ಮಾನ್ಯತೆ ಪಡೆಯದ ಟ್ರಿಬ್ಯುನಲ್ ವಿಧಿಸಿದ ಆ ಗಲ್ಲುಶಿಕ್ಷೆ !
ಶಶಾಂಕಣ
ಶಶಿಧರ ಹಾಲಾಡಿ
ನಮ್ಮ ದೇಶದಲ್ಲಿ ಒಂದು ‘ಸ್ಕೂಲ್ ಆಫ್ ಥಾಟ್’ ಇದೆ. ಅದರ ಪ್ರಕಾರ, ಬ್ರಿಟಿಷರು ನಮ್ಮ ದೇಶವನ್ನು ವಸಾಹತನ್ನಾಗಿ ಮಾಡಿ ಕೊಂಡು, ಆಳ್ವಿಕೆ ನಡೆಸುವಾಗ, ಸಾಕಷ್ಟು ಒಳ್ಳೆಯ ಕೆಲಸ ಮಾಡಿದ್ದಾರೆ ಮತ್ತು ಅದರಿಂದಾಗಿ ಭಾರತೀಯರಿಗೆ ಸ್ವಲ್ಪ ಒಳ್ಳೆಯ ದಾಗಿದೆ ಮಾತ್ರವಲ್ಲ, ಇಂದಿಗೂ ನಾವು ಅದರ ಫಲವನ್ನು ಉಣ್ಣುತ್ತಿದ್ದೇವೆ ಎಂದು. ಅವರು ರೈಲ್ವೆ ಲೈನುಗಳನ್ನು ಹಾಕಿಸಿದರು, ಇಂಗ್ಲಿಷ್ ಭಾಷೆಯನ್ನು ಕಲಿಸಿದರು, ನ್ಯಾಯಾಲಯಗಳನ್ನು ಸ್ಥಾಪಿಸಿದರು ಮೊದಲಾದವುಗಳನ್ನು ಪಟ್ಟಿ ಮಾಡುತ್ತದೆ ಈ ‘ಸ್ಕೂಲ್ ಆಫ್ಫ್ ಥಾಟ್’.
ಇದನ್ನೇ ಮುಂದುವರಿಸಿ, ‘ಬ್ರಿಟಿಷರು ನಮ್ಮನ್ನು ಆಳದೇ ಇದ್ದಿದ್ದರೆ, ನಮ್ಮ ದೇಶದ ಕೆಲವು ಜನಸಮೂಹವು ಇನ್ನೂ ಗೊಬ್ಬರ ಹೊರುತ್ತಾ ಇರಬೇಕಿತ್ತು’ ಎಂದು ಹಳಹಳಿಸುವುದೂ ನಡೆದಿದೆ. ಎಷ್ಟೋ ಬಾರಿ ಇಂತಹ ಹಳಹಳಿಕೆಗೆ, ಯೋಚನೆಗೆ ಹೆಚ್ಚು ಪ್ರಾಮುಖ್ಯತೆ ಕೊಡಬೇಕು ಎನಿಸುವುದಿಲ್ಲವಾದರೂ, ಇಂದಿಗೂ ಬ್ರಿಟಿಷ್ ಆಳ್ವಿಕೆಯನ್ನು ಹೊಗಳುವ ಕೆಲವರನ್ನು ಅಲ್ಲಲ್ಲಿ ಕಂಡಾಗ, ಅನಿಸುವುದು, ಇದಕ್ಕೆಲ್ಲಾ ಸೂಕ್ತ ಜ್ಞಾನದ ಮತ್ತು ತಿಳಿವಳಿಕೆಯ ಕೊರತೆಯೇ ಕಾರಣ ಇರಬಹುದೆ ಎಂದು.
ನಮ್ಮ ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಮೊದಲ ಕೆಲವು ತಿಂಗಳುಗಳ ಕಾಲ ಬ್ರಿಟಿಷ್ ವೈಸ್ ರಾಯ್‌ಯೇ ನಮ್ಮ ಗವರ್ನರ್ ಜನರಲ್ ಆಗಿದ್ದರಿಂದಲೇ ಇರಬಹುದು, ಬ್ರಿಟಿಷರ ದಬ್ಬಾಳಿಕೆಯ ವಿವರಗಳು ಹೆಚ್ಚು ಹೊರಬರಲಿಲ್ಲ. ಜತೆಗೆ, ಆ ಮೊದಲ ಕೆಲವು ತಿಂಗಳುಗಳಲ್ಲಿ ನಮ್ಮ ದೇಶವು ಬ್ರಿಟಿಷ್ ಸಾಮ್ರಾಜ್ಯದ ಡೊಮೈನ್ ಆಗಿದ್ದುದು ಸಹ, ದಾಸ್ಯ ಮನೋಭಾವ ಮುಂದುವರಿಯಲು ಕಾರಣವಾಗಿರಬಹುದು.
