ಮೊಬೈಲ್ ಎಂಬ ಮಾಣಿಕ್ಯದ ಕರಾಮತ್ತು
ಅವಲೋಕನ
ಚಂದ್ರಶೇಖರ ಬೇರಿಕೆ
ಅದೊಂದು ದೃಶ್ಯ; ಸುಮಾರು 20ರ ವಯೋಮಾನದ ಒಬ್ಬ ಕಾರ್ಮಿಕ ಒಂದು ಸಂಸ್ಥೆಯಲ್ಲಿ ಎರಡನೇ ಪಾಳಿಯಲ್ಲಿ ಕೆಲಸಕ್ಕೆ ಹಾಜರಾಗುತ್ತಾನೆ. ಸಂಸ್ಥೆಯ ಗೇಟ್ ದಾಟಿ ಮುಂದೆ ಬಂದಾಗ ಸೆಕ್ಯೂರಿಟಿ ವಿಭಾಗದ ಸಿಬ್ಬಂದಿ ನಿಯಮಾನುಸಾರ ಆತನನ್ನು ತಪಾಸಣೆಗೆ ಒಳಪಡಿಸುತ್ತಾರೆ.
ಕರ್ತವ್ಯಕ್ಕೆೆ ಹಾಜರಾಗುವಾಗ ಸಂಸ್ಥೆಯಿಂದ ನಿಷೇಧಿಸಲ್ಪಟ್ಟ ಯಾವುದೇ ವಸ್ತುಗಳನ್ನು ಯಾರೂ ಜತೆಯಲ್ಲಿ ಒಯ್ಯಬಾರದು ಎಂಬ ನಿಯಮಮಾನುಸಾರ ಅದನ್ನು ಖಾತ್ರಿಪಡಿಸಿಕೊಂಡು ಕಾರ್ಮಿಕರನ್ನು ಒಳಗೆ ಸೇರಿಸಿಕೊಳ್ಳುವುದು ಸೆಕ್ಯೂರಿಟಿ ಸಿಬ್ಬಂದಿ ಗಳ ಜವಾಬ್ದಾರಿಯೂ ಹೌದು. ಈ ಸಲುವಾಗಿ ದೈನಂದಿನ ಶಿಷ್ಟಾಚಾರದಂತೆ ಆ ಕಾರ್ಮಿಕನನ್ನು ತಪಾಸಣೆ ಮಾಡಿದಾಗ ಆತನ ಬಳಿ ಮೊಬೈಲ್ ಪತ್ತೆಯಾಗುತ್ತದೆ. ಸಂಸ್ಥೆಯ ನಿಯಮಾನುಸಾರ ಕೆಲಸದ ವೇಳೆಯಲ್ಲಿ ಮೊಬೈಲನ್ನು ಜತೆಯಲ್ಲಿ ಇಟ್ಟುಕೊಳ್ಳು ವಂತಿಲ್ಲವಾದ್ದರಿಂದ ಇದು ನಿಷೇಧಿತ ವಸ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಈ ಮೊಬೈಲ್ ಬಗ್ಗೆ ಆತನಿಗೆ ಪ್ರಶ್ನಿಸಿದ್ದೇ ತಡ ಆತ ಅಲ್ಲಿಂದ ಸಂಸ್ಥೆಯ ಆವರಣದ ಸುತ್ತ ತನ್ನ ಮೊಬೈಲನ್ನು ಹಿಡಿದುಕೊಂಡು ಓಡಲು ಆರಂಭಿಸುತ್ತಾನೆ.
