ಯಾವುದೆಲ್ಲ ಚಂದ ಎನ್ನುವ ಆ ಹಾಡೇ ಬಲು ಚೆಂದ
ತಿಳಿರುತೋರಣ
ಶ್ರೀವತ್ಸಜೋಶಿ
‘ಅಳಗೇ ಅಳಗೇ ಯೆದವುಂ ಅಳಗೇ…’ ಎಂಬೊಂದು ತುಂಬ ಚಂದದ ತಮಿಳು ಚಿತ್ರಗೀತೆಯನ್ನು ಹಿರಿಯ ಓದುಗಮಿತ್ರ, ಬೆಂಗಳೂರಿನ ಲಕ್ಷ್ಮೀನಾರಾಯಣ ಅವರು ನನಗೆ ಪರಿಚಯಿಸಿದರು. ನಾಲ್ಕು ತಿಂಗಳ ಹಿಂದಿನ ಅಂಕಣಬರಹವೊಂದರಲ್ಲಿ ‘ಪೂಮಾಲೈ ವಾಂಗಿ ವಂದಾನ್…’ ಎಂಬ ಇನ್ನೊಂದು ಎವರ್‌ಗ್ರೀನ್ ತಮಿಳು ಚಿತ್ರಗೀತೆಯ ಬಗ್ಗೆ ಬರೆದಿದ್ದಾಗ ಪ್ರತಿಕ್ರಿಯೆಯಲ್ಲಿಇದನ್ನವರು ಪ್ರಸ್ತಾವಿಸಿದ್ದರು.
ತನಗೇಕೆ ಇದು ಇಷ್ಟವಾಯಿತು ಎಂದು ಬಣ್ಣಿಸಿದ್ದರು. ಯುಟ್ಯೂಬ್ ಲಿಂಕ್ ಮತ್ತು ಹಾಡಿನ ಅರ್ಥವನ್ನು ಬಹಳ ಚಂದವಾಗಿ ಇಂಗ್ಲಿಷ್‌ನಲ್ಲಿ ವಿವರಿಸಿದ ಬ್ಲಾಗ್ ಬರಹವೊಂದರ ಕೊಂಡಿಯನ್ನೂ ಕೊಟ್ಟಿದ್ದರು. ನಾನು ಮೊದಲಿಗೆ ಬ್ಲಾಗ್ ಓದಿ ಆಮೇಲೆ ಹಾಡಿನ ವಿಡಿಯೋ ನೋಡಿದೆ. ಮೊದಲ ನೋಟಕ್ಕೇ ನನಗೆ ಸಿಕ್ಕಾಪಟ್ಟೆ ಪ್ರೀತಿಯುಕ್ಕಿದ್ದನ್ನು ಅನುಭವಿಸಿದೆ. ಆವತ್ತಿನ ದಿನವೇ ಮತ್ತೆಮತ್ತೆ ಹತ್ತಿಪ್ಪತ್ತು ಸಲವಾದರೂ ವಿಡಿಯೋ ಪ್ಲೇ ಮಾಡಿ ಸವಿದೆನೋ ಏನೋ.
ಆಮೇಲೆ ಗೊತ್ತಾಯ್ತು, 2014ರಲ್ಲಿ ಬಿಡುಗಡೆಯಾದ ‘ಶೈವಮ್’ ತಮಿಳು ಚಿತ್ರದ ಹಾಡು ಇದು, ಆಗಲೇ ತುಂಬ ಜನಪ್ರಿಯ ವಾಗಿತ್ತು, ಇದನ್ನು ಹಾಡಿದ ಉತ್ತರಾ ಉನ್ನಿಕೃಷ್ಣನ್ (ಆಗಿನ್ನೂ ಅವಳಿಗೆ ಎಂಟು ವರ್ಷ ವಯಸ್ಸು!) ಅತ್ಯುತ್ತಮ ಹಿನ್ನೆಲೆ ಗಾಯಕಿ ಎಂದು ಆ ವರ್ಷ ರಾಷ್ಟ್ರಪ್ರಶಸ್ತಿ ಪಡೆದಿದ್ದಳು, ಪ್ರತಿಭಾನ್ವಿತ ಬಾಲನಟಿ ಸಾರಾ ಅರ್ಜುನ್ ತೆರೆಯ ಮೇಲೆ ಹಾಡಿ ಅಭಿನಯಿಸಿ ಪ್ರೇಕ್ಷಕರ ಹೃದಯ ಗೆದ್ದಿದ್ದಳು ಮುಂತಾದ ವಿವರಗಳು. ಇಂಥದೊಂದು ಚಂದದ ಹಾಡಿನ ಬಗ್ಗೆ ಇಷ್ಟು ವರ್ಷ ಅಜ್ಞಾನಿ ಯಾಗಿದ್ದೆನಲ್ಲ ಎಂದು ಒಮ್ಮೆ ಅನಿಸಿತು. ಅದಕ್ಕೆಂದೇ ಲಕ್ಷ್ಮೀ ನಾರಾಯಣ ರಿಗೊಂದು ಥ್ಯಾಂಕ್ಯೂ ತಿಳಿಸಿದೆ.
ಈಗ ಬಹುತೇಕ ದಿನಕ್ಕೊಮ್ಮೆ ಎನ್ನುವಂತೆ ಈ ಹಾಡನ್ನು ನೋಡುತ್ತೇನೆ ಅಥವಾ ಕೇಳುತ್ತೇನೆ. ಇದರ ಬೇರೆಬೇರೆ ಇನ್ಸ್‌ಟ್ರು ಮೆಂಟಲ್ ಆವೃತ್ತಿಗಳನ್ನೂ ಯುಟ್ಯೂಬ್‌ನಿಂದ ಸಂಗ್ರಹಿಸಿದ್ದು ಅವುಗಳನ್ನೂ ಆಲಿಸುತ್ತೇನೆ. ಕೋವಿಡಾಯಣದಿಂದ ಮಂಕು ಕವಿದ ಮನಸ್ಸಿಗೆ ಈ ಹಾಡಿನ ಸೇವನೆಯನ್ನೂ ಒಂದು ಹಿತಕರ ಟಾನಿಕ್ ಆಗಿಸಿದ್ದೇನೆ. ಏನಿದೆ ಇದರಲ್ಲಿ ಅಂಥ ವಿಶೇಷ?