ಬ್ರಿಟಿಷರ ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ನಡೆದ ನಾನಾ ರೀತಿಯ ದಬ್ಬಾಳಿಕೆಗಳು, ಕುತಂತ್ರಗಳು, ಅನ್ಯಾಯಗಳು, ಕಾನೂನು ಬಾಹಿರ ಕೃತ್ಯಗಳು ಹೊರಬರಲು ಬಹಳ ಕಾಲ ಬೇಕಾಯಿತು. ತುಸು ತೀಕ್ಷ್ಣವಾಗಿ ಹೇಳಬೇಕೆಂದರೆ, ಅವರು ಮಾಡಿದ ಅನ್ಯಾಯಗಳ ಸಂಪೂರ್ಣ ಸ್ವರೂಪ ಇಂದಿಗೂ ಸ್ಪಷ್ಟವಾದ ವಿಶ್ಲೇಷಣೆಗೆ ಒಳಗಾಗಿಲ್ಲ ಮತ್ತು ಜನಸಾಮಾನ್ಯರ ತಿಳಿವಳಿಕೆಗೆ ಸಿಗುತ್ತಿಲ್ಲ. ಬ್ರಿಟಿಷರು ನಮ್ಮ ದೇಶದಲ್ಲಿ ನಡೆಸಿದ ಕ್ರೂರ ಪ್ರಕರಣಗಳು ಹಲವು. ಅಂತಹ ಒಂದು ಪ್ರಕರಣ ಎಂದರೆ ಭಗತ್ ಸಿಂಗ್‌ನನ್ನು ವಿಚಾರಣೆ ನಡೆಸಿದ ರೀತಿ.
ಕೇವಲ 23 ವರ್ಷ ಬದುಕಿದ್ದ ಭಗತ್ ಸಿಂಗ್‌ನಿಗೆ, ಅಧಿಕೃತ ಮಾನ್ಯತೆ ಇಲ್ಲದ ಒಂದು ಟ್ರಿಬ್ಯುನಲ್ ಮೂಲಕ ವಿಚಾರಣೆ ನಡೆಸಿ, ಮರಣದಂಡನೆಯನ್ನು ಬ್ರಿಟಿಷ್ ಸರಕಾರ ವಿಧಿಸಿದ್ದು, ಈ ವಿಚಾರವು ಸಾಕಷ್ಟು ಪ್ರಚಾರಕ್ಕೆ ಬರಲೇ ಇಲ್ಲ ಎನ್ನಬಹುದು. ಇಂದಿಗೂ ಜನಸಾಮಾನ್ಯರಲ್ಲಿ ಭಗತ್ ಸಿಂಗ್‌ನ ಕುರಿತು ಅಪಾರ ಗೌರವ ಇದ್ದರೂ, ಆತ ನಮ್ಮ ದೇಶಕ್ಕಾಗಿ ತನ್ನ ಪ್ರಾಣವನ್ನು ಕೊಟ್ಟ ಧೀರ ಯುವಕ ಎಂಬ ಮಾಹಿತಿ ಇದ್ದರೂ, ಅಂದಿನ ಕಾನೂನು ವ್ಯಾಪ್ತಿ ಮೀರಿದ ಒಂದು ವ್ಯವಸ್ಥೆಯ ಮೂಲಕ ಆತನಿಗೆ ಮರಣ ದಂಡನೆ ವಿಧಿಸಲಾಯಿತು ಮತ್ತು ಇದು ಬ್ರಿಟಿಷ್ ಸರಕಾರ ಮಾಡಿದ ಘನಘೋರ ಅನ್ಯಾಯಗಳಲ್ಲಿ ಒಂದು ಎಂಬ ವಿಚಾರದ ಸಮಗ್ರ ಅರಿವಿಲ್ಲ ಎಂದೆನ್ನಬಹುದು.
ನ್ಯಾಯದಾನದ ಮೂಲ ತತ್ವ, ಸಿದ್ಧಾಂತಗಳಿಗೆ ತಿಲಾಂಜಲಿ ಇಟ್ಟು, ಭಗತ್ ಸಿಂಗ್‌ನಿಗೆ ಮರಣದಂಡನೆಯನ್ನು ವಿಧಿಸಲಾಯಿತು ಎಂದು ಸುಪ್ರೀಂ ಕೋರ್ಟ್ ಆ ನಂತರ ಅಭಿಪ್ರಾಯ ಪಟ್ಟಿದೆ ಎಂದರೆ, ಬ್ರಿಟಿಷರ ನ್ಯಾಯದಾನದ ವ್ಯವಸ್ಥೆಯ ಕುಕೃತ್ಯಗಳ ಸ್ವಲ್ಪ ಮಟ್ಟಿಗಿನ ಅರಿವಾದೀತು. ನ್ಯಾಯ ನೀಡುವಾಗ, ಆರೋಪಿತನು ತನ್ನ ಅಹವಾಲನ್ನು ಹೇಳಿಕೊಳ್ಳುವ ಅವಕಾಶ ನೀಡಲೇಬೇಕು ಎಂಬುದು ಪ್ರಾಥಮಿಕ ಅಂಶ. ಆದರೆ ಅಂತಹ ಒಂದು ಸಮರ್ಪಕ ಅವಕಾಶವನ್ನು ನೀಡದೇ ಭಗತ್‌ಸಿಂಗ್‌ನನ್ನು ಗಲ್ಲಿಗೆ ಏರಿಸಲಾಯಿತು! ಇದನ್ನು ನಡೆಸಿದ್ದು ಬ್ರಿಟಿಷ್ ಸರಕಾರದ ನ್ಯಾಯಾಂಗ ವ್ಯವಸ್ಥೆ!
