ಇಡಿ ವಿಷ್ಯ ನೋಡ್ಕಂಡ್ರೆ ಸಾಕಾಗಿದೆ, ಸೀಡಿ ವಿಷ್ಯಕ್ ಬರ್ತಾರಾ ?
ತುಂಟರಗಾಳಿ
ಹರಿಪರಾಕ್‌
ಸಿನಿಗನ್ನಡ

ನಟ ಆದಿತ್ಯ ತಮ್ಮ ಮುಂದುವರೆದ ಅಧ್ಯಾಯ ಚಿತ್ರದ ಬಗ್ಗೆ ಕೆಟ್ಟದಾಗಿ ವಿಮರ್ಶ ಮಾಡಿರುವ ಯೂ ಟ್ಯೂಬರ್‌ಗಳ ಮೇಲೆ ರಾಂಗ್ ಆಗಿದ್ದಾರೆ. ಅಂದಹಾಗೆ ಇದೇನೂ ಹೊಸ ವಿಷಯ ಅಲ್ಲ, ಇತ್ತೀಚೆಗೆ ನಿರ್ದೇಶಕ ಎಪಿ ಅರ್ಜುನ್ ಕೂಡಾ ಕೆಟ್ಟದಾಗಿ ಸಿನಿಮಾ ವಿಮರ್ಶೆ ಮಾಡುವ ಯೂ ಟ್ಯೂಬರ್‌ಗಳ ಮೇಲೆ ಪೊಗರು ಚಿತ್ರದ ಪತ್ರಿಕಾ ಗೋಷ್ಠಿಯಲ್ಲಿ ಹರಿಹಾಯ್ದಿದ್ದರು.
ಇದು ಅದರ ಮುಂದುವರೆದ ಅಧ್ಯಾಯ ಅಷ್ಟೇ. ಆದರೆ ಆದಿತ್ಯ ತಮ್ಮ ಚಿತ್ರದ ಹೆಸರಿಗೆ ತಕ್ಕಂತೆ ಇನ್ನೂ ಸ್ವಲ್ಪ ಮುಂದುವರಿದು ವಾಣಿಜ್ಯ ಮಂಡಳಿಯ ಛೇಂಬರ್ ವರೆಗೂ ಈ ವಿಷಯವನ್ನು ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿ, ಯೂ ಟ್ಯೂಬರ್‌ಗಳಮೇಲೆ ಕ್ರಮ ತೆಗೆದುಕೊಳ್ಳುವ ಭರವಸೆ ಸಿಕ್ಕಿದ್ದರೂ ಛೇಂಬರ್ ಇನ್ನೂ ಯಾವ ಕ್ರಮ ತೆಗೆದುಕೊಂಡ ಬಗ್ಗೆ ವರದಿ ಆಗಿಲ್ಲ. ಆದರೆ ಈ ವಿಷಯಕ್ಕೆ ನೆಟ್ಟಿಗರು ಮಾತ್ರ ಇದು ಕೆಟ್ಟ ಬೆಳವಣಿಗೆ, ನಿಮ್ಮ ಸಿನಿಮಾ ನೋಡಿದವರೆಲ್ಲ, ಚೆನ್ನಾಗಿದೆ ಅಂತಲೇ ವಿಮರ್ಶೆ ಮಾಡಬೇಕಾ ಅಂತ ಪ್ರಶ್ನೆ ಕೇಳಿದ್ದಾರೆ.
ಇಲ್ಲಿ ಗಮನಿಸಬೇಕಾದ ವಿಷಯ ಅಂದ್ರೆ ಎಪಿ ಅರ್ಜುನ್ ಅಂದು ಇಂಥವರನ್ನೆ ಕರೆದು ಸರಿಯಾಗಿ ಬಾರಿಸಬೇಕು ಎಂದಿದ್ದರು. ಈಗ ಆದಿತ್ಯ ಕೂಡ ನನ್ಮಕ್ಳು, ಡಬ್ಬಾ ನನ್ಮಕ್ಳು ಎಂದೆ ಪದಪ್ರಯೋಗ ಮಾಡಿ, ಯೂ ಟ್ಯೂಬರ್‌ಗಳನ್ನ ಬಂದು ನಮ್ಮ ಸಿನಿಮಾದಲ್ಲಿ ಲೈಟ್, ಕ್ಯಾಮೆರಾ ಹೊರುವ ಕೆಲಸ ಮಾಡಿ ಎಂದಿದ್ದರು. ಹಾಗಾಗಿ ಇಲ್ಲಿ ವಿಷಯಕ್ಕಿಂತ ಅದನ್ನು ಹೇಳುವ ಭಾಷೆಯೇ ಸುದ್ದಿ ಮಾಡುತ್ತಿರೋದು ಸತ್ಯ. ಎಲ್ಲರನ್ನು ಕೆರಳಿಸಿರೋದು ಅವರು ಆಡಿದ ಭಾಷೆ ಅಷ್ಟೇ ಎನ್ನಬಹುದು. ಅದು ನಿಜ ಕೂಡ.
