ನೋವಿನ ವಿರಾಟ್ ಸ್ವರೂಪ
ವೈದ್ಯವೈವಿಧ್ಯ
ಡಾ.ಎಚ್.ಎಸ್.ಮೋಹನ್
ಜಾರಿ ಬಿದ್ದು ಕಾಲು ನೋವಾಗಿರಬಹುದು, ಹಲ್ಲಿನ ತೊಂದರೆಯಿಂದ ಹಲ್ಲು ಕೀಳಿಸಿ ನೋವಾಗಿರ ಬಹುದು,  ಅಪಘಾತದಲ್ಲಿ ಕೈ ಕಾಲು ಮುರಿದು ನೋವಾಗಿರಬಹುದು, ಹೀಗೆ ನೋವಿನ ಅನುಭವ ಹೆಚ್ಚಿನ ಎಲ್ಲರಿಗೆ ಬೇರೆ ಬೇರೆ ರೀತಿಯಲ್ಲಿ ಆಗಿರುತ್ತದೆ. ನೋವು ಎಲ್ಲರ ಜೀವನದಲ್ಲಿ ಬರುವ ಸಾಮಾನ್ಯ ಸಮಸ್ಯೆ.
ನೋವು ಎಂದರೆ ದೇಹದ ಒಂದು ಅಸಹಜ, ಅಸಂತೋಷ ಉಂಟು ಮಾಡುವ ಅನುಭವ ಎನ್ನಬಹುದು. ನೋವಿನ ಅನುಭವ ನಮಗಾದಾಗ ದೇಹದಲ್ಲಿ ಏನೋ ತೊಂದರೆ ಇದೆ ಎಂದು ನಾವು ತಿಳಿಯಬಹುದು. ಈ ನೋವು ಒಮ್ಮೆಲೇ ಬರಬಹುದು ಅಥವಾ ನಿಧಾನವಾಗಿ ಬರಬಹುದು. ನೋವಿನ ತೀವ್ರತೆಎಷ್ಟಿದೆ ಎಂದು ಆಯಾಯಾ ವ್ಯಕ್ತಿಯೇ ವೈಯಕ್ತಿಕವಾಗಿ ನಿರ್ಧರಿಸಬೇಕು. ಮುಖ್ಯವಾಗಿ ನೋವು ಎರಡು ರೀತಿಯದ್ದು ಎಂದು ವಿಭಾಗಿಸ ಬಹುದು.೧.ದೇಹಕ್ಕೆ ಒಮ್ಮೆಲೇ ಅನುಭವ ಆಗುವ ತೀವ್ರ ರೀತಿಯ ನೋವು.೨.ದೀರ್ಘ ಕಾಲದ ನೋವು.
ಮೊದಲ ರೀತಿಯ ಒಮ್ಮೆಲೇ ಅನುಭವವಾಗುವ ನೋವು ಹೆಚ್ಚಿನ ಸಂದರ್ಭದಲ್ಲಿ ತೀವ್ರ ರೀತಿಯದ್ದಾಗಿರುತ್ತದೆ. ಇದು ಯಾವುದೋ ಕಾಯಿಲೆಯ ಪೂರ್ವಸೂಚನೆ ಅಥವಾ ದೇಹಕ್ಕೆ ಅಪಾಯವಿದೆ ಎಂಬ ಮುನ್ಸೂಚನೆ ಕೊಡುವ ನೋವಾಗಿರುತ್ತದೆ. ಉದಾಹರಣೆಗೆ ಹಲ್ಲು ಕೀಳಿಸಿದಾಗ ಕಾಣಿಸಿಕೊಳ್ಳುವನೋವು, ಮೂಳೆ ಮುರಿದಾಗಿನ ನೋವು, ಶಸ್ತ್ರಕ್ರಿಯೆಯ ನೋವು, ಗರ್ಭಿಣಿ ಮಹಿಳೆ ಮಗುವನ್ನು ಹೆರುವಾಗ ಆಗುವ ನೋವು ಇತ್ಯಾದಿ. ಈ ರೀತಿಯ ನೋವಿನ ಅನುಭವ ಸಣ್ಣ ಪ್ರಮಾಣದಲ್ಲಿ ಕೆಲವೇ ಹೊತ್ತು ಇರಬಹುದು, ಅಥವಾ ಕೆಲವೊಮ್ಮೆ ದಿನಗಟ್ಟಲೇ ವಾರಗಳ ಕಾಲವೂ ಇರಬಹುದು. ಇದರ ಮೂಲ ಕಾರಣ ಹುಡುಕಿ ಚಿಕಿತ್ಸೆ ಮಾಡಿದರೆ ಸಾಮಾನ್ಯವಾಗಿ ಈ ರೀತಿಯ ನೋವು೬ತಿಂಗಳಿಗಿಂತ ಜಾಸ್ತಿ ಇರುವುದಿಲ್ಲ.