ಭಗತ್ ಸಿಂಗ್ ಜನಿಸಿದ್ದು ಪಂಜಾಬ್‌ನಲ್ಲಿ, ಸೆಪ್ಟೆಂಬರ್ 1907ರಲ್ಲಿ. ಆತ ಜನಿಸಿದ ಊರು ಇಂದು ಪಾಕಿಸ್ತಾನಕ್ಕೆ ಸೇರಿ ಹೋಗಿದೆ. 1928ರಲ್ಲಿ ಆತನನ್ನು ಗಲ್ಲಿಗೇರಿಸಿದ ಲಾಹೋರ್ ಸಹ ಪಾಕಿಸ್ತಾನಕ್ಕೆ ಸೇರಿಹೋಯಿತು. ಆದ್ದರಿಂದ ಆತನ ಸ್ವಂತ ಊರಿನಲ್ಲಿ, ಲಾಹೋರಿನಲ್ಲಿ ಭಗತ್‌ಸಿಂಗ್‌ನನ್ನು ಸೂಕ್ತವಾಗಿ ನೆನಪಿಸಿಕೊಳ್ಳಲಾಗುತ್ತಿಲ್ಲ, ಗೌರವ ನೀಡುತ್ತಿಲ್ಲ. ಅದೇನೇ ಇದ್ದರೂ, ಈಚಿನ ವರ್ಷಗಳಲ್ಲಿ ನಮ್ಮ ದೇಶದವರು ಭಗತ್‌ಸಿಂಗ್‌ನನ್ನು ಸಾಕಷ್ಟು ಗೌರವಯುತವಾಗಿಯೇ ನೆನಪಿಸಿಕೊಳ್ಳುತ್ತಿದ್ದಾರೆ. ಅತ್ತ ಕಮ್ಯುನಿಸ್ಟ್ ಒಲವಿನವರೂ ಆತನನ್ನು ತಮ್ಮ ಹೀರೋ ಎನ್ನುತ್ತಿದ್ದಾರೆ, ಇತ್ತ ಜಾತ್ಯತೀತ ಸಿದ್ಧಾಂತದ ಒಲವಿರುವವರು ಸಹ ಆತನಿಗೆ ಗೌರವ ಸೂಚಿಸುತ್ತಿದ್ದಾರೆ.
ಜನಸಾಮಾನ್ಯರಂತೂ ಭಗತ್‌ಸಿಂಗ್‌ನ ತ್ಯಾಗದ ಕುರಿತು ಅತ್ಯುಚ್ಚ ಗೌರವ ತೋರುತ್ತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ಗಾಂಧೀಜಿ ಮತ್ತು ಸುಭಾಷ್ ಚಂದ್ರ ಬೋಸ್‌ಗಿಂತ ಉನ್ನತ ಗೌರವವನ್ನು ನಮ್ಮ ಜನ ಭಗತ್‌ಸಿಂಗ್ ಕುರಿತು ತೋರುತ್ತಿದ್ದಾರೆಂದು ಒಂದು ಸಮೀಕ್ಷೆ ತಿಳಿಸಿತ್ತು. ಸಶಸ್ತ್ರ ಹೋರಾಟದ ಮೂಲಕ ಬ್ರಿಟಿಷರನ್ನು ಭಾರತದಿಂದ ಓಡಿಸಬಹುದು ಎಂದು ತಿಳಿದಿದ್ದವರ ಗುಂಪಿಗೆ ಭಗತ್ ಸಿಂಗ್ ಸೇರುತ್ತಾನೆ. ಲಾಲಾ ಲಜಪತ್ ರಾಯ್ ಅವರ ಸಾವು ಈತನಲ್ಲಿದ್ದ ಸ್ವಾತಂತ್ರ್ಯದ ಕಿಚ್ಚನ್ನು ಹೊತ್ತಿಸುತ್ತದೆ.
