ಸಿಡಿಯೊಳಗೊಂದು ರಾಜಕೀಯ ಕಥೆ
ಅಶ್ವತ್ಥಕಟ್ಟೆ
ರಂಜಿತ್ ಎಚ್‌.ಅಶ್ವತ್ಥ
ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಸಿ.ಡಿ ಪ್ರಕರಣದ ಹೊರತಾಗಿ ಯಾವ ಚರ್ಚೆಗಳೂ ನಡೆಯುತ್ತಿಲ್ಲ. ರಮೇಶ್ ಜಾರಕಿಹೊಳಿ ರಾಸಲೀಲೆ ಪ್ರಕರಣದ ವಿಡಿಯೊ ಬಹಿರಂಗವಾದಾಗಿನಿಂದ, ರಾಜಕೀಯ, ಸಾಮಾಜಿಕ ಹಾಗೂ ಮಾಧ್ಯಮಗಳೆಲ್ಲ ಆ ವಿಡಿಯೊ ಹಿಂದೆ-ಮುಂದೆ ಅಥವಾ ಅದರ ಸುತ್ತವೇ ಓಡಾಡುತ್ತಿವೆ. ಈ ರೀತಿ ಸಿಡಿ ಹಿಂದೆ ಬೀಳಲು ಕಾರಣವಿಲ್ಲವೆಂದಲ್ಲ.
ಬಹಿರಂಗವಾಗಿರುವ ವಿಡಿಯೊದಲ್ಲಿರುವ ಯುವತಿಗೆ ನ್ಯಾಯ-ಅನ್ಯಾಯದ ಚರ್ಚೆ ಮೀರಿ ರಾಜಕೀಯ ಸೇರಿಸಿಕೊಂಡಿರುವುದೇ ಇದಕ್ಕೆ ಕಾರಣ ಎಂದರೆ ತಪ್ಪಾಗುವುದಿಲ್ಲ. ರಮೇಶ್ ಜಾರಕಿಹೊಳಿ ಇರುವ ವಿಡಿಯೊ (ಈಗಲೂ ಅದೊಂದು ಗ್ರಾಫಿಕ್ಸ್ ವಿಡಿಯೊ ಎಂದು ಜಾರಕಿಹೊಳಿ ಅವರು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ) ಬಹಿರಂಗವಾದ ಬಳಿಕ ಜಾರಕಿಹೊಳಿ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ವಾಗ್ದಾಳಿ ನಡೆಸುವುದು ಮಾತ್ರವಲ್ಲದೇ, ರಾಜೀನಾಮೆಗೆಆಗ್ರಹಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಬಿಜೆಪಿ ವರಿಷ್ಠರು ಸಹ ‘ನೈತಿಕ’ಹೊಣೆಹೊತ್ತು ರಾಜೀನಾಮೆ ನೀಡುವಂತೆ ಸೂಚನೆ ನೀಡಿದರು. ಇದನ್ನು ಜಾರಕಿಹೊಳಿ ಅವರು ಒಪ್ಪಿಕೊಂಡು ರಾಜೀನಾಮೆ ನೀಡಿದರು. ಇದು ಕೇವಲ ನೈತಿಕ ಪ್ರಶ್ನೆಯಾಗಿದ್ದರೆ, ಇದು ಅಲ್ಲಿಗೆ ನಿಲ್ಲಬೇಕಿತ್ತು. ಆದರೆ ಪ್ರಕರಣ ಅಲ್ಲಿಂದ ಶುರುವಾಗಿ, ಬಳಿಕ ದಿನಕ್ಕೊಂದು ತಿರುವು ಪಡೆಯುತ್ತಾ ಸಾಗಿದೆ. ಯುವತಿ ಎಸ್‌ಐಟಿ ತಂಡದ ಮುಂದೆ ಎದುರಾಗಿ ವಿಚಾರಣೆಗೆ ಹಾಜರಾಗುವ ಬದಲು, ಅಜ್ಞಾತ ಸ್ಥಳದಲ್ಲಿ ಕೂತು ದಿನಕ್ಕೊಂದು ವಿಡಿಯೊ ಬಿಡುಗಡೆ ಮಾಡಲು ಶುರುಮಾಡಿದಳು.
