ಹೆತ್ತು ಹೊತ್ತವರು ಹೊರೆಯಾಗುವರೇ ?
ಅಭಿವ್ಯಕ್ತಿ
ಪರಿಣಿತ ರವಿ
ಹೆತ್ತವರೆಂದರೆ ನಮಗೆ ಅದ್ಭುತ ಭಾವಲೋಕದ ಮಿಡಿತ. ‘ಮಾತೃದೇವೋ ಭವ, ಪಿತೃ ದೇವೋ ಭವ’ ಎಂದು ಮಾತಾಪಿತರನ್ನು ದೈವತ್ವಕ್ಕೇರಿಸಿದ ಪೂಜನೀಯ ಸಂಸ್ಕೃತಿ ನಮ್ಮದು.
ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಹುಟ್ಟಲಾರಳು ಎಂದು ಶಂಕರಾಚಾರ್ಯರು ಹೇಳಿರುವುದು ಜನಜನಿತವಾಗಿದೆ. ಹೆತ್ತವರನ್ನು ಕುರಿತು ಮಾತನಾಡುವಾಗ ನಾಲಿಗೆ ನೂರಾಗುತ್ತದೆ; ಬರೆಯುವಾಗ ಲೇಖನಿ ವಾತ್ಸಲ್ಯದ ಹೊಳೆ ಹರಿಸುತ್ತದೆ. ತಾಯಿ- ತಂದೆಯರ ಪ್ರೀತಿಯ, ತ್ಯಾಗದ ಕುರಿತು ಹೇರಳವಾಗಿರುವ ಶ್ಲೋಕಗಳು, ಗಾದೆಮಾತುಗಳು, ನುಡಿಗಟ್ಟುಗಳು, ನೀತಿಕಥೆಗಳು ನಮಗೆ ಗೊತ್ತೇ ಇವೆ. ಅವರ ಮನಸ್ಸನ್ನು ನೋಯಿಸಿದರೆ ಏನಾಗುತ್ತದೆ ಎಂದೂ ಬವು.
ಹೆತ್ತವರನ್ನು ಪೂಜಿಸಿದ ಶ್ರವಣಕುಮಾರನ ಕಥೆಯೂ, ಧಿಕ್ಕರಿಸಿದ ದುರ್ಯೋಧನನ ಕಥೆಯೂ ನಮ್ಮ ಮುಂದಿದೆ. ಅಪ್ಪ-ಅಮ್ಮನ ಮಮತೆಯ ಬಗ್ಗೆಎಲ್ಲಾ ಭಾಷೆಗಳಲ್ಲೂ ವಿಪುಲವಾದ ಸಾಹಿತ್ಯ ರಚನೆಗಳಿವೆ. ಕನ್ನಡ ಸಾಹಿತ್ಯವಂತೂ ಇಂತಹ ರಚನೆಗಳಿಂದ ಶ್ರೀಮಂತವಾಗಿದೆ. ‘ನಿನ್ನ ತನುವಿನಿಂದ ಬಂದ ಮುದ್ದು ತನಯನೀತನು’ ಅನ್ನುವ ಬೇಂದ್ರೆಯವರ ಹೆಚ್ಚಿನ ಕವನಗಳಲ್ಲಿ ತಾಯಿ ಪ್ರೀತಿಯು ಎದ್ದು ಕಾಣುತ್ತದೆ. ’ಅಮ್ಮಾ ನಿನ್ನ ಎದೆಯಾಳದಲ್ಲಿ ಗಾಳಕ್ಕೆ ಸಿಕ್ಕ ಮೀನು…ಮಿಸುಕಾಡುತಿರುವೆ ನಾನು’ ಎಂಬ ಬಿ.ಎಸ್.ಲಕ್ಷ್ಮಣ್ ರಾವ್ ಅವರ ಭಾವಪೂರ್ಣ ಸಾಲುಗಳನ್ನು ಕೇಳದವರಾರು? ’ತಾಯ ತೋಳಿಂದ ಜಾರಿದ ಕಂದ ದೂಳಿನಲ್ಲಿ| ತೆವಳಿ ಬರುವುದು ಮತ್ತೆ ತಾಯ ಬಳಿಗೆ| ಗುಡಿಯಿಂದ ಹೊರಟು ದೇವರನು ಮೆರೆಸಿ ಬೀದಿಯಲಿ| ತೇರು ಹಿಂತಿರುಗುವುದು ಗುಡಿಯ ಬಳಿಗೆ’ – ತಾಯಿ-ಮಗುವಿನ ಬಂಧವನ್ನು ಗುಡಿ-ತೇರಿನ ಉಪಮೆಯಲ್ಲಿ ವರ್ಣಿಸಿದ ಕೆ.ಎಸ್.ನರಸಿಂಹಸ್ವಾಮಿಯವರ ಈ ಮನೋಹರ ಸಾಲುಗಳು ನವಿರೇಳಿಸುತ್ತವೆ.