1928ರಲ್ಲಿ ಬ್ರಿಟಿಷರು ಸೈಮನ್ ಕಮಿಷನ್ ಸ್ಥಾಪಿಸಿದರು. ಆದರೆ ಆ ಸಮಿತಿಯಲ್ಲಿ ಭಾರತೀಯರೇ ಇರಲಿಲ್ಲ! ಇದನ್ನು ಕಾಂಗ್ರೆಸ್ ಸಹಿತ ಎಲ್ಲಾ ದೇಶಭಕ್ತರೂ ವಿರೋಧಿಸಿದರು. ಅಹಿಂಸಾತ್ಮಕ ಹೋರಾಟದಲ್ಲಿ ನಂಬಿಕೆ ಇಟ್ಟಿದ್ದ ಕಾಂಗ್ರೆಸ್‌ನ ಲಾಲಾ ಲಜಪತ್ ರಾಯ್ ಅವರ ನೇತೃತ್ವದಲ್ಲಿ ಅಹಿಂಸಾತ್ಮಕ ಮೆರವಣಿಗೆಯೊಂದು 30.10.1928ರಂದು ಲಾಹೋರ್‌ನಲ್ಲಿ ಹೊರಟಿತು. ಲಾಹೋರಿನ ಪೋಲಿಸ್ ಸೂಪರಿಂಟೆಂಡೆಂಟ್ ಜೇಮ್ಸ್ ಎಫ್ ಸ್ಕಾಟ್ ಎಂಬಾತ ಈ ಮೆರವಣಿಗೆಯ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದು ಮಾತ್ರವಲ್ಲ, ಲಾಲಾ ಲಜಪತ್ ರಾಯ್ ಅವರ ಮೇಲೆ ತಾನೇ ಖುದ್ದಾಗಿ ಹಲ್ಲೆ ಮಾಡುತ್ತಾನೆ.
ಅಂದು ಏಟು ತಿಂದ ಲಾಲಾ ಲಜಪತ್ ರಾಯ್ ಅವರು ಕೆಲವೇ ದಿನಗಳಲ್ಲಿ, 17.11.1928ರಂದು ಮೃತಪಟ್ಟರು. ಇದನ್ನು ಕಂಡ ಭಗತ್ ಸಿಂಗ್ ಮತ್ತು ಅವರ ಗುಂಪು, ಜೇಮ್ಸ್ ಎ. ಸ್ಕಾಟ್‌ನನ್ನು ಕೊಲ್ಲಲು ಸಂಚು ರೂಪಿಸಿದರು. ಡಿಸೆಂಬರ್ 1928ರಲ್ಲಿ, ಭಗತ್ ಸಿಂಗ್ ಮತ್ತು ಶಿವರಾಮ್ ರಾಜಗುರು, ಆ ಹಲ್ಲೆಕೋರ ಬ್ರಿಟಿಷ್ ಪೊಲೀಸನತ್ತ ಗುಂಡು ಹಾರಿಸುತ್ತಾರೆ. ಆದರೆ ಜೇಮ್ಸ್ ಎ. ಸ್ಕಾಟ್ ಅದೃಷ್ಟ ಅಂದು ಚೆನ್ನಾಗಿತ್ತು. ಜಾನ್ ಸಾಂಡರ್ಸ್ ಎಂಬ ಇನ್ನೊಬ್ಬ ಬ್ರಿಟಿಷ್ ಪೊಲೀಸನನ್ನು ಸ್ಕಾಟ್ ಎಂದು ತಿಳಿದು ಗುಂಡು ಹಾರಿಸಿದ್ದರಿಂದ, ಸ್ಕಾಟ್ ಬಚಾವಾದ, ಆದರೆ ಜಾನ್ ಸಾಂಡರ್ಸ್ ಮೃತನಾದ.
ಅದೇ ಸಮಯದಲ್ಲಿ ಚಂದ್ರಶೇಖರ ಆಜಾದರು ಇವರಿಗೆ ಬೆಂಬಲ ನೀಡಲು, ಚನನ್ ಸಿಂಗ್ ಎಂಬ ಇನ್ನೊಬ್ಬ ಪೊಲೀಸನನ್ನು ಸಹ ಗುಂಡು ಹಾರಿಸಿ ಸಾಯಿಸುತ್ತಾರೆ. ಭಗತ್‌ಸಿಂಗ್ ಮೊದಲಾದವರು ಸೈಕಲ್ ಹತ್ತಿ ತಪ್ಪಿಸಿಕೊಳ್ಳುತ್ತಾರೆ. ಘಟನಾ ಸ್ಥಳದಿಂದ ತಪ್ಪಿಸಿಕೊಂಡ ಭಗತ್ ಸಿಂಗ್ ಮತ್ತು ಅವರ ತಂಡ, ವಿವಿಧ ವೇಷಗಳನ್ನು ಧರಿಸಿ, ಕಾನ್ ಪುರ್, ಹೌರಾ ಮೊದಲಾದ ಸ್ಥಳಗಳಲ್ಲಿ ತಲೆಮರೆಸಿಕೊಂಡರು. ಆದರೆ ಭಗತ್‌ಸಿಂಗ್‌ನ ಹೃದಯದಲ್ಲಿ ಬ್ರಿಟಿಷರ ವಿರುದ್ಧದ ಹೋರಾಟದ ಕಿಡಿಯು ಜ್ವಾಲೆಯಾಗಿ ಉರಿಯತೊಡಗುತ್ತದೆ. ಸಾಂಡರ್ಸ್‌ನಂಥ ಬ್ರಿಟಿಷ್ ಪೊಲೀಸರನ್ನು ಸಾಯಿಸುವುದು ಮಾತ್ರವಲ್ಲ, ಇಂಥ ಘಟನೆಯು ಬ್ರಿಟಿಷರ ವಿರುದ್ಧದ ಹೋರಾಟ ಎಂದು ನಮ್ಮ ದೇಶದ ಜನರಿಗೆ ತಿಳಿಯುವಂತೆ ಮಾಡಬೇಕು, ಅದಕ್ಕೆ ಪ್ರಚಾರ ನೀಡಬೇಕು ಎಂಬುದು ಅವರ ಅಭಿಮತ.
