’ಏಕಪತ್ನಿವ್ರತ’ ಚಾಲೆಂಜ್‌: ಸ್ವೀಕರಿಸುವುದರಲ್ಲಿ ತಪ್ಪೇನಿದೆ ?
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ಕರೋನಾ ರೋಗಾಣು ಮನೆಯಲ್ಲೊಬ್ಬರಿಗೆ ಕಾಣಿಸಿಕೊಂಡರೆ ಮನೆಯ ಐದಾರು ಮಂದಿಯನ್ನೂ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುತ್ತದೆ. ಒಂದೆರಡು ಮನೆಯವರು ಸೋಂಕಿತರಾದರೆ ಆ ರಸ್ತೆಯನ್ನೇ ಸೀಲ್‌ಡೌನ್ ಮಾಡಲಾಗುತ್ತದೆ. ಆ ಪ್ರದೇಶದಲ್ಲಿ ಹೆಚ್ಚಾಗಿ ಕಾಣಿಸಿಕೊಂಡರೆ ಇಡೀ ಊರನ್ನೇ ಲಾಕ್‌ಡೌನ್ ಮಾಡಲಾಗುತ್ತದೆ.
ಕೆಲಮಂದಿಗೆ ಸೋಂಕು ತಗುಲಿದೆ ಎಂದು ಇಡೀ ಊರಿನ ಮಂದಿಯೆಲ್ಲಾ ಗೃಹಬಂಧನಕ್ಕೆ ಒಳಗಾಗುವುದೇಕೆ ಹೇಳಿ?. ಇನ್ನು ಚುನಾವಣೆ ಘೋಷಣೆಯಾದರೆ ಅಕ್ರಮ ಹಣ – ವಸ್ತುಗಳ ಸಾಗಾಣಿಕೆ ತಡೆಯಲು ಕ್ಷೇತ್ರಗಳಲ್ಲಿ ಅನುಮಾನಾಸ್ಪದ ವಾಹನಗಳನ್ನು ನಿಲ್ಲಿಸಿ ತಪಾಸಣೆ ಮಾಡಲಾಗುತ್ತದೆ.
ಶಾಲೆಯಲ್ಲಿ ಮಗುವಿನ ಒಂದು ಪೆನ್ಸಿಲ್ ಕಳುವಾದರೆ ಶಿಕ್ಷಕರು ತರಗತಿಯ ವಿದ್ಯಾರ್ಥಿಗಳ ಬ್ಯಾಗನ್ನು ಪರೀಕ್ಷಿಸುತ್ತಾರೆ. ಯಾರೋ ಒಂದಿಬ್ಬರು ಲೈಸೆನ್ಸ್ ಇಲ್ಲದೆ ಗಾಡಿ ಓಡಿಸುತ್ತಾರೆಂದು ರಸ್ತೆಯಲ್ಲಿ ನಿಂತು ಸಂಚಾರಿ ಪೊಲೀಸರು ಎಲ್ಲಾ ವಾಹನಗಳನ್ನು ತಪಾಸಣೆ ಮಾಡುತ್ತಾರಲ್ಲವೇ. ಹಾಗಂಥ ಎಲ್ಲರೂ ತಪ್ಪು ಮಾಡಿರುವುದಿಲ್ಲ ಅಲ್ಲವೇ?. ಮೆಟ್ರೋ, ಮಾಲ್‌ಗಳು, ಮಾರ್ಕೆಟ್, ದೇವಾಲಯಗಳಲ್ಲೆಲ್ಲಾ ಸ್ಫೋಟಕ ವಸ್ತುಗಳ ಶೋಧಕಗಳನ್ನು ಅಳವಡಿಸುವಂತಾಗಿರುವುದು ಎಲ್ಲರೂ ಕಳ್ಳರೆಂದಲ್ಲ. ಅಷ್ಟೇ ಏಕೆ ಬಾಂಬ್ ಬೆದರಿಕೆ ಕರೆ ಬಂದರೆ ಶಾಸಕರ ಭವನದ ಪ್ರತಿಯೊಬ್ಬರನ್ನೂ ಪ್ರತಿಯೊಂದು ಮೂಲೆಯನ್ನೂ ತಪಾಸಣೆಗೆ ಒಳಪಡಿಸಲಾಗುತ್ತದೆ.