ಆತನ ಹಿಂದೆ ಇಬ್ಬರು ಸೆಕ್ಯೂರಿಟಿ ಸಿಬ್ಬಂದಿ ಓಡುತ್ತಾರೆ. ಆತನನ್ನು ಹಿಡಿದು ಮೊಬೈಲ್ ವಶಪಡಿಸಿಕೊಂಡು ಕೆಲಸಕ್ಕೆ ಅನುಮತಿಸುವುದು ಸೆಕ್ಯೂರಿಟಿ ಸಿಬ್ಬಂದಿಗಳ ಕರ್ತವ್ಯವಾಗಿತ್ತು. ಅದಕ್ಕಾಗಿ ಅವರು ಆತನ ಬೆನ್ನಟ್ಟುತ್ತಾರೆ. ಆತ ಇನ್ನೂ ಜೋರಾಗಿ ಓಡುತ್ತಾನೆ. ಆತ ಓಡಿದಂತೆ ಸೆಕ್ಯೂರಿಟಿಗಳೂ ಓಡುತ್ತಾರೆ. ಅಂತು ಕೊನೆಗೂ ಆತನನ್ನು ಹಿಡಿದು ಸೆಕ್ಯೂರಿಟಿ ಕ್ಯಾಬಿನ್ ಬಳಿ ಕರೆದುಕೊಂಡು ಬರಲು ಸೆಕ್ಯೂರಿಟಿ ಸಿಬ್ಬಂದಿ ಸಫಲರಾಗುತ್ತಾರೆ. ಆ ಕಾರ್ಮಿಕ ಮತ್ತು ಅವನ ಹಿಂದೆ ಓಡಿದ ಇಬ್ಬರು ಸೆಕ್ಯೂರಿಟಿ ಸಿಬ್ಬಂದಿ ಓಟದ ಸುಸ್ತಿನಿಂದ ಅರೆಕ್ಷಣ ಸಾವರಿಸಿಕೊಳ್ಳುತ್ತಾರೆ. ಬಳಿಕ ಆ ಕಾರ್ಮಿಕನನ್ನು ವಿಚಾರಿಸುತ್ತಾರೆ.
‘ಯಾಕಪ್ಪ ನೀನು ಓಡಿದ್ದು’ ಎಂದು ಸೆಕ್ಯೂರಿಟಿಗಳು ಪ್ರಶ್ನಿಸುತ್ತಾರೆ. ಆದಕ್ಕೆೆ ಆತ ‘ನನ್ನ ಮೊಬೈಲ್ ನನಗೆ ಬೇಕು’ ಎಂದು ಉತ್ತರಿಸುತ್ತಾನೆ. ‘ನಿನಗೆ ಮೊಬೈಲ್ ಬೇಕಾ, ಕೆಲಸ ಬೇಕಾ’ ಎಂದು ಸೆಕ್ಯೂರಿಟಿಗಳು ಮರು ಪ್ರಶ್ನೆ ಹಾಕುತ್ತಾರೆ. ಅದಕ್ಕೆ ಆತ ‘ನನಗೆ ಎರಡೂ ಬೇಕು’ ಎಂದು ಉತ್ತರಿಸುತ್ತಾನೆ. ನಿನಗೆ ಕೆಲಸ ಬೇಕಾದರೆ ಮೊಬೈಲನ್ನು ಇಲ್ಲಿ ಒಪ್ಪಿಸಿ ಹೋಗು, ಮೊಬೈಲ್ ಬೇಕಾದರೆ ನೀನು ಗೇಟಿನಿಂದ ಹೊರಗೆ ಹೋಗು’ ಎಂದು ಸೆಕ್ಯೂರಿಟಿಯವರು ಆತನಿಗೆ ಸ್ಪಷ್ಟವಾಗಿ ಹೇಳುತ್ತಾರೆ.
