ಅನಂತಕುಮಾರ ನೆನಪು ಜೀವಂತವಾಗಿಡುವ ’ಅನಂತಪಥ’
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್‌
ಅನಂತಕುಮಾರ ಪ್ರತಿಷ್ಠಾನ ಪ್ರತಿ ತಿಂಗಳು ‘ಅನಂತಪಥ’ ಎಂಬ ಹೆಸರಿನಲ್ಲಿ ಹನ್ನೆರಡು ಪುಟಗಳ ಪತ್ರಿಕೆಯೊಂದನ್ನು ಕಳೆದ ಒಂಬತ್ತು ತಿಂಗಳಿನಿಂದ ಹೊರ ತರುತ್ತಿದೆ. ಹೆಸರೇ ಸೂಚಿಸುವಂತೆ, ಈ ಪತ್ರಿಕೆ ಅನಂತಕುಮಾರ ಅವರ ಸ್ಮರಣೆಗೆ ಮೀಸಲು. ಅನಂತಕುಮಾರ ಜತೆ ಒಡನಾಡಿದ ರಾಜಕೀಯ ನಾಯಕರ ಲೇಖನ, ಅವರ ಆಪ್ತರ ಅನಿಸಿಕೆ, ಸ್ಮರಣೀಯ ಘಟನೆ, ಪ್ರಸಂಗ, ಅನಂತಕುಮಾರ ಕಾರ್ಯ ಸಾಧನೆ, ಅವರ ಭಾಷಣ, ಪ್ರಮುಖ ಘಟನೆಗಳನ್ನು ಪ್ರತಿ ಸಂಚಿಕೆ ಒಳಗೊಂಡಿರುವುದು ವಿಶೇಷ.
ಇದರ ಜತೆಗೆ ಅನಂತಕುಮಾರ ಅವರ ಹತ್ತಾರು ಫೋಟೋಗಳನ್ನು ಸಹ ಪ್ರತಿ ಸಂಚಿಕೆಯಲ್ಲಿ ಪ್ರಕಟಿಸಲಾಗುತ್ತಿದೆ. ಇದರೊಂದಿಗೆ ಪರಿಣತರ ವಿಶೇಷ ಲೇಖನಗಳಿಗೂ ಅವಕಾಶ ಕಲ್ಪಿಸಿಕೊಡಲಾಗಿದೆ. ಈ ಪತ್ರಿಕೆಯನ್ನು ತಿರುವಿ ಹಾಕಿದರೆ, ಅನಂತಕುಮಾರ ನೆನಪು ಉಮ್ಮಳಿಸಿ ಬರುವುದು ಸಹಜ. ಅನಂತಕುಮಾರ ಅವರಂಥ ಒಬ್ಬ ಕ್ರಿಯಾಶೀಲ ನಾಯಕ, ಅವರ ನಿಧನದ ನಂತರವೂ ಹಲವರಲ್ಲಿ ಪ್ರೇರಣೆ ನೀಡಬೇಕೆಂಬ ಸದಾಶಯದೊಂದಿಗೆ ಆರಂಭವಾದ ಈ ಪತ್ರಿಕೆ, ಆ ನಿಟ್ಟಿನಲ್ಲಿ ನಿರೀಕ್ಷೆಗಿಂತ ಚೆಂದವಾಗಿ ಮೂಡಿ ಬರುತ್ತಿದೆ.
ಬಳಸಿದ ಕಾಗದ, ಅಕ್ಷರ, ವಿನ್ಯಾಸ, ರೂಪ, ಅಚ್ಚುಕಟ್ಟುತನ ಮತ್ತು ಹೂರಣ ಇಡೀ ಪತ್ರಿಕೆಯ ಒಟ್ಟಂದವನ್ನು ಹೆಚ್ಚಿಸಿದೆ ಯಲ್ಲದೇ, ಸಂಗ್ರಯ ಯೋಗ್ಯ ಮೌಲ್ಯವನ್ನು ವೃದ್ಧಿಸಿದೆ. ಅನಂತಕುಮಾರ ಹೇಳುತ್ತಿದ್ದ ಜೋಕುಗಳು, ದೃಷ್ಟಾಂತಗಳುಸಾವಿರಾರು. ಯಾವುದೇ ವಿಷಯದ ಬಗ್ಗೆ ಯಾರಾದರೂ ಮಾತಾಡಿದಾಗ, ಅವರು ಅದನ್ನು ಇನ್ನಷ್ಟು ಹೊಸ ಸಂಗತಿಗಳಿಂದವಿಸ್ತರಿಸುತ್ತಿದ್ದರು. ತಮ್ಮ ಅನುಭವವನ್ನು ಸೇರಿಸಿ, ಆ ವಿಷಯ ಪ್ರಸ್ತಾಪಿಸಿದವರಿಗೇ ಅಚ್ಚರಿ ಮೂಡಿಸಿ, ವಿಷಯಕ್ಕೆ ಹೊಸಆಯಾಮ ನೀಡುತ್ತಿದ್ದರು. ಅವರು ಅದೆಷ್ಟು ಒಳ್ಳೆಯ ಮಾತುಗಾರರೋ, ಅಷ್ಟೇ ಒಳ್ಳೆಯ ಕೇಳುಗರಾಗಿದ್ದರು.