ವಿಧಾನಸೌಧದೊಳಗೆ ಪ್ರವೇಶಿಸುವ ಬಡವನಿಂದ ಹಿಡಿದು ಸ್ವಾಮೀಜಿಗಳು ಹಿರಿಯ ನಾಗರಿಕರು ದೈಹಿಕ ಅಶಕ್ತರೆಂದೂ ನೋಡದೆ ಪೊಲೀಸರು ತಪಾಸಣೆ ಮಾಡಿಯೇ ಒಳಗೆ ಬಿಡುವುದಿಲ್ಲವೇ? ಏಕೆ ಹೇಳಿ?. ಯಾವನೋ ಒಬ್ಬ ದುಷ್ಕೃತ್ಯ ಎಸಗುತ್ತಾನೆಂದುಬಂದವರನ್ನೆಲ್ಲಾ ಅನುಮಾನದಿಂದಲೇ ನೋಡುವುದು ಅವೈಜ್ಞಾನಿಕ ಅನ್ಯಾಯವಾದರೂ ವ್ಯವಸ್ಥೆಯ ಅನಿವಾರ್ಯತೆಯೆಂದು ವಾದಿಸಬಹುದಲ್ಲವೇ? ಇತ್ತೀಚೆಗೆ ವಿಧಾನಸಭಾ ಅಧಿವೇಶನದಲ್ಲಿ ರಮೇಶ್ ಜಾರಕಿಹೊಳಿ ಸಿಡಿ ವಿಚಾರ ಆರಂಭವಾಗಿ ಕೊನೆಗೆ ಸಚಿವ ಸುಧಾಕರ್ ಅವರು 225 ಶಾಸಕರ ಬಗ್ಗೆ ತನಿಖೆಯಾಗಲಿ, ಯಾರ‍್ಯಾರು ಏಕಪತ್ನಿ ವ್ರತಸ್ಥರು, ಮುಖ್ಯಮಂತ್ರಿಗಳಾಗಿದ್ದಾಗ ಯಾರ‍್ಯಾರು ಏನೇನು ಮಾಡಿದ್ದಾರೆ? ಆಡಳಿತ ನಡೆಸಿದವರು ತಮ್ಮ ಜೀವನದಲ್ಲಿ ಯಾವುದೇ ರೀತಿಯ ಅನೈತಿಕ ವ್ಯವಹಾರ ನಡೆಸಿಲ್ಲ ಎಂಬುದರ ಬಗ್ಗೆ ತನಿಖೆಯಾಗಲಿ, ಜನರಿಗೆ ಗೊತ್ತಾಗಲಿ, ಇವರೆಲ್ಲಾ ಸತ್ಯ ಹರಿಶ್ಚಂದ್ರರಂತೆ ಈಗ ಮಾತನಾಡುತ್ತಿದ್ದಾರೆ, ತನಿಖೆ ನಡೆದರೆ ಎಲ್ಲವೂ ಗೊತ್ತಾಗಲಿದೆ.
ಸಿದ್ದರಾಮಯ್ಯ ಕುಮಾರಸ್ವಾಮಿ ಡಿಕೆಶಿ ರಮೇಶಕುಮಾರ್ ಇವರೆಲ್ಲರೂ ಸತ್ಯಹರಿಶ್ಚಂದ್ರರು, ಏಕಪತ್ನಿ ವ್ರತಸ್ಥರು. ಸಮಾಜಕ್ಕೆಮಾದರಿಯಾದವರು ಎಂಬುದು ಎಲ್ಲರಿಗೂ ಗೊತ್ತಾಗಲಿ. ಆಗ ಅವರ ಬಂಡವಾಳ ಗೊತ್ತಾಗುತ್ತದೆ ಎಂದು ಏಕಪತ್ನಿವ್ರತ ಚಾಲೆಂಜ್‌ಗೆ ಪಂಥಾಹ್ವಾನ ನೀಡಿದ್ದಾರೆ. ಆದರೆ ಇಂಥ ಚಾಲೆಂಜ್‌ನ್ನು ಕಾಂಗ್ರೆಸ್ ಸೇರಿ ಜೆಡಿಎಸ್ ಬಿಜೆಪಿಯ ಶಾಸಕರೂ ಖಂಡಿಸಿದ್ದಾರೆ. ತಾವೇನು ವ್ಯಭಿಚಾರಿಗಳಾ ಎಂದು ಕೆರಳಿದ್ದಾರೆ. ಇದು ಶಾಸನಸಭೆಯ ಘನತೆಯನ್ನು ಅವಮಾನಿಸಿದಂತೆಎಂದೆಲ್ಲಾ ಕೂಗಾಡಿದ್ದಾರೆ. ಸುಧಾಕರ್ ಅವರನ್ನು ಕ್ಷಮೆಯಾಚಿಸಲು ಆಗ್ರಹಿಸಿದ್ದಾರೆ.
