ಅಕ್ಷರ ಲೋಕದ ಸಂತ ಸುಜಿತ್ ಚಟ್ಟೋಪಾಧ್ಯಾಯ
ಸಾಧನೆ
ಕಾರ್ತಿಕ್ ಜೆ.ಎಸ್‌.
ಒಂದು ಸುಂದರ ಮುಂಜಾನೆ. ಹಕ್ಕಿಗಳ ಚಿಲಿಪಿಲಿ ಕಲರವ, ಗಾಳಿಗೆ ಶಬ್ದ ಮಾಡುತ್ತಾ ಕುಣಿಯುವ ಮರದ ಎಲೆಗಳು, ಹಸಿರ ಸಿರಿಯಿಂದ ಕಂಗೊಳಿಸುತ್ತಿರುವ ಭತ್ತದ ಗzಗಳು, ಆಹ್ಲಾದಕರ ವಾತಾವರಣ.
ಸ್ಥಳ – ಕೋಲ್ಕತಾದ ಹೊರವಲಯದಲ್ಲಿರುವ ಬುರ್ದ್ವಾನ್ ಜಿಯ ಆಸ್ ಗ್ರಾಮ್ ಎಂಬ ಹಳ್ಳಿಯಲ್ಲಿರುವ ಒಂದು ಮನೆಯ ವಿಶಾಲವಾದ ಪ್ರಾಂಗಣ.ಅಂಥ ಪ್ರಶಾಂತ ವಾತಾವರಣದಲ್ಲೂ, ಸುತ್ತಮುತ್ತಲಿನ ಹಳ್ಳಿಗಳಿಂದ ಬಂದ, ಕಲಿಯಲು ಹಾತೊರೆ ಯುವ ವಿದ್ಯಾರ್ಥಿಗಳ ಚಟುವಟಿಕೆಯ ಸದ್ದು ಕೇಳುತ್ತಿದೆ. ಆಗ ಅಲ್ಲಿಗೆ ಮನೆಯೊಳಗಿಂದ ನಿಧಾನವಾಗಿ ಹೊರಗಡೆಗೆ ಹೆಜ್ಜೆ ಹಾಕುತ್ತ, ಮುಗುಳ್ನಗುತ್ತ, ಕೈಯಲ್ಲಿ ಪುಸ್ತಕ ಹಿಡಿದುಕೊಂಡು ಒಬ್ಬ ‘ವ್ಯಕ್ತಿ’ ಆಗಮಿಸುತ್ತಾರೆ.
ಅವರನ್ನು ನೋಡಿದ ವಿದ್ಯಾರ್ಥಿಗಳ ಮುಖ ಅರಳುತ್ತದೆ. ಸಂತಸದಿಂದ ಆ ದಿನದ ಪಾಠ ಕಲಿತು ಮನೆಗೆ ಮರಳುತ್ತಾರೆ. ಕೋಲ್ಗೇಟ್ ಇಂಡಿಯಾದವರ ‘ರಿಯಲ್ ಲೈ- ರಿಯಲ್ ಸ್ಟೋರೀಸ್ ಸೀರೀಸ್’ ಸಾಕ್ಷ್ಯ ಚಿತ್ರವೊಂದರಲ್ಲಿ ಕಂಡುಬರುವ ಈ ದೃಶ್ಯ, ನೋಡುಗರ ಮನಸ್ಸನ್ನು ಅರಳಿಸಬಲ್ಲದು. ಇದು ಒಂದೆರಡು ದಿನದ ಕಥೆಯಲ್ಲ.17ವರ್ಷಗಳಿಂದ ಓತಪ್ರೋತವಾಗಿ ನಡೆಯುತ್ತಿರುವ ಪ್ರಕ್ರಿಯೆ. ಆ ವ್ಯಕ್ತಿಯೇ77ರ ‘ಚಿರಯುವಕ’,2021ನೇ ಸಾಲಿನ ‘ಸಾಹಿತ್ಯ ಮತ್ತು ಶಿಕ್ಷಣ’ ಕ್ಷೇತ್ರದಲ್ಲಿ ಪ್ರತಿಷ್ಠಿತ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾದ ಬಂಗಾಳದ ನಿವೃತ್ತ ಶಿಕ್ಷಕ ‘ಸುಜಿತ್ ಚಟ್ಟೋಪಾಧ್ಯಾಯ’.
