ಸರ್ಕಾರದಲ್ಲಿ ಇಂಥ ಮಾಣಿಕ್ಯಗಳು ಹೆಚ್ಚಾಗಲಿ
ನಾಡಿಮಿಡಿತವಸಂತ ನಾಡಿಗೇರ
ದೇಶದ ಐದು ರಾಜ್ಯಗಳಲ್ಲಿ (ಪುದುಚೇರಿ ಕೇಂದ್ರಾಡಳಿತ ಪ್ರದೇಶ) ಈಗ ಚುನಾವಣೆ ಭರಾಟೆ. ಪಶ್ಚಿಮ ಬಂಗಾಳದಲ್ಲಂತೂ ಮೋದಿ – ದೀದಿ ನಡುವೆ ಜಂಗಿಕುಸ್ತಿಯೇ ನಡೆದಿದೆ.
ತಮಿಳುನಾಡಿನಲ್ಲಿ ದ್ರಾವಿಡ ಪ್ರಾಣಾಯಾಮ. ಕೇರಳದಲ್ಲಿ ಕೆರಳಿದ ಕದನ. ಚುನಾವಣೆ ಎಂದಮೇಲೆ ಅಭ್ಯರ್ಥಿಗಳ ಆಯ್ಕೆ, ನಾಮಪತ್ರ ಸಲ್ಲಿಕೆ ಇತ್ಯಾದಿಗಳು ಇದ್ದೇ ಇರುತ್ತವೆ. ನಾಮಪತ್ರ ಸಲ್ಲಿಸುವಾಗ ಉಮೇದುವಾರರು ತಮ್ಮ ಆಸ್ತಿ ಘೋಷಣೆ ಮಾಡಬೇಕು. ಹಾಗೆಯೇ ಅವರಿಗೆ ಸಂಬಂಧಿಸಿದ ನಾನಾ ಬಗೆಯ ವಿವರಗಳನ್ನು ಕೂಡ ಕೊಡಬೇಕಾಗುತ್ತದೆ. ಆದರೆ ಇದು ಒಂದು ಸಂಪ್ರದಾಯದಂತೆ, ಕೆಲವೊಮ್ಮೆ ಪ್ರಹಸನದಂತೆ ಭಾಸವಾಗುತ್ತದೆ. ಏಕೆಂದರೆ ಕೆಲವು ಅಭ್ಯರ್ಥಿಗಳ ವಿವರ ನೋಡಿ ನಗಬೇಕೊ, ಅಳಬೇಕೊ ಗೊತ್ತಾಗುವುದಿಲ್ಲ.
ಒಂದಷ್ಟು ಸ್ಯಾಂಪಲ್ಲುಗಳು ಹೀಗಿರುತ್ತವೆ:ಬ್ಯಾಂಕಿನಲ್ಲಿರುವ ಹಣ ಕೆಲವು ಸಾವಿರ ರು; ಸ್ವಂತ ವಾಹನವಿಲ್ಲ; ಅವರ ಹಾಗೂ ಹೆಂಡತಿಯ ಹೆಸರಿನಲ್ಲಿ ಸಾಲ – ಹೀಗೆ ಸಾಗುತ್ತದೆ. ಅವರು ಮಾಜಿ ಪ್ರಧಾನಿಯೋ, ಮಾಜಿ ಮುಖ್ಯಮಂತ್ರಿಯೋ, ಮಾಜಿ, ಹಾಲಿ ಮಂತ್ರಿಯೋ ಆಗಿರುತ್ತಾರೆ. ಈಗೀಗ ರಾಜಕಾರಣಕ್ಕೆ ದೊಡ್ಡ ದೊಡ್ಡ ಕುಳಗಳು ಬರುತ್ತಿರುವ ಕಾರಣ ಮತ್ತೊಂದು ವೈರುಧ್ಯವೂ ಕಾಣುತ್ತದೆ. ಅಂಥ ಅನೇಕರು ಸಾವಿರಾರು ಕೋಟಿ ರು. ಆಸ್ತಿ, ಐಷಾರಾಮಿ ಕಾರುಗಳು, ಬಂಗಲೆಗಳು, ಹೂಡಿಕೆಗಳುಇತ್ಯಾದಿಯನ್ನು ತಮ್ಮ ಆದಾಯದಲ್ಲಿ ತೋರಿಸಿರುತ್ತಾರೆ.
