ಕಾಮನ್‌ ಸೆನ್ಸ್‌ ಎಲ್ಲರಲ್ಲೂ ಕಾಮನ್‌ ಅಲ್ಲ ಅಂತ ಕೃಷ್ಣ ಹೇಳಿದ್ದೇಕೆ ?
ಮೂರ್ತಿಪೂಜೆ
ಆರ್‌.ಟಿ.ವಿಠ್ಠಲಮೂರ್ತಿ
ಇದು ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದಾಗ ನಡೆದ ಘಟನೆ. ಆ ಸಂದರ್ಭದಲ್ಲಿ ಗುಜರಾತ್‌ನಲ್ಲಿ ಭೂಕಂಪ ಸಂಭವಿಸಿ ಸಾವಿರಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ದೇಶಕ್ಕೆ ದೇಶವೇ ನೊಂದ ಬೆಳವಣಿಗೆ ಅದು. ಆದರೆ ಇದಾದ ಕೆಲವೇ ದಿನಗಳಲ್ಲಿ ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಸಚಿವರಾಗಿದ್ದ ಟಿ.ಜಾನ್ ಒಂದು ಸಭೆಯಲ್ಲಿ ಆವೇಶದ ಹೇಳಿಕೆ ನೀಡಿದರು. ಈ ಭೂಕಂಪಗುಜರಾತ್ ಮತ್ತಿತರ ಕಡೆ ಅಲ್ಪಸಂಖ್ಯಾತರ ಮೇಲೆ ನಡೆದ ಹಲ್ಲೆ ಮತ್ತು ಚರ್ಚ್ ಮೇಲಿನ ದಾಳಿ ಪ್ರಕರಣಗಳಿಗೆ ದೇವರು ನೀಡಿದಶಿಕ್ಷೆ ಎಂದು ಬಿಟ್ಟರು. ಅವರ ಈ ಹೇಳಿಕೆ ಈ ಟಿವಿಯಲ್ಲಿ ಪ್ರಸಾರವೂ ಆಯಿತು.
ಅವತ್ತು ಉತ್ತರ ಭಾರತದ ರಾಜ್ಯಗಳಲ್ಲಿ ಕ್ರಿಶ್ಚಿಯನ್ ಧರ್ಮಪ್ರಚಾರಕರ ಮೇಲೆ ನಡೆದ ದಾಳಿ ಘಟನೆಗಳಿಂದ ಸಿಟ್ಟಿಗೆದ್ದಿದ್ದ ಜಾನ್ ಭಾವೋದ್ವೇಗದಲ್ಲಿ ಇಂಥ ಹೇಳಿಕೆ ನೀಡಿದ್ದರೇನೋ ನಿಜ. ಆದರೆ ಅವರಾಡಿದ ಮಾತು ಹಲವರ ಆಕ್ರೋಶಕ್ಕೆ ಕಾರಣವಾಯಿತು. ಅಷ್ಟೇ ಅಲ್ಲ, ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಕಿವಿಗೂ ತಲುಪಿತು.
ಅವತ್ತು ಕೃಷ್ಣ ಅವರಿಗೆ ಈ ಸುದ್ದಿ ತಲುಪಿಸಿದವರು:ಜಾನ್ ಅವರ ಹೇಳಿಕೆಯಿಂದ ಸಿಟ್ಟಿಗೆದ್ದ ಸಂಘಪರಿವಾರ ಹಲವೆಡೆ ಪ್ರತಿಭಟನೆ ನಡೆಸಲು ಸಜ್ಜಾಗುತ್ತಿದೆ, ಇದು ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬಹುದು ಎಂಬ ಎಚ್ಚರಿಕೆಯನ್ನೂ ನೀಡಿದರು. ರಾತ್ರೋ ರಾತ್ರಿ ಉದ್ಭವಿಸಿದ ಈ ಸಮಸ್ಯೆಯ ಬಗ್ಗೆ ಕೃಷ್ಣ ಅವರು ಚಿಂತಿತರಾದರು. ಹಾಗಂತ ಅಷ್ಟೇ ತರಾತುರಿಯಲ್ಲಿಇದಕ್ಕೆ ಮದ್ದು ನೀಡಲೂ ಸಾಧ್ಯವಿರಲಿಲ್ಲ. ಹಾಗಂತಲೇ ರಾತ್ರಿ ಸುಮ್ಮನಿದ್ದವರು ಬೆಳಿಗ್ಗೆ ತಮ್ಮ ಮಾಧ್ಯಮ ಸಮನ್ವಯಾಧಿಕಾರಿಎಚ್.ಬಿ. ದಿನೇಶ್ ಅವರಿಗೆ ಫೋನು ಮಾಡಿದರು.