ಬ್ರಿಟಿಷ್ ದಬ್ಬಾಳಿಕೆಯ ವಿರುದ್ಧಸಶಸ್ತ್ರಹೋರಾಟ ನಡೆಸಲು ಭಗತ್ ಸಿಂಗ್ ಆಯ್ಕೆ ಮಾಡಿಕೊಂಡಿದ್ದು ಹಿಂದುಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಷನ್ (ಎಚ್‌ಎಸ್‌ಆರ್‌ಎ) ಎಂಬ ಸಂಘಟನೆಯನ್ನು. ಜೆ.ಪಿ.ಸ್ಯಾಂಡರ್ಸ್‌ನ್ನು ಗುಂಡಿಟ್ಟು ಸಾಯಿಸಿದ ನಂತರ, 18.12.1928ರಂದು ಎಚ್‌ಎಸ್ ಆರ್‌ಎ ಸಂಘಟನೆಯು ಒಂದು ಕರಪತ್ರ ಹೊರಡಿಸಿ, ಲಾಲಾ ಲಜಪತ್ ರಾಯ್ ಅವರ ಕೊಲೆಗೆ ಪ್ರತಿಯಾಗಿ ಈತನನ್ನು ಸಾಯಿಸಿದ್ದೇವೆ ಎಂದು ಹೇಳಿತ್ತು. ಅಂದು
ಅದರ ಕಮಾಂಡರ್ ಇನ್ಚೀಫ್ಆಗಿದ್ದದು ಬಲರಾಜ್. ಕ್ರಾಂತಿಗೆ ಕರೆ ನೀಡಿ, ಬ್ರಿಟಿಷರನ್ನು ಭಾರತ ಬಿಟ್ಟು ಹೋಗುವಂತೆ ಮಾಡುವ ಎಚ್‌ಎಸ್‌ಆರ್‌ಎನ ಧ್ಯೇಯೋದ್ದೇಶಗಳಿಗೆ ಹೆಚ್ಚಿನ ಪ್ರಚಾರ ನೀಡಲು, ಭಗತ್ ಸಿಂಗ್ ಮತ್ತು ಅವನ ಗೆಳೆಯರು ಒಂದು ಕೆಲಸ ಮಾಡಿದರು. 8.4.1928ರಂದು ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ತ ದೆಹಲಿಯ ಅಸೆಂಬ್ಲಿಯ ಸಾರ್ವಜನಿಕ ಗ್ಯಾಲರಿ ಯಿಂದ ಎರಡು ಕಚ್ಚಾ ಬಾಂಬ್ ಎಸೆದರು. ಆ ಬಾಂಬುಗಳಿಂದ ಯಾರನ್ನೂ ಸಾಯಿಸುವ ಉದ್ದೇಶ ಹೊಂದಿರಲಿಲ್ಲ, ಬದಲಿಗೆ ಪ್ರಚಾರವೇ ಮುಖ್ಯ ಉದ್ದೇಶ ಎನಿಸಿತ್ತು. ಜತೆಗೆ ಕರಪತ್ರಗಳನ್ನು ತೂರಿಬಿಟ್ಟರು.