ಅಂದರೆ ಇಂದಿನ ರಾಜಕಾರಣ ಎಂದರೆ ಬಹುತೇಕವಾಗಿ ‘ಹಣಕ್ಕಾಗಿ ಅಧಿಕಾರ ಮತ್ತು ಅಧಿಕಾರಕ್ಕಾಗಿ ಹಣ’ ಎಂಬಂತಾಗಿದೆ.ಹಾಗಾಗಿಯೇ ಚುನಾವಣೆಯಲ್ಲಿ ಹಣ ಬಲ, ತೋಳ್ಬಲ ಆದಿಯಾಗಿ ಎಲ್ಲ ರೀತಿಯ ಬಲಪ್ರಯೋಗ ಆಗುತ್ತದೆ. ಆದರೆ ಇಂಥ ಪರಿಸ್ಥಿತಿಯಲ್ಲೂ ಆಗಾಗ, ಅಲ್ಲಲ್ಲಿ, ಈ ರೀತಿಯ ಯಾವುದೇ ಬಲವಿಲ್ಲದೆ, ಅಬ್ಬರ, ಆರ್ಭಟವಿಲ್ಲದೆ ಕಣಕ್ಕಿಳಿಯುವಂಥ ಕೆಲವರುಇರುತ್ತಾರೆ. ಹಾಗೆ ಚುನಾವಣೆ ಸೆಣಸಿಯೇ ಗೆದ್ದು ಅಧಿಕಾರಕ್ಕೆ ಬಂದು ಹಾಗೆಯೇ ಮರೆಯಾದವರೂ ಇದ್ದಾರೆ. ವಿಧಾನಸಭೆಚುನಾವಣೆ ಸಂಬಂಧಿತ ಸುದ್ದಿಗಳನ್ನು ಓದುತ್ತಿದ್ದಾಗ ಈ ರೀತಿಯ ವ್ಯಕ್ತಿಯೊಬ್ಬ ಕಣ್ಣಿಗೆ ಬಿದ್ದು ಕುತೂಹಲದಿಂದ ಗಮನಿಸಿದಾಗಗೊತ್ತಾದ ಅಂಶಗಳಿವು.
ಅವರ ಹೆಸರು ಕುಮ್ಮನಮ್ ರಾಜಶೇಖರನ್. 68 ವರ್ಷ ವಯಸ್ಸಿನ ಈ ಅವಿವಾಹಿತ ವ್ಯಕ್ತಿ ಈಗ ಕೇರಳದ ನೇಮಂ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ. ಈ ಕ್ಷೇತ್ರವೂ ವಿಶೇಷ. ಏಕೆಂದರೆ ರಾಜಧಾನಿ ತಿರುವನಂತಪುರಂ ಬಳಿಯ ಇದು ಬಿಜೆಪಿಯ ತೆಕ್ಕೆಯಲ್ಲಿ ರುವ ರಾಜ್ಯದ ಏಕೈಕ ಕ್ಷೇತ್ರ. ಬಿಜೆಪಿಯ ಹಿರಿಯ ನಾಯಕರಾದ ಓ. ರಾಜಗೋಪಾಲ್ ಅವರು ಕಳೆದ ಎರಡು ಅವಧಿಗೆ ಈ ಕ್ಷೇತ್ರದ ಶಾಸಕ ರಾಗಿದ್ದಾರೆ. ಆದರೆ ವಯಸ್ಸಿನ ಕಾರಣ ನೀಡಿ ಈ ಬಾರಿ ಸ್ಪರ್ಧಿಸುತ್ತಿಲ್ಲ. ಹೀಗಾಗಿ ಕುಮ್ಮನಮ್ ಅವರಿಗೆ ಪಕ್ಷ ಟಿಕೆಟ್ ನೀಡಿದೆ. ಕಾಂಗ್ರೆಸ್, ಕಮ್ಯುನಿಸ್ಟ್ ಅಲೆಯಲ್ಲೂ ಬಿಜೆಪಿಯಿಂದ ಆಯ್ಕೆಯಾಗುವುದು ಹುಡುಗಾಟವಲ್ಲ. ಹಾಗಾಗಿಯೇ ಇದು ವಿಶೇಷವಾದ ಕ್ಷೇತ್ರ ಎಂದು ಹೇಳಿದ್ದು. ಆದರೆ ಯಾರಿವರು ಮತ್ತು ಏನಿವರ ವಿಶೇಷ ಎಂಬ ಪ್ರಶ್ನೆ ಬರುತ್ತದೆ. ಇವರು ಬಿಜೆಪಿ ಅಭ್ಯರ್ಥಿ ಎಂದೇನೂ ಇವರ ಬಗ್ಗೆ ಹೇಳುತ್ತಿಲ್ಲ. ಪಕ್ಷ ಇಲ್ಲಿ ಮುಖ್ಯವಲ್ಲ.
