ಪ್ರತಿನಿಧಿಗಳೇ, ಈ ಕಡೆಗೂ ಸ್ವಲ್ಪ ಗಮನ ಕೊಡಿ…
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್‌
ರಶ್ಮಿ ಸಾಮಂತ್ ಬಗ್ಗೆ ನೀವು ಕೇಳಿರಬಹುದು. ಕೇಳದೇ ಇದ್ದವರಿಗಾಗಿ ಅವರ ಸಣ್ಣ ಪರಿಚಯ ಮಾಡಿಕೊಡುತ್ತೇನೆ. ಸಣ್ಣಪರಿಚಯ ಎಂದ ಮಾತ್ರಕ್ಕೆ ಸಾಧನೆ ಸಣ್ಣದು ಎಂದಲ್ಲ. ಅವರ ಸಾಧನೆ, ವ್ಯಕ್ತಿತ್ವ ಎರಡೂ ದೊಡ್ಡದೇ.
ಕರ್ನಾಟಕದ ಕರಾವಳಿಯಲ್ಲಿರುವ ಉಡುಪಿ ಜಿಲ್ಲೆಯ ಮಣಿಪಾಲದ ವತ್ಸಲಾ ಮತ್ತು ದಿನೇಶ್ ಸಾಮಂತ್ ಪುತ್ರಿ ರಶ್ಮಿ. ಹೆಮ್ಮೆಯ ಕನ್ನಡತಿ. ಹುಟ್ಟುತ್ತಲೇ ಬಂಗಾರದ ಬಟ್ಟಲನ್ನಾಗಲೀ, ಬೆಳ್ಳಿ ತಟ್ಟೆಯನ್ನಾಗಲೀ ಕಂಡವರಲ್ಲ. ಸಾಮಾನ್ಯ ಕುಟುಂಬದಲ್ಲಿ ಜನಿಸಿ ತಮ್ಮ ಪ್ರಾಥಮಿಕ, ಪ್ರೌಢ ಶಿಕ್ಷಣವನ್ನು ಉಡುಪಿ, ಮಣಿಪಾಲ ದಲ್ಲಿಯೇ ಮುಗಿಸಿ, ಕರ್ನಾಟಕದ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಎಮಐಟಿಯಲ್ಲಿ (ಮಣಿಪಾಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಮೆಕಾನಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು.
ಎಂಐಟಿಯ ಸ್ಟೂಡೆಂಟ್ ಕೌನ್ಸಿಲ್‌ನಲ್ಲಿ ತಾಂತ್ರಿಕ ಕಾರ್ಯದರ್ಶಿಯಾಗಿ ಆಯ್ಕೆಯಾಗಿ, ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸಿ ದವರು. ಎಂಜಿನಿಯರಿಂಗ್ ಓದುತ್ತಿರುವಾಗಲೇ ವಿಶ್ವದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಇಂಗ್ಲೆಂಡ್‌ನ ಆಕ್ಸರ್ಡ್ ಯುನಿವರ್ಸಿಟಿಯಲ್ಲಿ ಉನ್ನತ ಶಿಕ್ಷಣದ ಕನಸು ಕಟ್ಟಿಕೊಂಡಿದ್ದರು. ಕಠಿಣ ಪರಿಶ್ರಮದಿಂದಲೇ ಅದನ್ನು ಸಾಕಾರಗೊಳಿಸಿ ಕೊಂಡರು.
ಇಂಗ್ಲಿಷ್ ಭಾಷೆಯಲ್ಲಿ ಪಾರಮ್ಯ ಸಾಧಿಸಲು ಸತತ ನಾಲ್ಕು ವರ್ಷ ಹೆಚ್ಚುವರಿ ತರಗತಿಗೆ ಹೋಗುತ್ತಿದ್ದರು. ಸಾಧನೆಯ ಬಲದಿಂದ ಆಕ್ಸರ್ಡ್ ಯುನಿವರ್ಸಿಟಿಯ ಲಿನಾಕರ್ ಕಾಲೇಜಿನಲ್ಲಿ ಎನರ್ಜಿ ಸಿಸ್ಟಮ್ ವಿಷಯದಲ್ಲಿ ಸ್ನಾತಕೋತ್ತರ ಶಿಕ್ಷಣಕ್ಕೆ ಪ್ರವೇಶಪಡೆಯುವಲ್ಲಿ ಯಶಸ್ವಿಯಾದರು. ಇದೆಲ್ಲ ಏನು ಮಹಾ? ಇಂಥ ಸಾಕಷ್ಟು ಜನರಿದ್ದಾರಲ್ಲ ಎನ್ನಬೇಡಿ, ಅಸಲಿಗೆ ಕಥೆ ಆರಂಭ ವಾಗುವುದೇ ಇನ್ನು ಮುಂದೆ. ಆಕ್ಸರ್ಡ್ ಸೇರಿದ ರಶ್ಮಿ ಲಿನಾಕರ್ ಕಾಲೇಜಿನ ಮಹಿಳಾ ಪ್ರತಿನಿಧಿಯಾಗಿ, ಅಲ್ಲಿಯ ಭಾರತೀಯ ವಿದ್ಯಾರ್ಥಿ ಸಮಿತಿಯ ಅಧ್ಯಯನ ಅಧಿಕಾರಿಯಾಗಿ,  ಆಕ್ಸರ್ಡ್ ಏವಿಯೇಷನ್ ಸೊಸೈಟಿಯ ಸಹ ಸಂಸ್ಥಾಪಕಿ ಮತ್ತು ಕಾರ್ಯ ದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಾರೆ.