ಕಚ್ಚಾ ಬಾಂಬ್ ಸ್ಫೋಟಿಸಿದನಂತರ ಎದ್ದ ದಟ್ಟ ಹೊಗೆಯಲ್ಲಿ ಅವರಿಬ್ಬರೂ ತಪ್ಪಿಸಿಕೊಂಡು ಹೋಗಬಹುದಿತ್ತು. ಆದರೆ, ಭಗತ್‌ಸಿಂಗ್ ಉದ್ದೇಶವೇ ಬೇರೆ. ಈ ಘಟನೆಯ ಮೂಲಕ ತಮ್ಮ ಹೋರಾಟಕ್ಕೆ ಹೆಚ್ಚಿನ ಪ್ರಚಾರ ದೊರಕಿಸುವುದು ಮುಖ್ಯ ಉದ್ದೇಶ. ಇಬ್ಬರೂ ‘ಇಂಕ್ವಿಲಾಬ್ ಜಿಂದಾಬಾದ್’ ಎಂದು ಘೋಷಣೆ ಕೂಗುತ್ತಾ, ಅಲ್ಲಿದ್ದ ಪೊಲೀಸರಿಗೆ ತಮ್ಮನ್ನು ತಾವು ಒಪ್ಪಿಸಿ ಕೊಂಡರು. ಈ ಸಮಯದಲ್ಲಿ ಸ್ಯಾಂಡರ್ಸ್ ಕೊಲೆಯನ್ನು ಇವರೇ ಮಾಡಿದ್ದು ಎಂದು ಬಯಲಾಗಿರಲಿಲ್ಲ.
ಅಸೆಂಬ್ಲಿ ಹಾಲ್ ಕಚ್ಚಾ ಬಾಂಬ್ ಸೋಟದ ವಿಚಾರಣೆ ನಡೆದು, ಭಗತ್ ಸಿಂಗ್‌ಗೆಜೀವಾವಧಿಶಿಕ್ಷೆವಿಧಿಸಲಾಯಿತು. ಆ ಬಾಂಬ್ ಸ್ಫೋಟದಲ್ಲಿ ಜೀವಹಾನಿ ಆಗಿರಲಿಲ್ಲ, ಆದರೂ ಜೀವಾವಽ ಶಿಕ್ಷೆ ವಿಽಸಿತು ಬ್ರಿಟಿಷ್ ನ್ಯಾಯದಾನ ವ್ಯವಸ್ಥೆ. ಆದರೆ, ಇದಿನ್ನೂ ಆರಂಭವಷ್ಟೆ. ಬ್ರಿಟಿಷ್ ನ್ಯಾಯದಾನ ವ್ಯವಸ್ಥೆ ತನ್ನ ಕರಾಳ ಬಾಹುವನ್ನು ಇನ್ನಷ್ಟು ಬಿಚ್ಚಲು ಆರಂಭಿಸಿತ್ತು. ಈ ನಡುವೆ15.4.1928ರಂದು  ಲಾಹೋರಿನಲ್ಲಿ ಎಚ್‌ಎಸ್‌ಆರ್‌ಎ ನಡೆಸುತ್ತಿದ್ದ ಸಣ್ಣ ಮಟ್ಟದ ರಹಸ್ಯ ಬಾಂಬ್ ಕಾರ್ಯಾಗಾರವನ್ನು ಬ್ರಿಟಿಷ್ ಪೊಲೀಸರು ಪತ್ತೆ ಹಚ್ಚಿದರು.
ಸಹರಾನ್‌ಪುರದಲ್ಲಿದ್ದ ಇನ್ನೊಂದು ಪುಟ್ಟ ಕಾರ್ಯಾಗಾರವನ್ನು ಸಹ ಪತ್ತೆ ಹಚ್ಚ ಲಾಯಿತು. ಅಲ್ಲಿದ್ದ ಕೆಲಸಗಾರರೇ ಬ್ರಿಟಿಷ್ ಪೊಲೀಸರಿಗೆ ಮಾಹಿತಿಯನ್ನು  ನೀಡಿದ್ದರು! ಈ ಮಾಹಿತಿಯನ್ನು ಕೆದಕುತ್ತಾ ಹೋದ ಪೊಲೀಸರು, ಸಾಂಡರ್ಸ್ ಕೊಲೆ ಪ್ರಕರಣಕ್ಕೆ ಒಂದು ತಿರುವು ಕೊಟ್ಟು, ಭಗತ್ ಸಿಂಗ್, ಸುಖದೇವ್, ರಾಜಗುರು ಮತ್ತು ಇತರ ೨೧ ಜನರ ಮೇಲೆ ಆ ಕೊಲೆ ಪ್ರಕರಣ ಹೊರಿಸಿದರು.