ಯಾರಾದರೂ ತಮ್ಮ ಮುಂದೆ ಹೊಸ ವಿಷಯ ಹೇಳುವಾಗ, ಅವರು ಮಂತ್ರಮುಗ್ದರಾಗಿ ಕೇಳುತ್ತಿದ್ದರು. ಇನ್ನಷ್ಟು ಕೇಳಿ ತಿಳಿದು ಕೊಳ್ಳುವ ಆಸಕ್ತಿ ತೋರುತ್ತಿದ್ದರು. ಅದನ್ನೇ ಯಥಾವತ್ತು ಮನಸ್ಸಿನಲ್ಲಿ ಮುದ್ರಿಸಿಕೊಂಡು, ಮುಂದೆ ಸಂದರ್ಭ ಬಂದಾಗ, ಅಕ್ಷರಶಃ ಮರುಪ್ರಸ್ತುತಿ ಮಾಡುತ್ತಿದ್ದರು. ಅವರಿಗೆ ಅಸಾಧಾರಣ ಜ್ಞಾಪಕಶಕ್ತಿಯಿತ್ತು. ಯಾರೇ ಸಿಕ್ಕರೂ, ಅವರು ಅಪರಿಚಿತರಾ ದರೂ ಸರಿಯೇ, ಅವರನ್ನು ಹಿಡಿದಿಟ್ಟುಕೊಳ್ಳುವ ಸೊಗಸುಗಾರಿಕೆ ಅವರಿಗೆ ಸಿದ್ಧಿಸಿತ್ತು. ಅವರ ಜತೆಯಲ್ಲಿದ್ದಾಗ ನೀರಸ ಕ್ಷಣ ಎಂಬುದೇ ಇರಲಿಲ್ಲ. ಪ್ರತಿ ಭೇಟಿಯನ್ನೂ ಅವರು ಒಂದಿಂದು ರೀತಿಯಲ್ಲಿ ಸ್ಮರಣೀಯವಾಗಿಸುತ್ತಿದ್ದರು.
ಏನಿಲ್ಲವೆಂದರೂ, ಪಕ್ಷದ ಕಾರ್ಯಕರ್ತ ಬಹಳ ವರ್ಷಗಳ ನಂತರ ಸಿಕ್ಕರೆ, ಅವರ ಮನೆ – ಮಂದಿಯ ಹೆಸರುಗಳನ್ನೆ ಹೇಳಿ, ದಂಗು ಬಡಿಸಿ ಕಳುಹಿಸುತ್ತಿದ್ದರು. ಅನಂತಕುಮಾರ ಅವರಲ್ಲಿ ಬೀಚಿ ಮತ್ತು ಬಿಜೆಪಿ (ಜನಸಂಘ) ನಾಯಕ ಜಗನ್ನಾಥರಾವ್ ಜೋಶಿ ಯವರ ಹಾಸ್ಯ ಚಟಾಕಿಗಳ ಅಪೂರ್ವ ಸಂಗ್ರಹವಿತ್ತು. ಒಮ್ಮೆ ಅವರು ಇವರಿಬ್ಬರ ಜೋಕುಗಳನ್ನು ಮೂರು ತಾಸುಗಳವರೆಗೆ ಹೇಳಿ ಹೊಟ್ಟೆ ಹುಣ್ಣಾಗುವಷ್ಟು ನಗಿಸಿದ್ದರು. ಒಳ್ಳೆಯ ಹಾಸ್ಯಗಳನ್ನು ಆಸ್ವಾದಿಸುವವರು ಸಿಕ್ಕರೆ, ಸಮಯದ ಪರಿವೆಯಿಲ್ಲದೇ ಹರಟೆ ಚ್ಚುತ್ತಿದ್ದರು. ಕೇಳುಗರಿಗೆ ಅನಂತಕುಮಾರ ಇನ್ನೂ ಸ್ವಲ್ಪ ಹೊತ್ತು ಹೀಗೆ ಮಾತಾಡುತ್ತಿರಲಿ ಎಂದು ಅನಿಸುತ್ತಿತ್ತು.