ಆದರೆ ಅಭ್ಯರ್ಥಿ ಯಾರು, ಎಂಥವರು ಎಂಬುದು ಮುಖ್ಯ. ಈ ಕಾರಣಕ್ಕಾಗಿಯೇ ಅವರು ವಿಭಿನ್ನವಾಗಿ ಕಾಣುತ್ತಾರೆ. ರಾಜಶೇಖರನ್ ಅವರು ಘೋಷಿಸಿರುವ ಒಟ್ಟು ಆಸ್ತಿಯೇ 11 ಲಕ್ಷ ರು. ಅಂತೆ. ಸ್ವಂತ ಮನೆ, ವಾಹನ ಇಲ್ಲ. ಭೂಮಿ, ಚಿನ್ನಾಭರಣಇಲ್ಲವೇ ಇಲ್ಲ. ಅವರ ವಾಸ ಮತ್ತು ವಿಳಾಸ ಬಿಜೆಪಿ ಕಚೇರಿಯಂತೆ. ಕೆಲವರು ಸರಳವಾಗಿ ಬದುಕುತ್ತಾರೆ, ತಪ್ಪೇನಿಲ್ಲ ಎಂದುಹೇಳಬಹುದು. ಆದರೆ ಎಲ್ಲ ಇದ್ದೂ ಏನೂ ಇಲ್ಲದವರಂತೆ ಬದುಕುತ್ತಿರುವ ಇವರನ್ನು ನೋಡಿದರೆ ಅರೆ! ಎನಿಸದಿರದು. ಇದಕ್ಕೆಅವರ ಬದುಕಿನ ಬಗ್ಗೆ ತಿಳಿದುಕೊಳ್ಳಬೇಕಾಗುತ್ತದೆ. ರಾಜಶೇಖರನ್ ಅವರು ಕೊಟ್ಟಾಯಂ ಜಿಲ್ಲೆಯ ಕುಮ್ಮನಮ್ ಎಂಬಲ್ಲಿಜನಿಸಿದವರು.
ಅಲ್ಲಿಯೇ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪೂರೈಸಿದ ನಂತರ ಕೊಟ್ಟಾಯಂನಲ್ಲಿ ಪದವಿಯ ಬಳಿಕ ಪತ್ರಿಕೋದ್ಯಮ ಶಿಕ್ಷಣ ಪಡೆದರು. 1974 ರಿಂದ 76ರ ವರೆಗೆ ಪತ್ರಕರ್ತರಾಗಿ ಕೆಲಸ ಮಾಡಿದರು. ಈ ನಡುವೆಯೇ ಆರೆಸೆಸ್ ಕಾರ್ಯಕರ್ತರಾಗಿ ಕೆಲಸ ಮಾಡಿದರು. ಮುಖ್ಯವಾಗಿ ವಿಶ್ವ ಹಿಂದೂ ಪರಿಷತ್‌ನಲ್ಲಿ ನಾನಾ ಜವಾಬ್ದಾರಿಗಳನ್ನು ನಿರ್ವಹಿಸಿದರು. ಅನಂತರ ಭಾರತೀಯ ಆಹಾರ ನಿಗಮದಲ್ಲಿ (ಎಫ್ಸಿಐ) ಉದ್ಯೋಗಕ್ಕೆ ಸೇರಿದರು. ಆದರೆ ಜನ ಮತ್ತು ಸಮಾಜ ಸೇವೆಯ ತುಡಿತ ಅವರನ್ನು ಹೆಚ್ಚು ಕಾಲ ಅಲ್ಲಿ ಉಳಿಯಲು ಬಿಡಲಿಲ್ಲ.
ಒಳ್ಳೆಯ ಸಂಬಳ ಬರುತ್ತಿದ್ದ ಸರಕಾರಿ ಕೆಲಸಕ್ಕೆ 1987ರಲ್ಲಿ ರಾಜೀನಾಮೆ ನೀಡಿ ಆರೆಸ್ಸೆಸ್‌ನ ಪೂರ್ಣಾವಧಿ ಕಾರ್ಯಕರ್ತರಾದರು. ಹೀಗೆ ಆರೆಸ್ಸೆಸ್, ವಿಶ್ವ ಹಿಂದೂ ಪರಿಷತ್, ಹಿಂದೂ ಮುನ್ನಣಿ ಮೊದಲಾದ ಕಡೆಗಳಲ್ಲಿ ಕಾರ್ಯ ನಿರ್ವಹಿಸಿದ ಬಳಿಕಬಿಜೆಪಿಗೆ ಬಂದರು. ೨೦೧೫ರಲ್ಲಿ ಕೇರಳ ಪ್ರದೇಶ ಬಿಜೆಪಿ ಅಧ್ಯಕ್ಷರಾದರು. ಇದಕ್ಕಿಂತ ದೊಡ್ಡ ಸುದ್ದಿ ಎಂದರೆ 2018ರಲ್ಲಿರಾಜಶೇಖರನ್ ಅವರನ್ನು ಮಿಜೋರಾಂನ ರಾಜ್ಯಪಾಲರಾಗಿ ನೇಮಕ ಮಾಡಲಾಯಿತು. ಅಲ್ಲಿನ ರಾಜಭವನದಲ್ಲಿ ಆರಾಮವಾಗಿ ಕಾಲ ಕಳೆಯಬಹುದಿತ್ತಾದರೂ ಅದಕ್ಕೆ ಅವರ ಮನಸ್ಸು ಒಪ್ಪಲಿಲ್ಲ, ಒಗ್ಗಲಿಲ್ಲ.
