ಮೀಸಲಾತಿ ಪ್ರಮಾಣ ಹೆಚ್ಚಳವೊಂದೆ ಪರಿಹಾರವೇ ?
ಪ್ರಚಲಿತ
ಬೇಳೂರು ರಾಘವ ಶೆಟ್ಟಿ
ಸಾರ್ವಜನಿಕ ನೇಮಕಾತಿಯಲ್ಲಿ ಸರಕಾರ ಜಾತಿ, ಮತ, ಲಿಂಗ ಹಾಗೂ ಪ್ರಾದೇಶಿಕ ತಾರತಮ್ಯ ಎಸಗಬಾರದು ಎಂದು ನಮ್ಮಸಂವಿಧಾನದ ಆರ್ಟಿಕಲ್ 16(1)ರಲ್ಲಿ ಉಲ್ಲೇಖಿಸಲ್ಪಟ್ಟಿದೆ. ಆದರೆ ಯಾವುದೇ ಹಿಂದುಳಿದ ವರ್ಗಗಳ ಪ್ರಾತಿನಿಧ್ಯ ಸಾರ್ವಜನಿಕ ನೇಮಕಾತಿಯಲ್ಲಿ ಸಾಕಷ್ಟಿಲ್ಲವೆಂದು ಸರಕಾರಕ್ಕೆ ಮನವರಿಕೆಯಾದರೆ, ಆ ವರ್ಗಗಳ ಏಳಿಗೆಗೆ ಮೀಸಲಾತಿ ಕಲ್ಪಿಸಲು ಈ ಕಲಂ ಅಡ್ಡ ಬರುವುದಿಲ್ಲವೆಂದು ಆರ್ಟಿಕಲ್ 16(4)ರಲ್ಲಿ ಉಲ್ಲೇಖಿಸಲಾಗಿದೆ.
ಇದೇ ಮೀಸಲಾತಿಯ ಉಗಮ. ಆದರೆ ಆರ್ಟಿಕಲ್ (16)ರ ಉಪಕಲಂಗಳಲ್ಲಿ ಏನೇ ಹೇಳಲಿ ಅದು ಆರ್ಟಿಕಲ್ 16(1)ರಲ್ಲಿ ನಿಹಿತವಾದ ಜಾತಿ, ಮತ, ಲಿಂಗ ಹಾಗೂ ಪ್ರಾದೇಶಿಕತೆಗಳ ಆಧಾರದಲ್ಲಿ ತಾರತಮ್ಯ ಎಸಗಬಾರದೆಂಬುದರ ಧ್ವನಿಗೆ ವಿರೋಧ ವಾಗಬಾರದಷ್ಟೇ! ಯಾಕೆಂದರೆ ಸಮಾನತೆ ಮತ್ತು ಸಮಾನ ಅವಕಾಶಗಳೇ ಪ್ರಜಾಸತ್ತೆಯ ಮೂಲತತ್ವ. ಹಾಗಾಗಿಸಮಾನತೆ ಹಾಗೂ ಸಮಾನ ಅವಕಾಶದ ತತ್ತ್ವಕ್ಕೆ ಭಂಗವಾಗದಂತೆ ಮೀಸಲಾತಿಯ ನಿರ್ವಹಣೆ ಮತ್ತು ಮೀಸಲಾತಿ ವರ್ಗಗಳ ಅರ್ಹತೆಯನ್ನು ಕರಾರುವಕ್ಕಾಗಿ ಖಚಿತಪಡಿಸಿಕೊಳ್ಳಬೇಕಾದ ಜವಾಬ್ದಾರಿ ಸರಕಾರಕ್ಕಿದೆ ಎಂದು ಒತ್ತಿ ಹೇಳಬೇಕಾಗಿದೆ.