ಈ ಅವಧಿಯ ನಂತರವೂ ನೋವಿದ್ದರೆ ಅದು ದೀರ್ಘಕಾಲದ ನೋವಾಗಿ ಪರಿವರ್ತನೆಗೊಳ್ಳುತ್ತದೆ. ದೇಹಕ್ಕೆ ಉಂಟಾದ ಆಘಾತ, ಹೊಡೆತ ಎಲ್ಲಾನಿವಾರಣೆಯಾದರೂ ಸಹಿತ ದೀರ್ಘಕಾಲದ ನೋವು ನಿವಾರಣೆ ಯಾಗುವುದಿಲ್ಲ. ದೇಹದ ನರ ವ್ಯವಸ್ಥೆಯಲ್ಲಿ ನೋವಿನ ತರಂಗಗಳು ವಾರ, ತಿಂಗಳು, ವರ್ಷಗಟ್ಟಲೆ ಜೀವಂತ ವಾಗಿರುತ್ತವೆ. ಉದಾಹರಣೆ ಎಂದರೆ ಕ್ಯಾನ್ಸರ್, ಸಂಧಿವಾತ, ಮೈಗ್ರೇನ್ ತಲೆನೋವು, ಅಲ್ಸರ್ ಕಾಯಿಲೆ, ಬೆನ್ನುಹುರಿ ಸ್ಥಾನ ಪಲ್ಲಟವಾದಾಗ, ನರಗಳ ನೋವು ನ್ಯೂರೋಪತಿ, ಕರುಳಿನ ನೋವು ಇರಿಟಬಲ್ ಬವೆಲ್ ಸಿಂಡ್ರೋಮ್ ಇತ್ಯಾದಿ.
ಅಲ್ಲದೇ ದೇಹದ ಯಾವುದೇ ಭಾಗದಲ್ಲಿ ನರ, ಮೂಳೆ ಮತ್ತು ಅಂಗಾಂಗಗಳ ಮೇಲೆ ಯಾವುದೇ ಗಡ್ಡೆ ಸತತವಾಗಿ ಒತ್ತಡ ಹೇರುತ್ತಿದ್ದರೆ, ದೇಹದಲ್ಲಿ ರಕ್ತದ ಚಲನೆ ನಿಯಮಿತವಾಗಿಲ್ಲದಿದ್ದಾಗ, ದೀರ್ಘಕಾಲದ ಸೋಂಕು ಅಥವಾ ಉರಿಯೂತ, ದೇಹದಲ್ಲಿನ ಒತ್ತಡ, ಚಿತ್ತವೈಕಲ್ಯ ಮತ್ತು ದೀರ್ಘಕಾಲದಚಿಂತೆ ಇವುಗಳಿಗೆ ಪ್ರತಿಕ್ರಿಯೆಯಾಗಿ ಉಂಟಾಗುವ ಮಾನಸಿಕ ಬದಲಾವಣೆಗಳು.
ನೋವು ಹೇಗೆ ಉಂಟಾಗುತ್ತದೆ?ನಮ್ಮ ಚರ್ಮದ ಒಳಭಾಗದಲ್ಲಿರುವ ನರಜೀವಕೋಶಗಳು ಉಷ್ಣ, ತಂಪು, ಸ್ಪರ್ಶ, ಒತ್ತಡ ಮತ್ತು ನೋವನ್ನು ಗ್ರಹಿಸುತ್ತವೆ. ನಮ್ಮ ದೇಹದಲ್ಲಿ ಸಾವಿ ರಾರು ಈ ರೀತಿಯ ನರಜೀವಕೋಶಗಳಿವೆ. ದೇಹಕ್ಕೆ ಪೆಟ್ಟಾದಾಗ ಅಥವಾ ಅದರ ಅಂಗಾಂಗಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಈ ಸೂಕ್ಷ್ಮ ಜೀವಕೋಶಗಳು ನರಗಳ ಮೂಲಕ ಮೆದುಳು ಬಳ್ಳಿಗೆ, ನಂತರ ಮೆದುಳಿಗೆ ಸಂದೇಶ ಕಳಿಸುತ್ತವೆ. ಈ ಸಂದೇಶವು ನೋವಾಗಿ ಪರಿವರ್ತನೆಗೊಳ್ಳುತ್ತದೆ.
