ಪ್ರಜಾಪ್ರಭುತ್ವದ ವೇಷ ಹೊತ್ತ ಮಿತಜನರಾಳ್ವಿಕೆ
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಹಲವು ವರ್ಷಗಳ ಹಿಂದೆ ಚುನಾವಣಾ-ಪೂರ್ವ ಸಮೀಕ್ಷೆಗೆ ಗುಂಡ್ಲುಪೇಟೆ ತಾಲೂಕಿಗೆ ಭೇಟಿ ನೀಡಿದ್ದೆ. ಮತದಾನದ ಅರ್ಹತೆ ಅವನಿಗಿಲ್ಲದಿದ್ದರೂ, ಹಳ್ಳಿಯೊಂದರಲ್ಲಿ ಸಿಕ್ಕ ಬಾಲಕನನ್ನು ಮಾತನಾಡಿಸುತ್ತಿದ್ದೆ. ಅವರಿಗೆ (ಪರಿಶಿಷ್ಟ ಜಾತಿಯವರಿಗೆ) ಹೊಲಿಗೆ ಯಂತ್ರ ಕೊಡುತ್ತಾರೆ, ನಮಗೇಕೆ ಕೊಡೊಲ್ಲ,ಸಾರ್? ಅಂತ ಅಸಮಾಧಾನದಿಂದ ಪ್ರಶ್ನಿಸಿದ.
ನನಗೆ ಚುನಾವಣಾ ಸಮೀಕ್ಷೆ ಅಂದರೆ ಅಲರ್ಜಿ. ಜಾತ್ಯತೀತ ವ್ಯವಸ್ಥೆಯಲ್ಲಿ ನಾವು ಎಲ್ಲಿ ಯಾವ ಜಾತಿಯ ಎಷ್ಟು ಮತದಾರರಿದ್ದಾರೆ, ಯಾವ ಜಾತಿಯ ಪ್ರಾಬಲ್ಯ ಹೆಚ್ಚು, ಅಭ್ಯರ್ಥಿಗಳು ಯಾವ, ಯಾವ ಜಾತಿ ಮುಂತಾದಂತಹ ಜಾತಿ ಪ್ರe ಹೆಚ್ಚಿಸುವಂಥ ಮಾಹಿತಿಯನ್ನು ಕಲೆಹಾಕಿ ಲೇಖನ ಬರೀಬೇಕು, ಕರ್ಮ. ಈ ಪುಟ್ಟ ಹುಡುಗನ  ಜಾತಿಯನ್ನೂ ಊಹಿಸಿದ್ದಾನಾದರೂ ಕೇಳಿ ಖಚಿತಪಡಿಸಿಕೊಂಡೆ – ಲಿಂಗಾಯತ. ಎಂಟು ವರ್ಷದ ಎಳೆಯ ಬಾಲಕನ ನಿಷ್ಕಲ್ಮಶ ಹೃದಯದಲ್ಲೂ ಅಸಹನೆಯ ಹೊಗೆ.
ಇದು ಮೀಸಲಾತಿ ಮಾಡಿದ/ಮಾಡುತ್ತಿರುವ ಅಪಾರ ಹಾನಿಯ ಒಂದು ಇಣುಕು ನೋಟ. ಎಳೆಯ ಮನಸ್ಸಿಗೇ ಮೀಸಲಾತಿಯ ತಾರತಮ್ಯದ ಬಿಸಿತಟ್ಟಿದೆಯೆಂದರೆ ಇನ್ನೂ ಹೆಚ್ಚಿನ ಅಸಮತೋಲನವನ್ನು ದಿನನಿತ್ಯ ಅನುಭವಿಸುತ್ತಿರುವ ಲಕ್ಷಾಂತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ನೋವು ಅನುಭವಸಿದವರಿಷ್ಟೇ ಗೊತ್ತು. ಮಾತನಾಡಿದರೆಲ್ಲಿ ದೌರ್ಜನ್ಯದ ಮೊಕದ್ದಮೆ ಎದುರಿಸಬೇಕಾದೀತೆಂದು ಹಿಂಸೆಯನ್ನು ಮೂಕರಾಗಿ ಎದುರಿಸು ತ್ತಿರುವವರ ಸಂಖ್ಯೆ ಲೆಕ್ಕಕ್ಕೆ ಸಿಗದು. ಮಾಹಿತಿ ಹಕ್ಕು ಕಾಯಿದೆಯನ್ವಯ ಇಂತಹ ಅನೇಕ ಪ್ರಕರಣಗಳಲ್ಲಿ ಆರೋಪ ಸಾಬೀತಾಗದೇ ದೂರುದಾರರ ದುರುದ್ದೇಶ ಬಯಲಾಗಿದೆ.