ಮೊದಲೂ ವಿದ್ಯಾರ್ಥಿ ಪ್ರತಿನಿಧಿಯಾಗಿದ್ದ ರಶ್ಮಿ ಆಕ್ಸರ್ಡ್ ವಿಶ್ವವಿದ್ಯಾಲಯದಲ್ಲಿ ಅಧ್ಯಕ್ಷ ಸ್ಥಾನಕ್ಕೆ ನಡೆಯುವ ಚುನಾವಣೆಗೆಸ್ಪರ್ಧಿಸುತ್ತಾರೆ. ಅವರೇ ಹೇಳುವ ಪ್ರಕಾರ, ಅವರ ಜತೆ ಒಂದೇ ಕೋಣೆಯಲ್ಲಿ ವಾಸಿಸುತ್ತಿದ್ದ ಆರು ಜನ ಮತ್ತು ಅಕ್ಕ ಪಕ್ಕದ ಕೋಣೆಯಲ್ಲಿದ್ದ ಇಪ್ಪತ್ತೆಂಟು ವಿದ್ಯಾರ್ಥಿನಿಯರನ್ನು ಬಿಟ್ಟರೆ ರಶ್ಮಿಗೆ ಉಳಿದವರ ಪರಿಚಯವಿರಲಿಲ್ಲ. ಕಾಲೇಜು ಆರಂಭವಾಗಿ ಸರಿಯಾಗಿ ಐದು ತಿಂಗಳೂ ಆಗಿರಲಿಲ್ಲವಾದ್ದರಿಂದ ಉಳಿದ ವಿದ್ಯಾರ್ಥಿಗಳ ಪರಿಚಯವೂ ಅಷ್ಟೊಂದಿರಲಿಲ್ಲ.
ಆದರೂ ಜೀವನದಲ್ಲಿ ವಿದ್ಯಾರ್ಥಿ ಪ್ರತಿನಿಧಿಯಾಗುವುದಕ್ಕೆ ಇದು ಕೊನೆಯ ಅವಕಾಶವೆಂದು ಪರಿಗಣಿಸಿ, ಸ್ಪರ್ಧಿಸಲು ನಿರ್ಣ ಯಿಸುತ್ತಾರೆ. ವಿಶ್ವವಿದ್ಯಾಲಯದ ಪರಿಸರದಲ್ಲಿರುವ ಸಾಮ್ರಾಜ್ಯ ಶಾಹಿಗಳ ಪ್ರತಿಮೆಗಳನ್ನು ತೆಗೆಯುವ, ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ ಮಹಾಮಾರಿಯ ಸಂಪೂರ್ಣ ನಿಯಂತ್ರಣ ಘೋಷಿಸುವವರೆಗೆ ವಿದ್ಯಾರ್ಥಿಗಳ ವಲಸೆ ನಿಯಮಗಳನ್ನು ಸಡಿಲಿಸುವ, ಕಾಲೇಜಿನ ಆವರಣದಿಂದ ಪರಿಸರಕ್ಕೆ ಮಾರಕವಾದ ಇಂಧನಗಳನ್ನು ದೂರ ಇಡುವ, ಮಾನಸಿಕ ಆರೋಗ್ಯ ಯೋಜನೆಗೆ ಹೆಚ್ಚಿನ ಒತ್ತುಕೊಡುವ ನಾಲ್ಕು ಪ್ರಮುಖ ವಿಷಯಳನ್ನು ತಮ್ಮ ಪ್ರಣಾಳಿಕೆಯಲ್ಲಿ ಸೇರಿಸಿಕೊಂಡು ಚುನಾವಣೆಗೆ ಸ್ಪರ್ಧಿಸುತ್ತಾರೆ ರಶ್ಮಿ.
ಅಂದು ಚುನಾವಣೆಯಲ್ಲಿ ಒಟ್ಟೂ 3708 ಮತ ಚಲಾವಣೆಯಾಗುತ್ತದೆ. ಅದರಲ್ಲಿ ರಶ್ಮಿ ದಾಖಲೆಯ 1966ಮತಗಳನ್ನು (ಶೇಕಡಾ ಐವತ್ತಮೂರರಷ್ಟು) ಪಡೆದು ಜಯಶಾಲಿಯಾಗುತ್ತಾರೆ. ಅವರ ವಿರುದ್ಧ ಸ್ಪರ್ಧಿಸಿದ್ದ ಉಳಿದ ಮೂರು ಅಭ್ಯರ್ಥಿಗಳ ಒಟ್ಟೂ ಮತಕ್ಕಿಂತಲೂ 224 ಹೆಚ್ಚು ಮತಗಳನ್ನು ಪಡೆದು, ಆಕ್ಸರ್ಡ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದವಿಯನ್ನು ಅಲಂಕರಿಸಿದ ಭಾರತೀಯ ಮೂಲದ ಪ್ರಥಮ ಮಹಿಳೆ ಎಂಬ ಅಗ್ಗಳಿಕೆಗೆ ಪಾತ್ರರಾಗುತ್ತಾರೆ.
