ನಾಕಕ್ಕೆ ಹೊರಟ ನರನ ಆವಿಷ್ಕಾರಗಳು
ಶಿಶಿರಕಾಲ
ಶಿಶಿರ್‌ ಹೆಗಡೆ, ನ್ಯೂಜೆರ್ಸಿ
ಸ್ಟೀಫನ್ ಹಾಕಿಂಗ್ಸ್‌ನಿಂದ ಹಿಡಿದು ಎಲಾನ್ ಮಸ್ಕ್ ವರೆಗೆ ಎಲ್ಲರೂ ಹೇಳಿದ್ದು, ನಂಬುವುದು ಈ ಒಂದು ವಿಚಾರ. ಮನುಷ್ಯ ಕುಲ ಅವಿನಾಶಿಯಾಗಿರಬೇಕೆಂದರೆ ಭೂಮಿಯನ್ನು ಮಾತ್ರ ನಂಬಿಕೊಂಡು ಕೂರಬಾರದು – ಭೂಮಿಯಿಂದಾಚೆ ಬದುಕಲು ಇನ್ನೊಂದು ಗ್ರಹವನ್ನು ಹುಡುಕಬೇಕು ಮತ್ತು ಇಲ್ಲಿಂದ ವಲಸೆ ಹೋಗಬೇಕು ಎಂದು.
ಯಾವುದೋ ವೈರಸ್ ಅಥವಾ ಯುದ್ಧ ಅಥವಾ ಇನ್ನೇನೋ ಒಂದು ದುರಂತದಿಂದ ಒಂದು ದಿನ ಈ ಭೂಮಿ ಮನುಷ್ಯ ವಾಸಕ್ಕೆ ಅಯೋಗ್ಯವಾಗಿಬಿಡಬಹುದು, ಆ ಕಾರಣಕ್ಕೆ ನಮಗೆ ಇನ್ನೊಂದು ವಾಸ ಯೋಗ್ಯ ಗ್ರಹ ಬೇಕು – ಸ್ಟೆಪ್ನಿಯಂತೆ ಎಂದು ಹೇಳಿದ್ದು ಸ್ಟೀ-ನ್ ತನ್ನ ಭಾಷಣವೊಂದರಲ್ಲಿ. ಹಾಗಾದರೆ ಇನ್ನೊಂದು ಅಂಥ ಗ್ರಹ ಸಿಕ್ಕಿಬಿಟ್ಟರೆ, ಮಂಗಳ ಗ್ರಹವೇ ಬದುಕಲು ಯೋಗ್ಯ ವೆಂದಾದರೆ ಅದನ್ನು ಕೂಡ ಲಗಾಡಿ ತೆಗೆಯುವಷ್ಟು ಮನುಷ್ಯ ಸಮರ್ಥ.
ಸೌರಮಂಡಲದ ಆಚೆ ಇನ್ನೊಂದು ಅಂತಹ ಗ್ರಹ ಸಿಕ್ಕಿದ್ದೇ ಆದಲ್ಲಿ ಕೂಡ ಭೂಮಿಯಲ್ಲಿರುವ ಎಲ್ಲರನ್ನೂ ಅಲ್ಲಿಗೆ ಒಯ್ಯುವುದು ಇವೆಲ್ಲ ಸಿನೆಮಾದಲ್ಲಷ್ಟೇ ಸಾಧ್ಯ. ಅದರ ಒಂದಂಶದ ಸಾಮರ್ಥ್ಯ ಕೂಡ ನಮ್ಮಲ್ಲಿ ಈಗ ಇಲ್ಲ. ಇದೆಲ್ಲ ನಿಜವಾಗಬೇಕೆಂದರೆ ಅದೆಷ್ಟೋ ಆವಿಷ್ಕಾರಗಳಾಗಬೇಕು. ಅದೆಲ್ಲದಕ್ಕಿಂತ ಮೊದಲು ಅಂಥದ್ದೊಂದು ಗ್ರಹ ಇದೆ ಎನ್ನುವ ಆವಿಷ್ಕಾರ ಮೊದಲು ಆಗಬೇಕು. ಮನುಷ್ಯನ ಈಗಿನ ದೇಹರಚನೆ – ಇನ್ನೊಂದು ಗ್ರಹದಲ್ಲಿ ಬದುಕುವಂತಾಗಬೇಕು ಎಂದಾದರೆ ಅದು ಭೂಮಿಯಷ್ಟೇ ದೊಡ್ಡದಿರಬೇಕು, ಅಷ್ಟೇ ಸಾಂದ್ರತೆ ಇರಬೇಕು, ಹದವಾದ ವಾತಾವರಣವಿರಬೇಕು, ಇಷ್ಟೇ ಗುರುತ್ವಾಕರ್ಷಣಶಕ್ತಿ ಬೇಕು, ಆಮ್ಲಜನಕ ಬೇಕು ಹೀಗೆ ಅದೆಷ್ಟೋ ಬೇಕುಗಳು. ಅದೆಲ್ಲದಕ್ಕಿಂತ ಹೆಚ್ಚಾಗಿ ನೀರು ಬೇಕು.
ಒಂದೆರಡು ಬೇಕುಗಳಲ್ಲ ಇವು – ನೂರೆಂಟು ಬೇಕುಗಳು. ಹೀಗಾಗಿಯೇ ಇದೆಲ್ಲ ಸಾಧ್ಯವಲ್ಲದ ಕಥೆ – ಇದ್ದ ಭೂಮಿಯನ್ನೇ ಸರಿಯಾಗಿ ಇಟ್ಟುಕೊಳ್ಳಬೇಕು ಎನ್ನುವವರದು ಇನ್ನೊಂದು ಪಂಗಡ. ಆದರೂ ಭೂಮಿ ಅವಿನಾಶಿಯಲ್ಲ. ಒಂದು ದಿನ ಇದಕ್ಕೇ ಸಾವಿದೆ. ಒಂದು ಕರೋನಾ ವೈರಸ್‌ನಿಂದ ಇಡೀ ಮನುಷ್ಯ ಕಟ್ಟಿಕೊಂಡ ವ್ಯವಸ್ಥೆಯೇ ಅಲುಗಾಡಿ ಹೋದದ್ದು ನೋಡಿದಾಗ ನಾವೆಷ್ಟು ದುರ್ಬಲ ಎನ್ನುವುದು ತಿಳಿಯುತ್ತದೆ. ಅತ್ಯಂತ ಆಧುನಿಕ ಜೀವಿ ಎಂದುಕೊಂಡ ಮನುಷ್ಯನಿಗೆ ತಾನು ನಂಬಿ ಪೊಕ್ಕುಎಂದೆನಿಸಿಬಿಡುತ್ತದೆ.