ಮಿಸ್ಟರ್ ದಿನೇಶ್, ಸಚಿವ ಜಾನ್ ಅವರ ಹೇಳಿಕೆಯಿಂದ ವಿವಾದ ಸೃಷ್ಟಿಯಾಗಿದೆ. ಆದರೆ ಅವರು ನೀಡಿದ ಹೇಳಿಕೆಯನ್ನು ನಾನು ನೋಡಿಲ್ಲ. ಅವರ ಹೇಳಿಕೆಯ ವಿಡಿಯೋ ಕ್ಲಿಪ್ಪಿಂಗ್ ತರಿಸುತ್ತೀರಾ? ಎಂದರು. ಮುಖ್ಯಮಂತ್ರಿಗಳ ಸೂಚನೆಯ ಹಿನ್ನೆಲೆಯಲ್ಲಿ ಈ ಟಿವಿಯ ರಾಜಕೀಯ ಮುಖ್ಯಸ್ಥರಾದ ರಾಮಕೃಷ್ಣ ಉಪಾಧ್ಯಾಯ ಅವರನ್ನು ಸಂಪರ್ಕಿಸಿದ ದಿನೇಶ್ ಅವರು ಜಾನ್ ಹೇಳಿಕೆಯ ವಿವರ ಬೇಕಲ್ಲ? ಎಂದರು.
ಸರಿ, ಆ ಹೇಳಿಕೆಯ ವಿವರವಿದ್ದ ವಿಡಿಯೋ ತುಣುಕನ್ನು ತೆಗೆದುಕೊಂಡ ರಾಮಕೃಷ್ಣ ಉಪಾಧ್ಯಾಯ ಮುಖ್ಯಮಂತ್ರಿಗಳ ಕಚೇರಿ ತಲುಪಿದರು. ಅವರು ಬಂದ ಸುದ್ದಿ ತಲುಪುವ ವೇಳೆಗೆ ಕೃಷ್ಣ ತಲೆ ಹಲ ದಿಕ್ಕುಗಳಲ್ಲಿ ಓಡಿತ್ತು. ಅದೆಂದರೆ ಜಾನ್ ಅವರ ವಿವಾದ ಗ್ರಸ್ತ ಹೇಳಿಕೆ ಇದ್ದ ವಿಡಿಯೋ ತುಣುಕನ್ನು ನೋಡಿ ನಾನೇ ಒಂದು ತೀರ್ಮಾನ ತೆಗೆದುಕೊಳ್ಳುವುದು ಸರಿಯಲ್ಲ. ಬದಲಿಗೆ ಸಚಿವ ಸಂಪುಟದ ಹಿರಿಯರಾದ ಧರ್ಮಸಿಂಗ್, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಎಚ್. ರಂಗನಾಥ್ ಅವರು ಅದನ್ನು ನೋಡಲಿ. ನೋಡಿದ ನಂತರ ಅವರೇನು ಸಲಹೆ ನೀಡುತ್ತಾರೋ? ಹಾಗೆ ನಡೆದುಕೊಂಡರಾಯಿತು ಎಂಬುದು ಅವರ ಯೋಚನೆ.