ಇಷ್ಟಕ್ಕೂ ಸುಧಾಕರ್ ಅವರ ಚಾಲೆಂಜ್‌ನಲ್ಲಿ ತಪ್ಪೇನಿದೆ?. ಇಂಥ ಮಾತುಗಳನ್ನು ಆಡಲು ಅವರ ಸಹನೆಯ ಕಟ್ಟೆ ಎಷ್ಟರ ಮಟ್ಟಿಗೆ ಹೊಡೆದಿದೆ? ಇಂಥ ಚಾಲೆಂಜ್ ಮಾಡಲು ಅವರು 225ಮಂದಿ ಶಾಸಕರಲ್ಲಿ ಎಂತೆಂಥ ಅವತಾರಗಳನ್ನು ತಮ್ಮ ದಿವ್ಯ ದೃಷ್ಟಿಯಲ್ಲಿ ಕಂಡಿರಬಹುದು ಎಂಬುದು ಇಲ್ಲಿ ಗಮನಾರ್ಹ ವಾದದ್ದು. ಅಸಲಿಗೆ ಈ ಚಾಲೆಂಜ್ ಸುಧಾಕರ್ ಅವರೊಬ್ಬರಪ್ರಶ್ನೆಯಲ್ಲ. ಸ್ವಾತಂತ್ರ್ಯ ಬಂದಾಗಿನಿಂದ ಪ್ರತಿಯೊಬ್ಬ ಪ್ರಜೆಗಳ ಪ್ರತಿದಿನದ ಪ್ರಶ್ನೆಯಾಗಿಯೇ ಉಳಿದಿದೆ.
ಪ್ರಜಾಪ್ರಭುತ್ವದಲ್ಲಿ ಪ್ರತಿಯೊಬ್ಬರಿಗೂ ಬೇಕಿರುವುದು ಮತ್ತು ತಿಳಿದುಕೊಳ್ಳಬೇಕಿರುವುದು ಇಂಥ ಗಂಭೀರ ವಿಚಾರಗಳೇ. ನಮ್ಮನ್ನಾಳುವ ಪುಣ್ಯಾತ್ಮರು ಎಷ್ಟು ಶುದ್ಧ ಎಷ್ಟು ಕಚ್ಚೆ ಹರುಕ ಅಯೋಗ್ಯ ಎಂಬುದನ್ನು ತಿಳಿದುಕೊಳ್ಳುವುದು ಎಷ್ಟು ನ್ಯಾಯಯುತ ವಿಚಾರ ವಲ್ಲವೇ?. ಹಾಗೆ ನೋಡಿದರೆ ಪ್ರಜೆಗಳು ಕೇಳುವ ಮೊದಲೇ ಪ್ರಜಾಪ್ರತಿನಿಧಿಯಾದವನು ತನ್ನ ಸಾಚಾತನವನ್ನು ಸಾಬೀತು ಪಡಿಸುವುದು ನಿಜವಾದ ನೈತಿಕತೆಯಾಗುತ್ತದೆ. ಮಾಡಬಾರದ್ದನ್ನೆಲ್ಲಾ ಮಾಡಿಯೋ ಅಥವಾ ತಮ್ಮ ಮಹಾ ಗುಣದಿಂದಲೋ ಚುನಾವಣೆಯಲ್ಲಿ ಗೆದ್ದು ಶಾಸಕಾಂಗದ ಸದಸ್ಯನಾದ ಕೂಡಲೇ ಆತ ಶಾಶ್ವತ ಸಾಚಾ ಎಂದು ನಂಬಿಬಿಡಬೇಕೇ? ಸಂವಿಧಾನ ದೇವರು ರೈತರು ಹೆತ್ತವರ ಮೇಲೆ ಪ್ರಮಾಣಮಾಡಿ ಪ್ರತಿಜ್ಞಾವಿಧಿ ಸ್ವೀಕರಿಸಿ ನಂತರ ಅಧಿಕಾರದ ಮದವೇರಿ ಮಾಡ ಬಾರದ್ದನ್ನೆಲ್ಲಾ ಮಾಡಿ ಆಡಬಾರದ ಆಟವನ್ನೆಲ್ಲಾ ಆಡಿ ಪುಕ್ಸಟ್ಟೆ ಮಜಾಮಾಡುವ ಮಂದಿಗಳಿರುವಾಗ, ಸುಧಾಕರ್ ಅವರ ಚಾಲೆಂಜು ನಿಜಕ್ಕೂ ಸಮಯೋಜಿತ ವಾಗಿ ಮತ್ತು ಅನಿವಾರ್ಯವಾಗಿ ತೋರುತ್ತಿದೆ.
ಬಹುಮತ ಪಡೆದು ನಡೆಯುವ ಸರಕಾರವನ್ನು ಅನುಮಾನಿಸಿ ವಿಶ್ವಾಸಮತ ಯಾಚಿಸುವ ಅವಕಾಶ ವಿರುವಾಗ, ಪವಿತ್ರವಾದ ಶಾಸಕಾಂಗದಲ್ಲಿ ಇರುವ ಶಾಸಕರೆಲ್ಲಾ ಸಾಚಾಗಳಾ ಎಂದು ತಿಳಿದುಕೊಳ್ಳುವ ಹಕ್ಕು ಸರ್ವಜನಿಕರಿಗೂ ಮಾಧ್ಯಮಗಳಿಗೂ ಇರುತ್ತದೆ. ನಡೆಯಲಿ ಬಿಡಿ ಅಗ್ನಿಪರೀಕ್ಷೆ, ಸುಧಾಕರ್ ಅವರ ಏಕಪತ್ನಿವ್ರತ ಚಾಲೆಂಜ್‌ನ್ನು ಸ್ವಾಗತಿಸಿ ಎಲ್ಲಾ ಜನಪ್ರತಿನಿಧಿಗಳೂ ತಮಗಿರುವ ಏಕಪತ್ನಿ ಸಂಸಾರ ಸಾಧನೆಗಳನ್ನು ಸಾರ್ವಜನಿಕವಾಗಿ ತೋರಿಸಿಕೊಳ್ಳಲಿ.