ಹೀಗೆ ತಂದೆ ತಾಯಿಯರ ವಾತ್ಸಲ್ಯದ ಕುರಿತು ಬರೆಯದ ಕವಿಗಳು, ಬರಹಗಾರರೇ ಇಲ್ಲ ಅನ್ನಬಹುದು. ಆದರೆ ಇಷ್ಟೆ ಓದಿ, ಕೇಳಿ, ತಿಳಿದ ಪ್ರಸ್ತುತ ಸುಶಿಕ್ಷಿತ ಆಧು ನಿಕ ಸಮಾಜದಲ್ಲಿ ತಂದೆ ತಾಯಿಯರ ನೆಲೆ-ಬೆಲೆ ಏನಾಗಿದೆ ಅನ್ನುವುದೂ ಮುಖ್ಯವಾಗುತ್ತದೆ. ಈಗ ನಾವು ಒಂದು ಕರಡಿಯ ಬಳಿ ‘ನೀನು ಕರಡಿ ಥರವೇ ಇರು’ ಅನ್ನಲು ಆಗುವುದೇ? ಒಂದು ಹುಲಿಯಲ್ಲಿ ನೀನು ಹುಲಿಯಂತೆಯೇ ಬದುಕು’ ಎಂದು ಹೇಳಲು ಸಾಧ್ಯವೇ? ಇಲ್ಲ ತಾನೇ? ಏಕೆಂದರೆ ಪ್ರಾಣಿಗಳೆಲ್ಲವೂ ಅವು ಹೇಗಿರಬೇಕೋ ಹಾಗೆಯೇ ಇರುತ್ತವೆ. ಆದರೆ ಮನುಷ್ಯ? ಮನುಷ್ಯ ತನ್ನನ್ನು ತಾನು ಮರೆತು, ತನ್ನ ಮೂಲಭೂತ ಗುಣಗಳನ್ನು ಬದಿಗೊತ್ತಿ ಪ್ರಾಣಿಗಳಂತೆ ಆಡುವುದನ್ನು ನಾವು ಕಾಣುತ್ತೇವೆ.
ಹಾಗಾಗಿ ನಾವು ಆಗಾಗ ‘ಏಯ! ಮನುಷ್ಯನ ತರಹ ಇರೋದನ್ನು ಕಲಿಯೋ’, ‘ಅವನು ಮನುಷ್ಯನೇ ಅಲ್ಲ’ ಅಂತೆ ಹೇಳುವುದನ್ನು ಕೇಳುತ್ತೇವೆ. ಪರಸ್ಪರಪ್ರೀತಿ, ನಂಬಿಕೆ, ವಿಶ್ವಾಸ, ಮಮತೆ, ಹೊಂದಾಣಿಕೆ, ನಾವು-ನಮ್ಮವರೆಂಬ ಬಂಧಗಳು ಕಣ್ಮರೆಯಾಗುತ್ತಿದೆ ಎಂದೇ? ಮನುಷ್ಯನಲ್ಲಿ ಮೂಲಭೂತವಾಗಿ ಇರಬೇಕಾದ ಮಾನವೀಯತೆಯೇ ಮರೆಯಾಗುತ್ತಿದೆ ಎಂದೇ? ನಾವು ನಮ್ಮ ಮನೆಯ ನಾಯಿಮರಿಯನ್ನೋ, ಬೆಕ್ಕಿನ ಮರಿಯನ್ನೋ ಬೇಡವಾದಾಗ ಎ ದೂರ ಕೊಂಡುಹೋಗಿ ಬಿಟ್ಟು ಬರುವುದನ್ನು ಕಂಡಿದ್ದೇವೆ.
ಹೀಗೆ ಒಂದಷ್ಟು ದೂರ ಬಿಟ್ಟು ಬಂದ ಮರಿಗಳು ಒಂದೆರಡು ದಿನಗಳಲ್ಲಿ ಮತ್ತೆ ಪ್ರತ್ಯಕ್ಷವಾಗುವುದೂ ಇದೆ. ಆದರೆ ಜನ್ಮಕೊಟ್ಟ ತಾಯಿಯನ್ನೋ, ತಂದೆಯನ್ನೋ ಹೀಗೆ ಬೇಡವೆಂದು ಎದರೂ ದೂರ ಕರೆದುಕೊಂಡು ಹೋಗಿ ಬಿಟ್ಟು ಬಂದರೆ?! ಮನುಷ್ಯತ್ವವನ್ನು ಬಲಿಗೊಟ್ಟು ಮೃಗಗಳಿಗಿಂತ ಹೀನವಾಗಿ ಈ ರೀತಿ ನಡೆದ ಅದೆಷ್ಟೋ ನಿದರ್ಶನಗಳು ಕಾಣಸಿಗುತ್ತವೆ. ಸುಸಂಸ್ಕೃತ ಸಮಾಜದಲ್ಲಿ ಹೀಗೂ ಸಂಭವಿಸುತ್ತದೆ ಎಂದು ತಿಳಿದಾಗ ನಾಲಿಗೆ ಮೌನವಾಗಿಕರುಳು ಮಾತನಾಡುತ್ತದೆ. ಒಂದು ಹಳೆಯ ಘಟನೆ ಹೇಳಬೇಕೆನಿಸುತ್ತದೆ. ನನಗೊಮ್ಮೆ ಕರ್ತವ್ಯದ ಸಲುವಾಗಿ ಒಂದು ವೃದ್ಧಸದನಕ್ಕೆ ಸಹೋದ್ಯೋಗಿ ಯೊಂದಿಗೆ ಹೋಗಬೇಕಾಗಿ ಬಂದಿತ್ತು.