ದೀರ್ಘಕಾಲದ ನೋವಿನ ಪರಿಣಾಮಗಳು:ದೀರ್ಘಕಾಲೀನ ನೋವು ದೇಹದ ಮೇಲೆ ಹಲವು ಪರಿಣಾಮಗಳನ್ನು ಉಂಟುಮಾಡುತ್ತದೆ. ಯಾವುದೇಕಾಯಿಲೆಯಿಂದ ಶೀಘ್ರವಾಗಿ ಗುಣವಾಗುವ ದೇಹದ ಶಕ್ತಿಯನ್ನು ಕುಂಠಿತಗೊಳಿಸುತ್ತದೆ. ದೇಹದ ರಕ್ತದೊತ್ತಡ ಏರುಪೇರಾಗಿ ಹೃದಯಾಘಾತ ಉಂಟಾಗಬಹುದು ಅಥವಾ ಪಾರ್ಶ್ವವಾಯು ಕಾಣಿಸಿಕೊಳ್ಳಬಹುದು. ವ್ಯಕ್ತಿಗೆ ಬಹಳ ಸುಸ್ತಾದ ಅನುಭವ ಉಂಟಾಗುತ್ತದೆ. ಹಸಿವು ಕಡಿಮೆಯಾಗುತ್ತದೆ. ನಿದ್ರೆಗೆ ತೊಂದರೆಯಾಗಿ ನಿದ್ರೆಯ ಮೊದಲಿನ ನಿಯಮಿತ ಅವಧಿ ಏರುಪೇರಾಗುತ್ತದೆ.
ವ್ಯಕ್ತಿಯ ಮೂಡ್‌ನಲ್ಲಿ ಗಮನಾರ್ಹವಾದ ಬದಲಾವಣೆಯಾಗಿ ಕೋಪ, ಚಿಂತೆ, ಅಸಹನೆ ಚಿತ್ತವೈಕಲ್ಯ, ಅಸಹಾಯಕತೆ ಈ ರೀತಿಯ ಅನುಭವವಾಗಿ ಕೆಲವರಲ್ಲಿ ಆತ್ಮಹತ್ಯೆಯ ಆಲೋಚನೆಗಳೂ ಬರಬಹುದು. ದೇಹದ ಹಾರ್ಮೋನಿನ ಪ್ರಮಾಣ ಅಧಿಕೃತವಾಗಿ ಅದು ಹೃದಯ ಮತ್ತು ಶ್ವಾಸಕೋಶಗಳ ಮೇಲೆ ತೀವ್ರ ರೀತಿಯ ಪರಿಣಾಮ ಉಂಟು ಮಾಡುತ್ತದೆ. ಯಾವುದೇ ಕೆಲಸದ ಬಗ್ಗೆ ಮನಸ್ಸು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.
ದೈಹಿಕ ಚಟುವಟಿಕೆ ಕುಂಠಿತಗೊಳ್ಳುತ್ತದೆ. ದೈನಂದಿನ ಕೆಲಸ ಕಾರ್ಯಗಳು ತೀವ್ರವಾಗಿ ವ್ಯತ್ಯಯಗೊಳ್ಳುತ್ತವೆ. ಮನಸ್ಸು ಮುದುಡಿ ಚಿಂತೆ ಜಾಸ್ತಿಯಾಗಿ ಆ ವ್ಯಕ್ತಿ ಬೇರೆಯವರಿಂದ ದೂರವಿರಲು ಆರಂಭಿಸುತ್ತಾನೆ. ದೀರ್ಘಕಾಲೀನ ನೋವು ಮೆದುಳಿನಲ್ಲಿ ಹಲವು ಬದಲಾವಣೆಗಳನ್ನು ಉಂಟು ಮಾಡುತ್ತದೆ.೨೦೦೮ರಲ್ಲಿ ಅಮೆರಿಕದ ವಿಶ್ವವಿದ್ಯಾನಿಲಯವೊಂದರಲ್ಲಿ ಕೈಗೊಂಡ ಅಧ್ಯಯನದ ಪ್ರಕಾರ ದೀರ್ಘಕಾಲದ ನೋವು ಅನುಭವಿಸುತ್ತಿರುವವರಲ್ಲಿ ಮೆದುಳಿನ ಮುಂದಿನ ಭಾಗ ಸುದೀರ್ಘ ಕಾಲ ಸಕ್ರಿಯವಾಗಿರುತ್ತದೆ. ಈ ಭಾಗದ ಮೆದುಳು ವ್ಯಕ್ತಿಯ ಭಾವನಾತ್ಮಕ ಅಭಿವ್ಯಕ್ತಿಗೆ ಸಂಬಂಧಪಟ್ಟ ಸ್ಥಳ.
