನ ವೆನಿತಿದ್ದರೇನು? ಎಂಬ ಪರಮೇಶ್ವರ ಭಟ್ಟರ ‘ಇಂದ್ರಚಾಪ’ದ ಈ ಸಾಲುಗಳು ಅದೆಷ್ಟು ನಿಜ ಅನಿಸುತ್ತಿದೆ, ಬಂಧು – ಬಳಗದ ಮನೆಗಳಲ್ಲಿ ಮುಂಜಿ, ಲಗ್ನ, ಸಾವು ಏನೇ ಆದರೂ ಅವರೂರಿಗೆ ಹೋಗಬೇಕು ಎಂಬ ಉಮೇದಿಯೇ ಉಮೇದಿ. ನಮ್ಮ ಬಂಧುಗಳ ಯಾರದೇ ಮನೆಯಲ್ಲಿ ಏನೇ ಆದರೂ, ನಾನು ನನ್ನ ಬ್ಯಾಗನ್ನು ರೆಡಿಮಾಡಿಕೊಳ್ಳುತ್ತಿದ್ದೆ.
ಫೋನುಗಳಿಲ್ಲದ ದಿನಗಳವು. ಪತ್ರ ಹಾಕಿದರೆ ‘ಹೆಸರಿಗೆ, ಎಲ್ಲರಿಗೂ ಹಾಕುವಂತೆ ಪತ್ರ ಹಾಕಿದ್ದಾರೆ’ ಎಂಬ ಕೊಂಕು ಮಾತು ತಪ್ಪಿಸಿಕೊಳ್ಳಲು ಖುದ್ದು ಆ ಊರಿಗೆ, ಅವರ ಮನೆಗೇ ಹೋಗಿ ಲಗ್ನಪತ್ರಿಕೆ ಕೊಟ್ಟು ಎರಡು ದಿನವಿದ್ದು, ಆ ಊರನ್ನು ಆ ಊರಿಗೆ ಬಂದಿದ್ದ ಸಿನಿಮಾಗಳನ್ನು ನೋಡಿ, ಮತ್ತೆ ಮುಂದಿನ ಊರಿನ ಬಂಧುಗಳ ಮನೆಗೆ ಹೋಗುತ್ತಿದ್ದ ಕೆಲಸ ನಾನೇ ನಾನಾಗಿ ಆಯ್ದುಕೊಳ್ಳುತ್ತಿದ್ದೆ.
ಊರೂರು ತಿರುಗಲು ಪ್ರಾಣೇಶ ಗಟ್ಟಿ, ಕಾಲಾಗೆ ನಾಯಿ ಗೆರೆ ಇವೆ ಎಂದು ಬಂಧುಗಳು ರೇಗಿಸುತ್ತಿದ್ದರು. ಒಂದೂರಿಂದ ಒಂದೂರಿಗೆ ಹೋಗುವಾಗ ಬೀಳ್ಕೊಡುವ ಮನೆ ಊರಿನ ಬಂಧುಗಳು ನನಗೆ ಅಂಗಿ – ಪ್ಯಾಂಟಿನ ಬಟ್ಟೆಯನ್ನೋ, ಹತ್ತು, ಇಪ್ಪತ್ತು ರುಪಾಯಿಗಳ ಪಾಕೇಟ್ ಮನಿಯನ್ನೋ ಕೊಡುತ್ತಿದ್ದರು.
