ಸಂವೇದನೆಯನ್ನು ಕಳೆದುಕೊಂಡಷ್ಟು ಪ್ರಭುತ್ವ ಅಸ್ತಿತ್ವ ಕಳೆದುಹೋಗುತ್ತದೆ !
ದಾಸ್ ಕ್ಯಾಪಿಟಲ್‌
ಟಿ.ದೇವಿದಾಸ್
ಯಾವುದೋ ಒಂದು ಘಟನೆಯನ್ನು, ವಿದ್ಯಮಾನವನ್ನು ಅತಿಯೆಂಬಂತೆ ಬಿಂಬಿಸುತ್ತ 24*7ಮಾಧ್ಯಮಗಳಲ್ಲಿ ಬಿತ್ತರಿಸುವ ಹಾಗೂ ಬಹುಪಾಲು ಜನರು ಅದಕ್ಕೆ ಸ್ಪಂದಿಸುವ ವಿದ್ಯಮಾನಗಳು ಎಲ್ಲ ಮೂಲಗಳಿಂದಲೂ ನಡೆಯುತ್ತವೆ.
ದುರದೃಷ್ಟವಶಾತ್ ಆ ಘಟನೆ, ವಿದ್ಯಮಾನಕ್ಕೆ ಕಾರಣ ಎಡಪಂಥವೋ ಬಲಪಂಥವೋ ಆ ಪಕ್ಷವೋ ಈ ಪಕ್ಷವೋ ಅಥವಾ ಆ ಘಟನೆಗೆ ಯಾವ ಜಾತಿ, ಮತ, ಪಂಥದ ಯಾರ‍್ಯಾರ ಕುಮ್ಮಕ್ಕು, ಕೈವಾಡ ಇದ್ದಿರಬಹುದು ಎಂಬ ತಲೆಬುಡವಿಲ್ಲದ ವಿಚಾರಗಳು ಬಾಯಿಂದ ಬಾಯಿಗೆ ಹರಡುತ್ತ ಇನ್ನಷ್ಟು ಕ್ಷೋಭೆಗೆ ದೂಡುತ್ತವೆ. ಇಲ್ಲವಾದಲ್ಲಿ ಯಾವ ರಾಜಕೀಯ ಪಕ್ಷದ ಯಾವ ಸಂದರ್ಭದ ರಾಜಕೀಯ ಸೇಡಿನ ಹಿನ್ನೆಲೆಯಲ್ಲಿ ಆ ಘಟನೆ, ವಿದ್ಯಮಾನ ನಡೆದಿದೆ ಅಥವಾ ನಡೆದಿರಬಹುದು ಎಂಬಂಥ ಮತಿಹೀನ ವಿಚಾರ ಗಳು ಮುಖ್ಯವಾಗಿ, ಅಲ್ಲಿಂದ ಹುಟ್ಟುವ ಆರೋಪ – ಪ್ರತ್ಯಾರೋಪಗಳು, ಚರ್ಚೆ – ವಿಚರ್ಚೆ, ವಾದ – ವಿವಾದ – ವಿತಂಡವಾದಗಳು ನಾಗರಿಕ ಪ್ರಪಂಚದ ಸಂಸ್ಕೃತಿ, ಮಾತಿನ ಸಭ್ಯತೆ ಸೌಜನ್ಯವನ್ನೆಲ್ಲ ಮೀರಿ ಹಗಲಿನ ಸಂಪೂರ್ಣ ಬೆತ್ತಲಾಗುವುದು ವರ್ತಮಾನ ದಲ್ಲಿ ಎಲ್ಲರಿಗೂ ತಿಳಿದಿರುವ ಸತ್ಯ.
ಎಡೆಯೂ ಕೊಳಕು ರಾಜಕೀಯದಾಟ ಸಾವಿನಿಂದಲೋ ಅಥವಾ ಎಂಥ ಬಗೆಯದ್ದೂ ಆದ ವಿಧ್ವಂಸಕ ವಿದ್ರೋಹಿ ಅಹಿತಕರ ಘಟನೆಗಳಿಂದ ಆರಂಭಗೊಳ್ಳುತ್ತದೆ. ಮೊದಲೆ ರಾಜಕಾರಣದಲ್ಲಿ ಬೌದ್ಧಿಕ ಮತ್ತು ವೈಚಾರಿಕ ಸಂಘರ್ಷಗಳು ಮಾತು, ಮೌನ, ವಿಚಾರದ ನೆಲೆಯಲ್ಲಿ ವಸ್ತುನಿಷ್ಠವಾಗಿ ನಡೆಯತ್ತಿತ್ತು. ಅಲ್ಲಿಗೇ ಮುಗಿಯುತ್ತಿತ್ತು. ಈಗಲೂ ಸಭ್ಯತೆ, ಸಂಸ್ಕಾರವಿರುವಲ್ಲಿ ಹಾಗೆಯೇ ನಡೆಯುವುದು. ಆದರೆ, ಇವುಗಳನ್ನೆಲ್ಲ ಬಲಹೀನಗೊಳಿಸಿ ಆಕ್ರಮಣ ಪ್ರವೃತ್ತಿ ಈಗೀಗ ಬೆಳೆದು ಎಂಥಾ ದೊಡ್ಡ ಸಹನೆಯಲ್ಲೂ ಒಂದು ಬಗೆಯ ಪ್ರಕ್ಷುಬ್ಧತೆ, ವಿಕ್ಷಿಪ್ತತೆ, ತಲ್ಲಣ, ಉಗ್ರತೆ, ಕ್ರೌರ್ಯ ಒಳಗೇ ಇದ್ದೇ ಇರುತ್ತದೆಯೆಂಬುದನ್ನು ಹೆಜ್ಜೆಹೆಜ್ಜೆಗೂ ಕಾಣುತ್ತಿದ್ದೇವೆ. ಆದರೂ ಅವುಗಳನ್ನು ಶಮನದಲ್ಲಿಟ್ಟುಕೊಳ್ಳಬೇಕು.
