ಇಲ್ಲಿ ವಿರಾಗ, ಅಲ್ಲಿ ಅನುರಾಗ: ಶ್ರೀಕೃಷ್ಣ ಚೈತನ್ಯರ ಅನುಪಮ ಮಾರ್ಗ
ಅಧ್ಯಾತ್ಮ
ಜಗದೀಶ ಶರ್ಮಾ ಸಂಪ
ಭಾರತ ಸಂತಭೂಮಿ. ಯಾಕೆಂದರೆ ಜೀವ ಕಾರುಣ್ಯ ಈ ಮಣ್ಣಿನ ಗುಣ. ಇಂತಹ ಪುಣ್ಯ ಧರಿತ್ರಿ ತನ್ನ ಈ ಅನುಪಮತೆಯನ್ನುತಾನೇ ತನ್ನೊಡಲಲ್ಲಿ ಬಿತ್ತಿ ಬೆಳೆದಾಗ ಬಂದ ಬೆಳೆಯೇ ಈ ನಾಡಿನ ಅಸಂಖ್ಯ ಸಂತರು.
ಹಾಗಾಗಿಯೇ ಸಂತರೆಂದರೆ ಜೀವಕರುಣೆಯ ಸಾಗರ. ಬಿದ್ದ ಜೀವಿಗಳನ್ನು ಮೇಲೆತ್ತುವ ಪತಿತಪಾವನರು ಅವರು. ಇಂತಹ ಸಂತರನ್ನು ಸಾಕ್ಷಾತ್ ದೇವರೆಂದು ಕಾಣುವುದು ಈ ಸಂಸ್ಕೃತಿಗೆ ಸಮ್ಮತ. ತನ್ನ ಮಕ್ಕಳಾದ ಜೀವಿಗಳು ಇರುವಲ್ಲಿಗೆ ತಾನು ಸಾಕ್ಷಾತ್ತಾಗಿ ಬಂದು ಕೃಪೆಯ ಅವಲಂಬನವನ್ನು ನೀಡಲಾಗದೆಂದು ಸಂತ ರೂಪದಲ್ಲಿ ದೇವರು ಮೈದೋರುತ್ತಾನೆ ಎಂದರೆ ಅದು ಸರಿಯಾದ ಮಾತು.
ಶ್ರೀಕೃಷ್ಣಚೈತನ್ಯರು ಅಂತಹ ಸಂತರಲ್ಲಿ ಮಹಾಂತರು. ವಂಗದಲ್ಲಿ ಉದಯಿಸಿ, ಕಳಿಂಗದಲ್ಲಿ ಕಂಗೊಳಿಸಿ, ಭಾರತದಉದ್ದಗಲಕ್ಕೆ ತಮ್ಮ ಮಹಿಮೆಯ ಕಂಪನ್ನು ಹರಡಿದವರು ಶ್ರೀಚೈತನ್ಯರು. ಅವರು ನಡೆದ ಪಥ ಗೌಡೀಯ ವೈಷ್ಣವಪಂಥವೇ ಆಗಿ ಜೀವಿಗಳ ಸತ್ಪಥವಾಯಿತು. ಭಗವಂತನಿಂದ ದೂರಾದ ಜೀವಿಗಳಿಗೆ ಮತ್ತೆ ಅವನ ಸಂಗ ದೊರೆಯುವಂತೆಮಾಡುವಲ್ಲಿ ಕೃತಾರ್ಥವಾಯಿತು.