ಉತ್ತರಾ ಉನ್ನಿಕೃಷ್ಣನ್ ಮತ್ತು ಸಾರಾ ಅರ್ಜುನ್ ಅಲ್ಲದೆ ಬೇರೆ ಕಾರಣಗಳೂ ಇವೆ: ಮೊದಲ ಸಲ ಕೇಳಿದಾಗಲೇ ಆಕರ್ಷಿಸುವ ಕರ್ನಾಟಕ ಶಾಸ್ತ್ರೀಯ ಸಂಗೀತದ ‘ಕಾನಡಾ’ ರಾಗ ಆಧಾರಿತ ಟ್ಯೂನ್; ಕಿವಿಗಳೊಳಗೆ ಪ್ರವೇಶಿಸಿದ್ದು ಸೀದಾ ಹೃದಯಕ್ಕೇ ಇಳಿಯುವಂತೆ ಸ್ವರಗಳನ್ನು ಜೋಡಿಸಿದ ಜಿ.ವಿ. ಪ್ರಕಾಶ ಕುಮಾರ್ ಅವರ ಸಂಗೀತ; ಕೂಡು ಕುಟುಂಬದ ಸುಂದರ ದೃಶ್ಯಾವಳಿಯನ್ನು ಅತಿಸೂಕ್ಷ್ಮ ಸಂಗತಿಗಳನ್ನೂ ಬಿಡದೆ ಹೆಣೆದ ನಿರ್ದೇಶಕ ಎ.ಎಲ್. ವಿಜಯ್ ಅವರ ಕಲಾತ್ಮಕ ಕುಸುರಿ. ಇದೆಲ್ಲದಕ್ಕೂ ಮಿಗಿಲಾಗಿ, ಸೌಂದರ್ಯೋಪಾಸನೆಯ ಹೊಸ ವ್ಯಾಖ್ಯೆ ಬರೆದ ನಾ.ಮುತ್ತು ಕುಮಾರ್ ಅವರ ಸಾಹಿತ್ಯ. ಇವರಾರ ಹೆಸರನ್ನೂ ನಾನು ಈ ಮೊದಲು ಕೇಳಿದ್ದಿಲ್ಲ. ಈಗ ನೋಡಿದರೆ ಒಬ್ಬೊಬ್ಬರೂ ಪ್ರತಿಭೆಯ ಗಣಿಗಳು, ಪುರಸ್ಕಾರಗಳ ಮಾಲೆ ಧರಿಸಿದವರು!
ರಾಷ್ಟ್ರಪ್ರಶಸ್ತಿಯೇನು, ನಾನೇ ಆಗಿದ್ದರೆ ಆಸ್ಕರ್‌ಗೂ ಶಿಫಾರಿಸುತ್ತಿದ್ದೆ. ಇರಲಿ, ಮುಖ್ಯವಾಗಿ ನಾನು ಹೊಗಳುತ್ತಿರುವುದು ಹಾಡಿನಸಾಹಿತ್ಯವನ್ನು. ಯಾವುದೇ ಚಿತ್ರಗೀತೆ ಕೇಳುವಾಗಲೂ ನನ್ನ ಗಮನ ಸಂಗೀತಕ್ಕಿಂತ ಸಾಹಿತ್ಯದ ಕಡೆಗೆ ಹೆಚ್ಚು. ಹಾಗಾಗಿಯೇಇಂಥವು ನನಗೆ ಅಚ್ಚುಮೆಚ್ಚು. ‘ಅಳಗು’ ಅಂದರೆ ಸೌಂದರ್ಯ ಎಂದು ಅರ್ಥ ಮಾಡಿಕೊಳ್ಳುವಷ್ಟು ತಮಿಳು ನನಗೆ ಬರುತ್ತದೆ. ಆಅಲ್ಪ ಜ್ಞಾನವನ್ನು ಮತ್ತು ಬ್ಲಾಗ್‌ನಲ್ಲಿದ್ದ ಇಂಗ್ಲಿಷ್ ತರ್ಜುಮೆ ಬಳಸಿಕೊಂಡು, ‘ಅಳಗೇ…’ ಹಾಡಿನ ಕನ್ನಡ ಭಾವಾರ್ಥಸಾರಾಂಶವೊಂದನ್ನು ತಯಾರಿಸಿದ್ದೇನೆ.
ಯಾವುದೇ ಹಾಡನ್ನಾಗಲಿ ಅರ್ಥವಾಗದೇ ಕೇಳುವುದನ್ನು ಪಾಯಸದಲ್ಲಿ ಮುಳುಗಿದ್ದೂ ರುಚಿ ಗೊತ್ತಾಗದ ಸೌಟಿಗೂ, ಅರ್ಥ ವರಿತುಕೊಂಡು ಕೇಳುವುದನ್ನು ಪಾಯಸದ ರುಚಿ ತಿಳಿಯುವ ನಾಲಗೆಗೂ ಹೋಲಿಸುತ್ತ ಹಿಂದೊಮ್ಮೆ ‘ಮಾನಸ ಸಂಚರರೇ…’ ಕೃತಿಯ ಭಾವಾನುವಾದ ಮಾಡಿದ್ದೆನಷ್ಟೆ, ಅದರಂತೆಯೇ ಇದೂ. ‘ಪ್ರಪಂಚದಲ್ಲಿ ಪ್ರತಿಯೊಂದರಲ್ಲೂ ಸೌಂದರ್ಯ ಇದೆ.