ಅದಕ್ಕೆ ಆತನ ಉತ್ತರ ಹಾಗಾದರೆ ನನಗೆ ಮೊಬೈಲ್ ಕೊಡಿ, ಕೆಲಸ ಬೇಡ’! ಮೊಬೈಲ್‌ಗಾಗಿ ಕೆಲಸ ತೊರೆದಿರುವುದು ಈ ಸಂಸ್ಥೆಯಲ್ಲಿ ಮೊದಲ ಪ್ರಕರಣವಂತೂ ಅಲ್ಲ. ಆದರೆ ಆ ಕಾರ್ಮಿಕ ತಾನೂ ಓಡಿ, ಸೆಕ್ಯೂರಿಟಿ ಸಿಬ್ಬಂದಿಗಳನ್ನು ಓಡಿಸಿ, ಸುಸ್ತು ಹೊಡೆಸಿ, ಬೆವರಿಳಿಸಿ ಮೊಬೈಲ್ ಮೇಲಿನ ವ್ಯಾಮೋಹದಿಂದಾಗಿ ಕೆಲಸ ತೊರೆದ ಪ್ರಕರಣ ಇದು ಮೊದಲೇ ಇರಬಹುದು. ಹಾಗಾದರೆ ಆತನ ಆ ಮೊಬೈಲ್‌ನಲ್ಲಿ ಅಂತಹ ಅತ್ಯಮೂಲ್ಯವಾದುದು ಏನಿದ್ದಿರಬಹುದು? ಯಾರೇ ಒಬ್ಬರು ಕಾರ್ಮಿಕನಾಗಿ ದುಡಿಯಬೇಕಾದರೆ ಆತನ ಮನೆಯ ಆರ್ಥಿಕ ಪರಿಸ್ಥಿತಿ ಹೇಗಿರಬಹುದು ಮತ್ತು ಆತನಿಗೆ ಕೆಲಸದ ಅಗತ್ಯತೆ ಎಷ್ಟಿದೆ ಎಂಬುದನ್ನು ಊಹಿಸಬಹುದು. ಹಾಗಿದ್ದೂ ಮೊಬೈಲ್ ಗೋಸ್ಕರ ಕೆಲಸ ತೊರೆಯುತ್ತಾರೆ ಎಂದರೆ ಅವರು ಖಂಡಿತವಾಗಿಯೂ ಮೊಬೈಲ್ ವ್ಯಸನಿಗಳೇ ಆಗಿರುತ್ತಾರೆ.
ಅವರಿಗೆ ತಮ್ಮ ಜೀವನದಲ್ಲಿನ ಆಗುಹೋಗುಗಳ ಬಗ್ಗೆ ಎಂದೂ ಯೋಚನೆ ಉಂಟಾಗುವುದಿಲ್ಲ. ತಮ್ಮ ಪೋಷಕರ ಅಥವಾ ಅವಲಂಬಿತರ ಬದುಕಿನ ಬಗ್ಗೆ ಗಂಭೀರ ಚಿಂತನೆಯೂ ಇರುವುದಿಲ್ಲ. ಕೆಲವರು ಮೊಬೈಲ್‌ಗೆ ಕೊಡುವಷ್ಟು ಕಿಮ್ಮತ್ತನ್ನು ತನ್ನ ಅಥವಾ ತನ್ನ ಪೋಷಕರ ಬದುಕಿನ ಬಗೆಗೆ ಕೊಡಲಾರರು. ಇದೊಂದು ಗಂಭೀರ ಸಮಸ್ಯೆ ಮತ್ತು ವಿಚಿತ್ರ ಮನಸ್ಥಿತಿ ಎನಿಸುತ್ತದೆ. ಕೆಲವರು ಮೊಬೈಲನ್ನು ತಮ್ಮ ಶರೀರದ ಅವಿಭಾಜ್ಯ ಅಂಗ ಎಂದೇ ಭಾವಿಸಿದಂತಿದೆ. ಹಾಗಾಗಿ ಅನೇಕರಿಗೆ ತಮ್ಮ ಮೊಬೈಲ್ ಜತೆಯಲ್ಲಿ ಇಲ್ಲದೇ ಇರುವುದನ್ನು ಊಹಿಸಲೂ ಸಾಧ್ಯವಿಲ್ಲ ಎಂಬಂತಾಗಿದೆ.
ಮೊಬೈಲ್ ಫೋನ್ ತಮ್ಮ ಜತೆಯಲ್ಲಿ ಇಲ್ಲದೇ ಉಂಟಾಗುವ ಭಯವನ್ನು ನೊಮೋಫೋಬಿಯಾ ಎಂದು ಕರೆಯುತ್ತಾರೆ. ಒಂದು ಕ್ಷಣ ಮೊಬೈಲ್ ಇಲ್ಲದಿದ್ದರೆ ನೀರಿನಿಂದ ಹೊರತೆಗೆದ ಮೀನಿನಂತೆ ಚಡಪಡಿಸುತ್ತಾರೆಂದರೆ ಜನರ ಮೇಲೆ ಈ ಮೊಬೈಲ್ ಎಂಬ ಮಾಣಿಕ್ಯ ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂಬುದನ್ನು ಅಂದಾಜಿಸಬಹುದು. ಇದು ನಮ್ಮ ದೇಶದ ಪ್ರಸಕ್ತ ಯುವ ಸಮೂಹದ ಮಾನಸಿಕತೆ ಮತ್ತು ಅಂಗೈಯಲ್ಲಿ ಜಗತ್ತನ್ನು ತೋರಿಸುವ ಮೊಬೈಲ್ ಎಂಬ ಮಾಯಾ ಸಾಧನದ ಕರಾಮತ್ತು.