ಸರಕಾರ ಈ ಜವಾಬ್ದಾರಿಯನ್ನು ನ್ಯಾಯಯುತ ವಾಗಿ ನಿರ್ವಹಿಸಿದೆ ಎಂದು ಹೇಳಲಾಗದು. ಲಾಗಾಯ್ತಿನಿಂದಲೂ ಆಯಾ ಮೀಸಲಾತಿ ವರ್ಗಗಳ ಜನಸಂಖ್ಯೆಯ ಅನುಪಾತದಲ್ಲಿ ಮೀಸಲಾತಿ ಪ್ರಮಾಣ ನಿಗದಿಪಡಿಸಲಾಗಿದೆ. ಈ ಮೀಸಲಾತಿ ವರ್ಗಗಳಗುರುತಿಸುವಿಕೆಗೆ ಬೇರೆ ಇನ್ಯಾವ ಮಾನದಂಡವನ್ನು ಬಳಸಲಾಗಿಲ್ಲ. ಮಂಡಲ ಆಯೋಗದ ವರದಿಯ ಪ್ರಕರಣವೆಂದೇ ಪ್ರಖ್ಯಾತವಾದ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಹಿಂದುಳಿದಿರುವಿಕೆಯನ್ನು ಗುರುತಿಸಲು ಸಹಕಾರಿಯಾದ ವ್ಯಾಖ್ಯಾನ ನೀಡಿದೆ.
ಆರ್ಥಿಕ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಹಿಂದುಳಿದಿರುವುದು, ಹಿಂದುಳಿದಿರುವಿಕೆಯ ಲಕ್ಷಣ ಎಂದು ಅಭಿಪ್ರಾಯಪಟ್ಟಿದೆ. ಆದರೆ ಈಗಲೂ ಹಿಂದುಳಿದಿರುವಿಕೆಯನ್ನು ಜಾತಿ ಆಧಾರದಲ್ಲಿಯೇ ಗುರುತಿಸುವುದು ರೂಢಿಯಾಗಿದೆ. ಜನಸಂಖ್ಯೆ ಏರಿಕೆಯದರ, ನಿಯಂತ್ರಣದಲ್ಲಿರುವುದಾದರೂ ಒಟ್ಟು ಜನಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿರುವುದು ಸರಿಯಷ್ಟೇ! ಈ ಅನುಪಾತಕ್ಕೆ ಸರಿಯಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕೆನ್ನುವುದು ಆ ವರ್ಗಗಳ ಬೇಡಿಕೆ. ಅದಕ್ಕೆ ಈಗ ಆಡಳಿತಾರೂಢ ಸರಕಾರಗಳೂ ಧ್ವನಿಗೂಡಿಸುತ್ತಿದ್ದಾವೆ.
ದುರದೃಷ್ಟವೇನೆಂದರೆ, ಮಂಡಲ ಆಯೋಗದ ಪ್ರಕರಣದಲ್ಲಿ ಒಟ್ಟು ಮೀಸಲಾತಿಯ ಪ್ರಮಾಣ ಶೇ.50ಕ್ಕಿಂತ ಅಧಿಕವಾಗ ಬಾರದು ಎಂದು ನಿರ್ದೇಶನ ನೀಡಿದ ಸರ್ವೋಚ್ಚ ನ್ಯಾಯಲಯವೇ ಈಗ ಈ ಪ್ರಮಾಣವನ್ನು ಹೆಚ್ಚಿಸಬೇಕೆ ಬೇಡವೇ ಎಂಬವಿಚಾರದಲ್ಲಿ ಎಲ್ಲಾ ರಾಜ್ಯಗಳ ಅಭಿಪ್ರಾಯ ಪಡೆಯಲು ಮುಂದಾಗಿದೆ. ಈ ವಿಚಾರ ಅಂದು ನವ ಸದಸ್ಯ ಸಂವಿಧಾನ ಪೀಠದಲ್ಲಿ ವಿಸ್ತೃತವಾಗಿ ಚರ್ಚಿಸಲ್ಪಟ್ಟಿದೆ.