ಅದರಲ್ಲಿ ಕಳೆದುಕೊಳ್ಳುವುದೇನಿದೆ?. ನೆನಪಿರಲಿ, ಹೀಗೆ ತೋರಿಸಿಕೊಳ್ಳುವುದರಿಂದ ಎಲ್ಲರಿಗಿಂತ ಹೆಚ್ಚು ಆನಂದ ಆಗುವುದು ಆಯಾ ಶಾಸಕರ ಮಡದಿ ಮಕ್ಕಳಿಗೆ ಮನೆಯವರಿಗೆ ಹೊರತು ವಿರೋಧಿಗಳಿಗಲ್ಲ. ಒಬ್ಬ ವ್ಯಕ್ತಿಯನ್ನ  ಅಪರಾಧಿ ಎಂದು ಆರೋಪಿಸಿದಾಗ ಆತನನ್ನು ನಿರಪರಾಧಿಯೆಂದು ನೂರುಮಂದಿ ಅವನ ಪರವಾಗಿ ವಾದಿಸಿದರೂ ಖುದ್ದು ಆ ಆರೋಪಿಯೇತಾನು ನಿರ್ದೋಷಿ ಎಂದು ಸಾಬೀತುಪಡಿಸಿಕೊಂಡು ಗೆಲ್ಲುವುದಿದೆಯಲ್ಲಾ ಅದರಲ್ಲಿರುವ ಆತ್ಮಗೌರವ ಹೆಮ್ಮೆ ಮತ್ತು ಮಜಾನೇ ಬೇರೆಯಾಗಿರುತ್ತದೆ. ಆ ನಂತರ ಆತನ ಮೇಲಿನ ನಂಬಿಕೆ ಗೌರವ ಹೆಚ್ಚಾಗುತ್ತದೆಯೇ ಹೊರತು ಖಂಡಿತಾ ಕುಗ್ಗುವುದಿಲ್ಲ.
ಸರಕಾರಿ ಸೇವಾ ನಿಯಮಗಳ ಪ್ರಕಾರ ಸರಕಾರಿ ನೌಕರನೊಬ್ಬ ಎರಡನೇ ವಿವಾಹವಾಗಬೇಕಾದರೆ ಆತನ ಧರ್ಮಪತ್ನಿ ಬದುಕಿರ ಬಾರದು, ಅಥವಾ ಕಾನೂನು ಪ್ರಕಾರ ವಿಚ್ಛೇದನ ಪಡೆದಿರಲೇಬೇಕು. ಪತ್ನಿ ಇದ್ದೂ ಮತ್ತೊಂದು ಮದುವೆಯಾದರೆ ಆತನನ್ನು ಸೇವೆಯಿಂದ ಉಚ್ಛಾಟಿಸಿ ಕ್ರಮ ಕೈಗೊಳ್ಳಬಹುದು. ಹೀಗಿರುವಾಗ ಶಾಸಕ, ಮಂತ್ರಿ ಅಥವಾ ಮುಖ್ಯಮಂತ್ರಿಯಾದವನು ತನಗೆ ಧರ್ಮಪತ್ನಿ ಇದ್ದಾಗಲೂ ಮತ್ತೊಬ್ಬಳ ಜತೆ ಫಾರಿನ್ ಟೂರು ಹೊಡೆಯುತ್ತಾ ಹೋಟೆಲ್ ಲಾಡ್ಜುಗಳಲ್ಲಿ ಉರುಳಾಡುತ್ತಿದ್ದರೆ ಪ್ರಜೆಗಳು ಅದನ್ನು ನೋಡಿ ಮೂರನ್ನೂ ಮುಚ್ಚಿಕೊಂಡು ಸುಮ್ಮನೆ ಕೂರಬೇಕೇ?.