ಕೆಲ ದಿನಗಳ ಅಂತರದಲ್ಲಿಯೇ, ಯುವತಿ ತನ್ನ ಪರ ವಕೀಲರ ಮೂಲಕ ಲಿಖಿತ ದೂರನ್ನು ದಾಖಲಿಸಿದಳು. ಆದರೆ ಪೊಲೀಸರಿಗೆ ಮಾತ್ರ ಆಕೆಯಇರುವ ಜಾಗ ತಿಳಿಯಲಿಲ್ಲ. (ತಿಳಿದರೂ, ತಿಳಿಯದಂತೆ ಇದ್ದಾರೆಯೇ ಎನ್ನುವುದು ಬೇರೆ ವಿಷಯ). ಇನ್ನು ಯುವತಿ ಜಾರಕಿಹೊಳಿ ವಿರುದ್ಧ ವಿಡಿಯೊ ರಿಲೀಸ್ ಮಾಡುತ್ತಿದ್ದಂತೆ, ಮತ್ತೊಂದು ಆಡಿಯೊ ಬಿಡುಗಡೆಯಾಯಿತು. ಈ ಆಡಿಯೊ ಬಿಡುಗಡೆ ಬಳಿಕವೇ ನಿಜವಾದ ಆಟ ಶುರುವಾಗಿದ್ದು ಎಂದರೆ ತಪ್ಪಿಲ್ಲ. (ಇದನ್ನು ಜಾರಕಿಹೊಳಿ ಅವರು ಹೇಳಿದ್ದರು). ಅಲ್ಲಿಯವರೆಗೆ ಜಾರಕಿಹೊಳಿ ಅವರಿಂದ ಯುವತಿಗೆ ಅನ್ಯಾಯವಾಗಿದೆ ಎನ್ನುವ ಲೆಕ್ಕಾಚಾರ ದಲ್ಲಿದ್ದ ಪ್ರಕರಣ ಅಲ್ಲಿಂದ, ಕಾಂಗ್ರೆಸ್-ಬಿಜೆಪಿ ವಿರುದ್ಧ ಹೋರಾಟವಾಗಿ ಬದಲಾಯಿತು. ಈ ರೀತಿ ವಿಷಯಾಂತರವಾಗುತ್ತಿದ್ದಂತೆ, ಕಾಂಗ್ರೆಸ್-ಬಿಜೆಪಿಯ ಇತರ ನಾಯಕರು ಮೌನಕ್ಕೆ ಶರಣಾಗಿ, ಇದೀಗ ರಮೇಶ್ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್ ಅವರ ಹಿಂದಿನ ವೈಮನಸಿನ ಎಲ್ಲ ವಿಷಯಗಳು ತೆರೆದುಕೊಳ್ಳುತ್ತಿವೆ.
ಯುವತಿಗೆ ಡಿಕೆಶಿ ಬೆಂಬಲವಿದೆ ಎನ್ನುವ ಮಾತುಗಳು ಆಡಿಯೊದಲ್ಲಿ ಬಂದ ಕೂಡಲೇ, ರಮೇಶ್ ಜಾರಕಿಹೊಳಿ  ಅವರು ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸುವುದು ಮಾತ್ರವಲ್ಲದೇ, ‘ಕನಕಪುರದಲ್ಲಿ ಡಿಕೆ ಸೋಲಿಸಲು ತನು-ಮನ ಬಳಸುತ್ತೇನೆ (ಧನವೂ ಸೇರಿದೆ)’ ಎಂದು ಆಕ್ರೋಶಭರಿತವಾಗಿಹೇಳಿದರು. ಇದಿಷ್ಟೇ ಅಲ್ಲದೇ ಮುಂದುವರಿದು, ಡಿಕೆಶಿವಕುಮಾರ್ ಅವರನ್ನು ಸೋಲಿಸಲು ಎಚ್.ಡಿ ಕುಮಾರಸ್ವಾಮಿ ಅವರಿಗೆ ಬೆಂಬಲ ನೀಡುತ್ತೇನೆ ಎನ್ನುವ ಮೂಲಕ ಜೆಡಿಎಸ್‌ಗೆ ಬೆಂಬಲಿಸುವ ಪರೋಕ್ಷ ಹೇಳಿಕೆಯನ್ನು ನೀಡಿದರು.