‘ಕಾಯುವುದು’, ‘ಮುಂದೂಡುವುದು’, ‘ತಿರಸ್ಕರಿಸುವುದು’, ‘ನಿರ್ಲಕ್ಷಿಸುವುದು’, ‘ಮರೆತು ಬಿಡುವುದು’, ಉದಾಸೀನ ಮಾಡುವುದು – ಇವೆಲ್ಲ ಮನೋವೈಚಾರಿಕ ಪ್ರತಿಕ್ರಿಯೆಯಾಗಿ ಇದ್ದ ಕಾಲದಲ್ಲಿ ಯಾವ ಅನಾಹುತಗಳೂ ಈಗ ಆಗುತ್ತಿರುವಷ್ಟು ನಡೆಯು ತ್ತಿರಲಿಲ್ಲ. ಕಾರಣ ಅಂದು ಮಾತು, ಮೌನದ ವೈಚಾರಿಕ ಅಭಿವ್ಯಕ್ತಿ ಇರುತ್ತಿತ್ತು. ಅಂಥ ಸಾತ್ವಿಕ ಶಕ್ತಿಯನ್ನು ಕಳೆದುಕೊಂಡಾಗಲೇ ಆಕ್ರಮಣಕಾರಿ ಪ್ರವೃತ್ತಿ ಉದ್ಭವಿಸುತ್ತದೆ. ಹಾಗಂತ ಸಹನೆ, ಸೌಜನ್ಯ, ವಿಧೇಯತೆ, ವಿನಮ್ರತೆ, ವಿನಯವಂತಿಕೆ ದೌರ್ಬಲ್ಯವಲ್ಲ. ರಾವಣ ವಧೆಗಾಗಿ, ದುರ್ಯೋಧನ ಸಂಹಾರಕ್ಕಾಗಿ, ತನ್ಮೂಲಕ ಧರ್ಮ ಸಂಸ್ಥಾಪನೆಗಾಗಿ ರಾಮಕೃಷ್ಣರು ಕಾದದ್ದು ಈ ಬಗೆಯ ಸಹನೆಯ ಸಾಮರ್ಥ್ಯವನ್ನು ಔನ್ನತ್ಯೀಕರಿಸುತ್ತದೆ.
ಎಲ್ಲವನ್ನೂ ಮೀರಿ ಪರಿಸ್ಥಿತಿ ನಿಯಂತ್ರಣಕ್ಕೆ ಬಾರದೆ ಹೋದಾಗ ಕಾನೂನಿನ ಹೋರಾಟಕ್ಕೆ ಇಳಿಯಬೇಕು. ಇದೂ ಪ್ರಜಾ ಸತ್ತಾತ್ಮಕವಾದ ಕ್ರಮವೇ ಆಗಿರುವುದರಿಂದ ಸತ್ಯ ಗೆಲ್ಲಲೇಬೇಕು. ಗೆದ್ದೇ ಗೆಲ್ಲುತ್ತದೆ ಕೂಡ. ಇದು ಉಪಕ್ರಮವಾಗಲು ಪರಿಸ್ಥಿತಿಪ್ರತಿಕೂಲವಾಗಿದ್ದ ಸಂದರ್ಭದಲ್ಲಿ ಆಕ್ರಮಣವೇ ಪ್ರಧಾನವಾಗಿ ಮೆರೆಯುತ್ತದೆ. ಇದು ಇಂದು ಶಿಕ್ಷಿತ, ಅಶಿಕ್ಷಿತರನ್ನೂ ಹೊರತು ಪಡಿಸಿಲ್ಲ. ಅಸಂಸ್ಕೃತ, ಸುಸಂಸ್ಕೃತರೆಂಬುದನ್ನೂ ಮೀರುತ್ತಿದೆ.
ಹಿಂದೊಮ್ಮೆ, ಸಾಹಿತ್ಯ ಸಂಭ್ರಮದಂಥ ದೊಡ್ಡ ಬೌದ್ಧಿಕ ಸಭೆಯಲ್ಲಿ ವಿದ್ಯಾವಂತರೇ ಅನಾಗರಿಕವಾಗಿ ನಡೆದ ಘಟನೆಯೊಂದು ಇಂಥದ್ದಕ್ಕೆ ಜ್ವಲಂತ ಸಾಕ್ಷಿಯಾಗಿತ್ತು. ಮಾತಿನ ಶಕ್ತಿಯನ್ನು ದಮನಗೊಳಿಸಿ ಕೊಂಡಿದ್ದರ ಫಲವಾಗಿಯೇ ಕಾಲಿಗೆ ಧರಿಸಿದ್ದು ಕೈಗೆ ಬಂತು. ಮಾತು ಸೋತಿತು. ಕಲಬುರ್ಗಿ, ಪನ್ಸಾರೆ, ದಾಬೋಲ್ಕರ್, ಗೌರಿಹತ್ಯೆ… ಈ ಎಲ್ಲ ಸಂದರ್ಭಗಳೂ ಮಾತು ತನ್ನ ಅಗಾಧ ಶಕ್ತಿಯನ್ನು ಕಳೆದುಕೊಂಡಿದ್ದರ ಫಲವಾಗಿಯೇ ಆದವುಗಳು. ವಿಚಾರವಂತರ ಈ ಬಗೆಯ ಕಾಯಿಲೆಗಳಿದ್ದರೆ ನಿತ್ಯವೂ ವಿಷಯ ಪ್ರಪಂಚದ ಮುಳುಗಿ ಬದುಕುವ ಸಾಮಾನ್ಯರ ನೆಲೆಯ ಚಿಂತನೆಗಳು ದುರಾಕ್ರಮಣಕ್ಕೆ ಮುಂದಾಗುವುದು ಅಥವಾ ಒದಗುವುದು ಸಹಜವೆಂಬುದನ್ನು ನಿತ್ಯವೂ ಮಾಧ್ಯಮಗಳಲ್ಲಿ ಕಾಣಬಹುದು.