ಪ್ರೀತಿಯ ಬೆಳಕಿನಲ್ಲಿ ನೋಡಿದರೆ ಎಲ್ಲವೂ ಚಂದವಾಗಿ ಕಾಣುತ್ತದೆ. ಮಳೆ ಮಾತ್ರ ಚಂದವೇ? ಬಿರುಬಿಸಿಲಿಗೂ ಅಷ್ಟೇಸೌಂದರ್ಯ ಇದೆ! ಹೂವು ಮಾತ್ರ ಚಂದವೇ? ಬೀಳುತ್ತಿರುವ ಎಲೆಗೂ ತನ್ನದೇ ಆದ ಸೌಂದರ್ಯವಿದೆ. ನಗುಮುಖವನ್ನುನೋಡುವುದೇ ಒಂದು ಚಂದ; ಮಾತು ಮುಗಿದ ಮೇಲಿನ ಮೌನ ಕೂಡ ಅಷ್ಟೇ ಚಂದ. ಒಳ್ಳೆಯ ಉದ್ದೇಶದಿಂದ ಹೇಳಿದ ಒಂದುಸುಳ್ಳು ಸಹ ಚಂದ; ಸತ್ಯವಂತೂ ಯಾವಾಗಲೂ ಚಂದ!
ಮಧುರಕಂಠದ ಕೋಗಿಲೆಯು ಹಾಡುವಾಗ ಅದೇನು ಸಂಗೀತ ಸ್ವರಗಳನ್ನು ಅಭ್ಯಸಿಸಿ ಹಾಡುತ್ತದೆಯೇ? ಸಾವಿರ ಗರಿಗಳ ನವಿಲುನರ್ತಿಸುವಾಗ ತಾಳ – ಲಯಗಳ ಪಕ್ಕವಾದ್ಯ ಇಟ್ಟುಕೊಂಡು ಕುಣಿಯುತ್ತದೆಯೇ? ಸಾಗರದತ್ತ ಓಡುವ ನದಿಗೆ ಎಂದಾದರೂಸಾಥ್ ಬೇಕು ಅನಿಸಿದ್ದಿದೆಯೇ? ಸಮುದ್ರದಲ್ಲಿ ಭೋರ್ಗರೆವ ಅಲೆಗಳ ಸದ್ದಿಗೆ ಭಾಷೆ ಅಥವಾ ವ್ಯಾಕರಣದ ಹಂಗಿದೆಯೇ?ನಿಸರ್ಗದ ಸಹಜ ಸೌಂದರ್ಯಗಳು ಇವು. ಪ್ರೀತಿಭರಿತವಾಗಿ ನೋಡಿದರೆ ಇಡೀ ಪ್ರಪಂಚವೇ ಸುಂದರವಾಗಿದೆ ಅಂತನಿಸುವಂತೆಮಾಡುವವು. ಚಿಂತೆಗಳನ್ನು ಮರೆತರೆ ನಮ್ಮ ಜೀವನ ಸೌಂದರ್ಯಮಯ ಆಗುತ್ತದೆ.
ಎಳೆಯ ಹೃದಯವು, ಅದರಲ್ಲಿ ಬಿತ್ತರಿಸುವ ಭಾವನೆಗಳಿಂದಾಗಿ ಉಯ್ಯಾಲೆಯಂತೆ ಅತ್ತಇತ್ತ ಓಲಾಡುತ್ತದೆ. ಒಮ್ಮೆ ಪ್ರೀತಿಯಲ್ಲಿ ಮೀಯ್ಯುತ್ತದೆ, ಮತ್ತೊಮ್ಮೆ ದುಃಖದಲ್ಲಿ ಮುಳುಗುತ್ತದೆ. ಹಿಂದಿನದನ್ನು ನೆನಪಿಸಿಕೊಂಡು ಚಿಂತಿಸುವುದರಲ್ಲಿ ಅರ್ಥವಿಲ್ಲ. ಈ ಕ್ಷಣದ ಮಾಧುರ್ಯವನ್ನು ಹಿಗ್ಗಿನಿಂದ ಅನುಭವಿಸಬೇಕು. ಇದನ್ನು ಪಡೆದ ನಾವೆಷ್ಟು ಅದೃಷ್ಟವಂತರು ಎಂದು ಧನ್ಯರಾಗ ಬೇಕು. ಇದಕ್ಕಿಂತ ಮಿಗಿಲಾದ್ದು ಬೇರಿಲ್ಲ. ಅರಳಿದ ಸುಮವು ಬೀರುವ ಪರಿಮಳ ಚಂದ; ಅದಕ್ಕಿಂತಲೂ ಚಂದವೆಂದರೆ ನಮ್ಮದೇ ಹೃದಯವು ಬಿತ್ತರಿಸುವ ಪ್ರೀತಿಯ ಪರಿಮಳ!’