ವರ್ಷ ಕಳೆದರೂ ಒಂದು ವೈರಸ್ ಇನ್ನೂ ನಮ್ಮನ್ನು ಕಾಡುತ್ತಲೇ ಇದೆ. ಇದರಿಂದ ಮುಕ್ತಿ ಅಷ್ಟು ಸುಲಭಸಾಧ್ಯವಲ್ಲ ಎಂದು ಈಗೀಗ ಇನ್ನಷ್ಟು ಮನವರಿಕೆ ಯಾಗುತ್ತಿದೆ. ಹೊಸ ಹತ್ತಾರು ಮಾರ್ಪಾಡಾಗಿ ಕರೋನಾ ವೈರಸ್ ಇನ್ನಷ್ಟು ಕಾಡಲು ಸಜ್ಜಾದಂತಿದೆ. ಇದು ಕೇವಲ ಒಂದು ವೈರಸ್ ಅಷ್ಟೇ. ಮುಂದೊಂದು ದಿನ ಇನ್ನೂ ಖತರ್ನಾಕ್ ವೈರಸ್ ಒಂದು ಹುಟ್ಟಿಬಿಟ್ಟರೆ ಹೇಗೆ ಎನ್ನುವ ಹೆದರಿಕೆ ಹಿಂದೆಲ್ಲದಕ್ಕಿಂತ ಈಗ ಹೆಚ್ಚು. ನಮಗೆ ಡೈನಸಾರಸ್ ನಶಿಸಿದ್ದು ಹೇಗೆ ಎಂದು ಗೊತ್ತು. ಭೂಮಿ ಸರ್ವನಾಶ ಮಾಡಲು ಒಬ್ಬ ತಲೆಕೆಟ್ಟ ಹಿಟ್ಲರ್‌ನಂಥವ ಈ ಶತಮಾನದಲ್ಲಿ ಹುಟ್ಟಿದರೆ ಸಾಕು ಅಥವಾ ಕಿಮ್ ಜೊಂಗ್ ಉನ್ ನಂಥವನಿಗೆ ಹಾಳಾದ ತಲೆ ಇನ್ನೊಂದು ಸುತ್ತು ಕಮ್ಮಿ ಆದರೂ ಸಾಕು.
ಹೀಗೆಲ್ಲ ಇರುವಾಗ ಮನುಷ್ಯ ಎನ್ನುವ ರೇಸ್ ನಶಿಸಲು ವೈರಸ್ಸೇ ಆಗಬೇಕೆಂದಿಲ್ಲ ಅಥವಾ ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸ ಬೇಕೆಂದೂ ಇಲ್ಲ. ನಮ್ಮನ್ನು ನಾವೇ ಸರ್ವನಾಶ ಮಾಡಿಕೊಳ್ಳುವಷ್ಟು ಶಕ್ತರು. ಅದೆಷ್ಟೋ ಶತಮಾನದಿಂದ ಮನುಷ್ಯನಿಗೆ ಕಾಡಿದ ವಿಚಾರ ಇದು. ಭೂಮಿಯ ಆಚೆ ಏನಿದೆ – ಆಕಾಶದಲ್ಲಿ ಮೇಲಕ್ಕೆ ಹೋದಂತೆಲ್ಲ ಹೇಗಿದೆ ಎನ್ನುವುದು. ನಮ್ಮ ಪೂರ್ವಜರಂತೂ ಕುಳಿತ, ಒಂದು ಚಿಕ್ಕ ದುರ್ಬಿನು ಕೂಡ ಇಲ್ಲದೇ ಇಡೀ ಬಾಹ್ಯಾಕಾಶವನ್ನು ಅರ್ಥೈಸಿದವರು. ಕಳೆದ ಎಂಟು ದಶಕದಿಂದ ನಾವು ಬಾಹ್ಯಾಕಾಶಕ್ಕೆ ಹೋಗಿ ಬರುತ್ತಿದ್ದರೂ ಅದೆಷ್ಟೋ ವಿಚಾರಗಳು ಶತಮಾನದ ಮೊದಲೇ ನಮ್ಮವರಿಗೆ ಗೊತ್ತಿತ್ತು ಎನ್ನುವ ವಿಚಾರವೇ ರೋಮಾಂಚನ.
ನಮ್ಮಲ್ಲಿಯೂ ಈ ನಿಟ್ಟಿನಲ್ಲಿ ಅಭಿಪ್ರಾಯ ಬೇಧಗಳಿದ್ದವು. ಬ್ರಹ್ಮ ಸತ್ಯ ಆದರೆ ಬ್ರಹ್ಮಾಂಡ ವಾಸ್ತವ ಎನ್ನುವ ಬಸವಾದ್ವೆ ತವನ್ನು ಶಂಕಾರಾದ್ವೆ ತ ಒಪ್ಪುವುದಿಲ್ಲ. ಎರಡನ್ನೂ ಪ್ರತ್ಯೇಕವಾಗಿ ನೋಡಿದಲ್ಲಿ ಎರಡೂ ಸತ್ಯವೆನಿಸುತ್ತದೆ. ಬ್ರಹ್ಮಾಂಡ ಎನ್ನುವುದಕ್ಕೂ ಅಳಿವಿದೆ ಎಂದು ಒಪ್ಪುತ್ತದೆ ಇಂದಿನ ವಿಜ್ಞಾನ. ಪ್ರಪಂಚವನ್ನು ಇನ್ನಷ್ಟು ತಿಳಿಯುತ್ತ ಹೋದ ಹಾಗೆ ವಿಜ್ಞಾನ ಲೋಕ ಬಸವಾದ್ವೆ ತ ಮತ್ತು ಶಂಕಾರಾದ್ವೆ ತದ ನಡುವೆ ಆಚೀಚೆ ಪಕ್ಷಾಂತರ ಮಾಡುತ್ತಿರುತ್ತದೆ ಎನ್ನುವುದು ಸೂಕ್ಷ ವಾಗಿ ಗ್ರಹಿಸಿದಲ್ಲಿ ತಿಳಿಯುತ್ತದೆ.