ಭಕ್ತಿಯ ಹಾದಿ ಶ್ರೀಚೈತನ್ಯರದ್ದು. ಭಾರತದ ಯಾವ ಪಂಥವೂ ಭಕ್ತಿಯನ್ನು ಬಿಟ್ಟು ಇಲ್ಲ. ಸಿದ್ಧಾಂತದಲ್ಲಿ ವೈರುಧ್ಯವಿದ್ದರೂ, ಮತಾಚರಣೆಯಲ್ಲಿ ವಿಭಿನ್ನತೆಯಿದ್ದರೂ ಭಕ್ತಿಯನ್ನು ಯಾರೂ ನಿರಾಕರಿಸಿಲ್ಲ, ಮಾತ್ರವಲ್ಲ ಅದು ಎಲ್ಲರಿಂದ ಸ್ವೀಕೃತವೇ ಆಗಿದೆ. ಇಂತಹ ಭಕ್ತಿಯೋಗದ ದಾರ್ಶನಿಕತೆ ಶ್ರೀಚೈತನ್ಯ ಮಹಾಪ್ರಭುಗಳದ್ದು. ಜ್ಞಾನವೂ ಕರ್ಮವೂ ಭಕ್ತಿಯ ಅಧೀನ, ಭಕ್ತಿಯೇಪರಮಾತ್ಮ ಸಾಕ್ಷಾತ್ಕಾರದ ಮಹಾಮಾರ್ಗ, ಅದರಲ್ಲೂ ಸಂಕೀರ್ತನೆಯೇ ಉತ್ಕೃಷ್ಟ ಸಾಧನ, ಗಾಯನ – ನರ್ತನಗಳು ಇದಕ್ಕೆ ಪೂರಕ, ಕೃಷ್ಣನ ನಾಮಸ್ಮರಣೆಯೇ ಇದೆಲ್ಲದರ ಜೀವಾಳ ಎಂದು ಚೈತನ್ಯ ಪರಂಪರೆ ಭಾವಿಸಿ, ಅನುಸರಿಸಿ, ಬೆಳೆದಿದೆ ಮತ್ತು ಭಕ್ತರನ್ನು ಬೆಳೆಸಿದೆ.
ಭಕ್ತಿಯೆಂದರೆ ಪರಮಾತ್ಮನ ಕುರಿತಾದ ಪರಮ ಪ್ರೀತಿ. ‘ಪರಮಪ್ರೇಮರೂಪಾ, ಪರಾನುರಕ್ತಿಃ’ ಎಂದು ಭಕ್ತಿಸೂತ್ರಗಳು ಅದನ್ನು ವ್ಯಾಖ್ಯಾನಿಸುತ್ತವೆ. ಜೀವಕ್ಕೆ ಭಗವಂತನ ಮೇಲೆ ಎಲ್ಲಾ ಇಲ್ಲದ ಅನುರಾಗ ಮೂಡಿದರೆ ಅದು ಭಕ್ತಿ. ಭಗವಂತನ ಹಿರಿಮೆ ಗರಿಮೆಗಳನ್ನು ಒಪ್ಪಿದ ಮಾತ್ರಕ್ಕೆ ಪರಮಪ್ರೀತಿ ಸಾಧ್ಯವಾಗುವುದಿಲ್ಲ. ಅಥವಾ ಲೌಕಿಕದ ಸುಖ – ಸಂತೋಷಕ್ಕೆ ಬೇಕಾದ್ದನ್ನು ವಿನಮ್ರವಾಗಿ ಬೇಡಿಕೊಂಡರೆ ಅದು ಪರಮಪ್ರೀತಿ ಎನಿಸಿಕೊಳ್ಳುವುದಿಲ್ಲ. ಅವನೇ ಸರ್ವಸ್ವ ಎಂಬ ಭಾವ ಮೂಡಬೇಕು. ಅದು ಮೈಮನಸ್ಸನ್ನು ತುಂಬಿಹೋಗಬೇಕು. ಯಾವುದೋ ಒಂದು ಕ್ಷಣದಲ್ಲಿ ಹೀಗನಿಸಿದರೆ ಸಾಲದು.