ಸಿನಿಮಾ ಚೆನ್ನಾಗಿದೆ ಅಂತ ವಿಮರ್ಶೆ ಮಾಡ್ತೀವಿ ದುಡ್ಡು ಕೊಡಿ ಅಂತ ಹಿಂದೆ ಬೀಳುವ ಯೂ ಟ್ಯೂಬರ್‌ಗಳು ಇರೋದು ಸತ್ಯ. ಅವರ ಈ ದಂಧೆ ನಿರ್ಮಾಪಕರ ಪಾಲಿಗೆ ಕಂಟಕವಾಗಿರೋದು ಕೂಡ ಸತ್ಯ. ಕೆಲವರಂತೂ ನಿರ್ಮಾಪಕರು ಹಣ ಕೊಡದಿದ್ದರೆ, ಸಿನಿಮಾ ವಿಮರ್ಶೆಯನ್ನ ರೋಸ್ಟ್ ಅಂತಲೇ ಕರೆದುಕೊಂಡು ಬಯ್ಯಲು ತುದಿಗಾಲಲ್ಲಿ ರೆಡಿಯಾಗಿರುತ್ತಾರೆ. ಆದರೆ ಅವರ ಈ ದಂಧೆಯನ್ನ ಆದಿತ್ಯ ನಯವಾದ ಮಾತುಗಳಲ್ಲಿ ಹೇಳಿ, ಅದರ ಬಗ್ಗೆ ಕ್ರಮ ತೆಗೆದುಕೊಳ್ಳಿ ಅಂತ ಹೇಳಬೇಕಿತ್ತು. ಅದರ ಬದಲಾಗಿ ವಿಮರ್ಶೆ ಮಾಡೋದೇ ತಪ್ಪು ಎನ್ನುವಂತೆ ಅವರು ಮಾತನಾಡಿರೋದು ಸರಿ ಅಲ್ಲ ಅನ್ನೋದು ಬಹುತೇಕರ ಅಭಿಪ್ರಾಯ.
ನೆಟ್ ಪಿಕ್ಸ್
ಈ ಸುರಾಪಾನ ಬಂದಿದ್ದೇ ಸುರರಿಂದ, ಅಂದ್ರೆ ದೇವತೆಗಳಿಂದ ಅಲ್ವಾ. ಅವರೇ ನಮಗೆ ಇದನ್ನೆ ಕಲಿಸಿದ್ದು. ಅದಕ್ಕೇ ಹೆಂಡನ ಪರಮಾತ್ಮ ಅಂತಾರೋ ಏನೋ ಗೊತ್ತಿಲ್ಲ. ಸರಿ, ಹಿಂಗೇ ಒಂದ್ಸಲ ದೇವಲೋಕದಿಂದ ನಾರದ ಭೂಮಿಗ್ ಬಂದಿದ್ದ. ಅವ್ನು ಅಲ್ಲಿ ಇಲ್ಲಿ ಬತ್ತಿ ಇಡೋ ಕೆಲ್ಸ ಮಾಡಿ ಸುಸ್ತಾಗಿ ಒಂದ್ ಬಾರಿಗೆ ಹೋಗಿ ಎಣ್ಣೆ ಕುಡಿಯೋಕ್ ಕೂತ್ಕೊಂಡ. ಅಲ್ಲಿ ಖೇಮು ವೆಯ್ಟರ್ ಕೆಲ್ಸ ಮಾಡ್ತಾ ಇದ್ದ. ನಾರದ ಬಂದ ಕೂಡಲೇ ಖೇಮು ಹೋಗಿ, ಸಾರ್ ಏನ್ ಕೊಡ್ಲಿ ಅಂದ. ಅದಕ್ಕೆ ನಾರದ ಒಂದ್ ಕ್ವಾರ್ಟರ್ ರಮ್ ಕೊಡಪ್ಪಾ ಅಂದ.