ಸರಿ, ಕೃಷ್ಣ ಅವರ ಮಾತಿನಂತೆ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಕೆ.ಎಚ್. ರಂಗನಾಥ್ ಅವರಿಗೆ ಕರೆ ಹೋಯಿತು. ಈ ಕರೆಯ ಹಿನ್ನೆಲೆಯಲ್ಲಿ ಮೂವರೂ ನಾಯಕರು ವಿಧಾನಸೌಧದ ಮೂರನೇ ಅಂತಸ್ತಿನಲ್ಲಿರುವ ಮುಖ್ಯಮಂತ್ರಿ ಗಳ ಕಚೇರಿಗೆ ಹೋದರು. ಈ ಮೂವರು ನಾಯಕರನ್ನು ಸ್ವಾಗತಿಸಿದ ಕೃಷ್ಣ ಅವರು ಸಚಿವ ಜಾನ್ ಅವರ ಹೇಳಿಕೆ ವಿವಾದ ಸೃಷ್ಟಿಸಿದೆ. ಅದರ ವಿಡಿಯೋ ಕ್ಲಿಪ್ಪಿಂಗ್ ಅನ್ನು ನೋಡಿ, ಮುಂದೇನು ಮಾಡಬೇಕು ಅಂತ ಸಲಹೆ ನೀಡಿ. ಈ ವಿಷಯದಲ್ಲಿ ನಾನೇ ಒಂದು ತೀರ್ಮಾನಕ್ಕೆ ಬರುವುದು ಸರಿಯಲ್ಲ. ನೀವು ನೀಡುವ ಸಲಹೆಯ ಆಧಾರದ ಮೇಲೆ ಒಂದು ನಿರ್ಣಯ ಕೈಗೊಳ್ಳೋಣಎಂದರು. ಅಷ್ಟೇ ಅಲ್ಲ, ತಾವು ಕಚೇರಿಯ ಹಾಲ್‌ನಲ್ಲಿರುವ ಖುರ್ಚಿಯಲ್ಲಿ ಕುಳಿತು ತಮ್ಮ ಪರ್ಸನಲ್ ಛೇಂಬರಿನಲ್ಲಿ ಈಮೂವರೂ ನಾಯಕರಿಗೆ ವಿಡಿಯೋ ತುಣುಕನ್ನು ತೋರಿಸಲು ದಿನೇಶ್ ಅವರಿಗೆ ಸೂಚನೆ ನೀಡಿದರು.
ಕೃಷ್ಣ ಅವರ ಮಾತಿನಂತೆ ಅವರ ಪರ್ಸನಲ್ ಛೇಂಬರಿಗೆ ಹೋದ ಧರ್ಮಸಿಂಗ್, ಖರ್ಗೆ ಹಾಗೂ ಕೆ.ಎಚ್. ರಂಗನಾಥ್ ಅವರು ಟಿ.ಜಾನ್ ಅವರ ಹೇಳಿಕೆ ಇದ್ದ ವಿಡಿಯೋ ತುಣುಕನ್ನು ನೋಡಿದರು. ನಂತರ ತಮ್ಮ ತಮ್ಮ ಮಾತನಾಡಿಕೊಂಡು ಹೊರಗೆ ಬಂದರು. ಹೊರಗೆ ಬಂದ ಮೂವರ ಪೈಕಿ ಕೆ.ಎಚ್.ರಂಗನಾಥ್ ಅವರು ಕೃಷ್ಣ ಅವರ ಬಳಿ ಜಾನ್ ಅವರ ಹೇಳಿಕೆಯಿಂದ ಸರಕಾರಕ್ಕೆ ಮುಜುಗರವಾಗುವುದು ನಿಜ. ಅವರು ಭಾವೋದ್ವೇಗದಲ್ಲಿ ಮಾತನಾಡಿzರೆ ಎಂಬುದು ನಿಜವಾದರೂ ಜನ ಅದನ್ನು ಸರಳವಾಗಿ ಸ್ವೀಕರಿಸುವುದಿಲ್ಲ.