ಎಷ್ಟು ನಿಜ ಅಲ್ವಾ!? ಹಾಗೆ ನೋಡಿದರೆ ಚಂದವನ್ನು ಇಷ್ಟು ಚಂದವಾಗಿ ಅಲ್ಲದಿದ್ದರೂ ಅಲ್ಪಸ್ವಲ್ಪ ಬಣ್ಣಿಸಿದ ಚಿತ್ರಗೀತೆಗಳುನಮ್ಮ ಕನ್ನಡದಲ್ಲೂ ಹಲವಾರು ಬಂದಿವೆ. ತತ್‌ಕ್ಷಣಕ್ಕೆ ನೆನಪಾಗುವಂಥವು: ‘ಚಂದ ಚಂದ ಸಂಗಾತಿ ನೋಟವೇ ಚಂದ… ಅಂದಅಂದ ಗುಲಾಬಿ ತೋಟವೇ ಅಂದ’ (ಮಾನಸ ಸರೋವರ); ‘ಬಳ್ಳಿಗೆ ಹೂವು ಚಂದ ಹೂವಿಗೆ ದುಂಬಿ ಚಂದ ದುಂಬಿಯ ಗಾನಚಂದ ಗಾನದ ಸವಿಯು ಚಂದ| ಕಡಲ ಮುತ್ತೇ ಅಂದ ಮುತ್ತಿನ ಮೂಗುತಿ ಅಂದ ಮೂಗುತಿ ಹೆಣ್ಣಿಗೆ ಅಂದ ಹೆಣ್ಣಿನ ಕಣ್ಣೇ ಅಂದ’(ಭಲೇ ಹುಚ್ಚ); ಇನ್ನೊಂದು ಶಂಕರ್ ಗುರು ಚಿತ್ರದ್ದು – ಇದರಲ್ಲಿ ಚಂದವು ಚೆನ್ನ ಎಂದು ಬಳಕೆ ಯಾಗಿದೆ: ‘ಚೆಲುವೆಯ ನೋಟ ಚೆನ್ನ, ಒಲವಿನ ಮಾತು ಚೆನ್ನ, ಮಲ್ಲಿಗೆ ಹೂವೇ ನಿನ್ನ ನಗುವು ಇನ್ನೂ ಚೆನ್ನ|
ಕಾಮನಬಿಲ್ಲು ಚೆನ್ನ, ಸುಳಿವ ಮಿಂಚು ಚೆನ್ನ, ಹೊಳೆಯುವ ನಿನ್ನ ಕಣ್ಣ ಕಾಂತಿ ಇನ್ನೂ ಚೆನ್ನ| ತಣ್ಣನೆ ಗಾಳಿ ಚೆನ್ನ, ಹುಣ್ಣಿಮೆ ಚಂದ್ರ ಚೆನ್ನ, ನಿನ್ನನು ಸೇರಿ ನಿಂತ ನನ್ನ ಬಾಳೇ ಚೆನ್ನ| ಜಿಂಕೆಯ ಕಣ್ಣು ಚೆನ್ನ, ಹವಳದ ಬಣ್ಣ ಚೆನ್ನ, ಅರಗಿಳಿ ನಿನ್ನ ರೂಪ ಚೆನ್ನದಲ್ಲಿ ಚೆನ್ನ| ಬೆಳಗಿನ ಬಿಸಿಲು ಚೆನ್ನ, ಹೊಂಗೆಯ ನೆರಳು ಚೆನ್ನ, ಗೆಳತಿಯೇ ನಿನ್ನ ಸ್ನೇಹ ಚಿನ್ನಕಿಂತ ಚೆನ್ನ!’ಈಗ, ಈ ಚಿತ್ರಗೀತೆಗಳ ವಾಲ್ಯೂಮ್ ಸ್ವಲ್ಪ ಕಡಿಮೆ ಮಾಡಿ, ತುಸು ಗಂಭೀರ ಚಿಂತನೆಗೆ ಇಳಿಯುವಾ.
ಯಾವುದು ನಮಗೆ ಚಂದ ಅನಿಸುತ್ತದೆ? ಯಾಕೆ ಅನಿಸುತ್ತದೆ? ನಮಗೆ ಸುಂದರ ಅಂತನಿಸುವುದು ಇನ್ನೊಬ್ಬರಿಗೂ ಸುಂದರ ವಾಗಿಯೇ ಇರುತ್ತದೆಯೇ? ಇನ್ನೂ ಆಳವಾಗಿ ಯೋಚಿಸಿದರೆ – ಸೌಂದರ್ಯದಿಂದಾಗಿ ಸಾಮ್ರಾಜ್ಯಗಳು ಎದ್ದಿವೆ, ಬಿದ್ದಿವೆ; ತ್ಯಾಗ – ಬಲಿದಾನಗಳಾಗಿವೆ; ಅಗಾಧ ಪ್ರಮಾಣದಲ್ಲಿ ವಿಲಾಸ – ವಿಕೋಪಗಳೆರಡಕ್ಕೂ ಅದು ಕಾರಣವಾಗಿದೆ ಅಂತಾದರೆ ನಿಜವಾಗಿ ಯೂ ಸೌಂದರ್ಯ ಎಂದರೇನು? ಅದಕ್ಕೇಕೆ ಇಷ್ಟು ಮಹತ್ವ?
ಚಾರ್ಲ್ಸ್ ಡಾರ್ವಿನ್‌ನಂಥ ವಿಜ್ಞಾನಿಗಳು ಪ್ರತಿಪಾದಿಸಿದಂತೆ ಮನುಷ್ಯನಾಗಲೀ ಇತರ ಜೀವಿಗಳಾಗಲೀ ಹೊಂದಿರುವ ರೂಪ/ ಗುಣಲಕ್ಷಣಗಳು ಏನೋ ಒಂದು ಪ್ರಯೋಜನಕ್ಕಾಗಿಯೇ ಇರುತ್ತವೆ. ಪ್ರತಿಸ್ಪರ್ಧಿಗಿಂತ ಒಂದು ಕೈಮೇಲೆನಿಸುವುದುಅಂಥದೊಂದು ಪ್ರಯೋಜನ. ಸ್ಪರ್ಧೆ ಯಾವುದಕ್ಕೆ? ಪ್ರಾಕೃತಿಕ ಸಂಪನ್ಮೂಲ ಬಳಸಿ ಬದುಕುವುದಕ್ಕೆ. ಒಳ್ಳೆಯ ರೂಪಲಕ್ಷಣಹೊಂದಿರುವ ಜೀವಿ ಬದುಕುಳಿಯುತ್ತದೆ, ಪ್ರತಿಸ್ಪರ್ಧಿಯನ್ನು ಹಿಮ್ಮೆಟ್ಟುತ್ತದೆ, ವಂಶಾಭಿವೃದ್ಧಿಯ ಸಾಧ್ಯತೆ ಹೆಚ್ಚಿಸಿಕೊಳ್ಳುತ್ತದೆ.ಹಾಗೆ ಮುಂದುವರಿದ ವಂಶಕ್ಕೆ ರೂಪಲಕ್ಷಣಗಳು ಬಳುವಳಿಯಾಗಿ ಬರುತ್ತವೆ – ಕೆಲವು ವಂಶವಾಹಿ ಜೀನ್‌ಗಳ ಮೂಲಕ,ಕೆಲವು ‘ನೋಡಿ ತಿಳಿ ಮಾಡಿ ಕಲಿ’ ಮೂಲಕ. ಉಳಿವಿಗಾಗಿ ಹೋರಾಟ ಎಂಬುದು ನಮಗೆ ಗೊತ್ತಿರುವ ವಿಷಯವೇ.