ತಿಂಗಳಿಗೆ 3.5ಲಕ್ಷ ಸಂಬಳ. ಇತರ ಭತ್ಯೆ, ಕಾರು, ಬಂಗಲೆ, ಆಳು ಕಾಳು ಎಲ್ಲವನ್ನೂ ಅವರು  ತೊರೆದರು. 2019ರಲ್ಲಿ ರಾಜೀನಾಮೆ ಸಲ್ಲಿಸಿ ಕೇರಳ ರಾಜಕಾರಣಕ್ಕೆ ಮರಳಿದರು. 2019ರ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಲೋಕಸಭೆ ಕ್ಷೇತ್ರದಲ್ಲಿ ಶಶಿ ತರೂರ್ ವಿರುದ್ಧ ಸ್ಪರ್ಧಿಸಿದರು. ಇದೀಗ ನೇಮಂ ಕ್ಷೇತ್ರದಲ್ಲಿ ಟಿಕೆಟ್ ಸಿಕ್ಕಿದೆ. ಇದು ಬಿಜೆಪಿ ಭದ್ರಕೋಟೆ ಆಗಿರುವುದರಿಂದ ಕುಮ್ಮನಮ್ ಅವರು ಗೆಲ್ಲಲೂಬಹುದು. ಅಥವಾ ಪರಾಭವಗೊಳ್ಳಲೂಬಹುದು. ಆ ಮಾತು ಬೇರೆ. ಆದರೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿ ಇಷ್ಟು ದೊಡ್ಡವರಾಗಿದ್ದರೂ, ಇಷ್ಟು ಸರಳರೇ ಎಂಬ ಪ್ರಶ್ನೆ ಮನದಲ್ಲಿ ಮೂಡದೇ ಇರದು. ಅವರು ಸರಳರು, ಸಜ್ಜನರು, ಜನಪರ ಹೋರಾಟದಲ್ಲಿ ಪಾಲ್ಗೊಂಡವರು, ಜನರಿಗೆ ಹತ್ತಿರದಲ್ಲಿ ಇರುವಂಥವರು.
ಹಾಗೆಂದು ಇಂಥವರಲ್ಲಿ ರಾಜಶೇಖರನ್ ಒಬ್ಬರೇ ಅಲ್ಲ. ಇನ್ನೂ ಒಬ್ಬ ಸರಳ, ಸಜ್ಜನ, ರಾಜಕಾರಣಿಯ ಬಗ್ಗೆ ಇಲ್ಲಿ ಹೇಳಬೇಕು.ಅವರೇ ಮಾಣಿಕ್ ಸರ್ಕಾರ್. ಹೌದು. ತ್ರಿಪುರಾ ಎಂಬ ಪುಟ್ಟ, ಈಶಾನ್ಯ ರಾಜ್ಯದ ಮುಖ್ಯಮಂತ್ರಿ ಯಾಗಿದ್ದವರು. ಅದೂಒಂದಲ್ಲ ಎರಡಲ್ಲ. ಬರೋಬ್ಬರಿ 20 ವರ್ಷಗಳ ಕಾಲ. ನಾಲ್ಕು ಅವಧಿಯವರೆಗೆ. ಅವರನ್ನು ‘ಬಡ ಮುಖ್ಯಮಂತಿ’ ಎಂದೇಎಲ್ಲರೂ ಕರೆಯುತ್ತಿದ್ದರು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಸರ್ಕಾರ್, ಕಮ್ಯುನಿಸ್ಟ್ ವಿಚಾರಧಾರೆಗೆ ಮನಸೋತುಸಿಪಿಎಂ ಪಕ್ಷ ಸೇರಿದರು. ಹಾಗೆಯೇ ಕ್ರಮೇಣ ಪಾಲಿಟ್ ಬ್ಯೂರೊ ಸದಸ್ಯರಾದರು.