ಪ್ರತಿಕ್ಷಣವೂ ಭಗವಂತನ ನೆನಪಿನ ಕಳೆಯುವಂತಾಗಬೇಕು. ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಹೇಳುವಂತೆ ಅವನ ಮನಸ್ಸು ನೆಟ್ಟು, ಅವನಿಗೇ ಪ್ರಾಣಗಳನ್ನು ಅರ್ಪಿಸಿ, ಒಬ್ಬರಿಗೊಬ್ಬರು ಅವನ ಬೋಧೆಯನ್ನು ಮಾಡುತ್ತಾ, ಅವನ ಕುರಿತಾದ ಮಾತೊಂದನ್ನೇಆಡುತ್ತಾ ಇದ್ದರೆ ಅದು ಸಾಧ್ಯ. ಹೀಗಾಗ ಬೇಕೆಂದರೆ ಅವನಲ್ಲದ ಇನ್ನೇನೂ ಬದುಕಿನಲ್ಲಿ ಇರಬಾರದು. ಇಲ್ಲಿಯದ್ದೇನೋ ಮಹತ್ತ್ವ ಎನಿಸಬಾರದು. ಇಲ್ಲಿಯ ಬಹು ದೊಡ್ಡದು ಎನ್ನುವ ಎಲ್ಲವನ್ನೂ ಹುಲ್ಲು ಕಡ್ಡಿಯಂತೆ ನೋಡಲು ಬರಬೇಕು. ಇದಕ್ಕೆ ವೈರಾಗ್ಯ ಎಂದು ಹೆಸರು.
ಶ್ರೀಚೈತನ್ಯ ಮಹಾಪ್ರಭುಗಳು ಇಂಥ ವೈರಾಗ್ಯವನ್ನು ಬೋಧಿಸಿದವರು. ತಮಗೆ ಅಂಥದ್ದರ ಅವಶ್ಯಕತೆ ಇಲ್ಲದಿರುವಾಗಲೂ ಭಕ್ತರಿಗೆ ದಾರಿದೀಪವಾಗಲೆಂದು ಹಾಗೆ ಬದುಕಿ ತೋರಿಸಿದವರು. ಅಂಥ ಅವರ ಬದುಕನ್ನು ಕಂಡ ಜ್ಞಾನಿ ಸಾರ್ವಭೌಮ ಭಟ್ಟಾಚಾರ್ಯರು ವೈರಾಗ್ಯ – ವಿದ್ಯಾ – ನಿಜ – ಭಕ್ತಿ – ಯೋಗವನ್ನು ಲೋಕಕ್ಕೆ ಕಲಿಸಲು ಶ್ರೀಕೃಷ್ಣ ಚೈತನ್ಯರ ರೂಪದಲ್ಲಿ ಭಗವಾನ್ ಕೃಷ್ಣನೇ ಬಂದಿದ್ದಾನೆ’ ಎಂದು ಹೇಳುತ್ತಾರೆ. ಶ್ರೀಚೈತನ್ಯರ ಲೀಲಾಮಯವಾದ ಜೀವನದಲ್ಲಿ ಇಂಥ ಅಸಂಖ್ಯ ಘಟನೆಗಳು ನಡೆದಿವೆ. ಆ ಸನ್ನಿವೇಶಗಳಲ್ಲಿ ಪ್ರಭುಗಳು ತಮ್ಮ ವೈರಾಗ್ಯಪರತೆಯ ಪಾರಮ್ಯವನ್ನು ಬಿತ್ತರಿಸಿದ್ದಾರೆ, ತಮ್ಮ ಅನುಯಾಯಿಗಳೂ ಹಾಗಿದ್ದರು ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ, ಹಾಗಿಲ್ಲದಿದ್ದಾಗ ಹಾಗೆ ಇರುವಂತೆ ಮಾಡಿಸಿದ್ದಾರೆ.