ಎಲ್ಲದರಲ್ಲೂ ವೈಚಾರಿಕತೆಯನ್ನು ಕಳೆದುಕೊಂಡಾಗಲೇ ಮನುಷ್ಯ ಮೃಗೀಯ ಸ್ವಭಾವವನ್ನು ಹೊಂದುತ್ತಾನೆ. ಜೀವನಮೌಲ್ಯಗಳನ್ನು ಹೊರತುಪಡಿಸಿದ ಸಣ್ಣಸಣ್ಣ ವಿಷಯಗಳನ್ನೂ ಗಂಭೀರವಾಗಿ ಪರಿಗಣಿಸುವುದನ್ನೇ ಬದುಕು ಎಂದುಕೊಂಡಸಾಮಾನ್ಯ ಜನರನ್ನು ಸಾಮಾನ್ಯರೆಂದೇ ಈ ಸಮಾಜ ನೋಡುತ್ತದೆ. ಅದಕ್ಕಾಗಿ ಇಂತಹ ಘಟನೆಗಳನ್ನು ಸಮಾಜ ನಿರ್ಲಕ್ಷ ಮಾಡುತ್ತದೆ. ಆದರೆ, ಯಾವುದನ್ನು ಈ ಸಮಾಜ ಸಾಮಾನ್ಯವಾದ ಗ್ರಹಿಕೆಯಲ್ಲಿ ಸ್ವೀಕರಿಸಲಾರದೋ ಅಂಥವುಗಳು ಪ್ರಚಾರಕ್ಕೆ ಬಂದು ಮುಖ್ಯವಾಹಿನಿಯಲ್ಲಿ ಮುಂಚೂಣಿಯಲ್ಲಿ ನಿಂತು ಸಮುದಾಯದ ಸ್ವಾಸ್ಥ್ಯವನ್ನು ಕೆಡಿಸುತ್ತದೆ.
ಸಾಮಾಜಿಕ ಸ್ವಾಸ್ಥ್ಯವನ್ನು ಹಾಳುಮಾಡುವ ಇಂಥ ಮಾನಸಿಕತೆಯನ್ನು ವಿರೋಧಿಸುವವರೂ ಆರಾಧಿಸುವವರೂ ಇದೇ ಸಮಾಜದ ಇದ್ದಾರೆ. ಎರಡೂ ಅಭಿವ್ಯಕ್ತಿಯಲ್ಲಿ ನೈತಿಕತೆಯೇ ಕೆಲಸ ಮಾಡಿರುತ್ತದೆ. ಆದರೆ, ಆ ನೈತಿಕತೆ ವ್ಯಕ್ತಿ, ಸಮುದಾಯದಚಿಂತನೆಗಳನ್ನು ಅವಲಂಬಿಸಿರುತ್ತದೆ. ಇಂಥ ಚಿಂತನೆಗಳು ಪಡೆದ ಸಂಸ್ಕಾರವನ್ನು ಅವಲಂಬಿಸಿರುತ್ತದೆ ಎಂಬುದಾದರೂಕ್ರೌರ್ಯವನ್ನು ಯಾವ ಮನೆಯೂ ಬೋಧಿಸಲಾರದು. ಆದ್ದರಿಂದ ಈ ಬಗೆಯ ಕ್ರೌರ್ಯವನ್ನು ಉದ್ದೀಪಿಸಬಲ್ಲ ಅಂಶಗಳನ್ನು ಹೇಗೆ ಗುರುತಿಸಬಹುದು ಎಂಬುದೂ ಕಷ್ಟಸಾಧ್ಯ!