ಕೊನೆಗೆ ಮುಖ್ಯಮಂತ್ರಿಯೂ ಆದರು. ಅವರ ಹೆಂಡತಿ ಕೇಂದ್ರ ಸರಕಾರಿ ನೌಕರರಾಗಿದ್ದರು. ಈ ದಂಪತಿಯದು ಅತ್ಯಂತ ಸರಳವಾದ ಜೀವನ. ಎರಡು ದಶಕಗಳ ಕಾಲ ಮುಖ್ಯಮಂತ್ರಿಯಾಗಿದ್ದರೂ ಹಣ, ಆಸ್ತಿ, ಮನೆ ಮಠ ಎಂದು ಏನನ್ನೂ ಮಾಡಲಿಲ್ಲ. ಅವರು ತಮ್ಮ ಸಂಬಳವನ್ನೂ ಕೂಡ ಪಕ್ಷಕ್ಕೆ ಕೊಡುತ್ತಿದ್ದರು. ಜೀವನ ನಿರ್ವಹಣೆಗೆ ಎಂದು ಪ್ರತಿ ತಿಂಗಳು 10ಸಾವಿರ. ರು.ಗಳನ್ನು ಪಕ್ಷವು ಸರ್ಕಾರ್‌ಗೆ ಕೊಡುತ್ತಿತ್ತು. ಪಿತ್ರಾರ್ಜಿತ ಆಸ್ತಿಯಾಗಿ ಬಂದಿದ್ದ ಮನೆಯಲ್ಲಿ ವಾಸವಿದ್ದರು. ದುರದೃಷ್ಟವೋ ಅಥವಾ ಬದಲಾವಣೆ ಜಗದ ನಿಯಮ ಎಂಬಂತೆಯೋ, ಕಳೆದ ಚುನಾವಣೆಯಲ್ಲಿ ಸಿಪಿಎಂ ಪಕ್ಷ ಪರಾಭವ ಗೊಂಡಿತು. ಅವರು ಗಂಟು ಮೂಟೆ ಕಟ್ಟಿಕೊಂಡು ತಮ್ಮ ಮನೆಗೆ ಹೊರಟುಬಿಟ್ಟರು.
ಈಗ ಜನಸಾಮಾನ್ಯರಂತೆ ಬದುಕುತ್ತಿದ್ದಾರೆ. 20 ವರ್ಷ ಒಂದು ರಾಜ್ಯದ ಮುಖ್ಯಮಂತ್ರಿಯಾದವರ ಖದರು, ಗತ್ತು ಹೇಗಿರಬೇಕು? ಆದರೆ ಇವರು ಹಾಗಲ್ಲ. ಸರ್ಕಾರ್ ಅವರ ಸರಳತೆಗೆ ಮಾರುಹೋಗದವರು ಯಾರೂ ಇಲ್ಲ. ಅವರು ಅಧಿಕಾರ ತ್ಯಜಿಸಬೇಕಾಗಿ ಬಂದಾಗ ಬಿಜೆಪಿ ನಾಯಕರು ಸರ್ಕಾರ್ ನಿವಾಸಕ್ಕೆ ತೆರಳಿ ಅವರನ್ನು ಭೇಟಿ ಮಾಡಿ ಸೌಹಾರ್ದ ಮೆರೆದರು. ಇಂಥ ಸರಳ ಜೀವಿಗೆ ದೊರೆತ ವಿರಳ ಗೌರವ ಅದು ಎನ್ನಬಹುದೇನೊ.
ಇದು ಮಾಜಿಯೊಬ್ಬರ ಕಥೆಯಾಯಿತು. ಆದರೆ ಕೇಂದ್ರದ ಹಾಲಿ ಸಚಿವರೊಬ್ಬರು ಕೂಡ ಹೀಗೇ ಅತ್ಯಂತ ಸರಳವಾಗಿ,ನಿಗರ್ವಿಯಾಗಿ ಜೀವನ ಸಾಗಿಸುತ್ತಿದ್ದಾರೆ. ಅವರ ಹೆಸರು ಪ್ರತಾಪ ಚಂದ್ರ ಸಾರಂಗಿ. ಕಳೆದ ಬಾರಿ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಸಮಯದಲ್ಲಿ ಇವರ ಹೆಸರನ್ನು ಕರೆದಾಗ, ಎಷ್ಟೋ ಜನರಿಗೆ ಇವರು ಯಾರು, ಎಲ್ಲಿಯವರು ಎಂಬುದೇ ಗೊತ್ತಿರಲಿಲ್ಲ. ಗೊತ್ತಿರುವ ಸಾಧ್ಯತೆಯೇ ಕಡಿಮೆ. ಏಕೆಂದರೆ ತಾವಾಯಿತು, ತಮ್ಮ ಕೆಲಸವಾಯಿತು ಎಂದು ಇರುವಂಥ ಜನ ಸೇವಕರಿವರು.