ಸರಿ ಖೇಮು ಹೋಗಿ ತಂದುಕೊಟ್ಟ. ನಾರದ ಒಂದ್ ಫುಲ್ ಕ್ವಾರ್ಟರ್ ಕುಡಿದ. ಅವನಿಗೆ ಅದು ಏನೂ ಏರಲಿಲ್ಲ. ಸರಿ ಅಂತ ಖೇಮುನ ಕರೆದು ಇನ್ನೊಂದ್ ಕ್ವಾರ್ಟರ್ ತರಿಸಿದ. ಕುಡಿದ. ಅದೂ ಏರಲಿಲ್ಲ. ಇನ್ನೊಂದಾಯ್ತು. ಫುಲ್ ಬಾಟ್ಲ್ ಆಯ್ತು. ನಾರದ ಸುಮ್ನೆ ಆರ್ಡರ್ ಮಾಡ್ತಾನೇ ಇದ್ದ. ಖೇಮು ತಂದ್ ಕೊಡ್ತಾ ಇದ್ದ. ಇವ್ನು ಕುಡಿತಾ ಇದ್ದ. ಸರಿ, ಎರಡ್ ಪುಲ್ ಬಾಟ್ಲ್ ಆಯ್ತು. ವೆಯ್ಟರ್ ಖೇಮು ನೋಡ್ತಾನೇ ಇದ್ದ. ಇವ್ನು ಮತ್ತೆ ಇನ್ನೊಂದ್ ಕ್ವಾರ್ಟರ್ ಆರ್ಡರ್ ಮಾಡೋಕೆ ಖೇಮುನ ಕರೆದ. ಖೇಮುಗೆ ಇವನು ಕುಡಿತಾ ಇರೋ ಪರಿ ನೋಡಿ ಸಿಕ್ಕಾಪಟ್ಟೆ ಆಶ್ಚರ್ಯ ಆಗಿತ್ತು.
ಇನ್ನೊಂದ್ ಕ್ವಾರ್ಟರ್ ತಂದು ಕೊಟ್ಟು, ಸಾರ್, ನಂಗೆ ಒಂದ್ ಡೌಟು, ನೀವು ಇಷ್ಟೊಂದ್ ಕುಡಿದ್ರೂ ನಿಮಗೆ ಒಂಚೂರೂ ಏರಿಲ್ಲವಲ್ಲ ಹೆಂಗೆ ಅಂದ. ಅದಕ್ಕೆ ನಾರದ, ಇ ಕಣಮ್ಮಾ, ಹೆಂಡ ಕುಡಿದ್ರೆ ಚಿತ್ತಾಗೋದು, ಕಿಕ್ ಹೊಡೆಯೋದು, ಏರೋದು, ಇದೆಲ್ಲ ಏನಿದ್ರೂ ಬರೀ ನಿಮ್ಮಂಥ ಮನುಷ್ಯರಿಗೆ, ನಾನು ನಾರದ, ದೇವಲೋಕದಿಂದ ಬಂದಿದೀನಿ ಅಂದ. ಆವಾಗ ವೆಯ್ಟರ್ ಖೇಮು ಅಂದ, ಹಾ, ಬಡ್ಡಿ ಮಗಂಗೆ ಇವಾಗ್ ಏರ್ತು ನೋಡು.
ಲೂಸ್ ಟಾಕ್ಸೀಡಿಲೇಡಿ (ಕಾಲ್ಪನಿಕ ಸಂದರ್ಶನ)ಏನ್ರೀ, ಮಾಜಿ ಮಿನಿಸ್ಟರ್ ಮೇಲೆ ಪೊಲೀಸ್ ಕಂಪ್ಲೇಂಟ್ ಕೊಟ್ಟಿದ್ದೀರಂತೆ?
ಮತ್ತೆ? ಕೆಲಸ ಮಾಡಿ, ಕೆಲಸ ಕೊಡಿಸದಿದ್ರೆ ಹೆಂಗೆ, ಜಾರ್ಕೊಳ್ಳೋಕೆ ಬಿಟ್ ಬಿಡ್ತೀವಾ..
ಸರಿ , ಸರಿ, ಅಂದಹಾಗೆ ವಿರೋಧ ಪಕ್ಷದವರು ನಿಮಗೆ ಸಪೋರ್ಟ್ ಮಾಡ್ತಾ ಇದ್ದಾರಂತೆಹೌದಾ?
ಏನೂ ಮಾಡೋಕಾಗಲ್ಲ, ಇಂಥ ಸೀಡಿ ಸಿಕ್ರೆ ಅವರು ಅದನ್ನ ಅಧಿಕಾರ ಏರುವ ಸೀಡಿ, (ಹಿಂದಿಯಲ್ಲಿ ಏಣಿ) ಮಾಡ್ಕೊತಾರೆ ಅಷ್ಟೇ.
ಡಿಕೆ ಶಿವಕುಮಾರ್ ಅವರ ಸಪೋರ್ಟ್ ನಿಮಗಿದೆಯಂತೆ ನಿಜಾನಾ?