ಆ ನಂತರ ಬ್ರಿಟಿಷ್ ಪೊಲೀಸರು ನಡೆಸಿದ ಕಾರಸ್ಥಾನ, ಸುಳ್ಳು ಸಾಕ್ಷ್ಯಗಳ ಸರಮಾಲೆ, ಕಾನೂನಿನ ದುರ್ಬಳಕೆ ಮೊದಲಾದವು ಗಳನ್ನು ವಿಶ್ಲೇಷಿಸುತ್ತಾ ಹೋದರೆ ಒಂದು ಪುಸ್ತಕವನ್ನೇ ಬರೆಯಬಹುದು. ಬ್ರಿಟಿಷರ ಪೊಲೀಸ್ ವ್ಯವಸ್ಥೆ ಮತ್ತು ಕಾನೂನು ವ್ಯವಸ್ಥೆಯು ಭಗತ್ ಸಿಂಗ್ ಮತ್ತು ಆತನ ಸಹಚರರನ್ನು ತುಂಬಾ ಕ್ರೂರವಾಗಿ ನಡೆಸಿಕೊಂಡಿತು. ಅಂದು ನಮ್ಮನ್ನು ಆಳುತ್ತಿದ್ದ ವೈಸ್‌ರಾಯ್ ಇರ್ವಿನ್‌ನು,  ಈ ನಡುವೆ, ಇವರ ಪ್ರಕರಣದ ತನಿಖೆಗೆಂದು ವಿಶೇಷ ಟ್ರಿಬ್ಯುನಲನ್ನು (ನ್ಯಾಯಮಂಡಳಿ) 1.5.1930ರಂದು ಸ್ಥಾಪಿಸಿದನು. ಇದರಲ್ಲಿ ಮೂವರುನ್ಯಾಯಾಧೀಶರಿದ್ದರು.
ಆದರೆ ಅದು ನೀಡಿದ ತೀರ್ಪನ್ನು ಕೇವಲ ಇಂಗ್ಲೆಂಡಿನಲ್ಲಿದ್ದ ಪ್ರೈವಿ ಕೌನ್ಸಿಲ್‌ನಲ್ಲಿ ಮಾತ್ರ ಮರು ಅಪೀಲ್ ಮಾಡಬಹುದು  ಎಂಬ ಕಠೋರ ಷರತ್ತನ್ನು ವೈಸ್‌ರಾಯ್ ಇರ್ವಿನ್ವಿಧಿಸಿದನು. ಬ್ರಿಟಿಷರ ಈ ನ್ಯಾಯದಾನದ ಪ್ರಕ್ರಿಯೆ ಎಷ್ಟು  ಏಕಪಕ್ಷೀಯ ವಾಗಿತ್ತೆಂದರೆ, ಆರೋಪಿತರು ತಮ್ಮ ಕೇಸನ್ನುಡಿಫೆಂಡ್ಮಾಡುವಂತಿರಲಿಲ್ಲ. ಆ ನ್ಯಾಯಾಲಯದ ಆವರಣದಲ್ಲಿ ಆರೋಪಿಗಳು ಹಾಜರಿರಬೇಕೆಂದೇ ಇರಲಿಲ್ಲ ಮತ್ತು ಎಕ್ಸ್‌ಪಾರ್ಟಿಯಾಗಿ ಅಂದರೆ, ಅವರ ಅನುಪಸ್ಥಿತಿಯಲ್ಲಿ ಶಿಕ್ಷೆಯನ್ನು ವಿಽಸಲಾಗಿತ್ತು!
7.10.1930ರಂದು ವಿಶೇಷ ಟ್ರಿಬ್ಯುನಲ್ ತನ್ನ ತೀರ್ಪನ್ನು ನೀಡಿತು. ಭಗತ್ ಸಿಂಗ್, ಸುಖದೇವ್ ಮತ್ತು ರಾಜಗುರು ಇವರಿಗೆ ಸ್ಯಾಂಡರ್ಸ್ ಪ್ರಕರಣದಲ್ಲಿ ಮರಣದಂಡನೆವಿಧಿಸಲಾಯಿತು. ಕುಂದನ್‌ಲಾಲ್‌ಗೆ ಏಳು ವರ್ಷ, ಪ್ರೇಮ್ ದತ್‌ಗೆ ಐದು ವರ್ಷ ಶಿಕ್ಷೆ ಮತ್ತು ಏಳು ಮಂದಿಗೆ ಗಡಿಪಾರಿನ ಶಿಕ್ಷೆವಿಧಿಸಲಾಯಿತು.
ಇನ್ನೂ ಕ್ರೂರವೆಂದರೆ, ವೈಸ್‌ರಾಯ್ ಇರ್ವಿನ್ ರೂಪಿಸಿದ ಈ ವಿಶೇಷ ಟ್ರಿಬ್ಯುನಲ್ ಕೊನೆಗೂಅಧಿಕೃತಮಾನ್ಯತೆಯನ್ನು ಪಡೆಯಲೇ ಇಲ್ಲ. ಅಂದಿನ ನಿಯಮದಂತೆ, ಬ್ರಿಟಿಷ್ ಪಾರ್ಲಿಮೆಂಟಿನ ಸೆಂಟ್ರಲ್ ಅಸೆಂಬ್ಲಿಯಲ್ಲಿ ಈ ವಿಶೇಷ ಟ್ರಿಬ್ಯುನಲ್‌ಗೆ ಮಾನ್ಯತೆ ದೊರಕಬೇಕಿತ್ತು, ಆದರೆ ಅದಾಗದೇ ಇರುವುದರಿಂದಾಗಿ ಈ ಟ್ರಿಬ್ಯೂನಲ್‌ಗೆ ಯಾವುದೇ ಸಾಂವಿಧಾನಿಕಅಧಿಕಾರದೊರಕಲೇ ಇಲ್ಲ. ಅದರ ಅರ್ಥ,ಅಧಿಕೃತಮಾನ್ಯತೆ ಇಲ್ಲದ ಒಂದು ಟ್ರಿಬ್ಯೂನಲ್ ರಚಿಸಿದ ಅಂದಿನ ಬ್ರಿಟಿಷ್ ಸರಕಾರ,  ಆರೋಪಿಗಳಿಗೆ ತಮ್ಮ ಪ್ರಕರಣವನ್ನು ರಕ್ಷಿಸಿಕೊಳ್ಳುವ ಸಮರ್ಪಕ ಅವಕಾಶ ನೀಡದೇ, ಮರಣದಂಡನೆಯನ್ನು ವಿಧಿಸಿತು!