ಜತೆಗೆ ವಿರೋಧಿಗಳ ಕಣ್ಣು ಕೆಂಪಾಗುವುದಕ್ಕೂ, ಹೊಟ್ಟೆಉರಿಗೂ ಕಾರಣರಾಗುತ್ತಾರೆ. ಬಹುತೇಕ ಇತಿಹಾಸ, ಕಲಾ ವಿಭಾಗದ ವಿದ್ಯಾರ್ಥಿಗಳಿಗೇ ಮೀಸಲು ಎಂಬ ಭ್ರಾಂತಿಯಲ್ಲಿರುವವರು ಒಬ್ಬ ತಾಂತ್ರಿಕ ವರ್ಗದ ವಿದ್ಯಾರ್ಥಿನಿ ಅಧ್ಯಕ್ಷರಾಗುವುದನ್ನು ಹೇಗೆಸಹಿಸಿಯಾರು? ಆಗ ನಿಜವಾದ ರಾಜಕೀಯದ ಆಟ ಆರಂಭವಾಗುತ್ತದೆ. ಸೋತು ಸುಣ್ಣವಾದವರು ರಶ್ಮಿಯವರು 2017ರಲ್ಲಿಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದ ಎರಡುಪೋಸ್ಟ್‌ಗಳನ್ನು ಕೆದಕಿ ತೆಗೆಯುತ್ತಾರೆ. ಒಂದು, ಬರ್ಲಿನ್ ಹೋಲೋಕಾಸ್ಟ್ ಮೆಮೋರಿಯಲ್ ಎದುರು ತೆಗೆದ ಚಿತ್ರಕ್ಕೆ  ಮತ್ತು  ಪದಗಳನ್ನು ಬೇರೆ ಬೇರೆ ಬರೆದು, ಈ ಸ್ಮಾರಕ ಸಾಮೂಹಿಕ ಹತ್ಯಾಕಾಂಡ ಮತ್ತು ದೌರ್ಜನ್ಯದ ಕನಸನ್ನು ಚಿತ್ರಿಸುತ್ತದೆ ಎಂದು ಬರೆದದ್ದು.
ಇದು ಸಂವೇದನಾ ರಹಿತ ಎಂದು ಕೆಲವರು ಆರೋಪಿಸಿದರು. ಇನ್ನೊಂದು, ಅವರು ಮಲೇಷ್ಯಾಕ್ಕೆ ಹೋದಾಗ ಬೌದ್ಧ ದೇವಾ ಲಯದ ಎದುರು ನಿಂತು ತೆಗೆದ ಚಿತ್ರಕ್ಕೆ ಚಿಂಗ್ ಚಾಂಗ್ ಎಂದು ಬರೆದುಕೊಂಡದ್ದು. ಇದು ಚೀನಾ ಮೂಲದ ವಿದ್ಯಾರ್ಥಿಗಳಿಗೆ ಅವಹೇಳನಕಾರಿ ಎಂದರು. ಇದರ ಬಗ್ಗೆ ಪ್ರತಿಕ್ರಿಯೆ ನೀಡಿದ ರಶ್ಮಿ ಯಾರಿಗೂ ನೋವುಂಟುಮಾಡಬೇಕೆಂಬುದು ನನ್ನ ಉದ್ದೇಶ ವಾಗಿರಲಿಲ್ಲ, ಇಂಗ್ಲಿಷ್ ನನ್ನ ಮೂಲ ಭಾಷೆಯಲ್ಲ, ಆಗ ನಾನು ಪ್ರಬುದ್ಧಳೂ ಆಗಿರಲಿಲ್ಲ, (ಆ ಪೋಸ್ಟ್ ಹಾಕುವಾಗ ರಶ್ಮಿಗೆ ಹದಿನೇಳು ವರ್ಷ) ಮೋಜಿಗಾಗಿ ಈ ರೀತಿ ಶೀರ್ಷಿಕೆ ನೀಡಿದ್ದೆ ಎಂದು ಕ್ಷಮೆ ಯಾಚಿಸಿ ನೈತಿಕ ಹೊಣೆ ಹೊತ್ತು ಎರಡೇ ದಿನದಲ್ಲಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದರು.
ಕಥೆ ಅಲ್ಲಿಗೂ ನಿಲ್ಲಲಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅವರ ಧರ್ಮದ ವಿಷಯದಲ್ಲಿ, ವೈಯಕ್ತಿಕ ನಿಲುವಿನ ವಿಷಯದಲ್ಲಿ ಹಲವು ತಪ್ಪು ಮಾಹಿತಿಗಳು, ಸಂದೇಶಗಳು ಗಿರಕಿ ಹೊಡೆಯಲು ಆರಂಭಿಸಿದವು. ನಕಲಿ ದೂರಾಣಿ ಸಂಖ್ಯೆಯಿಂದ ಒಂದದ ಮೇಲೆ ಒಂದರಂತೆ ಬೆದರಿಕೆಯ ಸಂದೇಶಗಳು, ಕರೆಗಳು ಬರಲಾರಂಭಿಸಿದವು. ಇದರಿಂದ ಹೈರಾಣಾದ ರಶ್ಮಿ ಭಾರತಕ್ಕೆ ಹಿಂತಿರುಗಿ ದರು. ದುರಂತವೆಂದರೆ ರಶ್ಮಿ ವಿರೋಧಿ ತಂಡಕ್ಕೆ ನಾಯಕ ಯಾರು ಗೊತ್ತಾ? ಅದೇ ವಿಶ್ವವಿದ್ಯಾಲಯದಲ್ಲಿ ಇತಿಹಾಸ ಅಧ್ಯಯನ ಮಾಡುತ್ತಿದ್ದ ಭಾರತೀಯ, ಪಶ್ಚಿಮ ಬಂಗಾಳದ ಅಭಿಜಿತ್ ಸರ್ಕಾರ್.