ಹೀಗಾಗಿ ಅವರ ರಾಜೀನಾಮೆ ಪಡೆಯುವುದು ಸೂಕ್ತ. ಹೀಗೆ ರಾಜೀನಾಮೆ ಪಡೆದರೆ ಸರಕಾರಕ್ಕೂ ಮುಜುಗರ ತಪ್ಪುತ್ತದೆ ಎಂದರು.ರಂಗನಾಥ್ ಅವರ ಮಾತು ಕೇಳಿದ ಕೃಷ್ಣ ತಕ್ಷಣವೇ ಟಿ.ಜಾನ್ ಅವರನ್ನು ಸಂಪರ್ಕಿಸಿ ವಿಧಾನಸೌಧದ ತಮ್ಮ ಕೊಠಡಿಗೆ ಬರುವಂತೆ ಸೂಚಿಸಿದರು. ಇದಾದ ಹದಿನೈದು ನಿಮಿಷಗಳಲ್ಲಿ ಜಾನ್ ಅವರು ಮುಖ್ಯಮಂತ್ರಿಗಳ ಎದುರು ಬಂದು ನಿಂತರು.ಜಾನ್ ಅವರನ್ನು ನೋಡುತ್ತಲೇ ನಿಮ್ಮ ಸ್ಟೇಟ್ ಮೆಂಟು ಕಾಂಟ್ರೋವರ್ಸಿ ಆಗುತ್ತಿದೆ ಜಾನ್ ಅವರೇ. ಹೀಗಾಗಿ ನೀವು ಮುಂದೇನು ಮಾಡಬೇಕು ಅಂತ ಹಿರಿಯ ನಾಯಕರಾದ ಧರ್ಮಸಿಂಗ್, ಖರ್ಗೆ, ರಂಗನಾಥ್ ಅವರು ಸಲಹೆ ನೀಡುತ್ತಾರೆ.
ಅವರ ಸಲಹೆಯಂತೆ ನಡೆದುಕೊಳ್ಳಿ ಎಂದರು ಕೃಷ್ಣ. ಇದಾದ ನಂತರ ತಮ್ಮ ಬಳಿ ಬಂದ ಜಾನ್ ಅವರಿಗೆ ರಂಗನಾಥ್ ‘ಜಾನ್ ಅವರೇ, ನಿಮ್ಮ ಹೇಳಿಕೆಯ ಹಿಂದಿನ ನೋವು ನಮಗರ್ಥವಾಗುತ್ತದೆ. ಆದರೆ ಅದನ್ನು ಜನಸಮೂಹ ಗ್ರಹಿಸುವ ರೀತಿ ಬೇರೆ. ಇದೇ ಕಾರಣಕ್ಕಾಗಿ ವಿವಾದವೆದ್ದಿದೆ. ಮುಖ್ಯಮಂತ್ರಿಗಳಿಗೆ ಮತ್ತು ಸರಕಾರಕ್ಕೆ ಮುಜುಗರ ವಾಗಬಾರದು ಎಂದರೆ ತಕ್ಷಣವೇ ನಿಮ್ಮ ರಾಜೀನಾಮೆ ಪತ್ರ ನೀಡಿ’ ಎಂದರು.
ಜಾನ್ ಅವರು ದಸರಾ ಮಾತನಾಡಲಿಲ್ಲ. ಬದಲಿಗೆ ತಕ್ಷಣವೇ ರಾಜೀನಾಮೆ ಪತ್ರ ಸಿದ್ಧಪಡಿಸಿ ಮುಖ್ಯಮಂತ್ರಿಗಳ ಕೈಗೆ ಕೊಟ್ಟರು. ಹೀಗೆ ಏಕಕಾಲಕ್ಕೆ ಜನರ ಆಕ್ರೋಶವನ್ನು ತಣಿಸಿದ ಕೃಷ್ಣ ಅದೇ ಕಾಲಕ್ಕೆ ಸರಕಾರಕ್ಕಾಗುವ ಮುಜುಗರವನ್ನೂ ತಪ್ಪಿಸಿದರು.ಸಂಪುಟದಲ್ಲಿ ಭಿನ್ನ ಧ್ವನಿಗಳು ಏಳದಂತೆ ನೋಡಿಕೊಂಡಿದ್ದಲ್ಲದೆ, ಎಡೆ ಪ್ರತಿಭಟನೆಗೆ ಸಜ್ಜಾಗಿದ್ದವರು ಗಪ್ ಚುಪ್ ಆಗುವಂತೆಮಾಡಿದರು.