ಇರಲಿ ಆ ವಿಚಾರ ಅಲ್ಲಿಗೇ ಬಿಡೋಣ. ನಮ್ಮಂಥ ಹುಲುಮಾನವರಿಗೆ ಭಗವಂತ ಎಲ್ಲಿದ್ದಾನೆ ಎಂದರೆ ಅದು ಆಕಾಶದಲ್ಲಿ. ಸಚಿನ್ ತೆಂಡೂಲ್ಕರ್ ಸೆಂಚುರಿ ಹೊಡೆದಾಗ ಆಕಾಶ ನೋಡಿ ದೇವರಿಗೊಂದು ಧನ್ಯವಾದ ಹೇಳುತ್ತಿದ್ದ. ನಾವು ಕೂಡ ಕಷ್ಟ ಬರಲಿ ಇಲ್ಲವೇ ಅತಿಯಾಗಿ ಖುಷಿಯಾಗಲಿ – ತಕ್ಷಣಕ್ಕೆ ಆಕಾಶದತ್ತ ದೇವರಿಗೆ ನಮಿಸುತ್ತೇವೆ. ಈ ಆಕಾಶ ನೋಡಿ ದೇವರನ್ನು ಸಂಪರ್ಕಿಸುವ ರೂಢಿ ಮೊದಲಿಂದಲೂ ಇತ್ತೋ ಅಥವಾ ಇತ್ತೀಚಿನದೋ ಗೊತ್ತಿಲ್ಲ. ಅಥವಾ ರಮಾನಂದ್ ಸಾಗರ್ ಧಾರಾವಾಹಿ ಗಳನ್ನು ನೋಡಿದ ನಂತರ ನಮ್ಮಲ್ಲಿ ಹುಟ್ಟಿಕೊಂಡ ರೂಢಿಯೋ ಗೊತ್ತಿಲ್ಲ.
ಒಂದಂತೂ ನಿಜ – ಭೂಮಿಯಾಚೆ ಇರಲು ನಮಗಿಂತ, ಮನುಷ್ಯನಿಗಿಂತ ತಾಕತ್ತುಳ್ಳ ಶಕ್ತಿಗೆ ಮಾತ್ರ ಇರಲು ಸಾಧ್ಯ ಎನ್ನುವ ನಂಬಿಕೆ ದೀರ್ಘಕಾಲದಿಂದ ಇದೆ. ಎಲ್ಲ ನಾಗರಿಕತೆಯಲ್ಲೂ ಈ ನಂಬಿಕೆ ಇತ್ತು – ಇಂದಿಗೂ ಇದೆ. ಆ ಕಾರಣಕ್ಕೋ ಏನೋ, ಯಾವತ್ತೂ ಬಾಹ್ಯಾಕಾಶ ಎಂದರೆ ಮನುಷ್ಯನಿಗೆ ಎಲ್ಲಿಲ್ಲದ ಆಸಕ್ತಿ. ಈ ರೀತಿಯ ಆಸಕ್ತಿ ಶತಶತಮಾನದಿಂದ ಇದ್ದರೂ ಹೆಚ್ಚಿನವುಊಹೆಗಳೇ ಆಗಿದ್ದವು. ಈ ಊಹೆಗಳಲ್ಲಿ ಕೆಲವು ಸತ್ಯವಾದವು – ಇನ್ನುಳಿದವು ಸುಳ್ಳೆಂದಾದವು. ಜೀವಿಯೊಂದು ಸಲಕರಣೆಗಳನ್ನುಜೀವನಕ್ಕೆ ಬಳಸುವುದನ್ನು ಶುರುಮಾಡಿದಾಗಿನಿಂದ ಇಂದಿನ ಮನುಷ್ಯನಾಗುವುದಕ್ಕೆ ನಮಗೆ ಇಪ್ಪತ್ತೈದು ಲಕ್ಷ ವರ್ಷಬೇಕಾಯಿತು.
ಈ ಟೈಮ್ ಲೈನ್ ಅನ್ನು ನೋಡಿದಾಗ ಮನುಷ್ಯ ಬಾಹ್ಯಾಕಾಶಕ್ಕೆ ಹೋದದ್ದು ಎಂಬತ್ತು ವರ್ಷ ಹಳೆಯ ವಿಚಾರವಾದರೂ ನಿನ್ನೆ ಮೊನ್ನೆಯಂತೆ – ತೀರಾ ಇತ್ತೀಚಿಗೆ. ರಷ್ಯಾದ ಯೂರಿ ಗಗಾರಿಯನ್ ಬಾಹ್ಯಾಕಾಶಕ್ಕೆ ಹೊರಟಾಗ ಆತ ಜೀವಂತವಾಗಿ ವಾಪಸ್ ಬರುವ ಸಾಧ್ಯತೆ ಲಕ್ಷದಲ್ಲಿ ಒಂದು ಅಂಶ ಎಂದೇ ಅಂದುಕೊಂಡಿದ್ದರು ಅಂದಿನ ವಿಜ್ಞಾನಿಗಳು – ತಜ್ಞರು. ಇಂದಿನಂತೆ ತರಬೇತಿ ಕೊಡುವ ಸಿಮ್ಯುಲೇಟರ್‌ಗಳಾಗಲಿ ಅಥವಾ ಇನ್ಯಾವುದೇ ಸಲಕರಣೆಗಳಾಗಲಿ ಆಗ ಇರಲಿಲ್ಲ. ಬಾಹ್ಯಾಕಾಶದ ಅಸಲಿಯತ್ತನ್ನು ನೋಡಿ ತಿಳಿದ ಇನ್ನೊಬ್ಬರಿಲ್ಲ. ಅಂದು ಇದೊಂದು ಸುಸೈಡಲ್ ಮಿಷನ್ ಎಂದೇ ಎಲ್ಲರೂ ಅಂದುಕೊಂಡಿದ್ದರು. ಇಪ್ಪತ್ತೇಳು ವರ್ಷದ ಯೂರಿ ಹೊರಡುವ ಮುನ್ನ ಎಲ್ಲರಿಗೂ ಅಂತಿಮ ವಿದಾಯವನ್ನೇ ಮಾಡಿ ಹೊರಟಿದ್ದ.