ಹರಟೆ ಮುಗಿಸಿ ಹೊರಡಲು ಅವರಿಗೂ ಮತ್ತು ಯಾರಿಗೂ ಮನಸ್ಸಿರುತ್ತಿರಲಿಲ್ಲ. ‘ಒಂದು ವೇಳೆ ನಾನು ಬರೆದಿದ್ದೇ ಸುಟ್ಟು ನಾಶವಾದರೆ,  ಚಿಂತೆಯಿಲ್ಲ, ವೈಎನ್ಕೆ ಎಂಬ ಪತ್ರಕರ್ತನಿzನೆ, ಆತ ತನ್ನ ನೆನಪಿನ ಶಕ್ತಿಯಿಂದಲೇ ಎಲ್ಲವನ್ನೂ ಬರೆಯಬಲ್ಲ, ನನ್ನ ಸಾಹಿತ್ಯವನ್ನು ಮರುಸೃಷ್ಟಿಸಬಲ್ಲ’ ಎಂದು ಖ್ಯಾತ ನಾಟಕಕಾರ, ಸಾಹಿತಿ ಟಿ.ಪಿ.ಕೈಲಾಸಂ ಹೇಳಿದ್ದರಂತೆ. ಈ ಮಾತನ್ನು ಅನಂತಕುಮಾರಗೂ ಅನ್ವಯಿಸಬಹುದು. ಅಟಲ್ ಬಿಹಾರಿ ವಾಜಪೇಯಿ ಹೇಳಿದ ಮಾತುಗಳು, ಹಾರಿಸಿದ ಚಟಾಕಿಗಳು, ಮಾಡಿದ ಪ್ರಮುಖ ಭಾಷಣಗಳನ್ನು ಅವರು ಅದೇ ಧಾಟಿಯಲ್ಲಿ ಮರುಪ್ರಸ್ತುತಿ ಮಾಡಬಲ್ಲವರಾಗಿದ್ದರು.
ಅಮೆರಿಕ, ಬ್ರಿಟನ್ನಿನ ರಾಜಕೀಯ ನಾಯಕರುಗಳ ಕತೆ, ದೃಷ್ಟಾಂತ, ಹಾಸ್ಯ ಪ್ರಸಂಗಗಳು ಅವರಲ್ಲಿ ದಂಡಿಯಾಗಿದ್ದವು.ಒಂದು ಸಮಸ್ಯೆಯನ್ನು ಪರಿಣಾಮಕಾರಿಯಾಗಿ ನಿವೇದಿಸುವ ಕಲೆ ಅವರಿಗೆ ಕರಗತವಾಗಿತ್ತು. ಸಮಯ, ಸಂದರ್ಭ ಮತ್ತುವ್ಯಕ್ತಿಗಳನ್ನು ನೋಡಿ, ಅವರು ಒಂದು ವಿಷಯ, ಸಮಸ್ಯೆ, ವಿವಾದ, ಘಟನೆಯನ್ನು ಚೆಂದವಾಗಿ ನಿವೇದಿಸುತ್ತಿದ್ದರು. ಒಮ್ಮೆಬೆಂಗಳೂರಿನಲ್ಲಿ ತಮ್ಮ ಭಾಷಣವನ್ನು ಮೊಟಕುಗೊಳಿಸಿ ಹಠಾತ್ ನಿರ್ಗಮಿಸುವ ಸಂದರ್ಭ ಬಂದಾಗ, ‘ಬಿಜೆಪಿಯಲ್ಲಿ ನನ್ನಕೊರತೆಯಿದೆ ಎಂದು ಅನಿಸಿದರೆ, ಚಿಂತೆ ಮಾಡಬೇಡಿ, ಅನಂತಕುಮಾರ ಇದ್ದಾರೆ’ ಎಂದು ಪ್ರಮೋದ ಮಹಾಜನ್ಭಾಷಣದಲ್ಲಿ ಹೇಳಿದ್ದರು. ಅದು ನಿಜವೂ ಆಗಿತ್ತು.