ಸರ್ಕಾರ್ ಬಗ್ಗೆ ಒಂದೆರಡು ಮಾತು ಹೇಳದಿದ್ದರೆ ಕಥೆ ಮುಂದೆ ಸಾಗುವುದಿಲ್ಲ. ಈತ ಕೆಲವು ವರ್ಷಗಳಿಂದ ಯು.ಕೆ. ಯಲ್ಲಿದ್ದು ಮಿಲಿಯನ್ ಪೌಂಡ್‌ಗಿಂತಲೂ ಹೆಚ್ಚು ಪ್ರೋತ್ಸಾಹ ಧನ ಪಡೆದವ. ದಕ್ಷಿಣ ಏಷ್ಯಾದ ಪರಿಸರ ಇತಿಹಾಸ, ಕುಟುಂಬ ಯೋಜನೆ ಮತ್ತು ಜನನ ನಿಯಂತ್ರಣ ಇತಿಹಾಸ, ಮಾನವೀಯತೆಯ ಇತಿಹಾಸ, ಕ್ಷಾಮ ಮತ್ತು ಪರಿಹಾರದ ಇತಿಹಾಸ, ತೀವ್ರ ಹಿಂದೂ ಸಂಪ್ರದಾಯಿ ಇತಿಹಾಸ ಮೊದಲಾದ ವಿಷಯಗಳಲ್ಲಿ ಸಂಶೋಧನೆ ನಡೆಸಿದವ. ಜತೆಗೆ ಭಾರತದ ಸ್ವಾತಂತ್ರ್ಯಪೂರ್ವದ ಕೆಲವು ಬಡತನದ, ದೌರ್ಜನ್ಯದ ಕಥೆಗಳು, ಇತಿಹಾಸ ಇತ್ಯಾದಿಗಳ ವಿಷಯಗಳ ಕುರಿತು ಕೆಲವು ಲೇಖನಗಳನ್ನು ಬರೆದು ಪ್ರಕಟಿಸಿದವ.
ಅದರಲ್ಲಿ ಹೆಚ್ಚಿನವು ಎಡಪಂಥೀಯ ಮತ್ತು ಹಿಂದೂ ವಿರೋಧಿ ಧೋರಣೆ ಉಳ್ಳವು ಎಂಬುದು ಕೆಲವರ ಅಭಿಪ್ರಾಯ. ಆತನ ಸಾಮಾಜಿಕ ಜಾಲತಾಣಗಳಾದ ಟ್ವಿಟರ್, ಇನ್ಸ್ಟಾಗ್ರಾಂ ನೋಡಿದರೆ ಹಾಗೆ ಅನಿಸುವುದೂ ಹೌದು. ಅದೇನೇ ಇರಲಿ, ಅವರವರ ನಿಲುವು ಅವರದ್ದು. ಆದರೆ ಆತ ರಶ್ಮಿ ವಿಚಾರದಲ್ಲಿ ಸ್ವಲ್ಪ ಹೆಚ್ಚೇ ಬರೆದ ಎನ್ನುವುದು ಸುಳ್ಳಲ್ಲ. ವರ್ಣಭೇದ ನೀತಿ, ಪರಕೀಯ ದ್ವೇಷ, ಇಸ್ಲಾಮೋಫೋಬಿಯ, ಟ್ರಾನ್ಸೋಬಿಯ ಇತ್ಯಾದಿ ಆರೋಪದ ಮೇಲೆ ರಶ್ಮಿ ರಾಜೀನಾಮೆ ನೀಡಿದ್ದಾಳೆ ಎಂದು ಬರೆದ.
ಆಕೆ ಓದಿದ ಎಂಐಟಿಯ ಅಂತರ್ಜಾಲದಲ್ಲಿ ಪ್ರಧಾನಿ ಮೋದಿಯ ಚಿತ್ರವಿದೆ, ಆಕೆ ಚುನಾವಣೆ ಗೆಲ್ಲಲು ಸಾಕಷ್ಟು ಹಣ ಖರ್ಚು ಮಾಡಿದ್ದಳು, ಕೆಲವರು ಆಕ್ಸರ್ಡ್‌ನಲ್ಲಿ ಸನಾತನ ಹಿಂದೂ ಧರ್ಮವನ್ನು ತುರುಕಿಸಲು ಪ್ರಯತ್ನಿಸುತ್ತಿದ್ದಾರೆ, ವಿದ್ಯಾರ್ಥಿ ಗಳು ಇದಕ್ಕೆ ಬಲಿಯಾಗಬಾರದು, ಆಕ್ಸರ್ಡ್ ವಿಶ್ವವಿದ್ಯಾಲಯ ಸನಾತನಿ ಅಧ್ಯಕ್ಷರನ್ನು ಸ್ವೀಕರಿಸುವುದಕ್ಕೆ ಇನ್ನ ಸಿದ್ಧವಾಗಿಲ್ಲ ಎಂದು ತಿಳಿಸಿ ಎಂದು ಬರೆದ. ಫೇಸ್ಬುಕ್ ನಲ್ಲಿ ಆಗಾಗ ಕೆಲವು ಪ್ರೊಫೈಲ್ ಫೇಮ್ (ರೇಖಾಕೃತಿಯ ಚೌಕಟ್ಟು?) ಬರುತ್ತಿರುತ್ತದಲ್ಲ, (   , ವಿಶ್ವ ಪರಿಸರ ದಿನ ಇತ್ಯಾದಿ) ಅಂಥ ಒಂದು ಜೈ ಶ್ರೀರಾಮ್ ಎಂದು ಬರೆದು ಅಯೋಧ್ಯೆಯಲ್ಲಿ ನಿರ್ಮಾಣ ಗೊಳ್ಳುತ್ತಿರುವ ರಾಮ ಮಂದಿರದ ಚಿತ್ರವಿರುವ ಫ್ರೇಮನ್ನು ತಮ್ಮ ಭಾವಚಿತ್ರಕ್ಕೆ ಹಾಕಿಕೊಂಡಿದ್ದ ರಶ್ಮಿಯ ಪಾಲಕರ ಚಿತ್ರ ತೆಗೆದು, ಇವರು ಬಾಬರಿ ಮಸೀದಿಯನ್ನು ಕೆಡವಿದ್ದಕ್ಕೆ ಸಂಭ್ರಮ ಆಚರಿಸುತ್ತಿದ್ದಾರೆ ಎಂದು ಬರೆದ.