ಇವೆಲ್ಲವುಗಳ ಮೂಲಕ ನೈಜ ಭಕ್ತನ ಬದುಕಿಗೆ ಸಂವಿಧಾನವನ್ನು ಕಟ್ಟಿಕೊಟ್ಟಿದ್ದಾರೆ. ಮಹಾಪ್ರಭುಗಳು ಲೀಲಾಮಯ ಜೀವನವನ್ನು ತೋರುತ್ತಿದ್ದ ಆ ಕಾಲದಲ್ಲಿ ರಾಜಾ ಪ್ರತಾಪರುದ್ರ ಆಳುತ್ತಿದ್ದ. ಪರಾಕ್ರಮಿ ಕಾಕತೀಯ ವಂಶಕ್ಕೆ ಸೇರಿದವನು ಅವನು. ಶ್ರೀಚೈತನ್ಯರು ಹೆಚ್ಚು ಕಾಲ ವಾಸ ಮಾಡಿದ್ದ ಪುರುಷೋತ್ತಮ ಕ್ಷೇತ್ರ ಜಗನ್ನಾಥಪುರಿ ಅವನ ಆಳ್ವಿಕೆಯಲ್ಲಿತ್ತು. ವಂಗದೇಶದಿಂದ ಬಂದ ಸಂತರೊಬ್ಬರು ಪುರಿಯಲ್ಲಿ ಪ್ರಸಿದ್ಧರಾದ ವಿಷಯ ಅವನ ಕಿವಿಯನ್ನೂ ತಲುಪಿತು. ಸಹಜವಾಗಿಯೇ ಅವನಿಗೆ ಅವರನ್ನೊಮ್ಮೆ ನೋಡಬೇಕಿನಿಸಿತು.
ಒಮ್ಮೆ ಆತ ಸಾರ್ವಭೌಮ ಭಟ್ಟಾಚಾರ್ಯರನ್ನು ತನ್ನ ಆಸ್ಥಾನಕ್ಕೆ ಕರೆಸಿಕೊಂಡ. ಅವನ ಆತ್ಮೀಯ ವಲಯದಲ್ಲಿದ್ದಭಟ್ಟಾಚಾರ್ಯರು ಶ್ರೀಚೈತನ್ಯರ ಸಮೀಪವರ್ತಿ ಭಕ್ತರು. ಅವರಲ್ಲಿ ವಂಗದಿಂದ ಬಂದ ಸಂತರೊಬ್ಬರು ನಿಮ್ಮಲ್ಲಿ ಉಳಿದು ಕೊಂಡಿದ್ದಾರಂತೆ. ಅವರು ಮಹಾಪುರುಷರು ಎಂದು ಹೇಳುವುದನ್ನು ಕೇಳಿದ್ದೇನೆ. ನಿಮ್ಮ ಬಗ್ಗೆ ಅವರಿಗೆ ಅಪಾರವಾದಪ್ರೇಮವಿದೆಯಂತೆ. ನಾನು ಒಮ್ಮೆ ಅವರ ದರ್ಶನ ಮಾಡಬೇಕು, ವ್ಯವಸ್ಥೆ ಮಾಡಿ’ ಎಂದು ಕೇಳಿಕೊಂಡ.