ಆಡಳಿತದಲ್ಲಿ ಸಂಗತವಾದ ದಕ್ಷತೆ (    )ಗೆ ಧಕ್ಕೆಯಾಗದಂತೆ ಮೀಸಲಾತಿ ನಿರ್ವಹಣೆ ಆಗತಕ್ಕದ್ದೆಂದು ಆರ್ಟಿಕಲ್ 335ರಲ್ಲಿ ಉಲ್ಲೇಖಿತ ವಾಗಿರುವುದನ್ನು ದೃಷ್ಟಿಕೋನದಲ್ಲಿರಿಸಿಕೊಂಡು ಘನ ನ್ಯಾಯಾಲಯ ಒಟ್ಟು ಮೀಸಲಾತಿಯ ಪ್ರಮಾಣ ವನ್ನು ಶೇ.50ಕ್ಕೆ ಮಿತಿಗೊಳಿಸಿರುವುದನ್ನು ಇಲ್ಲಿ ಸ್ಮರಿಸ ಬಹುದಾಗಿದೆ.ಖೇದದ ವಿಚಾರವೆಂದರೆ ಈ ನಿರ್ದೇಶನವನ್ನು ನಿರ್ಲಕ್ಷಿಸಿ, ಅನೇಕ ರಾಜ್ಯಗಳು ಈಗಾಗಲೇ ಈ ಮಿತಿಯನ್ನು ದಾಟಿವೆ.
ಉದಾಹರಣೆಗೆ ತಮಿಳುನಾಡು ಶೇ.69, ಮಹರಾಷ್ಟ್ರ ಶೇ.75, ತೆಲಂಗಾಣ ಶೇ.67ಹಾಗೂ ಹರಿಯಾಣ ಶೇ.67ರಷ್ಟು ಮೀಸಲಾತಿಪ್ರಮಾಣವನ್ನು ಹೆಚ್ಚಿಸಿವೆ. ವಸ್ತುಸ್ಥಿತಿ ಹೀಗಿರುವಾಗ ಘನ ನ್ಯಾಯಾಲಯ ಈ ಮಿತಿಯ ಹೆಚ್ಚಳದ ಸಂಬಂಧ ರಾಜ್ಯಗಳ ಅಭಿಪ್ರಾಯ ಕೋರಿರುವುದರ ಔಚಿತ್ಯವೇನೆಂಬುದು ತಿಳಿಯದು. ಬದಲಾಗಿ ಇಂದಿರಾ ಸ್ವಹಾನಿ ಪ್ರಕರಣದಲ್ಲಿ ಸರ್ವೋಚ್ಚನ್ಯಾಯಾಲಯ ನೀಡಿದ ಸೂಚನೆಗಳು ಪಾಲನೆಯಾಗದಿರುವುದರ ಬಗ್ಗೆ ರಾಜ್ಯಗಳ ಸಮಜಾಯಿಷಿ ಕೇಳಬಹುದಾಗಿತ್ತು. ಅವುಗಳಲ್ಲಿ ಪ್ರಮುಖವಾದ ಸೂಚನೆ ಎಂದರೆ ಕೆನೆಪದರ ಯೋಜನೆಯ ಅನುಷ್ಠಾನ.