ಅವರಿಬ್ಬರೂ ಪೈಪೋಟಿಗೆ ಬಿದ್ದವರಂತೆ ಹರಟೆ ಹೊಡೆಯುತ್ತಿದ್ದರು. ಅದನ್ನು ಕೇಳುವುದೇ ಅದು ಅಪರೂಪದ ಅನುಭೂತಿ ಯಾಗಿತ್ತು. ಮಾರು ಎರಡು ದಶಕಗಳ ಕಾಲ, ಬಿಜೆಪಿಯ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಂಸದೀಯ ಮಂಡಳಿಯಸದಸ್ಯರಾಗಿದ್ದ ಅನಂತಕುಮಾರ, ಕಾಲು ಶತಮಾನದ ರಾಷ್ಟ್ರ ರಾಜಕಾರಣದ ವಿದ್ಯಮಾನಗಳಿಗೆ ಪ್ರತ್ಯಕ್ಷದರ್ಶಿಯಾಗಿದ್ದರು.ಪ್ರಮುಖ ಐದು ಸಂಸದೀಯ ಸ್ಥಾಯಿ ಸಮಿತಿಗಳ ಅಧ್ಯಕ್ಷರೂ ಆಗಿದ್ದ ಅವರಲ್ಲಿ ರಾಷ್ಟ್ರೀಯ ಸಮಸ್ಯೆಯ ಯಾವುದೇಕವಲುಗಳನ್ನು ಚರ್ಚಿಸಿದರೆ ಸಮಾಧಾನಕರ ಉತ್ತರ ಸಿಗುತ್ತಿತ್ತು.
ಸಂಸದೀಯ ವ್ಯವಹಾರಗಳ ಖಾತೆ ಸಚಿವರಾಗಿದ್ದ ಅವರು, ಲೋಕಸಭೆಯ ಎಲ್ಲಾ 545 ಕ್ಷೇತ್ರಗಳು ಮತ್ತು ಅವುಗಳನ್ನುಪ್ರತಿನಿಽಸುವ ಸದಸ್ಯರ ಹೆಸರುಗಳನ್ನು ಹೇಳುತ್ತಿದ್ದರು ಮತ್ತು ಅವರ ಜತೆ ಸಂಪರ್ಕ ಹೊಂದಿದ್ದರು. ಆ ಲೋಕಸಭಾ ಸದಸ್ಯರವೈಶಿಷ್ಟ್ಯ, ಅಪರೂಪದ ಸಂಗತಿಗಳನ್ನು ಸಹ ಅವರು ರಸವತ್ತಾಗಿ ಬಣ್ಣಿಸುತ್ತಿದ್ದರು.
ಒಮ್ಮೆ ಒರಿಸ್ಸಾದ ಜಗತ್ ಸಿಂಗ್ ಪುರ ಲೋಕಸಭಾ ಕ್ಷೇತ್ರದ ಸದಸ್ಯ ಬಿಜೆಡಿಯ ಕುಲಮಣಿ ಸಮಲ್ ಎಂಬುವವರು ಅವರನ್ನುಭೇಟಿ ಮಾಡಲು ಬಂದಿದ್ದರು. ಸಮಲ್ ಅವರು ತಮ್ಮ ಜತೆ ಬಂದಿದ್ದ ತಮಗಿಂತ ಹಿಂದಿನ ಸದಸ್ಯರೊಬ್ಬರನ್ನು ಪರಿಚಯಿಸಿದರು. ಆಗ ಅನಂತಕುಮಾರ, ‘ತ್ರಿಲೋಚನಾ ಕನುಂಗೋ ಹೇಗಿzರೆ? ಬಿಭೂ ಪ್ರಸಾದ ತರೈ ಹೇಗಿದ್ದಾರೆ?’ ಎಂದು ಅವರಿಗಿಂತ ಮೊದಲು ಅದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದವರ ಹೆಸರುಗಳನ್ನೂ ಹೇಳಿ, ಕುಲಮಣಿ ಸಮಲ್ ಅವರಿಗೇ ಅಚ್ಚರಿ ಮೂಡಿಸಿದ್ದರು.
ಅನಂತಕುಮಾರ ನೆನಪುಗಳನ್ನು ಜೀವಂತವಾಗಿರಿಸುವ ಅವರ ಪತ್ನಿ ತೇಜಸ್ವಿನಿ ಕಾರ್ಯ ಸ್ತುತ್ಯರ್ಹ. ಅನಂತಕುಮಾರ ಬಗ್ಗೆಅನೇಕರಿಗೆ ತಕರಾರು ಇತ್ತು, ಆದರೆ ಅವರ ನಿಧನದ ನಂತರ ಬಿಜೆಪಿಯಲ್ಲಿ ಅವರ ಅನುಪಸ್ಥಿತಿ ಅನುಗಾಲ ಕಾಡುವುದುಸಹಜ. ‘ಅನಂತಪಥ’ ಓದಿದ ಬಳಿಕ ಇವೆ ಯಾಕೋ ನೆನಪಾದವು. ಮೂರು ವರ್ಷಗಳ ಕಾಲ ಅವರ ಜತೆ ನಿಕಟ ಒಡನಾಟವಿದ್ದ ನಾನು, ನನ್ನ ನೆನಪಿನ ಗಣಿಯನ್ನು ಆಗಾಗ ಬರಿದು ಮಾಡಬೇಕು. ಎಷ್ಟೋ ವಿಷಯಗಳನ್ನು ಹೇಳಬಹುದು.