ನನ್ನ ಈ ಬಸ್ಸೇರುವ ಚಟದಿಂದಲೇ ನಾನು ಇಡೀ ನಮ್ಮ ಬಂಧುವರ್ಗದಲ್ಲಿ ಜನಪ್ರಿಯನಾಗಿದ್ದೆ. ‘ಪ್ರಾಣೇಶನ್ನ ಕಳಿಸಿರಿ,ಪ್ರಾಣೇಶನಿಗೆ ಬಂದು ಹೋಗೆನ್ನಿರಿ’ ಎಂದು ಎಲ್ಲರೂ ಹೇಳುತ್ತಿದ್ದರು. ನಮ್ಮ ತಂದೆ – ತಾಯಿ ಕಡೆ ಬಳಗದ ಎಲ್ಲ ಮನೆಗಳಿಗೂ ನಾನೊಬ್ಬನೇ ಚಿರಪರಿಚಿತ, ಅವರಿರುವ ಊರು ಕುಗ್ರಾಮಗಳಾಗಿರಲಿ, ತಾಲೂಕು ಕೇಂದ್ರವಾಗಿರಲಿ, ದೊಡ್ಡ ಪಟ್ಟಣವಾಗಿರಲಿ, ಅಲ್ಲಿ ಒಂದು ನಮ್ಮ ಸಂಬಂಧಿಕರ ಪರಿಚಿತರ ಮನೆಯಿದೆ ಎಂದು ತಿಳಿದರೆ ಸಾಕು, ಅದು ಎಂತಹ ಊರೇ ಆಗಿರಲಿ ನಾನು ಹೋಗಲು ತುದಿಗಾಲ ಮೇಲೆ ನಿಲ್ಲುತ್ತಿದ್ದೆ.
ಜುಮಲಾಪುರ, ಕೋಟುಮಚಗಿ, ಬಳಗಾನೂರು, ಗೊಬ್ಬರಗುಂಪಿ, ಗೋನ್ಹಾಳ, ನಂಜಲದಿನ್ನಿ, ಸಿದ್ದಮ್ಮನಹಳ್ಳಿ.. ಓಹ್! ಒಂದೇ.. ಎರಡೇ ಕೆಲಸವಿಲ್ಲದ್ದಕ್ಕೆ ಇದ್ದೂರಲ್ಲಿ ಇದ್ದು ಬೇಸರಗೊಂಡು ಊರೂರು ಸುತ್ತುತ್ತಿದ್ದ, ಯಾರಾದರೂ ತಮ್ಮೂರಿಗೆ ಕರೆದರೆ ಸಾಕೆಂದು ಕಾಯುತ್ತಿದ್ದ ನನಗೆ ಆಗೇನಾದರೂ ಧರ್ಮರಾಯನ ಈ ‘ಯಾರಿಗೆ ಪ್ರಯಾಣವಿಲ್ಲವೋ ಅವನು ಸುಖಿ’ ಎಂದ ವಾಕ್ಯ ಕಂಡಿದ್ದರೆ ಈ ಧರ್ಮರಾಯನಿಗೆ ಬುದ್ಧಿ ಇಲ್ಲ, ಸೋಮಾರಿ ಎಂದುಕೊಳ್ಳುತ್ತಿದ್ದೆ.
ಅದು 1970-80ರ ಕಾಲ. ಈಗ? ನನ್ನ ಊರೂರು ತಿರುಗುವ ಚಟಕ್ಕೆ ದೇವರೇ ಬೇಸತ್ತು ನನಗೀ ಊರೂರು ಸುತ್ತಿ ಹಾಸ್ಯ ಸಂಜೆ ಮಾಡಿ ಬದುಕು ಎಂದು ವರವೆಂಬ ಶಾಪ ಕೊಟ್ಟುಬಿಟ್ಟನೇನೋ ಎನಿಸುವಂತಾಗಿದೆ. ಇದರಲ್ಲಿಯೇ ಹತ್ತಿರ ಹತ್ತಿರ ಮೂವತ್ತುವರ್ಷ ಕಳೆದು ಅರವತ್ತರ ಅಂಚಿಗೆ ನಿಂತಿದ್ದೇನೆ. ಸುತ್ತಿಸಿದ ಭಗವಂತ ಎಲ್ಲವನ್ನೂ ನೀಡಿಬಿಟ್ಟ ಜೀವನೋಪಾಯಕ್ಕೆ ಹಣ,ಹೆಸರು, ಖ್ಯಾತಿ, ಖ್ಯಾತಿಯಂತೂ ನಾನೇ ಬೆಚ್ಚಿಬೀಳುವಷ್ಟು ಕೊಟ್ಟು ಈಗ ಗಾಬರಿ ಹುಟ್ಟಿಸುವಂತೆ ಮಾಡಿಬಿಟ್ಟಿದ್ದಾನೆ.