ಅದು ನಿರ್ಗತಿಕರಾಗಿರುವ ವೃದ್ಧೆಯರನ್ನು ಆರೈಕೆ ಮಾಡುವ ಕೇಂದ್ರವಾಗಿತ್ತು. ನಾವು ಹೋದ ಕೂಡಲೇ ಮುಖ್ಯಸ್ಥರು ಒಳಗೆ ಕರೆದುಕೊಂಡು ಹೋದರು. ಅಷ್ಟರಲ್ಲಿ ಅಲ್ಲಿಗೆ ಒಬ್ಬರು ಆರೋಗ್ಯವಾಗಿರುವಂತೆ ಕಾಣುವ ವೃದ್ಧೆ ಬಂದರು. ಅವರು ಹೊಸಬರೆಂದೂ, ಅಲ್ಲಿನ ರೀತಿ ನೀತಿಗಳನ್ನು ಇನ್ನೂ ರೂಢಿಸಿಕೊಳ್ಳಬೇಕಷ್ಟೆ ಎಂದು ಅಲ್ಲಿಗೆ ಬಂದಿರುವುದರಿಂದಲೇ ತಿಳಿಯಿತು. ಇಲ್ಲವಾದರೆ ಹಾಗೆ ಹೇಳದೆ ಕೇಳದೆ ಮುಖ್ಯ ಕಚೇರಿಗೆ ಯಾರೂ ಬರು ವಂತಿಲ್ಲ. ಮುಖ್ಯಸ್ಥರು ನಮ್ಮನ್ನು ತೋರಿಸುತ್ತಾ ಅವರಲ್ಲಿ ಹೇಳಿದರು ನೀವು ಹೆದರಬೇಡಿ. ನಿಮ್ಮ ಮಗನನ್ನು ಹುಡುಕಿ ಇವರು ನಿಮ್ಮನ್ನು ಮನೆಗೆ ಸೇರಿಸುತ್ತಾರೆ ಎಂದು. ಆ ಅಜ್ಜಿ ನಿಂತ ಕೈಮುಗಿದು ಬೇಡಿಕೊಂಡರು.
ಮುಗುಳ್ನಗುವಿನಿಂದ ನೋವನ್ನು ಮರೆಮಾಚಿದ್ದರೂ, ಕಣ್ಣುಗಳು ವ್ಯಥೆಯ ಕತೆಯನ್ನು ಕೂಗಿ ಹೇಳುತ್ತಿದ್ದುವು. ನಂತರ ಅವರಿಗೆ ಒಳಗೆ ಹೋಗುವಂತೆಹೇಳಲಾಯಿತು. ಅವರು ಒಳಗೆ ಹೋದ ಬಳಿಕ ಮುಖ್ಯಸ್ಥರೆಂದರು ಇವರು ಬಂದು ನಾಲ್ಕು ದಿನ ಆಯ್ತಷ್ಟೇ. ಕಾಲುನೋವಿದೆಯಂತೆ. ಅದಕ್ಕೆ ದೊಡ್ಡಆಸ್ಪತ್ರೆಗೆ ಹೋಗೋಣ ಎಂದು ಮಗ ಕರೆದುಕೊಂಡು ಬಂದು ಬಸ್ ಸ್ಟಾಂಡಲ್ಲಿ ಬಿಟ್ಟು ಹೋಗಿದ್ದಾನೆ. ಎರಡು ದಿನ ಬಸ್ ನಿಲ್ದಾಣದಲ್ಲಿಯೇ ಕಳೆದ ಅಜ್ಜಿಯನ್ನು ಪೋಲೀಸರು ತಂದು ಇಲ್ಲಿ ಬಿಟ್ಟಿದ್ದಾರೆ ಎಂದು. ಪಾಪ!
ಮರೆವಿನ ಕಾಯಿಲೆಯೋ, ಮುಗ್ಧತೆಯೋ ಗೊತ್ತಿಲ್ಲ. ಅವರಿಗೆ ಊರು, ಮನೆಗೆ ದಾರಿ, ಮಗನ ಹೆಸರು, ವಿಳಾಸ ಇತ್ಯಾದಿ ಯಾವ ವಿವರಗಳನ್ನು ಹೇಳಲು ತಿಳಿಯದೇ ಮಗ ಬರುತ್ತಾನೆಂದು ಕಾಯುತ್ತಾ ಇದ್ದರು. ಅಲ್ಲಿದ್ದವರಿಗೆ ಅದು ಮಾಮೂಲು ಎಂಬಂತೆ ಆಗಿತ್ತು. ಅದೂ ಅಲ್ಲದೇ ಹೆತ್ತ ತಾಯಿಯನ್ನೇ ಉಪೇಕ್ಷಿಸಿದ ನಿಷ್ಕರುಣಿ ಮಗನ ಜೊತೆ ಬಾಳುವುದಕ್ಕಿಂತ ಸಮವ ಯಸ್ಕರ, ಸಮಮನಸ್ಕರ, ಸಮದುಃಖಿಗಳ ಜತೆ ಇರುವುದೇ ಒಳಿತೆಂದು ಎಲ್ಲರ ಅಭಿಪ್ರಾಯವೂ ಆಗಿತ್ತು.