ಎರಡು ಪ್ರಸಂಗ, ಎರಡು ಪ್ರತಿಕ್ರಿಯೆ
ಇಲ್ಲಿ ಎರಡು ಪ್ರಸಂಗಗಳಿವೆ. ಅದರ ಕಥಾನಾಯಕ ಒಬ್ಬನೇ. ಎರಡೂ ಪ್ರಸಂಗಗಳಲ್ಲಿ ಕಥಾನಾಯಕ ತಪ್ಪು ಮಾಡುತ್ತಾನೆ. ಆದರೆ ಜನ ಅವನನ್ನು ಹೇಗೆ ನಡೆಸಿಕೊಳ್ಳುತ್ತಾರೆ ಎಂಬುದನ್ನು ಗಮನಿಸಿ. ಪ್ರಾಯಶಃ ಜಾಗದ ಮಹಿಮೆ ಕೂಡ ಜನರ ಪ್ರತಿಕ್ರಿಯೆ ಭಿನ್ನವಾಗಿರಲು ಕಾರಣವಾಗಿರುವುದು ಗಮನಾರ್ಹ.
ಚರ್ಚಿನಲ್ಲಿ ಪ್ರಾರ್ಥನೆ ನಡೆಯುತ್ತಿತ್ತು. ಹತ್ತಿ (ಅರಳೆ) ಬಿದ್ದರೂ ಕೇಳಿಸುವಷ್ಟು ದಿವ್ಯ ಮೌನ ಎಡೆ ಹರಡಿತ್ತು. ಅಷ್ಟೊತ್ತಿಗೆಯಾರದ್ದೇ ಮೊಬೈಲ್ ಫೋನ್ ಕಿರುಚಿಕೊಳ್ಳತೊಡಗಿತು. ಆ ಮೊಬೈಲ್ ಫೋನ್ ಹಿಡಿದವನನ್ನು ಎಲ್ಲರೂ ದುರುಗುಟ್ಟಿ ನೋಡಲಾ ರಂಭಿಸಿದರು. ಧರ್ಮಗುರು ಬಂದು ಅವನಿಗೆ ಬಾಯಿಗೆ ಬಂದಂತೆ ಬೈದ. ‘ನಿನ್ನಂಥ ನಾಲಾಯಕ್ ಯಾರೂ ಇಲ್ಲ. ಪ್ರಾರ್ಥನೆ ಮಾಡಲು ಬರುವಾಗ ಮೊಬೈಲನ್ನು ಸೈಲಂಟ್ ಮೋಡ್ ನಲ್ಲಿಟ್ಟಿರಬೇಕು ಎಂಬ ಕಾಮನ್ ಸೆನ್ಸ್ ಇಲ್ಲವಾ?’ ಎಂದು ತರಾಟೆಗೆ ತೆಗೆದುಕೊಂಡ. ಪ್ರಾರ್ಥನೆಯಲ್ಲಿ ಭಾಗವಹಿಸಿದವರೆಲ್ಲ ಅವನನ್ನು ಕ್ಯಾಕರಿಸಿ ನೋಡಿ ಹೋಗುತ್ತಿದ್ದರು.
ಮನೆಗೆ ಹೋಗಬೇಕೆಂದು ಕಾರು ಹತ್ತಿದ. ಅಷ್ಟೊತ್ತಿಗೆ ಹೆಂಡತಿಯೂ ಗರಂ ಆಗಿದ್ದಳು. ಅವಳೂ ಸಹ ಅವನಿಗೆ ವಾಚಾಮಗೋಚರ ಬೈಯಲಾರಂಭಿಸಿದಳು. ‘ಪ್ರಾರ್ಥನೆ ಯಲ್ಲಿರುವಾಗ ಮೊಬೈಲನ್ನು ಸ್ವಿಚಾಫ್ ಮಾಡಬೇಕು ಎಂಬ ತಿಳಿವಳಿಕೆ ಇಲ್ಲವೇನ್ರಿ? ನಿಮ್ಮಿಂದಾಗಿ ಎಲ್ಲರ ಮುಂದೆ ನಮ್ಮ ಮಾನ – ಮರ್ಯಾದೆ ಹರಾಜಾಯ್ತು. ನನಗೂ ತಲೆ ಎತ್ತದಂತೆ ಮಾಡಿಬಿಟ್ರಿ. ನಿಮ್ಮಿಂದಾಗಿ ಎಷ್ಟು ಅವಮಾನವಾಯ್ತು ಗೊತ್ತಾ? ನಿಮ್ಮ ಯಜಮಾನರಿಗೆ ಬುದ್ದಿ ಇಲ್ಲವಾ ಎಂದು ನನ್ನ ಸ್ನೇಹಿತೆಯರು ಕೇಳಿದರು.