64ವರ್ಷದ ಈ ಅವಿವಾಹಿತ ಒಡಿಶಾದ ಬಾಲಸೋರ್‌ನ ಸಂಸದರು. ತಾಯಿ ತೀರಿ ಹೋದ ಮೇಲೆ ಒಬ್ಬಂಟಿಯಾಗಿ ವಾಸಿಸುತ್ತಿದ್ದಾರೆ. ಅವರ ಮನೆಯಾದರೂ ಎಂಥದ್ದು. ಬೊಂಬು, ತೆಂಗಿನಗರಿ, ಮಣ್ಣಿನಿಂದ ಮಾಡಿದ ನಮ್ಮ ಹಳ್ಳಿ ಕಡೆಯ ಗುಡಿಸಿಲಿನಂತಿದೆ. ಸದಾ ಒಂದು ಸಾದಾ ಜುಬ್ಬಾ ಪೈಜಾಮಾ ಧರಿಸುವ ಸಾರಂಗಿ ಅವರ ಈ ಗುಡಿಸಲಿನಂಥ ಮನೆಯಲ್ಲಿ ಜನರು ಮಾತ್ರ ಸದಾ ತುಂಬಿರುತ್ತಾರೆ. ಅವರು ಹೊರಗೆ ಸುತ್ತಾಡುವುದು ಸೈಕಲ್‌ನಲ್ಲೇ. ಈ ಹಿಂದೆ ನೀಲಗಿರಿ ಕ್ಷೇತ್ರದಿಂದ2004ಹಾಗೂ2009ಹೀಗೆ ಎರಡು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಸಾರಂಗಿ, 2014ರ ಲೋಕಸಭಾ ಚುನಾವಣೆಯಲ್ಲಿ  ಪರಾಭವ ಗೊಂಡಿದ್ದರು.
ಆದರೆ2019ರಲ್ಲಿ ಗೆಲುವನ್ನು ಕಂಡರು. ಅದೂ ಘಟಾನುಘಟಿ ಎದುರಾಳಿಗಳ ವಿರುದ್ಧ. ಹಾಲಿ ಬಿಜೆಡಿ ಎಂಪಿ ಆಗಿದ್ದವರು ಉದ್ಯಮಿಯೂ ಹೌದು. ಕಾಂಗ್ರೆಸ್ ಅಭ್ಯರ್ಥಿ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರು. ಈ ಇಬ್ಬರು ಪ್ರತಿಸ್ಪರ್ಧಿಗಳು ನೀರಿನಂತೆ ಹಣ ಖರ್ಚು ಮಾಡಿದರು. ಎಸ್‌ಯುವಿಗಳಲ್ಲಿ ಪ್ರಚಾರ. ಪ್ರಚಾರಕ್ಕೆ ಸಂಸ್ಥೆಗಳನ್ನು ನೇಮಕ ಮಾಡಿದ್ದರು. ಆದರೆ ಸಾರಂಗಿ ಅವರಿಗೆ ಆಟೊರಿಕ್ಷಾ ರ‍್ಯಾಲಿಗಳೇ ಆಧಾರ. ಮತದಾರರು ಇವರನ್ನೇ ಆಯ್ಕೆಮಾಡಿದರು. ಮತ್ತೊಂದು ವಿಷಯವೇನೆಂದರೆ ಸಾರಂಗಿ ಯವರು ಆಯ್ಕೆಯಾದ ಬಳಿಕವೂ ಅದೇ ಗುಡಿಸಲಿನಂಥ ಮನೆಯಲ್ಲೇ ವಾಸಿಸುತ್ತಿದ್ದರು.
ಪ್ರಾಮಾಣಿಕ, ಸರಳ, ಸಜ್ಜನ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕೆ? ಎಲ್ಲರೂ ಅವರನ್ನು ನಾನಾ ಎಂದೇ ಕರೆಯುತ್ತಾರೆ. ಕಿಂದರಿ ಜೋಗಿಯ ಕಿಂದರಿಗೆ ಎಲ್ಲರೂ ಮನಸೋಲುವಂತೆ, ಇವರ ಸರಳತೆ, ಪ್ರಾಮಾಣಿಕತೆಯ ‘ಸಾರಂಗಿ’ ಕರೆಗೆ ಓಗೊಡದವರೇ ಇಲ್ಲ. ಮೊದಲಿನಿಂದಲೂ ಆರೆಸ್ಸೆಸ್ ಕಾರ್ಯರ್ತರಾಗಿರುವ ಅವರು ಬಜರಂಗ ದಳದಲ್ಲೂ ಸಕ್ರಿಯರಾಗಿದ್ದರು.80ರ ದಶಕದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಅವರು ಏಕಲ್ ವಿದ್ಯಾಲಯಗಳನ್ನು ಸ್ಥಾಪಿಸಿದರು. ಅಂದರೆ ಏಕಶಿಕ್ಷಕ ಶಾಲೆಗಳಿವು. ಹಾಗೆಂದು ಇವೇನೂ ಸರಕಾರಿ ಶಾಲೆಗಳಲ್ಲ.