ನೋವಿಲ್ಲದಿರುವವರಲ್ಲಿ ಬೇರೆ ಬೇರೆ ಭಾವನೆಗಳು ಆಗಾಗ ಬದಲಾಗುತ್ತಿರುವುದರಿಂದ ಮೆದುಳಿನ ಬೇರೆ ಬೇರೆ ಭಾಗಗಳು ಸಕ್ರಿಯವಾಗಿರುತ್ತವೆ. ಇಂಥವ ರಲ್ಲಿ ಯಾವುದೇ ಒಂದು ಭಾಗದ ಮೆದುಳು ದೀರ್ಘಕಾಲ ಸಕ್ರಿಯವಾಗಿರುವುದಿಲ್ಲ. ನೋವಿರುವವರಲ್ಲಿ ಮೆದುಳಿನ ಮುಂಭಾಗವು ಜಾಸ್ತಿ ಸಕ್ರಿಯವಾಗಿರುವುದರಿಂದ ಅದರಲ್ಲಿನ ನರ ಜೀವಕೋಶಗಳು ಸಹಜಕ್ಕಿಂತ ಬೇಗ ಸಾಯುತ್ತಾ ಬರುತ್ತವೆ. ಸಹಜ ಆರೋಗ್ಯವಂತ ವ್ಯಕ್ತಿಯಲ್ಲಿ 15-20 ವರ್ಷಗಳಲ್ಲಿ ಸಾಯುವ ನರ ಜೀವಕೋಶಗಳು ನೋವು ಪೀಡಿತ ವ್ಯಕ್ತಿಗಳಲ್ಲಿ ಕೆಲವೇ ತಿಂಗಳು, ವರ್ಷಗಳಲ್ಲಿ ನಿಷ್ಕ್ರೀಯವಾಗುತ್ತವೆ. ಜತೆಗೆ ಮೆದುಳಿನಲ್ಲಿರುವ ನರ ಜೀವಕೋಶಗಳ ವೈರಿಂಗ್ ವ್ಯವಸ್ಥೆಯಲ್ಲಿ ಗಮನಾರ್ಹ ಬದಲಾವಣೆಗಳು ಆಗುತ್ತವೆ.
ಚಿಕಿತ್ಸೆ :ಮೊದಲ ರೀತಿಯ ತೀವ್ರ ರೀತಿಯ ನೋವಿಗೆ ಯಾವ ಕಾರಣದಿಂದ ನೋವು ಬಂದಿದೆಯೋ ಅದನ್ನು ನಿವಾರಿಸಲು ಪ್ರಯತ್ನಿಸಲಾಗುತ್ತದೆ. ಜತೆಯಲ್ಲಿ ನೋವು ನಿವಾರಕ ಔಷಧಗಳನ್ನು ಮಾತ್ರೆ ಅಥವಾ ಇಂಜೆಕ್ಷನ್ ರೂಪದಲ್ಲಿ ಅಗತ್ಯ ಬಿದ್ದರೆ ಉಪಯೋಗಿಸಲಾಗುತ್ತದೆ. ದೀರ್ಘಕಾಲದ ನೋವು ನಿವಾರಿಸಲು ಹಲವು ರೀತಿಯ ನೋವು ನಿವಾರಕ ಔಷಧಗಳನ್ನು ಉಪಯೋಗಿಸಲಾಗುತ್ತದೆ. ಅಸಿಟಮೈನೋಫಿನ್, ಆಸ್ಪಿರಿನ್, ನೆಪ್ರೋಕ್ಸಿನ್,ಐಬುಪ್ರೊಫೇನ್ಹೀಗೆ ವಿವಿಧ ರೀತಿಯ ಔಷಧಗಳನ್ನು ಉಪಯೋಗಿಸಲಾಗುತ್ತದೆ.
ತೀವ್ರ ನೋವಿಗೆ ಕೆಲವೊಮ್ಮೆ ಅನಸ್ತೇಷಿಯಾ ಉಪಯೋಗಿಸಿ ನೋವು ನಿವಾರಿಸಲು ಯತ್ನಿಸಲಾಗುತ್ತದೆ. ದೀರ್ಘಕಾಲದ ನೋವು ನಿವಾರಿಸಲು ಸ್ಪಷ್ಟ ವಾದ ಚಿಕಿತ್ಸೆ ಇಲ್ಲದಿರುವುದರಿಂದ ಹಲವು ರೀತಿಯ ಸಂಶೋಧನೆಗಳು ಜಗತ್ತಿನಾದ್ಯಂತ ಹಲವಾರು ವರ್ಷಗಳಿಂದ ನಡೆಯುತ್ತಿವೆ. ಇತ್ತೀಚಿಗೆ ಕೆನಡಾದ ಮೈರೆಲ್ ಸಾಲ್ಟರ್ ಮತ್ತು ಸಹೋದ್ಯೋಗಿಗಳು ಹೊಸ ಅಂಶವೊಂದನ್ನು ಹೊರಗೆಡವಿದ್ದಾರೆ.