ಆತನನ್ನು ಸಾಯಲು ಹೊರಟಿದ್ದಾನೆ ಎಂದು ಹತ್ತಾರು ಪತ್ರಿಕೆಗಳು ಅಂದು ಬರೆದುಕೊಂಡಿದ್ದವು. ಯೂರಿ ಹೊರಟ ಗಗನ ನೌಕೆವಾತಾವರಣ ದಾಟುವುದೇ ಅನುಮಾನವಿತ್ತು. ಹಾಗೊಮ್ಮೆ ದಾಟಿದಲ್ಲಿ, ಜೀವಂತವಾಗಿ ಉಳಿದುಕೊಂಡಲ್ಲಿ ತೂಕರಹಿತಸ್ಥಿತಿಯಲ್ಲಿ – ಗುರುತ್ವಾಕರ್ಷಣೆಯೇ ಇಲ್ಲದ ಜಾಗದಲ್ಲಿ ಮನುಷ್ಯ ದೇಹ ಹೇಗೆಲ್ಲ ವರ್ತಿಸುತ್ತದೆ ಎನ್ನುವುದೇ ಅಲ್ಲಿಯವರೆಗೆಯಾರಿಗೂ ತಿಳಿದಿರಲಿಲ್ಲ. ಹಾಗೊಮ್ಮೆ ನೌಕೆ ಸುಟ್ಟು ಭಸ್ಮವಾಗದೇ, ಯಾವುದೇ ಅವಘಡವಾಗದೆ ಇದ್ದಲ್ಲಿ ಕೂಡ ಜೀವಂತವಾಗಿವಾಪಸ್ಸಾಗುವ ಸಾಧ್ಯತೆ ಕೂಡ ಅಷ್ಟೇ ಕ್ಷೀಣವಾಗಿತ್ತು.
ಅಲ್ಲಿರುವಾಗ ಗುರುತ್ವಾಕರ್ಷಣೆಯಿಲ್ಲದ ಸ್ಥಿತಿಯಾದರೆ ನೌಕೆ ವಾಪಸ್ಸಾಗುವ ಸಂದರ್ಭದಲ್ಲಿ ಲಾಗುವಾಗುವ ಗುರುತ್ವಾಕರ್ಷಣ ಶಕ್ತಿ ಭೂಮಿಯ ಗುರುತ್ವಾಕರ್ಷಣೆಯ ಎಂಟು ಪಟ್ಟು. ಅಂಥ ಸ್ಥಿತಿಯಲ್ಲಿ ಮನುಷ್ಯ ತಲೆಸುತ್ತಿ ಪ್ರಜ್ಞೆ ಕಳೆದುಕೊಳ್ಳುವ ಸಾಧ್ಯತೆ ಜಾಸ್ತಿ ಅಥವಾ ಹೃದಯ ಅಂತಹ ಸ್ಥಿತಿಯಲ್ಲಿ ರಕ್ತ ಪಂಪ್ ಮಾಡುವ ಬಗ್ಗೆ ಯಾವುದೇ ಗ್ಯಾರಂಟಿ ಇಲ್ಲ. ಯೂರಿ ಹೋಗಿದ್ದ ನೌಕೆ ವಾಪಾಸ್ ಭೂಮಿಗೆ ಆರಾಮಾಗಿ ಬಂದು ಇಳಿಯುವ ಸಾಮರ್ಥ್ಯ ಕೂಡ ಇರಲಿಲ್ಲ. ಇಂಥ ಎಂಟುಪಟ್ಟು ಗುರುತ್ವಾಕರ್ಷಣೆಯಲ್ಲಿ ಭೂಮಿಯಿಂದ ಏಳೆಂಟು ಕಿಲೋಮೀಟರ್ ಎತ್ತರಕ್ಕೆ ಬಂದಾಗ ಯೂರಿ ತನ್ನನ್ನು ತಾನು ಎಜೆಕ್ಟ್ ಮಾಡಿಕೊಂಡು ನೌಕೆಯಿಂದ ಹಾರಬೇಕಿತ್ತು. ಆಮೇಲೆ ಹೀಗೆ ಹಾರಿದ ನಂತರ ಪ್ಯಾರಾಚೂಟ್ ತೆರೆಯುವಂತೆ ನೋಡಿಕೊಳ್ಳಬೇಕಿತ್ತು. ಇದೆಲ್ಲವನ್ನು ಮಾಡಲು ಮೊದಲು ಪ್ರಜ್ಞೆಯಲ್ಲಿರಬೇಕಿತ್ತು.
ಇವೆಲ್ಲವಕ್ಕೆ ಯಾವುದೇ ತಾಲೀಮು ಇರಲಿಲ್ಲ. ಎಲ್ಲ ಹೊಸ ಪ್ರಯೋಗ. ಅಂತೂ ಯೂರಿ ಜೀವಂತವಾಗಿ, ಮೇಲೆ ಸೇರದೇ ಕೆಳಗೆ ಬಂದು ಇಳಿದಿದ್ದ. ಅದು ಮನುಷ್ಯನ ಮೊದಲ ಬಾಹ್ಯಾಕಾಶ ಪ್ರಯಾಣ. ಅಲ್ಲಿಂದ ಮುಂದೆ ಅದೆಷ್ಟೋ ಮಂದಿ ಪ್ರಯಾಣ ಬೆಳೆಸಿದರು – ಕೆಲವರು ವಾಪಸ್ಸಾಗುವಾಗ ಭಸ್ಮವಾದರು ಇವೆಲ್ಲ ನಿಮಗೆ ಗೊತ್ತು. ಅಲ್ಲಿಂದ ಮುಂದೆ ಮನುಷ್ಯ ಹಿಂತಿರುಗಿಯೇ ನೋಡಿಲ್ಲ ಎಂಬಂತೆ ನಾವು ಮಾತನಾಡುತ್ತಿದ್ದರೂ ಇಂದಿಗೂ ನಮಗೆ ಭೂಮಿಯಿಂದಾಚೆ ತಿಳಿದ ವಿಚಾರ ತುಂಬಾ ಕಡಿಮೆಯೇ. ನಮಗೆ ಇಷ್ಟು ವರ್ಷವಾದರೂ ನೆಟ್ಟಗೆ ಚಂದ್ರನನಿದೆ ಎನ್ನುವುದು ಪೂರ್ತಿ ಗೊತ್ತಿಲ್ಲ – ನಮ್ಮದೇ ಸೌರಮಂಡಲದ ಮಂಗಳನಲ್ಲಿಜೀವಿಗಳಿತ್ತೇ ಇಲ್ಲವೇ ಎನ್ನುವುದು ಇನ್ನೂ ಪರಿಹಾರವಾಗಿಲ್ಲ.