ಆಗ ಕೇಂದ್ರದಲ್ಲಿ ಆಡಳಿತದಲ್ಲಿದ್ದ ದಿ. ಮಾಜಿ ಪ್ರಧಾನಿ ನರಸಿಂಹ ರಾವ್ ನೇತೃತ್ವದ ಸರಕಾರ ಈ ಬಗ್ಗೆ ನ್ಯಾಯಮೂರ್ತಿ ರಾಮ್‌ನಂದನ್ ನೇತೃತ್ವದ ಸಮಿತಿ ರಚಿಸಿತ್ತು. ಸದರಿ ಸಮಿತಿ ಅನೇಕ ಸಲಹೆ ಸೂಚನೆಗಳನ್ನು ನೀಡಿತ್ತು. ಅವುಗಳು ಆಜ್ಞಾರೂಪ ದಲ್ಲಿರಲಿಲ್ಲವಾದರೆ, ಪ್ರಗತಿಪರ ಚಿಂತನೆಯಿರುವ ಹಾಗೂ ಸಾರ್ವಜನಿಕ ಹಿತಾಸಕ್ತಿಯುಳ್ಳ ಸರಕಾರ ಈ ಸೂಚನೆಗಳನ್ನುಅನುಷ್ಠಾನಿಸಬೇಕಿತಲ್ಲವೇ! ಘನ ನ್ಯಾಯಾಲಯ ಈ ವಿಚಾರಗಳನ್ನು ಈಗಲೂ ಪ್ರಸ್ತಾಪಿಸದಿರುವುದು ಆಶ್ಚರ್ಯದ ಸಂಗತಿ.
ಕಳೆದ ಎಪ್ಪತ್ತು ವರ್ಷದಿಂದ ಮೀಸಲಾತಿ ಚಾಲ್ತಿಯಲ್ಲಿದೆ. ಅದರ ಪರಿಣಾಮ ಹಾಗೂ ಅದರಿಂದ ಆದ ಒಳಿತಿನ ಸಮೀಕ್ಷೆ ಮಾಡುವ ಗೋಜಿಗೆ ಸರಕಾರ ಹೋಗದಿರುವುದನ್ನು ನ್ಯಾಯಾಲಯ ಪ್ರಸ್ತಾಪಿಸ ಬಹುದಿತ್ತು. ಆದರೆ ಸೋಜಿಗವೆಂದರೆ ರಾಜಕಾರಣಿ ಗಳೆಲ್ಲರೂ ಪಕ್ಷಾತೀತವಾಗಿ ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಒತ್ತಾಯಿಸುತ್ತಿರುವುದನ್ನು ಕಾಣುತ್ತಿದ್ದೇವೆ.
ಸರ್ವೋಚ್ಚ ನ್ಯಾಯಾಲಯ ಈಗ ದಿಟ್ಟ ನಿಲುವನ್ನು ತಳೆಯಬೇಕಾಗಿದೆ. ನಿಜ. ಮೀಸಲಾತಿ ಪ್ರಮಾಣ ನಿರ್ಧರಿಸುವ ಹಾಗೂ ವಿಸ್ತರಿಸುವ ವಿಚಾರ ಸಾರ್ವಜನಿಕರಿಂದ ಆಯ್ಕೆಯಾದ ಸರಕಾರದ ವಿವೇಚನೆಗೆ ಬಿಟ್ಟ ವಿಚಾರವೆಂದರೆ ತಪ್ಪಲ್ಲ. ಅದು ನ್ಯಾಯಾಲಯದ ಹೊಣೆಗಾರಿಕೆ ಎಂದು ಹೇಳಲಾಗದು. ಆದರೆ ಈ ಚುನಾಯಿತ ಸರಕಾರಗಳು ಸಂವಿಧಾನದ ಆಶಯಕ್ಕೆ ವಿರೋಧವಾಗಿ ನಡೆದುಕೊಳ್ಳುವುದಾದರೆ ಸಂವಿಧಾನದ ರಕ್ಷಣೆಯ ಕಾರ್ಯ ನ್ಯಾಯಾಂಗ ಮಾಡಲೇ ಬೇಕಾಗುತ್ತದೆ.