ಈ ಖ್ಯಾತಿಗೆ ನಮ್ಮ ಕನ್ನಡದ ಎಲ್ಲ ಟಿ.ವಿ. ಚಾನೆಲ್‌ಗಳು, ಯೂಟ್ಯೂಬ್ ಚಾನೆಲ್‌ಗಳು, ವಾಟ್ಸಪ್‌ನಲ್ಲಿ ಬಿಡುವ ನನ್ನ ಸಣ್ಣ ಸಣ್ಣ ವಿಡಿಯೋ ತುಣುಕುಗಳು ಕಾರಣ. ಇವರೆಲ್ಲ ನನ್ನ ಹಿತೈಷಿಗಳೂ ಹೌದು. ನನ್ನ ಹಿತಶತ್ರುಗಳೂ ಹೌದು. ಕಂಡು ಕೇಳರಿಯದ ಊರು, ಜನಗಳಿಂದ ಆಹ್ವಾನ, ಒಲ್ಲೆನೆಂದರೂ ಬಿಡದ ಊರುಗಳ ಕೆಲ ಜನರಿಂದ ಬೈಗುಳ, ಧಮಕಿ ಟೀಕೆಗಳು ಬೇರೆ, ಟಿ.ವಿ. ಗಳಲ್ಲಿ, ಪತ್ರಿಕೆಗಳಲ್ಲಿ ಮತ್ತೆ ಕರೋನ ಎರಡನೇ ಅಲೆ ಎಂದು ಕೇಳುತ್ತಲೇ, ನೋಡುತ್ತಲೇ.. ಉತ್ಸವ, ಸಮ್ಮೇಳನ, ಜಾತ್ರೆ, ಉರುಸುಗಳಿಂದ ಆಹ್ವಾನಗಳು.
ಹೋದರೆ ಸಾವಿನ ಭಯ, ಹೋಗದಿದ್ದರೆ ಟೀಕೆಗಳ ಭಯ, ಮೊನ್ನೆಯಂತೂ ನಮ್ಮೂರ ಬಳಿಯ ಜಂಗಮರ ಕಲ್ಗುಡಿ ಎಂಬಪುಟ್ಟ ಗ್ರಾಮದಲ್ಲಿ ನಮ್ಮೂರಿನ ಗಂಗಾವತಿ ತಾಲೂಕು ಸಾಹಿತ್ಯ ಸಮ್ಮೇಳನದ ಉದ್ಘಾಟನೆಯಲ್ಲಿ ನಾನು ಕಳೆದ ಸಾರಿಯಅಧ್ಯಕ್ಷ ನಾಗಿದ್ದಕ್ಕೆ ಈಗಿನ ಅಧ್ಯಕ್ಷರಿಗೆ ಧ್ವಜ ಹಸ್ತಾಂತರ ಮಾಡಬೇಕಿತ್ತು. ಅದನ್ನು ಮಾಡಿ ಮುಗಿಸಿ ನಾನು ಸಂಜೆ ಐದಕ್ಕೆಬೆಂಗಳೂರು ತಲುಪಬೇಕಿತ್ತು. ಜನರ ಕೈಕಾಲು ಬಿದ್ದು, ಒಪ್ಪಿಸಿ ಹೊರಟು ಬೆಂಗಳೂರು ತಲುಪಿದಾಗ ಸಂಜೆ ಆರೂಮೂವತ್ತು, ಜಯನಗರದ ಬಂಟ್ಸ್ ಭವನದಲ್ಲಿ ಲಯನ್ಸ್ ಕ್ಲಬ್‌ನ ಪ್ರಾಂತೀಯ ಸಮ್ಮೇಳನ, ಕಾರಿಂದ ಇಳಿದು ಉಟ್ಟಬಟ್ಟೆಯ ಮೇಲೊಂದು ಜಾಕೇಟು ಹಾಕಿ ಎರಡು ಗಂಟೆ ಜನರನ್ನು ನಗಿಸಿ, ರಾತ್ರಿ ಹತ್ತಕ್ಕೆ ಬೆಂಗಳೂರು ಬಿಟ್ಟು ಬೆಳಗಿನಮೂರು ಗಂಟೆಗೆ ಶಿವಮೊಗ್ಗ ತಲುಪಿ,-ಶ್ಆಗಿ ಶಾಸ್ತ್ರ ಮಾಡಿ ಮತ್ತೆ ಕೋಣಂದೂರಿಗೆ ಬಂದೆವು.