ಇದೇ ಎಸ್.ಎಂ.ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ಮತ್ತೊಂದು ಘಟನೆ ನಡೆಯಿತು. ಆ ಸಂದರ್ಭದಲ್ಲಿ ಒಂದು ಸಲ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಹಿರಿಯ ಪೊಲೀಸ್ ಅಧಿಕಾರಿ ಜಯಪ್ರಕಾಶ್ ಅವರಿಗೆ ಫೋನು ಮಾಡಿದರು. ಅವತ್ತು ಇಂಟಲಿಜೆನ್ಸ್ ಮುಖ್ಯಸ್ಥರಾಗಿದ್ದ ಜಯಪ್ರಕಾಶ್ ಅವರು ಮುಖ್ಯಮಂತ್ರಿ ಎಸ್.ಎಂ.ಕೃಷ್ಣರ ಅವರ ಮೆಚ್ಚಿನ ಅಧಿಕಾರಿ ಅನ್ನಿಸಿ ಕೊಂಡವರು. ಇಂತಹ ಜಯಪ್ರಕಾಶ್ ಅವರಿಗೆ ಫೋನು ಮಾಡಿದ ದೇವೇಗೌಡರು ಏನ್ರೀ ಜಯಪ್ರಕಾಶ್, ನಿಮ್ಮ ಸಿಎಂ ಬೇಕು ಅಂತಲೇ ನನ್ನ ವಿರುದ್ಧ ದ್ವೇಷ ಕಾರುತ್ತಿದ್ದೀರಾ? ಎಂದರು.
ದೇವೇಗೌಡರ ಮಾತು ಕೇಳಿ ಜಯಪ್ರಕಾಶ್ ತಬ್ಬಿಬ್ಬು. ಹಾಗಂತಲೇ ಸಾರ್ ಏನಾಯಿತು? ಎಂದು ಪ್ರಶ್ನಿಸಿದರು. ಅದಕ್ಕುತ್ತರಿಸಿದ ದೇವೇಗೌಡರು ಹಾಸನ ಜಿಲ್ಲೆಗೆ ಇಂತಹ ಪೊಲೀಸ್ ಅಧಿಕಾರಿಯನ್ನು ಹಾಕಿದ್ದೀರಲ್ಲ? ಅವರನ್ನು ಜಿಲ್ಲೆಯ ಕಾನೂನು ಸುವ್ಯವ ಸ್ಥೆಯ ರಕ್ಷಣೆಗಾಗಿ ನೇಮಕ ಮಾಡಲಾಗಿದೆಯೋ? ಅಥವಾ ನನ್ನ ಕುಟುಂಬದವರಿಗೆ ಹಿಂಸೆ ನೀಡಲು ನೇಮಕ ಮಾಡಲಾಗಿದೆ ಯೋ? ಎಂದು ಕೇಳಿದರು.
ಮುಂದುವರಿದು ಮಾತನಾಡಿ, ನೋಡಿ ಜಯಪ್ರಕಾಶ್, ಈ ಅಧಿಕಾರಿ ನಾವು ಮಾಡುವ ಕೆಲಸಗಳಿಗೆಲ್ಲ ತಕರಾರು ಮಾಡುತ್ತಾಕುಳಿತಿದ್ದಾರೆ. ಹೀಗಾದರೆ ನಾವು ಜಿಯಲ್ಲಿ ರಾಜಕಾರಣ ಮಾಡಬೇಕೋ ಬೇಡವೋ? ಎಂದು ಕೇಳಿದರು. ಅಷ್ಟೇ ಅಲ್ಲ,ಈ ಅಧಿಕಾರಿಯ ಕಿರುಕುಳ ತಪ್ಪದಿದ್ದರೆ ನಾನೇ ಕೃಷ್ಣ ಅವರ ಮನೆಯ ಮುಂದೆ ಬಂದು ಧರಣಿ ಕೂರುತ್ತೇನೆ. ಈ ಮಾತನ್ನುನಾನು ಹೇಳಿದೆ ಎಂದು ನಿಮ್ಮ ಮುಖ್ಯಮಂತ್ರಿಗಳಿಗೆ ಹೇಳಿ ಅಂತ ಫೋನಿಟ್ಟರು.