ಮೆದುಳು ಮತ್ತು ಮೆದುಳು ಬಳ್ಳಿಗಳಲ್ಲಿರುವ ಮೈಕ್ರೋಗ್ಲಯ ಎಂಬ ಜೀವಕೋಶಗಳು ವಿಶೇಷ ಕಾರ್ಯವನ್ನು ಮಾಡುತ್ತವೆ. ಅವು ನರ ಜೀವಕೋಶಗಳಿಗೆ ಕಳಿಸುವ ಸಂಕೇತಗಳು ಬಹಳ ಮುಖ್ಯವಾದುದು. ಆ ಸಂಕೇತಗಳೇ ನಮಗೆ ಹೊಡೆತ ಬಿದ್ದಾಗ ನೋವಿನ ತೀವ್ರತೆ ಅನುಭವವಾಗಲು ಕಾರಣ. ಜತೆಯಲ್ಲಿ ಮಾರ್ಫಿನ್ ಪೆಥಿಡಿನ್ ರೀತಿಯ ಔಷಧಗಳನ್ನು ಕೊಟ್ಟಾಗ ನೋವು ನಿವಾರಕ ಪರಿಣಾಮ ಉಂಟಾಗಲೂ ಈ ಮೈಕ್ರೋಗ್ಲಯ ಜೀವಕೋಶಗಳು ಮುಖ್ಯ ಪಾತ್ರವಹಿಸುತ್ತವೆ. ಈ ಮಾಹಿತಿಗಳಿಂದ ದೀರ್ಘಕಾಲದ ನೋವಿನ ನಿವಾರಣೆಗೆ ಹೊಸ ರೀತಿಯ ಔಷಧಗಳ ಶೋಧ ಸಾಧ್ಯ ಎಂಬುದು ಈ ವಿಜ್ಞಾನಿಗಳಅಭಿಪ್ರಾಯ.
ಅಮೆರಿಕದ ಡಸ್‌ನ ಟೆಕ್ಸಾಸ್ ವಿಶ್ವವಿದ್ಯಾನಿಲಯದಲ್ಲಿ ಕೈಗೊಂಡ ಸಂಶೋಧನೆಯಲ್ಲಿ ಮೆದುಳಿನಲ್ಲಿರುವ ಡೋಪಾಮೀನ್ ರಾಸಾಯನಿಕವು ದೀರ್ಘ ಕಾಲದ ನೋವು ದೀರ್ಘಕಾಲದವರೆಗೆ ನಮಗೆ ಸಂವೇದನೆಯಾಗಲಿಕ್ಕೆ ಮುಖ್ಯ ಪಾತ್ರ ವಹಿಸುತ್ತದೆ ಎಂಬ ಹೊಸ ವಿಷಯವನ್ನು ಇತ್ತೀಚಿಗೆ ವಿಜ್ಞಾನಿಗಳು ಹೊರಗೆಡವಿದ್ದಾರೆ. ಈ ಡೋಪಮೀನ್ ರಾಸಾಯನಿಕವು ನಮ್ಮ ಯೋಚನೆ, ನೆನಪಿಟ್ಟುಕೊಳ್ಳುವ ಕ್ರಿಯೆ, ನಮ್ಮ ಚಲನೆಗಳಲ್ಲಿ ಮುಖ್ಯ ಪಾತ್ರ ವಹಿಸುವ ವಿಚಾರ ಈಗಾಗಲೇ ಗೊತ್ತಿರುವ ವಿಷಯ. ಮೇಲಿನ ಸಂಶೋಧಕರು ಡೋಪಮೀನ್ ಇರುವ ನಿರ್ದಿಷ್ಟ ಜೀವಕೋಶಗಳನ್ನುಇಲಿಗಳ ಮೆದುಳಿನಿಂದ ತೆಗೆದಾಗ ದೀರ್ಘಕಾಲದ ನೋವು ಕಡಿಮೆ ಯಾಗುವುದನ್ನು ಕಂಡುಕೊಂಡಿದ್ದಾರೆ.