ಉತ್ಪಾದಕತೆ, ದಕ್ಷತೆ ಮತ್ತು ಗುಣಮಟ್ಟವನ್ನು ನಿರಂತರವಾಗಿ ಕಾಯ್ದುಕೊಳ್ಳಲು, ಉತ್ಪಾದನಾ ಪ್ರಕ್ರಿಯೆಯ ಗೌಪ್ಯತೆಯನ್ನು ಕಾಪಾಡಿಕೊಳ್ಳಲು, ಉತ್ಪಾದನಾ ದೋಷಗಳನ್ನು ತಪ್ಪಿಸಲು, ಕರ್ತವ್ಯದಲ್ಲಿ ಏಕಾಗ್ರತೆ ಕೇಂದ್ರೀಕರಿಸಲು, ಕಾರ್ಯಸ್ಥಳ ದಲ್ಲಿ ಕಾರ್ಮಿಕರ ಸುರಕ್ಷತೆ, ಭದ್ರತೆ ಮತ್ತು ಶಿಸ್ತು ಕಾಪಾಡಿಕೊಳ್ಳಲು, ಮೊಬೈಲ್ ಸಂಬಂಧಿ ಅನಗತ್ಯ ಚಟುವಟಿಕೆಗಳನ್ನು ನಿಯಂತ್ರಿಸಲು, ಕಾರ್ಮಿಕ ಸ್ನೇಹಿ ವಾತಾವರಣ ಕಲ್ಪಿಸಲು, ಕೆಲಸದ ಸಮಯದಲ್ಲಿ ಮೊಬೈಲ್ ಬಳಕೆಯಿಂದ ಅನಗತ್ಯ ಕಾಲಹರಣವನ್ನು ಅಥವಾ ಸಂಭವನೀಯ ಅವಘಡಗಳನ್ನು ತಪ್ಪಿಸಲು ಸಾಮಾನ್ಯವಾಗಿ ಹೆಚ್ಚಿನ ಸಂಸ್ಥೆಗಳು ತನ್ನ ಕಾರ್ಯಸ್ಥಳದಲ್ಲಿ ಮೊಬೈಲ್ ಬಳಕೆಯನ್ನು ನಿಷೇಧಿಸುತ್ತದೆ. ಆದಾಗ್ಯೂ ತುರ್ತು ಉದ್ದೇಶಕ್ಕಾಗಿ ಪರ್ಯಾಯ ಸಂಪರ್ಕ ವ್ಯವಸ್ಥೆಯನ್ನೂ ಸಂಸ್ಥೆಯಲ್ಲಿ ಕಲ್ಪಿಸಲಾಗುತ್ತದೆ.
ಕೆಲವೊಂದು ಸಂಸ್ಥೆಗಳು ಮೊಬೈಲ್ ಬಳಕೆಗೆ ಸಂಸ್ಥೆಯಲ್ಲಿ ಸೆಲ್‌ಫೋನ್ ನೀತಿಗಳನ್ನು ರೂಪಿಸಿಕೊಳ್ಳುತ್ತಾರೆ. ಮೊಬೈಲ್ ಖರೀದಿಸಿ ಕೊಟ್ಟಿಲ್ಲವೆಂದು ಆಹಾರ ತ್ಯಜಿಸುವ, ಮನೆ ತೊರೆದು ಪರಾರಿಯಾಗುವ ಮಕ್ಕಳು, ಮೊಬೈಲ್ ಗೀಳಿನಿಂದ ಶೈಕ್ಷಣಿಕವಾಗಿ ಕಳಪೆ ಸಾಧನೆ, ಮೊಬೈಲ್ ವಿಚಾರದಲ್ಲಿ ಅಧ್ಯಾಪಕರ ಜತೆ ದುರ್ವರ್ತನೆ, ಮೊಬೈಲ್‌ಗಾಗಿ ಕಳ್ಳತನ ಅಥವಾ ದರೋಡೆ, ಮೊಬೈಲ್‌ಗೆ ವಿರೋಧ ವ್ಯಕ್ತಪಡಿಸಿದಕ್ಕಾಗಿ ಪೋಷಕರನ್ನೇ ಹತ್ಯೆ ಮಾಡಿದ, ಹಲ್ಲೆ ನಡೆಸಿದ ಪ್ರಕರಣಗಳು, ಅಜ್ಜಿಯನ್ನು ಕೊಂದ ಮೊಮ್ಮಗ, ಮೊಬೈಲ್‌ಗಾಗಿ ನೇಣು ಬಿಗಿದುಕೊಂಡು ಅಥವಾ ಕೆರೆ, ನದಿಗೆ ಹಾರಿ, ರೈಲಿನಡಿಗೆ ತಲೆ ಕೊಟ್ಟು ಆತ್ಮಹತ್ಯೆ, ಅಸಾಧಾರಣ ಮತ್ತು ಆಕರ್ಷಕ ಸೆಲ್ಫಿಯ ಸಾಹಸಕ್ಕೆ ಪ್ರಯತ್ನಿಸಿ ಪ್ರಪಾತಕ್ಕೆ ಬಿದ್ದು ಜೀವ ಕಳೆದಕೊಂಡ ಘಟನೆ, ಇಯರ್ ಫೋನ್ ಹಾಕಿಕೊಂಡು ರೈಲು ಹಳಿಯನ್ನು ದಾಟುತ್ತಿರುವಾಗ ರೈಲುಗಳಿಗೆ ಬಲಿಯಾದ ಪ್ರಕರಣಗಳು, ಪಬ್ಜಿ ಆಟಕ್ಕಾಗಿ ತಾತನ ಪೆನ್ಷನ್ ಹಣವನ್ನು ಖಾಲಿ ಮಾಡಿದ ಪ್ರಕರಣ ಇವೆಲ್ಲಾ ಸಾಮಾನ್ಯವಾಗಿ ವರದಿಯಾಗುವ ಮೊಬೈಲ್ ಸಂಬಂಧಿ ಅವಾಂತರಗಳು. ಭಾರತದಲ್ಲಿ 2018ನೇ ಇಸವಿಯ ರಸ್ತೆ ಅಪಘಾತಕ್ಕೆ ಹೋಲಿಸಿದರೆ 2019ನೇ ಇಸವಿಯಲ್ಲಿ ಮೊಬೈಲ್ ಫೋನ್‌ಗಳ ಬಳಕೆ ಯಿಂದಾಗಿ ರಸ್ತೆ ಅಪಘಾತಗಳಲ್ಲಿ ಸಂಭವಿಸಿದ ಸಾವುಗಳು ಸುಮಾರು ಶೇ.33ರಷ್ಟು ಹೆಚ್ಚಾಗಿದೆ ಎಂದು ಭಾರತದ ರಸ್ತೆ ಸಾರಿಗೆ ಸಚಿವಾಲಯ ಬಿಡುಗಡೆ ಮಾಡಿದ ಅಂಕಿ ಅಂಶ.
ಈ ಮೊಬೈಲ್ ಪಿಡುಗಿನಿಂದಾಗಿ ಕುಟುಂಬ ಸದಸ್ಯರ ಮಧ್ಯೆ ಸಾಮಾಜಿಕ ಅಂತರ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕವಾಗಿ ಒಂದು ಜೋಕ್ ಹೀಗಿದೆ. ನಿಮ್ಮ ಸೆಲ್ ಫೋನ್‌ಗಳು ಈಗಾಗಲೇ ನಿಮ್ಮ ಗಡಿಯಾರ, ಕ್ಯಾಮೆರಾ, ಕ್ಯಾಲೆಂಡರ್ ಮತ್ತು ಅಲಾರಂ ಗಡಿಯಾರವನ್ನು ಬದಲಾಯಿಸಿದೆ. ಆದರೆ ದಯವಿಟ್ಟು ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಬದಲಿಸದಂತಿರಲಿ!’