ಶಾಸಕರು ಜನಪ್ರತಿನಿಧಿಗಳೆಲ್ಲಾ ತಮ್ಮನ್ನು ತಾವು ಏನೆಂದು ತಿಳಿದುಕೊಂಡಿದ್ದಾರೆ?. ಅಧಿಕಾರ ಅನುಭವ ಮುತ್ಸದ್ದಿತನ ಹಿರಿತನ ಬಂದತಕ್ಷಣ ಇವರೆಲ್ಲಾ ಪ್ರಶ್ನಾತೀತರಾ?. ವೃದ್ಧನಾರಿ ಪತಿವ್ರತಾ ಎಂಬಂತೆ ಯಾರೂ ಇವರನ್ನು ಪ್ರಶ್ನಿಸಲೇ ಬಾರದಾ?. ಪ್ರಸ್ತುತಅಧಿವೇಶನದಲ್ಲಿ ರಮೇಶ್‌ಜಾರಕಿಹೊಳಿ ವಿಚಾರ ವಿವರ ಮಂಥನಗೊಂಡು ಕೊನೆಗೆ ಸುಧಾಕರ್ ಅವರ ಏಕಪತ್ನಿವ್ರತ ಚಾಲೆಂಜ್ ‌ನಲ್ಲಿ ತಾರ್ಕಿಕ ಅಂತ್ಯ ಕಂಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಇದರಲ್ಲಿ ತಪ್ಪೇನಿದೆ?. ಸೀಡಿಯಿಂದ ಒಬ್ಬ ಮಂತ್ರಿ ಕಳಂಕಿತ ನಾಗಿರಬಹುದು. ಹಾಗಂತ ಇರುವವರನ್ನೆಲ್ಲಾ ನಂಬುವಷ್ಟು ಇವರುಗಳ ಮುಖಗಳಲ್ಲಿ ಲಾಲ್ ಬಹದೂರ್ ಶಾಸೀಜೀ, ನೇತಾಜಿ, ಪಟೇಲರು, ವಾಜಪೇಯಿ, ಅಬ್ದುಲ್‌ಕಲಾಂ ಅವರಂಥ ಪರಿಶುದ್ಧತೆಯ ಕಳೆ ಹೊಳೆಯುತ್ತಿಲ್ಲ.
ದುರುಳರ ದುಷ್ಟರ ಅಯೋಗ್ಯರ ಕೊನೆಯ ಆಯ್ಕೆ ಅಥವಾ ನಿಲ್ದಾಣ ರಾಜಕಾರಣ ಎಂಬ ಸಾಮಾನ್ಯ ಅಭಿಪ್ರಾಯ ಸಾರ್ವಜನಿಕ ವಾಗಿ ಬೆಳೆದು ಬಂದಿರುವಷ್ಟು ರಾಜಕೀಯ ಕುಲಗೆಟ್ಟಿದೆ. ಪ್ರಾಮಾಣಿಕರಿಗೆ ನೈತಿಕ ಜೀವನ ನಡೆಸುವವರಿಗೆ ಶುದ್ಧಹಸ್ತರಿಗೆ ರಾಜ ಕಾರಣ ಯೋಗ್ಯವಲ್ಲ ಎಂಬ ನಂಬಿಕೆ ಹುಟ್ಟಿಕೊಂಡು ಅದರ ವಿಡಂಬನೆಗಳು ಮಾಸ್ಟರ್ ಹಿರಣ್ಣಯ್ಯ, ಧೀರೇಂದ್ರ ಗೋಪಾಲ್ ಅವರಂಥ ನಾಟಕಗಳಲ್ಲಿ, ಚಲನಚಿತ್ರಗಳಲ್ಲಿ ಪ್ರತಿಫಲನಗೊಳ್ಳುತ್ತಿವೆ.
ದೇಶದಲ್ಲಿನ ಭಯೋತ್ಪಾದನೆ ಭ್ರಷ್ಟಾಚಾರ ಜಾತೀಯತೆ ಒಳಗೊಂಡಂತೆ ಎಲ್ಲಾ ಸಮಸ್ಯೆಗಳ ಮೂಲವೇ ರಾಜಕಾರಣ ಎಂಬ ಆಧುನಿಕ ಗಾದೆ ಹುಟ್ಟಿಕೊಂಡಿದೆ. ಇದಕ್ಕೆ ಶಾಸನ ಬರೆದಂತೆ ಕರ್ನಾಟಕ ರಾಜಕಾರಣದ ಹೆಡ್ಡಾಫೀಸಿನ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರೇ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು ಎಂಬ ಕಠೋರ ಸತ್ಯವನ್ನು ನೆಟ್ಟಿದ್ದಾರೆ. ಹೀಗಾಗಿ ರಾಜಕಾರಣದ ಮೌಲ್ಯಗಳನ್ನು ಮತ್ತೇ ಪುನರ್ ನಿರ್ಮಿಸಲು ಇಂಥ ಚಾಲೆಂಜ್‌ಗಳನ್ನು ಜನಪ್ರತಿನಿಧಿಗಳು ಸ್ವೀಕರಿಸಿ ತಮ್ಮ ಅಸಲಿಯತ್ತನ್ನು ಪ್ರಜೆಗಳ ಮುಂದೆ ತೋರಿಸಿಕೊಳ್ಳವ ಪ್ರಯತ್ನ ಮಾಡುವುದರಲ್ಲಿ ಯಾವ ತಪ್ಪೂ ಇಲ್ಲ.
