ಕೆಲ ಗಂಡಸರೇಕೆ ಹೆಂಡತಿಗೆ ಹೆದರುತ್ತಾರೆ ?
ಅಭಿವ್ಯಕ್ತಿ
ಡಾ.ಕೆ.ಪಿ.ಪುತ್ತೂರಾಯ
ದಾಂಪತ್ಯ ಜೀವನ ಸುಖಮಯ ವಾಗಬೇಕಾದರೆ, ಗಂಡ ಹೆಂಡತಿಯರ ನಡುವೆ ಬೇಕಾದುದು ಭಯವಲ್ಲ;ಪ್ರೀತಿ. ಗಂಡನಾಗಿರಲಿ, ಹೆಂಡತಿಯಾಗಿರಲಿ, ಅಶಕ್ತರಾದಾಗ, ತಪ್ಪು ಮಾಡಿದಾಗ, ಒಬ್ಬರು ಇನ್ನೊಬ್ಬರಿಗೆಹೆದರಲೇಬೇಕು. ಅವರ ಮಾತುಗಳನ್ನು ಕೇಳಲೇಬೇಕು. ಹಿಂದಿನ ಕಾಲದವರಂತೆ, ಗಂಡನಿಗೆ ಹೆಂಡತಿಹೆದರಿಯೂ ಇರಬೇಕಾಗಿಲ್ಲ; ಇಂದಿನ ಕಾಲದವರಂತೆ, ಹೆಂಡತಿಗೆ ಗಂಡನೂ ಹೆದರಬೇಕಾಗಿಲ್ಲ; ಗೆಳೆಯರಂತೆಜತೆ ಜತೆಯಾಗಿದ್ದರೆ ಸಾಕು.
ಈ ಜಗತ್ತಿನಲ್ಲಿ ಬಹುತೇಕ ಗಂಡಸರು ಎರಡು ತರ – ತಮ್ಮ ಹೆಂಡತಿಗೆ ಹೆದರುವವರು ಮತ್ತು ಹೆಂಡತಿಗೆ ಹೆದರುವುದಿಲ್ಲವೆಂದು ಸುಳ್ಳು ಹೇಳುವವರು.
ಒಟ್ಟಿನಲ್ಲಿ ಕೆಲವು ಗಂಡಂದಿರಿಗೆ ಹೆಂಡತಿ ಎಂದರೆ ‘ಪ್ರೀತಿ’. ಆದರೆ ಹೆಚ್ಚಿನ ಗಂಡಂದಿರಿಗೆ ಹೆಂಡತಿ ಎಂದರೆ ‘ಭೀತಿ’. ಇಂಥ ಮನೆಗಳಲ್ಲಿ ಹೆಂಡತಿ ಹೈಕೋರ್ಟ್‌ನಂತಿದ್ದರೆ, ಗಂಡ ಸುಪ್ರೀಂ ಕೋರ್ಟ್ ಇದ್ದ ಹಾಗೆ! ಗಂಡ ತಲೆಯಂತಿದ್ದರೆ, ಹೆಂಡತಿ ಕತ್ತು.ಕತ್ತು ಹೇಳಿದಂತೆ ತಲೆ ಅಲ್ಲಾಡುತ್ತದೆ. ಮದುವೆಯ ಮೊದಲು ಗಂಡ ಹುಲಿ; ಮದುವೆಯ ನಂತರ ಇಲಿ.
ಮದುವೆಯ ನಂತರ ಹೆಚ್ಚಿನ ಹೆಂಗಸರು ಆಗುವರು ದಪ್ಪ; ಗಂಡಸರು ಹೌದಪ್ಪ ! ಮದುವೆಯ ಮುಂಚೆ ಅವಳೇ ರಾಗ; ಇವನೇ ತಾಳ, ಮದುವೆಯ ನಂತರ ಇವನೇ ತಬಲ; ಅವಳೇ ತಾಳ. ದಾಂಪತ್ಯವೆಂಬ ನಾಟಕದಲ್ಲಿ ಗಂಡ ಪಾತ್ರಧಾರಿ! ಹೆಂಡತಿ ಸೂತ್ರಧಾರಿ.