ಗಮನಿಸ ಬೇಕಾದ್ದೆಂದರೆ ಉಳಿವನ್ನು ನಿರ್ಧರಿಸುವುದು ಮತ್ತು ನಿಯಂತ್ರಿಸುವುದು ಪ್ರಕೃತಿ. ಆದರೆ ಕೆಲವು ಜೀವಿಗಳ ರೂಪ ಲಕ್ಷಣಗಳು ನಿಜವಾಗಿಯೂ ಉಳಿವಿಗಾಗಿಯೇ ಇರುವುದು ಹೌದೇ ಎಂಬ ಸಂದೇಹ ಬರುತ್ತದೆ. ಗಂಡುನವಿಲಿನ ಅಷ್ಟುದ್ದದಬಾಲ (ಶೃಂಗಾರ ನರ್ತನದಲ್ಲಿ ಸೌಂದರ್ಯರಾಶಿ ನೀಡುವಂಥದು) ಉಳಿವಿಗೆ ಪೂರಕವೇ ಅಥವಾ ಮಾರಕವೆ? ಅದನ್ನುಹೊತ್ತುಕೊಂಡು ನಡೆದಾಡುವುದಕ್ಕೆ, ಹಾರುವುದಕ್ಕೆ ಅಪಾರ ಶಕ್ತಿ ಬೇಕು. ನವಿಲು ಅಂಥ ಬಲಶಾಲಿ ಪಕ್ಷಿಯೇನಲ್ಲ. ಸಿಂಗಾರದಬಾಲದಿಂದಾಗಿ ವೈರಿಗಳ ಕಣ್ಣಿಗೆ ಬೀಳುವ ಸಾಧ್ಯತೆಯೇ ಹೆಚ್ಚು.
ಉಳಿವಿಗಾಗಿ ಪ್ರಕೃತಿಯೊಡನೆ ಹೊಂದಾಣಿಕೆ ಅಂತಾಗಿದ್ದರೆ ನವಿಲಿನ ಉದ್ದದ ಬಾಲ ಕ್ರಮೇಣ ಅಳಿಸಿಹೋಗಬೇಕಿತ್ತು. ಹಾಗಾಗಿ ಸೌಂದರ್ಯವಿರುವುದು ಉಳಿವಿನ ಹೋರಾಟದ ಅಸ್ತ್ರವಾಗಿ ಅಲ್ಲ ಎಂದಾಯ್ತಲ್ಲ? ಲೈಂಗಿಕ ಆಕರ್ಷಣೆಗಾಗಿ ಸೌಂದರ್ಯವೆ? ಪ್ರಾಣಿ – ಪಕ್ಷಿಗಳಲ್ಲಿ ಆಕರ್ಷಕ ಬಣ್ಣ, ರೂಪ ವಿನ್ಯಾಸಗಳನ್ನೆಲ್ಲ ಗಮನಿಸಿದರೆ ಹೌದೆನಿಸುತ್ತದೆ. ನವಿಲಿನ ಉದಾಹರಣೆಯನ್ನೇ ತೆಗೆದುಕೊಂಡರೆ, ಹೆಣ್ಣನ್ನು ಆಕರ್ಷಿಸುವುದಕ್ಕಾಗಿ ಗಂಡಿನ ಸೌಂದರ್ಯ ಪ್ರದರ್ಶನ.
ಬಾಲದ ಉದ್ದ, ಪ್ರತಿಯೊಂದು ಗರಿಯ ವಿನ್ಯಾಸ, ಅರಳಿದಾಗಿನ ವಿಸ್ತಾರಗಳಿಂದ ಬೇರೆಬೇರೆ ಗಂಡುಗಳ ಸೌಂದರ್ಯದ ತುಲನೆಮಾಡುತ್ತದೆ ಹೆಣ್ಣುನವಿಲು. ಹೆಚ್ಚಿನೆಲ್ಲ ಪ್ರಾಣಿ – ಪಕ್ಷಿಗಳಲ್ಲಿ ಸಂಗಾತಿಯ ಆಯ್ಕೆಗೆ ಸೌಂದರ್ಯವೇ ಮುಖ್ಯವಾದ ಮಾನದಂಡ. ಮನುಷ್ಯರಲ್ಲೂ ಹಾಗೆಯೇ ಅಲ್ವಾ? ದೈಹಿಕ ಲಕ್ಷಣಗಳು, ಅಂಗಾಂಗಗಳ ಅನುಪಾತ, ಮುಖಚರ್ಯೆ, ಚಲನವಲನ, ಚರ್ಮದ ಬಣ್ಣ… ಇನ್ನೂ ಏನೋನೋ ಅಂಶಗಳಿಂದ ವ್ಯಕ್ತಿಯ ಸೌಂದರ್ಯ ಮತ್ತು ಅದನ್ನು ಆಸ್ವಾದಿಸುವವರ ಸೌಂದರ್ಯ ಪ್ರಜ್ಞೆ ನಿರ್ಧಾರವಾಗುತ್ತದೆ. ಒಬ್ಬರಿಗೆ ಸುಂದರವೆನಿಸಿದ್ದು ಇನ್ನೊಬ್ಬರಿಗೆ ಸುಂದರವೆನಿಸಬೇಕಿಲ್ಲ.