ಅಯ್ಯೋ, ಅದೆಲ್ಲ ಸುಳ್ಳು ಕಣ್ರೀ, ಅವರಿಗೆ ಪಾಪ ಇಡಿ ವಿಷ್ಯ ನೋಡ್ಕೊಂಡ್ರೆ ಸಾಕಾಗಿದೆ, ಇನ್ನು ಸೀಡಿ ವಿಷ್ಯಕ್ಕೆ ಬರ್ತಾರಾ?
ಈ ಸೀಡಿ ಪ್ರಕರಣದಿಂದ ನಿಮ್ಮ ಸುತ್ತ ಮುತ್ತಲಿನ ಜನಗಳಿಂದ ಏನೂ ತೊಂದ್ರೆ ಆಗಿಲ್ವಾ
ಅವ್ರಿಂದ ಏನೂ ಆಗಿಲ್ಲ, ಆದ್ರೆ ಕೆಲವು ಯೂ ಟ್ಯೂಬರ್ಸ್ ಈ ಸಿನಿಮಾ ಬಗ್ಗೆ ಕೆಟ್ಟದಾಗಿ ರಿವ್ಯೂ ಮಾಡಿದ್ದಾರೆ. ಅವ್ರ್ ಮೇಲೆ ಕೇಸ್ ಹಾಕಬೇಕು ಅಂತಿದೀನಿ.
ಏನ್ರೀ ನೀವು ಒಳ್ಳೆ ಆದಿತ್ಯ ಅವ್ರ್ ಥರ ಮಾತಾಡ್ತೀರ, ಹೋಗ್ಲಿ, ಮುಂದೆ?
ಮುಂದೆ ನೋಡೋಣ, ಮೊದಲನೇ ಸಿನಿಮಾಗೆ ಒಳ್ಳೆ ಪ್ರತಿಕ್ರಿಯೆ ಬಂದಿದೆ. ಪ್ರೇಕ್ಷಕರು ಮತ್ತು ಮಾಧ್ಯಮದವರು ತುಂಬಾ ಪ್ರೋತ್ಸಾಹ ಕೊಟ್ಟಿದ್ದಾರೆ. ಸಾಧ್ಯ ಆದ್ರೆ ಇನ್ನೊಂದ್ ಪ್ರೊಡಕ್ಷನ್ ಮಾಡೋಣ.
ಲೈನ್ ಮ್ಯಾನ್
ಆಟೋಗ್ರಾಫ್ ಹಾಕಿಸಿ ಕೊಳ್ಳುವ ಹುಚ್ಚು ಅತಿರೇಕಕ್ಕೆ ಹೋದರೆ ಬರುವ ಖಾಯಿಲೆ
ಸೈನ್ ಫ್ಲೂ
ಒಂದು ಒಳ್ಳೆಯ ಉದ್ದೇಶಕ್ಕೆ ಸಹಿ ಸಂಗ್ರಹಿಸುವ ಅಭಿಯಾನ ಯಶಸ್ವಿಯಾದರೆ
ಇಂಡಿಯಾ ಈಸ್ ಸೈನಿಂಗ್
ಅದಕ್ಕೆ ಬ್ರ್ಯಾಂಡ್ ಅಂಬಾಸಿಡರ್
ಸೈನಾ ನೆಹ್ವಾಲ್
ಆರ್ಟ್ ಬಿಡಿಸುವವನುಆರ್ಟಿಸ್ಟ್, ಕೊನೆಗೆ ಅದರ ಕೆಳಗೆ ಸಹಿ ಮಾಡುವಾಗ
ಸೈನ್ – ಟಿಸ್ಟ್
ಆರ್ಟಿಸ್ಟ್ ಕೊಡುವ ಆಟೋಗ್ರಾಫ್
ಡಿ-ಸೈನ್
ನಾನು ಕೆಲಸ ಬಿಡ್ತಾ ಇದ್ದೀನಿ ಎಂದು ಬರೆದುಕೊಡುವಾಗ ಮಾಡುವ ಸಹಿ
ರಿ-ಸೈನ್
ರಜಾ ಕೇಳಿ ಬರೆದ ಪತ್ರಕ್ಕೆ ಹಾಕುವ ಸಹಿ
ರುಜು
ಆರ್ಟ್ ಆಫ್ ಸೈನಿಂಗ್ ಅನ್ನು ಏನಂತಾರೆ?
ಸೈನ್ಸ್
ಗಜಿಬಿಜಿ ಮಾಡದೆ ಎಲ್ಲರಿಗೂ ಅರ್ಥ ಆಗುವಂತೆ ಶಿಸ್ತಾಗಿ ಸೈನ್ ಮಾಡುವವನು
ಸೈನಿಕ