ಅಭೂತಪೂರ್ವ ಬಹುಮತದ ಬಲದಲ್ಲಿ ಸಾರ್ವಜನಿಕ ಹಿತಾಸಕ್ತಿಯ ಸೋಗಿನಲ್ಲಿ ಪೌರನ ಮೂಲಭೂತ ಹಕ್ಕನ್ನು ನಿರಾಕರಿಸುವ ಕಾನೂನನ್ನು ರೂಪಿಸಿ, ನ್ಯಾಯಾಲಯದಲ್ಲಿ ಪ್ರಶ್ನಿಸಲಾಗದಂತೆ ಒಂಭತ್ತನೇ ಶೆಡ್ಯೂಲ್‌ಗೆ ಕಾನೂನನ್ನು ಒಳಪಡಿಸುವ ವಿಘ್ನ ಸಂತೋಷಿ ಸರಕಾರವನ್ನು ನಿಯಂತ್ರಿಸುವಲ್ಲಿ ಸರ್ವೋಚ್ಚ ನ್ಯಾಯಾಲಯ ಕ್ರಿಯಾಶೀಲತೆಯನ್ನು ತೋರಿಸಬೇಕಾಗುತ್ತದೆ.
ಆ ಕಾರಣಕ್ಕಾಗಿ ಇತ್ತೀಚೆಗೆ ಸರ್ವೋಚ್ಚ ನ್ಯಾಯಾಲಯ ಕೇಶವಾನಂದ ಭಾರತಿ ಪ್ರಕರಣದಲ್ಲಿ ಎತ್ತಿ ಹಿಡಿದ ಮೂಲಭೂತ ಹಕ್ಕಿನರಕ್ಷಣೆಗಾಗಿ      ನ್ನು ಪುನರುಚ್ಚರಿಸಿದೆ. ಮೀಸಲಾತಿ ವಿಚಾರದಲ್ಲಿ ಸರ್ವೋಚ್ಚ ನ್ಯಾಯಾಲಯ ಆಡಳಿತದ ದಕ್ಷತೆಯ ದೃಷ್ಟಿಯಿಂದ ಕ್ರಿಯಾಶೀಲತೆಯನ್ನು ಈಗ ತೋರಿಸಬೇಕಾದ ಕಾಲ ಸನ್ನಿಹಿತವಾಗಿದೆ. ನೈಜ ಅರ್ಹತೆ ಅಥವಾ ಅಗತ್ಯ ಇರುವವರಿಗೆ ಮೀಸಲಾತಿ ಅವಕಾಶ ಕಲ್ಪಿಸುವುದರಲ್ಲಿ ತಪ್ಪೇನಿಲ್ಲ. ಯಾರ ವಿರೋಧವೂ ಇಲ್ಲ. ಆದರೆ ಅದು ರಾಜಕೀಯ ವಿಷಯವಾಗಬಾರದಷ್ಟೇ! ಒಬ್ಬನೇ ಒಬ್ಬ ರಾಜಕಾರಣಿ ಆಡಳಿತದ ದಕ್ಷತೆಯ ಕುರಿತು ಪ್ರತಿಪಾದನೆ ಮಾಡಿದ್ದಿಲ್ಲ.
ಹಾಗಾದರೆ ಇವರಿಗೆ ಆರ್ಟಿಕಲ್ 335ರಲ್ಲಿ ಹೇಳಲಾದ ಆಡಳಿತದಲ್ಲಿನ ದಕ್ಷತೆ ಬಗ್ಗೆ ಕಿಂಚಿತ್ತೂ ಒಲವಿಲ್ಲವೇ! ಏರುತ್ತಿರುವ ಜನಸಂಖ್ಯೆಯ ಅನುಪಾತದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸುತ್ತಾ ಹೋಗುವುದಾದರೆ ಅದರ ಅಂತ್ಯ ಯಾವಾಗ ಆದೀತು. ಅದು ಸಮಾಜದಲ್ಲಿ ನಿರಂತರ ಎರಡು ವಾಹಿನಿಗೆ ದಾರಿ ಮಾಡಿಕೊಡುವು ದಿಲ್ಲವೇ! ಮೀಸಲಾತಿಯ ಉದ್ದೇಶವೇ ಹಿಂದುಳಿದ ವರನ್ನು ಮುಖ್ಯವಾಹಿನಿಗೆ ತಂದು ಒಂದೇ ವಾಹಿನಿ ಸಮಾಜದಲ್ಲಿ ಸ್ಥಾಪಿಸುವುದು ಎಂದಾದರೆ ಅದು ಕಾಲಬಾಧಿತವಾಗಿರತಕ್ಕದ್ದಲ್ಲವೇ!