ಈ ಪ್ರೀತಿ, ಮಮತೆ, ಕರುಣೆ, ಕಾಳಜಿ ಇವೆ ಮನ ದಾಳದಲ್ಲಿ ನೈಜವಾಗಿ ಮೂಡಬೇಕು ತಾನೇ? ನಾವು ನಮ್ಮವರೆಂಬ ವಾತ್ಸಲ್ಯ ಅಂತರಾಳದಲ್ಲಿ ಸಹಜವಾಗಿ ಹುಟ್ಟಬೇಕೇ ಹೊರತು ಅದು ಒತ್ತಾಯ ಪೂರ್ವಕವಾಗಿ ಕಟ್ಟಿಕೊಂಡುವಂತದ್ದಲ್ಲ ಅಲ್ಲವೇ? ಇತ್ತೀಚೆಗೆ ಒಂದು ‘ವೀಣ್ ಕಿಟ್ಟಿಯ ಪಿತಾವ್’(ಬಿದ್ದು ಸಿಕ್ಕಿದ ತಂದೆ) ಅನ್ನುವ ಮಲಯಾಳಂ ವಿಡಿಯೊ ಯೂಟ್ಯೂಬ್‌ನಲ್ಲಿ ನೋಡುತ್ತಿದ್ದೆ. ಅದರಲ್ಲಿ ಒಬ್ಬರು ಶಿಕ್ಷಕಿ ಒಂದು ನೈಜ ಅನುಭವವನ್ನುಹೇಳುತ್ತಿದ್ದರು. ವಿಡಿಯೊ ನೋಡಿದ ಮೇಲೆ ಹೃದಯ ಭಾರವಾಗಿ ಕಣ್ಣಂಚಲ್ಲಿ ತೇವವಾದದ್ದಂತೂ ಸತ್ಯ. ಆ ಘಟನೆ ಹೀಗೆ ಸಾಗುತ್ತದೆ. ಒಂದು ದಿನ ಬೆಳಗ್ಗೆ ಒಬ್ಬರು ವೃದ್ಧರು ಅವರ ಗೇಟನ್ನು ಬಡಿಯುತ್ತಿದ್ದರಂತೆ.
ಏನೆಂದು ಕೇಳಿದಾಗ ಕುಡಿಯಲು ನೀರು ಕೇಳಿದರಂತೆ. ಒಳಗೆ ಕರೆದು ನೀರು ಕೊಟ್ಟು ಅವರ ಬಗ್ಗೆ ವಿಚಾರಿಸಿ ದಾಗ ಆ ಹಿರಿ ಜೀವ ಹೀಗೆ ಹೇಳಿದರಂತೆ. ಕಷ್ಟಪಟ್ಟು ದುಡಿದು, ದೊಡ್ಡ ಮನೆ ಕಟ್ಟಿಸಿ, ಇಬ್ಬರು ಮಗಂದಿ ರನ್ನು ದಡ ಸೇರಿಸಿದೆ. ಮಡದಿ ನಾಲ್ಕು ವರುಷಗಳ ಹಿಂದೆ ಮೃತಪಟ್ಟಳು. ಪತ್ನಿ ಹೋದ ಮೇಲೆ ಒಂಟಿಯಾಗಿ ನಿರ್ಲಕ್ಷ್ಯಕ್ಕೆ ಒಳಗಾದೆ. ಮಕ್ಕಳಿಗೆ ಬೇಡವಾದೆ. ಯಾರಾದರೂ ಅತಿಥಿಗಳು ಮನೆಗೆ ಬಂದಾಗ ಮಗ-ಸೊಸೆಯಂದಿರಿಗೆ ನಾನಿರುವುದು ಮುಜುಗರ ತರುತ್ತಿತ್ತು. ಮೊಮ್ಮಕ್ಕಳಿಗೆ ನನ್ನೊಂದಿಗೆ ಬೆರೆಯಲು ಬಿಡುತ್ತಿರಲಿಲ್ಲ. ಒಂದು ದಿನ ಇದ್ದಕ್ಕಿದ್ದಂತೆ ಮಗಂದಿರು ಮೈಸೂರಿಗೆ ಟೂರ್ ಹೋಗೋಣ ಅಂದರು.