ಗಂಡನಿಗೆ ಹೆಂಡತಿಯ ಎದುರು ಬಾಯಿ ಬಿಡುವ ಏಕೈಕ ಅವಕಾಶವೆಂದರೆ ಆಕಳಿಗೆ ಬಂದಾಗ ಮಾತ್ರ ಹಾಗೂ ಅವಳ ಕೆನ್ನೆಗೆ ಹೊಡೆಯುವ ಏಕೈಕ ಸದವಕಾಶವೆಂದರೆ, ಆಕೆಯ ಕೆನ್ನೆಯ ಮೇಲೆ ಸೊಳ್ಳೆಯೊಂದು ಕೂತಿದ್ದಾಗ ಮಾತ್ರ. ಹಾಸ್ಯ ಪ್ರಿಯ ಗಂಡಸು ಹಾಸ್ಯೋತ್ಸವದಲ್ಲಿ, ಹೆಂಗಸರ ಮೇಲಿನ ಜೋಕ್ಸ್‌ಗಳನ್ನು ಕೇಳಿ ಮನಸಾರೆ, ಬಾಯಿ ತುಂಬಾ ಹೊಟ್ಟೆ ತುಂಬಾ ನಗ್ತಾ ಇದ್ದಾನೆ ಎಂದರೆ, ಅವನ ಹೆಂಡತಿ ಅವನ ಪಕ್ಕದಲ್ಲಿ ಕುಳಿತುಕೊಂಡಿಲ್ಲವೆಂಬ ಅರ್ಥ.
ಅಂತೆಯೇ ಒಬ್ಬ ಗಂಡಸು ತನ್ನ ಅಕ್ಕ ಪಕ್ಕ ಅಂದ ಚಂದದ ಸುಂದರ ಹುಡುಗಿಯರು ಕೂತಿದ್ದಾಗ ಅವರ‍್ಯಾರನ್ನೂ ನೋಡದೆ, ಗಂಭೀರವಾಗಿ ಕುಳಿತಿದ್ದಾನೆ ಎಂದರೆ, ಅವನ ಹೆಂಡತಿಯೂ ಅವನ ಪಕ್ಕದಲ್ಲೇ ಕುಳಿತಿದ್ದಾಳೆ ಎಂದರ್ಥ. ಇಂಥ ಹೆಂಗಸರು ಹೇಳುವ ಅತೀ ದೊಡ್ಡ ಸುಳ್ಳು ಎಂದರೆ, ಎಲ್ಲದಕ್ಕೂ ಯಾವುದಕ್ಕೂ ‘ನಮ್ಮ ಯಜಮಾನರನ್ನು ಕೇಳಬೇಕ್ರೀ ಅನ್ನೋದು. ಅಂತೆಯೇ ಹೆಂಡತಿಗೆ ಹೆದರುವ ಗಂಡಸರು ಹೇಳುವ ಅತಿ ದೊಡ್ಡ ಸುಳ್ಳು ಎಂದರೆ ‘ಅವಳನ್ನೇನು ಕೇಳುವುದು? ಎಲ್ಲಾ ನನ್ನದೇ ಫೈನಲ್ ಎಂಬ ಮಾತು.
ಗಂಡ ‘ನಾನೇನು ನಿಂಗೆ ಹೆದರ‍್ತಾ ಇಲ್ಲ ಎಂದು ಹೆಂಡತಿಗೆ ಅಂದಾಗ, ಅವಳೆಂದಳು ‘ಗೊತ್ತು ಬಿಡಿ ನಿಮ್ಮ ಧೈರ್ಯ, ಹೆದರದೇ ಇರ‍್ತಿದ್ರೆ, ನನ್ನನ್ನು ನೋಡಲು ಬಂದಾಗ, ಜತೆಗೆ ಇನ್ನೂ ನಾಲ್ಕು ಜನರನ್ನು ಕರಕೊಂಡು ಬರುವ ಅವಶ್ಯಕತೆಯಾದರೂ ಏನಿತ್ತು?ಒಟ್ಟಿನಲ್ಲಿ ಬಹುತೇಕ ಗಂಡಂದಿರು ತಮ್ಮ ಹೆಂಡತಿಗೆ ಹೆದರುತ್ತಾರೆ ಎಂಬುದು ಊರಿಗೇ ಗೊತ್ತಿರುವ ವಿಚಾರ. ಒಮ್ಮೆ ಗಂಡಸರ ಕೂಟದಲ್ಲಿ ‘ಹೆಂಡತಿಗೆ ಹೆದರುವ ಗಂಡಂದಿರು ಯಾರು? ಹೆಂಡತಿಗೆ ಹೆದರದ ಗಂಡಂದಿರು ಯಾರು?’ ಎಂಬುದರ ಬಗ್ಗೆ ತೀರ್ಮಾ ನಿಸಲು ಒಂದು ಗೆರೆಯನ್ನು ಎಳೆದು, ಹೆಂಡತಿಗೆ ಹೆದರುವವರು ಲೈನ್‌ನ ಈ ಕಡೆ ಬನ್ನಿ ಹೆದರದವರು ಲೈನ್‌ನ ಆ ಕಡೆ ಹೋಗಿ ಎಂದು ಹೇಳಲಾಯಿತು.