ಚಂದ್ರನನ್ನು ಬಿಟ್ಟರೆ ಇನ್ನೊಂದು ಆಕಾಶಕಾಯದ ಮೇಲೆ ಇನ್ನೂ ಮನುಷ್ಯ ತನ್ನ ಕಾಲು ಇಟ್ಟಿಲ್ಲ. ಭಾರತದಂಥ ದೇಶಕ್ಕೇ ಚಂದ್ರನ ಮೇಲೆ ನೌಕೆಯೊಂದನ್ನು ಇಳಿಸಲು ಇನ್ನೂ ಆಗಿಲ್ಲ. ಇದನ್ನೆ ನೋಡಿದರೆ ಕೆಲವೊಮ್ಮೆ ಇದೆಲ್ಲ ಏಕೆ ಬೇಕು ನಮಗೆ ಎಂದು ಅನ್ನಿಸುವುದುಂಟು. ಇರುವ ಭೂಮಿಯ ತಿಳಿಯದ ವಿಚಾರಗಳು ಅದೆಷ್ಟೋ ಇರುವಾಗ, ಇಲ್ಲಿಯೇ ಪೂರೈಸಿಕೊಳ್ಳದಷ್ಟು ಸಮಸ್ಯೆಯಿರುವಾಗ, ಬಡತನ – ಆಹಾರಕ್ಕೇ ತತ್ವಾರವಿರುವ ಸ್ಥಿತಿಯಿರುವಾಗ ಅದೆಷ್ಟೋ ಕೋಟಿ ಹಣ ಇದಕ್ಕೆಲ್ಲ ವ್ಯಯಿಸಬೇಕೇ ಎನ್ನುವ ಪ್ರಶ್ನೆ ಮೂಡುತ್ತಿರುತ್ತದೆ.
ಚಂದ್ರನಲ್ಲಿ ಹೋಗಿ ಮಣ್ಣು ತಂದರೆ, ಮಂಗಳನಲ್ಲಿ ಹೋಗಿ ಕಲ್ಲು ತಂದರೆ ನಮಗೇನು ಸಿಗುತ್ತದೆ ಮಣ್ಣು ಎಂದು ಸಾಮಾನ್ಯರಿಗೆ ಅನಿಸುತ್ತದೆ. ಇದೆಲ್ಲದರಿಂದ ಏನು ಉಪಯೋಗ ಎನ್ನುವ ಪ್ರಶ್ನೆಗೆ ಸಮಾಧಾನ  ಡುವ ಉತ್ತರ ನಮ್ಮಲ್ಲಿಲ್ಲ. ಹೀಗೆ ಈ ಬಾಹ್ಯಾಕಾಶದ ಪ್ರಯಾಣದಿಂದ ಏನು ಉಪಯೋಗ ವಾಗಿದೆ ಎನ್ನುವ ಪ್ರಶ್ನೆಗೆ ಸಮಂಜಸ ಉತ್ತರ ಸಿಗದಿದ್ದರೂ ಅಥವಾ ನಮ್ಮಂಥವರಿಗೆ ಅರ್ಥವಾಗದಿದ್ದರೂ ಈ ಪ್ರಯಾಣಕ್ಕೆ ಆಗುವ ತಯಾರಿಗಳಿಂದ ಈಗ ಬದುಕಿರುವ ನಮಗೆ ಹತ್ತಾರು ಉಪಯೋಗವಾಗಿದೆ.
     ಎನ್ನುವ ಮಾತಿದೆಯಲ್ಲ. ಬಾಹ್ಯಾಕಾಶದ ನಮ್ಮ ಕುತೂಹಲದ ಕಾರಣದಿಂದ ಆವಿಷ್ಕಾರ ವಾದ ಕೆಲವು ವಸ್ತುಗಳ ಬಗ್ಗೆ ಹೇಳಬೇಕು. ಈ ಎಲ್ಲ ಪರಿಶೋಧನೆಗಳು ಮನುಷ್ಯನ ಮುಂದಿನ ತಲೆಮಾರಿಗೆ ಅವಶ್ಯವಿರಬಹುದು ಅಥವಾ ಉಪಯೋಗಕ್ಕೆ ಬರಬಹುದು. ಆದರೆ ಈಗ ಬದುಕಿರುವ ನಮಗೆ ಇದೆಲ್ಲದರಿಂದ ಪ್ರಸ್ತುತ ಆದ ಪ್ರಯೋಜನವೇನು ಹಾಗಾದರೆ? ಬಾಹ್ಯಾಕಾಶಕ್ಕೆ ಹಾರುವುದು ಎಷ್ಟು ಕ್ಲಿಷ್ಟಕರ ವಿಚಾರ ಎನ್ನುವುದನ್ನು ಬಿಡಿಸಿ ಹೇಳಬೇಕಾದದ್ದಿಲ್ಲ.