ಅಂದು ರಾತ್ರಿ ನಾನು ಸಂತೋಷದಿಂದ ನಿದ್ದೆ ಮಾಡಲಿಲ್ಲ. ಎಲ್ಲರೂ ಒಟ್ಟಾಗಿ ಕಾರಿನಲ್ಲಿ ಹೋಗುತ್ತಿರುವಾಗ ದಾರಿ ಮಧ್ಯದಲ್ಲಿ ಕಾಡಿನ ನಡುವೆ ರಸ್ತೆಯಲ್ಲಿ ಸಾಗುತ್ತಿದ್ದಾಗ ಮಗ ಕಾರು ನಿಲ್ಲಿಸಿದ. ಇನ್ನು ತುಂಬ ದೂರದವರೆಗೆ ಕಾರು ನಿಲ್ಲಿಸಲಾಗದು, ಹಾಗಾಗಿ ಜಲಬಾಧೆ ತೀರಿಸಿಕೊಂಡು ಬರೋಣವೆಂದು ನನ್ನನ್ನು ಮಗಂದಿರು ಕಾಡಿನಲ್ಲಿ ಸ್ವಲ್ಪ ದೂರ ಕರೆದುಕೊಂಡು ಹೋದರು. ಜಲಬಾಧೆ ತೀರಿಸಿ ನಿಧಾನಕ್ಕೆ ಬಂದ ನಾನು ಕಂಡದ್ದುನನ್ನಿಬ್ಬರು ಮಕ್ಕಳು ಕಾರು ಹತ್ತಿ ಹೋಗುತ್ತಿರುವುದನ್ನು. ಅಲೆದು ಅಲೆದು ಸುಸ್ತಾಗಿ ಕೊನೆಗೆ ಟೀಚರ್ ಮನೆಗೆ ಬಂದಿzರೆ ಈ ತಂದೆ. ಇದನ್ನು ಕೇಳಿದಾಗ ಮನುಷ್ಯ ಹೀಗೆ ಮಾಡಲು ಸಾಧ್ಯವೇ ಎಂಬ ಅಚ್ಚರಿ ಮೂಡುತ್ತದೆ.
ಇಂಥವರ ಮಕ್ಕಳು ವಿದ್ಯಾವಂತರಾಗಿರುತ್ತಾರೆ. ಒಳ್ಳೆಯ ನೌಕರಿಯಲ್ಲಿದ್ದು ಉತ್ತಮ ಸಂಪಾದನೆಯೂ ಇರುತ್ತದೆ. ನಾವು ಮಕ್ಕಳಿಗೆ ಚೆನ್ನಾಗಿ ಕಲಿತು ಒಳ್ಳೆಯ ಕೆಲಸ ದಕ್ಕಿಸಿಕೊಳ್ಳುವುದೊಂದೇ ಜೀವನದ ಗುರಿ ಎಂದು ಬೆಳೆಸುತ್ತೇವೆ. ಹೇಗಾದರೂ ಮಾಡಿ ಹಣ ಸಂಪಾದಿಸುವುದರಲ್ಲಿಯೇ ಬದುಕಿನ ಸಾರ್ಥಕ್ಯ ಅಡಗಿದೆ ಎಂಬಂತೆ ಬಿಂಬಿಸುತ್ತೇವೆ. ನಾವು ಪಟ್ಟ ಕಷ್ಟ ನಮ್ಮ ಮಕ್ಕಳು ಪಡಬಾರದೆಂದು ಮುದ್ದಾಗಿ ಸಾಕುತ್ತೇವೆ. ಶಿಕ್ಷಣದ ಜತೆ ಮೌಲ್ಯ ಗಳನ್ನು ರೂಢಿಸಿಕೊಳ್ಳುವುದನ್ನು ಕಲಿಸುವಲ್ಲಿ ಎಡವುತ್ತೇವೆ. ಇರುವ ಒಂದೋ, ಎರಡೋ ಮಕ್ಕಳನ್ನು ಕಣ್ಣಲ್ಲಿ ಕಣ್ಣಿಟ್ಟು ಜೋಪಾನ ಮಾಡುತ್ತೇವೆ. ಅದರಲ್ಲಿ ಯಾವುದೇ ತಪ್ಪಿಲ್ಲ. ಅದು ಸಹಜವೇ ಆಗಿದೆ. ಆದರೆ ಹೀಗೆ ಜೇನಲ್ಲಿ ಅದ್ದಿ ಹಾಲಲ್ಲಿ ತೆಗೆದ ಮಕ್ಕಳು ತೀರಾ ಇನ್ಸೆನ್ಸಿಟಿವ್ ಆಗಿ ಬಿಡುವುದು ವಿಪರ್ಯಾಸವೇ ಆಗಿದೆ.
‘ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬದುಕಿನಲಿ’ ಎಂದು ಜಿ.ಎಸ್.ಶಿವರುದ್ರಪ್ಪನವರು ಹೇಳಿದಂತೆ ಕೆಲವೊಮ್ಮೆ ಹೊಂದಾಣಿಕೆಯ ಸಮಸ್ಯೆಯಿಂದಲೇ ಪರಿಸ್ಥಿತಿ ಕೈಮೀರಿ ಹೋಗುವುದೂ ಉಂಟು. ಈ ಘಟನೆ ಕೇಳಿ. ನಾವಿರುವ ಮನೆಯಿಂದ ಎರಡನೆಯದ್ದು ಎರಡಂತಸ್ತಿನ ಲಕ್ಷುರಿಯಸ್ ಆಗಿರುವ ಚಂದದ ಮನೆ. ಮನೆಯಲ್ಲಿದ್ದದ್ದು೭೦ವರುಷದ ಒಬ್ಬರು ಅಜ್ಜಿ ಮಾತ್ರ. ಅಜ್ಜಿಯ ಒಬ್ಬಳೇ ಮಗಳುಅಮೆರಿಕ ನಿವಾಸಿ. ಕಾಣಲು ಸುಂದರಿಯಾಗಿದ್ದರಲ್ಲದೇ, ಗರಿಗರಿಯಾದ ಕಾಟನ್ ಸೀರೆಯುಟ್ಟು ಓಡಾಡುವ ಅಜ್ಜಿಯ ಜೀವನೋತ್ಸಾಹ೨೫ರಯುವತಿಯನ್ನು ನಾಚಿಸುವಂತ್ತಿತ್ತು.