ಈ ಸಿಡಿ ಬಿಡುಗಡೆಯಾದಾಗಿನಿಂದಲೂ ನಡೆಯುತ್ತಿರುವುದು ಸಹ ಇದೇ ಆಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರಿಗೆ ರಮೇಶ್ ಜಾರಕಿಹೊಳಿ ಎಂದಿದ್ದರೂ ಸಮಸ್ಯೆ ಎನ್ನುವುದು ಗೊತ್ತು. ಅವರು ಯಾವುದೇ ಪಕ್ಷದಲ್ಲಿದ್ದರೂ ಅವರ ಗುರಿ ಮಾತ್ರ ಮುಖ್ಯಮಂತ್ರಿ ಸ್ಥಾನದ ಮೇಲೆ ಇರುತ್ತದೆಎನ್ನುವ ಅರಿವು ಈ ಎರಡೂ ಪಕ್ಷಗಳಿಗೆ ಚೆನ್ನಾಗಿದೆ. ಆದ್ದರಿಂದ ಸಿಡಿ ವಿಷಯವನ್ನು ಇಟ್ಟುಕೊಂಡು ಕಾಂಗ್ರೆಸ್ ನಾಯಕರು ಬಹಿರಂಗವಾಗಿಯೇ ಜಾರಕಿಹೊಳಿ ಅವರ ರಾಜಕೀಯ ಜೀವನಕ್ಕೆ ಖೆಡ್ಡಾ ತೋಡಿದರೆ, ಬಿಜೆಪಿಯ ಅನೇಕ ನಾಯಕರು ಪರೋಕ್ಷವಾಗಿ ಬೆಂಬಲಿಸುವ ಮೂಲಕ ಜಾರಕಿಹೊಳಿಏಳದಂತೆ ನೋಡಿಕೊಂಡರು. ಆದರೆ ಈ ಎರಡು ಪಕ್ಷಗಳು ಈ ರೀತಿಯಲ್ಲಿ ನಡೆದುಕೊಂಡರೆ, ಜೆಡಿಎಸ್ ಮಾತ್ರ, ಜಾರಕಿ ಳಿಯ ನೆರವಿನೊಂದಿಗೆ ಕೆಲ ಕ್ಷೇತ್ರಗಳನ್ನು ಉತ್ತರ ಕರ್ನಾಟಕ ಭಾಗದಲ್ಲಿ ಭದ್ರ ಮಾಡಿಕೊಳ್ಳುವ ನಿಟ್ಟಿನಲ್ಲಿ ಯೋಚನೆಹಾಕಿದೆ. ಅದಕ್ಕಾಗಿಯೇ ಜಾರಕಿಹೊಳಿ ಅವರ ನೆರವಿಗೆ ಕುಮಾರಸ್ವಾಮಿ ನಿಂತಿದ್ದು. ಈ ಮೂಲಕ ರಮೇಶ್ ಜಾರಕಿಹೊಳಿ ಅವರ ಸ್ನೇಹ ಪಡೆಯುವುದರೊಂದಿಗೆ, ಡಿಕೆಶಿ ವಿರುದ್ಧದ ಸೇಡನ್ನು ತೀರಿಸಿಕೊಳ್ಳಲು ಪ್ರಯತ್ನಿಸಿದರು.