ಇದಾದ ನಂತರ ಜಯಪ್ರಕಾಶ್ ಅವರು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ, ದೇವೇಗೌಡರ ಮಾತುಗಳ ವಿವರ ನೀಡಿದರು. ಆದರೆ ಕೃಷ್ಣ ಅವರಿಗೆ ಈ ವಿಷಯ ತಲುಪಿದೆ ಎಂದು ಗೊತ್ತಾದ ಕೂಡಲೇ ಹಾಸನ ಜಿಯ ರಾಜಕಾರಣದಲ್ಲಿ ದೇವೇಗೌಡರ ಪರಂಪರಾಗತ ವೈರಿ ಅನ್ನಿಸಿಕೊಂಡಿದ್ದ ಪುಟ್ಟಸ್ವಾಮಿಗೌಡರು ಸಿಟ್ಟಿಗೆದ್ದರು. ಹಾಗಂತಲೇ ಕೃಷ್ಣ ಅವರನ್ನು ಸಂಪರ್ಕಿಸಿ ಆ ದೇವೇಗೌಡರ ಮಾತಿಗೆ ತಲೆ ಕೆಡಿಸಿಕೊಳ್ಳುವ ಅಗತ್ಯವೇನಿಲ್ಲ ಸಾರ್, ಬೇಕಿದ್ದರೆ ಹೇಳಿ. ತಕ್ಷಣವೇ ಸಂಘಟನೆ ಗಳಿಗೆ ಹೇಳಿ ಅವರ ವಿರುದ್ಧ ದಂಗೆ ಎಬ್ಬಿಸಿಬಿಡುತ್ತೇನೆ. ಆದರೆ ಯಾವ ಕಾರಣಕ್ಕೂ ಆ ಅಧಿಕಾರಿಯನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಡಿ ಎಂದರು.
ಪುಟ್ಟಸ್ವಾಮಿ ಗೌಡರ ಮಾತು ಕೇಳಿದ ಕೂಡಲೇ ಕೃಷ್ಣ ಅವರ ಮುಖ ಕಪ್ಪಿಟ್ಟಿತು. ಹೀಗಾಗಿ ನೋ,ನೋ, ಅವೆಲ್ಲ ಬೇಡ ಗೌಡರೇ. ಅವರು ಈ ನೆಲದಿಂದ ಹೋಗಿ ದೇಶದ ಪ್ರಧಾನಿಯಾದವರು. ಮುಂದೆ ಕರ್ನಾಟಕದಿಂದ ಆ ಹುದ್ದೆಗೆ ಹೋಗಿ ಕೂರುವ ಯೋಗ ಯಾರಿಗಿದೆಯೋ? ಯಾವತ್ತು ಆ ಕಾಲ ಬರುತ್ತದೋ? ಗೊತ್ತಿಲ್ಲ, ಅಂಥವರ ವಿರುದ್ಧ ಪ್ರತಿಭಟನೆ ಮಾಡಿಸುವುದು ಗೌರವವೂ ಅಲ್ಲ ಎಂದು ಬಿಟ್ಟರು. ಹಾಗೆಯೇ ಜಯಪ್ರಕಾಶ್ ಅವರ ಬಳಿ ಮಾತನಾಡಿ ‘ಹಾಸನ ಜಿಯಲ್ಲಿರುವ ಆ ಪೊಲೀಸ್ ಅಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಿ, ಅವರು ದೇವೇಗೌಡರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದರೆ ಅದಕ್ಕೆಲ್ಲ ನಾವು ಸಪೋರ್ಟ್ಮಾಡಬಾರದು ಎಂದು ಸೂಚಿಸಿದರು.
ಅವರ ಮಾತಿನ ಪ್ರಕಾರ ಜಯಪ್ರಕಾಶ್ ಅವರು ಪೊಲೀಸ್ ಮಹಾನಿರ್ದೇಶಕರಿಗೆ ಫೋನು ಮಾಡಿ ವಿಷಯ ತಿಳಿಸಿದರು. ಅದರ ಪ್ರಕಾರ ಹಾಸನ ಜಿಲ್ಲೆಯಿಂದ ಸದರಿ ಅಧಿಕಾರಿಯನ್ನು ಬೇರೆ ಕಡೆ ವರ್ಗಾವಣೆ ಮಾಡಲಾಯಿತು. ಆದರೆ ಎರಡೇ ದಿನಗಳಲ್ಲಿ ಜಯಪ್ರಕಾಶ್ ಅವರಿಗೆ ದೇವೇಗೌಡರಿಂದ ಕರೆ ಬಂತು. ಅಲ್ರೀ ಜಯಪ್ರಕಾಶ್, ನನ್ನ ಜಿಯಲ್ಲಿ ತಲೆನೋವಾಗಿರುವ ಅಧಿಕಾರಿ ಯನ್ನು ವರ್ಗಾವಣೆ ಮಾಡಿ ಎಂದರೆ ಸೀದಾ ನನ್ನ ಮನೆ ಬಾಗಿಲಿಗೇ ತಂದು ಬಿಟ್ಟಿದ್ದೀರಲ್ಲ? ಇದೇನು ನ್ಯಾಯ ಎಂದವರು ಸಿಟ್ಟಿನಿಂದ ಪ್ರಶ್ನಿಸಿದಾಗ ಜಯಪ್ರಕಾಶ್ ಅವರು ಮತ್ತೊಮ್ಮೆ ತಬ್ಬಿಬ್ಬು.