ಹಾಗೆಂದು ಹುಸಿ ದೂರು ನೀಡುವುದೇನೂ ಕಡಿಮೆಯಾಗಿಲ್ಲ. ಬಗೆಹರಿಯದ ಭೂ ವಿವಾದಕ್ಕೆ ಸುಲಭೋಪಾಯವಾಗಿ ವಿಷ್ಣು ಎಂಬ ಪಕ್ಕದ ಜಮೀನಿನವನ ಮೇಲೆ ಸುಳ್ಳು ಅತ್ಯಾಚಾರ ಆರೋಪ ಹೊರಿಸಿ ಅವನನ್ನು ವಿನಾ ಕಾರಣ ಎರಡು ದಶಕಗಳಷ್ಟು ಕಾಲ ಜೈಲಿನಲ್ಲಿ ಕೊಳೆಸಿದಪ್ರಕರಣ ಇತ್ತೀಚೆಗಷ್ಟೆ ಉತ್ತರ ಪ್ರದೇಶದಿಂದ ವರದಿಯಾಗಿತ್ತು. ಯಾವುದೇ ಮಾನವ ಹಕ್ಕು ಪ್ರತಿಪಾದಕರು ಇಂತಹ ದೌರ್ಜನ್ಯದ ಬಗ್ಗೆ ತುಟಿಕ್ ಪಿಟಿಕ್ ಎನ್ನದಿರುವುದಕ್ಕೆ ಆತನ ಹೆಸರಿಗೆ ಸೇರಿರುವ ತಿವಾರಿ ಎಂಬ ಬಾಲಂಗೋಚಿ ಕಾರಣವಾಯಿತೇ? ಉಲ್ಬಣಗೊಂಡಿರುವ ಈ ದಾಖಲಾಗದಪ್ರತಿ-ದೌರ್ಜನ್ಯಕ್ಕೆ ಸರಕಾರ ಎಚ್ಚೆತ್ತುಕೊಳ್ಳಲು ಇನ್ನೆಷ್ಟು ಅಮಾಯಕರು ಇಂಥದೇ ನರಕವನ್ನು ಅನುಭವಿಸಬೇಕು? ಸಮಾಜ ಇಂತಹ ಬೂದಿ ಮುಚ್ಚಿದ ಕೆಂಡದ ಮೇಲೆ ಪವಡಿಸಿರುವುದು ನಮ್ಮ ನಾಯಕರಿಗೆ ತಿಳಿದಂತಿಲ್ಲ. ಅಥವಾ ತಿಳಿದಿದ್ದೂ ತಪ್ಪನ್ನು ತಿದ್ದುವ ಪ್ರಯತ್ನ ಮಾಡುತ್ತಿಲ್ಲ.