ಮನಸ್ಸಿನ ವ್ಯಾಪಾರವೇ ಇಲ್ಲಿ ಪ್ರಧಾನವಾಗುತ್ತದೆ. ಅಂತಹ ಮನಸ್ಸನ್ನು ಹೇಗೆ ನಿಯಂತ್ರಣಕ್ಕೆ ತರೋದು? ಯಾರುತರುವವರು? ತರುವ ಪ್ರಯತ್ನ ಸ-ಲವಾಗದೇ ಇzಗ ಪ್ರಭುತ್ವ ಹೇಗೆ ವರ್ತಿಸಬೇಕು ಎಂಬುದು ಸಾರ್ವಜನಿಕ ವಲಯದಲ್ಲಿಗೊಂದಲವನ್ನು ಸೃಷ್ಟಿಸುತ್ತದೆ. ಪ್ರಭುತ್ವ ಯಾವುದನ್ನೂ ಲೆಕ್ಕಿಸದೆ ಕೇವಲ ಅಧಿಕಾರವನ್ನೇ ಮುಖ್ಯ ಲಕ್ಷಣವಾಗಿರಿಸಿಕೊಂಡಾಗಜನಸಾಮಾನ್ಯರಿಗೆ ಇಂಥದ್ದನ್ನೆಲ್ಲ ಅರಗಿಸಿಕೊಳ್ಳಬಹುದಾದ ಸಾಮರ್ಥ್ಯ ಸಹಜವಾಗಿ ಬಂದು ಬಿಡುತ್ತದೆ. ಆಗ ನಡೆಯುವಯಾವ ಘಟನೆಗಳೂ ಗಹನವೆನಿಸದೆ ಅವರ ನಿರ್ಲಕ್ಷ ಕ್ಕೊಳಗಾಗಿ ಬಿಡುತ್ತದೆ.
ಒಳ್ಳೆಯ ಮನುಷ್ಯರು ಮೌನಕ್ಕೆ ಶರಣಾಗಿ ಬಿಡುತ್ತಾರೆ. ಅಲಿಪ್ತರು ಅಲರ್ಟ್ ಆಗುತ್ತಾರೆ. ನಿರ್ಲಿಪ್ತರು ಯಾವುದನ್ನೂ ಅಭಿವ್ಯಕ್ತಿ ಸುವ ಅಥವಾ ಪ್ರತಿಕ್ರಿಯಿಸುವ ಹಂಬಲಕ್ಕೆ ಮುಂದಾಗುವುದಿಲ್ಲ. ಘಟನೆಗಳು ನಿತ್ಯ ಬದುಕಿಗೆ ತೀರಾ ಸಮಸ್ಯೆಯಾದಾಗ ಮಾತ್ರ ಜನತೆಯೇ ಹೇಗಾದರೂ ಪರಿಹಾರವನ್ನು ಹುಡುಕಲು ಮುಂದಾಗುತ್ತದೆಯೇ ಹೊರತು ಅನ್ಯತ್ರ ಪರಿಣಾಮದ ಬಗ್ಗೆ ಆಲೋಚಿ ಸುವುದಿಲ್ಲ. ಇದರ ಅರ್ಥ ರಾಷ್ಟ್ರೀಯ ಹಿತಾಸಕ್ತಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಅಂತಲ್ಲ.
ಕೆಡುಕುಗಳಿಂದ ಮುಕ್ತಿಯನ್ನು ಪಡೆಯಲು ಪ್ರಭುತ್ವಕ್ಕೆ ತಮ್ಮನ್ನು ನಿಯಂತ್ರಿಸಲು ಪರಮಾಧಿಕಾರ ವನ್ನು ಜನರೇ ನೀಡಿದ್ದನ್ನು ಪ್ರಭುತ್ವ ಅವಗಾಹಿನಿಸಿದರೆ ಮಾತ್ರ ಜನರು ಪ್ರಭುತ್ವದೊಂದಿಗೆ ಸ್ಪಂದಿಸಲು ಸಾಧ್ಯ. ಕಾರಣ ಪ್ರಭುತ್ವಕ್ಕೆ ಆ ಸಾಮರ್ಥ್ಯ ಬಂದಾಗ ಜನರಿಗೂ ಸಹಜವಾಗೇ ಸ್ಪಂದನಾ ಸಂವೇದನೆಯ ಶಕ್ತಿ ಬಂದು ಬಿಡುತ್ತದೆ. ಯಾಕೆಂದರೆ ಅಂಥ ಪ್ರಭುತ್ವವನ್ನು ಸೃಷ್ಟಿಸಿದವರೂ ಜನರೇ ತಾನೆ? ಭದ್ರತೆ ಮತ್ತು ರಕ್ಷಣೆಯನ್ನು ಒದಗಿಸುವಲ್ಲಿ ಪ್ರಭುತ್ವ ಸೋತಾಗ ಪ್ರಭುತ್ವವನ್ನೇ ತನ್ನ ಅಗತ್ಯಕ್ಕೆ ಬೇಕಾಗುವುದನ್ನು ಜನರೇ ಕಡಿಮೆ ಗೊಳಿಸಿಕೊಳ್ಳುವತ್ತ ಅಥವಾ ಬೇಕಾದಷ್ಟರಮಟ್ಟಿಗೆ ಮಾತ್ರ ಬಳಸಿಕೊಳ್ಳಲು ಚಿಂತಿಸುತ್ತದೆ.
ಸಾರ್ವಕಾಲಿಕ ಸೌಹಾರ್ದತೆ ಯನ್ನು ಬೆಳೆಸಿ ಕಾಪಾಡುವಲ್ಲಿ ಪ್ರಭುತ್ವವೇ ಸೋತಾಗ ಜನರೂ ಅದಕ್ಕೆ ಪರ್ಯಾಯ ಮಾರ್ಗವನ್ನು ಹೇಗೂ ಕಂಡುಕೊಳ್ಳಲು ಮುಂದಾಗುವುದು ತೀರಾ ಅಗತ್ಯವೂ, ಅನಿವಾರ್ಯವೂ ಆದ ವಿಚಾರವಾಗುತ್ತದೆ. ದಾರುಣತೆಯನ್ನು ದಕ್ಕಿಸಿಕೊಳ್ಳುವ ಸಾಮರ್ಥ್ಯವನ್ನು ಜನರಿಗೆ ಪ್ರಭುತ್ವವೇ ಅಪರೋಕ್ಷವಾಗಿ ನೀಡುತ್ತದೆ. ನಾವೆಷ್ಟೇ ಸೌಹಾರ್ದತೆಯ ಬಗ್ಗೆ ಎಚ್ಚರಿಕೆ ವಹಿಸಿದರೂ ಕ್ರೌರ್ಯವನ್ನು ಮೆರೆಯದೇ ಇರುವ ಜನರು ಈ ಜಗತ್ತಿನಲ್ಲಿ ಇರಲಾರರು.