ಎಲ್ಲಾ ಗಂಡಸರು ಲೈನ್‌ನ ಈ ಕಡೆ, ಎಂದರೆ ಹೆದರುವವರ ಕಡೆ ಬಂದು ನಿಂತರು. ಒಬ್ಬಾತ ಮಾತ್ರ ಲೈನ್‌ನ ಮೇಲೆಯೇ ನಿಂತಿದ್ದ. ಇವನನ್ನು ಡಿ, ಒಬ್ಬನಾದರೂ ಹೆಂಡತಿಗೆ ಹೆದರದ ಗಂಡಸು ನಮ್ಮ ಗುಂಪಿನಲ್ಲಿದ್ದಾನಲ್ಲಾ ಎಂದು ತಿಳಿದು ಎಲ್ಲರಿಗೂ ಖುಷಿ ಆಯಿತು. ಆದರೂ ಕುತೂಹಲದಿಂದ ಜನ ಕೇಳಿದರೆ ‘ಲೈನ್ ಮೇಲೆ ಏಕೆ ಇನ್ನೂ ನಿಂತಿರುವೆ? ಆತ ಹೇಳೀದ ‘ಲೈನ್‌ನ ಈ ಕಡೆ ನಿಲ್ಲಬೇಕೋ ಅ ಕಡೆ ನಿಲ್ಲಬೇಕೋ ಎಂದು ನನ್ನ ಹೆಂಡ್ತಿಗೆ ಫೋನ್ ಮಾಡಿ ಕೇಳ್ತಾ ಇದ್ದೇನೆ ಅನ್ನೋದೇ!
ಏಕೆ ಕೆಲ ಗಂಡಂದಿರು ಹೆಂಡತಿಗೆ ಹೆದರುತ್ತಾರೆ ಎಂಬುದರ ಕಾರಣಗಳನ್ನು ತಿಳಿಯುವುದಾದರೆ ಮಡದಿ ತನಗಿಂತ ಹೆಚ್ಚು ಜಾಣೆ ಯಾಗಿದ್ದಲ್ಲಿ ಹಾಗೂ ತಾನು ದಡ್ಡನಾಗಿದ್ದಲ್ಲಿ ನಿರ್ಧಾರ ತಗೆದುಕೊಳ್ಳುವಲ್ಲಿ ಅಸಮರ್ಥನಾಗಿದ್ದಲ್ಲಿ ಗಂಡನಾದವನು ಹೆಂಡತಿಹೇಳಿದಂತೆ ನಡೆಯುತ್ತಾನೆ. ಜ್ಞಾನದ ಎದುರು ಎಂದೂ ಅಜ್ಞಾನ ಸೋಲುತ್ತದೆ ಹಾಗೂ ಪ್ರತಿಭೆಗೆ ಸ್ಥಾನಮಾನ ಇದ್ದೇ ಇದೆ.
ತಪ್ಪು – ಕೆಟ್ಟ ಕೆಲಸ, ಕಳ್ಳ ಕೆಲಸ ಮಾಡಿದ ಗಂಡ ಪಾಪಪ್ರಜ್ಞೆಯಿಂದಾಗಿ ಹೆಂಡತಿಗೆ ಹೆದರುತ್ತಾನೆ. ಕಾರಣ ಹೆಂಡತಿಯನ್ನು ಎದುರಿಸುವ, ಅವಳಿಗೆ ಎದುರಾಡುವ ಬುದ್ಧಿವಾದ ಹೇಳುವ ನೈತಿಕತೆಯನ್ನು ಈತ ಕಳೆದುಕೊಂಡಿರುತ್ತಾನೆ. ಅದು ಮಡದಿಗೆ ಗೊತ್ತಿಲ್ಲದೆ  ಮಾಡಿದ ವ್ಯಭಿಚಾರವಿರಬಹುದು, ವೇಶ್ಯಾವಾಟಿಕೆ ಇರಬಹುದು, ಇಲ್ಲವೇ ಭ್ರಷ್ಟಾಚಾರ ವಿರಬಹುದು.