ಹಿಂದೊಮ್ಮೆ, ನಾನು ಸದಸ್ಯನಲ್ಲದ ಸ್ಥಳೀಯ ಟೀಮೊಂದರ ಜತೆ ಒಂದೆರಡು ದಿನ ಕ್ರಿಕೆಟ್ ಅಭ್ಯಾಸ ಮಾಡುವ ಜರೂರಿತ್ತು. ನನಗೆ ಬೆಳಗ್ಗೆಯಷ್ಟೇ ತುಸು ಬಿಡುವಿದ್ದುದರಿಂದ ಮಹಿಳೆಯರೊಟ್ಟಿಗೆ ಪ್ರಾಕ್ಟೀಸ್ ಮಾಡಲು ಅವಕಾಶ ಒದಗಿಸಲಾಗಿತ್ತು. ನಾವು ಆಡುತ್ತಿದ್ದ ಮೈದಾನದ ಬಳಿಯ ನಿಮ್ನ ವರ್ಗದ ವಿದ್ಯಾರ್ಥಿಗಳ ಹಾಸ್ಟೆಲ್ ಇತ್ತು. ಒಂದು ದಿನ, ಪ್ರಾಕ್ಟೀಸ್ ಮುಗಿದ ನಂತರ ಆಟಗಾರ್ತಿಯೊಬ್ಬಳ ತಾಯಿ ಹುಡುಗರ ಅಸಭ್ಯ ವರ್ತನೆ ಬಗ್ಗೆ ಕೋಚ್‌ಗೆ ದೂರು ನೀಡಿದರು. ನಾಳೆ, ನಿಮ್ಮ ಮಗಳು ಕ್ರಿಕೆಟರ್ ಆಗಿ ಬೆಳೆದು ದೊಡ್ಡ ಸ್ಟೇಡಿಯಂನಲ್ಲಿ ಆಡುವಾಗ ಸಾವಿರಾರು ಜನ ನೆರೆದಿದ್ದು ಒಬ್ಬೊಬ್ಬರೂ (ಬಾಯಿಗೆ ಬಂದಂತೆ) ಕೂಗುತ್ತಿರುತ್ತಾರೆ.
ಅವರೆಲ್ಲರ ಮೇಲೆ ಕ್ರಮ ತೆಗೆದುಕೊಳ್ಳಲು ಸಾಧ್ಯವೇ? ಇರಲಿ ಬಿಡಿ, ಅಭ್ಯಾಸ ಆಗಲಿ ಎಂದು ಆಕೆಯ ಬಾಯಿ ಮುಚ್ಚಿಸಿದ್ದರು. ಆತ ಹೇಳಿದ್ದು ಅಸಮ್ಮತವಾದರೂ, ಒಂದು ವೇಳೆ ಅನುಚಿತ ವರ್ತನೆ ಕುರಿತು ದೂರು ನೀಡಿದ್ದರೆ ಅದೆಷ್ಟು ಮಟ್ಟಿಗೆ ಫಲಕಾರಿಯಾಗುತ್ತಿತ್ತು ಎಂಬುದು ಓದುಗರಊಹೆಗೆ ಬಿಡುತ್ತೇನೆ. ಊರಲ್ಲಿನ ದೇಶದ್ರೋಹಿ ಚಟುವಟಿಕೆಯೊಂದರ ಬಗ್ಗೆ ನನಗೆ ಪ್ರತ್ಯಕ್ಷದರ್ಶಿಯೊಬ್ಬರು ಖಚಿತ ಮಾಹಿತಿಯನ್ನು ನೀಡಿದರು. ಮಾಹಿತಿದಾರ ಸಾಮಾನ್ಯ ಪ್ರಜೆ, ಬಡವ. ಯಾವುದೇ ಪಕ್ಷದ ಸದಸ್ಯನಲ್ಲ. ಆತನ ಮಾಹಿತಿಯನ್ನು ಪೊಲೀಸ್ ಮುಖ್ಯಸ್ಥರಿಗೆ ಮುಟ್ಟಿಸಿದೆ.
ಕ್ರಮ ವಹಿಸಲು ಮುಂದಾಗಬೇಕಿದ್ದ ಅವರು ನನ್ನನ್ನು ಗುಮಾನಿಯಿಂದ ನೀವು ಬಿಜೆಪಿ ಸದಸ್ಯರೇ? ಎಂದು ಉಡಾಫೆಯಿಂದ ಕೇಳಿದರು. ಕಾರ್ಯಪ್ರವೃತ್ತರಾಗುವ ಸೂಚನೆ ಕಾಣಲಿಲ್ಲ. ಅವರ ವರ್ಗಾವಣೆಯಾದ ಸುಮಾರು ಅವಧಿಯ ನಂತರ ಭಯೋತ್ಪಾದಕರಿಬ್ಬರ ಬಂಧನ ದೊಡ್ಡ ಸುದ್ದಿಯಾಯಿತು. ಪೊಲೀಸ್ ಇಲಾಖೆಯೂ ಜಾತಿಮಯವಾಗಿರುವುದು ಹೊಸತೇನಲ್ಲ.