ಮನುಷ್ಯ ಭೂಮಿಯ ವಾತಾವರಣದಾಚೆ ಹೋಗುವುದು ಎನ್ನುವುದು ಕೂಡ ನೂರಾರು ಬೇಕುಗಳ ವಿಚಾರ. ಈ ಒಂದೊಂದು ಬೇಕುಗಳೂ ಹತ್ತಾರು ಹೊಸ ಆವಿಷ್ಕಾರಗಳಿಗೆ ಕಾರಣವಾಗಿದೆ. ಅದರ ಬಗ್ಗೆ ತಿಳಿಯೋಣ. ಬಾಹ್ಯಾಕಾಶ ನೌಕೆಯಲ್ಲಿ ಅಥವಾ ಅಂತರಿಕ್ಷದಲ್ಲಿ ಇರುವಾಗ ಹೊರಗಿನ ಉಷ್ಣತೆಯನ್ನು ಅಳೆಯುವುದು ಒಂದು ಕಾಲದಲ್ಲಿ ದೊಡ್ಡ ಕಷ್ಟದ ಕೆಲಸವಾಗಿತ್ತು. ಹೀಗಿರುವಾಗ ಒಳಗೇ ಕೂತು ಹೊರಗಿನ ಉಷ್ಣತೆಯನ್ನು ಅಳೆಯುವ ಅವಶ್ಯಕತೆಯಿಂದ ಹುಟ್ಟಿದ ತಂತ್ರಜ್ಞಾನವೇ ಇನ್ರಾರೆಡ್ ಥರ್ಮೋಮೀಟರ್.
ವಿಕಿರಣವನ್ನು ಅಳೆಯುವುದರ ಮೂಲಕ ಉಷ್ಣತೆಯನ್ನು ಗ್ರಹಿಸುವ ವಿಜ್ಞಾನವಿದು. ಹೀಗೆ ಮೊದಲು ಇಂಥದ್ದೊಂದುಅವಶ್ಯಕತೆಯಿಂದ ಹುಟ್ಟಿಕೊಂಡ ಆವಿಷ್ಕಾರ ಈಗ ಎಡೆ ಮನುಷ್ಯನ ದೇಹದ ಉಷ್ಣಾಂಶವನ್ನು ಅಳೆಯುವುದರಿಂದ ಹಿಡಿದು ಲೋಹದ ಕಾರ್ಖಾನೆಯಲ್ಲಿ ಕರಗಿದ ಲೋಹದ ಉಷ್ಣಾಂಶವನ್ನು ಮುಟ್ಟದೇ ಅಳೆಯುವ ಸಾಧ್ಯತೆಗೆ ಕಾರಣ ವಾಯಿತು. ಈಗ ಮುಟ್ಟಿದಲ್ಲ ಹಬ್ಬುವ ಕರೋನಾ ಸಮಯದಲ್ಲಂತೂ ಈ ತಂತ್ರಜ್ಞಾನ ಎಲ್ಲಿಲ್ಲದ ರೀತಿಯಲ್ಲಿ ಬಳಕೆಯಾಗುತ್ತಿದೆ.
ಇನ್ನು ರಕ್ತವನ್ನು ಕೃತಕವಾಗಿ ಪಂಪ್ ಮಾಡುವ   ’ ಕೂಡ ಆವಿಷ್ಕಾರವಾಗಿದ್ದು ಇದೇ ರೀತಿ.ಹೃದಯ ನಿತ್ರಾಣಗೊಂಡು ರಕ್ತವನ್ನು ಕೃತಕವಾಗಿ ಪಂಪ್ ಮಾಡದ ಸ್ಥಿತಿಯುಂಟಾದಾಗ ಮತ್ತು ತಕ್ಷಣದಲ್ಲಿ ಹೃದಯ ದಾನಿಸಿಗದಿzಗ ಈ ಸಲಕರಣೆಯನ್ನು ಬಳಸಿಕೊಳ್ಳಲಾಗುತ್ತದೆ. ಸಾಮಾನ್ಯವಾಗಿ ಹಾರ್ಟ್ ಟ್ರಾನ್ಸ್ ಪ್ಲಾಂಟ್ ಸಂದರ್ಭದಲ್ಲಿ ಅಥವಾ ಅದಕ್ಕಿಂತ ಮುಂಚೆ ಈ ಸಲಕರಣೆ ಅದೆಷ್ಟೋ ಮಂದಿಯ ಜೀವರಕ್ಷಕದಂತೆ ಕೆಲಸಮಾಡುತ್ತದೆ. ನಾಸಾ ಬಾಹ್ಯಾಕಾಶ ವಿಜ್ಞಾನಿಗಳು ಅಪೋಲೋ ಕಾರ್ಯಕ್ರಮಕ್ಕೆ ಬೇಕಾಗಿ ರಾಕೆಟ್‌ನ ಟರ್ಬೊ ಎಂಜಿನ್ ಅಭಿವೃದ್ಧಿ ಪಡಿಸಲು ಪಂಪ್ ಒಂದನ್ನುಆವಿಷ್ಕರಿಸಿದ್ದರು.
ಇದು ಹೆಚ್ಚು ಕಡಿಮೆ ಮನುಷ್ಯ ಹೃದಯ ರಕ್ತ ಪಂಪ್ ಮಾಡುವ ರೀತಿಯ ಇಂಧನವನ್ನು ಪಂಪ್ ಮಾಡುತ್ತಿತ್ತು. ಹೀಗೆ ಕಂಡುಹಿಡಿದ ಚಿಕ್ಕ ಸಲಕರಣೆಯ ಕಾರ್ಯವೈಖರಿಯವನ್ನು ಗ್ರಹಿಸಿದ ನಾಸಾ ವಿಜ್ಞಾನಿಗಳಿಗೆ ಇದನ್ನು ಅಭಿವೃದ್ಧಿಪಡಿಸಿದಲ್ಲಿ ಇದನ್ನು ಹೃದಯಕ್ಕೆ ಬದಲಿಯಾಗಿ ಬಳಸಬಹುದು ಎನ್ನುವುದು ಹೊಳೆಯಿತು. ನಂತರದಲ್ಲಿ ಈ ವಿಚಾರವನ್ನು ವೈದ್ಯವಿಜ್ಞಾನಿಗಳಲ್ಲಿ ಹಂಚಿಕೊಳ್ಳಲಾಯಿತು ಮತ್ತು ಅವರು ಈ ಕೃತಕ ರಕ್ತ ಪಂಪ್ ಮಾಡುವ ಅತ್ಯಾಧುನಿಕ ಮಷಿನ್ಆವಿಷ್ಕರಿಸುವಂತಾಯಿತು.