ರಾಜಕೀಯ ದಲ್ಲಿ ‘ಶತ್ರುವಿನ ಶತ್ರು, ಮಿತ್ರ’ ಎನ್ನುವುದು ಅದಕ್ಕೆ ಅಲ್ಲವೇ?  ರಾಜ್ಯದಲ್ಲಿ ಒಂದೆಡೆ ಕರೋನಾ, ಮತ್ತೊಂದೆಡೆ ಆರ್ಥಿಕ ನಿರ್ವಹಣೆ. ಈ ಎಲ್ಲದರ ನಡುವೆ ರಾಜ್ಯವನ್ನು ಅಭಿವೃದ್ಧಿ ಮಾಡುತ್ತೇವೆ ಎನ್ನುವ ಸರಕಾರದ ಹೇಳಿಕೆ. ಆದರೆ ದುರದೃಷ್ಟ ಸಂಗತಿಯೆಂದರೆ, ಆಡಳಿತ ಹಾಗೂ ಪ್ರತಿಪಕ್ಷಗಳು ಈ ವಿಷಯವಾಗಿ ಚರ್ಚಿಸುವ ಬದಲು, ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಮುಂದಾಗಿವೆ. ರಾಜ್ಯದ ಹಿತದ ಬಗ್ಗೆ ಮಾತನಾಡಬೇಕಾದ ಜನಪ್ರತಿನಿಧಿಗಳು, ಅದರ ಬದಲು ಈ ರಾಸಲೀಲೆಯ ಬಗ್ಗೆಯೇ ಹೆಚ್ಚು ಆಸಕ್ತಿ ವಹಿಸಿದ್ದಾರೆ ಎನ್ನುವ ಮಾತುಗಳಿವೆ.
ಇನ್ನು ಈ ಸಿಡಿ ಬರುವ ಹೊತ್ತಿಗೆ ಸರಿಯಾಗಿ ರಾಜ್ಯದಲ್ಲಿ ಉಪಚುನಾವಣೆ ಘೋಷಣೆಯಾಯಿತು (ಅಥವಾ ಇದೇ ಹೊತ್ತಿಗೆ ಬಿಡುಗಡೆಯಾಯಿತು ಎನ್ನಲೂಬಹುದು). ಬಿಡುಗಡೆಯಾಗುತ್ತಿದ್ದಂತೆ, ರಾಜ್ಯದಲ್ಲಿ ಸಾಲು ಸಾಲು ಸೋಲನುಭವಿಸಿರುವ ಕಾಂಗ್ರೆಸ್‌ಗೆ ಇದೊಂದು ಬ್ರಹ್ಮಾಸದ ರೀತಿಕಾಣಿಸಿತು. ಆದ್ದರಿಂದ ರಾಜ್ಯ ಅಥವಾ ಕೇಂದ್ರ ಸರಕಾರದ ವೈಫಲ್ಯವನ್ನಿಟ್ಟುಕೊಂಡು ಹೋರಾಡಬೇಕಾದ ಕಾಂಗ್ರೆಸ್, ಆ ಎಲ್ಲವನ್ನು ಬದಿಗೊತ್ತಿ ಈ ಸಿಡಿಯನ್ನಿಟ್ಟುಕೊಂಡು ಸದನದ ಬಾವಿಗೊಳಗೆ ಧರಣಿಯನ್ನು ಆರಂಭಿಸಿತ್ತು. ಬಜೆಟ್ ಅಧಿವೇಶನದಲ್ಲಿ ಮೂರು ದಿನಗಳ ಕಾಲ ಸತತವಾಗಿ ಧರಣಿ ನಡೆಸಿದ ಪರಿಣಾಮ ಸದನದಲ್ಲಿ ಯಾವುದೇ ಚರ್ಚೆಯಿಲ್ಲದೇ, ಹಲವು ವಿಧೇಯಕಗಳು ಪಾಸಾಗಿ, ಕಾಯಿದೆಗಳಾಗಲು ಸಜ್ಜಾಗಿವೆ.