ಎಲ್ಲವನ್ನೂ ನಿಭಾಯಿಸುವುದು ಅಥವಾ ನಿಯಂತ್ರಿಸುವುದು ಪ್ರಭುತ್ವಕ್ಕೆ ಸಾಧ್ಯವಿಲ್ಲ. ಆದರೆ ಜನತೆ ತನಗಾದ ಅನ್ಯಾಯವನ್ನು ವಿರೋಧಿಸಲೇಬೇಕು. ಪ್ರತಿಭಟಿಸಲೇಬೇಕು. ಕಾನೂನು ಭಂಜನೆಯೂ ಜನತೆಯ ದೃಷ್ಟಿಯಲ್ಲಿ ಒಂದು ಕಾನೂನಾಗಿ ಮಾರ್ಪಾ ಡಾಗಿ ಬಿಡುತ್ತದೆ. ಈ ರೀತಿಯ ಭಂಜನೆ ಪ್ರಭುತ್ವಕ್ಕೆ ಒಂದು ಪಾಠವಾಗಿ ಬಿಡುತ್ತದೆ. ದಾರುಣತೆಯನ್ನು ಜನತೆ ಒಪ್ಪುವುದು ಅಥವಾ ಬಿಡುವುದು ಪ್ರಭುತ್ವ ಎಣಿಸದಂತೆ ಇರಬೇಕೆಂದಿಲ್ಲ ಎನ್ನುವುದು ಚರಿತ್ರೆಯಲ್ಲಿ ಕಂಡ ಸತ್ಯ.
ಜಾತಿ ಮತ ಧರ್ಮದ ವಿಚಾರಗಳಾಗಲೀ, ಸಾರ್ವಜನಿಕ ಜೀವನದಲ್ಲಿರುವ ಅಥವಾ ಸರಕಾರಿ ಉನ್ನತ ಹುದ್ದೆಯಲ್ಲಿರುವ ಯಾವುದೇ ವ್ಯಕ್ತಿಯ ಸಾರ್ವಜನಿಕ ಅವ್ಯವಹಾರಗಳಾಗಲೀ, ಕೊಲೆಗಳಾಗಲೀ, ರಾಜಕೀಯ ಪಕ್ಷಗಳ ಕಚ್ಚಾಟವಾಗಲೀ, ಅಪಹರಣ, ಅತ್ಯಾಚಾರ, ಭ್ರಷ್ಟಾಚಾರಗಳಿಗೆ ಜನತೆ ಅಷ್ಟು ಬೇಗ ಸ್ಪಂದಿಸುವುದೂ ಕೂಡ ಪ್ರಭುತ್ವದ ನಿಲುವನ್ನೇ ಅಥವಾ ಪ್ರತಿಕ್ರಿಯೆಯನ್ನೇಅವಲಂಬಿಸಿರುತ್ತದೆ ಎಂದು ಪ್ರಭುತ್ವವು ತಿಳಿಯುವುದು ಮೂರ್ಖತನವಾದೀತು. ತನ್ನ ಅಸ್ತಿತ್ವಕ್ಕೇ ಮಾರಕವಾದ ಸಂಗತಿಗಳಿಗೆ ಪ್ರತಿಕ್ರಿಯಿಸುವಾಗ ಜನತೆ ಯಾರನ್ನೂ ಲೆಕ್ಕಿಸುವುದಿಲ್ಲ.
ಇದು ವೈಯಕ್ತಿಕವಾಗಿಯೂ ಸಾಮೂಹಿಕ ವಾಗಿಯೂ ಸಮರ್ಥನೀಯವಾದ ಅಂಶವಾಗಿದೆ. ಸ್ಥಳೀಯತೆಯನ್ನು ಮೀರಿ ಜನತೆ ಪ್ರತಿಕ್ರಿಯಿಸುವುದು ಅಥವಾ ಸ್ಪಂದಿಸಿ ಒಳಗೊಳ್ಳುವುದು ರಾಷ್ಟ್ರೀಯ ಘನತೆಗೆ ಧಕ್ಕೆಯಾದಾಗ ಮಾತ್ರ. ಇಲ್ಲವಾದಲ್ಲಿ ಬಹುಪಾಲು ಜನರ ನಿತ್ಯದ ಬದುಕು ಯಾವುದನ್ನೂ ಲೆಕ್ಕಕ್ಕೆ ತಗೊಳ್ಳದೆ ಸಹಜವೆಂಬಂತೆ ಇದ್ದೇ ಇರುತ್ತದೆ. ಬ್ರಿಟಿಷರು ನಮ್ಮನ್ನು ಆಳುವಾ ಗಲೂ ಅವರನ್ನು ಲೆಕ್ಕಿಸದೇ ಜನರು ತಮ್ಮ ಪಾಡಿಗೆ ತಾವು ಬದುಕುತ್ತಿದ್ದರು. ತಮ್ಮ ಬದುಕಿಗೆ ಕೇಡಾಗಬಹುದಾದ ಸಂದರ್ಭ ಗಳಲ್ಲಿ ಮಾತ್ರ ಸ್ಥಳೀಯತೆಯ ಪ್ರಜ್ಞೆ ಜಾಗೃತಗೊಂಡು ಅದರ ವಿರುದ್ಧ ಹೋರಾಡಿದ ಘಟನೆಗಳು ಇತಿಹಾಸದಲ್ಲಿ ಕಾಣಸಿಗುತ್ತವೆ.