ನಾವು ಜೋರಾಗಿ ಗಿರ್ಕಿ ಹೊಡೆದಾಗ ತಲೆ ಸುತ್ತುತ್ತದೆ ಅಲ್ಲವೇ? ನಮ್ಮ ದೇಹದ ಸಮತೋಲನವನ್ನು ಕಾಪಾಡುವುದು ನಮ್ಮಒಳಕಿವಿಯ ಕೆಲಸ. ಇದನ್ನು ವೆಸ್ಟಿಬ್ಯುರ್ಲಾ ಸಿಸ್ಟಮ್ ಎನ್ನುತ್ತಾರೆ. ಈ ವ್ಯವಸ್ಥೆಯಲ್ಲಿರುವ ಸೆನ್ಸರ್‌ಗಳು ನಾವು ತಲೆ ಬಾಗಿದಾಗಅಥವಾ ತಿರುಗಿದಾಗ ಅದನ್ನು ಮೆದುಳಿಗೆ ತಿಳಿಸುತ್ತವೆ. ಈ ವ್ಯವಸ್ಥೆ ಕೆಲಸಮಾಡಲು ಗುರುತ್ವಾಕರ್ಷಣ ಶಕ್ತಿ ತೀರಾ ಮಹತ್ವದ್ದು. ನೀವು ಈ ವಾಕ್ಯವನ್ನು ಓದುತ್ತಿರುವಾಗ ತಲೆ ಅಲುಗಾಡಿಸಿದರೂ ನಿಮ್ಮ ಕಣ್ಣು ಈ ಪೇಪರಿನ ವಾಕ್ಯದಮೇಲೆ ಕೇಂದ್ರೀಕೃತವಾಗಿರಿ ಸುವುದಕ್ಕೆ ಮೆದುಳು ನಿಮ್ಮ ತಲೆಯ ಭಾಗದ ಚಲನೆಯನ್ನು ಗ್ರಹಿಸಿ ಕಣ್ಣಿನ ಪ್ರತಿಫಲನವನ್ನು ಏಕಕಾಲದಲ್ಲಿ ಗ್ರಹಿಸುವುದರಿಂದ ಸಾಧ್ಯವಾಗುತ್ತದೆ.
ಇದರರ್ಥ ಕಣ್ಣಿನ ಚಲನೆ ಮತ್ತು ದೇಹದ ಚಲನೆ ಸರಿಯಾಗಿ ಗ್ರಹಿಸಬೇಕೆಂದರೆ ಅಲ್ಲಿ ಗುರುತ್ವಾಕರ್ಷಣ ಶಕ್ತಿ  ಹಿನ್ನೆಲೆಯಲ್ಲಿ ಕೆಲಸಮಾಡುತ್ತಿರುತ್ತದೆ. ಬಾಹ್ಯಾಕಾಶದಲ್ಲಿ , ಸೊನ್ನೆ ಗುರುತ್ವಾಕರ್ಷಣಶಕ್ತಿಯ ಸ್ಥಳದಲ್ಲಿ ಕಣ್ಣಿನ ಚಲನವಲನವನ್ನು ಮತ್ತು ಅದಕ್ಕನುಗುಣವಾಗಿ ದೇಹ ಸ್ಪಂದಿಸುತ್ತಿದೆಯೇ ಎಂದು ಅಭ್ಯಸಿಸಲು ಅವಿಷ್ಕಾರವಾಗಿದ್ದೇ ಲೇಸಿಕ್. ಕಣ್ಣಿನ ತೀರಾ ಸೂಕ್ಷ್ಮಚಲನವಲನವನ್ನು ಗ್ರಹಿಸಲು ಆವಿಷ್ಕಾರವಾದ ಲೇಸಿಕ್ ನಂತರದಲ್ಲಿ ಚಿಕಿತ್ಸೆಯಲ್ಲಿ ಬಳಸಲ್ಪಡುವುದರ ಮೂಲಕ ಲೇಸರ್ಚಿಕಿತ್ಸೆ ಸಾಧ್ಯವಾಯಿತು.
ತೀರಾ ಸೂಕ್ಷ್ಮವಾದ ಕಣ್ಣಿಗೆ ಲೇಸರ್ ಅತ್ಯಂತ ಕರಾರುವಾಕ್ಕಾಗಿ ಹಾಯಿಸುವುದು ಸಾಧ್ಯವಾದದ್ದೇ ಈ ಆವಿಷ್ಕಾರದಿಂದ. ಮೊದಲೆಲ್ಲ ಕಣ್ಣಿನ ಪರೀಕ್ಷೆ ಮಾಡುವಾಗ ಉರಿಯುವ ದ್ರವ ಕಣ್ಣೊಳಗೆ ಬಿಟ್ಟು ನಂತರ ಅರ್ಧ ಗಂಟೆ ಗಟ್ಟಲೆ ಬೇರೆ ಬೇರೆ ಗ್ಲಾಸ್ ಅನ್ನು ಬದಲಿಸಿ ಪರೀಕ್ಷಿಸುವ ಪದ್ಧತಿ ನೋಡಿರುತ್ತೇವೆ. ಈಗ ಒಂದು ಚಿಕ್ಕ ಮಷಿನ್ ಒಂದರಲ್ಲಿ ನೋಡುವುದರ ಮೂಲಕ ಕಂಪ್ಯೂಟರೈಸ್ಡ್ ಪರೀಕ್ಷೆ ಮಾಡಲಾಗುತ್ತದೆಯಲ್ಲ – ಅಲ್ಲಿ ಬಳಕೆಯಾಗುವುದು ಕೂಡ ಇದೇ ಆವಿಷ್ಕಾರದ ಮುಂದುವರಿದ ಭಾಗ.