ಮೇಲೆ ಹೇಳಿದ ಹಾಗೆ ಸಮಾಜದಲ್ಲಿ ಯಾರೋ ಒಬ್ಬರು ತಪ್ಪೆಸಗುತ್ತಾರೆಂದು ಉಳಿದವರೆಲ್ಲರನ್ನೂ ಅನುಮಾನಿಸಿ ಅವಮಾನಿಸಿ ಪರೀಕ್ಷೆಗೆ ಒಳಪಡಿಸುವಂತೆ ಪ್ರಜಾ ಪ್ರಭುತ್ವದ ದೇಗುಲವೆನ್ನುವ ಶಾಸಕಾಂಗಕ್ಕೆ ಕಳಂಕ ಬಡಿದಾಗ ಉಳಿದೆಲ್ಲಾ ಶಾಸಕರ ಅಸಲಿ ಯತ್ತನ್ನು ಪರೀಕ್ಷಿಸುವುದು ಅಥವಾ ತೋರ್ಪಡಿಸುವುದು ಆರೋಗ್ಯಕರ ಸಮಾಜಕ್ಕೆ ಮುನ್ನುಡಿ ಬರೆದಂತೆ. ಸಚಿವ ಸುಧಾಕರ್ ಅವರ ಪ್ರಶ್ನೆ ಏಕಪತ್ನಿ ವ್ರತ ಚಾಲೆಂಜ್ ಮೇಲ್ನೋಟಕ್ಕೆ ರಾಜಕೀಯದ ಕೋನದಲ್ಲಿ ಅಪ್ರಸ್ತುತ ಅನಿಸಬಹುದು. ಆದರೆಪ್ರಜಾಸತಾತ್ಮಕವಾಗಿ ಇದು ಬಹಳ ಹಳೆಯ ಪ್ರಶ್ನೆ.
ಮದುವೆಯಾಗಲು ವಧು ವರ ಎಷ್ಟು ಒಳ್ಳೆಯ ನಡತೆಯವರೆಂದು, ಮಕ್ಕಳಿಗೆ ಪಾಠ ಹೇಳುವ ಗುರುಗಳು ಎಷ್ಟು ಜ್ಞಾನಿಗಳೆಂದು, ತಿನ್ನುವ ಆಹಾರ ಎಷ್ಟು ಆರೋಗ್ಯಕರವೆಂದು ಆಲೋಚಿಸುವ ಪ್ರಜೆಗಳಿಗೆ ತಮ್ಮನ್ನಾಳು ಮಹಾಪುರುಷ ಎಷ್ಟು ಪವಿತ್ರ ನಾಗಿದ್ದಾನೆ, ಎಷ್ಟು ಯೋಗ್ಯನಾಗಿದ್ದಾನೆಂದು ತಿಳಿದುಕೊಳ್ಳುವ ಹಕ್ಕು ಮತ್ತು ಕುತೂಹಲ ಖಂಡಿತ ವಾಗಿಯೂ ಇರುತ್ತದೆ ಮತ್ತು ಇರಲೇ ಬೇಕು. ಇಲ್ಲದಿದ್ದರೆ ಕತ್ತೆ ನಡೆದದ್ದೇ ದಾರಿ ಎಂಬಂತಾಗಿ ಪ್ರಜಾಪ್ರಭುತ್ವ ಹೊಲಸೆದ್ದು ಜಿಡ್ಡುಕಟ್ಟಿ ತುಕ್ಕು ಹಿಡಿಯುವು ದರಲ್ಲಿ ಸಂಶಯವಿಲ್ಲ.
ಆದ್ದರಿಂದ ಪ್ರಜಾಪ್ರತಿನಿಧಿಗಳು ಈ ರೀತಿಯ ಅಗ್ನಿಪರೀಕ್ಷೆಯಲ್ಲಿ ಗೆದ್ದು ಪುಟವಿಟ್ಟ ಚಿನ್ನದಂತೆ ಹೊರಬರುವುದು ಎಷ್ಟುಅದ್ಭುತವಲ್ಲವೇ?. ಹತ್ತು ರುಪಾಯಿ ಬ್ಯಾಂಕಿನಲ್ಲಿ ಜಮಾವಣೆಯಾದರೆ ಅದಕ್ಕಾಗಿ ಬ್ಯಾಂಕಿನವರು ಪದೇ ಪದೆ ಕೆವೈಸಿ ದಾಖಲಿಸಿ ಕೊಳ್ಳುವಾಗ ವರ್ಷಕ್ಕೆ ಒಮ್ಮೆ ಯಾದರೂ ಪ್ರತಿಯೊಬ್ಬ ಶಾಸಕರೂ ತಮ್ಮ ವೈಯಕ್ತಿಕ ಮತ್ತು ನೈತಿಕ ಅಫಿಡವಿಟ್ಟು ಸಲ್ಲಿಸುವ ಪದ್ಧತಿ ಜಾರಿಯಾದರೆ ಅದರಿಂದ ಪ್ರಜೆಗಳಿಗಿಂಥ ಪ್ರತಿನಿಧಿಗಳಿಗೇ ಹೆಚ್ಚು ಲಾಭ. ನಮ್ಮ ನಾಯಕ ಇನ್ನೂ ಶ್ರೀರಾಮಚಂದ್ರನೇ ಸತ್ಯಹರಿಶ್ಚಂದ್ರನೇ ಆಗಿದ್ದಾನೆ ಎಂಬ ಹೆಮ್ಮೆ ಹುಟ್ಟಿ ಮುಂದಿನ ಚುನಾವಣೆಯಲ್ಲೂ ಪಲ್ಲಕ್ಕಿ ಹೊರುತ್ತಾನೆ.
ಸುಧಾಕರ್ ಅವರ ಈ ಚಾಲೆಂಜ್‌ನ್ನು ಬಿಜೆಪಿಯೂ ಸೇರಿ ಎಲ್ಲಾ ಪಕ್ಷಗಳ ಶಾಸಕರೂ ವಿರೋಧಿಸಿರುವುದು ದುರದೃಷ್ಟಕರ. ಸುಧಾಕರ್ ಅವರು ಆಕ್ರೋಶದಲ್ಲೋ ಹತಾಷೆಯಲ್ಲೋ ಮಾತನಾಡಿರಬಹುದು. ಆದರೆ ಇದೇ ಪ್ರಶ್ನೆಯನ್ನು ಸಾಮಾನ್ಯ ವ್ಯಕ್ತಿಯೊಬ್ಬ ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಶಾಸಕರಿಗೆ ಮಂತ್ರಿಗಳಿಗೆ ಪತ್ನಿಯರೆಷ್ಟು ಅನೈತಿಕ ಸಂಬಂಧಗಳೇನಾದರು ಇವೆಯೇ ಎಂದು ಪ್ರಶ್ನಿಸಿದರೆ ಸಕಾಲದಲ್ಲಿ ಲಿಖಿತ ಉತ್ತರ ನೀಡಲೇ ಬೇಕಾಗುತ್ತದೆ ಅಲ್ಲವೇ. ಅಥವಾ ಸಾಮಾಜಿಕ ಕಳಕಳಿಹೊಂದಿರುವವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿಯಲ್ಲಿ ಪ್ರಶ್ನಿಸ ಬಹುದಲ್ಲವೇ?.
ಒಮ್ಮೆ ಯೋಚಿಸಿನೋಡಿ, ಮೊನ್ನೆ ರಮೇಶ್ ಜಾರಕಿಹೊಳಿ ಮತ್ತು ಆ ಯುವತಿ ಕಾಣಿಸಿಕೊಂಡ ವಿಡಿಯೋಗಳು ಎಲ್ಲಾ ಸುದ್ದಿ ವಾಹಿನಿಗಳಲ್ಲಿ ನಿರಂತರ ಪ್ರಸಾರಗೊಂಡವು. ವಿಡಿಯೋ ರಸವತ್ತಾಗಿದ್ದ (!) ಕಾರಣ ಮೊಬೈಲ್‌ನಿಂದ ಮೊಬೈಲ್‌ಗೆ ಹರಿದಾಡಿ ದವು. ಹೀಗಾದಾಗ ನೆರೆ ರಾಜ್ಯಗಳಲ್ಲಿ ಅನ್ಯದೇಶಗಳ ದೃಷ್ಟಿಯಲ್ಲಿ ಕರ್ನಾಟಕದ ರಾಜಕಾರಣದ ಕುರಿತು ಎಂಥ ಅಸಹ್ಯ, ಕೀಳು ಮಟ್ಟದ ಅಭಿಪ್ರಾಯ ಗಳಿಗೆ ಕಾರಣವಾಗಬಹುದು ಅಲ್ಲವೇ?.
ಅದು ಏಕಪತ್ನಿತ್ವ ಚಾಲೆಂಜ್ ಕುರಿತು ಪಡುವ ಅಸಹನೆಗಿಂತಲೂ ದುಬಾರಿಯಲ್ಲವೇ?. ಮೊದಲು ರಾಜ್ಯದ ಮಾನ ಮರ್ಯಾದೆ ಉಳಿಯಬೇಕು. ಅದಕ್ಕಾಗಿ ಜನಪ್ರತಿನಿಧಿಗಳು ಇಂಥ ಚಾಲೆಂಜ್‌ನ್ನು ಸಕಾರಾತ್ಮಕವಾಗಿ ಸ್ವೀಕರಿಸಿ ಒಂದು ನೂತನ ಆಂದೋಲನಕ್ಕೆ ಚಾಲನೆ ನೀಡಿದರೆ ಪ್ರಸ್ತುತ ರಾಜಕಾರಣಕ್ಕೆ ಒಳ್ಳೆಯ ಜನಭಿಪ್ರಾಯ ಸಂಗ್ರಹವಾಗಿ ನಂಬಿಕೆ ಘನತೆ ಹೆಚ್ಚಾಗು ತ್ತದೆ. ನೋಡಿ, ಡಿ.ಕೆ.ಶಿವಕುಮಾರ್ ಅವರು ಚಾಲೆಂಜ್‌ನ್ನು ಸ್ವೀಕರಿಸಿ ನನಗೆ ಒಬ್ಬಳೇ ಹೆಂಡತಿ ಒಂದೇ ಸಂಸಾರ ಎಂದು ಹೇಳಿ ಕೊಂಡು ಉಳಿದವರಿಗೆ ಮಾದರಿ ಎನಿಸಿದ್ದಾರೆ.