ಗ್ರಾಮದ ಯುವಕರು ನಡೆಸುತ್ತಾರೆ. ಗ್ರಾಮಸ್ಥರ ವಂತಿಗೆಯಿಂದಲೇ ಇವು ನಡೆಯುತ್ತವೆ. ಇನ್ನು ನಮ್ಮ ರಾಜ್ಯದವರೇ ಆದ ಜಾರ್ಜ್ ಫೆರ್ನಾಂಡಿಸ್ ಅವರ ಸರಳತೆಯ ಬಗ್ಗೆ ಸಾಕಷ್ಟು ಕಡೆ ಉಲ್ಲೇಖಗಳಿವೆ. ಅವರ ಬಳಿ ಒಂದೆರಡು ಜತೆ ಬಟ್ಟೆ ಬಿಟ್ಟರೆ ಬೇರೆ ಇರುತ್ತಿರ ಲಿಲ್ಲ. ತಮ್ಮ ಬಟ್ಟೆಗಳನ್ನು ತಾವೇ ಒಗೆದುಕೊಳ್ಳುತ್ತಿದ್ದರು ಎಂಬಿತ್ಯಾದಿ ವಿಷಯಗಳು ಸಾಕಷ್ಟು ಕಡೆ ಪ್ರಕಟವಾಗಿವೆ. ಗೋವಾ ಮುಖ್ಯಮಂತ್ರಿಯಾಗಿದ್ದ ಮನೋಹರ್ ಪರಿಕ್ಕರ್ ಸರಳತೆಗೂ ಎಣೆ ಇರಲಿಲ್ಲ.
ಒಮ್ಮೆ ಹೆಲ್ಮೆಟ್ ಇಲ್ಲದೆ ವೇಗವಾಗಿ ಹೋಗುತ್ತಿದ್ದ ಹುಡುಗನನ್ನು ತಡೆದು ನಿಲ್ಲಿಸಿ ಏಕೆ ಹೀಗೆ ಎಂದು ಕೇಳಿದಾಗ, ‘ನನ್ನನ್ನು ಕೇಳಲು ನೀವ್ಯಾರು, ನಾನು ಡಿಐಜಿ ಮಗ’ ಎಂದು ಅವರನ್ನೇ ಮರಳಿ ಕೇಳಿದನಂತೆ. ಪಾಪ. ಅವರು ರಾಜ್ಯದ ಮುಖ್ಯಮಂತ್ರಿ ಎಂಬುದು ಅವನಿಗೆ ಗೊತ್ತಿರಲಿಕ್ಕಿಲ್ಲ. ಅಷ್ಟಕ್ಕೂ ಮುಖ್ಯಮಂತ್ರಿಯಾದವರು ಸ್ಕೂಟಿಯಲ್ಲಿ ಸವಾರಿ ಮಾಡುವುದುಂಟೆ?ಎಲ್ಲೆಲ್ಲೋ ಇರುವ ಇವರಷ್ಟೇ ಏಕೆ ? ನಮ್ಮ ರಾಜ್ಯದಲ್ಲೂ ಈ ರೀತಿಯ ಸರಳ, ಸಜ್ಜನ, ಪ್ರಾಮಾಣಿಕ ರಾಜಕಾರಣಿಗಳುಅನೇಕ ರಿದ್ದರು.
ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಮೌಲ್ಯಾಧಾರಿತ ರಾಜಕಾರಣ ಎಂಬ ಪದಕ್ಕೆ ತುಂಬ ಮೌಲ್ಯವಿತ್ತು. ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ ಮೊದಲಾದವರೆಲ್ಲ ತಾವು ನಂಬಿದ ಮೌಲ್ಯಗಳಿಗಾಗಿ ಹೋರಾಡಿದವರು. ಶಾಂತವೇರಿಗೋಪಾಲ ಗೌಡರು, ಕಡಿದಾಳ ಮಂಜಪ್ಪ ಮೊದಲಾದ ಮಾಜವಾದಿ ಮುಖಂಡರು ಸದಾ ಸಮಾಜಮುಖಿ ಚಿಂತನೆಯಲ್ಲೇ ತೊಡಗಿರುತ್ತಿದ್ದರು.
ಪಂಚಾಯತ್ ರಾಜ್ ವ್ಯವಸ್ಥೆಯನ್ನು ಜಾರಿಗೆ ತಂದ, ಗ್ರಾಮರಾಜ್ಯದ ಪರಿಕಲ್ಪನೆಯನ್ನು ಸಾಕಾರ ಗೊಳಿಸ ಲು ಶ್ರಮಿಸಿದ ನಜೀರ್ ಸಾಬ್ ಅವರು ‘ನೀರ್ ಸಾಬ್’ ಎಂದೇ ಪರಿಚಿತರಾಗಿದ್ದರು. ಮಲೆನಾಡ ಗಾಂಧಿ ಎಂದೇ ಕರೆಯಲಾಗುತ್ತಿದ್ದ ಡಎಚ್.ಜಿ.ಗೋವಿಂದೇ ಗೌಡ ಅವರು 1995-99ರ ಅವಧಿಯಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಶಿಕ್ಷಕರ ನೇಮಕದಲ್ಲಿ ಪಾರದರ್ಶಕತೆಯನ್ನು ತಂದರು. ಪರೀಕ್ಷೆಯ ಮೂಲಕ ಸುಮಾರು ಒಂದೂವರೆ ಲಕ್ಷ ಶಿಕ್ಷಕರ ನೇಮಕಕ್ಕೆ ಕ್ರಮ ಕೈಗೊಂಡರು. ಈ ವ್ಯವಸ್ಥೆಯಿಂದ ಉಪಕೃತರಾದ ವರೆಷ್ಟೋ. ಇಂದಿಗೂ ಅನೇಕರು ಗೋವಿಂದೇಗೌಡರ ಫೋಟೊ ಇಟ್ಟುಕೊಂಡು ಪೂಜೆ ಮಾಡುತ್ತಾರಂತೆ. ಇಂಥ ಗಾಂಧೀವಾದಿ ರಾಜಕಾರಣಿ ಕೂಡ ಬದಲಾದ ಪರಿಸ್ಥಿತಿಗೆ ಒಗ್ಗಿಕೊಳ್ಳಲಾಗದೆ ರಾಜಕೀಯ ನಿವೃತ್ತಿ ಪಡೆದರು.