ವಿಭಿನ್ನ ಅಭಿರುಚಿ, ಆಸೆ – ಆಕಾಂಕ್ಷೆ, ಪ್ರಾಶಸ್ತ್ಯಗಳು ಯಾವುದು ಸುಂದರ ಮತ್ತು ಯಾವುದು ಸುಂದರವಲ್ಲ ಎಂಬುದನ್ನುನಿರ್ಧರಿಸುತ್ತವೆ. ಸೌಂದರ್ಯಕ್ಕೆ ಒಬ್ಬೊಬ್ಬರದೂ ಒಂದೊಂದು ಅರ್ಥ ಅಂತಾದರೆ ಅದಕ್ಕೊಂದು ನಿರ್ದಿಷ್ಟ ವ್ಯಾಖ್ಯೆ ಇಲ್ಲವೆ? ಹಾಗೆಯೇ, ಸೌಂದರ್ಯದ ಉಪಯೋಗವೇನು? ಲೈಂಗಿಕ ಆಕರ್ಷಣೆಗಷ್ಟೇ ಸೌಂದರ್ಯ ಎನ್ನಲಿಕ್ಕಂತೂ ಖಂಡಿತ ಸಾಧ್ಯವಿಲ್ಲ. ಮನುಷ್ಯರಾಗಿ ನಾವು ನವಿಲಿನಲ್ಲಿ ಕಾಣುವ ಸೌಂದರ್ಯವೇನೂ ಅದರ ಮೇಲಿನ ಲೈಂಗಿಕ ಆಸಕ್ತಿಯಿಂದಲ್ಲ. ಆದರೂ ಎಷ್ಟೊಂದು ಚಂದದ ನವಿಲು ಎಂದು ಹೇಳುತ್ತೇವಲ್ಲ? ಜೋಗ ಜಲಪಾತದ್ದು ಮಂತ್ರಮುಗ್ಧ ಗೊಳಿಸುವ ಸೌಂದರ್ಯರಾಶಿ ಎಂದು ಬಣ್ಣಿಸುತ್ತೇವೆ, ನಾವೇನು ಅದನ್ನು ಮದುವೆಯಾಗ್ತೀವಾ?
ಸೂರ್ಯಾಸ್ತದ ಹೊತ್ತು ಆಗಸದಲ್ಲಿ ಬಣ್ಣಗಳ ಚಿತ್ತಾರ, ಭೂಲೋಕದ ಸ್ವರ್ಗವೆನಿಸಿದ ಕಾಶ್ಮೀರದ ಕಣಿವೆ, ಪ್ರೇಮಪರಾಕಾಷ್ಠೆಯ ಗುರುತಾದ ತಾಜಮಹಲ್, ಬೇಲೂರಿನಲ್ಲಿ ಕಾವ್ಯವಾದ ಶಿಲೆ, ರವಿವರ್ಮನ ಕುಂಚದ ಕಲೆ, ಚೈತ್ರದಲ್ಲಿ ಚಿಗುರಿದ ಹೂಬನ, ಇಬ್ಬನಿಯಿಂದ ತೊಯ್ದ ಕೆಂಗುಲಾಬಿ ಹೂ, ಅದನ್ನು ಮುಡಿದು ಮುಖವರಳಿಸಿದ ತರುಣಿ, ಕೊರಳಲ್ಲಿ ಗೆಜ್ಜೆ ಕಟ್ಟಿಕೊಂಡು ಛಂಗನೆ ಜಿಗಿವ ಕರು, ಕಾಲ್ಬೆರಳನ್ನು ಕೈಯಲ್ಲಿ ಹಿಡಿದು ಬಾಯಿಯಲ್ಲಿಟ್ಟುಕೊಂಡಿರುವ ಬಾಲಕೃಷ್ಣನಂತೆ ನಗುವ ಪುಟ್ಟ ಮಗು… ಸೌಂದರ್ಯವೆಂದು ನಾವು ಗುರುತಿಸುವ ವಿಷಯಗಳು ಒಂದೇ ಎರಡೇ!
ಇವುಗಳಲ್ಲೆಲ್ಲ ನಮ್ಮ ಕಣ್ಮನಗಳನ್ನು ತಣಿಸುವ ಒಂದು ವಿಶೇಷ ಶಕ್ತಿ ಇದೆ. ಕವಿ ಜಾನ್ ಕೀಟ್ಸ್ ಹೇಳಿಲ್ಲವೇ –        .  ಯಾವುದು ನಮ್ಮ ಮನಸ್ಸಿಗೆ ಹಿತಕರ ಅನುಭವ ಕೊಡುತ್ತದೋ ಅದು ಚಂದವೆನಿಸುತ್ತದೆ. ಅದರೊಡನೆಒಡನಾಟದ ಆಸೆಯಾಗುತ್ತದೆ. ತದ್ವಿರುದ್ಧವಾಗಿ, ಅಸಹ್ಯ ವೆನಿದ್ದನ್ನು ದೂರವಿಡುತ್ತೇವೆ. ಹಾಗಾದರೆ, ಹಿತಾನುಭವ ಕೊಡುವು ದನ್ನು ಸೌಂದರ್ಯ ಎನ್ನೋಣವೇ? ಹುಲಿಯನ್ನೂ ನಾವು ಅಪ್ರತಿಮ ಸೌಂದರ್ಯವುಳ್ಳದ್ದು ಎಂದು ಬಣ್ಣಿಸುತ್ತೇವೆ!
ಹಾಗಂತ ಹುಲಿಯ ಸಾಮೀಪ್ಯವನ್ನು ಬಯಸುತ್ತೇವೆಂದಲ್ಲ. ಸೌಂದರ್ಯಕ್ಕೆ ಸಂದರ್ಭವೂ ಮುಖ್ಯವಾಗುತ್ತದೆ. ನಮಗೆಹುಲಿಯ ಚಿತ್ರ ಸುಂದರವೆನಿಸಬಹುದು. ಭದ್ರವಾದ ಪಂಜರದೊಳಗೆ ಇರುವ ಹುಲಿ ತುಂಬಾ ಚಂದ ಕಾಣಬಹುದು. ಅದೇ ಹುಲಿ ಕಾಡಿನಲ್ಲಿ ಹತ್ತಡಿ ದೂರದಲ್ಲಿ ಎದುರಾಗಿ ಗರ್ಜಿಸಿದರೆ? ಆಗದರ ಸೌಂದರ್ಯ ಏನಾಯ್ತು? ಹುಲಿ ತುಂಬಾ ಸುಂದರ ಪ್ರಾಣಿ ಎನ್ನುವ ನಮ್ಮ ಸೌಂದರ್ಯಪ್ರಜ್ಞೆ ಎಲ್ಲಿಗೆ ಹೋಯ್ತು? ಮನುಷ್ಯನ ಬಹಳಷ್ಟು ಚಟುವಟಿಕೆಗಳಿಗೆ ಸೌಂದರ್ಯ ಒಂದು ಪ್ರೇರಣಾಶಕ್ತಿ.