ನನಗೆ ತುಂಬಾ ಅಪಮಾನವಾಯ್ತು. ನಾನಂತೂ ಎಂದೆಂದಿಗೂ ನಿಮ್ಮ ಜತೆ ಬರೊಲ್ಲ’ ಎಂದು ಹೆಂಡತಿಯೂ ಅವನಿಗೆ ಯಕ್ಕಾಮಾರಾ ಬೈದಳು. ಆತ ಮನೆ ತಲುಪುವವರೆಗೂ ಒಂದೇ ಒಂದು ಮಾತನ್ನು ಆಡಲಿಲ್ಲ. ಆತ ಅಪಮಾನದಿಂದ ಕುಗ್ಗಿ ಹೋಗಿದ್ದ. ಆತನಿಗೆ ತನ್ನ ತಪ್ಪಿನ ತೀವ್ರತೆಯ ಅರಿವಾಗಿತ್ತು. ಇನ್ನು ಜೀವನದಲ್ಲಿ ಚರ್ಚ್‌ಗೆ ಹೋಗಬಾರದು ಎಂದು ಆತನಿರ್ಧರಿಸಿದ!
ಆ ದಿನವೆ ಅವನ ಮನಸ್ಸಿನಲ್ಲಿ ಅದೇ ಯೋಚನೆ ಕೊರೆಯುತ್ತಿತ್ತು. ಅದೇ ದಿನ ಸಾಯಂಕಾಲ ಆತ ಬಾರ್‌ಗೆ ಹೋದ. ಎರಡು ಪೆಗ್ ಗಟಗಟ ಏರಿಸಿದ. ಮೂರನೇ ಪೆಗ್‌ಗೆ ಆರ್ಡರ್ ಮಾಡಿದ. ಅಷ್ಟರೊಳಗೆ ಆತ ವ್ಯಾಕ್ ಅಂತ ವಾಂತಿ ಮಾಡಿಬಿಟ್ಟ. ಎಲ್ಲರೂ ಅವನತ್ತ ನೋಡಿದರು. ತಕ್ಷಣ ವೇಟರ್ ಓಡಿ ಬಂದು, ನ್ಯಾಪ್ಕಿನ್ ತಂದು ಒರೆಸಿದ. ಮತ್ತೊಬ್ಬ ಬಂದು ಆತನ ವಾಂತಿಯನ್ನು ಬಳಿದು ಸ್ವಚ್ಛ ಮಾಡಿದ. ಬಾರ್ ಮ್ಯಾನೇಜರ್ ಬಂದು, ಆತನ ಆರೋಗ್ಯ ವಿಚಾರಿಸಿದ.
(ಲೇಡಿ) ವೇಟ್ರೆಸ್ ಬಂದು, ಆತನಿಗೆ ಒಂದು ಕಾಂಪ್ಲಿಮೆಂಟರಿ ಪೆಗ್ ಕೊಟ್ಟಳು. ಸುತ್ತಲಿನ ಟೇಬಲ್ಲಿನಲ್ಲಿ ಕುಳಿತವರು, ‘ಬ್ರದರ್,ಓಕೆನಾ? ಒಮ್ಮೊಮ್ಮೆ ಹೀಗೆ ಆಗುತ್ತದೆ. ಜಾಸ್ತಿ ಕುಡಿಯಬೇಡ’ ಎಂದರು. ಮತ್ತೊಬ್ಬ ಬಂದು, ‘ಸಾರ್, ಎಲ್ಲ ಸರಿ ಇದೆ ತಾನೇ?’ಎಂದು ಕೇಳಿ ವಿಚಾರಿಸಿದ. ಆತನಿಗೆ ಬಹಳ ಸಂತಸ, ಸಮಾಧಾನವಾಯಿತು. ಚರ್ಚ್‌ನಲ್ಲಿ ನನಗೆ ಒಬ್ಬರೇ ಒಬ್ಬರು ಬಂದು ಒಂದು ಸಾಂತ್ವನ ಹೇಳಲಿಲ್ಲ, ಅದೇ ಬಾರ್‌ನಲ್ಲಿ, ಎಲ್ಲರೂ ಬಂದು ವಿಚಾರಿಸಿಕೊಂಡು ಹೋದರು.