ಶ್ರೀಚೈತನ್ಯರು ಆ ಸಮಯದಲ್ಲಿ ದಕ್ಷಿಣ ಭಾರತ ಯಾತ್ರೆಯಲ್ಲಿದ್ದರು. ಅದನ್ನು ತಿಳಿಸಿದ ಭಟ್ಟಾಚಾರ್ಯರು ಪರಮವಿರಕ್ತರಾದ ಅವರು ರಾಜನನ್ನು ಭೇಟಿಯಾಗಲು ಮನಸ್ಸು ಮಾಡರು ಎನ್ನುವುದನ್ನು ತಿಳಿಸಿದರು. ತಾನು ಪ್ರಯತ್ನಿಸುವ ಭರವಸೆ ನೀಡಿ ಹಿಂದಿರುಗಿದರು. ಕೆಲವು ದಿನಗಳ ಅನಂತರ ಶ್ರೀಚೈತನ್ಯರು ದಕ್ಷಿಣದಿಂದ ಹಿಂದಿರುಗಿದರು. ಆಗ ಒಂದು ದಿನ ಭಟ್ಟಾಚಾರ್ಯರುತಾನೊಂದು ವಿಷಯವನ್ನು ಬಿನ್ನವಿಸಿಕೊಳ್ಳಲಿದೆ ಎಂದು ಮಹಾಪ್ರಭುಗಳಲ್ಲಿ ವಿನಂತಿಸಿಕೊಂಡರು. ನಿರ್ಭಯವಾಗಿಹೇಳಬೇಕಾದ್ದನ್ನು ಹೇಳಬಹುದು’ ಎಂದು ಶ್ರೀಚೈತನ್ಯರು ನುಡಿದರು. ಪ್ರತಾಪರುದ್ರ ದೊರೆ ತಮ್ಮ ಸನ್ನಿಧಿಯ ದರ್ಶನವನ್ನು ಬಯಸಿzನೆ. ಕಾತರತೆಯಿಂದ ತಮ್ಮ ಅನುಮತಿಯನ್ನು ನಿರೀಕ್ಷಿಸುತ್ತಿದ್ದಾನೆ’ ಎಂದರು ಭಟ್ಟಾಚಾರ್ಯರು.
ಭಟ್ಟಾಚಾರ್ಯರ ಈ ಮಾತು ಕಿವಿಯ ಮೇಲೆ ಬೀಳುತ್ತಿದ್ದಂತೆಯೇ ಎರಡೂ ಕೈಗಳಿಂದ ತಮ್ಮ ಎರಡೂ ಕಿವಿಗಳನ್ನು ಮುಚ್ಚಿ ಕೊಂಡರು ಶ್ರೀಚೈತನ್ಯರು. ನಾನು ವಿರಾಗಿ. ಸನ್ಯಾಸ ಧರ್ಮ ನನ್ನದು. ಭೋಗಲಾಲಸೆಯ ವ್ಯಕ್ತಿಯನ್ನು ನಾನು ಭೇಟಿ ಮಾಡುವುದೇ? ಇದು ಸಾಧ್ಯವಿಲ್ಲ’ ಎಂದರು. ಇವನು ಅಂಥವನಲ್ಲ. ಯೋಗ್ಯ ದೊರೆ. ಜಗನ್ನಾಥನ ಪರಮ ಭಕ್ತ. ಅವನ ಸೇವೆಯಲ್ಲಿ ಸಂತೋಷ ಕಾಣುವವನು’ ಎಂದರು ಭಟ್ಟಾಚಾರ್ಯರು.
ಅವನು ಎಂತವನೇ ಆದರೂ ಭಗವಂತನ ಸಾಕ್ಷಾತ್ಕಾರಕ್ಕೆ ಹೊರಟ ವಿರಾಗಿ ಅವನನ್ನು ನೋಡುವುದು ಸಲ್ಲ. ಈ ಮಾತು ಇಲ್ಲಿಗೆ ಸಾಕು. ಇದನ್ನು ಮುಂದುವರಿಸಿದರೆ ನಾನು ಮತ್ತೆ ನಿಮಗೆ ಇಲ್ಲಿ ಕಾಣಲು ಸಿಗುವುದಿಲ್ಲ’ ಎಂದು ಕಟುವಾಗಿ ಹೇಳಿದರು  ಶ್ರೀಚೈತನ್ಯರು. ಸ್ವಲ್ಪ ದಿನಗಳು ಕಳೆದವು. ಜಗನ್ನಾಥನ ಉತ್ಸವ ಬಂದಿತು. ಪ್ರತಾಪರುದ್ರ ತನ್ನ ರಾಜಧಾನಿ ಕಟಕದಿಂದ ಸಪರಿವಾರ ಸಮೇತ ಪುರಿಗೆ ಆಗಮಿಸಿದ. ಅವನ ಜತೆಗೆ ರಾಮಾನಂದ ರಾಯರೂ ಬಂದರು. ಅರಮನೆಯ ಅಧಿಕಾರಿಗಳಾಗಿದ್ದಅವರು ಶ್ರೀಚೈತನ್ಯರ ಭಕ್ತರು. ಅವರು ಬಂದವರೆ ಪ್ರಭುಗಳನ್ನು ಭೇಟಿ ಮಾಡಿದರು.