ಅಲ್ಲಿಂದ ಹಿರಿಯರಾದ ಕೋಣಂದೂರು ಲಿಂಗಪ್ಪ, ಶಾಸಕರಾದ ಆರಗ ಜ್ಞಾನೇಂದ್ರರ ಜತೆಗೂಡಿ ಕೋಣಂದೂರ ಜನರನ್ನು ನಗಿಸುವಾಗ ದೇಹದ ಕೀಲುಗಳು ಪ್ರಯಾಣದ ಹೊಡೆತಕ್ಕೆ ಕಿರ್ರ್ ಎನ್ನುತ್ತಿದ್ದವು. ಅದನ್ನು ಮುಗಿಸಿ, ಮತ್ತೆ ಪಯಣ ಆರಂಭಿಸಿ,ಚಿತ್ರದುರ್ಗದಲ್ಲಿ ಮೂರೇ ತಾಸು ಮಲಗಿ, ಬೆಂಗಳೂರು ತಲುಪಿ ಮತ್ತೊಂದು ಕಾರ್ಯಕ್ರಮ ಮುಗಿಸಿ, ಮೂರೇ ತಾಸು ಕಣ್ಮುಚ್ಚಿದ ಶಾಸ ಮಾಡಿ ಪುನಃ ಕಲ್ಗುಡಿಗೆ ಬಂದು ಅದರ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಒಳಗೆ ನಾವು ಅಳು ಅಳುತ್ತಲೇ ಜನರನ್ನು ನಗಿಸಿ, ಏಳರ ಮೇಲೆ ಹತ್ತಿರದ ಅಂದರೆ ತಾಸಿನ ದಾರಿಯ ಮುದೇನೂರು ಎಂಬ ಗ್ರಾಮದ ಜಾತ್ರೆಯ ರಥೋತ್ಸವ ಕಾರ್ಯಕ್ರಮಕ್ಕೆ ಬಂದೆವು.
ವಿಶೇಷವೆಂದರೆ, ಮೂರು ದಿನ ರಥೋತ್ಸವ ಇಲ್ಲಿನ ಸಂಪ್ರದಾಯ, ಒಂದು ದಿನ ಪುರುಷರು ತೇರೆಳೆಯುತ್ತಾರೆ, ಮರುದಿನ ಬರೀ ಮಹಿಳೆಯರೇ ತೇರೆಳೆಯುತ್ತಾರೆ. ಕೊನೆಯ ದಿನ ಬರೀ ಬಾಲಕಿಯರೇ ತೇರೆಳೆಯುತ್ತಾರೆ. ಇಲ್ಲಿ ಈ ರಾತ್ರಿ ಕಾರ್ಯಕ್ರಮ ಮುಗಿಸಿ ಊರು ಸೇರಿ ಮಲಗಿದಾಗ ರಾತ್ರಿ ಎರಡು. ಮತ್ತೆ ಮರುದಿನ ಬೆಳಿಗ್ಗೆ ಮಂತ್ರಾಲಯದಲ್ಲಿ ಕಾರ್ಯಕ್ರಮಕ್ಕಾಗಿ ಹೊರಟು ನಿಂತೆವು. ಇಲ್ಲಿ ಸಿನಿಮಾ ನಟ ದರ್ಶನ್ ಜತೆ ಕಾರ್ಯಕ್ರಮ, ಈ ಪರಿ ಪಯಣಿಸಿದ್ದರಿಂದಲೋ ಏನೋ ನನ್ನ ಪ್ರಯಾಣದ, ತಿರುಗಾಟದ ಹುಚ್ಚು ಬಿಟ್ಟು ಮನೆಯೇ ಮಂತ್ರಾಲಯ, ಮನಸೇ ದೇವಾಲಯ ಎನಿಸಿಬಿಟ್ಟಿತು. ಆಗ ಮಹಾಭಾರತದ ಧರ್ಮರಾಯನ ಮಾತು, ‘ನಿಜವಾದ ಸುಖಿ ಎಂದರೆ, ಯಾರಿಗೆ ಪ್ರಯಾಣವಿಲ್ಲವೋ ಅವನು ಎಂಬುದರ ಮನವರಿಕೆ ಆಯಿತು.