ಮೊದಲೆಲ್ಲಾ ವಿದ್ಯಾಭ್ಯಾಸ ಮುಗಿಸಿ ವೃತ್ತಿ ಕ್ಷೇತ್ರಕ್ಕೆ ಪ್ರವೇಶಿಸಿ ಪಡೆದ ಮೊದಲ ವೇತನದ ಸ್ವಲ್ಪ ಭಾಗವನ್ನು ದೇವರಿಗೆ  ಅರ್ಪಿಸುವುದು, ಪೋಷಕರಿಗೆ ಹೊಸ ಬಟ್ಟೆ ಇತ್ಯಾದಿ ಉಡುಗೊರೆ ನೀಡುವುದು ಸಾಮಾನ್ಯ ಪದ್ಧತಿಯಾಗಿತ್ತು. ಆದರೆ ಈಗ ಮೊದಲ ಸಂಪಾದನೆಯು ದುಬಾರಿ ಮೊಬೈಲ್‌ಗೆ ಮೀಸಲು. ನಿಮ್ಮ ಮಗ ಮನೆ ಖರ್ಚಿಗೆ ಇಂತಿಷ್ಟು ಏನಾದರೂ ಕಳುಹಿಸು ತ್ತಾನಾ?’ ಎಂದು ಕೇಳಿದ್ದಕ್ಕೆ, ಪಾಪ ಅವನು ಎಲ್ಲಿಂದ ಕೊಡುವುದು? ಅವನ ಮೊಬೈಲ್ ಸರಿ ಇಲ್ಲ ಅಂತ ಒಂದು ಮೊಬೈಲ್ ತಗೊಂಡಿದ್ದಾನಂತೆ, ಅದಕ್ಕೆ ಮೂವತ್ತು ಸಾವಿರ ಆಯಿತಂತೆ’ ಎಂಬ ಇಬ್ಬರ ಮಾತುಕತೆಯಲ್ಲಿನ ಅನುಕಂಪದ ಸಮಜಾಯಿಷಿ. ಈ ಮೊಬೈಲ್ ಎಂಬ ಮಾಯಾಂಗನೆಯ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದ ಒಂದು ಜೋಕ್ ನೆನಪಿಗೆ ಬರುತ್ತದೆ.
ಪುಸ್ತಕ ಹೇಳಿತಂತೆ ನೀನು ತಲೆ ತಗ್ಗಿಸಿ ಒಮ್ಮೆ ನನ್ನನ್ನು ನೋಡು, ನೀನು ಜೀವನದಲ್ಲಿ ಎಂದೆಂದೂ ತಲೆ ಎತ್ತಿ ನಡೆಯುವಂತೆ ಮಾಡುತ್ತೇನೆ’ಎಂದು. ಇದನ್ನು ಕೇಳಿಸಿಕೊಂಡ ಮೊಬೈಲ್ ಕೂಡಾ ಹೇಳಿತಂತೆ, ಒಮ್ಮೆ ನೀನು ತಲೆ ತಗ್ಗಿಸಿ ನನ್ನ ನೋಡು, ಮುಂದೆಂದೂ ನೀನು ತಲೆ ಎತ್ತದಂತೆ ಮಾಡುತ್ತೇನೆ’ಎಂದು.