ಇದಲ್ಲದೇ ಶ್ರವಣ ಯಂತ್ರ – ಬಾಹ್ಯಾಕಾಶದಲ್ಲಿ ಹೊರಗಿನ ಶಬ್ದಗಳನ್ನು ಗ್ರಹಿಸಲು, ಕೃತಕ ಕಾಲು – ಚಂದ್ರ ಮೊದಲಾದಅನ್ಯಗ್ರಹದಲ್ಲಿ ಗಗನಯಾತ್ರಿಗಳು ಇಳಿಯುವಾಗ ಕಾಲಿಗೆ ಪೆಟ್ಟಾಗದಂತೆ ಆಧಾರವಾಗಿ, ಗೀರು ಬೀಳದ ಕನ್ನಡಕಕ್ಕೆ ಬಳಸುವಗ್ಲಾಸುಗಳು – ನೌಕೆಯ ಗಾಜಿನ ಕಿಟಕಿ ಮತ್ತು ಗಗನಯಾತ್ರಿಗಳ ಶಿರಸಾಣಕ್ಕೆ , ವಿಮಾನದ ರೆಕ್ಕೆಗಳು ಆಕಾಶದಲ್ಲಿ ಹಾರುವಾಗಅತಿ ಕಡಿಮೆ ಉಷ್ಣತೆಯಿಂದಾಗಿ ಐಸ್ ಕಟ್ಟದಂತೆ ಇರುವ ವ್ಯವಸ್ಥೆ – ರೊಕೆಟ್ ಮತ್ತು ಇತರ ಸಲಕರಣೆಗಳಿಗೆ ಐಸ್ ಅಂಟಿಕೊಳ್ಳ ದಂತೆ, ಮನೆಗಳಿಗೆ ಬಳಸಲ್ಪಡುವ ಸೀಲಿಂಗ್ ವ್ಯವಸ್ಥೆ – ರೊಕೆಟ್ ಸೀಲಿಂಗ್‌ಗೆ, ಅಗ್ನಿಶಾಮಕ ಸಲಕರಣೆಗಳು, ಅಗ್ನಿಶಾಮಕದವರು ಬಳಸುವ ಉಷ್ಣ ನಿರೋಧಕ ಬಟ್ಟೆ – ಗಗನಯಾತ್ರಿಗಳ ಬಟ್ಟೆಯಾಗಿ, ನಿಸ್ತಂತು ವಾಕ್ಯೂಮ್ ಕ್ಲೀನರ್ – ಅನ್ಯಗ್ರಹದ ಮಣ್ಣನ್ನು ತರಲು, ಬಿಸಿಲಿಗೆ ಹಾಳಾಗದಂತೆ ದೀರ್ಘಕಾಲ ಬಾಳಿಕೆ ಬರುವ ಪೇಂಟ್, ಮನೆಗಳಲ್ಲಿರುವ ಆಧುನಿಕ ನೀರು ಶುದ್ಧಿಕರಣ ಯಂತ್ರ – ಅಂತರಿಕ್ಷದಲ್ಲಿ ನೀರು ಶುದ್ಧೀಕರಣಕ್ಕೆ, ಮನೆಯ ಮೇಲೆ ಅಳವಡಿಸುವ ಆಧುನಿಕ ಪೋರ್ಟಬಲ್ ಸೋಲಾರ್ ಪ್ಯಾನಲ್‌ಗಳು – ಸ್ಯಾಟಲೈಟ್‌ಗಳಲ್ಲಿನ ಬಳಕೆಗೆ, ಗೋಲ್ಡ ಪ್ಲೇಟಿಂಗ್ – ಸ್ಯಾಟಲೈಟ್‌ನ ರಕ್ಷಣೆಗೆ ಹೀಗೆ ನೂರಾರು ಆವಿಷ್ಕಾರದ ಮೂಲ ಬಾಹ್ಯಾಕಾಶದ ಅವಶ್ಯಕತೆಯಿಂದಲೇ ಹುಟ್ಟಿದ್ದು.
ಇವೆಲ್ಲ ಅಂತರಿಕ್ಷಕ್ಕೆ ಒಯ್ಯುವಾಗ ಚಿಕ್ಕದಿರಬೇಕು – ಈ ಕಾರಣಕ್ಕೆ ಇವೆಲ್ಲ ಆವಿಷ್ಕಾರಗಳು ನಂತರದಲ್ಲಿ ಸಹಜ ಮನೆಬಳಕೆಗೆಸಾಧ್ಯವಾಯಿತು. ಇವೆಲ್ಲ ಮೊದಲು ಅಂತರಿಕ್ಷದ ಅವಶ್ಯಕತೆಯಾಗಿ ಆಮೇಲೆ ಅದನ್ನೂ ಹೀಗೂ ಬಳಸಬಹುದು ಎಂದಾದವುಗಳು. ಇವೆಲ್ಲ ಬಾಹ್ಯಾಕಾಶದ ಅವಶ್ಯಕತೆಗೆ ಮೊದಲು ಹುಟ್ಟಿ ಆಮೇಲೆ ಮಾರ್ಪಾಡುಗೊಂಡು ನಮ್ಮ / ಜನಸಾಮಾನ್ಯನ ಬಳಕೆಗೆ ಅನುವಾದವುಗಳು.
ಚಂದ್ರ – ಮಂಗಳದಿಂದ ಮಣ್ಣು ಕಲ್ಲು ತಂದದ್ದು, ಅಲ್ಲಿ ತೆಗೆದ ಫೋಟೋ, ವಿಡಿಯೋ ಇವು ನಮಗೆ ಉಪಯೋಗವಾಯಿತೋಅಥವಾ ಮುಂದೊಂದು ದಿನ ಉಪಯೋಗವಾಗುತ್ತದೆಯೋ ಗೊತ್ತಿಲ್ಲ. ಇವೆಲ್ಲವುದಕ್ಕೆ ಕೋಟಿ ಕೋಟಿ ಖರ್ಚುಮಾಡುವುದುಸಾಧುವೋ ಅಲ್ಲವೋ. ಅದನ್ನು ತಿಳಿಯಲು ಅಲ್ಲಿಯವರೆಗೆ ನಾವು ಬರುಕಿರುತ್ತೇವೋ ಇಲ್ಲವೋ. ಆದರೆ ನಾಕಕ್ಕೆ ಹೊರಡುವತಯಾರಿಯಲ್ಲಿ ಆದ ನರನ ಈ ಆವಿಷ್ಕಾರಗಳು ಇಂದು ನಮ್ಮ – ಸಾಮಾನ್ಯರ ಜೀವನವನ್ನು ಹಲವಾರು ರೀತಿಯಲ್ಲಿ ಬದಲಿಸಿವೆ –ಅದು ಇಂದಿನ ಸಮಾಧಾನ.