ಇವರು ಮೂಲತಃ ಪಶ್ಚಿಮ ಬಂಗಾಳದ ಬುರ್ದ್ವಾನ್ ಜಿಯ ‘ಆಸ್ ಗ್ರಾಮ್’ ಹಳ್ಳಿಯವರು. ಬುರ್ದ್ವಾನ್ ವಿಶ್ವವಿದ್ಯಾಲಯದಪದವೀಧರರಾಗಿದ್ದು, ಕೇವಲ22ನೇ ವಯಸ್ಸಿನಲ್ಲಿ,1975ರಲ್ಲಿ, ಆಸ್ ಗ್ರಾಮ್‌ನ ‘ರಾಮನಗರ ಪ್ರೌಢಶಾಲೆ’ಯಲ್ಲಿ ಅಧ್ಯಾಪಕರಾಗಿ ಸೇರಿಕೊಂಡರು. ನಿರಂತರವಾಗಿ29ವರ್ಷಗಳ ಕಾಲ ಬೋಧನೆ ಮಾಡಿ, ಪ್ರಾಂಶುಪಾಲರಾಗಿ ಪದೋನ್ನತಿ ಹೊಂದಿ,2004ರಲ್ಲಿ ನಿವೃತ್ತಿಯಾದರು. ಆಸ್ ಗ್ರಾಮ್ ಹಳ್ಳಿಯ ಆದಿವಾಸಿ ಮತ್ತು ಬಡ ಮಕ್ಕಳು, ಸರಿಯಾಗಿ ಶೈಕ್ಷಣಿಕ ಸೌಲಭ್ಯ ಸಿಗದೆ ವಿದ್ಯಾಭ್ಯಾಸಕ್ಕಾಗಿ ಪಡುತ್ತಿದ್ದ ಪಡಿಪಾಟಲು ನೋಡಿ, ಮರುಗಿದ ಚಟ್ಟೋಪಾಧ್ಯಾಯರು ತಮ್ಮ ನಿವೃತ್ತ ಜೀವನವನ್ನು ಆ ಮಕ್ಕಳ ಏಳಿಗೆಗೆ ಮುಡಿಪಾಗಿಡಬೇಕೆಂಬ ದೃಢ ನಿರ್ಧಾರಕ್ಕೆ ಬರುತ್ತಾರೆ.
ಉಚಿತವಾಗಿ ವಿದ್ಯಾರ್ಥಿಗಳಿಗೆ ಪಾಠ ಮಾಡುತ್ತೇನೆ, ನನಗೆ ಒಂದು ಕೋಣೆ ಕೊಡಿ ಎಂದು ತಾವು ಸೇವೆ ಸಲ್ಲಿಸಿದ ಶಾಲೆಯ ಆಡಳಿತ ಮಂಡಳಿಯವರಲ್ಲಿ ಕೇಳಿಕೊಳ್ಳುತ್ತಾರೆ. ಋಣಾತ್ಮಕ ಉತ್ತರ ಬಂದರೂ, ಕುಗ್ಗದೆ2004ರಲ್ಲಿ ತನ್ನ ಮನೆಯ ಪ್ರಾಂಗಣವನ್ನೇ ‘ಸದಾಯಿ ಫಕೀರ ಪಾಠಶಾಲ’ವನ್ನಾಗಿ ಪರಿವರ್ತಿಸುತ್ತಾರೆ. ಅಲ್ಲಿ ವಿದ್ಯಾರ್ಥಿಗಳಿಗೆ, ಬಂಗಾಳಿ ಭಾಷೆ, ಸಮಾಜ ವಿಜ್ಞಾನ, ಭೂಗರ್ಭ ಶಾಸ್ತ್ರ ವಿಷಯಗಳ ಕುರಿತು ಪಾಠ ಮಾಡುತ್ತಾರೆ.