ಪ್ರತಿದಿನ ಒಬ್ಬರು ಕೆಲಸದಾಕೆ ಬಂದು ಎಲ್ಲಾ ಕೆಲಸಗಳನ್ನು ಮಾಡಿಟ್ಟು ಹೋಗುತ್ತಿದ್ದರು. ಒಂದು ದಿನ ಮಾತನಾಡುತ್ತಾ ಅವರೆಂದರು, ಇಲ್ಲೇ ಹತ್ತಿರದಲ್ಲಿ ಒಂದು ಕೇರ್ ಸೆಂಟರ್(    ) ನಿರ್ಮಾಣವಾಗುತ್ತಿದೆ. ನನ್ನ ಮಗಳು೨೫ಲಕ್ಷ ಕೊಟ್ಟು ಅದರಲ್ಲಿ ನನಗೊಂದು ರೂಮ್ ಬುಕ್ ಮಾಡಿದ್ದಾಳೆ. ಅದರ ನಿರ್ಮಾಣ ಪೂರ್ತಿಗೊಂಡ ಕೂಡಲೇ ಈ ಮನೆಯನ್ನು ಬಾಡಿಗೆಗೆ ಕೊಟ್ಟು ನಾನು ಅಲ್ಲಿಗೆ ಹೋಗುತ್ತೇನೆ. ಇಲ್ಲಿ ಇಷ್ಟು ದೊಡ್ಡ ಮನೆಯಲ್ಲಿ ಒಬ್ಬಳೇ ಇರಲು ಬೇಜಾರು. ಹಾಗೆಂದು ಮಗಳ ಜತೆ ಹೋಗಲು ಮನಸ್ಸಿಲ್ಲ ಎಂದು.
ಅಷ್ಟರಲ್ಲಿ ಕರೋನಾಸುರನ ಆರ್ಭಟದಿಂದ ಯಾರೂ ಮನೆಯಿಂದ ಹೊರಬಾರದಂತಾಯ್ತು. ಕೆಲಸದಾಕೆಯೂ ಬರುವುದನ್ನು ನಿಲ್ಲಿಸಿದ್ದಳು. ಕಳೆದ ಸೆಪ್ಟೆಂಬರ್‌ನಲ್ಲಿ ಒಂದು ದಿನ ಹಾಲು ತಂದು ಕೊಡುವ ಹೆಂಗಸು ಬೆಳಗ್ಗೆ ಏಳು ಗಂಟೆಗೆ ಗೇಟಿನ ಬಳಿ ಇಟ್ಟು ಹೋಗಿದ್ದ ಹಾಲು ಹತ್ತು ಗಂಟೆಯಾದರೂಅ ಇರುವುದನ್ನು ಕಂಡ ಎದುರು ಮನೆಯಾಕೆ ಡೋರ್ ಬೆಲ್ ಮಾಡಿದಳು. ಬಾಗಿಲು ತೆರೆಯಲಿಲ್ಲ. ಫೋನ್ ಮಾಡಿದಾಗ ರಿಂಗ್ ಆಗುತ್ತಿತ್ತು. ರಿಸೀವ್ಮಾಡುತ್ತಿಲ್ಲ. ಗಾಬರಿಯಾದ ಆಕೆ ಅಕ್ಕಪಕ್ಕದವರಿಗೆ ತಿಳಿಸಿ, ಹೇಗಾದರೂ ಮಾಡಿ ಬಾಗಿಲು ತೆರೆದು ಮನೆಯೊಳಗೆ ಹೋಗಿ ನೋಡಿದಾಗ ಅಜ್ಜಿಯ ಕಥೆ ಮುಗಿದಿತ್ತು.