ಇಂತಹ ಕುರೂಪ ಸತ್ಯಗಳನ್ನು ಸಮಾಜ ಎಷ್ಟು ದಿನ ಅರಗಿಸಿಕೊಳ್ಳುತ್ತದೆ, ಸ್ವಾಮಿ? ತಪ್ಪು ಯಾರು ಮಾಡಿದರೂ ತಪ್ಪು. ಮೇಲ್ವರ್ಗದಿಂದ ನಡೆಯುವ ದೌರ್ಜನ್ಯವನ್ನು ಖಂಡಿಸುವ ಮಾಧ್ಯಮ ಕೆಳವರ್ಗದಿಂದ ನಡೆಯುವ ದೌರ್ಜನ್ಯಕ್ಕೆ ವಿಭಿನ್ನ ವ್ಯಾಖ್ಯೆ ಒದಗಿಸುವಲ್ಲಿ ಪರಿಣತಿ ಸಾಧಿಸಿರುವುದು ಗುಟ್ಟೇನಲ್ಲ. ಇಂತಹ ಇಬ್ಬಂದಿ ಧೋರಣೆಯಿಂದ ಉಂಟಾಗುವ ಅನೂಹ್ಯ ಹಾನಿಯ ಬಗ್ಗೆ ಗಮನ ಹರಿಸಬೇಕಾದವರು ಕಣ್ಣು ಮುಚ್ಚಿ ಕುಳಿತಿzರೆ. ಈಅಪಾಯಕಾರಿ ತಟಸ್ಥರನ್ನು ಉದಾರವಾದಿಗಳೆಂದು ಕರೆಯಲಾಗುತ್ತದೆ. ಈ ನಿರ್ವೀರ್ಯ ಔದಾರ್ಯಕ್ಕೆ ಸಮಾಜ ತೆರುವ ಬೆಲೆ ಅಗಾಧವಾದದ್ದು. ತುಷ್ಟೀಕರಣ ರಾಜಕಾರಣದ ಮೂಲಕ ಪರಿಶಿಷ್ಟರಿಗಷ್ಟೇ ನ್ಯಾಯ-ನೆಮ್ಮದಿಗಳು ಸಿಗುವುದಾದರೆ ಅದು ಮಿತಜನರಾಳ್ವಿಕೆಯಾಗುತ್ತದೆ, ಪ್ರಜಾಪ್ರಭುತ್ವವಾಗುವುದಿಲ್ಲ.
ಪ್ರಜಾಸತ್ತೆಯ ಅಣಕದ ಆಟದಲ್ಲಿ ಮಠ-ಮಸೀದಿ-ಚರ್ಚ್ ಗಳು ಆಡಳಿತದ ಸೂತ್ರವನ್ನೂ, ಆಡಳಿತಗಾರರ ಜುಟ್ಟನ್ನೂ ಕೈಗೆತ್ತುಕೊಳ್ಳುತ್ತವೆ. ಇದು ಅಂಬೇಡ್ಕರ್ ಕಂಡ ಕನಸಿನ ಭಾರತವಲ್ಲ. ಅಧಿಕಾರ (ಅಧಿಕಾರ ಹಿಡಿದವರನ್ನು) ಕೆಡಿಸುತ್ತದೆ, ಸರ್ವಾಧಿಕಾರ ಸಂಪೂರ್ಣವಾಗಿ ಹಾಳುಗೆಡವುತ್ತದೆ((      ) ಎಂಬ ಮಾತಿದೆ. ಸಮಾನತೆಯ ಮುಸುಕಿನಲ್ಲಿ ಪರಿಶಿಷ್ಟ ಜಾತಿಗಳಿಗೆ ವ್ಯವಸ್ಥೆನೀಡಿರುವುದು ಅಂತಹ ಸರ್ವಾಧಿಕಾರ ಎಂಬುವ ಕರಾಳ ಸತ್ಯ ಅದರ ದಬ್ಬಾಳಿಕೆಗೆ ದಿನಂಪ್ರತಿ ಒಳಗಾಗುವವರ ಅನುಭವಕ್ಕೆ ಬಂದಿರುತ್ತದೆ. ಎಲ್ಲಿಯವರೆವಿಗೂ ಅಸಮಾನತೆ ಇರುತ್ತದೆಯೋ ಅಲ್ಲಿಯವರೆಗೆ ಮೀಸಲಾತಿ ಮುಂದುವರೆಯುತ್ತದೆ ಎಂಬ ಡೋಂಗಿ ಕಳಕಳಿ ಆ ಸರ್ವಾಧಿಕಾರದಿಂದ ತುಳಿತಕ್ಕೊಳಗಾಗಿರುವವರಿಗೆ ಬೆದರಿಕೆಯಂತೆ ಕೇಳಿದರೆ ಆಶ್ಚರ್ಯವಿಲ್ಲ.