ಇಂಥ ಹೋರಾಟಗಳು ಇಡೀ ದೇಶವನ್ನು ವ್ಯಾಪಿಸುವಂತೆ ಮಾಡಲು ನಮ್ಮದೇ ಆದ ಒಂದು ಪ್ರಭುತ್ವ ಅಥವಾ ಸಂಘಟನೆ ಅಸ್ತಿತ್ವದಲ್ಲಿ ಇಲ್ಲದೇ ಹೋಗಿರುವುದರಿಂದ ಆಂಗ್ಲರು ನಮ್ಮನ್ನು ದೀರ್ಘಾವಧಿ ಆಳಿದ್ದಲ್ಲ, ನಾವೇ ಆಳಿಸಿಕೊಂಡದ್ದು. ಆಗ ಮಾಧ್ಯಮಗಳಿರಲಿಲ್ಲ. ಈಗ ಮಾಧ್ಯಮಗಳಿವೆ. ಹೆಚ್ಚು ಬೇಗ ಪರಿಸ್ಥಿತಿಯನ್ನು ಅರ್ಥೈಸಿಕೊಂಡು ಜನರು ಕ್ರಿಯಾಶೀಲರಾಗುತ್ತಾರೆ. ತಕ್ಷಣವೇ  ತಿಕ್ರಿಯಿಸುತ್ತಾರೆ. ಪ್ರಭುತ್ವಕ್ಕೆ ಅವಕಾಶವೇ ಇಲ್ಲದಂತೆ ಯೋಚಿಸುವ ಮಟ್ಟಿಗೆ ಪ್ರಬುದ್ಧತೆಯನ್ನು ಜನತೆ ಗಳಿಸಿ ಕೊಂಡಿರುವುದರಿಂದ ವರ್ತಮಾನದಲ್ಲಿ ಪ್ರಭುತ್ವ ಹೆಚ್ಚೆಚ್ಚು ಸಂವೇದನೆಯನ್ನು ಬಲಪಡಿಸಿಕೊಂಡು ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ.
ಪ್ರಭುತ್ವದಿಂದ ಇದು ಸಾಧ್ಯವಾಗದಿದ್ದರೆ ಜನತೆಯೂ ಮನಸ್ಸಿಗೆ ಬಂದಂತೆ ವರ್ತಿಸುತ್ತಾ ಹೋಗುತ್ತದೆ. ಪರಿಸ್ಥಿತಿ ಎಲ್ಲಿಗೂ ಮುಟ್ಟಬಹುದು. ಆಗ ಎಲ್ಲದಕ್ಕೂ ಸಾಕ್ಷಿಯಾಗಿ ಕೊನೆಗಿರುವುದು ಅದೇ ಜನತೆಯಿಂದ ಹುಟ್ಟಿದ ಪ್ರಭುತ್ವವೇ ಆಗಿರುತ್ತದೆ. ಚುನಾವಣೆ, ಅಧಿಕಾರದ   ದನೆಗಿಂತ ಜನತೆಯ ಕುರಿತಾದ ಸಂವೇದನೆಯನ್ನು ಪ್ರಭುತ್ವ ಹೊಂದಿದಾಗ ಮಾತ್ರ ಆ ಪ್ರಭುತ್ವವನ್ನು ಜನತೆ ಗೌರವಿಸಿ ಆದರಿಸುತ್ತದೆ. ಪ್ರಭುತ್ವ ತನ್ನ ಅಸ್ತಿತ್ವಕ್ಕೆ ಕಾರಣವಾದ ಜನತೆಯನ್ನು ಧಿಕ್ಕರಿಸಿಯೋ ನಿರ್ಲಕ್ಷ ಮಾಡಿಯೋ ತಿರಸ್ಕರಿಸಿಯೋ ನಿರಾಕರಿಸಿಯೋ ಅಥವಾ ಉದಾಸೀನ ವಾಗಿಯೋ ಕಂಡು ಏನನ್ನೂ ಸಾಧಿಸಲು ಸಾಧ್ಯವಿಲ್ಲ.
ಯಾರು ಏನೇ ಹೇಳಿಕೆ ನೀಡಿದರೂ, ಎಂಥದ್ದೇ ವಿಚಾರವಾದರೂ, ಮಾಧ್ಯಮಗಳಲ್ಲಿ ಏನೇ ಬಿತ್ತರವಾದರೂ, ರಾಜಕಾರಣಿಗಳು ಪರಸ್ಪರ ಮಾತಿಗೆ ಮಾತು ಸೇರಿಸಿ ಸಂಯಮದ ಮೇರೆಯನ್ನು ಮೀರಿ ವ್ಯವಹರಿಸ  ರದು ಎಂದು ವೈಚಾರಿಕವಾಗಿ ಚಿಂತಿಸುವು ದಿಲ್ಲ. ಅತಿಯಾದ ಮಳೆನೀರು ನಿತ್ಯದ ಬದುಕನ್ನೇ ಅಲ್ಲೋಲ- ಕಲ್ಲೋಲವಾಗಿಸಿದಾಗ, ನದಿ ನೀರಿಗಾಗಿ ಸಂಘರ್ಷವಾದಾಗ, ದೌರ್ಜನ್ಯ ವೆಂಬುದು ಒಂದು ಜನಾಂಗವನ್ನು ನಿರಂತರವಾಗಿ ನೋವಾಗಿ ಕಾಡಿದಾಗ ಜನತೆ ಹೋರಾಟಕ್ಕಿಳಿಯುತ್ತದೆ.