ಅಲ್ಲವಾದರೆ ಮುಂದುವರಿದ ಹಿಂದುಳಿದ ವರ್ಗದ ಮಂದಿ ಅತಿ ಹಿಂದುಳಿದವರಿಗೆ ಮುಂದೆ ಬರಲು ತಡೆಯಾಗುತ್ತಾರಲ್ಲವೇ!ಸರ್ವೋಚ್ಚ ನ್ಯಾಯಾಲಯ ಈ ಎಲ್ಲಾ ಅಂಶಗಳನ್ನು ಪರಿಶೀಲನೆಗೆ ಒಳಪಡಿಸಿದರೆ ಉತ್ತಮ. ಈಗಾಗಲೇ ಸರ್ವೋಚ್ಚ ನ್ಯಾಯಾಲಯ ನಿಗದಿ ಪಡಿಸಿದ ಶೇ.50ರ ಗಡಿ ಮೀರಿ ಮೀಸಲಾತಿ ಪ್ರಮಾಣ ಹೆಚ್ಚಿಸಿದ ರಾಜ್ಯಗಳು ಅದರಿಂದ ಮೀಸಲು ಬೇಡಿಕೆಯ ಒತ್ತಡ ತಗ್ಗಿಸಲು ಶಕ್ತವಾಗಿದೆಯೇ ಎಂಬ ಅಫಿದಾವಿತ್ ನ್ಯಾಯಾಲಯಕ್ಕೆ ಸಲ್ಲಿಸಬೇಕು ಮತ್ತು ಆಡಳಿತದ ದಕ್ಷತೆ ಬಗ್ಗೆ ರಾಜ್ಯಗಳ ನಿಲುವೇನು ಎಂಬುದನ್ನು ಆ ರಾಜ್ಯಗಳು ಸರ್ವೋಚ್ಚ ನ್ಯಾಯಾಲಯದ ಮುಂದೆ ಸಾದರಪಡಿಸಬೇಕು.
ತೃಪ್ತಿಕರವಾದ ಸಮಜಾಯಿಷಿ ಕೊಡಲು ರಾಜ್ಯಗಳು ಶಕ್ತವಾಗದಿದ್ದರೆ, ಅವುಗಳು ಈಗಾಗಲೇ ಹೆಚ್ಚಿಸಿದ ಪ್ರಮಾಣವನ್ನು ರದ್ದುಪಡಿಸಲು ಆದೇಶಿಸುವುದೇ ಸೂಕ್ತ. ಒಟ್ಟಿನಲ್ಲಿ ಮೀಸಲು ವರ್ಗದ ಸಂಖ್ಯಾಬಲ ದಲ್ಲಿ ಮೀಸಲಾತಿ ಪ್ರಮಾಣ ಹೆಚ್ಚಿಸುವುದು ಪರಿಹಾರವಲ್ಲ ಹಾಗೂ ಅದು ಅವೈಜ್ಞಾನಿಕ ಯೋಜನೆ ಎಂದೇ ಹೇಳಬೇಕು. ಮೀಸಲಾತಿಯ ಅನುಷ್ಠಾನದ ಬಗ್ಗೆ ಒಂದು ಸಮಗ್ರ ಯೋಜನೆಯನ್ನು ಸರ್ವೋಚ್ಚ ನ್ಯಾಯಾಲಯದ ಕಣ್ಣಿರಿಕೆಯನ್ನು ರೂಪಿಸಲು ಇದು ಸಕಾಲ.