ಡೋಪಮೀನ್ ಇರುವ ನಿರ್ದಿಷ್ಟ ಜೀವಕೋಶಗಳನ್ನು ಎಲ್ಲಾ 11 ಡೋಪಮೀನ್ ಜೀವಕೋಶ ಗಳೆಂದು ಗುರುತಿಸಲಾಗಿದೆ. ಈ ಜೀವಕೋಶಗಳು ದೇಹಕ್ಕೆ ಒಮ್ಮೆಲೇ ಅನುಭವವಾಗುವ ತೀವ್ರ ರೀತಿಯ ನೋವಿನಲ್ಲಿ ಇರುವುದಿಲ್ಲ ಎಂಬುದು ತುಂಬಾ ಗಮನಾರ್ಹವಾದ ಅಂಶ. ದೀರ್ಘಕಾಲೀನ ನೋವು ಇನ್ನೂ ವೈದ್ಯ ವಿಜ್ಞಾನಿಗಳಿಗೆ ಒಂದು ರೀತಿಯ ಕಬ್ಬಿಣದ ಕಡಲೆಯೇ ಸರಿ. ಒಂದು ಅಂದಾಜಿನ ಪ್ರಕಾರ ಜಗತ್ತಿನ ಜನಸಂಖ್ಯೆಯ ವಯಸ್ಕರಲ್ಲಿ ಶೇ.20ರಷ್ಟು ಜನರು ಈ ರೀತಿಯ ನೋವಿನ ಕಪಿಮುಷ್ಟಿಗೆ ಒಳಗಾಗಿzರೆ. ಅದರಲ್ಲಿ ಶೇ.8ಜನರು ಈ ನೋವು ತಮ್ಮ ದೈನಂದಿನ ಕೆಲಸ ಮತ್ತು ಜೀವನಕ್ಕೆ ತುಂಬಾ ತೊಂದರೆ ಕೊಡುತ್ತದೆ ಎಂಬ ಅಭಿಪ್ರಾಯ ಹೊಂದಿದ್ದಾರೆ.
ವಿಜ್ಞಾನಿಗಳ ಇತ್ತೀಚಿನ ಸಂಶೋಧನೆಗಳ ಪ್ರಕಾರ ಈ ದೀರ್ಘಕಾಲೀನ ನೋವು ಮಾನಸಿಕ ಮತ್ತು ಭಾವನಾತ್ಮಕ ವರ್ತನೆಗಳಿಗೆ ಹೆಚ್ಚಾಗಿ ಸಂಬಂಧಿಸಿ ದುದು ಎಂಬ ಅಭಿಪ್ರಾಯ ಹೊರಹೊಮ್ಮಿದೆ. ಆರಂಭದಲ್ಲಿ ಈ ದೀರ್ಘಕಾಲೀನ ನೋವು ಯಾವುದೋ ಅಪಘಾತ ಅಥವಾ ಕಾಯಿಲೆಯ ಸಂಬಂಧ ದಿಂದ ಬಂದಿದೆ ಎಂಬ ಅಭಿಪ್ರಾಯ ಹೊಂದಿದ್ದರು. ಆದರೆ ಈಗಿನ ಭಾವನೆಯ ಪ್ರಕಾರ ಕೇವಲ ಕೆಲವೇ ಕೆಲವು ಮಂದಿ ಈ ಕಾರಣದಿಂದ ಈ ರೀತಿಯ ನೋವನ್ನು ಹೊಂದಿದ್ದಾರೆ. ಉಳಿದ ಹೆಚ್ಚಿನ ಜನರ ನೋವಿಗೆ ಬೇರೆಯೇ ಕಾರಣ ಇರಬೇಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ ವಿಜ್ಞಾನಿಗಳು.
ಅಪ್ ಕಾರಿಯನ್ ಮತ್ತು ಆತನ ಸಹೋದ್ಯೋಗಿಗಳು ಹಲವು ರೀತಿಯ ಮೆದುಳಿನ ಸ್ಕ್ಯಾನ್ ಮಾಡಿ, ವಿವಿಧ ಪ್ರಶ್ನೋತ್ತರಗಳನ್ನು ಸಿದ್ದಪಡಿಸಿ ವ್ಯಕ್ತಿಯ ವ್ಯಕ್ತಿತ್ವ ಮತ್ತು ಮೆದುಳಿನ ಭೌತಿಕ ಆಕಾರಗಳು – ಆತ ಭವಿಷ್ಯದಲ್ಲಿ ಈ ರೀತಿಯ ದೀರ್ಘಕಾಲೀನ ನೋವಿಗೆ ಒಳಗಾಗುತ್ತಾನೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿಸುತ್ತದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಮೆದುಳಿನ ಒಳಗೆ ಇಣುಕಿದರೆ ಈ ವ್ಯಕ್ತಿ ದೀರ್ಘಕಾಲೀನ ನೋವಿಗೆ ಒಳಗಾಗುತ್ತಾನೆಯೇ ಎಂಬುದನ್ನು ತಿಳಿಸಬಹುದು ಎಂದು ಅಪ್ ಕಾರಿನ್ ನುಡಿಯುತ್ತಾರೆ.