‘ದೇಶ ತಿರುಗು ಇಲ್ಲವೇ ಕೋಶ ಓದು’ ಎಂಬುದು ನಿಜವೋ? ಕೋಶ ಓದಿದರೆ ದೇಶ ತಿರುಗಬೇಕಾಗುವುದು ನಿಜವೋ? ಎಂಬುದೇ ನನಗೀಗ ಸಮಸ್ಯೆಯಾಗಿದೆ. ಬಸ್ಸು, ಕಾರು, ರೈಲು, ವಿಮಾನ ಎಲ್ಲವುಗಳನ್ನು ಏರಿಯಾಯಿತು. ಕರ್ನಾಟಕದ ಕನ್ನಡಿಗರು ನೆಲೆಸಿರುವ ಹೊರರಾಜ್ಯದ ನಾಲ್ಕುನೂರಕ್ಕೂ ಹೆಚ್ಚು ಊರುಗಳನ್ನು ಸುತ್ತಿ ನೋಡಿ, ರಾಜಕುಮಾರ್‌ರವರು ನುಡಿದಂತೆ ಕನ್ನಡದ ಮಣ್ಣನ್ನೇ ಮೆಟ್ಟಿ ಬಂದಾಯಿತು. ಊರೂರು ತಿರುಗುವ ಹುಚ್ಚು ಅಷ್ಟು ಬಿಟ್ಟಿದೆಯಾದರೂ ಈ ವಿಶಾಲ ಕರ್ನಾಟಕದಇನ್ನೂ ಅನೇಕ ಊರುಗಳಿಂದ ನಮ್ಮೂರಿಗೆ ನೀವು ಬಂದೇ ಇಲ್ಲ ಎಂಬ ಫೋನ್ ಕರೆಗಳು ಬರುತ್ತಲೇ ಇರುತ್ತವೆ.
ಎಷ್ಟು ಊರೂರು ಸುತ್ತುತ್ತಾನೆ ಈತ? ಎಂದು ಹೊಟ್ಟೆ ಉರಿದುಕೊಳ್ಳುವವರಿಗೆ, ನನ್ನ ಅಂಡುರಿ, ಬೆನ್ನುರಿ ಗೊತ್ತಾಗುವುದಿಲ್ಲ. ಒಟ್ಟಿನಲ್ಲಿ ಓದು ಮತ್ತು ತಿರುಗಾಟಗಳು ನನ್ನ ಉದ್ಯೋಗವೇ ಆಗಿರುವುದು ನನ್ನ ಪುಣ್ಯವೇ ಸರಿ ಎನಿಸುತ್ತದೆ. ಜನರ ಪ್ರೀತಿ, ಅವರ ಸ್ವಭಾವಗಳು, ಆಯಾಯ ಊರಿನ ಆಚರಣೆಗಳು, ಅವರ ಊರಿನ ಕಷ್ಟ – ನಷ್ಟಗಳು, ಅವರ ಊರಿನ ಶಾಸಕರು, ಮಂತ್ರಿಗಳು ಮಾಡಬೇಕಾದ ಕೆಲಸಗಳನ್ನು ಅವರು ನನಗೆ ಹೇಳುವುದು ಕೇಳಲು ಮಜವಾಗಿರುತ್ತದೆಯಾದರೂ ಅವರು ನನ್ನ ಮೇಲೆ ತೋರಿ ಸುವ ಪ್ರೀತಿ, ಕೊಡುವ ಗೌರವ ಕಂಡು ಒಬ್ಬ ಸಾಮಾನ್ಯ ವ್ಯಕ್ತಿಯಾದ ನನಗೆ ಇಂಥ ಯೋಗ ಹೇಗೆ ಬಂತು ಎಂದು ಆಶ್ಚರ್ಯ ಗೊಳ್ಳುತ್ತಿರುತ್ತೇನೆ.