ಅಂದರೆ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಪ್ರಕರಣದ ಸಿಡಿ, ರಾಜ್ಯದ ಬಜೆಟ್, ಪೂರಕ ಬಜೆಟ್, ವಿವಿಧ  ಧೇಯಕಗಳಿಗಿಂತ ಹೆಚ್ಚು ಪ್ರಮುಖವಾಗಿ ಪ್ರತಿಪಕ್ಷಗಳಿಗೆ ಕಾಣಿಸಿತ್ತು. ಕೇವಲ ಬಜೆಟ್ ಮಾತ್ರವಲ್ಲದೇ, ಅಧಿವೇಶನ ನಡೆಯುವ ಹೊತ್ತಿಗೆ ರಾಜ್ಯದಲ್ಲಿ ಎರಡನೇ ಅಲೆಯ ಕರೋನಾ ವ್ಯಾಪಿಸಲು ಶುರುವಾಗಿತ್ತು. ಆದರೆ ಅಚ್ಚರಿ ಎಂದರೆ, ಈ ವಿಷಯದ ಬಗ್ಗೆ ಯಾರೊಬ್ಬರು ಮಾತನಾಡಲೇ ಇಲ್ಲ! ಅತ್ತ ಕಾಂಗ್ರೆಸ್ ನಾಯಕರಿಗೆ ಸಿಡಿ ಹಿಡಿದುಕೊಂಡು,ಬಿಜೆಪಿ ನಾಯಕರನ್ನು ಹಾಗೂ ಸರಕಾರವನ್ನು ಮುಜುಗರಕ್ಕೆ ಸಿಲುಕಿಸಿ ರಾಜಕೀಯ ಮೇಲುಗೈ ಸಾಧಿಸಬೇಕಿತ್ತು. ಇತ್ತ ಬಿಜೆಪಿ ನಾಯಕರಿಗೆ ತಾವು ಮಂಡಿಸಿದ ವಿಷಯಕ್ಕಿಂತ ಹೆಚ್ಚಾಗಿ, ಸದನದಲ್ಲಿ ಸರಕಾರಕ್ಕೆ ಮುಜುಗರವಾಗುವ  ರೀತಿಯಲ್ಲಿ ಚರ್ಚೆಗಳು ನಡೆಯಬಾರದಿತ್ತು.
ಅದಕ್ಕಾಗಿ ಬಜೆಟ್, ವಿಧೇಯಕ ಹಾಗೂ ಪೂರಕ ಬಜೆಟ್‌ನ ಸಾಧಕ ಬಾಧಕದ ಬಗ್ಗೆಯೂ ಚರ್ಚಿಸದೇ ಎಲ್ಲವನ್ನು ‘ಪಾಸ್’ ಮಾಡಿಕೊಂಡು ಕಲಾಪ ಗಳನ್ನು ಅನಿರ್ದಿಷ್ಠಾವಧಿಗೆ ಮುಂದೂಡಿ, ತಮ್ಮ ರಾಜಕೀಯ ಆಟದತ್ತ ಹೊರಳಿದರು. ಚಿಂತಕರ ಚಾವಡಿ, ಶಾಸನ ರಚನೆಯ ಮನೆಯಾಗಿರುವಉಭಯ ಸದನಗಳು ಹೆಚ್ಚೆಚ್ಚು ನಡೆದಾಗ ಮಾತ್ರ, ಪರಿಣಾಮಕಾರಿ ವಿಷಯಗಳ ಚರ್ಚೆ ಸಾಧ್ಯ. ಅದನ್ನು ಬಿಟ್ಟು ಅಲ್ಲಿ ಚರ್ಚಿಸಬೇಕಾದ ವಿಷಯವನ್ನು ಬಿಟ್ಟು, ಬೇರೆಲ್ಲ ಮಾತನಾಡಿಕೊಂಡು, ಕಿತ್ತಾಡಿಕೊಂಡಾಗ ಅದಕ್ಕಿಂತ ಗೌರವ ಕಡಿಮೆಯಾಗುವುದರೊಂದಿಗೆ, ಅದರ ಮೇಲಿನ ಆಸಕ್ತಿಯೂ ಕ್ಷೀಣಿಸುತ್ತಾ ಹೋಗುತ್ತದೆ. ಈ ಬಗ್ಗೆ ಅನೇಕ ಬಾರಿ ಮೂರೂ ಪಕ್ಷದ ಹಿರಿಯ ಶಾಸಕರು ಮಾತನಾಡಿದ್ದಾರೆ. ಸದನವೆಂದರೆ ಅದಕ್ಕಿರಬೇಕಾದ ಗೌರವವನ್ನು ಎತ್ತಿ ಹಿಡಿಯಬೇಕಾದ ಕೆಲಸವನ್ನು ನಾವೆಲ್ಲ ಒಟ್ಟಿಗೆ ಮಾಡಬೇಕಾಗಿದೆ ಎಂದಿದ್ದಾರೆ.