ಚೈತನ್ಯರ ಸೂಚನೆಯಂತೆ ತಾನು ಅರಮನೆಯ ಹೊಣೆಯಿಂದ ನಿವೃತ್ತ ನಾಗುತ್ತಿರುವ ವಿಷಯವನ್ನೂ, ಶ್ರೀಚೈತನ್ಯರ ಸೇವೆಗೆ ಹೊರಟಿರುವುದನ್ನು ಹೇಳಿದಾಗ ಇದರಿಂದ ಸಂತಸಗೊಂಡ ರಾಜ ಪೂರ್ಣ ವೇತನವನ್ನು ಮುಂದುವರಿಸಿ ಅನುಮತಿ ನೀಡಿರುವುದನ್ನೂ ನಿವೇದಿಸಿದರು. ಆಗ ಶ್ರೀಚೈತನ್ಯರು ತನ್ನ ಭಕ್ತರನ್ನು ಯಾರು ಪ್ರೀತಿಸುತ್ತಾರೋ ಅವರನ್ನು ಶ್ರೀಕೃಷ್ಣ ಅನುಗ್ರಹಿಸುತ್ತಾನೆ’ ಎಂದರಾದರೂ ತಮ್ಮ ದರ್ಶನಕ್ಕೆ ಬರಲು ಸೂಚಿಸಲಿಲ್ಲ.
ಪ್ರತಾಪರುದ್ರ ಭಟ್ಟಾಚಾರ್ಯರನ್ನು ಕರೆಸಿದ. ಅವನಿಗೆ ಪ್ರಭುಗಳ ದರ್ಶನದ ಉತ್ಸುಕತೆ ಉತ್ಕಟವಾಗಿಯೇ ಇತ್ತು. ನನ್ನ ವಿನಂತಿಯನ್ನು ಮಹಾಪ್ರಭುಗಳಿಗೆ ತಲುಪಿಸಿದ್ದೀರಾ? ಏನೆಂದರು?’ ಎಂದು ಕೇಳಿದ. ನಿನ್ನ ವಿಜ್ಞಾಪನೆಯನ್ನು ಪ್ರಭುವಿನ ಗಮನಕ್ಕೆ ತಂದೆ. ನನ್ನದಾದ ಪ್ರಯತ್ನವನ್ನೆಲ್ಲ ಮಾಡಿದೆ. ಆದರೆ ಅವರು ಅಂಗೀಕರಿಸಲಿಲ್ಲ. ಇನ್ನೂ ಒತ್ತಾಯಿಸಿದರೆ ತಾನು ಪುರಿಯನ್ನು ಬಿಟ್ಟು ಹೊರಟು ಹೋಗುವುದಾಗಿ ಹೇಳಿದರು’ ಎಂದರು ಭಟ್ಟಾಚಾರ್ಯರು.
ಎಂತೆಂಥ ಕ್ಷುದ್ರ ಜನರನ್ನೂ ಶ್ರೀಚೈತನ್ಯರು ಉದ್ಧರಿಸಿದ್ದಾರೆ. ಅವರ ಮೇಲೆ ಕೃಪೆಯನ್ನು ಹರಿಸಿದ್ದಾರೆ. ಜಗಾಯಿ ಮಾಧಾಯಿಯ ವರಂಥ ದುಷ್ಟರಿಗೂ ಅವರ ಕರುಣೆ ಸಿಕ್ಕಿದೆ. ಪ್ರತಾಪರುದ್ರನೊಬ್ಬ ಮಹಾಪಾಪಿಯೇ? ಪ್ರಾಣತ್ಯಾಗ ಮಾಡುವುದೊಂದೇ ನನಗಿರುವ ದಾರಿ’ ಎಂದು ದುಃಖಿಸಿದ ರಾಜ. ಅವನ ನಿರ್ಣಯ ಭಟ್ಟಾಚಾರ್ಯರಿಗೆ ಅಚ್ಚರಿ ತಂದಿತು.