ಆಂಬುಲೆನಲ್ಲಿ ಆಸ್ಪತ್ರೆಗೆ ಸಾಗಿಸಿದಾಗ ಹಾರ್ಟ್ ಅಟಾಕ್ ಆಗಿ ಪ್ರಾಣ ಹೋಗಿ ತಾಸುಗಳ ಮೇಲಾಯಿತು ಅಂದರು ಡಾಕ್ಟರು. ಮರುದಿನ ಪತ್ರಿಕೆಯಲ್ಲಿ   ಅಂತ ಮಗಳು, ಅಳಿಯ, ಮೊಮ್ಮಗಳ ಹೆಸರುಗಳು ದಪ್ಪ ಅಕ್ಷರಗಳಲ್ಲಿ ಮುದ್ರಿಸಲಾಗಿತ್ತು. ಇಲ್ಲಿ ಮಗಳಿಗೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕೆಂಬ ಹಂಬಲವಿತ್ತು. ಆದರೆ ತಾಯಿ ತನ್ನ ಹಟ ಬಿಡುತ್ತಿರಲಿಲ್ಲ. ಹಾಗಾಗಿಯೇ ಕನಿಷ್ಠ ಪಕ್ಷ ತಾಯಿಯನ್ನು ಸಂರಕ್ಷಿಸುವ ಕುರಿತು ಕಾರ್ಯಪ್ರವೃತ್ತಳಾಗಿದ್ದಳು ಮಗಳು. ತಾಯಿಗೆ ಅದು ಸಂತೋಷವನ್ನೂ ಕೊಟ್ಟಿತ್ತು. ಮಗಳಿರುವ ಪರಿಸ್ಥಿತಿಯಲ್ಲಿ ಅದಕ್ಕಿಂತ ಉತ್ತಮವಾದ ಮಾರ್ಗ ಬೇರೆ ಇರಲಿಲ್ಲ ಮತ್ತು ಅವಳಿಗದು ಅನಿವಾರ್ಯ ಕೂಡಾ.
ನಾವು ಎಷ್ಟೋ ಸಲ ಅಪ್ಪ-ಅಮ್ಮನಲ್ಲಿ ಮಾತನಾಡುವಾಗ ’ಬಾಯಿಮುಚ್ಚಿ’ ಅಂತಲೋ, ’ಸುಮ್ನಿರಿ ನಿಮಗೇನೂ ಗೊತ್ತಾಗಲ್ಲ’ ಅಂತನೋ ರೇಗುತ್ತೇವೆ.ಹೌದು… ರಕ್ತ ಮಾಂಸಗಳನ್ನು ಹಂಚಿಕೊಂಡ ಕರುಳ ಕುಡಿಗಳನ್ನು ಕೊನೆಯುಸಿರು ಇರುವ ತನಕ ನಿಸ್ವಾರ್ಥವಾಗಿ ಪ್ರೀತಿಸುವುದೊಂದೇ ಅವರಿಗೆ ಗೊತ್ತು. ಪಾಪ! ಬೇರೇನೂ ತಿಳಿಯದು ಆ ಜೀವಗಳಿಗೆ. ನಾಳೆ ನಮ್ಮ ಮಕ್ಕಳು ನಮಗೆ ಊರುಗೋಲಾಗುತ್ತಾರೆ, ನೋಡಿಕೊಳ್ಳುತ್ತಾರೆ ಅನ್ನುವ ಅಪೇಕ್ಷೆಯಿಂದಲೋ, ದೂರದೃಷ್ಟಿಯಿಂದಲೋ ಖಂಡಿತಾ ಅವರು ಮಕ್ಕಳನ್ನು ಬೆಳೆಸಿರುವುದಿಲ್ಲ. ಒಂದು ವೇಳೆ ಅಂತಹ ಯೋಚನೆ ಇದ್ದರೂ ಅದು ಖಂಡಿತಾ ಅಸಾಧುವಲ್ಲ. ಅವರಲ್ಲಿ ‘ನಿಮಗೇನು ಬೇಕು’ ಎಂದು ಒಮ್ಮೆ ಕೇಳಿ ನೋಡಿ.
ಆಗವರು ‘ನಮಗೇನೂ ಬೇಡ, ನೀನು ಸುಖವಾಗಿದ್ದರೆ ಅಷ್ಟೇ ಸಾಕು ಮಗಾ’ ಅನ್ನುತ್ತಾರೆ. ಆದರೆ ಆಧುನಿಕತೆ ಯ ಸೋಗಿನಲ್ಲಿ ನಮಗೆ ಕರುಳ ಬಂಧಗಳು ಅರ್ಥಹೀನವಾಗಿ ಕಾಣುತ್ತಿದೆ. ವಯಸ್ಸಾದಾಗ ಹೆತ್ತವರನ್ನು ನಿರ್ಲಕ್ಷಿಸುವ ನಮ್ಮದಲ್ಲದ ಸಂಸ್ಕೃತಿಯತ್ತ ಒಲವು ಹೆಚ್ಚಾಗುತ್ತಿದೆ. ಇಲ್ಲವೆಂದಾದರೆ ಈಗೀಗ ಮದುವೆಯ ಸಂಬಂಧದ ಮಾತುಕತೆ ನಡೆಸುವಾಗ ವಯಸ್ಸಾದ ತಂದೆ ತಾಯಿ ಇರಬಾರದು ಎನ್ನುವ ಬೇಡಿಕೆ ಇಡಲು ಕಾರಣವಾದರೂ ಏನು? ನಮ್ಮ ಅಸ್ತಿತ್ವದ ಬೇರಾಗಿರುವವರಲ್ಲಿ ನಮಗೆ ಕಿಂಚಿತ್ತಾದರೂ ವಾತ್ಸಲ್ಯ, ಮಮತೆ, ಕಾಳಜಿ ಇರಬೇಕಾದುದು ಸಹಜ ಧರ್ಮವೆಂದು ಯಾಕನಿಸುವುದಿಲ್ಲ? ಯಾಂತ್ರಿಕ ಬದುಕಿನ ಧಾವಂತದ ಓಟದಲ್ಲಿ ನಾವೇನು ಕಳೆದುಕೊಳ್ಳುತ್ತಿದ್ದೇವೆ ಅನ್ನುವ ಅರಿವು ಹೊತ್ತು ಮೀರುವ ಮೊದಲು ಮೂಡಬೇಕಾದತುರ್ತಿದೆ.