ದೇಶಕ್ಕೆ ಏನೇ ಆದರೂ ಎಂಥ ದೊಡ್ಡ ಅವಘಡಗಳು ಸಂಭವಿಸಿದರೂ ತನಗೆ ಸ್ಪಂದಿಸದ ಪ್ರಭುತ್ವದ ಬಗ್ಗೆ ಅಷ್ಟು ಸುಲಭವಾಗಿ ಜನತೆ ತಲೆಕೆಡಿಸಿಕೊಳ್ಳುವುದಿಲ್ಲ. ಜನತೆಯ ಅಸ್ಮಿತೆಗೆ ಧಕ್ಕೆಯಾದಾಗ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಪ್ರಭುತ್ವ ನುಣುಚಿ ಕೊಂಡಾಗ ಜನತೆಯೂ ಪ್ರಭುತ್ವದೆಡೆಗೆ ಅವಜ್ಞೆಯನ್ನು ತೋರಿಸುತ್ತದೆ.
ಧಿಕ್ಕರಿಸುತ್ತದೆ. ಪ್ರಭುತ್ವದ ಸಹಾಯವನ್ನು ನಿರೀಕ್ಷಿಸದೆ ತಮ್ಮ ಕಷ್ಟಗಳನ್ನು ತಾವೇ ಪರಿಹರಿಸಿಕೊಳ್ಳಲು ಪ್ರಯತ್ನಿಸುತ್ತದೆ. ಜನತೆಗೆ ಯಾವುದೇ ಸವಲತ್ತು, ಸೌಲಭ್ಯ, ಸೌಕರ್ಯಗಳನ್ನು, ಪ್ರಶಸ್ತಿ, ಪದಕಗಳನ್ನು ನೀಡುವಾಗಲೂ ಇದು ತನ್ನ ಕೃಪೆ ಯಿಂದಾದ ಭಿಕ್ಷೆಯೆಂಬಂತೆ ಪ್ರಭುತ್ವ ವರ್ತಿಸಬಾರದು. ತನಗೆ ಕೊಡುವ ಅರ್ಹತೆಯನ್ನು, ಘನತೆಯನ್ನು, ಭಾಗ್ಯವನ್ನು ನೀಡಿದ್ದು ಜನತೆಯೇ ಎಂಬುದನ್ನು ಪ್ರಭುತ್ವ ಮರೆಯಬಾರದು. ಯಾರ ಪರ ಅಥವಾ ವಿರುದ್ಧವಾಗಿಯೂ ತನ್ನ ಸ್ಟ್ಯಾಂಡ್ ಅನ್ನು ಪ್ರಭುತ್ವ ಯಾವತ್ತೂ ಸಮರ್ಥಿಸಿಕೊಳ್ಳಬಾರದು. ತನ್ನ ಮುಖ್ಯ ಲಕ್ಷ ಇರಬೇಕಾದುದು ಜನತೆಯ ವೇದನೆಗಳಿಗೆ, ಸಂವೇದನೆಗಳಿಗೆ.
ಜನತೆಯ ಸುಖ – ದುಃಖಗಳಿಗೆ ಸ್ಪಂದಿಸುವುದರ ಕಡೆಗೆ ಎಂಬುದನ್ನು ಪ್ರಭುತ್ವ ನೆನಪಿನಲ್ಲಿಟ್ಟುಕೊಳ್ಳಬೇಕು. ಜನತೆಯ ಬದುಕು –  ಭಾವನೆಗಳಿಗೆ ಸ್ಪಂದಿಸದ ಪ್ರಭುತ್ವವನ್ನು ಜನತೆ ಹೆಚ್ಚು ಕಾಲ ಪ್ರೀತಿಸಲಾರದು, ಓಲೈಸಲಾರದು, ಕೊನೆಗೆ ಬಾಳಿಸ ಲಾರದು. ಕೊನೆಯ ಮಾತು: ಉತ್ತಮ ಪ್ರಭುತ್ವ ಲೊಳಲೊಟ್ಟೆ ಎಂದರು ಪುರಂದರ ದಾಸರು. ಬಂಟನಾಗದವ ಲೊಳಲೊಟ್ಟೆ ಎನ್ನುತ್ತಾರೆ ಅವರು. ಸರಕಾರ ಜನತೆಯ ಬಂಟನಾಗಬೇಕು. ಇರಲಿ, ಆದರೆ ಅಂಥ ಉತ್ತಮ ಪ್ರಭುತ್ವವೇ ಲೊಳಲೊಟ್ಟೆಯಾಗಲು ಕಾರಣ ಜನರೇ ಆಗಿರುತ್ತಾರೆ. ಪ್ರಭುತ್ವವು ಯಾವತ್ತೂ ಜನತೆಯ ಮನೋಭಾವದ ಕನ್ನಡಿಯಾಗಿರುತ್ತದೆ ಎಂಬುದನ್ನು ಒಪ್ಪುವುದು ಅಷ್ಟು ಸುಲಭವಲ್ಲ.