ಚುನಾವಣೆ, ಪ್ರಚಾರ ಭರಾಟೆ ಇವನ್ನೆಲ್ಲ ನೋಡಿದಾಗ ಈ ವಿಷಯಗಳೆಲ್ಲ ಯಾಕೋ ನೆನಪಾದವು. ಈಗಿನ ರಾಜಕಾರಣಿಗಳುಅಧಿಕಾರಕ್ಕಾಗಿ ಹಪಹಪಿಸುವುದನ್ನು; ಅಧಿಕಾರ ಸಿಕ್ಕಮೇಲೆ ಅದರ ದುರ್ಬಳಕೆ ಮಾಡಿಕೊಳ್ಳುವುದು, ದರ್ಪ, ಗತ್ತಿನಿಂದಮೆರೆಯುವುದು- ಇವನ್ನೆಲ್ಲ ನೋಡಿದರೆ ನಾವು ಎತ್ತ ಸಾಗುತ್ತಿದ್ದೇವೆ ಎಂದೆನಿಸುತ್ತದೆ. ಭ್ರಷ್ಟಾಚಾರ, ಲಂಚಾವತಾರ,ದುರಾಡಳಿತ, ದುರಾಚಾರ ಇವನ್ನೆಲ್ಲ ಕಂಡು ಮನಸ್ಸಿಗೆ ಪಿಚ್ಚೆನಿಸುತ್ತದೆ. ಆದರೆ ಮೇಲೆ ಉದಾಹರಿಸಿದ ಕೆಲವರನ್ನುನೋಡಿದರೆ ಅಧಿಕಾರಕ್ಕಾಗಿ ಮಾಡಬಾರದ್ದನ್ನೆಲ್ಲ ಮಾಡ ಬೇಕೆಂದೇನೂ ಇಲ್ಲ ಎಂಬುದೂ ವೇದ್ಯ. ಅಥವಾ ಅಧಿಕಾರ ಬಂದಮಾತ್ರಕ್ಕೆ, ‘ನಾವೇ ಬೇರೆ, ನಮ್ಮ ಸ್ಟೆ ಲೇ ಬೇರೆ’ ಎಂಬಂತೆ ವರ್ತಿಸಬೇಕಾಗಿಲ್ಲ.
ಇವರೆಲ್ಲ ತಮ್ಮ ಸರಳತೆಯಿಂದ, ಪ್ರಾಮಾಣಿಕತೆಯಿಂದ, ತಾವು ಮಾಡಿದ ಕೆಲಸ ಕಾರ್ಯಗಳಿಂದ ಚುನಾವಣೆಯನ್ನು ಜಯಿಸಿದ್ದಾರೆ. ಅಲ್ಲದೆ ಈ ರೀತಿಯಲ್ಲೂ ಚುನಾವಣೆಯನ್ನು ಗೆಲ್ಲುವುದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹಣಕ್ಕಿಂತ, ಜನಾನುರಾಗ ಎಂಬ ಬಂಡವಾಳ ಹೆಚ್ಚು ದೊಡ್ಡದು ಮತ್ತು ಮೌಲ್ಯ ಉಳ್ಳದ್ದು ಎಂಬುದನ್ನು ಇಂಥ ಕೆಲವರಾದರೂ ತೋರಿಸಿಕೊಟ್ಟಿದ್ದಾರೆ. ಅವರ ಸಂಖ್ಯೆ ನೂರ್ಮಡಿಸಲಿ.
ನಾಡಿಶಾಸ್ತ್ರಕಾಂಚಾಣ ಕುಣಿತವೇ ಅಲ್ಲ ಶಾಶ್ವತಸರಳ ಸಜ್ಜನಿಕೆಯೂ ಇಲ್ಲಿ ಪರಿಗಣಿತಅಽಕಾರ ಬಂದಾಗ ಮೆರೆದರೆ ಜನಮೆಚ್ಚರುಎಂಬುದ ಮರೆತವರೇ, ಇರಲಿ ಎಚ್ಚg