ಆಧುನಿಕ ಯುಗದ ಬಂಡವಾಳಶಾಹಿ ಉದ್ಯಮಗಳು – ಫ್ಯಾಷನ್ ಇಂಡಸ್ಟ್ರಿ, ಜಾಹಿರಾತು ಉದ್ಯಮ, ಸಿನೆಮಾ, ಟಿವಿ ದೃಶ್ಯ ಮಾಧ್ಯಮ – ಎಲ್ಲವೂ ಜನರ ಸೌಂದರ್ಯಪ್ರಜ್ಞೆಯ ಬುನಾದಿಯ ಮೇಲೆಯೇ ನಿಂತಿವೆ. ಸಾಮಾಜಿಕ ಸ್ತರದಲ್ಲಿ ಮನುಷ್ಯನ ಸೌಂದರ್ಯಾನ್ವೇಷಣೆ ಕೆಲವೊಮ್ಮೆ ತರ್ಕಹೀನವೆನಿಸಬಹುದು; ಇತರ ವಸ್ತುಗಳಲ್ಲಿ ಸೌಂದರ್ಯ ಕಂಡು ಆನಂದಿಸುವುದನ್ನು ಅರಿಯದವರು ಸ್ವತಃ ತಮ್ಮಲ್ಲೂ ಸೌಂದರ್ಯವಿಲ್ಲವೆಂದು ಕೊರಗಬಹುದು.
ತನಗೆ ಸುಂದರವಾಗಿ ಕಂಡದ್ದು ಇತರರಿಗೆ ಅಸಹ್ಯವೆನಿಸಿ ತಾನು ನಗೆಪಾಟಲಾಗಬಹುದೆಂದು ವ್ಯಥೆ ಪಡಬಹುದು. ಅಂತೂಹಿತಾನುಭವ ಒದಗಿಸಬೇಕಿದ್ದ ಸೌಂದರ್ಯ (ಅಥವಾ ಅದರ ಇಲ್ಲದಿರುವಿಕೆ) ಮನುಷ್ಯನನ್ನು ಹೈರಾಣಾಗಿಸಬಹುದು.ಯಶಸ್ಸನ್ನು ಸೌಂದರ್ಯದೊಂದಿಗೆ ತಳುಕುಹಾಕಿರುವುದೂ ಇದಕ್ಕೆ ಕಾರಣ. ಭವ್ಯವಾದ ಬಂಗ್ಲೆಗಳು, ಕಾರುಬಾರಿಗೆ ತಕ್ಕಂತೆ ಕಾರ್‌ಗಳು – ಬಾರ್‌ಗಳು, ಐಷಾರಾಮಿ ರೆಸ್ಟೊರೆಂಟ್ ಗಳು… ಸಮಾಜದಲ್ಲೊಂದು ಉನ್ನತ ಅಂತಸ್ತು ಅಂದರೆ ಅದೇನೇ ಎಂಬ ನಂಬಿಕೆ; ಅವುಗಳ ಅಂದಚಂದ ಕೊಂಡಾಡಿದರೇನೇ ಅದು ಸೌಂದರ್ಯಪ್ರಜ್ಞೆ; ಅಗ್ಗದ ವಸ್ತುಗಳನ್ನು ಇಷ್ಟಪಡುವವರ ಸೌಂದರ್ಯಪ್ರಜ್ಞೆಯೂ ಚೀಪ್ ಎಂಬ ಭಾವನೆ.
ಅದಕ್ಕೆ ತಕ್ಕಂತೆ ಜಾಹಿರಾತುಗಳಲ್ಲಿ ಚೆಲುವಿನ ಖನಿಗಳಾದ ರೂಪದರ್ಶಿಗಳು ಬಳಸುವ ವಸ್ತುಗಳನ್ನೇ ನೀವೂ ಬಳಸಿ ಎಂದು ಬ್ರೈನ್‌ವಾಷಿಂಗ್. ಸೌಂದರ್ಯವನ್ನು ಅವರವರ ಭಾವಕ್ಕೆ ಅವರವರ ಭಕುತಿಗೆ ತಕ್ಕಂತೆ ಇರಗೊಡದೆ, ‘ಇದೇ ಸೌಂದರ್ಯ, ಅದು ಸೌಂದರ್ಯವಲ್ಲ’ ಎನ್ನುವ ಮಿಥ್ಯೆಗಳು. ಸ್ನಿಗ್ಧ ಸೌಂದರ್ಯವನ್ನೂ, ಅದನ್ನು ಆಸ್ವಾದಿಸುವ ಮುಗ್ಧ ಮನಸ್ಸನ್ನೂ ಕಲುಷಿತ ಗೊಳಿಸಿ ಒಟ್ಟು ಅಧ್ವಾನ.