ಯಾವುದೇ ಪ್ರಭುತ್ವಕ್ಕೆ ಅತ್ಯಂತ ಪ್ರಧಾನವಾದ ಮತ್ತು ಗಂಭೀರವಾಗಬೇಕಾದ ವಿಷಯ ವೇನೆಂದರೆ, ಜನತೆಯ ಶಿಕ್ಷಣ, ವಸತಿ, ಆಹಾರ, ರಸ್ತೆ, ಸಾರಿಗೆ,  ದ್ಯೋಗ ಮತ್ತು ದೈಹಿಕ, ಮಾನಸಿಕ ಮತ್ತು ವೈಚಾರಿಕ ಆರೋಗ್ಯ. ಇಷ್ಟನ್ನೂ ಸಮತೋಲಿತವಾಗಿ ಜನತೆಗೆ ಕಲ್ಪಿಸಲು ಯಾವ ಪ್ರಭುತ್ವಕ್ಕೆ ಸಾಧ್ಯವಾಗುತ್ತದೋ ಆ ಪ್ರಭುತ್ವ ಜನಮಾನಸದಲ್ಲಿರುತ್ತದೆ. ಇದನ್ನೇ ಪ್ರತಿ ಪ್ರಭುತ್ವವೂಅನಿವಾರ್ಯ ಅಗತ್ಯವಾಗಿ ಮಾಡಬೇಕಾದ ಮೂಲಭೂತವಾದ ಕಾರ್ಯ. ಇದರಲ್ಲಿ ಯೋಜನೆಗಳನ್ನು ನಾವೀನ್ಯವಾದ ಬಗೆಯಲ್ಲಿ ವಿನ್ಯಾಸಗೊಳಿಸ ಬಹುದು. ಇದನ್ನು ಹೊರತುಪಡಿಸಿ ಉಚಿತವಾಗಿ ಕೊಡುವ ಯಾವ ಯೋಜನೆಯೂ ಭಾರತದಂಥ ದೇಶಕ್ಕೆ  ಷ್ಟು ಉಚಿತವೆನಿಸಲಾರದು. ಯಾಕೆಂದರೆ, ಅಪಾತ್ರರಿಗೆ ಅಯೋಗ್ಯರಿಗೆ ಯಾವ ಭಾಗ್ಯವೂ ಸಿಗಬಾರದು ಎಂಬನೆಲೆಯಲ್ಲಿ.
ಹಾಗಂತ ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತವಾಗಿ ಸಿಗುವುದರಲ್ಲಿ ಯಾರ ಯಾವ ವಿರೋಧವೂ ಇರಲಾರದು. ಪ್ರಭುತ್ವಕ್ಕೆ ಇಷ್ಟು ಮಾತ್ರದ ಸಂವೇದನೆಯ ಬದ್ಧತೆಯಿದ್ದರೆ ಯೋಜನೆಗಳು ನಿರೀಕ್ಷಿತ ಫಲವನ್ನು ಕಂಡೀತು. ಇಲ್ಲೂ ಒಂದು ಸಮಸ್ಯೆಯಿದೆ: ಆರ್ಥಿಕವಾಗಿ ಹಿಂದುಳಿದವರನ್ನು ಗುರುತಿಸುವ ಕಾರ್ಯ ಆಗಬೇಕು. ಇದಕ್ಕೆ ನಿರ್ದಿಷ್ಟ ಮಾರ್ಗಸೂಚಿಗಳು ರಚನೆ ಯಾಗಬೇಕು. ತಾನು ವಿನಿಯೋಗಿಸುವ ಹಣ ಜನತೆಯದ್ದು, ಅದು ವ್ಯರ್ಥವಾಗ ಬಾರದು ಎಂಬ ಸಂವೇದನೆ ಪ್ರಭುತ್ವಕ್ಕೆ ಇರಬೇಕು.
ಖಾಸುಮ್ಮನೆ ಜನತೆಯ ಹಣವನ್ನು ಅನಗತ್ಯವಾಗಿ, ಅನಾವಶ್ಯಕವಾಗಿ ಅಲ್ಲಸಲ್ಲದಕ್ಕೆ, ವ್ಯರ್ಥ ಕಾರ್ಯಗಳಿಗೆ ವ್ಯಯವಾಗ ಬಾರದು ಎಂಬ ಎಚ್ಚರದ ಸಂವೇದನೆ ಪ್ರಭುತ್ವಕ್ಕಿರಬೇಕು. ಅಂದರೆ ಪ್ರತಿಹಂತದಲ್ಲೂ ಪ್ರಭುತ್ವ ತನ್ನ ಸಂವೇದನೆ ಉಳಿಸಿ ಕೊಂಡು ಬೆಳೆಸಿಕೊಳ್ಳುತ್ತ ಜನತೆಗೆ ಪೂರಕವಾಗುತ್ತ ಹೋಗಬೇಕು. ಸಂವೇದನೆಯನ್ನು ಕಳೆದುಕೊಂಡಷ್ಟೂ ಪ್ರಭುತ್ವ ಅಸ್ತಿತ್ವ ಕಳೆದುಕೊಳ್ಳುತ್ತದ್ದೆ.