ಮೀಸಲಾತಿಗೆ ಏಳೂವರೆ ದಶಕಗಳಿಗಿಂತಲೂ ಹಳೆಯದಾದ ಇತಿಹಾಸವಿದೆ. ಹಾಗಿದ್ದೂ ದೀನದಲಿತರನ್ನು ಮೇಲೆತ್ತಲಾಗಲಿಲ್ಲವೆಂದರೆದೋಷ ವಿರುವುದು ಮೀಸಲಾತಿಯ. ಇದನ್ನು ಗ್ರಹಿಸಲು ದುರ್ಬೀನೂ ಬೇಡ, ಮೈಕ್ರೋಸ್ಕೊಪೂ ಬೇಡ. ಎಷ್ಟೆ ಯೋಜನೆಗಳನ್ನು ನಿಯೋಜಿಸಿದ ನಂತರವೂ ಬಹುತೇಕ ಬಡವರು ಬಡವರಾಗಿಯೇ ಉಳಿದಿರುವ ಪವಾಡದ ಹಿಂದೆ ಮತಾಂತರಿಗಳ ಪಾತ್ರವಿದೆಯೇ ಎಂಬುದನ್ನು ಪತ್ತೆ ಹಚ್ಚಲುಆ ಸಾಧನಗಳ ಬಳಕೆಯಾಗಬೇಕು. ದಲಿತ ಕಲ್ಯಾಣಕ್ಕೇ ರೂಪಿಸಲಾದ ಅನೇಕ ಯೋಜನೆಗಳ ವೈಫಲ್ಯಕ್ಕೆ (ಅಥವಾ ಸೀಮಿತ ಯಶಸ್ಸಿಗೆ) ಮೀಸಲಾತಿಯ ಫಲಾನುಭವಿಗಳನ್ನು ಹೊಣೆಗಾರರನ್ನಾಗಿಸಬೇಕಾಗುತ್ತದೆ.