ಮಡದಿಯು ಅತ್ಯಂತ ಶ್ರೀಮಂತರ ಮನೆಯ ಹುಡುಗಿಯಾಗಿದ್ದಲ್ಲಿ ಇಲ್ಲವೇ ಆಕೆಯ ತವರಿನ ಕಡೆಯವರು ಪ್ರಭಾವಿ ಬಲಿಷ್ಠ ವ್ಯಕ್ತಿಗಳಾಗಿದ್ದಲ್ಲಿ ಹಾಗೂ ತಾನು ಭಾರೀ ವರದಕ್ಷಿಣಿಯನ್ನು ಪಡೆದಿದ್ದಲ್ಲಿ ಗಂಡ ಹೆಂಡತಿಯ ಎದುರು ತನ್ನ ಬಾಲವನ್ನುಬಿಚ್ಚಲಾರ. ವರದಕ್ಷಿಣೆಯನ್ನು ಸ್ವೀಕರಿಸೋದೆಂದರೆ ನಮ್ಮನ್ನು ನಾವೇ ಮಾರಿಕೊಂಡಂತಲ್ಲವೇ. ಮಡದಿಯಾದವಳು ತನಗಿಂತ ಅಧಿಕಪಟ್ಟು ಸುಂದರಿಯಾಗಿದ್ದಾಗಲೂ, ಇಲ್ಲವೇ ದೈಹಿಕವಾಗಿ ಬಲಾಢ್ಯ ವಾಗಿದ್ದು, ದಷ್ಟ ಪುಷ್ಟವಾಗಿದ್ದಾಗಲೂ ಗಂಡಸರುಹೆಂಡತಿಗೆ ಹೆದರುವುದುಂಟು. ಎಷ್ಟಾದರೂ ಪ್ರಾಣ ಭಯ ಯಾರಿಗಿಲ್ಲ ಹೇಳಿ? ಅಂತೆಯೇ, ಹೆಂಡತಿ ಹೆಚ್ಚು ವಿದ್ಯಾವಂತೆ ಯಾದಾಗ, ಉನ್ನತ ಅಧಿಕಾರದಲ್ಲಿದ್ದಾಗ ಹಾಗೂ ಹೆಚ್ಚಿನ ಹಣ ಸಂಪಾದನೆ ಮಾಡುತ್ತಿದ್ದಾಗ ಇಲ್ಲವೇ ಪ್ರಭಾವಿ ರಾಜಕಾರಣಿ ಯಾಗಿದ್ದಾಗಲೂ, ಗಂಡಂದಿರು ಹೆಂಡತಿಗೆ ಹೆದರುತ್ತಾರೆ.
ಇದೇ ರೀತಿ, ತಾನು ದುಡಿಯಲು ಅಸಮರ್ಥನಾದಾಗ, ಇಲ್ಲವೇ ಸೋಮಾರಿಯಾಗಿ ನಿರುದ್ಯೋಗಿಯಾಗಿ ಮನೆ ಯಲ್ಲೇ ಬಿದ್ದು ಕೊಂಡಿರುವಾಗಲೂ, ಗಂಡಂದಿರು ಸಹಜ ಸ್ವಾಭಾವಿಕವಾಗಿ ಹೆಂಡತಿಗೆ ಹೆದರಿಕೊಂಡಿರುತ್ತಾರೆ. ಹೆಂಡತಿ ಹಠಮಾರಿ ಹೆಂಗಸಾ ಗಿದ್ದಾಗ, ಜಗಳಗಂಟಿಯಾದಾಗ ಮನೆಯ ಶಾಂತಿ ನೆಮ್ಮದಿಗೋಸ್ಕರ, ಮಾಡಿದ್ದೆಲ್ಲವನ್ನೂ ಸಹಿಸಿಕೊಂಡು, ಅವಳು ಹೇಳಿದ್ದನ್ನೆಲ್ಲ ವನ್ನೂ ಕೇಳಿಕೊಂಡು ಸುಮ್ಮನಾಗೋ ದುಂಟು!
ಆದರೆ ಆದರ್ಶ ದಂಪತಿ ಗಳಾಗಬೇಕಾದರೆ, ದಾಂಪತ್ಯ ಜೀವನ ಸುಖಮಯ ವಾಗಬೇಕಾದರೆ, ಗಂಡ ಹೆಂಡತಿಯರ ನಡುವೆ ಬೇಕಾದುದು ಭಯವಲ್ಲ; ಪ್ರೀತಿ. ಗಂಡನಾಗಿರಲಿ, ಹೆಂಡತಿಯಾಗಿರಲಿ, ಅಶಕ್ತರಾದಾಗ, ತಪ್ಪು ಮಾಡಿದಾಗ, ಒಬ್ಬರು ಇನ್ನೊಬ್ಬ ರಿಗೆ ಹೆದರಲೇಬೇಕು. ಅವರ ಮಾತುಗಳನ್ನು ಕೇಳಲೇಬೇಕು. ಹಿಂದಿನ ಕಾಲದವರಂತೆ, ಗಂಡನಿಗೆ ಹೆಂಡತಿ ಹೆದರಿಯೂ ಇರಬೇಕಾಗಿಲ್ಲ; ಇಂದಿನ ಕಾಲದವರಂತೆ, ಹೆಂಡತಿಗೆ ಗಂಡನೂ ಹೆದರಬೇಕಾಗಿಲ್ಲ; ಗೆಳೆಯರಂತೆ ಜತೆ ಜತೆಯಾಗಿದ್ದರೆ ಸಾಕು.