ಸ್ವಲ್ಪ ಮೊದಲು 2016ರಲ್ಲಿ ಅಪ್ ಕಾರಿನ್ ತಂಡ ಬೆನ್ನಿಗೆ ಹೊಡೆತ ಬಿದ್ದು ನೋವು ಅನುಭವಿಸಿದ 39 ಜನರನ್ನು ಅಧ್ಯಯನಕ್ಕೆ ಒಳಪಡಿಸಿದರು. 3 ವರ್ಷಗಳ ಕಾಲ ಅವರ ಮೆದುಳನ್ನು ಹಲವಾರು ಬಾರಿ ಸ್ಕ್ಯಾನ್ ಮಾಡಿ ಅಧ್ಯಯನ ಮಾಡಲಾಯಿತು. ಈ ದೀರ್ಘಕಾಲೀನ ನೋವು ಇರುವವರಲ್ಲಿ ಮೆದುಳಿನ ಕಾರ್ಟಿಕೋಲಿಂಬಿಕ್  ನೆಟ್‌ವರ್ಕ್‌ನ ರಚನೆ ಭಿನ್ನವಾಗಿ ಕಂಡು ಬಂದಿತು. ಈ ಕಾರ್ಟಿಕೋಲಿಂಬಿಕ್ ನೆಟ್ ವರ್ಕ್‌ನ ಭಾಗ ನೆನಪು ಹಾಗೂಭಾವನಾತ್ಮಕ ವರ್ತನೆಗಳಿಗೆ ಸಂಬಂಧಿಸಿದೆ. ಮೆದುಳಿನ ಹಿಪ್ರೋಕ್ಯಾಂಪಸ್ ಮತ್ತು ಅಮಿಗ್ ಡಲಾ ಭಾಗಗಳು ನಿರ್ದಿಷ್ಟ ವ್ಯಕ್ತಿಯಲ್ಲಿ ಸಣ್ಣದಾಗಿದ್ದರೆ ಆತ ದೀರ್ಘಕಾಲೀನ ನೋವಿಗೆ ಒಳಗಾಗುವ ಸಾಧ್ಯತೆ ಜಾಸ್ತಿ ಎನ್ನಲಾಗಿದೆ.
ಮೆದುಳಿನ ಈ ಮೇಲಿನ ಎರಡು ಭಾಗಗಳು ಒತ್ತಡ, ಚಿಂತೆ ಮತ್ತು ಭಾವನಾತ್ಮಕ ಕಲಿಯುವಿಕೆಗೆ ಸಂಬಂಧಿಸಿದುದಾಗಿದೆ. ಹಾಗಾಗಿ ವ್ಯಕ್ತಿಯ ಹುದುಗಿರುವ ಜೆನೆಟಿಕ್‌ಗೆ ಸಂಬಂಧಿಸಿದ ಯಾವುದೋ ಗುಣ ಈ ರೀತಿಯ ನೋವಿಗೆ ಕಾರಣ ಎಂದು ಡಾ ಡೇನಿಯಲ್ ಬರಾನ್ ಎಂಬ ಮನೋರೋಗ ತಜ್ಞರು ಮತ್ತು ನರವಿಜ್ಞಾನಿ ಅಭಿಪ್ರಾಯ ಪಡುತ್ತಾರೆ.
ಇತ್ತೀಚಿನ ಅಧ್ಯಯನದಲ್ಲಿ ಅಪ್ ಕಾರಿನ್ ತಂಡವು ಬೆನ್ನಿನ ಭಾಗದ ನೋವಿರುವ 108 ಜನರ ನೋವಿನ ಬಗ್ಗೆ ಮೆದುಳಿನ ಸ್ಕ್ಯಾನ್ ಮತ್ತು ಪ್ರಶ್ನೋತ್ತರ ಗಳನ್ನು ಉಪಯೋಗಿಸಿ ಅಧ್ಯಯನ ನಡೆಸಿದರು. ಇದರಲ್ಲಿ ಅವರು ಮೆದುಳಿನ ಆಕಾರ, ವ್ಯಕ್ತಿಯ ವ್ಯಕ್ತಿತ್ವ, ಆತನ ಮನೋಸ್ಥಿತಿ, ಹಾಗೆಯೇ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿ – ಇವೆಲ್ಲವನ್ನೂ ಗಣನೆಗೆ ತೆಗೆದುಕೊಂಡು ಅಧ್ಯಯನ ನಡೆಸಿದರು. ಅದು ಇತ್ತೀಚಿನ ಜೀವ ವಿಜ್ಞಾನದ ಜರ್ನಲ್  ಯಲ್ಲಿ ಪ್ರಕಟವಾಗಿದೆ. ಇದರಲ್ಲಿ ಮೇಲಿನ ಎಲ್ಲಾ ಅಂಶಗಳು ವಿವಿಧ ರೀತಿಯಲ್ಲಿ ಪ್ರಭಾವ ಬೀರಿ ಆ ವ್ಯಕ್ತಿಗೆ ದೀರ್ಘಕಾಲೀನ ನೋವು ಬರುತ್ತದೆಯೇ ಎಂಬುದನ್ನು ತಿಳಿಸುತ್ತದೆ ಮಾತ್ರವಲ್ಲದೆ ಅಂಥ ವ್ಯಕ್ತಿ ಈ ನೋವಿಗೆ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನೂ ತಿಳಿಸುತ್ತದೆ.