ಏನಾಗಿದೆ ಎಂದು ತಿಳಿಯದೆ ಅಯೋಮಯಗೊಂಡ ಅವರು, ಸಾರ್, ನೀವು ಹೇಳಿದ್ದನ್ನು ಮಾಡಿದ್ದೇವೆ, ಇನ್ನೇನು ಸಮಸ್ಯೆ ಸಾರ್ ಎಂದರು. ಆಗ ದೇವೇಗೌಡರು ಅಲ್ಲ ಜಯಪ್ರಕಾಶ್ ಹಾಸನದಿಂದ ಆ ಅಧಿಕಾರಿಯನ್ನು ವರ್ಗಾವಣೆ ಮಾಡಿದವರು ನೇರವಾಗಿ ಬೆಂಗಳೂರು ಸೌತ್‌ಗೆ ತಂದು ಹಾಕಿದ್ದೀರಲ್ಲ? ಇಲ್ಲಿ ಬೆಂಗಳೂರು ಸೌತ್‌ನಲ್ಲಿ ನನ್ನ ಇಡೀ ಕುಟುಂಬ ನೆಲೆಸಿದೆ. ಬಾಣಲೆಯಿಂದ ಬೆಂಕಿಗೆ ಅನ್ನೋದು ಇದಕ್ಕೇ ಅಲ್ವಾ? ಎಂದು ಪ್ರಶ್ನಿಸಿದರು.
ದಾರಿ ಕಾಣದ ಜಯಪ್ರಕಾಶ್ ಪುನಃ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ವಿಷಯ ತಿಳಿಸಿದರು. ಆಗ ಗಂಭೀರರಾದ ಕೃಷ್ಣ ಒಂದು ಸಲ ಅಪಾದಮಸ್ತಕ ಜಯಪ್ರಕಾಶ್ ಅವರನ್ನೇ ನೋಡಿ ಮಿಸ್ಟರ್ ಜಯಪ್ರಕಾಶ್, ಕಾಮನ್ ಸೆನ್ಸ್ ಅನ್ನೋದು ಕಾಮನ್ ಆಗಿ ಎಲ್ಲರಲ್ಲೂ ಇರಬೇಕೆಂದಿಲ್ಲ ಎಂದವರೇ ಹೊರನಡೆದು ಬಿಟ್ಟರು. ಕೃಷ್ಣರ ಈ ಮಾತು ಕೇಳಿದ ಜಯಪ್ರಕಾಶ್ ತಲ್ಲಣಿಸಿಹೋದರು. ಅಷ್ಟೇ ಅಲ್ಲ, ಪೊಲೀಸ್ ಮಹಾನಿರ್ದೇಶಕರಿಗೆ ಪೋನು ಮಾಡಿ ಸಾರ್, ದೇವೇಗೌಡರು ಒಂದು ಸಲ ನನಗೆ ಕಿರುಕುಳ ವಾಗುತ್ತಿದೆ ಎಂದ ಮೇಲೆ ಅದೇ ಅಧಿಕಾರಿಯನ್ನು ಅವರಿರುವ ಏರಿಯಾದ ಕೂರಿಸಬಾರದಿತ್ತು ಎಂದು ನೋವಿನಿಂದ ಹೇಳಿದರು. ಕೊನೆಗೆ ಆ ಅಧಿಕಾರಿಯನ್ನು ದಕ್ಷಿಣ ಬೆಂಗಳೂರಿನಿಂದ ಬೇರೆ ಕಡೆ ವರ್ಗಾವಣೆ ಮಾಡಲಾಯಿತು ಅನ್ನಿ.