ಇವರ ಮೂಲ ಕರ್ನಾಟಕದ ಕರಾವಳಿ ಪ್ರದೇಶ ಕೋಮುವಾದದಿಂದ, ಕೋಮು ಗಲಭೆಗಳಿಂದ ಕೂಡಿದ್ದು ಎಂದ. ರಶ್ಮಿ ಮತ್ತುಅವರ ಮನೆಯವರದ್ದೆಲ್ಲ ಬಲಪಂಥೀಯ ನಿಲುವುಗಳು ಎನ್ನುವುದರ ಜತೆಗೆ ಇನ್ನೂ ಕೆಲವು ವಿಧದಲ್ಲಿ ರಶ್ಮಿಯ ಕುರಿತು ಇಲ್ಲ ಸಲ್ಲದ ಆರೋಪ ಹೊರಿಸಿದ. ಇದನ್ನೆಲ್ಲ ಗಮನಿಸಿಯೋ, ಗಮನಿಸದೆಯೋ ವಿಶ್ವವಿದ್ಯಾಲಯ ಮಾತ್ರ ಸುಮ್ಮನೆ ಕುಳಿತಿತ್ತು. ಅಷ್ಟೇ ಅಲ್ಲ, ಬ್ರಿಟನ್ನಿನ ಯಾವ ಮುಖ್ಯವಾಹಿನಿಯೂ ಇದನ್ನು ಪ್ರಮುಖ ವಿಷಯವೆಂದು ಪರಿಗಣಿಸದೇ ಇದ್ದದ್ದು ಒಂದು ಸೋಜಿಗವೇ.
ಈ ಪ್ರಕರಣದಲ್ಲಿ ಪ್ರಮುಖವಾಗಿ ಎದ್ದು ಕಾಣುವ ಎರಡು ಸಂಗತಿಗಳಲ್ಲಿ ಮೊದಲನೆಯದು ರಶ್ಮಿಗೆ ಆಗಿರುವ ನಷ್ಟ.  ಎರಡನೆ ಯದು, ಕರ್ನಾಟಕಕ್ಕೆ ಅದರಲ್ಲೂ ಕರಾವಳಿಯ ಜನತೆಗೆ ಆಗಿರುವ ಅವಮಾನ. ರಶ್ಮಿಯ ವೈಯಕ್ತಿಕ ಹೋರಾಟಕ್ಕೆ ಅವರುಮುಂದಾಗಿದ್ದಾರೆ. ಹಾಗೆ ನೋಡಿದರೆ ಅದು ತೀರಾ ವೈಯಕ್ತಿಕವೂ ಅಲ್ಲ. ಜನಾಂಗೀಯ ನಿಂದನೆ, ಧರ್ಮದ ಕುರಿತಾದ ಹೇಳಿಕೆ ಗಳು, ಕೇವಲ ವೈಯಕ್ತಿಕವಾಗಲು ಸಾಧ್ಯವೇ ಇಲ್ಲ. ಹಾಗೇನಾದರೂ ಆಗಿದ್ದರೆ ಸಮಾನತೆಯ ವಿಷಯದಲ್ಲಿ ಉದ್ದುದ್ದದ ಭಾಷಣ ಗಳನ್ನು ಯಾರೂ ಕೇಳಿಸಿಕೊಳ್ಳುತ್ತಿರಲಿಲ್ಲ, ಮಾರುದ್ದದ ಪಾಠಗಳನ್ನೂ ಓದುತ್ತಿರಲಿಲ್ಲ.
ತಾನು ಪ್ರಬುದ್ಧಳಾಗುವುದಕ್ಕೂ ಮುಂಚೆ ಹಾಕಿದ ಎರಡು ಪೋಸ್ಟ್‌ಗಳಿಂದ ಯಾರಿಗಾದರೂ ನೋವುಂಟಾಗಿದ್ದರೆ ಕ್ಷಮಿಸಿ ಎಂದು ಕ್ಷಮೆ ಕೇಳಿ, ರಾಜೀನಾಮೆ ನೀಡಿದ ನಂತರವೂ ಅವರ ಬೆನ್ನು ಬಿಡದೇ ಲೇವಡಿ ಮಾಡುವವರಿಗೆ ಯಾವ ಶಿಕ್ಷೆಯೂ ಇಲ್ಲವೇ?ರಶ್ಮಿಯವರು ಮಾಡಿದ್ದು ಜನಾಂಗೀಯ ನಿಂದನೆ ಎಂದಾದರೆ ಈಗ ಅಭಿಜಿತ್ ಸರ್ಕಾರ್ ನೇತೃತ್ವದಲ್ಲಿ ಉಳಿದವರು ರಶ್ಮಿಯವರ ಕುರಿತಾಗಿ ಮಾಡುತ್ತಿರುವುದು ಏನು? ಅಧ್ಯಯನದ ಹೆಸರಿನಲ್ಲಿ ಲಕ್ಷಗಟ್ಟಲೆ ಸಹಾಯಧನ ಪೀಕುವ ಅಭಿಜಿತ್‌ಗೆ ಯಾವನಿರ್ಬಂಧವೂ ಯಾಕಿಲ್ಲ? ಮಂಗಳೂರಿನಿಂದ ಕಾರವಾರದವರೆಗೆ ವಿಸ್ತಾರಗೊಂಡ ಕರ್ನಾಟಕದ ಕರಾವಳಿ ಕೇವಲ ಕೋಮು ಗಲಭೆಗಷ್ಟೇ ಸೀಮಿತ ಎಂದು ಬಣ್ಣ ಬಳಿದವನಿಗೆ ಅಲ್ಲಿಯ ಸಾಮರಸ್ಯದ ಪಾಠ ಹೇಳುವವರು ಯಾರು? ರಾಜಕೀಯವೊಂದನ್ನುಬಿಟ್ಟು ನೋಡಿದರೆ ಕರಾವಳಿಯ ಹಿಂದೂ ಮುಸ್ಲಿಂ ಭ್ರಾತೃತ್ವ ಸಾಮಾನ್ಯದ್ದಲ್ಲ.