ನಾನು ಮೆಚ್ಚಿಕೊಂಡಿದ್ದ ಒಬ್ಬ ಹಿರಿಯ ದಲಿತಾಧಿಕಾರಿಯ ಬಳಿಗೆ ಒಮ್ಮೆ ಮಧ್ಯವಯಸ್ಕ ಸಾರ್ವಜನಿಕರೊಬ್ಬರು ಬಂದರು. ಅವರು ತಮ್ಮ ಕುಂದುಕೊರತೆ ಕುರಿತಾಗಿ ಆ ಮುಂಚೆ ನೀಡಿದ್ದ ಅರ್ಜಿ ಮತ್ತು ಬೆಂಬಲಿತ ದಾಖಲೆಗಳು ಕಾಣೆಯಾಗಿದ್ದವು. ಹೌದ್ರಿ, ಇಂಥ ದೊಡ್ಡ ಆಫೀಸ್‌ನಲ್ಲಿ ಕೆಲವೊಮ್ಮೆ ಹಾಗಾಗುತ್ತೆ. ಏನ್ಮಾಡೋಕಾಗೊಲ್ಲ ಅಂತ ಅವರ ಸಮಜಾಯಿಷಿಯನ್ನು ಕೇಳಿ ಆತ ಕ್ರುದ್ಧರಾಗಿ ದನಿ ಏರಿಸಿದರು. ಅಧಿಕಾರಿ ಅವರನ್ನು ಭದ್ರತಾ ಸಿಬ್ಬಂದಿಗೆ ಹೇಳಿ ಹೊರಹಾಕಲು ಆದೇಶಿಸಿದರು. ಬಡತನದ ಸ್ವಯಂ ಅನುಭವವಿದ್ದ ಅಧಿಕಾರಿಯೇ ಬಡ ಅರ್ಜಿದಾರರ ಮೇಲೆದರ್ಪ ತೋರಿದ್ದು ಅಸಹನೀಯವಾಗಿತ್ತು.
ಶೇಕಡಾ೮೫ಅಂಕ ಗಳಿಸಿದವನಿಗೆ ಸಿಗದ ನೌಕರಿ ಶೇಕಡಾ೫೫ಗಳಿಸಿದವನಿಗೆ ಸಿಕ್ಕಾಗ ಆ ಕಚೇರಿಯಲ್ಲಿನ ಕಾರ್ಯ ಕ್ಷಮತೆ ಕುಗ್ಗುವುದು ಸಹಜ. ತುರ್ತು ಪರಿಸ್ಥಿತಿಯ ಅವಧಿಯಲ್ಲಿ ಅಂದಿನ ಬಿಟಿಎಸ್ ಬಸ್ಸುಗಳ ಮೇಲೆ ಸರಕಾರ ಕಡ್ಡಾಯವಾಗಿ ಬರೆಸಿದ ಘೋಷಣೆಗಳಲ್ಲಿ ಒಂದು ವಿಳಂಬ ಭ್ರಷ್ಟಾಚಾರಕ್ಕೆ ಎಡೆಮಾಡಿಕೊಡುತ್ತದೆ (  ) ಎಂಬುದೂ ಒಂದು. ಲಂಚ ನೀಡಿದರೂ ಕಾರ್ಯ ಸಾಧನೆಯಾಗುವುದಿಲ್ಲ ಎಂಬ ಮಾತು ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಕೇಳಿಬರುತ್ತಿರುವುದರ ಸುದೀರ್ಘ ವಿಶ್ಲೇಷಣೆ ಬೇಡ ಅನ್ನಿಸುತ್ತದೆ.
ಇದರಷ್ಟೇ ಅನಿಷ್ಟ ಮತ್ತೊಂದಿದೆ. ಅವನು(ಳು) ಕೆಲಸ ಮಾಡದೆ ಸುಮ್ಮನಿರಬೇಕಾದರೆ ನಾನೇಕೆ ಮೈನೋಯಿಸಿಕೊಳ್ಳಬೇಕು ಎಂಬ ಧೋರಣೆ. ಇಂತಹಸ್ಪರ್ಧಾತ್ಮಕ ಮೈಗಳ್ಳತನದಿಂದ ಕಾಯಕದ ಸಂಸ್ಕೃತಿಯೇ ನಶಿಸಿಹೋಗುತ್ತಿದೆ. ಸರಕಾರಿ ಕೆಲಸವಾದ್ದರಿಂದ ಉದ್ಯೋಗದ ಭದ್ರತೆ ಇವರನ್ನು ಕಾಡುವುದಿಲ್ಲ. ಜಾತೀಯತೆ ಸಾರ್ವಜನಿಕ ಕಚೇರಿಗಳ ಆಧಾರ ಸ್ತಂಭ ವಾಗಿದ್ದು ಯಾರೂ ಇವರನ್ನು ಅಲುಗಾಡಿಸಲಾಗುವುದಿಲ್ಲ. ಅವರವರ ಸ್ವಂತಬೇಳೆಕಾಳು ಬೇಯಿಸಿಕೊಳ್ಳುವುದರ ಎಲ್ಲರೂ ನಿರತರಾಗಿದ್ದು ಸಾರ್ವಜನಿಕರ ಪಾಡು ಲಾಕ್‌ಡೌನ್ ಅವಧಿಯ ಬೀದಿನಾಯಿಯ ಪಾಡಂತಾಗಿದೆ.