ಆದರೆ ಕಾರ್ಯಗತಗೊಳಿಸುವ ಸಮಯದಲ್ಲಿ ಮಾತ್ರ, ತಮ್ಮ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದಕ್ಕೆ ಸದನವನ್ನು ಬಳಸಿಕೊಳ್ಳುತ್ತಿದ್ದಾರೆ. ವಿಧಾನಸಭೆಯನ್ನು ಅನಿರ್ದಿಷ್ಟಾವಽಗೆ ಮುಂದೂಡಿದ ಮರುದಿನ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸುದ್ದಿಗೋಷ್ಠಿ ನಡೆಸಿ, ಸದನದಒಟ್ಟಾರೆ ಸಾರಾಂಶವನ್ನು ಹೇಳಿದರು. ಒಂದು ತಿಂಗಳು ನಡೆಯಬೇಕಿದ್ದ ಸದನ ಒಂದು ವಾರದ ಮೊದಲೇ ಮುಗಿದಿದ್ದಕ್ಕೆ ಅವರಿಗೂ ಸಮಾಧಾನ ವಿರಲಿಲ್ಲ. ಬದಲಿಗೆ, ರಾಷ್ಟ್ರಕ್ಕೆ ಮಾದರಿಯಾಗಿರುವ ಕರ್ನಾಟಕ ವಿಧಾನಮಂಡಲದಲ್ಲಿ ಚರ್ಚೆಯಾಗಬೇಕಿರುವ ವಿಷಯ ಬಿಟ್ಟು, ಬೇರೆಲ್ಲ ಚರ್ಚೆಯಾಗಿದ್ದು ನಿಜಕ್ಕೂ ಕೆಟ್ಟ ನಡೆ. ಪ್ರಮುಖವಾಗಿ ಒಂದು ತಿಂಗಳು ನಡೆಯಬೇಕಿದ್ದ ವಿಧಾನಮಂಡಲ ಅಧಿವೇಶನ ಒಂದು ವಾರಕ್ಕೆ ಮೊದಲೇ ಮುಗಿಯು ವುದು ಮಾತ್ರವಲ್ಲದೇ, ಕಲಾಪ ನಡೆದ ದಿನದಲ್ಲಿಯೂ ಮೂರು ದಿನ ರಮೇಶ್ ಜಾರಕಿಹೊಳಿ ಅವರ ಸಿಡಿ ವಿಷಯಕ್ಕೆ ಆಹುತಿಯಾಯಿತು.