ಚರ್ಚ್‌ಗೆ ಹೋಗಬೇಕಾದ ದಿನ, ಆತ ಅಲ್ಲಿಗೆ ಹೋಗುವುದನ್ನು ಬಿಟ್ಟು, ಬಾರ್‌ಗೆ ಹೋಗಲಾರಂಭಿಸಿದ. ಮ್ಯಾನೇಜ್‌ಮೆಂಟ್ ಕ್ಲಾಸಿನಲ್ಲಿ ಈ ಕತೆಯನ್ನು ವಿಶ್ಲೇಷಿಸಿ ಅದರ ನೀತಿಯೇನು ಎಂಬುದನ್ನು ಹೀಗೆ ವಿವರಿಸುತ್ತಾರೆ – ‘ಜನರು ತಪ್ಪು ಮಾಡುವುದು ಸಹಜ. ಆ ಸಂದರ್ಭದಲ್ಲಿ ನೀವು ಅವರನ್ನು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಆಧಾರದ ಮೇಲೆ ಅವರಲ್ಲಿ ಬದಲಾವಣೆ ಯನ್ನು ತರಬಹುದು.’
ಹೆಂಡತಿಯನ್ನು ಹಾಗೆ ಕರೆಯೊಲ್ಲಾ!
ಮಹಾರಾಷ್ಟ್ರದ ಗೃಹ ಸಚಿವ ದೇಶಮುಖ್ ಅವರು ಪ್ರತಿ ತಿಂಗಳು ನೂರು ಕೋತಿ ರುಪಾಯಿ ಹಣ ಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಪೊಲೀಸ್ ಅಧಿಕಾರಿಯೊಬ್ಬರ ಆಪಾದನೆ  ಹಿನ್ನಲೆಯಲ್ಲಿ, ಒಂದು ತಮಾಷೆಯ ಪ್ರಸಂಗವನ್ನು ಉದ್ಯಮಿ ಹರ್ಷ ಗೋಯೆಂಕಾಹಂಚಿಕೊಂಡಿದ್ದಾರೆ. ನಾನು ನನ್ನ ಹೆಂಡತಿಯನ್ನು ‘ಹೋಮ್ ಮಿನಿಸ್ಟರ್’ ಎಂದು ಕರೆಯುತ್ತಿದ್ದೆ. ಆಕೆ ನನ್ನನ್ನು ‘ಪ್ರೈಮ್ ಮಿನಿಸ್ಟರ್’ ಎಂದು ಕರೆಯುತ್ತಿದ್ದಳು. ಇಂದಿನಿಂದ ನಾನು ಆಕೆಯನ್ನು ಹೋಮ್ ಮಿನಿಸ್ಟರ್ ಎಂದು ಕರೆಯದಿರಲು ನಿರ್ಧರಿಸಿದ್ದೇನೆ. ಕಾರಣ ಪ್ರತಿ ತಿಂಗಳೂ ನೂರು ಕೋಟಿರುಪಾಯಿ ಹಣ ಕೊಡಬೇಕು ಎಂಬ ಬೇಡಿಕೆಯಿಟ್ಟರೆ, ಏನು ಮಾಡೋದು?
ಸಂಪೂರ್ಣ ಸಂತೋಷ ಸಾಧ್ಯವಾ?
ಗಂಡಸರು ಸಂಪೂರ್ಣ ಸಂತೋಷದಿಂದ ಇರಲು ಸಾಧ್ಯವಾ ಎಂದು ಯೋಗಿ ದುರ್ಲಭಜೀ ಅವರಿಗೆ ಒಮ್ಮೆ ಯಾರೋ ಕೇಳಿದರು.