ಮೀಸಲಾತಿಯನ್ನು ಮುಂದುವರಿಸಿಕೊಂಡು ಹೋಗುವುದರಿಂದಲೂ, ಅದರ ವ್ಯಾಪ್ತಿಯನ್ನು (ಮತ ರಾಜಕಾರಣವೆಂಬ ಏಕೈಕ ದುರುದ್ದೇಶದಿಂದ) ಹೆಚ್ಚು ಜಾತಿಗಳಿಗೆ ವಿಸ್ತರಿಸುವುದರಿಂದಲೂ ಸರಕಾರಿ ನಿಯಂತ್ರಿತ ಸಾರ್ವಜನಿಕ ಸೇವಾ ಸಂಸ್ಥೆಗಳು ಹುಟ್ಟಿಹೋಗುವುದಲ್ಲದೆ ಜಾತಿ ವೈಷಮ್ಯದ ಜ್ವಾಲೆಗೆ ಸರಕಾರವೇ ತುಪ್ಪ ಸುರಿದಂತಾಗುತ್ತದೆ. ಇಂದು ಮುಖ್ಯ ನಿದರ್ಶನ ಕೊಡಲಿಚ್ಚಿಸುತ್ತೇನೆ. ಮಂಡ್ಯ ಜಿಲ್ಲೆಯಲ್ಲಿ ರಾಗಿ ಲಕ್ಷ್ಮಣಯ್ಯ ದೊಡ್ಡ ಹೆಸರು. ರಾಗಿ ಸಂಶೋಧನೆಗೆ ದಲಿತ ಲಕ್ಷ್ಮಣಯ್ಯನವರ ಕೊಡುಗೆ ಅಪಾರ. ಒಕ್ಕಲಿಗ ಪ್ರಾಬಲ್ಯದ ಈ ಜಿಲ್ಲೆಯಲ್ಲಿ ಸರ್.ಎಂ ವಿಶ್ವೇಶ್ವರಯ್ಯನವರ ನಂತರ ಜನಪ್ರಿಯತೆಗಳಿಸಿದವರಲ್ಲಿ ಲಕ್ಷ್ಮಣಯ್ಯ ಪ್ರಮುಖರು, ವಂದನೀಯರು.
ಹಾಗಿದ್ದ ಮೇಲೆ, ಜಾತಿ ಎಲ್ಲಿಂದ ಬಂತು. ಯಾವುದೇ ಕ್ಷೇತ್ರದಲ್ಲಿ ಸಾಧನೆಗಷ್ಟೇ ಬೆಲೆ ನೀಡುವ ನಮ್ಮ ಸಮಾಜವನ್ನು ಮೀಸಲಾತಿ ಎಂಬ ಅವೈಜ್ಞಾನಿಕ ಪರಿಪಾಠ ಒಡೆಯುತ್ತಿದೆ. ಭಾರತ ಇಂಗ್ಲೆಂಡ್ ವಿರುದ್ಧ ಗೆದ್ದ ಏಕದಿನ ಕ್ರಿಕೆಟ್ ಸರಣಿಯ ಅಂತಿಮ ಪಂದ್ಯದ ಕೊನೆಯ ಓವರ್ ಬೌಲ್ ಮಾಡಿದ ನಟರಾಜನ್ ಕ್ರಿಕೆಟ್ ಅಭಿಮಾನಿಗಳೆಲ್ಲರ ಕಣ್ಮಣಿಯಾದ. ಅವನ ಅತಿಸಾಧಾರಣ ಹಿನ್ನೆಲೆ ಅವನ ಸಾಧನೆಗೆ ಮತ್ತಷ್ಟು ಮೆರುಗು ಕೊಟ್ಟಿತು. ಅಭಿಮಾನಿಗಳ ಹೃದಯಗಳಲ್ಲಿ ಅವನ ಸ್ಥಾನ ಶಾಶ್ವತವಾಯಿತು. ಅವನು ತಮಿಳನೋ, ಬೇರಾವ ಪ್ರಾಂತ್ಯದವನೋ ಅಮುಖ್ಯವಾಯಿತು. ನೀವು ಕ್ಷುದ್ರಾತಿಕ್ಷುದ್ರರಾಗಿದ್ದರಷ್ಟೆ ಅವನ ಜಾತಿಯ ಬಗ್ಗೆ ಸಂಶೋಧನೆ ಮಾಡುತ್ತೀರಿ.