ಇನ್ನೊಂದು ಅಧ್ಯಯನದಲ್ಲಿ ಹೆದರಿಕೆ, ಮಾನಸಿಕ ಒತ್ತಡ, ಚಿಂತೆ, ಮಾನಸಿಕ ಖಿನ್ನತೆ – ಇವೆಲ್ಲವೂ ದೀರ್ಘಕಾಲೀನ ನೋವಿಗೆ ಕಾರಣವಾಗುತ್ತವೆ. ಹಾಗೆಯೇ ಆರ್ಥಿಕವಾಗಿ ಬಡತನವಿರುವ ವ್ಯಕ್ತಿಗಳು ಈ ನೋವನ್ನು ಹೆಚ್ಚು ಅನುಭವಿಸುತ್ತಾರೆ ಎನ್ನುತ್ತದೆ ಈ ಅಧ್ಯಯನ. ಅಪ್ ಕಾರ್ ತಂಡವು ಈ ಅಧ್ಯಯನದ ಅಂಶಗಳನ್ನು ದೃಢೀಕರಿಸಿದ್ದಾರೆ. ನೋವು ಜಾಸ್ತಿ ಇದ್ದಷ್ಟೂ ವ್ಯಕ್ತಿ ಹೆಚ್ಚಿನ ಚಿಂತೆಗೆ ಒಳಗಾಗುತ್ತಾನೆ, ಅದು ಪುನಃ ಹೆಚ್ಚಿನ ನೋವಿಗೆಕಾರಣವಾಗುತ್ತದೆ. ಪರಿಣಾಮವಾಗಿ ಆ ವ್ಯಕ್ತಿ ಮಾನಸಿಕ ಖಿನ್ನತೆ ಹೊಂದುತ್ತಾನೆ. ಈ ತಂಡ ಕಂಡುಕೊಂಡ ಇನ್ನೊಂದು ಅಂಶ ಎಂದರೆ ಈ ನೋವಿಗೆ ಬೇರೆ ಬೇರೆ ವ್ಯಕ್ತಿಗಳು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂದು. ತೀವ್ರ ರೀತಿಯ ನೋವಿರುವ ವ್ಯಕ್ತಿಗಳು ಮಾನಸಿಕ ಖಿನ್ನತೆಗೆ ಒಳಗಾಗುತ್ತಾರೆ.
ಹಾಗೆಯೇ ಅಂಥವರು ತಮ್ಮನ್ನು ಯಾವ ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳುವುದಿಲ್ಲ. ಇನ್ನೊಂದು ಆಶ್ಚರ್ಯಕರ ಸಂಗತಿ ಎಂದರೆ ಇಂಥ ವ್ಯಕ್ತಿಗಳುಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ತಮ್ಮನ್ನು ತೆರೆದಿಟ್ಟುಕೊಂಡು ಹೆಚ್ಚು ಜನರಲ್ಲಿ ಬೆರೆಯುತ್ತಾರೆ. ಹಾಗಾಗಿ ಅಂಥವರು ಭಾವನಾತ್ಮಕವಾಗಿ ಧನಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ. ಅವರ ನೋವಿನ ಪ್ರಮಾಣ ಎಣಿಸಿದರೆ ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕು. ಅವರು ಹಾಗೆ ಮಾಡದೇ ಈ ನೋವನ್ನು ಅನುಭವಿಸುತ್ತಲೇ ಹೋರಾಟ ನಡೆಸುತ್ತಾ ಬದುಕುತ್ತಾರೆ. ಈ ದೀರ್ಘಕಾಲೀನ ನೋವಿನ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆದು ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಮಾಹಿತಿಗಳು ಲಭ್ಯವಾಗುವ ಸಂಭವವಿದೆ.