ಇದನ್ನೆಲ್ಲ ಏಕೆ ಹೇಳಬೇಕೆಂದರೆ ಇವತ್ತು ರಮೇಶ್ ಜಾರಕಿಹೊಳಿ ಪ್ರಕರಣ ನಡೆದು ತಿಂಗಳು ಕಳೆಯುತ್ತಾ ಬಂದಿದೆ. ಆದರೆ ಇನ್ನೂ ರಮೇಶ್ ಜಾರಕಿಹೊಳಿ ನಾನು ತಪ್ಪಿತಸ್ಥನಲ್ಲ ಎಂದು ಹೇಳುತ್ತಾ ಮತ್ತೆ ಮಂತ್ರಿಯಾಗಲು ಸರ್ಕಸ್ ಮಾಡುತ್ತಿದ್ದಾರೆ. ಅವರಿಂದ ಕಾಡಿಬೇಡಿ ರಾಜೀನಾಮೆ ಪತ್ರ ಪಡೆದವರು ಪ್ರಕರಣದ ತನಿಖೆ ನಡೆದು ವರದಿ ಬರಲಿ, ಸತ್ಯ ಏನೆಂದು ಗೊತ್ತಾಗಲಿ, ನೀವು ತಪ್ಪಿ ತಸ್ಥ ಅಲ್ಲ ಎಂದರೆ ಮತ್ತೆ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗುತ್ತೀರಿ. ಆದರೆ ಅಲ್ಲಿಯವರೆಗೆ ದುಸರಾ ಮಾತನಾಡಬೇಡಿ ಎಂದು ಖಡಕ್ ಆಗಿ ಹೇಳುವ ಕೆಲಸ ಮಾಡಿಲ್ಲ.
ಅವರ ಬಳಿ ನಿಷ್ಠುರವಾದರೆ ಸರಕಾರಕ್ಕೆ ಎಲ್ಲಿ ಡ್ಯಾಮೇಜ್ ಆಗುತ್ತದೋ? ಎಂಬುದು ಅವರ ಆತಂಕ. ಪರಿಣಾಮ ಸಾರ್ವಜನಿಕ ಬದುಕು ಇದೊಂದು ವಿಷಯದ ಪರ – ವಿರೋಧದ ಚರ್ಚೆಯಲ್ಲಿ ಮುಳುಗಿ ಇದೊಂದು ರಾಷ್ಟ್ರೀಯ ಸುದ್ದಿಯಂತೆ ಬಿಂಬಿತ ವಾಗುತ್ತಿದೆ. ಅಂದ ಹಾಗೆ ಒಂದು ಪ್ರತಿಕೂಲ ಸನ್ನಿವೇಶ ಎದುರಾದಾಗ ನಾಯಕರಾದವರು ಬಹಳ ಜಾಣ್ಮೆಯಿಂದ ನಡೆದುಕೊಳ್ಳ ಬೇಕಾಗುತ್ತದೆ. ಆ ಮೂಲಕ ಪರಿಸ್ಥಿತಿ ಥಂಡಾ ಥಂಡಾ ಕೂಲ್ ಕೂಲ್ ಮಾಡಬೇಕಾಗುತ್ತದೆ. ಹಾಗೆ ಪರಿಸ್ಥಿತಿಯನ್ನು ಜಾಣ್ಮೆಯಿಂದ ನಿಭಾಯಿಸಿದ ನಾಯಕರು ಇವತ್ತೂ ಕಣ್ಣ ಮುಂದಿದ್ದಾರೆ. ಆದರೆ ಅಂಥ ನಾಯಕರ ಚಾಣಾಕ್ಷ ನಡೆಯನ್ನು ಗಮನಿಸುವ ಪ್ರವೃತ್ತಿ ಆಳುವವರಲ್ಲಿ ಕಡಿಮೆಯಾಗುತ್ತಿದೆ. ಇದೇ ಸದ್ಯದ ವಿಪರ್ಯಾಸ.