ಕೆಲವೊಮ್ಮೆ ಸೌಂದರ್ಯಪ್ರಜ್ಞೆ ನಮ್ಮ ಅಂತರಾಳದಿಂದಷ್ಟೇ ಅಲ್ಲ, ಬೇರೆಯವರಿಂದಲೂ ನಿರ್ಣಯವಾಗುತ್ತದೆ. ಇತರರುಚಂದವಿದೆಯೆಂದರೆ, ಆ ವಸ್ತು ನಮಗೂ ಚಂದ ಕಾಣುತ್ತದೆ, ಇಷ್ಟವಾಗುತ್ತದೆ, ಬೇಕೆನಿಸುತ್ತದೆ. ಬಂಗಾರದ ಒಡವೆಗಳನ್ನುಒಟ್ಟುಹಾಕಿ ಲಾಕರ್‌ನಲ್ಲಿಡುವವರ ಪರಿಸ್ಥಿತಿ ಇದೇ. ಇಲ್ಲದಿದ್ದರೆ ಸಾಮಾಜಿಕವಾಗಿ ದೊಡ್ಡ ಕಂದಕವನ್ನು ಸೃಷ್ಟಿಸುವ ಬೆಳವಣಿಗೆ. ಸೌಂದರ್ಯಕ್ಕೆ ವ್ಯಾಖ್ಯೆ ಕಟ್ಟುವ ಸಂದರ್ಭವನ್ನು, ದೃಷ್ಟಿಕೋನ ವನ್ನು ನಾವು ಸರಿಪಡಿಸಿಕೊಳ್ಳಬೇಕು. ಶ್ರೀಮಂತರ ಮನೆಯಲ್ಲಿ ಚಿನ್ನದ ಸರಪಳಿ ಕಟ್ಟಿಸಿಕೊಂಡು ಮೆತ್ತನೆ ಹಾಸಿಗೆ ಮೇಲೆ ಮಲಗುವ ವಿಚಿತ್ರರೂಪಿ ನಾಯಿಗಿಂತ ಉಂಡಾಡಿ ಬೀದಿನಾಯಿಯೇ ನೋಡುವುದಕ್ಕೆ ಸುಂದರ. ಆದರೆ ಶ್ರೀಮಂತರ ಮನೆಯ ನಾಯಿ ಎಂಬ ಕಾರಣದಿಂದ ಅದೇ ಚಂದ ಎನ್ನುತ್ತೇವೆ.
ಇಪ್ಪತ್ತೈದು ವರ್ಷ ಹಳೆಯ ಫಿಯಟ್ ಕಾರು ಇನ್ನೂ ರನ್ನಿಂಗ್ ಕಂಡಿಷನ್‌ನಲ್ಲಿದ್ದು ಸವಿನೆನಪುಗಳ ಬುತ್ತಿಯೇ ಆಗಿದ್ದರೂ, ಈಗ ತಾನೆ ಷೋರೂಮ್‌ನಿಂದ ತಂದುನಿಲ್ಲಿಸಿದ ಮರ್ಸಿಡಿಸ್ ಕಾರು ವಾಹ್… ಬ್ಯೂಟಿಫುಲ್ ಆಗುತ್ತದೆ. ಏಕೆ? ವ್ಯಕ್ತಿಗತ ಸೌಂದರ್ಯವು ಬರೀ ದೈಹಿಕ ಲಕ್ಷಣ, ಚರ್ಮದ  ಬಣ್ಣ, ಅಂಗಸೌಷ್ಠವಗಳಿಂದಲೇ ನಿರ್ಧರಿತವಾಗುವುದಲ್ಲ. ಅದೇನಿದ್ದರೂ ‘ಸ್ಕಿನ್ ಡೀಪ್ ಬ್ಯೂಟಿ’ ಅಷ್ಟೇ. ಸೌಂದರ್ಯ ವಿರುವುದು ವ್ಯಕ್ತಿಗಲ್ಲ, ವ್ಯಕ್ತಿತ್ವಕ್ಕೆ. ಅದನ್ನು ಗುರುತಿಸಿ ಆಸ್ವಾದಿಸುವುದೇ ನಿಜವಾದ ಸೌಂದರ್ಯೋಪಾಸನೆ. ಈ ಸರಳ ಸತ್ಯವನ್ನರಿತು ಎಲ್ಲರೂ ಸೌಂದರ್ಯದ ಹೊಸ ವ್ಯಾಖ್ಯೆಯನ್ನು ಅಳವಡಿಸಿ ದಾಗಷ್ಟೇ, ಅತಿರೇಕವಾಗಿರುವ ಪೊಳ್ಳು ಪ್ರತಿಷ್ಠೆಗಳೆಲ್ಲ ಸ್ವಲ್ಪ ವಾದರೂ ತಗ್ಗಬಹುದು.
ಕಷ್ಟವಿದೆಯೇ ಅಂಥ ಬದಲಾವಣೆ? ಏನಿಲ್ಲ, ಒಂದಿಷ್ಟು ಒಳ್ಳೆಯ ಆಲೋಚನೆಗಳ ವಿನಿಮಯ, ಇತರರಲ್ಲಿರುವ ಸೌಂದರ್ಯದ ಬಗ್ಗೆ ಅಸೂಯೆಯ ಬದಲು ಪ್ರಶಂಸೆಯ ಎರಡು ಒಳ್ಳೆಯ ಮಾತು, ಒಂದು ಮುಗುಳ್ನಗು, ತೆರೆದ ಮನಸ್ಸು, ತೆರೆದ ಹೃದಯ, ಎಲ್ಲಕ್ಕಿಂತ ಹೆಚ್ಚಾಗಿ ಸದಾ ತೆರೆದ ಒಳಗಣ್ಣು – ಇಷ್ಟಿದ್ದರೆ ಸಾಕು. ಏಕೆಂದರೆ ಸೌಂದರ್ಯ ವಿರುವುದು ನೋಡುಗನ ಕಣ್ಣಿನಲ್ಲಿ. ನಿಜವಾದ ಸೌಂದರ್ಯ ವಿರುವುದು ನೋಡುಗನ ಒಳಗಣ್ಣಿನಲ್ಲಿ. ‘ಅಳಗೇ ಅಳಗೇ…’ ಹಾಡಿನಲ್ಲಿರುವಂತೆ – ಪ್ರಪಂಚದಲ್ಲಿ ಪ್ರತಿಯೊಂದರಲ್ಲೂ ಸೌಂದರ್ಯ ಇರುತ್ತದೆ. ಪ್ರೀತಿಯ ಬೆಳಕಿನಲ್ಲಿ ನೋಡಿದರೆ ಎಲ್ಲವೂ ಚಂದವಾಗಿ ಕಾಣುತ್ತದೆ. ಕೊನೆಗೆ ನಮ್ಮದೇ ಅಂತರಂಗವೂ!