ಇದೇ ರಶ್ಮಿಯ ತವರೂರಾದ ಉಡುಪಿಯಲ್ಲಿರುವ ಪೇಜಾವರ ಮಠ ಮುಸ್ಲಿಮರ ಪವಿತ್ರ ರಂಜಾನ್ ತಿಂಗಳಿನಲ್ಲಿ ಔತಣ ಕೂಟಏರ್ಪಡಿಸಿದ್ದಿದೆ. ಅದೇ ಮಠದ ಆಚರಣೆಗೆ ಬುದ್ಧಿ ಭ್ರಮಣೆಗೊಂಡ ಹಿಂದೂಗಳಿಂದ ತೊಂದರೆ ಉಂಟಾಗುವ ಲಕ್ಷಣ ಕಂಡು ಬಂದಾಗ ಅಲ್ಲಿಯ ಮುಸ್ಲಿಂ ಸಮುದಾಯ ಮಠದ ರಕ್ಷಣೆಗೆ ನಿಂತಂತಿದೆ. ಉಡುಪಿಯ ಪರ್ಯಾಯಕ್ಕೆ ಇಂದಿಗೂ ಮುಸ್ಲಿಮರುಹೊರೆ ಕಾಣಿಕೆ ಕೊಡುತ್ತಾರೆ. ಗಣೇಶೋತ್ಸವಕ್ಕೆ ದೇಣಿಗೆ ನೀಡುತ್ತಾರೆ, ಮೆರವಣಿಗೆಯಲ್ಲಿ ಭಾಗಿಯಾಗುತ್ತಾರೆ.
ಕರ್ನಾಟಕದ ಕರಾವಳಿಯಲ್ಲಷ್ಟೇ ಕಾಣಸಿಗುವ ಭೂತ ಕೋಲ, ನಾಗ ಮಂಡಳ್, ಯಕ್ಷಗಾನದಂಥ ಪವಿತ್ರ ಕಲೆಯಲ್ಲಿ ಭಾಗವಹಿ ಸುತ್ತಾರೆ. ಕರ್ನಾಟಕದ ಕರಾವಳಿಯ ಅದೆಷ್ಟೋ ಹಿಂದೂಗಳು ಕಲಬುರ್ಗಿಯ, ಹುಬ್ಬಳ್ಳಿಯ ದರ್ಗಾಗಳಿಗೆ ಭೇಟಿ ನೀಡುತ್ತಾರೆ. ಇಫ್ತಾರ್ ಕೂಟಗಳಲ್ಲಿ ಭಾಗಿಯಾಗುತ್ತಾರೆ. ಮೊಹರಂ ಹಬ್ಬದಲ್ಲಿ ಮುಸ್ಲಿಮರೊಂದಿಗೆ ಹಿಂದೂಗಳೂ ಫಕೀರ ರಾಗುತ್ತಾರೆ. ಮಣ್ಣಿನ ಕೊಡದಲ್ಲಿ ಬೆಲ್ಲದ ಪಾನಕ ಹೊರುತ್ತಾರೆ. ಇದನ್ನೆಲ್ಲ ಪಡಪೋಷಿಗಳಿಗೆ ಹೇಳು ವವರು ಯಾರು? ಕರಾವಳಿಗೆ ಕಳಂಕ ತರುವ ಮಾತುಗಳನ್ನಾಡುವ ಮೊದಲು ಅಭಿಜಿತ್ ತನ್ನ ಕೊರಳಪಟ್ಟಿಯನ್ನೊಮ್ಮೆ ಇಣುಕಿ ನೋಡಿಕೊಳ್ಳಬೇಕಿತ್ತು.
ಕೋಮು ಗಲಭೆಗೆ ಹೆಸರಾದದ್ದು ಕರ್ನಾಟಕವೋ ಅಥವಾ ಪಶ್ಚಿಮ ಬಂಗಾಳವೋ ಎಂದು ದೇಶದ ಯಾವುದೇ ಮೂಲೆಯಲ್ಲಿ ರುವ ಒಂದು ಪುಟ್ಟ ಮಗುವನ್ನು ಕೇಳಿದರೂ ಹೇಳುತ್ತದೆ. ಇಂಥ ಹೊಣೆಗೇಡಿಗಳಿಗೆ ಲೆಕ್ಕ ಕೇಳುವವರು ಯಾರೂ ಇಲ್ಲವಾ? ತಮ್ಮ ಮನೆತುಂಬ ಹೇಸಿಗೆ, ದೂರುವುದು ಪಕ್ಕದ ಮನೆಯ ಹಿತ್ತಲನ್ನು!
ಅವನೇನೋ ಹೊರಗಿನವ, ಅಜ್ಞಾನಿ. ನಮ್ಮವರು ಯಾರೂ ಈ ವಿಷಯದ ಕುರಿತು ಮಾತನಾಡದೇ ಇರುವುದು ಇನ್ನೂ ಬೇಸರದ ಸಂಗತಿ. ರಾಷ್ಟ್ರಮಟ್ಟದಲ್ಲಿ ಈ ವಿಷಯ ಚರ್ಚೆಯಾಯಿತು. ಲೋಕಸಭೆ, ರಾಜ್ಯಸಭೆಯಲ್ಲಿ ಈ ವಿಷಯ ಪ್ರಸ್ತಾಪಗೊಂಡಿತು.ವಿದೇಶಾಂಗ ಸಚಿವ ಜೈಶಂಕರ್ ಕೂಡ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಹೇಳಿದರು. ಕೆಲವು ರಾಷ್ಟ್ರೀಯ ಸುದ್ದಿಮನೆಗಳೂ ಈ ವಿಷಯ ಬಿತ್ತರಿಸಿದವು. ಆದರೆ ಅಸಲಿಗೆ ಯಾರು ಈ ವಿಷಯವನ್ನು ಹೆಚ್ಚು ಗಂಭೀರವಾಗಿ ಪರಿಗಣಿಸ ಬೇಕಿತ್ತೋ ಅವರು ಅಶ್ಲೀಲ ಸಿಡಿಯ ವರ್ತುಲದಿಂದ ಹೊರಕ್ಕೆ ಬರಲೇ ಇಲ್ಲ.