ಸಿದ್ದರಾಮಯ್ಯ ನವರಿಗೆ ಇದು ಅಸಹನೆ ಮೂಡಿಸಿರಬಹುದು. ಆದರೆ ಅವರು ಭಾವಿಸಿರುವಂತೆ ಇಂದಿನ ರಾಜಕಾರಣ ಅಷ್ಟು ಪರಿಶುದ್ಧ ಪವಿತ್ರ ಮತ್ತು ನೈತಿಕವಾಗಿ ಉಳಿದಿಲ್ಲ. ಜನಸಾಮಾನ್ಯರ ಅಭಿಪ್ರಾಯದಲ್ಲಿ ರಾಜಕಾರಣವೆಂಬುದು ಮೂರೂ ಬಿಟ್ಟವರ ಕ್ಷೇತ್ರ ಎಂಬ ನಂಬಿಕೆ ಸ್ಥಾಪಿತವಾಗಿದೆ. ಅಂಥ ಮರ್ಯಾದ ಪುರುಷೋತ್ತಮರಾದ ಸತ್ಯಹರಿಶ್ಚಂದ್ರ ಶ್ರೀರಾಮಚಂದ್ರರೇತಾವು ಮಾಡದಿರುವ ತಪ್ಪಿಗೆ ವನವಾಸ ಅನುಭವಿಸಿ ಹೆಂಡತಿ ಮಕ್ಕಳನ್ನು ಕಳೆದುಕೊಂಡು ಸ್ಮಶಾನ ಕಾಯ್ದು, ಕೊನೆಗೆ ತಮ್ಮಅಮೋಘ ವ್ಯಕ್ತಿತ್ವವನ್ನು ಲೋಕಕ್ಕೆ ತಿಳಿಸಲಿಲ್ಲವೇ?. ಪಾರ್ವತಿದೇವಿ ಸೀತಾಮಾತೆಯರೇ ತಮ್ಮ ಪತಿವ್ರತೆ ಪಾವಿತ್ರ್ಯತೆಯನ್ನು ಸಾಬೀತುಪಡಿಸಲು ಅಗ್ನಿಕುಂಡ ಪ್ರವೇಶಿಸಿ ಅಗ್ನಿಪರೀಕ್ಷೆ ಎದುರಿಸಿ ಗೆದ್ದು ಬಂದಿರುವಾಗ ಇಂದಿನ ಪುಟಗೋಸಿ (ಎಚ್.ಡಿ.ರೇವಣ್ಣ ನವರ ಭಾಷೆ) ರಾಜಕಾರಣಿಗಳು ಯಾವ ಲೆಕ್ಕ ಅಲ್ಲವೇ?.
ಅಂಥ ಕಳಂಕವನ್ನು ಹೋಗಲಾಡಿಸಿ ವಿಧಾನಸೌಧ ವನ್ನು ನೈತಿಕ ಸೀಲ್‌ಡೌನ್ ಮಾಡಿ ಶಾಸಕರನ್ನೆಲ್ಲಾ ಏಕಪತ್ನಿತ್ವ ಟೆಸ್ಟ್ಮಾಡಿ ಟ್ರೇಸ್ ಮಾಡಿ ಅನೈತಿಕ ಸಂಬಂಧಗಳು ಅಕ್ರಮ ಬಹುಪತ್ನಿತ್ವ ಹೊಂದಿದ ಸೋಂಕಿತರನ್ನು ಸೀಲ್‌ಡೌನ್ ಮಾಡಿ ಸರಕಾರಿ ಕೆಲಸ ದೇವರ ಕೆಲಸ ಎಂಬ ಸಾನಿಟೈಜರ್ ನಿಂದ ತೊಳೆದು ನೈತಿಕತೆಯ ಲಸಿಕೆ ಪಡೆದವರನ್ನು ಮಾತ್ರ ಪವಿತ್ರವಾದ ಶಾಸನಸಭೆ ಯೊಳಗೆ ಬಿಟ್ಟುಕೊಳ್ಳಬೇಕಾದ ಕೆಲಸ ಗಂಭೀರವಾಗಿ ಆಗಬೇಕಿದೆ.