ಎಷ್ಟಾದರೂ ಇಬ್ಬರೂ ಒಂದೇ ಬಂಡಿಯ ಎರಡು ಗಾಲಿಗಳಿದ್ದಂತೆಯಲ್ಲವೇ. ಇಬರಿಬ್ಬರ ಪೈಕಿ ಯಾರು ಮೇಲು, ಯಾರು ಕೀಳು, ಯಾರ ಸ್ವರ, ಕೈ ಮೇಲೆ, ಯಾರ ಸ್ವರ, ಕೈ ಕೆಳಗೆ ಎಂಬ ಪ್ರಶ್ನೆಯೇ ಉದ್ಭವಿಸೋದಿಲ್ಲ. ಸಮಭಾವ, ಸಹಬಾಳ್ವೆಯೇ ಸುಖೀಸಂಸಾರದ ಸೂತ್ರ. ಹಾಗೆಂದು ಪ್ರತಿಯೊಂದು ವಿಚಾರದಲ್ಲೂ ಗಂಡನಿಗೆ/ಹೆಂಡತಿಗೆ ಹೆದರೋದು ಕೂಡಾ ತರವಲ್ಲ. ಸಂಘರ್ಷಕ್ಕೆ ಎಡೆ ಮಾಡಿಕೊಡದೆ, ತಮ್ಮತನವನ್ನು ಬಿಡದೆ, ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುತ್ತಾ ಜೀವನ ಯಾತ್ರೆ ಸಾಗಬೇಕು.ಗಂಡನಾದವನು ಹೆಂಡತಿ ದಾಸನೂ ಆಗಬಾರದು; ಹೆಂಡತಿಯಾದವಳು ಗಂಡನನ್ನು ಆಳುತ್ತಲೇ ಇರಬಾರದು.
ಹೀಗಾದರೆ, ಅದು ನೋಡುವವರಿಗೆ ಬಲು ಬೇಗ ಗೊತ್ತಾಗಿಬಿಡುತ್ತದೆ ಹಾಗೂ ಅದು ಅನ್ಯೋನ್ಯದ ಅನುರಾಗದ ದಾಂಪತ್ಯ ವೆನಿಸೋದಿಲ್ಲ. ಗಂಡನನ್ನು ಹೆಂಡತಿ ಅಥವಾ ಹೆಂಡತಿಯನ್ನು ಗಂಡ ತನ್ನ ಮುಷ್ಟಿಯಲ್ಲಿಟ್ಟು ಕೊಂಡರೆ, ಅದು ಇಬ್ಬರಿಗೂ ಶೋಭೆಯಲ್ಲ. ಇಬ್ಬರೂ ಒಬ್ಬರಿಗೊಬ್ಬರು ನೀಡಲೇ ಬೇಕಾದ ಪ್ರೀತಿ, ಕಾಳಜಿ, ಗೌರವಗಳನ್ನು ಕೊಡುತ್ತಲೇ ಇರಬೇಕು. ಸಂಸಾರ ದಲ್ಲಿ ಸಂಬಂಧವಲ್ಲ; ಅನುಬಂಧ ಮುಖ್ಯ.
ಒಬ್ಬರಿಗೊಬ್ಬರು ಸ್ಪರ್ಧಿಗಳಾದರೆ, ಕದನ ಕಟ್ಟಿಟ್ಟ ಬುತ್ತಿ! ಕೊನೆಗೊಂದು ಮಾತು; ಅವರವರ ಹೆಂಡತಿಗೆ ಗಂಡಂದಿರು ಹೆದರೋದು ಸರ್ವೇಸಾಮಾನ್ಯ, ಆದರೆ ಇನ್ನೊಬ್ಬರ ಹೆಂಡತಿಗೆ ಹೆದರುವುದು ಸಂಶಯಕ್ಕೆ ಕಾರಣವಾಗುತ್ತದೆ. ಹೀಗಾಗ ಕೂಡದಲ್ಲವೇ !