ನಮ್ಮ ಪ್ರತಿನಿಧಿಗಳಿಗೆ ಮನೆ ಮಗಳು ರಶ್ಮಿಯ ವಿಷಯಕ್ಕಿಂತಲೂ ಹೊಲಸು ರಾಸಲೀಲೆಯ ವಿಷಯವೇ ಪ್ರಮುಖವಾಯಿತು. ಆಡಳಿತ ಪಕ್ಷದವರು, ವಿಪಕ್ಷದವರೆಲ್ಲ ಸೇರಿ ಏಕಪತ್ನಿ, ಬಹುಪತ್ನಿ ವ್ರತಗಳ ಕುರಿತು ಚರ್ಚಿಸಿದರು. ನ್ಯೂಸ್ ಚಾನೆಲ್‌ನವ ರನ್ನಂತೂ ಕೇಳಲೇಬೇಡಿ, ತೀರಾ ಬರಗಾಲ ಪ್ರದೇಶದಿಂದ ಬಂದವನಿಗೆ ಭೂರಿ ಭೋಜನ ಸಿಕ್ಕಷ್ಟು ಖುಷಿಪಟ್ಟರು. ಅದನ್ನೇ ಮೃಷ್ಟಾನ್ನವೆಂಬಂತೆ ದಿನಕ್ಕೆ ಮೂರು ಬಾರಿ ಉಂಡರು, ಇಪ್ಪತ್ತು ಬಾರಿ ಅದನ್ನೇ ಕಕ್ಕಿದರು. ಯಾರೂ ರಶ್ಮಿಗೆ ದನಿಯಾಗಲಿಲ್ಲ ಎಂಬುದು ಖೇದಕರ. ಈ ವಿಷಯದಲ್ಲಿ ಯುನೈಟೆಡ್ ಕಿಂಗ್ಡಮ್‌ನ ‘ಕೆಯುಕೆ’ ಸಂಘಟನೆ ರಶ್ಮಿಗೆ ಆದ ಅನ್ಯಾಯದ ವಿರುದ್ಧ ದನಿ ಎತ್ತಿದೆ.
ಪಿಟಿಷನ್ ತಯಾರಿಸಿ, ಅದಕ್ಕೆ ಸಹಿ ಮಾದುವಂತೆ ಕೇಳಿಕೊಂಡಿದೆ. ಅದಕ್ಕೆ ಈಗಾಗಲೇ ಐವತ್ತು ಸಾವಿರದಷ್ಟು ಸಹಿಯೂ ಸಂಗ್ರಹ ವಾಗಿದೆ. ಉಳಿದಂತೆ ಸಾಗರೋತ್ತರದ, ವಿಶ್ವದಾದ್ಯಂತ ಇರುವ ಕನ್ನಡಿಗ ಸಂಸ್ಥೆಗಳಿಂದ ಹಿಡಿದು ಉಡುಪಿಯ ಯುವಕ, ಯುವತಿ ಮಂಡಳದವರೆಗೆ ಯಾರೂ ಈ ವಿಷಯ ಎತ್ತಲಿಲ್ಲ. ಕರೋನಾ ಕಾಲದಲ್ಲಿ ಲೋಕೋದ್ಧಾರಕ್ಕಾಗಿ ಹುಟ್ಟಿಕೊಂಡ ಕೆಲವು ಸಂಘ ಸಂಸ್ಥೆಗಳೂ ಸ್ವಪ್ರತಿಷ್ಠೆಯ ಜೂಮ್ ಸಭೆಗೆ ಸೀಮಿತವಾದವು.
ಯಾವ ಹೋರಾಟಕ್ಕಾದರೂ ಬಂದು ಭಾಗವಹಿಸುವ ಸ್ವಾತಂತ್ರ್ಯ ಹೋರಾಟಗಾರರಾಗಲೀ, ಸಾರಿಗೆ ಸಂಸ್ಥೆಯ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸುವ ರೈತ ಮುಖಂಡರಾಗಲೀ, ಈ ವಿಷಯದಲ್ಲಿ ಎಲ್ಲರೂ ಗಪ್ ಚುಪ್. ಭಾರತದ ರೈತ ಹೋರಾಟಕ್ಕೆ ಬೆಂಬಲ ಸೂಚಿಸಿದ ರಿಹಾನಾ, ಮಿಯಾ ಖಲೀಫಾ, ಗ್ರೇಟಾ ಎಲ್ಲಿದ್ದಾರೋ ಗೊತ್ತಿಲ್ಲ. ಕಾಲೇಜು ಆವರಣದಿಂದ ಪರಿಸರಕ್ಕೆ ಹಾನಿಯಾಗುವ ಇಂಧನವನ್ನು ದೂರವಿಡುವುದಾಗಿ ಹೇಳಿದ ರಶ್ಮಿಗಲ್ಲದಿದ್ದರೂ, ಕನ್ನಡದ ಸಾಹಿತಿಯೊಬ್ಬರು ತನ್ನ ಬಗ್ಗೆ ಪುಸ್ತಕ ಬರೆದಿದ್ದಾರೆಂಬ ಕಾರಣಕ್ಕಾದರೂ ಗ್ರೇಟಾ ಥಂಬರ್ಗ್ ಮಾತಾಡಬಹುದಿತ್ತು.