ಸಾಲು ಸಾಲು ಆಹ್ವಾನಗಳು, ಸರಣಿಯ ಸುತ್ತಾಟ ಬಂದಾಗ ಬೇಸರವೆನಿಸಿದರೂ ಅಲ್ಲಿಗೆ ಹೋಗಿ ಆ ಜನರ ಆನಂದ, ನಗು, ಆ ಕಣ್ಣ ಹೊಳಪು, ಅವರ ಧನ್ಯತೆಯ ಭಾವ ಕಂಡಾಗ ‘ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಅಣ್ಣಾವ್ರ ಹಾಡಿನ ನುಡಿ ಎಷ್ಟು ನಿಜ ಎನಿಸುತ್ತದೆ. ನನಗೆ ಸನ್ಮಾನ ಮಾಡುವ ಅವರ ಆ ಉಮೇದು, ನನ್ನಿಂದ ಸನ್ಮಾನ ಮಾಡಿಸಿಕೊಳ್ಳಬೇಕೆಂಬ ಅವರ ತವಕ ಕಂಡಾಗ ಧನ್ಯತೆ ಎನಿಸುತ್ತದೆ. ನಾನು ಹೇಳುವ ಒಂದೆರಡು ಹಾಸ್ಯ ಪ್ರಸಂಗಗಳಿಗೆ ಇಷ್ಟು ಹರ್ಷಿಸುವ ಜನಕ್ಕೆ ಬೇರೇನು ನೀಡಿ,ಇವರ ಋಣ ತೀರಿಸಲಿ ಎನ್ನುವ ಭಾವವೂ ಮೂಡುತ್ತದೆ.
ಒಟ್ಟಿನಲ್ಲಿ ಧರ್ಮರಾಯನ ಕಾಲದಲ್ಲಿ ಕುದುರೆಯ ರಥಗಳಲ್ಲಿ ಕಾಂಕ್ರೀಟ್ ರಸ್ತೆಗಳಿಲ್ಲದೇ ದಟ್ಟ ಕಾಡಿನಲ್ಲಿ ಸುತ್ತುತ್ತಿದ್ದ ಧರ್ಮ ರಾಯನಿಗೆ ಪ್ರಯಾಣವಿಲ್ಲದ್ದು ಸುಖ ಜೀವನ ಎನಿಸಿದರೆ, ನಮಗೆ ಕೆಟ್ಟ ರಸ್ತೆಗಳ, ಗಗನ ಮುಟ್ಟಿದ ಪೆಟ್ರೋಲ್ ಬೆಲೆಯ, ಗಂಟೆ ಗೊಂದು ಬರುವ ಟೋಲ್‌ಗೇಟ್‌ಗಳ ಹಣ ವಸೂಲಿಯ ಕಿರಿಕಿರಿಯಿಂದ ಪ್ರಯಾಣವಿಲ್ಲದವನು ಸುಖಿ ಎನಿಸಿದೆ. ನಿಮಗೂಹಾಗೆನಿಸಿದ್ದರೆ ನನ್ನ ಈ ಲೇಖನ ಸಾರ್ಥಕ.