ಅವರು ಸಾಂತ್ವನ ಮಾಡಿದರು. ಒಂದು ಉಪಾಯವನ್ನೂ ಸೂಚಿಸಿದರು. ಜಗನ್ನಾಥನ ರಥಯಾತ್ರೆ ನಡೆಯುವಾಗ ಮಹಾಪ್ರಭುಗಳು ಭಗವತ್ ಪ್ರೇಮಾವೇಶದಿಂದ ಅದರ ಎದುರು ನರ್ತಿಸುತ್ತಾರೆ. ಅಲ್ಲಿಂದ ಅವರು ಗುಂಡಿಚಾಉದ್ಯಾನಕ್ಕೆ ಹೋಗುತ್ತಾರೆ. ಅಲ್ಲಿಗೆ ನೀನು ರಾಜ ಪೋಷಾಕು ಧರಿಸದೆ ಸಾಮಾನ್ಯನಂತೆ ಬರಬೇಕು. ಅವರು ಆ ಸಮಯದಲ್ಲಿ ಬಹಿಃಪ್ರಜ್ಞೆಯಲ್ಲಿ ಇರುವುದಿಲ್ಲ. ನೀನು ಭಾಗವತದ ಶ್ಲೋಕಗಳನ್ನು ಪಠಿಸಬೇಕು. ಆಗ ಪ್ರಭುಗಳು ನಿನ್ನೆಡೆ ಕೃಪೆದೋರುತ್ತಾರೆ. ಈಗಾಗಲೇ ರಾಮಾನಂದ ರಾಯರು ನಿನ್ನ ಬಗ್ಗೆ ಸದಭಿಪ್ರಾಯ ಮೂಡಿಸಿದ್ದಾರೆ’ ಎಂದರು.
ಇದಕ್ಕಿಂತ ಮೊದಲು ರಾಜ ತನಗೆ ಶ್ರೀಚೈತನ್ಯರ ದರ್ಶನ ದೊರಕಿಸಿಕೊಡಬೇಕೆಂದು ಅವರ ಭಕ್ತರಿಗೆ ಪತ್ರ ಬರೆದಿದ್ದ. ಅವರ ಕೃಪೆ ಸಿಗದಿದ್ದರೆ ತಾನು ರಾಜ್ಯವನ್ನು ತೊರೆದು ಭಿಕ್ಷೆ ಬೇಡಿ ಬದುಕುತ್ತೇನೆ ಎಂದು ಅದರಲ್ಲಿ ಉಖಿಸಿದ್ದ. ಇದರಿಂದ ದುಃಖಿತರಾದ ಪ್ರಮುಖ ಭಕ್ತರು ಶ್ರೀಚೈತನ್ಯರಲ್ಲಿ ರಾಜನನ್ನು ಅನುಗ್ರಹಿಸುವಂತೆ ಪ್ರಾರ್ಥಿಸಿದರು. ಅದಕ್ಕೆ ಪ್ರಭುಗಳು ಒಪ್ಪಲೇ ಇಲ್ಲ. ಕೊನೆಗೆ ಎಲ್ಲರ ಆಗ್ರಹಕ್ಕೆ ಮಣಿದು ರಾಜಕುಮಾರನನ್ನು ಭೇಟಿಯಾಗುವುದಾಗಿ ತಿಳಿಸಿದರು.