ಇದರೊಂದಿಗೆ ಈ ಬಾರಿ ಬಜೆಟ್ ಕಲಾಪ ಕೇವಲ 44 ಗಂಟೆ ನಡೆದಿದ್ದು, ಅದರಲ್ಲಿಯೂ ಆಗಾಗ್ಗೆ ಬೇಕಿರದ, ಬೇಡದ ವಿಷಯಗಳ ಚರ್ಚೆಗೆ ಕೆಲ ಗಂಟೆ ವ್ಯರ್ಥವಾಗಿದೆ. ಜಾರಕಿಹೊಳಿ ಅವರಿಂದ ಯುವತಿಗೆ ಒಂದು ವೇಳೆ ನಿಜವಾಗಿಯೂ ಅನ್ಯಾಯವಾಗಿದ್ದರೆ, ಅದನ್ನು ಪ್ರಶ್ನಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಪ್ರತಿಪಕ್ಷವಾಗಿ ಹಾಗೂ ಜನಪ್ರತಿನಿಧಿಗಳಾಗಿ ಅವರು ಈ ಬಗ್ಗೆ ಸರಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಬೇಕು. ಸತತ ಎರಡನೇ ದಿನವೂಕಾಂಗ್ರೆಸ್ ಶಾಸಕರು ಪ್ರತಿಭಟನೆ ನಡೆಸಿದಾ ಸ್ಪೀಕರ್ ಕಾಗೇರಿ ಅವರು ಇದೇ ವಿಷಯವನ್ನು ಹೇಳಿದ್ದು.
‘ಒಂದು ವೇಳೆ ನಿಮಗೆ ಸರಕಾರದ ಉತ್ತರ ಅಥವಾ ನಡೆ ಸರಿಹೊಂದದಿದ್ದರೆ, ಕಲಾಪದ ಹೊರಗೆ ಹೋರಾಡಿ. ಇಲ್ಲವೇ ಇಲ್ಲಿಯೇ ಮುಂದುವರಿಸಬೇಕಿದ್ದರೆ, ಮೌನವಾಗಿ ಅಥವಾ ಬೇರೆಯವರಿಗೆ ಅಡ್ಡಿಯಾಗ ದ ರೀತಿ ಧರಣಿ ಮುಂದುವರಿಸಿ’ ಎಂದು. ಆದರೆ ಅಲ್ಲಿ ಕಾಂಗ್ರೆಸ್ ಬೇಕಿದ್ದು ಈ ಪ್ರಕರಣದ ತಾರ್ಕಿಕಅಂತ್ಯಕ್ಕಿಂತ ಹೆಚ್ಚಾಗಿ, ಬಿಜೆಪಿ ಸರಕಾರದ ವಿರುದ್ಧ ಗದ್ದಲ ಎಬ್ಬಿಸಲು ಒಂದು ಅಸವಷ್ಟೇ. ಆದರೆ ಪ್ರತಿಪಕ್ಷವಾಗಿ ಸರಕಾರವನ್ನು ಪ್ರಶ್ನಿಸುವುದಕ್ಕೆಅಥವಾ ಮುಜುಗರಕ್ಕೆ ಸಿಲುಕಿಸಲು ಕಾಂಗ್ರೆಸ್ ಹಲವು ವಿಷಯಗಳಿದ್ದವು. ಆದರೆ ಅವ್ಯಾಕೋ ಕಾಂಗ್ರೆಸ್ ನಾಯಕರಿಗೆ ಇಷ್ಟು ár  ಆಗಿ ಕಾಣಲಿಲ್ಲ. ರಾಜ್ಯದಲ್ಲಿ ಹೆಚ್ಚಾಗುತ್ತಿರುವ ಕರೋನಾ ಸೋಂಕಿನ ನಿಯಂತ್ರಣಕ್ಕೆ ಸರಕಾರ ಕೈಗೊಂಡಿರುವ ನಿರ್ಣಯ, ಕೋವಿಡ್ ಲಸಿಕೆ ಹಂಚಿಕೆಯಲ್ಲಿ ಏನಾದರೂ ಸಮಸ್ಯೆಗಳಾಗಿವೆಯೇ? ರಾಜ್ಯ ಆರ್ಥಿಕ ಪರಿಸ್ಥಿತಿ, ಶಾಲೆ ಕಾಲೇಜುಗಳು ಆರಂಭಗೊಂಡ ಬೆನ್ನಲ್ಲೇ ಶುರುವಾಗುತ್ತಿದ್ದಂತೆ ಹೆಚ್ಚಾದ ಕೋವಿಡ್ ಸೋಂಕಿತರ ಸಂಖ್ಯೆ.. ಹೀಗೆ ಸರಕಾರವನ್ನು ಕಿವಿ ಹಿಂಡುವುದಕ್ಕೆ ಇದ್ದ ಹಲವು ವಿಷಯವನ್ನು ಬಿಟ್ಟು ಈ ವಿಷಯಗಳನ್ನು ಹಿಡಿದುಕೊಂಡು ಸಮಯವ್ಯರ್ಥಮಾಡುವುದರಲ್ಲಿ ಅರ್ಥವಿದೆಯೇ? ರಮೇಶ್ ಜಾರಕಿಹೊಳಿ ಅವರ ಈ ಸಿಡಿ ವಿವಾದ ಕೇವಲ ವೈಯಕ್ತಿಕ ವಿಚಾರವಲ್ಲ ಎನ್ನುವುದನ್ನು ಒಪ್ಪಬೇಕು.
ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿಯ ವಿವಾದ ಸೃಷ್ಟಿಸಿದಾಗ ಅದು ಸಾರ್ವಜನಿಕವಾಗಿ ತನಿಖೆ ಯಾಗಬೇಕು ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಈ ಹಿಂದೆ ಈ ರೀತಿಯ ಸಿಡಿಗಳು ಬಿಡುಗಡೆಯಾದ ಸಮಯದಲ್ಲಿ, ಪ್ರತಿಪಕ್ಷಗಳು ಯಾವ ರೀತಿ ಪ್ರತಿಕ್ರಿಯಿಸಿದ್ದೋ ಅದೇ ರೀತಿಈ ಬಾರಿಯೂ ಕಾಂಗ್ರೆಸ್ ಪ್ರತಿಕ್ರಿಯಿಸಿದೆ. ಆದರೆ ಅದಕ್ಕೊಂದು ಮಿತಿ ಇರಬೇಕು ಎನ್ನುವುದಷ್ಟೇ ಅನೇಕರ ವಾದ. ರಾಜ್ಯದಲ್ಲಿ ಮೊದಲ ಅಲೆಯ ಕರೋನಾದಿಂದ ಚೇತರಿಸಿಕೊಳ್ಳುವ ಮೊದಲೇ. ಎರಡನೇ ಅಲೆ ಕರೋನಾ ತೀವ್ರವಾಗಿ ವ್ಯಾಪಿಸುತ್ತಿದೆ.
ಇನ್ನೊಂದೆಡೆ ಈ ಎರಡನೇ ಅಲೆಯ ಕರೋನಾ ದಿಂದ ಪುನಃ ಕಠಿಣ ಮಾರ್ಗಸೂಚಿ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾದರೆ, ಪುನಃ ರಾಜ್ಯದ ಆರ್ಥಿಕ ವಹಿವಾಟು ನೆಲಕಚ್ಚುವ ಆತಂಕವಿದೆ. ಆರ್ಥಿಕ ವಹಿವಾಟು ನೆಲ ಕಚ್ಚಿದರೆ, ರಾಜ್ಯಕ್ಕೆ ಬರಬೇಕಾದ ಆದಾಯ ಬಾರದೇ, ಮತ್ತೊಮ್ಮೆ ಆರ್ಥಿಕ ಬಿಕ್ಕಟ್ಟು ಸೃಷ್ಟಿಯಾಗುವ ಸಾಧ್ಯತೆಯಿದೆ. ಆದರೆ ಈ ಬಗ್ಗೆ ರಾಜ್ಯ ಸರಕಾರಕ್ಕೆ ಸಲಹೆ ನೀಡಬೇಕಿರುವ ಅಥವಾ ಇದನ್ನು ನಿಭಾಯಿಸಲು ಯಾವ ಕ್ರಮ ಕೈಗೊಳ್ಳಬೇಕು ಎನ್ನುವ ಬಗ್ಗೆ ಚಿಂತಿಸಬೇಕಾದವರು, ಸಿಡಿಯ ಹಿಂದೆ ಬಿದ್ದಿದ್ದಾರೆ.