ಒಲಂಪಿಕ್ ಸ್ಪರ್ಧೆಯಲ್ಲಿ ಶ್ರೀಮಂತ ಮತ್ತು ಬಡ ರಾಷ್ಟ್ರಗಳ ನಡುವೆ ತಾರತಮ್ಯವಿಲ್ಲ. ದೈನೇಸಿ ಆಫ್ರಿಕಾದ ಸ್ಪರ್ಧಿ ಎನ್ನುವ ಕಾರಣಕ್ಕೆ ಕೀನ್ಯಾ ದೇಶದದವರಿಗೇನು ರಿಯಾಯಿತಿ ತೋರುವುದಿಲ್ಲ. ಕಷ್ಟಕಾರ್ಪಣ್ಯದಲ್ಲಿ ಹುಟ್ಟಿ ಬೆಳೆದು ಅದು ದೊರಕಿಸಿಕೊಡುವ ಪ್ರತಿರೋಧಕತೆಯನ್ನೇಲಾಭವಾಗಿಸಿಕೊಂಡು ಮ್ಯಾರಥಾನ್ ಗೆಲ್ಲುವ ಅಲ್ಲಿಯ ಸ್ಪರ್ಧಿಗಳ ಓಟವೇ ನಯನಾನಂದ. ಕೊನೆಯದಾಗಿ, ಇದೊಂದು ಮರೆಯಲಾಗದ ಸ್ಪೂರ್ತಿ ದಾಯಕ ನಿಜ ಜೀವನದ ಕತೆ. ಭುಜ್ ಭೂಕಂಪದಲ್ಲಿ ಒಬ್ಬ ಗುಜರಾತಿಯ ರೆಸಾರ್ಟ್ ನೆಲಸಮವಾಗುತ್ತದೆ.
ದ ವೀಕ್ ನಿಯತಕಾಲಿಕೆ ಅವನನ್ನು ಸಂದರ್ಶಿಸಿದಾಗ ಆತ ನನಗೆ ಬೇರೇನೂ ಸಹಾಯ ಬೇಡ. ನನ್ನ ರೆಸಾರ್ಟ್‌ನ ಪುನರ್ ನಿರ್ಮಾಣಕ್ಕೆ ಸಾಲ ಕೊಡಿ, ಸಾಕು ಎನ್ನುತ್ತಾನೆ. ಇದಲ್ಲವೇ ಸ್ವಾಭಿಮಾನ. ಇಂತಹ ಕೆಚ್ಚೆದೆಯನ್ನು ಪ್ರತಿಯೊಬ್ಬ ಭಾರತೀಯರೂ ಬೆಳೆಸುಕೊಳ್ಳುವಂತಹ ವಾತಾವರಣನಿರ್ಮಾಣ ವಾಗಲಿ. ಎಲ್ಲರೂ ಘನತೆ ಗೌರವದಿಂದ ಎದೆಯುಬ್ಬಿಸಿ ನಡೆಯುವಂತಾಗಲಿ. ಶಾಂತಿ, ಸಹಕಾರಗಳಿಂದ ಅದು ಸಾಧ್ಯ. ಅದನ್ನು ಸಾಧ್ಯವಾಗಿಸಲು ರಾಜಕಾರಣಿಗಳು ಮನಸ್ಸು ಮಾಡಬೇಕಷ್ಟೆ.