ಅದರಂತೆ ರಾಜಕುಮಾರ ಪ್ರಭುಗಳ ದರ್ಶನ ಪಡೆದ. ಅವನನ್ನು ಕಂಡ ಪ್ರಭುಗಳು ಕೃಷ್ಣನನ್ನು ನೆನಪಿಸುವ ಕುಮಾರ ಇವನು’ ಎಂದು ಅವನನ್ನು ಆಲಂಗಿಸಿ ಕೃಪೆ ತೋರಿದ್ದರು. ಆದರೆ ರಾಜನ ಭೇಟಿಗೆ ಸಮ್ಮತಿಸಿರಲಿಲ್ಲ. ಅಂತೂ ರಥಯಾತ್ರೆಯ ಅಂತಿಮ ಘಟ್ಟದಲ್ಲಿ ಗುಂಡಿಚಾ ಉದ್ಯಾನಕ್ಕೆ ಸಾಮಾನ್ಯ ವೈಷ್ಣವನಂತೆ ರಾಜ ಬಂದ. ಮಹಾಪ್ರಭುವಿನ ಸನ್ನಿಧಿಯಲ್ಲಿ ಭಾಗವತದ ಶ್ಲೋಕಗಳನ್ನು ಪಠಿಸಿದ. ಶ್ರೀಚೈತನ್ಯರು ಅದನ್ನು ಮೆಚ್ಚಿ ಅವನನ್ನು ಅನುಗ್ರಹಿಸಿದರು. ಇದು ಶ್ರೀಕೃಷ್ಣಚೈತನ್ಯರ ವೈರಾಗ್ಯ. ರಾಜ,ಅವನ ಸಂಪತ್ತು, ಅವನ ಪ್ರಭಾವ ಇದಾವುದೂ ಅವರನ್ನು ಸೆಳೆಯಲಿಲ್ಲ.
ಸಾಮಾನ್ಯರಲ್ಲಿ ಸಾಮಾನ್ಯರಿಗೂ ಲಭ್ಯರಿದ್ದ ಪ್ರಭುಗಳು ದೊರೆಯಂಥ ದೊರೆಯನ್ನು ಕಣ್ಣೆತ್ತಿಯೂ ನೋಡಲಿಲ್ಲ. ಭಗವಂತನ ಸಾಧನೆಗೆ ಭೋಗಲಾಲಸೆಯಿಂದ ದೂರವಿರ ಬೇಕೆನ್ನುವ ಪಾಠವನ್ನು ಇದರಲ್ಲಿ ಅವರು ಬೋಧಿಸಿದರು. ಇಂಥ ಇನ್ನೂ ಹಲವು ಸನ್ನಿವೇಶಗಳಲ್ಲಿ ಮಹಾಪ್ರಭುಗಳು ಈ ಅಂಶವನ್ನು ಮನದಟ್ಟು ಮಾಡಿದ್ದಾರೆ. ಶ್ರೀಕೃಷ್ಣಚೈತನ್ಯರು ಭಕ್ತಿಯ ಆಂದೋಲನವನ್ನೇ ಸಂಘಟಿಸಿದವರು. ಕೃಷ್ಣ ಭಕ್ತಿಯ ಅಮೃತಪಾನಕ್ಕೆ ಮೇಲು – ಕೀಳು ಮೊದಲಾದ ಯಾವ ಭೇದವೂ ಇಲ್ಲವೆನ್ನುವ ಸನಾತನ ಸಂಸ್ಕೃತಿಯ ನಿಲುವನ್ನು ಆಚರಿಸಿ ತೋರಿಸಿದವರು. ಇಂದಿಗೂ ನಾಮ ಸಂಕೀರ್ತನೆಯ ಮಹಾಮಾರ್ಗದಲ್ಲಿ ಜೀವಿಗಳು ಸಂಚರಿಸುವಂತೆ ಮಾಡಿದ ಮಹಾಪುರುಷರು.