ಹಾಗೆಂದು ಎಲ್ಲರೂ ಇದೇ ರೀತಿ ಇzರೆಂದೂ, ತಂದೆತಾಯಿಯರನ್ನು ನಿರ್ಲಕ್ಷಿಸುತ್ತಾರೆ ಎಂದು ಖಂಡಿತ ಇದರರ್ಥ ಅಲ್ಲವೇ ಅಲ್ಲ. ಹೆತ್ತವರನ್ನು, ಹಿರಿಯರನ್ನು ದೇವರಂತೆ ಪೂಜಿಸುವ, ಆರಾಧಿಸುವ ಅದೆಷ್ಟೋ ಅಸಂಖ್ಯಾತ ಗೆಳೆಯರು, ಬಂಧುಗಳು, ಸಹೋದರರು ನಮ್ಮ ನಡುವೆ, ನಮ್ಮ ಮನೆಗಳಲ್ಲಿ ಇzರೆ. ಆದರೆ ಮನುಷ್ಯ ಒಳ್ಳೆಯದನ್ನು ಕಲಿಯಲಾರ. ಕೆಟ್ಟದ್ದನ್ನೇ, ಮಾಡಬಾರದನ್ನೇ ಅನುಕರಿಸುವ ಹುಚ್ಚುತನ ಮಂದಿಯಲ್ಲಿರುವುದು ಗೊತ್ತಿರುವ ವಿಚಾರವೇ ಆಗಿದೆ. ಮಹಾಭಾರತ ಯುದ್ಧದಲ್ಲಿ ಧರ್ಮಾತ್ಮರಾದ ಪಾಂಡವರಿಗಿಂತ ದುಷ್ಟರಾದ ಕೌರವರ ಪಕ್ಷದಲ್ಲಿಯೇ ಅಧಿಕ ಸೇನಾಬಲ, ಜನಬಲ ಇದ್ದದ್ದು ಅಲ್ಲವೇ? ಯಾಕೆ? ಕೆಟ್ಟದ್ದರ ಕಡೆಗೆ ಆಕರ್ಷಣೆ ಅಧಿಕವಾಗಿರುವ ಕಾರಣದಿಂದಾಗಿ ಅನಿಸುವುದಿಲ್ಲವೇ? ಇನ್ನು ಈಗಿನ ನಮ್ಮ ಮಕ್ಕಳಂತೂ ಇಂಟರ್‌ನೆಟ್ ಯುಗದವರು.
ಹಾಗಾಗಿ ಅವರನ್ನು ಕಣ್ಣಲ್ಲಿ ಕಣ್ಣಿಟ್ಟು ಕಾಪಾಡುವ, ಸರಿ ದಾರಿಗೆ ತರುವ, ರಕ್ಷಿಸುವ ಹೊಣೆಗಾರಿಕೆ ನಮ್ಮ ಮೇಲಿದೆ. ಹೆತ್ತವರ ಕುರಿತಾದ ಕಾಳಜಿಯಲ್ಲಿ ಮಗನೋ ಮಗಳೋ ಅನ್ನುವ ಪ್ರಶ್ನೆ ಅಪ್ರಸ್ತುತ. ಮಕ್ಕಳೆಂದು ಅನಿಸಿದ ಮೇಲೆ ಇಬ್ಬರೂ ಹೆತ್ತವರ ಋಣದಲ್ಲಿ ಸಮಾನರು. ನಮ್ಮ ಮನೆಗಳಲ್ಲಿತಂದೆತಾಯಿ ಸಂತೋಷವಾಗಿದ್ದರೆ ಹಾಗೂ ಆ ಸಂತೋಷಕ್ಕೆ ನಾವು ಅಲ್ಪ ಕಾರಣರಾಗಿದ್ದರೆ ಅಷ್ಟೇ ಸಾಕು ಈ ಜನ್ಮ ಸಾರ್ಥಕ ಅನಿಸಿಕೊಳ್ಳಲು.ಇಲ್ಲವೆಂದಾದರೆ, ಎಚ್.ಎಸ್.ವೆಂಕಟೇಶ ಮೂರ್ತಿಯವರು ಕವನದಲ್ಲಿ ಹೇಳಿದಂತೆ ‘ಇಷ್ಟುಕಾಲ ಒಟ್ಟಿಗಿದ್ದು ಎಷ್ಟು ಬೆರೆತರೂ ಅರಿತೆವೇನು ನಾವು ನಮ್ಮ ಅಂತರಾಳವ?’ – ಎಂದು ನಮಗೆ ನಾವೇ ಪ್ರಶ್ನೆ ಮಾಡಿಕೊಂಡು, ಕಾಲ ಕಳೆದು ಹೋಗುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂದಷ್ಟೇ ಹೇಳಬಹುದು.