ಇದು ಬ್ರಿಟಿಷರ ನ್ಯಾಯದಾನದ ಒಂದು ಕ್ರೂರ ಅಧ್ಯಾಯವಲ್ಲದೆ ಇನ್ನೇನು? 23.3.1931ರಂದು ಭಗತ್ ಸಿಂಗ್ ಮತ್ತು ಇನ್ನಿಬ್ಬ ರನ್ನು ಲಾಹೋರಿನಲ್ಲಿ ಬ್ರಿಟಿಷರು ಫಾಸಿಶಿಕ್ಷೆವಿಧಿಸಿ, ಸಾಯಿಸಿದರು. ಇವರ ವಿಚಾರಣೆಯು ನ್ಯಾಯದಾನದ ಮೂಲ ಭೂತ ವಿಧಿವಿಧಾನಗಳಿಗೆ ವಿರುದ್ಧವಾಗಿ ನಡೆದಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈ ನಡುವೆ, ಭಗತ್‌ಸಿಂಗ್ ಮತ್ತು ಅವನ ಸಹಚರರ ನೆರವಿಗೆ ಕಾಂಗ್ರೆಸ್ ಮತ್ತುಗಾಂಧೀಜಿಬರಲಿಲ್ಲ ಎಂಬ ಒಂದು ಆರೋಪ ಇದ್ದರೂ, ಅದನ್ನು ಎಲ್ಲರೂ ಒಪ್ಪುವುದಿಲ್ಲ. ಆ ಯುವಕರ ಧೈರ್ಯವನ್ನು ತಾನು ಹೊಗಳುತ್ತೇನೆ ಆದರೆ, ಅವರ ಹಿಂಸಾಮಾರ್ಗ ವನ್ನು ಒಪ್ಪುವುದಿಲ್ಲ ಎಂದು ಗಾಂಽಜಿಯವರು ಯಂಗ್ ಇಂಡಿಯಾ ಪತ್ರಿಕೆಯಲ್ಲಿ 29.3.1931ರಂದು ಬರೆದಿದ್ದಾರೆ. ನಮ್ಮ ಕೋಪವನ್ನು ನುಂಗಿಕೊಂಡು, ಅಹಿಂಸಾ ನೀತಿಗೆ ಬದ್ಧರಾಗಿರಬೇಕು ಎಂದುಗಾಂಧೀಜಿಯವರು ಆ ಸಂದರ್ಭದಲ್ಲಿ ಬರೆದಿದ್ದರು. ಅದೇನೇ ಇದ್ದರೂ, ಭಗತ್‌ಸಿಂಗ್‌ನ ಹೋರಾಟ, ತ್ಯಾಗವು ಇಂದು ನಮ್ಮ ದೇಶದಲ್ಲಿ ಸಾಕಷ್ಟು ಪ್ರಚುರಕ್ಕೆ ಬಂದಿದೆ. ಆತನ ಹೆಸರಿನಲ್ಲಿ ಸಿನಿಮಾಗಳಾಗಿವೆ, ನಾಟಕಗಳು ಬಂದಿವೆ, ಅಂಚೆ ಚೀಟಿ ಹೊರಬಂದಿದೆ, ದೆಹಲಿಯ ಪಾರ್ಲಿಮೆಂಟ್ ಹೌಸ್‌ನಲ್ಲಿ18ಅಡಿ ಎತ್ತರದ ಪ್ರತಿಮೆಯನ್ನೂ ಸ್ಥಾಪಿಸಲಾಗಿದೆ.
ಅದೇನೇ ಇದ್ದರೂ, ಆತನಿಗೆ ಗಲ್ಲು ಶಿಕ್ಷೆವಿಧಿಸುವಪ್ರಕ್ರಿಯೆಯಲ್ಲಿ,ಅನಧಿಕೃತಟ್ರಿಬ್ಯುನಲ್ ರಚಿಸಿದ ಅಂದಿನ ಬ್ರಿಟಿಷ್ ಸರಕಾರದ ಕ್ರೂರ ನಡೆ ಮಾತ್ರ ಅಕ್ಷಮ್ಯ.