ಭಾರತದ ಒಂದಷ್ಟು ಜನ ತನ್ನ ನೀಲಿ ಚಿತ್ರ ನೋಡಿದ್ದಾರೆಂಬ ಕಾರಣಕ್ಕಾದರೂ ಮಿಯಾ ಖಲೀಫಾ ಒಂದಾದರೂ ಟ್ವೀಟ್ ಮಾಡ ಬಹುದಿತ್ತು. ಅಮೆರಿಕದಲ್ಲಿ ಕಪ್ಪು ಜನರ ಜೀವವೂ ಮುಖ್ಯ (ಬ್ಲ್ಯಾಕ್ ಲೈವ್ಸ್ ಮ್ಯಾಟರ್) ಅಭಿಯಾನಕ್ಕೆ ಬೆಂಬಲ ಸೂಚಿಸಿದ `ರಿಹಾನಾ ಭಾರತದಲ್ಲಿರುವ ಅಭಿಮಾನಿಗಳಿಗಳ ಸಮಾಧಾನ ಕ್ಕೆಂದು ಒಂದೆರಡು ಸಾಲು ಬರೆಯಬಹುದಿತ್ತು. ಹೋಗಲಿ, ಆಗ ಈ ಮೂವರ ಪರವಾಗಿ ನಿಂತವರೇನಾದರೂ ಹೇಳುತ್ತಾರಾ ಎಂದರೆ, ಅವರದ್ದೂ ಗಾಢ ಮೌನ!
ಅಮೆರಿಕದಲ್ಲಿ ನಡೆದರೆ ಮಾತ್ರ ಜನಾಂಗೀಯ ನಿಂದನೆ, ಉಳಿದ ಕಡೆ ಏನು ಲಗೋರಿ ಆಟವಾ? ವ್ಯಕ್ತಿಯೊಬ್ಬ ಒಂದು ಧರ್ಮಕ್ಕೆ ಸೇರಿದವನೆಂಬ ಕಾರಣಕ್ಕೆ ಇಲ್ಲ ಸಲ್ಲದ ಆರೋಪ ಹೊರಿಸುವುದು ಯಾರ ನಿಂದನೆ? ಆ ಧರ್ಮದ್ದೇ? ಧರ್ಮವನ್ನು ಆಚರಿಸುವವ್ಯಕ್ತಿಯz? ಇಡೀ ಸಮುದಾಯz? ಅಥವಾ ಆ ಪ್ರದೇಶದ್ದೇ? ಜನಾಂಗೀಯ ನಿಂದನೆ ಸಲ್ಲ, ಇದಕ್ಕೆ ಅಡ್ಡಿಯಿಲ್ಲವಾ? ಇಷ್ಟಕ್ಕೂ ವಿಶ್ವವಿದ್ಯಾಲಯ ಏನು ಹೇಳುತ್ತದೆ? ಇದುವರೆಗೆ ಏನೂ ಹೇಳಿಲ್ಲ! ಅಭಿಜಿತ್ ಸರ್ಕಾರ್‌ನ ಗುರು ಜಾನ್ ವಾಟ್‌ರಿಂದಾಗಲೀ, ಆತಅಭ್ಯಾಸ ಮಾಡುವ ವಿಭಾಗದಿಂದಾಗಲೀ ಅಧಿಕೃತವಾಗಿ ಯಾವ ಉತ್ತರವೂ ಬಂದಿಲ್ಲ. ಇನ್ನು ಬ್ರಿಟನ್ ಸರ್ಕಾರ? ರಾಜಕುಮಾರ ಹ್ಯಾರಿಯ ಪತ್ನಿ ಮೆಗಾನ್ ಮಾರ್ಕೆಲ್ ಸ್ವತಃ ತಾನೇ ಜನಾಂಗೀಯ ನಿಂದನೆಗೆ ಗುರಿ ಯಾಗಿದ್ದೇನೆಂದು ಹೇಳಿದ ನಂತರವೂ ಉತ್ತರಿಸದವರಿಂದ ಏನನ್ನು ಅಪೇಕ್ಷಿಸಬಹುದು? ಇರಲಿ, ಖಿನ್ನತೆಗೆ ಒಳಗಾಗಿದ್ದ ರಶ್ಮಿ ಈಗ ಸುಧಾರಿಸಿಕೊಂಡಿದ್ದಾರೆ, ಮುಂದಿನ ಓದಿಗೆ ಸಿದ್ಧವಾಗಿದ್ದಾರೆ.
ಗ್ಲೋಬಲ್ ಹಿಂದೂ ಫೆಡರೇಷನ್ ಸಂಸ್ಥೆಯ ಮುಖ್ಯಸ್ಥ ಪಂಡಿತ್ ಸತೀಶ್ ಶರ್ಮಾ ರಶ್ಮಿಗೆ ನ್ಯಾಯ ಒದಗಿಸಲು ದನಿ ಎತ್ತಿದ್ದಾರೆ. ಬ್ರಿಟನ್‌ನಲ್ಲಿರುವ ಟೈಮ್ಸ ಆಫ್ ಇಂಡಿಯಾದ ಪ್ರತಿನಿಧಿ, ಪತ್ರಕರ್ತೆ ನಓಮಿ ಕಾಂಟನ್ ಸಹಕರಿಸುತ್ತಿದ್ದಾರೆ. ರಶ್ಮಿಗೆ ಒಳಿತಾಗಲಿ,ಇನ್ಯಾರಿಗೂ ಈ ಪರಿಸ್ಥಿತಿ ಬರದಿರಲಿ. ನಮ್ಮ ಪ್ರತಿನಿಧಿಗಳು, ಮಾಧ್ಯಮದವರು, ಸಂಘ ಸಂಸ್ಥೆಗಳು, ಸಮಾಜ ಸುಧಾರಕರು ಇಂಥ ವಿಷಯದ ಕಡೆ ಹೆಚ್ಚು ಗಮನಹರಿಸಲಿ.