ಮೊಬೈಲ್ ಸಾಧನವು ಸಾಮಾಜಿಕ ಮತ್ತು ದೈಹಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಅಲ್ಲದೇ ಕೌಟುಂಬಿಕ ಜೀವನದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಕೆಲವರು ಮಾನಸಿಕ ಸಮಸ್ಯೆಗಳಿಗೆ ಗುರಿಯಾಗುತ್ತಿದ್ದು, ಇದನ್ನು ಮನೋವ್ಯಸನ ಎಂದು ವ್ಯಾಖ್ಯಾನಿಸಲಾಗಿದೆ. ಇದಕ್ಕೆ ಚಿಕಿತ್ಸೆ ನೀಡಲು ಬೆಂಗಳೂರಿನ ನಿಮಾನ್ಸ್‌ ನಲ್ಲಿ ಪ್ರತ್ಯೇಕ ಚಿಕಿತ್ಸಾ ವಿಭಾಗವನ್ನೇ ಆರಂಭಿಸಲಾಗಿದೆ. ಮಧ್ಯ ವಯಸ್ಸಿನ ಬಳಿಕ ವ್ಯಕ್ತಿಯ ಶಾರೀರಿಕ ಸಮತೋಲನ ಮತ್ತು ಮಾನಸಿಕ ದೃಢತೆ ಸಾಮಾನ್ಯವಾಗಿ ಕ್ಷೀಣಿಸುವುದಕ್ಕೆ ವೈಜ್ಞಾನಿಕ ಕಾರಣಗಳಿರುತ್ತವೆ. ಆದರೆ ಈಗಿನ ಕಾಲಘಟ್ಟದಲ್ಲಿ ಮೊಬೈಲ್ ಪ್ರಭಾವದ ದುಷ್ಪರಿಣಾಮ ಗಳಿಂದಾಗಿ ಕಿರಿ ವಯಸ್ಸಿನ ಯುವ ಪೀಳಿಗೆಯವರ ಮಾನಸಿಕ ದೃಢತೆ ಕುಗ್ಗುತ್ತಿರುವುದು ಕಳವಳಕಾರಿ ಬೆಳವಣಿಗೆಯಾಗಿದ್ದು, ಇಂಥ ಯುವ ಸಮೂಹವನ್ನು ಅನುಪಯುಕ್ತ ಅಥವಾ ಅನುತ್ಪಾದಕ ಮಾನವ ಸಂಪನ್ಮೂಲ ಎಂಬ ವರ್ಗಕ್ಕೆ ಸೇರಿಸಬಹುದು.
ಅರ್ಥಾತ್ ಇಂತಹ ಯುವ ಸಮೂಹ ದೇಶಕ್ಕೆ ಹೊರೆ ಎನ್ನಬಹುದು. ಸಾಂಸ್ಕೃತಿಕ, ಕಲೆ, ಸಾಮಾಜಿಕ ಅಥವಾ ಶುಭ ಸಮಾರಂಭ ಮುಂತಾದ ಯಾವುದೇ ಕಾರ್ಯಕ್ರಮಗಳಲ್ಲಿ ಬಹುತೇಕ ಜನರು ತಮ್ಮ ಮೊಬೈಲ್‌ನಲ್ಲಿಯೇ ಮಗ್ನರಾಗಿರುತ್ತಾರೆ. ಅದು ಎಷ್ಟರ ಮಟ್ಟಿಗೆ ಕಿರಿಕಿರಿ ಎನಿಸುತ್ತದೆ ಎಂದರೆ ಇತ್ತೀಚೆಗೆ ಉಡುಪಿಯಲ್ಲಿ ಯಕ್ಷಗಾನ ನಡೆಯುತ್ತಿದ್ದಾಗ ರಂಗಸ್ಥಳದ ಎದುರು ಪ್ರೇಕ್ಷಕರ ಸಾಲಿನಲ್ಲಿ ಕುಳಿತು ಮೊಬೈಲ್‌ನಲ್ಲಿ ಮಗ್ನರಾಗಿದ್ದರವರನ್ನು ಕಂಡ ಯಕ್ಷಗಾನ ಪಾತ್ರಧಾರಿ ಏಯ್ ಮಕ್ಕಳೇ, ನೀವು ಮೊಬೈಲ್ ನೋಡುವುದಾದರೆ ಹಿಂದಕ್ಕೆ ಹೋಗಿ, ಎದುರು ಕುಳಿತುಕೊಂಡು ಮೊಬೈಲ್ ನೋಡ್ಕೊಂಡು ನೀವು ಮಾತಾಡ್ತಿದ್ದರೆ ನಾವು ಇಲ್ಲಿ ಎಂಥ ಮಾಡುವುದು? ಆಗ ಒಂದು ಸಾರಿ ಹೇಳಿಲ್ಲವಾ?’ ಎಂದು ಮೊಬೈಲ್ ನೋಡುವವರ ವಿರುದ್ಧ  ರಂಗಸ್ಥಳದಲ್ಲಿಯೇ ಗದರಿದ ಘಟನೆ ನಡೆದಿದೆ. ನಮ್ಮ ಜೀವನವು ಹೆಚ್ಚು ಡಿಜಿಟಲ್ ಮತ್ತು ಸ್ಮಾರ್ಟ್ಫೋನ್ ಸ್ನೇಹಿಯಾಗಿ ಮಾರ್ಪಟ್ಟಿದೆ ಎಂದು ನಾವೆಲ್ಲರೂ ಹೇಳಲು ಬಯಸುತ್ತೇವೆ.