ಅದಕ್ಕೆ ಒಂದು ಕ್ಷಣ ಆಲೋಚಿಸಿದ ಯೋಗಿಜೀ ಅನಂತರ ಹೇಳಿದರು – ‘ಸಾಧ್ಯವಿದೆ’ ಅದನ್ನು ಕೇಳಿದವರು ತಕ್ಷಣ, ‘ಹೌದಾ? ಸಾಧ್ಯವಿದೆಯಾ? ಹೇಗೆ? ದಯವಿಟ್ಟು ತಿಳಿಸಿಕೊಡಿ’ ಎಂದರು. ಅದಕ್ಕೆ ಯೋಗಿಜೀ ಹೇಳಿದರು – ‘ಮೊದಲನೆಯದಾಗಿ, ಯಾವ ಹೆಂಗಸು ನಿಮ್ಮನ್ನು ನಗಿಸಿ ಖುಷಿಯಾಗಿಡುತ್ತಾಳೋ ಅವಳ ಜತೆ ಇರಿ. ಎರಡನೆಯದಾಗಿ, ಯಾವ ಹೆಂಗಸು ನಿಮಗೆ ತನ್ನ ಸಮಯವನ್ನು ಕೊಡುತ್ತಾಳೋ ಅವಳ ಜತೆ ಇರಿ. ಮೂರನೆಯದಾಗಿ, ಯಾವ ಹೆಂಗಸು ನಿಮ್ಮನ್ನು ಚೆನ್ನಾಗಿ ಆರೈಕೆ ಮಾಡಿ, ಯೋಗಕ್ಷೇಮ ನೋಡಿಕೊಳ್ಳುತ್ತಾಳೋ ಅವಳ ಜತೆ ಇರಿ. ನಾಲ್ಕನೆಯದಾಗಿ, ಯಾವ ಹೆಂಗಸು ನಿಮ್ಮನ್ನು ನಿಜಕ್ಕೂ ಪ್ರೀತಿಸು  ತ್ತಾಳೋ ಅವಳ ಜತೆ ಇರಿ ಮತ್ತು ಕೊನೆಯದಾಗಿ, ಈ ನಾಲ್ಕೂ ಹೆಂಗಸರಿಗೆ ಪರಸ್ಪರ ಪರಿಚಯವಿರದಂತೆ ನೋಡಿಕೊಳ್ಳಬೇಕು.’
ಅಂತೂ ವಯಸ್ಸಾಯ್ತು !ಕೆಲವು ದಿನಗಳ ಹಿಂದೆ, ಲೇಖಕಿ, ಪತ್ರಕರ್ತೆ ಶೋಭಾ ಡೇ ಕೋವಿಡ್ ಲಸಿಕೆ ಹಾಕಿಸಿಕೊಂಡಿದ್ದು ವಿವಾದವಾಯಿತು. ಪ್ರಧಾನಿಮೋದಿ ಅವರು ಲಸಿಕೆ ಹಾಕಿಸಿಕೊಳ್ಳುವಾಗ ಮಾಸ್ಕ್ ಧರಿಸಿರಲಿಲ್ಲ ಎಂದು ಲೇಖಕಿ, ಪತ್ರಕರ್ತೆ ಶೋಭಾ ಡೇ ಟ್ವೀಟ್ ಮಾಡಿದ್ದರು.ಆದರೆ ಪ್ರಧಾನಿ ಮಾಸ್ಕ್ ತೆಗೆದು ಕೈಯಲ್ಲಿ ಹಿಡಿದುಕೊಂಡಿದ್ದರು. ಆದರೆ ಶೋಭಾ ಡೇ ಲಸಿಕೆ ಹಾಕಿಸಿಕೊಳ್ಳುವಾಗ, ಮಾಸ್ಕ್ಧರಿಸಿರಲಿಲ್ಲ. ಪ್ರಧಾನಿಯವರನ್ನು ಟೀಕಿಸುವಾಗ ಇದ್ದ ನಿಮ್ಮ ನೈತಿಕತೆ ಈಗ ಎಲ್ಲಿಗೆ ಹೋಯಿತು ಎಂದು ಸಾಮಾಜಿಕಜಾಲತಾಣಗಳಲ್ಲಿ ಅವರನ್ನು ಜನ ತರಾಟೆಗೆ ತೆಗೆದುಕೊಂಡರು. ಇರಲಿ.
ತಾವು ಲಸಿಕೆ ಹಾಕಿಸಿಕೊಂಡಿದ್ದನ್ನು ಫೋಟೋ ಸಮೇತ ಶೋಭಾ ಡೇ ಟ್ವೀಟ್ ಮಾಡಿದ್ದನ್ನು ಗಮನಿಸಿದ ಉದ್ಯಮಿ ಹರ್ಷ ಗೋಯೆಂಕಾ ಹೀಗೆಪ್ರತಿಕ್ರಿಯಿಸಿದ್ದರು – ‘ಶೋಭಾ ಡೇ ಅವರಿಗೆ ನಲವತ್ತೈದು ವಯಸ್ಸಾಗಿದೆ ಎಂದು ಭಾವಿಸಿದ್ದೆ. ಆದರೆಮೊದಲ ಬಾರಿಗೆ ಅವರು ತಮಗೆ ಅರವತ್ತೈದಕ್ಕಿಂತ ಹೆಚ್ಚು ವಯಸ್ಸಾಗಿದೆ ಎಂಬುದನ್ನು ಈ ಮೂಲಕ ಅಧಿಕೃತವಾಗಿಒಪ್ಪಿ ಕೊಂಡಿದ್ದಾರೆ.’