ಕೇವಲ ಪಾಠ ಮಾತ್ರವಲ್ಲದೆ, ಜಗತ್ತಿನಲ್ಲಿ ಜರುಗುವ ‘ಪ್ರಚಲಿತ ವಿದ್ಯಮಾನ’ಗಳ ಕುರಿತ ಮಾಹಿತಿ ಒದಗಿಸಿ, ವಿದ್ಯಾರ್ಥಿಗಳಿಂದ ‘ಮಾಸ್ಟರ್ ಮೊಶಾಯಿ’ ಎಂದೇ ಕರೆಯಲ್ಪಡುತ್ತಾರೆ. ಆರಂಭದಲ್ಲಿ ಕೇವಲ ಮೂರು ವಿದ್ಯಾರ್ಥಿಗಳಿದ್ದ ಪಾಠಶಾಲೆಯಲ್ಲಿ, ಪ್ರಸ್ತುತ350ಕ್ಕೂ ಅಧಿಕ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಅದರಲ್ಲೂ ಶೇ.80ರಷ್ಟು ವಿದ್ಯಾರ್ಥಿಗಳು ಹೆಣ್ಣುಮಕ್ಕಳು ಎಂಬುದು ವಿಶೇಷ. ವರ್ಷಕ್ಕೆ, ಎರಡು ರುಪಾಯಿ ಶುಲ್ಕವನ್ನು ಗುರು ದಕ್ಷಿಣೆಯ ರೂಪದಲ್ಲಿ ಪಡೆಯುತ್ತಾರೆ. ತನ್ನ ನಿವೃತ್ತಿವೇತನದ ಅರ್ಧಭಾಗವನ್ನು ಆದಿವಾಸಿ ಮತ್ತು ದೀನ ದಲಿತರ ಏಳಿಗೆಗಾಗಿ ವಿನಿಯೋಗಿಸುತ್ತಿದ್ದಾರೆ.
ಪ್ರಸ್ತುತ, ಕೇವಲ ಪಾಠ ಮಾಡುವುದು ಮಾತ್ರವಲ್ಲ, ಥಲಸೇಮಿಯಾ (ಅನುವಂಶಿಕ ರಕ್ತದ ಕಾಯಿಲೆ) ನಿವಾರಣೆಗಾಗಿ ಸಾಮಾಜಿಕ ಅಭಿಯಾನವನ್ನೂ ಮಾಡುತ್ತಿದ್ದಾರೆ. 2019ರಲ್ಲಿ ಟೆಲಿಗ್ರಾಮ್ ಎಜುಕೇಶನ್ ಫೌಂಡೇಶನ್, ಎಲೆಮರೆ ಕಾಯಿಯಂತಿದ್ದ ಅವರನ್ನು ಗುರುತಿಸಿ ‘ಜೀವಮಾನ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸುತ್ತದೆ. ಅರ್ಹವಾಗಿಯೇ, 2021ನೇ ಸಾಲಿನ ‘ಪದ್ಮಶ್ರೀ’ ಪ್ರಶಸ್ತಿಗೆ ಭಾಜನರಾಗಿ ಎಡೆ ಗುರುತಿಸಲ್ಪಡುತ್ತಾರೆ.
ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥವಾಗಿ ಕೆಲಸ ಮಾಡಿದರೆ ಒಂದಲ್ಲ ಒಂದು ದಿನ ‘ಗೌರವ’ ಹುಡುಕಿಕೊಂಡು ಬರುತ್ತದೆ ಎಂಬ ಮಾತಿಗೆ ಚಟ್ಟೋಪಾಧ್ಯಾಯರ ಜೀವನವೇ ಒಂದು ನಿದರ್ಶನ. ಇತರರಿಗಾಗಿ ಬದುಕಿದ ಜೀವನ ಮಾತ್ರ ಸಾರ್ಥಕ ಜೀವನ ಎಂಬ ಆಲ್ಬರ್ಟ್ ಐನ್ ಸ್ಟೀನ್‌ನ ಮಾತಿನಂತೆ, ‘ಪರೋಪಕಾರ’ ಗುಣವನ್ನು ಮೈಗೂಡಿಸಿ ಕಾರ್ಯೋನ್ಮುಖರಾದ ಅವರ ಜೀವನ ಎಲ್ಲರಿಗೂ ಮಾದರಿ.