ಆದರೆ ಮೊಬೈಲ್ ಫೋನ್ ಬಳಕೆ ನಮಗೆ ಒಂದು ರೀತಿಯ ಚಟವಾಗಿ ಮಾರ್ಪಟ್ಟಿವೆ. ನಾವು ಬೆಳಗ್ಗೆ ಎದ್ದ ಕ್ಷಣದಿಂದ ಮರುದಿನಕ್ಕೆ ಅಲಾರಂ ಹೊಂದಿಸುವವರೆಗೆ ಮೊಬೈಲ್ ನಮ್ಮನ್ನು ಆವರಿಸಿದ್ದು, ಮೊಬೈಲ್ ಫೋನ್ ಚಟವು ಮಾದಕ ವ್ಯಸನದಷ್ಟೇ ಮಾರಕವಾಗಿದೆ. ಒಂದು ಜಾಗತಿಕ ಅಧ್ಯಯನದ ಅಂಕಿ ಅಂಶಗಳ ಪ್ರಕಾರ ಶೇ.50ಕ್ಕಿಂತ ಹೆಚ್ಚು ಮೊಬೈಲ್ ಬಳಕೆದಾರರು ತಮ್ಮ ಮೊಬೈಲ್ ಫೋನ್ ಅನ್ನು ಎಂದಿಗೂ ಸ್ವಿಚ್ ಆಫ್ ಮಾಡುವುದಿಲ್ಲ.
ಶೇ.71ರಷ್ಟು ಮೊಬೈಲ್ ಬಳಕೆದಾರರು ತಮ್ಮ ಫೋನ್‌ಗಳನ್ನು ಪಕ್ಕದಲ್ಲಿಯೇ ಇಟ್ಟುಕೊಂಡು ಮಲಗುತ್ತಾರೆ. ಶೇ.69 ಮೊಬೈಲ್ ಬಳಕೆದಾರರು ಬೆಳಿಗ್ಗೆ ಎದ್ದ ಮೊದಲ ಐದು ನಿಮಿಷಗಳಲ್ಲಿ ತಮ್ಮ ಮೊಬೈಲ್ ಫೋನ್ ಅನ್ನು ಪರಿಶೀಲಿಸುತ್ತಾರೆ. ಹಾಗೆಯೇ ಜನರು ತಮ್ಮ ಜೀವಿತಾವಧಿಯಲ್ಲಿ ಸರಾಸರಿ 5 ವರ್ಷ ಮತ್ತು 4 ತಿಂಗಳುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಕಳೆಯುತ್ತಾರೆ.
ಜಂಗಮವಾಣಿ ಎಂದು ಕರೆಯಲ್ಪಡುವ ಸೆಲ್ ಫೋನ್ ಒಂದು ಬಹುಪಯೋಗಿ ಮಾಹಿತಿ ಸಾಧನವೂ ಹೌದು. ಹಾಗೆಯೇ ನಮ್ಮ ಬದುಕನ್ನು ಕಸಿದುಕೊಳ್ಳುವ ಅಪಾಯಕಾರಿ ಸಾಧನವೂ ಹೌದು. ಮೊಬೈಲ್ ನಮ್ಮ ಬದುಕನ್ನು ಸುಲಭಗೊಳಿಸಲು ಸಹಕಾರಿಯಾಗಿರಲಿ. ಆದರೆ ಮೊಬೈಲ್‌ನಿಂದಲೇ ನಮ್ಮ ಬದುಕು ಸರ್ವನಾಶವಾಗದಿರಲಿ. ಹಾಗೆಯೇ ಮೊಬೈಲ್ ನಮ್ಮಿಂದ ನಿಯಂತ್ರಿಸಲ್ಪಡಬೇಕೇ ಹೊರತು ನಾವು ಮೊಬೈಲ್‌ನಿಂದ ನಿಯಂತ್ರಿಸಲ್ಪಡುವಂತಾಗಬಾರದು.
ಆದ್ದರಿಂದ ಮೊಬೈಲ್ ಎಂಬ ಮಾಂತ್ರಿಕ ಸಾಧನವನ್ನು ಬಹಳ ವಿವೇಚನೆಯಿಂದ ಬಳಸೋಣ.